‘ಬ್ರದರ್ ಮಾರ್ಟಿನ್’ ಎನ್ನುವುದು ಅವರ ತಂದೆ ತಾಯಿ ಅಥವಾ ಮಠದವರು ಇಟ್ಟ ಹೆಸರಿರಲಿಕ್ಕಿಲ್ಲ. ಅದು ಅವರು ತಾವಾಗಿಯೇ ತಮ್ಮ ಮೇಲೆ ಆರೋಪಿಸಿಕೊಂಡ ಹೆಸರು ಎಂಬ ಅನುಮಾನಗಳು ತಪ್ಪದೇ ಕಾಡುತ್ತವೆ. ಹೈಸ್ಕೂಲ್ ಓದಿನ ನಂತರ, ಆಧ್ಯಾತ್ಮದ ಅಮಲು ಹಚ್ಚಿಸಿಕೊಂಡಿದ್ದ ಅವರು, ಸಂತರ ಚರಿತ್ರೆಗಳನ್ನು ಎಡೆಬಿಡದೇ ಓದುವ ಸಂದರ್ಭದಲ್ಲಿ, ಎದುರಾದ ದೀನಬಂಧು ಮಾರ್ಟಿನ್ ದೆ ಪೊರೆಸ್ ಅವರ ಜೀವನ ಚರಿತ್ರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಕೊನೆಗೆ ಆ ಸಂತರ ಹೆಸರನ್ನೇ ಅವರು ತಮ್ಮದಾಗಿಸಿಕೊಂಡರು ಎಂದು ಹೇಳಲಾಗುತ್ತದೆ.
‘ಕರ್ನಾಟಕ ತಾರೆ’ ಎಂಬ ಹೆಸರಿನ ಕಥೋಲಿಕ ಮಾಸ ಪತ್ರಿಕೆಯೊಂದು ಇತ್ತು ಎಂಬ ತಿಳಿವಳಿಕೆ ಇಂದಿನ ಯುವಜನತೆಗೆ ಗೊತ್ತಿರಲಿಕ್ಕಿಲ್ಲ. ಮತ್ತು ಬಹುತೇಕ ಹಿರಿಯರು ಅದನ್ನು ಮರೆತಿರಲೂ ಬಹುದು. ಕಳೆದ ಶತಮಾನದ ಉತ್ತರಾರ್ಧದ ಆದಿಯಲ್ಲಿ ಕನ್ನಡ ನಾಡಿನ ಕಥೋಲಿಕ ಕ್ರೈಸ್ತ ವಲಯದಲ್ಲಿ ಸಂಚಲನ ಮೂಡಿಸಿದ್ದ ಪತ್ರಿಕೆ ಅದು. ಮೈಸೂರು ಧರ್ಮಕ್ಷೇತ್ರದ ‘ದೂತ’ ಪತ್ರಿಕೆಯ ನಂತರ ಅಪಾರ ಜನಮನ್ನಣೆ ಗಳಿಸಿದ್ದ ಪತ್ರಿಕೆಯಾಗಿತ್ತು.
ಈ ಪತ್ರಿಕೆಯಲ್ಲಿ ೧೯೬೬ರಲ್ಲಿ ಪ್ರಕಟಗೊಂಡ ‘ದೈವ ಕರೆ’ಯ ಕರೆಯೋಲೆಯ ಜಾಹಿರಾತು, ದೂರದ ರಾಯಚೂರಿನ ಹಳ್ಳಿಯ ಹೈದನೊಬ್ಬನನ್ನು ಬೆಂಗಳೂರಿನ ಸಮೀಪದ ಕುಂಬಳಗೋಡಿನಲ್ಲಿರುವ ‘ಬೆನೆಡಿಕ್ಟ್ ರ ಮಠ’ದ ನೆಲೆ ‘ಆಶೀರ್ವನಮ್ಮ’ಕ್ಕೆ ಎಳೆದು ತಂದಿತು. ಈ ಹಳ್ಳಿಯ ಹೈದ ಮತ್ತಾರೂ ಅಲ್ಲ, ಬ್ರದರ್ ಮಾರ್ಟಿನ್ ಬಸ್ತಿನಪ್ಪ.
