Tuesday, 24 April 2018

ಫಾದರ್ ಫ್ರಾಂಕ್ವಾ ಬೋನೆತ್ರ್ಯಾಂ


ಎಂಇಪಿ ಗುರುಗಳ ಸೇವಾವಧಿಯಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ ಫಾದರ್ ಫ್ರಾಂಕ್ವಾ ಬೋನೆತ್ರ್ಯಾಂ ಅವರದು ಬಹುಮುಖ ಪ್ರತಿಭೆ.
ಫ್ರಾನ್ಸ್ ದೇಶದ ಲೋರೇನ್ ಪ್ರಾಂತ್ಯದ ಮೆತ್ಝ್ ಎಂಬಲ್ಲಿ ೧೮೪೩ನೇ ನವೆಂಬರ್ ೬ರಂದು ಅರ್ನೆಸ್ಟ್ ಫ್ರಾಂಕ್ವಾ ಬೋನೆತ್ರ್ಯಾಂ ಜನಿಸಿದರು. ಅವರು ಚಿಕ್ಕ ಬಾಲಕರಿರುವಾಗಲೇ ಅವರ ತಂದೆಯವರು ತೀರಿಕೊಂಡರು. ತನ್ನ ಪತಿ ನಡೆಸುತ್ತಿದ್ದ ರೊಟ್ಟಿಯಂಗಡಿಯ ಹೊಣೆಯೊಂದಿಗೆ ಪುಟ್ಟ ಆರು ಮಕ್ಕಳ ಕುಟುಂಬವನ್ನು ಸಲಹುವ ಜವಾಬ್ದಾರಿ ಆ ಕಿರುವಯಸ್ಸಿನ ವಿಧವೆಯ ಹೆಗಲಿಗೆ ಬಂತು. ಬೇಕರಿಯ ನಿರ್ವಹಣೆಯೊಂದಿಗೆ ಪುಟ್ಟ ಮಕ್ಕಳಿಗೆ ವಿದ್ಯಾಬುದ್ಧಿ ಕಲಿಸಿ ಕ್ರೈಸ್ತಧರ್ಮೋಪದೇಶವನ್ನೂ ಹೇಳಿಕೊಟ್ಟು ಆಕೆ ಮಕ್ಕಳನ್ನು ಸಾತ್ವಿಕ ಹಾದಿಯಲ್ಲಿ ಬೆಳೆಸಿದರು. ಅದು ಬಾಲಕ ಬೊನೆತ್ರಾನ್ ಮನದಲ್ಲಿ ಅಚ್ಚಳಿಯದ ಪರಿಣಾಮ ಬೀರಿತು.
ಹದಿವಯಸ್ಸಿಗೆ ಬರುವ ವೇಳೆಗಾಗಲೇ ಆತನಿಗೆ ಸೆಮಿನರಿಗೆ ಸೇರಬೇಕೆಂಬ ಬಯಕೆ ಉತ್ಕಟವಾಯಿತು. ೧೮೬೧ರಲ್ಲಿ ಮೊದಲಿಗೆ ಆತ ಜೆಸ್ವಿತ್ ಸಂಸ್ಥೆ ಸೇರಿದನಾದರೂ ಕ್ಲೀನೆ (Kleiner) ಎಂಬ ತನ್ನ ಹಿರಿಯ ಗೆಳೆಯನೊಬ್ಬ ಇಂಡಿಯಾ ದೇಶಕ್ಕೆ ಬಂದು ಬಿಷಪನಾದ ಎಂಬ ಸುದ್ದಿ ಕೇಳಿ ಎಂಇಪಿ ಸಂಸ್ಥೆಗೆ ಸೇರಲು ಹಂಬಲಿಸಿದ. ಹೀಗೆ ಬೊನೆತ್ರಾನ್ ಸುಮಾರು ೧೮೬೪ರಲ್ಲಿ ಎಂಇಪಿ (ಪ್ರಾರಿಸ್ಸಿನ ವಿದೇಶೀ ಧರ್ಮಪ್ರಚಾರ ಸಂಸ್ಥೆ)ಗೆ ಸೇರಿ ೧೮೬೬ ಡಿಸೆಂಬರ್ ೨೨ ರಂದು ಗುರುಪಟ್ಟ ಪಡೆದರು.
