ಪ್ರೀತಿಯ ಅನುಗೆ,
ಮೊನ್ನೆ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ತಮ್ಮ ತಂಡ ಹೀನಾಯ ಸೋಲನನುಭವಿಸಿತ್ತು. ಸೋಲನ್ನು ಒಪ್ಪಿಕೊಳ್ಳದ ನಮ್ಮ ಆಟಗಾರರು ಹಲವಾರು ನೆವಹೇಳುತ್ತಾ ತಮ್ಮನ್ನೇ ಸಮರ್ಥಿಕೊಳ್ಳುತ್ತಿದ್ದರು. ನಾವು ಕೂಡ ಅವರಜತೆ ಹೂಂಗೂಡುತ್ತಾ ತಂಡದ ಕೋಚನ್ನುಟೀಕಿಸಲು ಪ್ರಾರಂಭಿಸಿದ್ದೆವು. ನಮ್ಮ ಕೋಚ್ ತನ್ನ ತಂತ್ರಗಳಲ್ಲಿ ಅಪ್ಡೇಟ್ ಅಗಿಲ್ಲ. ಅವನಿಗೆ ತರಬೇತಿ ಕೊಡಲು ಬರುವುದಿಲ್ಲ. ಅವನನ್ನು ಬದಲಾಯಿಸುವುದು ಒಳ್ಳೇದು” ಹೀಗೆ ಟೀಕೆಗಳ ಪ್ರವಾಹವೇ ಅವನ ಮೇಲೆ ಎರಗಿ ಬಂತು. ಇಂತಹ ಪರಿಸ್ಥಿತಿಯಲ್ಲೂ ತಂಡದ ಕೋಚ್ ಮಾತ್ರ…Lost to Win. . ಗೆಲ್ಲುವುದಕ್ಕಾಗಿ ಸೋತಿದ್ದೇವೆ ಅಷ್ಟೆ” ಎಂದು ಹೇಳುವುದನ್ನು ಕೇಳಿ ಆಶ್ಚರ್ಯಚಕಿತನಾದೆ.
ಹೌದು ’ಸೋಲು’ ಎಂಬುವುದು ಯಾರಿಗೂ ಬೇಡವಾದ ವಾಸ್ತವ. ಅಪ್ಪಿತಪ್ಪಿಯೂ ನಮಗೆ ನಾವು ಕೇಳಿಕೊಳ್ಳದ ಸ್ಥಿತಿಯು ಹೌದು. ಬದುಕಿನ ಮಾರುಕಟ್ಟೆಯಲ್ಲಿರುವ ಬೇಡಿಕೆರಹಿತ ಸರಕೇ ಈ ಸೋಲು. ಏಕೆ ನಮ್ಮಲ್ಲಿ ಸೋಲಿನ ಬಗ್ಗೆ ಈ ರೀತಿಯ ತಾತ್ಸಾರ? ವಿರೋಧ?ಸೋಲಿನಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಸರ್ಕಸ್ಸುಗಳೇಕೆ? ಸೋತು ಬಂದ ಟೀಮ್ ಸೋಲನ್ನು ಒಪ್ಪಿಕೊಳ್ಳದೆ ಹಲವಾರು ನೆವಹೇಳುತ್ತಾ ತಮ್ಮನ್ನೇ ಸಮರ್ಥಿಕೊಳ್ಳುವ ಪರಿಪಾಠವೇಕೆ? ಸೋತ ಆಟಗಾರರ ಮನೆಗಳ ಮುಂದೆ ಅಭಿಮಾನಿ ದೇವರುಗಳು ಸಿಟ್ಟಿಗೆದ್ದು ಧರಣಿ ಕೂರುವುದೇಕೆ? ಆಟೋಟ ಸ್ಪರ್ಧೆಗಳಲ್ಲಿ ಸೋಲು ಮತ್ತು ಗೆಲುವುಗಳು ಸರ್ವೇಸಾಮಾನ್ಯವಾದರೂ ಸೋತ ಆಟಗಾರರ ಭಾವಚಿತ್ರಗಳಿಗೆ ಚಪ್ಪಲಿಗಳ ಹಾರಗಳನ್ನು ಹಾಕಿ ಪ್ರತಿಭಟಿಸುವುದಾದರೂ ಏಕೆ? ಆಟೋಟ ಸ್ವರ್ಧೆ ಅಥವಾ ಪರೀಕ್ಷೆಗಳಲ್ಲಿ ಗೆಲ್ಲಲು ಪೂಜೆ ಯಜ್ಞಗಳೇಕೆ? ಒಂದು ಮಾತಿನಲ್ಲಿ ಹೇಳುವುದಾದರೆ “ಸೋಲಲು ನಮಗೇಕೆ ಭಯ? ಸೋತೆವು ಎಂದು ಒಪ್ಪಿಕೊಳ್ಳಲು ನಮಗೇಕೆ ಕಷ್ಟ? ಈ ಸೋಲೆಂಬುದು ಗೆಲುವಿಗೆ ಅನಿವಾರ್ಯವೇ? ಸೋಲೆಂಬುದು ಗೆಲುವಿನ ಗುರಿಗೆ ಕೊಂಡೊಯ್ಯುವ ಮೆಟ್ಟಿಲುಗಳೇ? ಸೋಲೆಂಬುದು ಕೆಲಸಕ್ಕೆ ಬಾರದ ಬದುಕಿನ ನಿಷ್ಪ್ರಯೋಜಕ ಅನುಭವವೇ?