‘ಬ್ರದರ್ ಮಾರ್ಟಿನ್’ ಎನ್ನುವುದು ಅವರ ತಂದೆ ತಾಯಿ ಅಥವಾ ಮಠದವರು ಇಟ್ಟ ಹೆಸರಿರಲಿಕ್ಕಿಲ್ಲ. ಅದು ಅವರು ತಾವಾಗಿಯೇ ತಮ್ಮ ಮೇಲೆ ಆರೋಪಿಸಿಕೊಂಡ ಹೆಸರು ಎಂಬ ಅನುಮಾನಗಳು ತಪ್ಪದೇ ಕಾಡುತ್ತವೆ. ಹೈಸ್ಕೂಲ್ ಓದಿನ ನಂತರ, ಆಧ್ಯಾತ್ಮದ ಅಮಲು ಹಚ್ಚಿಸಿಕೊಂಡಿದ್ದ ಅವರು, ಸಂತರ ಚರಿತ್ರೆಗಳನ್ನು ಎಡೆಬಿಡದೇ ಓದುವ ಸಂದರ್ಭದಲ್ಲಿ, ಎದುರಾದ ದೀನಬಂಧು ಮಾರ್ಟಿನ್ ದೆ ಪೊರೆಸ್ ಅವರ ಜೀವನ ಚರಿತ್ರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಕೊನೆಗೆ ಆ ಸಂತರ ಹೆಸರನ್ನೇ ಅವರು ತಮ್ಮದಾಗಿಸಿಕೊಂಡರು ಎಂದು ಹೇಳಲಾಗುತ್ತದೆ.
ಎಣ್ಣೆ ಸುರಿದಂತಿದ್ದ ತಲೆಕೂದಲು, ಕನ್ನಡಕದಲ್ಲಿ ಎದ್ದು ಕಾಣುವ ಕಣ್ಣುಗಳು, ಕಪ್ಪು ಮೈ ಬಣ್ಣದ ಗಿಡ್ಡ ದೇಹದ, ಸ್ಥೂಲಕಾಯದ ಸದೃಢ ವ್ಯಕ್ತಿತ್ವದ, ತೆಳುಕಂದು ಬಣ್ಣದ ನಿಲುವಂಗಿತೊಟ್ಟು ಹಸನ್ಮುಖರಾಗಿ, ತಮ್ಮ ಪರಿಚಯದ ವ್ಯಾಪ್ತಿಗೆ ಬಂದವರನ್ನು ತಮ್ಮ ಆಪ್ತ ವಲಯಕ್ಕೆ ಸೆಳೆದುಕೊಳ್ಳುತ್ತಿದ್ದ ಬ್ರದರ್ ಮಾರ್ಟಿನ್ ಅವರ ಹುಟ್ಟೂರು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಉದ್ನಾಳ ಗ್ರಾಮ. ಅದನ್ನು ಸಮೀಪದ ಇನ್ನೊಂದು ಊರಿನ ಹೆಸರಿನೊಂದಿಗೆ ಸೇರಿಸಿ ಬಡ್ನಾಪುರ ಉದ್ನಾಳ್ ಎಂದೂ ಗುರುತಿಸುತ್ತಾರೆ.
ಕಳೆದ ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ ರಾಯಚೂರು ಜಿಲ್ಲೆಗೆ ಕ್ರೈಸ್ತಧರ್ಮ ಕಾಲಿರಿಸಿದ ಸಂದರ್ಭದಲ್ಲಿ ಹಲವಾರು ಸಮುದಾಯದ ಜನ ಸ್ವಾಭಿಮಾನದ ಉತ್ತಮ ಬದುಕಿನ ಕನಸು ಕಂಡು ಕ್ರೈಸ್ತ ಧರ್ಮಕ್ಕೆ ಸೇರಿದ್ದರು. ಬ್ರದರ್ ಮಾರ್ಟಿನ್ ಅವರು, ಅಂಥ ಒಂದು ಕುಟುಂಬ - ಕೊಡ್ಲಿ ಕುಟುಂಬದ ಕುಡಿ. [ಈ ಕುಟುಂಬದ ಸದಸ್ಯರ ಕುಲುಮೆ(ಕಬ್ಬಿಣ ಕಾಯಿಸುವ ಒಲೆ)ಯಲ್ಲಿ ಸಿದ್ಧಗೊಂಡ ಕೃಷಿಕರಿಗೆ ