ವಿಧಾನಸಭೆಯ ಚುನಾವಣೆಗೆ ಕರ್ನಾಟಕ ಸಜ್ಜುಗೊಳ್ಳುತ್ತಿದೆ. ತಮಗೆ ಬೇಕಾದ ಉತ್ತಮ ಸರ್ಕಾರವನ್ನು ಆರಿಸಿಕೊಳ್ಳಲು ಜನರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ ನಂತರ ಜೋರಾಗಿದ್ದ ಚುನಾವಣಾ ಪ್ರಚಾರ ಕಾರ್ಯ ಮತ್ತಷ್ಟು ಶಕ್ತಿ ಮತ್ತು ವೇಗವನ್ನು ಪಡೆದುಕೊಂಡಿದೆ. ನಾನಾ ತಂತ್ರಮಂತ್ರಗಳಿಂದ ಜನರನ್ನು ಆಕರ್ಷಿಸಲು ರಾಜಕೀಯ ಪಕ್ಷಗಳು ಶಕ್ತಿಮೀರಿ ಕೆಲವೊಮ್ಮೆ ಕಾನೂನಿನ ಎಲ್ಲೆ ಮೀರಿ ಕೂಡ ದುಡಿಯುತ್ತಿವೆ. ಪಕ್ಷಗಳ ನಾಯಕರು ಚರ್ಚ್, ಮಸೀದಿ, ಮಂದಿರಗಳಿಗೆ ಭೇಟಿಕೊಡುತ್ತಿದ್ದಾರೆ. ಕೆಲನಾಯಕರಂತೂ ಧಾರ್ಮಿಕ ಮುಖಂಡರನ್ನು ಒಲೈಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿರುವ ನಮ್ಮ ನಾಯಕರುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೆಲವರು ಪಕ್ಷಗಳ ವತಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಮಾಡಲು ಬಂಡಾಯದ ಭಯದಿಂದ ಪಕ್ಷಗಳು ಮೀನಮೇಷ ಎಣಿಸುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣಾಪೂರ್ವ ಸಿದ್ಧತೆ ತೃಪ್ತಿಕರವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಕೂಡ ಹೇಳಿದ್ದಾರೆ. ಸಮಾಜಿಕ ತಾಣಗಳಲ್ಲಂತೂ ಪಕ್ಷಗಳ ಪ್ರಚಾರ ಕಾರ್ಯಕ್ಕಿಂತ ದೋಷಾರೋಪಣೆಯೇ ಜಾಸ್ತಿಯಾಗಿದೆ. ಕೆಲವೊಮ್ಮೆ ಸುಳ್ಳು ಸುದ್ಧಿಗಳದೇ ಮೇಲುಗೈ. ಏನೇ ಇರಲಿ ಮತದಾರರು ಬಹು ಎಚ್ಚರಿಕೆಯಿಂದ ಇರಬೇಕು. ತಮ್ಮ ನಾಯಕರನ್ನು ಸರಿಯಾಗಿ ತೂಗಿ, ಅದರ್ಶಗಳ ನೆರಳಿನಲ್ಲಿ ವಿಮರ್ಶಿಸಿ ನಮ್ಮ ನಾಯಕರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಜ್ಞಾವಂತರಾಗಿ ಮತ ಚಲಾಯಿಸೋಣ. ಜನಪರ ನಾಯಕರನ್ನು ಸಮಾಜದ ಸಮಾನತೆಗೆ ದುಡಿಯುವ, ಬಡಬಗ್ಗರ ಬಗ್ಗೆ ಮಮತೆ ಅನುಕಂಪ ಇರುವ ನಾಯಕರನ್ನು ಆರಿಸಿಕೊಳ್ಳೋಣ. ಜಾತಿ, ಧರ್ಮ ಅಧಾರವಾಗಿಟ್ಟುಕೊಂಡು ವೋಟ್ ಮಾಡದೆ, ಜನರ ಒಟ್ಟು ಹಕ್ಕುಗಳನ್ನು ಕಾಪಾಡುವ ಬದ್ಧತೆಯ ನಾಯಕರನ್ನು ಆರಿಸಿಕೊಳ್ಳುವ ಮೂಲಕ ಈ ಜನತಂತ್ರದಲ್ಲಿ ಇನ್ನಷ್ಟು ನಂಬಿಕೆ ಹೆಚ್ಚಿಸೋಣ. ಕೊನೆಗೆ ನನ್ನ ಆತ್ಮೀಯರು ಉಮರ್ ದೇವರಮನಿ ಮಾನ್ವಿ, ಬರೆದ ಸಾಲುಗಳು.
ಚುನಾವಣೆಗೆ ನಿಂತಿದ್ದಾರೆ. . .
ಇನ್ನೂ ಉಸಿರಾಡುವ ಹೆಣಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ
ಬಿಕ್ಕಳಿಸುತಿರುವ ಪ್ರಜೆಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ
ಎಲ್ಲಿ ಸಮಾಧಿಯಾಗಿವೆ ಸ್ವಾಭಿಮಾನದ ಭುಜಗಳು
ಸೋತ ಎದೆಗೂಡುಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ
ಇದ್ದು ಸತ್ತಂಗ ಈ ನಾಡಿನ ಉತ್ತರಾಧಿಕಾರಿ ಈಗ
ಇವನ ನಿಶ್ವಾಸದ ಮೇಲೆ ಚುನಾವಣೆಗೆ ನಿಂತಿದ್ದಾರೆ
ಎಲ್ಲಿದೆ ಸರ್ವಜನಾಂಗದ ಶಾಂತಿಯ ತೋಟ
ಚಿವುಟಿದ ಹೂಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ
ಧಿಕ್ಕರಿಸುವ ಧ್ವನಿಗಳೆಲ್ಲಾ ಮೂಕವಾಗಿವೆ ಇಂದು
ಗಾಂಧಿ ಗೌರಿಯ ಭುಜಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ
ಅರಿವಿದೆಯೇ ಭಾರತದ ಭಾಗ್ಯ ವಿಧಾತನೇ
ನಿನ್ನ ದೌರ್ಭಾಗ್ಯದ ಮೇಲೆ ಚುನಾವಣೆಗೆ ನಿಂತಿದ್ದಾರೆ
ಮತದಾನ ನಮ್ಮ ಮನೆಯ ಹೆಣ್ಣು ಮಕ್ಕಳಷ್ಟೇ ಸರ್ವ ಶ್ರೇಷ್ಠ. ಯಾರು ನಿಮ್ಮ ಅತ್ಯಮೂಲ್ಯವಾದ ಮತವನ್ನ ಮಾರಿಕೊಳ್ಳದಿರಿ. ಯಾರು ನನ್ನ ಜನರ ಪರವಾಗಿ ಮೀಸಲಾತಿ ಪರ , ಸಂವಿಧಾನದ ಪರ ಇದ್ದಾರೋ ಅಂತವರಿಗೆ ನಿಮ್ಮ ಮತ ನೀಡಿ - ಡಾ.ಬಾಬಾ ಸಾಹೇಬ್ ಅಂಬೇಡ್ಕರ್
No comments:
Post a Comment