ದೂರುದಾರರೊಂದಿಗೆ ಮಾತುಕತೆಗೆ ಮುಂದಾದ ಆರ್ಚಬಿಷಪ್
ಎರ್ನಾಕುಲಂ-ಅಂಗಮಾಲಿ ಧರ್ಮಕ್ಷೇತ್ರಕ್ಕೆ ಸೇರಿದ್ದ ಬೆಲೆಬಾಳುವ ಭೂಮಿಯನ್ನು ಅಲ್ಪ ಬೆಲೆಗೆ ಮಾರಾಟ ಮಾಡಿದ್ದಾರೆ ಎಂಬ ಭೂ ಹಗರಣದ ಆರೋಪ ಹೊತ್ತ, ವಿವಾದದ ಕೇಂದ್ರ ಬಿಂದುವಾಗಿದ್ದ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಅವರು, ತಮ್ಮ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪಾದ್ರಿಗಳೊಂದಿಗೆ ಮಾತಕತೆ ನಡೆಸಲು ಮುಂದಾಗಿದ್ದಾರೆ.
ಇದರೊಂದಿಗೆ, ಪ್ರಶ್ನಾರ್ಹವಾಗಿದ್ದ ಧರ್ಮಸಭೆಗೆ ಸೇರಿದ್ದ ಅಪಾರ ಮೌಲ್ಯದ ಆಸ್ತಿ ಪರಭಾರೆ ಹಗರಣದ ವಿವಾದ, ‘ಧರ್ಮಸಭೆಯ ಆಂತರಿಕ ವ್ಯವಹಾರ’ ಎಂಬ ಕಣ್ಕಟ್ಟಿನ ಮುಸುಕಿನಲ್ಲಿ, ಈಗ ತೆರೆಯ ಹಿಂದೆ ಸ್ಥಳಾಂತರಗೊಂಡಂತಾಗಿದೆ.
ಯೇಸುಸ್ವಾಮಿಯ ಪುನರುತ್ಥಾನದ ಸಂದರ್ಭದ ಈ ಬೆಳವಣಿಗೆ ಏನೇ ಫಲಶೃತಿ ತರಲಿ, ಸದ್ಯಕ್ಕಂತೂ ಕಾರ್ಡಿನಲ್ ಅವರು, ಧರ್ಮಸಭೆಯ ಆಡಳಿತ ನಿರ್ಧಾರಗಳಿಂದ ದೂರ ನಿಲ್ಲುವಂತಾಗಿದೆ.
ಕಾರ್ಡಿನಲ್ ಅಲೆಂಚರಿ (೭೨) ಅವರು ಸಿರೋ ಮಲಬಾರ್ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರಾಗಿದ್ದಾರೆ (ಆರ್ಚಬಿಷಪ್ ಮೇಜರ್). ಕಳೆದ ಮೂರು ತಿಂಗಳಿಂದ ಈ ಭೂ ವಿವಾದ ಬೆಳಕಿಗೆ ಬಂದ ನಂತರ, ಅವರು ಧರ್ಮಸಭೆಯಲ್ಲಿ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದೆಂಬ ನಿಷೇಧ ಜಾರಿಯಲ್ಲಿದ್ದು, ಆಡಳಿತ ಯಂತ್ರದ ಏಣಿಯಲ್ಲಿ ಅವರ ನಂತರದ ಸ್ಥಾನದಲ್ಲಿದ್ದವರು, ಈಗಾಗಲೇ ಅವರ ಅನುಪಸ್ಥಿತಿಯಲ್ಲಿ ಎರಡು ಮಹತ್ವದ ಸಭೆಗಳನ್ನು ನಡೆಸಿದ್ದಾರೆ.
ಬಿಷಪರೇ, ಹಣಕಾಸು ಮತ್ತು ಭೂ ವ್ಯವಹಾರಗಳಿದ ದೂರವಿರಿ
ಇನ್ನೊಂದು ಪ್ರಕರಣದಲ್ಲಿ, ಕೊಲ್ಲಂ ಜಿಲ್ಲೆಯ ನ್ಯಾಯಾಲಯವೊಂದು, ಕ್ವಿಲಾನ್ನ ಬಿಷಪ್ ಸ್ಟ್ಯಾನ್ಲಿ ರೋಮನ್ ಅವರು ಧರ್ಮಕೇತ್ರದ ಹಣಕಾಸಿನ ಹಾಗೂ ಭೂ ವ್ಯವಹಾರಗಳಿಂದ ದೂರವಿರುವಂತೆ ಸೂಚಿಸಿದೆ. ಆದರೂ, ಧಾರ್ಮಿಕ ಕ್ರಿಯಾವಿಧಿಗಳನ್ನು ನಡೆಸುವುದಕ್ಕೆ ವಿನಾಯತಿ ನೀಡಲಾಗಿದೆ.
ಕಥೋಲಿಕ ಧರ್ಮಸಭೆಯ ಸಂವಿಧಾನದ ಕ್ಯಾನನ್ ಕಾನೂನಿನ ಪ್ರಕಾರ, ೭೫ವರ್ಷ ದಾಟಿದ ಬಿಷಪರು ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಕೂಡದು, ಅವರು ಕೇವಲ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ನಿಲುವಿನಿಂದ ನ್ಯಾಯಾಲಯದ ಕಟ್ಟೆ ಏರಿದ್ದ ದೂರುದಾರರು, ಬಿಷಪ್ ಸ್ಟ್ಯಾನ್ಲಿ ರೋಮನ್ ಅವರು, ಕೊಟ್ಟಾಯಂ ಮತ್ತು ಕೊಲ್ಲಂ ಧರ್ಮಸಭೆಯ ಆಸ್ತಿಯಲ್ಲಿ ಅಕ್ರಮವಾಗಿ ಕೆಲವನ್ನು ಮಾರಾಟ ಮಾಡಿದ್ದಾರೆ ಹಾಗೂ ಕೆಲವನ್ನು ಭೋಗ್ಯಕ್ಕೆ ಹಾಕಿದ್ದಾರೆ, ಇದಲ್ಲದೇ, ಅಪಾರ ಹಣವನ್ನು ಬ್ಯಾಂಕ್ ಖಾತೆಗಳಿಂದ ತೆಗೆಯಲಾಗಿದೆ ಎಂದು ಆರೋಪಿಸಿದ್ದರು.
ಗರಿಗಳ ಭಾನುವಾರದಂದು ಕತ್ತೆ ಹತ್ತಿದ ಪಾದ್ರಿ!
ಇಂದೋರ ಧರ್ಮಕ್ಷೇತ್ರದ ನಂದನಗರದ ಸಂತ ಜೋಸೆಫರ ಚರ್ಚಿನ ವಿಚಾರಣೆ ಗುರು ರಾಜಮಾಣಿಕ್ಯಂ ಅವರು, ಗರಿಗಳ ಭಾನುವಾರದಂದು ಕತ್ತೆಯ ಮೇಲೆ ಕುಳಿತು ಚರ್ಚಿನ ಆವರಣದಲ್ಲಿ ಮೆರವಣಿಗೆಯಲ್ಲಿ ಸಾಗಿದರೆ, ಮಕ್ಕಳು ಯುವಕರುಗಳಿದ್ದ ಚರ್ಚಿನ ಹಾಡಿನ ತಂಡದ ಸದಸ್ಯರು ಗರಿಗಳನ್ನು ಹಿಡಿದು, ಹಬ್ಬದ ಹಾಡುಗಳನ್ನು ಹಾಡುತ್ತಾ, ಜೈಕಾರ ಮಾಡುತ್ತಾ ಅವರ ಹಿಂದೆ ಸಾಗಿದ ಘಟನೆ ನಡೆದಿದೆ.
ಹೊಸ ಒಡಂಬಡಿಕೆಯಲ್ಲಿನ ಯೇಸುಸ್ವಾಮಿಯ ಜೆರುಸಲೇಮ್ ಪಟ್ಟಣ ಪ್ರವೇಶದ ಘಟನೆಯನ್ನು ಪ್ರತಿನಿಧಿಸುವಂತೆ, ಪೂಜಾ ಧಿರಿಸಿನಲ್ಲಿ ವಿಚಾರಣೆ ಗುರು ಕತ್ತೆ ಹತ್ತಿ ಚರ್ಚಿಗೆ ಬಂದ ಪ್ರಸಂಗ, ಅನೇಕರಿಗೆ ಅಚ್ಚರಿ ಮೂಡಿಸಿದರೆ, ವಿಚಾರಣೆಯ ವ್ಯಾಪ್ತಿಗೆ ಸೇರಿದ್ದ ಹಿರಿಯರಿಗೆ ಮಕ್ಕಳಿಗೆ ಗರಿಗಳ ಭಾನುವಾರದ ಮಹತ್ವವನ್ನು ಮನಮುಟ್ಟುವಂತೆ ವಿವರಿಸಲು ಸಾಧ್ಯವಾಯಿತು ಎನ್ನಲಾಗುತ್ತಿದೆ.
ಚರ್ಚ್ ಆವರಣದಲ್ಲಿನ ಒಟ್ಟು ೩೦ ನಿಮಿಷಗಳ ಈ ಮೆರವಣಿಗೆ ಒಂದು ಅವಿಸ್ಮರಣೀಯ ಘಟನೆ ಎನ್ನವ ಕೆಲವು ವಿಶ್ವಾಸಿಗಳು, ಮೊದಮೊದಲು ಅದನ್ನು ತಮಾಷೆಯಾಗಿಯೇ ಕಂಡರು. ಆದರೆ, ಪೂಜೆಯಲ್ಲಿನ ಪ್ರಸಂಗ ಕೇಳಿದ ನಂತರ, ಅವರಿಗೆ ‘ಅತಿ ಹೀನಾಯ ಪ್ರಾಣಿ ಎಂದು ಗುರುತಿಸುವ, ಸಾಮಾನು, ಸರಂಜಾಮು ಸಾಗಿಸುವ ಕತ್ತೆಯ ಮೇಲಿನ ಪಾದ್ರಿಯ ಮೆರವಣಿಗೆ, ಇಂದಿನ ಐಷಾರಾಮಿ ಬದುಕಿನ ದಿನಗಳಲ್ಲಿ ಯೇಸುಸ್ವಾಮಿಯ ದೀನತೆಯ ಪಾಠ’ ಎಂಬುದು ಮನದಟ್ಟಾಯಿತು.