ಸೋಲುವುದೆಂದರೆ ನಾನು ಬಲಹೀನ ಎಂದು ಒಪ್ಪೊಕೊಳ್ಳುವುದೇ ಅಥವಾ ನನ್ನ ಸಾಮಾರ್ಥ್ಯ ತೌಲನಿಕವಾಗಿ ಕೀಳಾದುದು ಎಂದು ಒಪ್ಪಿಕೊಳ್ಳುವುದೇ? ಒಟ್ಟಿನಲ್ಲಿ ನಾವು ಎಚ್ಚರ ತಪ್ಪಿದರೆ ಸೋಲು ನಮ್ಮ ಆಹಂ ಅನ್ನು ತಟ್ಟಿ, ನೀನು ಕೀಳು, ನೀನು ಅಸಮರ್ಥ, ದಡ್ಡ ಎಂಬ ಋಣಾತ್ಮಕ ಭಾವನೆಗಳನ್ನು ನಮ್ಮಲ್ಲಿ ತುಂಬಿ ಬಿಡುತ್ತದೆ. ಕೆಲವೊಮ್ಮೆ ನಮ್ಮ ಮನೋಬಲವನ್ನು ಸಹ ಕ್ಷೀಣಿಸಿಬಿಡುತ್ತದೆ. ಸೋಲು ನಮ್ಮ ಬಲಹೀನತೆ, ಅಸಾಮರ್ಥ್ಯವನ್ನು ಅಥವಾ ನಮ್ಮ ಸಾಮರ್ಥ್ಯ ತೌಲನಿಕವಾಗಿ ಕೆಳಗಿದೆ ಎಂದು ತಿಳಿಸುತ್ತದೆ ವಿನಹಃ ನಾವು ಶಾಶ್ವತವಾಗಿ ಅಸಮರ್ಥರು ಬಲಹೀನರೆಂದು ಎಂದಿಗೂ ಹೇಳುವುದಿಲ್ಲ. ನಮ್ಮ ಬಲಹೀನತೆ, ದೌರ್ಬಲ್ಯಗಳ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸಿ ಅವುಗಳನ್ನು ಸುಸೂತ್ರವಾಗಿ ಜಯಿಸಲು ಒಂದು ನೀಲಿನಕ್ಷೆಗೆ ಅಣಿಮಾಡುವುದೇ ಈ ಸೋಲು.
ಆದ್ದರಿಂದ ಸೋಲನ್ನು ನಾವು ಯಾವ ರೀತಿಯಾಗಿ ಕಾಣುತ್ತೇವೆಂಬುವುದು ಮುಖ್ಯ. ಪ್ರಮುಖ ಸಂಶೋಧನೆಯಲ್ಲಿ ಸಫಲನಾಗುವ ಮುನ್ನ ಥಾಮಸ್ ಆಲ್ವಾ ಎಡಿಸನ್ (ವಿದ್ಯುತ್ ದೀಪವನ್ನು ಕಂಡುಹಿಡಿದವ) ಕನಿಷ್ಠ ಹತ್ತು ಸಾವಿರ ಪ್ರಯೋಗಗಳನ್ನಾದರೂ ಮಾಡಿದ್ದ! ಯಾರೋ ಕೇಳಿದರಂತೆ – ಅಲ್ಲ ಎಡಿಸನ್ ಮಹಾಶಯ, ಹತ್ತು ಸಾವಿರ ಬಾರಿ ಸೋತಿದ್ದ ಕ್ಕೆ ನಿನಗೇನೂ ಅನ್ನಿಸುವುದಿಲ್ಲವೇ” ಎಂದು ಎಡಿಸನ್ ಥಟ್ಟನೆ “ಇಲ್ಲ ಇಲ್ಲ ವಿದ್ಯುತ್ ಬಲ್ಪುಗಳನ್ನು ಮಾಡಲು ಸಾಧ್ಯವಾಗದ ಹತ್ತು ಸಾವಿರ ಕ್ರಮಗಳನ್ನು ನಾನು ಕಂಡು ಹಿಡಿದೆ” ಎನ್ನುತ್ತಾನೆ. ಇದು ಸೋಲನ್ನು ಒಪ್ಪಿಕೊಳ್ಳದ ಸಂಶೋಧಕನ ಮಾತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸೋಲಿನಲ್ಲಿ ಗೆಲುವನ್ನು ಕಂಡ ಸಂಶೋಧಕನ ಮಾತಿದು.
ಸೋಲು ನಮ್ಮ ಗೆಲುವಿನ ಮೆಟ್ಟಿಲಾಗಬೇಕು, ಹೊಸ ಹೊಸ ಪ್ರಯೋಗಗಳಿಗೆ, ಆವಿಷ್ಕಾರಗಳಿಗೆ ಮುಹೂರ್ತ ಹಾಕಿಕೊಡಬೇಕು. ನಮ್ಮ ದೌರ್ಬಲ್ಯಗಳನ್ನು ಮೀರಿ ನಡೆಯಲು ಅವುಗಳ ಮೇಲೆ ಪ್ರಭುತ್ವ ಸಾಧಿಸಲು ಸ್ಪೂರ್ತಿ ಆಗಬೇಕು. ಸೋಲಿಗೆ ಮೌಲ್ಯ ಬರುವುದೇ ಅದನ್ನು ನಾವು ಕಾಣುವ ದೃಷ್ಟಿಯಿಂದ. ಅವುಗಳಿಂದ ಕಲಿಯುವ ಪಾಠಗಳಿಂದ. ಒಂದೇ ಒಂದು ಸೋಲಿನಿಂದ ನಾವು ನಿರುತ್ಸಾಹ ತಳೆದು ನಾವು ಹಾಕಿಕೊಂಡ ಗುರಿಗಳಿಗೆ ನಮಸ್ಕಾರ ಹೇಳಿ…ಸುಮ್ಮನೆ ಆಗಿಬಿಟ್ಟರೆ ನಮ್ಮನ್ನು ನಾವೇ ಶಾಶ್ವತ ಸೋಲಿನ ಸಮುದ್ರಕ್ಕೆ ಕಲ್ಲು ಕಟ್ಟಿ ನೂಕ್ಕಿಕೊಂಡಂತೆ. ಆದ್ದರಿಂದ ನಮ್ಮ ಸೋಲುಗಳು ಅವಕಾಶಗಳನ್ನು ಸೃಷ್ಟಿಸುವ ಹೊಲಗಳಾಗಬೇಕು. ನಮ್ಮ ಉತ್ಸಾಹ, ಕನಸುಗಳನ್ನು,ಆಸೆಗಳನ್ನು ಚಿವುಟಿಬಿಡುವ destructive weaponಗಳಾಗಬಾರದು. ಅದಕ್ಕಾಗಿ ಒಬ್ಬ ತತ್ವಜ್ಞಾನಿ ಹೇಳುತ್ತಾನೆ: ಬದುಕಿನಲ್ಲಿ ಸೋಲೆಂಬುವುದೇ ಇಲ್ಲ… ಇರುವುದು ಕೇವಲ “ನೇರ್ಪಿನ ಪ್ರಯತ್ನ” ಮಾತ್ರವೆಂದು.
ಅಮೆರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಬದುಕಿನಲ್ಲಿ ಎದುರಿಸಿದ ಸೋಲುಗಳು ಅಪಾರ. ಇಪ್ಪತ್ತೇಳನೆಯ ವಯಸ್ಸಿನಲ್ಲಿ ದೇಹದ ನರಮಂಡಲವೇ ತೊಂದರೆಗೊಳಗಾಗಿತ್ತು. ನಲವತ್ತಾರನೆಯ ವಯಸ್ಸಿನಲ್ಲಿ ಸೆನೆಟರ್ ಚುನಾವಣೆಯಲ್ಲಿ ಸೋಲು. ನಲವತ್ತೇಳನೆಯ ವಯಸ್ಸಿನಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸೋಲು. ಹೀಗೆಲ್ಲ ಸೋಲುಗಳು ದಿಕ್ಕೆಡಿಸಿದರೂ ಅವರ ಆತ್ಮವಿಶ್ವಾಸಕ್ಕೆ ಸ್ವಲ್ಪವೂ ಧಕ್ಕೆ ಬರಲಿಲ್ಲ. ಐವತ್ತೆರಡನೆಯ ವಯಸ್ಸಿನಲ್ಲಿ ಅವರು ಅಮೇರಿಕಾದ ಅಧ್ಯಕ್ಷರಾದರು.
ಇನ್ನೊಂದು ಕಡೆ, ಗೆಲುವಿನ ಬಗ್ಗೆ ನಮಗೇಕೆ ಎಷ್ಟೊಂದು ವ್ಯಾಮೋಹ! ಗೆಲುವನ್ನು ಪಡೆಯುವ ವಿಧಾನವನ್ನು ವಿವರಿಸಿ ಸ್ಪಷ್ಟ ಪಡಿಸುವ ಎಷ್ಟೋ ಪುಸ್ತಕಗಳು ಮಾರುಕಟ್ಟೆಗಳಲ್ಲಿ ಲಭ್ಯವಿದ್ದು ಅವು ಬೇಡಿಕೆಯ ಶಿಖರವನ್ನೇ ಏರುತ್ತಿವೆ. ಸಿದ್ಧ ಉಡುಪಿನಂತೆ ಎಷ್ಟೋ ಗೆಲುವಿನ ಸೂತ್ರಗಳ ಪುಸ್ತಕಗಳು ಗೆಲ್ಲಲು ಹಾತೊರೆಯುತ್ತಿರುವ ಗಿರಾಕಿಗಳ ಕೈಪಿಡಿಯಾಗಿಬಿಟ್ಟಿದೆ. ಮಾಡರ್ನ್ ಗುರುಗಳಿಗಂತೂ ಶುಕ್ರದೆಸೆ. ಅವರ ’ಗೆಲುವಿನ ಮಾರ್ಗಸೂಚಿ’ ಗಳು ಸಾವಿರಾರು ಜನರ ದೈನಿಕ ಮಂತ್ರವಾಗಿಬಿಟ್ಟಿದೆ. ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಲು ತೆರಳಿರುವ ನಮ್ಮ ಕ್ರಿಡಾಪಟುಗಳು ಕೂಡ ಪದಕಗಳನ್ನು ಗೆದ್ದು ತರುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರೆ. ಇನ್ನೊಂದು ಕಡೆ ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಜಯದ ಲಕ್ಷೀಯನ್ನು ವರಿಸಿಕೊಳ್ಳಬಹುದೆಂಬ ಲೆಕ್ಕಚಾರದಲ್ಲೇ ಮುಳುಗಿ ಹೋಗಿವೆ ನಮ್ಮ ರಾಜಕೀಯ ಪಕ್ಷಗಳು. ಗೆಲುವು ನಮಗೆ ಯಶಸ್ಸು ಅಪಾರ ಜನಪ್ರಿಯತೆ, ಅಧಿಕಾರ, ಹಣ ಸಂಪತ್ತುಗಳನ್ನು ತಂದುಕೊಡುತ್ತದೆ. ಧನಾತ್ಮಕ ಭಾವನೆಗಳನ್ನು ನಮ್ಮಲ್ಲಿ ತುಂಬಿ ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುವುದಲ್ಲದೆ, ಹೊಸ ಹೊಸ ಪ್ರಯೋಗಗಳಿಗೆ ದಾರಿಮಾಡಿಕೊಡುತ್ತದೆ. ಆದರೆ ಗೆಲುವು ಅಥವಾ ಯಶಸ್ಸು ಎಂಬ ದೇವತೆ ಸದಾ ನಮ್ಮ ಜೊತೆಯಿರುತ್ತಾಳೆಂಬ ಖಾತ್ರಿಯಂತೂ ಯಾರಿಗೂ ಇಲ್ಲ. ಗೆಲುವನ್ನು ಸಂಪಾಧಿಸಿ ಅದರ ಮೇಲೆ ಶಾಶ್ವತವಾಗಿ ಚಕ್ರಾಧಿಪತ್ಯ ಸ್ಥಾಪಿಸಿಲಾಗುವುದಿಲ್ಲ. ಇಂದಿನ ಸಮರ್ಥನೂ ನಾಳೆ ಅಸಮರ್ಥನಾಗುತ್ತಾನೆ, ಇಂದು ಗೆದ್ದವನುನಾಳೆ ಸೋಲುತ್ತಾನೆ. ಗೆದ್ದವನ ಸಾಮರ್ಥ್ಯ ಮತ್ತು ಅಸಾಮರ್ಥ್ಯವನ್ನು ಪಡೆದುಕೊಳ್ಳಲು ಅವನು ಪಟ್ಟ ಶ್ರಮ, ಹಿಂದಿರುವ ತ್ಯಾಗ, ಅವನ ದಕ್ಷತೆ ನಮಗೆ ಪಾಠಗಳಾಗಬೇಕು. ಅದನ್ನು ಬಿಟ್ಟು, ಗೆದ್ದವನ ಮೇಲೆ ಹಗೆ ಸಾಧಿಸುವುದು, ಸೋತಿದ್ದಾರೆ ಎಂಬ ಕಾರಣಕ್ಕೆ ಸೋತವರ ಭಾವಚಿತ್ರಗಳ ಮೇಲೆ ಚಪ್ಪಲಿ ಹಾರಗಳನ್ನು ಹಾಕಿ ನಿಂದಿಸುವುದು ಯಾರೂ ಒಪ್ಪದ ನಡವಳಿಕೆ.
ಹೀಗೆ ಸೋಲು ಗೆಲುವುಗಳ ಬಗ್ಗೆ ಚಿಂತಿಸುವಾಗ ಸೋಲು ಗೆಲುವುಗಳ ಬಗ್ಗೆಗಿನ ಇನ್ನೊಂದು ಆಯಾಮ ನನಗೆ ಗೋಚರಿಸಿತ್ತು. ಕೆಲವರು ತಾವು ಸೋಲುತ್ತೇವೆ ಎಂದು ಮುಂಚಿತವಾಗಿ ಗೊತ್ತಿದ್ದರೂ ಒಂದು ಒಳ್ಳೆಯ ಸಂಪ್ರದಾಯವನ್ನು, ನ್ಯಾಯವಾದ ವ್ಯವಸ್ಥೆಯನ್ನು ರೂಪಿಸಲು ದೊಡ್ಡ ಗಂಡಾಂತರವನ್ನೇ ತಮ್ಮ ಮೇಲೆ ಎಳೆದುಕೊಳ್ಳುತ್ತಾರೆ. ಅವರು ತಮ್ಮ ಗಣಕಗಳನ್ನೇ ಬಿಸಾಡಿದವರು, ತಮ್ಮ ಅಹಂ ಅನ್ನು ಮೀರಿ ಬೆಳೆದವರು. ಅವರಿಗೆ ಗೊತ್ತು, ತನ್ನ ಜೀವಮಾನದಲ್ಲೇ ತಾನು ಕೈಗೊಂಡಿರುವ ಕೆಲಸದಲ್ಲಿ, ಹೋರಾಟದಲ್ಲಿ ಯಶಸ್ಸು ಕಾಣುವುದು ಅನಿಶ್ಚಿತವೆಂದು. ಆದರೂ ಊಟ, ನೀರು ನಿದ್ದೆಯನ್ನು ಬಿಟ್ಟು ಅಂತಹ ವ್ಯವಸ್ಥೆಯ ಸಾಕಾರಕ್ಕೆ ಶಕ್ತಿ ಮೀರಿ ದುಡಿಯುತ್ತಾರೆ. ಅವರಿಗೆ ಸೋಲು ಸೋಲಾಗುವುದಿಲ್ಲ. ಅವರಕನಸಿನ ಮತ್ತು ಸ್ಥಾಪಿಸುವ ವ್ಯವಸ್ಥೆಯ ಪಯಣಕ್ಕೆ ಮೆಟ್ಟಿಲುಗಳಾಗುತ್ತವೆ. ಕ್ರಿಸ್ತ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ… ಇವರೆಲ್ಲರೂ ನಮ್ಮಲ್ಲಿ ಚಿರಸ್ಥಾಯಿಯಾಗಿರುವುದು ಈ ಕಾರಣಕ್ಕಾಗಿಯೇ. ಇವರಿಗೆ ಗೊತ್ತಿತ್ತು ಅನ್ಯಾಯದ ವಿರುದ್ಧ ಹೋರಾಡುವುದೆಂದರೆ ತಮ್ಮನ್ನೇ ಸೋಲಿನ ಸಮಾಧಿಯಲ್ಲಿ ಹೂಣುವುದೆಂದು. ಆದರೂ ಅನ್ಯಾಯದ ವ್ಯವಸ್ಥೆಯ ವಿರುದ್ಧ ಎದೆ ತಟ್ಟಿ ಹೋರಾಡಿದರು. ತಾವು ಅನುಭವಿಸಿದ ಹಿಂಸೆಯಲ್ಲಿ ಬಡವರ ನಗುವನ್ನು ಕಂಡು ಮುನ್ನಡೆದರು. ತಮ್ಮ ನೋವಿನಲ್ಲಿ ಬಡವರ ನಲಿವನ್ನು ಕಂಡು ಹೋರಾಡಿದರು.