ತಮ್ಮ ಸಂಸ್ಥೆಯ ಧ್ಯೇಯವಾದ ಹೊರನಾಡುಗಳಲ್ಲಿ ಕ್ರಿಸ್ತಸೇವೆ ಮಾಡುವ ಉದ್ದೇಶದಿಂದ ಇಂಡಿಯಾ ನಾಡಿನತ್ತ ೧೮೬೭ ಫೆಬ್ರವರಿಯಲ್ಲಿ ಪ್ರಯಾಣ ಬೆಳೆಸಿ ಮೇ ತಿಂಗಳಲ್ಲಿ ಬೆಂಗಳೂರಿಗೆ ಬಂದಿಳಿದರು. ಮೊದಲಿಗೆ ಅವರು ಈಗ ತಮಿಳುನಾಡಿಗೆ ಸೇರಿಹೋಗಿರುವ ಹೊಸೂರಿನ ಬಳಿಯ ಮತ್ತಿಗಿರಿ ಎಂಬ ಫ್ರೆಂಚ್ ಮಿಷನರಿ ಕೇಂದ್ರದಲ್ಲಿ ತಂಗಿದರು. ಆದರೆ ಕೆಲದಿನಗಳಲ್ಲೇ ಅವರನ್ನು ಮೈಸೂರಿಗೆ ನಿಯುಕ್ತಗೊಳಿಸಲಾಯಿತು. ಮೈಸೂರಿನಲ್ಲಿ ನೆಲೆನಿಂತು ಅವರು ಕನ್ನಡ ನುಡಿಯೊಂದಿಗೆ ಜನರ ಆಚಾರ ವಿಚಾರಗಳು ಹಾಗೂ ಸಾಮಾಜಿಕ ಜೀವನವನ್ನು ಅಭ್ಯಸಿಸಿದರು. ಈ ಎಲ್ಲ ವಿಷಯಗಳಲ್ಲಿ ಪರಣತಿ ಸಾಧಿಸಿ ಇನ್ನೇನು ಹೊಸ ಯೋಜನೆಗಳೊಂದಿಗೆ ಪೂರ್ಣಪ್ರಮಾಣದಲ್ಲಿ ಕೆಲಸಕ್ಕೆ ತೊಡಗಬೇಕು ಎನ್ನುವಷ್ಟರಲ್ಲಿ ಅವರ ದೇಹಾರೋಗ್ಯ ಹದಗೆಟ್ಟಿತು. ೧೮೭೪ರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಫ್ರಾನ್ಸ್ ದೇಶಕ್ಕೆ ಕಳಿಸಲಾಯಿತು.
ತೀವ್ರ ಅನಾರೋಗ್ಯದಿಂದ ಅವರು ಮಲಗಿದ್ದಾಗಲೇ ಬೆಳೆಯುತ್ತಿರುವ ನಗರವಾದ ಬೆಂಗಳೂರಿನಲ್ಲಿ ದೊಡ್ಡ ರೋಗರುಜಿನಗಳನ್ನು ನಿವಾರಿಸಲು ಒಂದು ದೊಡ್ಡ ಆಸ್ಪತ್ರೆಯ ಅಗತ್ಯವಿದೆ ಎಂಬ ಹೊಳಹು ಅವರ ಚಿತ್ತದಲ್ಲಿ ಮೊಳಕೆಯೊಡೆಯಿತು. ಆಗೆಲ್ಲಾ ಜನಸಾಮಾನ್ಯರು ನಾಟಿವೈದ್ಯಕ್ಕೇ ಅಂಟಿಕೊಂಡಿದ್ದರು. ವಾಂತಿಭೇದಿ, ಹೊಟ್ಟೆನೋವು, ಕಾಮಾಲೆ, ಮೂಳೆಮುರಿತ ಎಲ್ಲದಕ್ಕೂ ಕಷಾಯ ಲೇಹ್ಯ ಸೊಪ್ಪು ಮೂಳೆಕಟ್ಟು ಇವುಗಳನ್ನು ಒದಗಿಸುವ ನಾಟಿವೈದ್ಯರೂ ಸೂಲಗಿತ್ತಿಯರೂ ಸಾಕಷ್ಟಿದ್ದರು. ಅದೂ ಅಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೆ ಜನರು ಸೊಪ್ಪು ಹಾಕುತ್ತಿರಲಿಲ್ಲ. ಮಲೇರಿಯ ಕ್ಷಯ ಪುಪ್ಪುಸಸೋಂಕು ಮುಂತಾದವುಗಳನ್ನು ಅವರು ದೇವರ ಶಾಪ ಎಂದುಕೊಂಡು ಅದರಲ್ಲೇ ನರಳಿ ನರಳೀ ಸಾವಪ್ಪುತ್ತಿದ್ದರು. ಸೂಜಿಮದ್ದು ಶಸ್ತ್ರಚಿಕಿತ್ಸೆ ಮೊದಲಾದ ವಿದೇಶೀ ವೈದ್ಯಪದ್ಧತಿಗೆ ಅವರು ಒಲವು ತೋರುತ್ತಿರಲಿಲ್ಲ.
ಅದರೆ ದಂಡು ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಇಂಗ್ಲಿಷ್ ದೊರೆಗಳ ಸಹವಾಸ ಹಾಗೂ ಸಾರೋಟಗಳ ಓಡಾಟದ ದೆಸೆಯಿಂದ ಜನರಲ್ಲಿ ಕ್ರಮೇಣ ಆಧುನಿಕ ಮನೋಭಾವ ಬೆಳೆಯುತ್ತಿತ್ತು. ನಾಟಿವೈದ್ಯದಲ್ಲಿ ಉಂಟಾಗುತ್ತಿದ್ದ ಅಡ್ಡಪರಿಣಾಮ ನಂಜು ಸೋಂಕು ಮೊದಲಾದ ಬೇನೆಗಳಿಂದ ಜರ್ಜರಿತರಾಗಿದ್ದ ಅವರು ಮಿಷನರಿ ಗುರುಗಳೂ ಕಾನ್ವೆಂಟಿನ ಸಂನ್ಯಾಸಿನಿಯರೂ ಕೊಡುತ್ತಿದ್ದ ಶುಭ್ರಬಿಳಿ ಗುಳಿಗೆಗಳಿಗಾಗಿ ಹಂಬಲಿಸುತ್ತಿದ್ದರು. ಅದೇ ವೇಳೆಯಲ್ಲಿ ಬೋನೆತ್ರ್ಯಾನ್ ಸ್ವಾಮಿಗಳೂ ದೊಡ್ಡಾಸ್ಪತ್ರೆಯ ಕನಸು ಕಂಡರು.
ಸ್ವದೇಶಕ್ಕೆ ಹೊರಡುವ ಮುನ್ನ ಅವರು ತಮ್ಮ ಬಿಷಪರನ್ನು ಭೇಟಿಯಾಗಿ ಬೆಂಗಳೂರಲ್ಲೊಂದು ದೊಡ್ಡಾಸ್ಪತ್ರೆಯ ಅಗತ್ಯವಿರುವುದರ ಕುರಿತು ಮಾತಾಡಿ ತಾವು ಫ್ರಾನ್ಸಿಗೆ ಹೋದಾಗ ಅಲ್ಲಿನ ತಜ್ಞರೊಂದಿಗೆ ಚರ್ಚಿಸಿ ಆಸ್ಪತ್ರೆ ಸ್ಥಾಪನೆಯ ರೂಪುರೇಷೆಗಳನ್ನು ಸಿದ್ಧಪಡಿಸುವುದಾಗಿ ಹೇಳಿ ಅನುಮತಿ ಪಡೆದುಕೊಂಡರು. ತಾನೊಂದು ಬಗೆದರೆ ದೈವವೊಂದು ಬಗೆವುದು ಎನ್ನುವ ಹಾಗೆ ಬೋನೆತ್ರ್ಯಾನ್ ಸ್ವಾಮಿಗಳು ಆಸ್ಪತ್ರೆ ಸ್ಥಾಪಿಸುವ ಕುರಿತು ಮಾತಾಡಲು ಅಲ್ಲಿನ ಹಲವು ಕಾನ್ವೆಂಟುಗಳಿಗೆ ಎಡತಾಕಿದರಾದರೂ ಬರಿಗೈಯಿಂದ ಹಿಂದಿರುಗಬೇಕಾಯಿತು.
೧೮೭೭ರಲ್ಲಿ ಅವರು ಇಂಡಿಯಾಕ್ಕೆ ಹಿಂದಿರುಗಿದಾಗ ಇಡೀ ದಕ್ಷಿಣ ಇಂಡಿಯಾವು ಭೀಕರ ಬರಗಾಲದಿಂದ ತತ್ತರಿಸುತ್ತಿತ್ತು. ಸಾವಿರಾರು ಜನರು ಹಸಿವಿನಿಂದ ಸಾಯುತ್ತಿದ್ದರು. ಎಷ್ಟೋ ಮಕ್ಕಳು ಅನಾಥರಾಗಿ ಯಾರೂ ಸಲಹುವವರಿಲ್ಲದೆ ಕಂಗೆಟ್ಟಿದ್ದವು. ಅಂಥಾ ಮಕ್ಕಳನ್ನು ಜತನದಿಂದ ಪೋಷಿಸುವಂತೆ ಮೈಸೂರು ಮಹಾರಾಜರು ಸೇವಾಸಂಸ್ಥೆಗಳಿಗೆ ಕರೆ ನೀಡಿದ್ದರು. ಫಾದರ್ ಬೋನೆತ್ರ್ಯಾನ್ ಅವರ ಬೆಂಗಳೂರು ಉತ್ತರಭಾಗದಲ್ಲಿ ಕಸಘಟ್ಟಪುರ ಗ್ರೂಪ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಸುಮಾರು ೪೦೦ ಎಕರೆ ಭೂಮಿಯನ್ನು ದಾನವಾಗಿ ಪಡೆದು ಶಿಲ್ವೆಪುರ ಎಂಬ ಅನಾಥ ಮಕ್ಕಳ ಪುನರ್ವಸತಿ ಶಿಬಿರ ನಿರ್ಮಿಸಿದರು. ಅವೆಲ್ಲವೂ ತಾತ್ಕಾಲಿಕ ಶೆಡ್ಡುಗಳಾಗಿದ್ದು ಮಳೆ ಬಿಸಿಲಿಗೆ ಆಶ್ರಯ ಒದಗಿಸುತ್ತಿದ್ದವು. ಸ್ವತಃ ಫಾದರ್ ಬೋನೆತ್ರ್ಯಾನ್ ಅವರೂ ಸಹ ಅಂಥಾ ಒಂದು ಶೆಡ್ಡಿನಲ್ಲಿ ವಾಸ್ತವ್ಯ ಹೂಡಿ ಹಲವಾರು ತಿಂಗಳ ಕಾಲ ಪೂಜೆ ಪುನಸ್ಕಾರಗಳನ್ನು ಅದರಲ್ಲೇ ನೆರವೇರಿಸಿದರು.
೧೮೮೦ರಲ್ಲಿ ಅವರು ಬೆಂಗಳೂರಿನ ಗುಡ್ ಶೆಫರ್ಡ್ ಕನ್ಯಾಮಠದ ಚಾಪ್ಲೆನ್ ಆಗಿ ನೇಮಕಗೊಂಡರು. ಅದು ಒಂದು ರೀತಿಯಲ್ಲಿ ಅವರಿಗೆ ವರದಾನವಾಯಿತು. ಬೆಂಗಳೂರಿನಲ್ಲೊಂದು ದೊಡ್ಡಾಸ್ಪತ್ರೆಯ ಅವಶ್ಯಕತೆ ಇರುವುದರ ಕುರಿತು ಅವರಾಡಿದ ಮಾತು ಕಾನ್ವೆಂಟಿನ ಮುಖ್ಯಸ್ಥರಾಗಿದ್ದ ಮದರ್ ಮೇರಿ ವಿಸಿಟೇಶನ್ ಅವರ ಮನತಟ್ಟಿತು. ಮುಂದಿನ ಎಲ್ಲ ಸಿದ್ಧತೆಗಳೂ ಯೋಜನೆಗಳೂ ಬಲು ಚುರುಕಾಗಿ ರೂಪುಗೊಂಡವು. ಅಂದು ೧೮೮೪ ಜುಲೈ ೨೮, ಸಂತ ಮಾರ್ತಾ ಅವರ ಜನ್ಮದಿನ, ಆಸ್ಪತ್ರೆ ಕಟ್ಟಲು ಅಗತ್ಯವಾದ ಇಪ್ಪತ್ತು ಎಕರೆ ಭೂಮಿಯನ್ನು ಮೈಸೂರು ಮಹಾರಾಜರಾದ ಹತ್ತನೇ ಚಾಮರಾಜ ಒಡೆಯರು ಉಂಬಳಿಯಾಗಿ ಕೊಟ್ಟರು. ಅದಾಗಿ ಒಂದೇ ತಿಂಗಳಲ್ಲಿ ಅಂದರೆ ಆಗಸ್ಟ್ ೨೮ರಂದು ಮಾರ್ತಾ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಯಿತು. ಫಾದರ್ ಬೋನೆತ್ರ್ಯಾನ್ ಅವರ ಉಸ್ತುವಾರಿಯಲ್ಲಿ ಕಟ್ಟೋಣ ಕೆಲಸಗಳು ಭರದಿಂದ ಸಾಗಿ ೧೮೮೬ರ ವೇಳೆಗೆ ಆಸ್ಪತ್ರೆ ಸಿದ್ಧವಾಯಿತು.
ನಂತರದ ದಿನಗಳಲ್ಲಿ ಫಾದರ್ ಬೋನೆತ್ರ್ಯಾನ್ ಅವರು ತಾಯಿಪಾಳ್ಯ (ದೊರೆಸಾನಿಪಾಳ್ಯ) ದಲ್ಲಿ ಅನಾಥ ಮಕ್ಕಳಿಗಾಗಿ ತೋಟಗಾರಿಕೆ ಪ್ರಾರಂಭಿಸಿದರು.
ಹೀಗಿರುವಾಗಲೇ ಬಿಷಪ್ ಕುವಾಡು ಅವರು ಬೋನೆತ್ರ್ಯಾನ್ ಅವರನ್ನು ಶೆಟ್ಟಿಹಳ್ಳಿಗೆ ನಿಯೋಜಿಸಿದರು. ಅಲ್ಲೂ ಸಹ ಅವರು ಒಂದು ಕನ್ಯಾಮಠವನ್ನೂ ಆರೋಗ್ಯಕೇಂದ್ರವನ್ನೂ ಸ್ಥಾಪಿಸಿದರು. ಆ ಆರೋಗ್ಯಕೇಂದ್ರವು ಇಪ್ಪತ್ತೈದರಿಂದ ಮೂವತ್ತು ಒಳರೋಗಿಗಳಿಗೆ ಸೌಲಭ್ಯ ನೀಡುವಷ್ಟು ದೊಡ್ಡದಾಗಿತ್ತು. ೧೮೯೭ರಲ್ಲಿ ಹತ್ತಿರದ ಮಗ್ಗೆ ಗ್ರಾಮಕ್ಕೆ ತೆರಳಿದ ಅವರು ಅಲ್ಲಿ ಹಾಗೂ ದಾಸಾಪುರದಲ್ಲಿ ಚರ್ಚುಗಳನ್ನು ಕಟ್ಟಿಸಿದರು. ಹಾಸನದಲ್ಲಿ ಇದ್ದ ಹಳೆಯ ಚರ್ಚಿನ ಜೀರ್ಣೋದ್ಧಾರ ಮಾಡಿದರು. ಗಾಡೇನಹಳ್ಳಿಯಲ್ಲಿ ಗುರುನಿವಾಸ ನಿರ್ಮಿಸಿದರು. ೧೯೦೧ರಲ್ಲಿ ಮತ್ತೆ ಅವರು ಮಾರ್ತಾ ಆಸ್ಪತ್ರೆಯ ಗುರುವಾಗಿ ನೇಮಕಗೊಂಡರು. ಈ ಸಲ ಅವರು ಸ್ವತಃ ರೋಗಿಯಾಗಿ ಬಂದರು. ಇದೇ ವೇಳೆಯಲ್ಲಿ ಅವರು ಸಂತ ಜೋಸೆಫರ ಶಾಲೆಯು ಐರೋಪ್ಯ ವಿದ್ಯಾರ್ಥಿಗಳಿಗಷ್ಟೇ ಶಿಕ್ಷಣ ನೀಡುತ್ತಿರುವುದನ್ನು ಕಂಡು ಮೇಲ್ಜಾತಿಯ ಭಾರತೀಯರಿಗೂ ಆ ಶಿಕ್ಷಣ ದೊರೆಯವಂತೆ ಮಾಡುವಲ್ಲಿ ಸಫಲರಾದರು. ಕ್ರಮೇಣ ಅದು ಸಂತ ಜೋಸೆಫರ ಇಂಡಿಯನ್ ಶಾಲೆ ಎಂದು ಬದಲಾಯಿತು.
ಬಿಡುವಿಲ್ಲದ ಶ್ರಮದಾಯಕ ಕೆಲಸಗಳಿಂದ ಅವರ ದೇಹ ಸೋತುಹೋಗಿತ್ತು. ಕಿವುಡುತನ ವಿಪರೀತವಾಗಿ ತೊಂದರೆ ಕೊಡುತ್ತಿತ್ತು. ಆದರೂ ಅವರ ತಲೆಯಲ್ಲಿ ಹಲವಾರು ಹೊಸ ಹೊಸ ಯೋಜನೆಗಳು ರೂಹು ತಳೆಯುತ್ತಿದ್ದವು. ಅದೇ ಸಂದರ್ಭದಲ್ಲಿ ವೃದ್ಧಾಶ್ರಮವೊಂದನ್ನು ಕಟ್ಟುವ ಅವರ ಯೋಜನೆಗೆ ಲಿಟಲ್ ಸಿಸ್ಟರ್ಸ್ ಆಫ್ ದ ಪುವರ್ ಕಾನ್ವೆಂಟಿನವರು ತಲೆದೂಗಿದರು. ಆ ಕನ್ಯಾಮಠಕ್ಕೆ ವೃದ್ಧಾಶ್ರಮ ನಿರ್ವಹಣೆಯ ಹೊಣೆ ಒಪ್ಪಿಸಿ ಅನುಗಾಲ ಅವರ ಜೊತೆ ನಿಂತು ತಮ್ಮ ಕೈಲಾದ ಸಹಾಯ ಮಾಡಿದರು.
೧೯೦೫ರಲ್ಲಿ ಅವರನ್ನು ನೀಲಗಿರಿ ಬೆಟ್ಟಸಾಲಿನ ವೆಲಿಂಗ್ಟನ್ ಬೆಟ್ಟದಲ್ಲಿನ ಥಿಯೊಡರ್ ಸ್ಯಾನಿಟೋರಿಯಮಿನ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಅದು ನಿವೃತ್ರ ಎಂಇಪಿ ಗುರುಗಳ ಜೀವನದ ಕೊನೆಯ ತಾಣವಾಗಿತ್ತು. ಅಲ್ಲಿನ ವಿಶಾಲ ಫಲವತ್ತಾದ ಭೂಮಿಯಲ್ಲಿ ಯೂರೋಪಿನಿಂದ ತರಿಸಿದ ಹಣ್ಣಿನ ಗಿಡಗಳನ್ನು ಬೆಳಸಿದ ಸ್ವಾಮಿಯವರು ಆ ಮೂಲಕ ವೃದ್ಧ ಗುರುಗಳ ಸೋತ ಜಠರಗಳಿಗೆ ಸವಿಯುಣಿಸು ನೀಡಿದರು. ಯೂರೋಪಿನಲ್ಲಿ ಜನಪ್ರಿಯವಾಗಿದ್ದ ಪೀಚು, ಪೇರಲ, ಸೇಬು ಮುಂತಾದ ಹಣ್ಣಿನ ಗಿಡಗಳು ಇಂಡಿಯಾದ ಮಣ್ಣಿಗೆ ಒಗ್ಗಿಕೊಂಡು ಹುಲುಸಾಗಿ ಬೆಳೆದವು.
ಹೀಗೆ ಕ್ರಿಸ್ತನ ಹೂದೋಟದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಫಾದರ್ ಬೋನೆತ್ರ್ಯಾನ್ ಅವರು೧೯೧೩ರಲ್ಲಿ ಮತ್ತೆ ಮೈಸೂರು ಧರ್ಮಪ್ರಾಂತ್ಯಕ್ಕೆ ಹಿಂದಿರುಗಿದರು. ಬೆಂಗಳೂರಿನಲ್ಲಿನ ಕಿರಿಯ ಗುರುಮಠಕ್ಕೆ ಅವರ ಅವಶ್ಯಕತೆ ಇತ್ತು. ಅದನ್ನವರು ಸಂತೋಷದಿಂದ ಒಪ್ಪಿಕೊಂಡರು. 
ಬಿಡುವಿಲ್ಲದ ಶ್ರಮದಾಯಕ ಕೆಲಸಗಳಿಂದ ಅವರ ದೇಹ ಸೋತುಹೋಗಿತ್ತು. ಕಿವುಡುತನ ವಿಪರೀತವಾಗಿ ತೊಂದರೆ ಕೊಡುತ್ತಿತ್ತು. ೧೯೧೭ ಮಾರ್ಚ್ ೩೧ರಂದು ಸಂತ ಮಾರ್ತಾ ಆಸ್ಪತ್ರೆಯಲ್ಲಿ ನಿಧನರಾದರು.
¨ ಸಿ ಮರಿಜೋಸೆಫ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...