ಕಾಶ್ಮೀರದಲ್ಲೊಂದು ‘ಘರ ವಾಪಸಿ’ ಹಗರಣ
ರಾಜೌರಿ (ಜಮ್ಮು ಮತ್ತು ಕಾಶ್ಮೀರ): ಜಮ್ಮುವಿನ ರಾಜೌರಿ ಜಿಲ್ಲೆಯ ಕಾಂಗ್ರಿ ಮತ್ತು ಸೆಹ್ಯಾಲ ಗ್ರಾಮಗಳ ಕ್ರೈಸ್ತ ಕುಟುಂಬಗಳು ‘ಘರ ವಾಪಸಿ’ ಹಗರಣದಿಂದ ನಲುಗುತ್ತಿರುವ ಘಟನೆ ವರದಿಯಾಗಿದ್ದು, ಪೋಲಿಸರು ಸಂತ್ರಸ್ತರಿಗೆ ರಕ್ಷಣೆ ಒದಗಿಸಿದ್ದಾರೆ.
೩೦೦ಕ್ಕೂ ಅಧಿಕ ಹಿಂದು ಕುಟುಂಬಗಳಿರುವ ಈ ಗ್ರಾಮಗಳಲ್ಲಿ ಸುಮಾರು ಐವತ್ತು ಕ್ರೈಸ್ತ ಕುಟುಂಬಗಳಿವೆ. ಅವರೆಲ್ಲಾ ಈ ಮುಂಚೆ ವಾಸಿಥ್ ಸಮುದಾಯಕ್ಕೆ ಸೇರಿದವರಾಗಿದ್ದರು. ಜನವರಿ ತಿಂಗಳಲ್ಲಿ ಸ್ಥಳೀಯ ಬಿಜೆಪಿ ಶಾಸಕ ರವೀಂದ್ರ ರೈನಾ, ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ೪೫ ಕುಟುಂಬಗಳು ಮತ್ತೆ ಹಿಂದುಗಳಾಗಿದ್ದು, ‘ಅವರು ಮನೆಗೆ ಹಿಂತಿರುಗಿದ್ದಾರೆ’ ಎಂದು ಶಾಸಕರು ಹೇಳಿಕೊಂಡಿದ್ದಾರೆ.
ಕ್ರೈಸ್ತ ಧರ್ಮವನ್ನು ಬಿಟ್ಟುಕೊಡದ ಉಳಿದ ಕುಟುಂಬಗಳು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿವೆ. ಹಿಂದುಗಳಾದವರು ಹರಿದ್ವಾರಕ್ಕೆ ಹೋಗಿ, ಯಜ್ಞಯಾಗಾದಿ ಮಾಡಿ, ಗಂಗಾನದಿಯಲ್ಲಿ ಮಿಂದು ಪರಿಶುದ್ಧರಾಗಿ ಬರಬೇಕೆಂದು ಆಗ್ರಹಿಸಲಾಗುತ್ತಿದೆ.
ಜನವರಿ ೧೫ ರಂದು, ಅದೇ ಮದುವೆಯಾಗಿದ್ದ ರಿಂಕುಕುಮಾರನ ಹೆಂಡತಿ ಸೀಮಾದೇವಿ ತೀರಿಕೊಂಡಾಗ, ರಿಂಕುಕುಮಾರ ಕ್ರೈಸ್ತ ವಿಧಿವಿಧಾನದಂತೆ ಶವಸಂಸ್ಕಾರಕ್ಕೆ ಮುಂದಾಗಿದ್ದ, ಆದರೆ ಊರಲ್ಲಿನ ಬಹುಸಂಖ್ಯಾತರು ಶವಕ್ಕೆ ಅಗ್ನಿಸಂಸ್ಕಾರ ಮಾಡಿದರು, ಜೊತೆಗೆ ಕ್ರೈಸ್ತ ಸಮಯದಾಯಕ್ಕೆ ಸೇರಿದವರ ಅಂಗಡಿ ಮುಗ್ಗಟುಗಳಿಗೆ ಬೆಂಕಿ ಹಚ್ಚಿದ್ದರು. ಅಷ್ಟಾದ ನಂತರ ‘ಘರ ವಾಪಸಿ’ ಕಾರ್ಯಕ್ರಮ ನಡೆಸಲಾಗಿತ್ತು. ಈಗ ಎಲ್ಲವೂ ಶಾಂತವಾಗಿದೆ ಎಂಬುದು ಬಿಜೆಪಿ ಶಾಸಕರ ಹೇಳಿಕೆಯಾಗಿದೆ.