ಕ್ರಿಸ್ತ ಬಸವಣ್ಣ ಕೂಡ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಹಠ ಯೋಗಿಗಳು. ಢಾಂಬಿಕರನ್ನು ಸುಣ್ಣ ಬಳಿದ ಸಮಾಧಿಗಳೆಂದು ಬಹಿರಂಗವಾಗಿ ವ್ಯವಸ್ಥೆಯ ಬಂಡೆಗೆ ತಲೆ ಬಡಿದುಕೊಂಡವರು. ಅವರಿಗೆ ಗೊತ್ತಿತ್ತು, ತಾವು ಕೈಗೊಂಡಿರುವ ಹೋರಾಟದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು. ಆದರೂ ಹಾವಿದ್ದ ಹುತ್ತಕ್ಕೆ ಕೈಹಾಕಿದರು. ಕೊನೆಗೆ ಧಾರ್ಮಿಕ ಅಧಿಕಾರಿಗಳ ಉಗ್ರ ಕೋಪಕ್ಕೆ ಸುಟ್ಟು ಭಸ್ಮವಾದರು. ಪ್ರಪಂಚದ ಸಂಕುಚಿತ ದೃಷ್ಟಿಯಲ್ಲಿ ಅವರು ಸೋತ ಯೋಧರಾಗಿದ್ದರು. ತಾವು ಕಂಡ ಕನಸಿನ ರಾಜ್ಯವನ್ನು ಕಾಣದೆ, ಹತಾಶರಾಗಿ ಸತ್ತರು. ಅವನ ಕನಸುಗಳು ಚಾಲ್ತಿಯಲ್ಲಿಲ್ಲದ ನಾಣ್ಯಗಳಾದವು. ಆದರೂ ಅನ್ಯಾಯದ ವ್ಯವಸ್ಥೆಯ ಜತೆ ರಾಜಿ ಮಾಡಿಕೊಳ್ಳಲಿಲ್ಲ. ಅವರು ಕ್ಷಣಿಕ ಸೋಲಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಸೋಲೇ ಇಂದು ನೂರಾರು ಜನರಲ್ಲಿ ನ್ಯಾಯದ ತುಡಿತವನ್ನು ಹುಟ್ಟಿಸಿದ್ದು. ನಿಸ್ವಾರ್ಥ ಬದುಕಿಗೆ ಪ್ರೇರಣೆಯಾಗಿದ್ದು, ಸಾವಿರಾರು ಜನರಲ್ಲಿ ಅವರು ಮತ್ತೆ ಹುಟ್ಟಿ ಬಂದಿದ್ದು.
ಜನವಿರೋಧಿ, ಜೀವ ವಿರೋಧಿಗಳ ವಿರುದ್ಧ ಹೋರಾಡುತ್ತಿರುವ ಸಾವಿರಾರು ಸಾತ್ವಿಕ ಜನರಿಗೆ ನಮಸ್ಕರಿಸಿ ಅವರೆಲ್ಲರೂ ನಮ್ಮ ಪ್ರತಿಧ್ವನಿಗಳಾಗಲಿ ಎಂದು ಆಶಿಸುತ್ತಾ ಸೋಲು ಗೆಲುವು ಯೋಚನಾಲಹರಿಗೆ ಶುಭಂ ಹೇಳುತ್ತೇನೆ.
ಇಂತಿ ನಿನ್ನವ
ಆನಂದ್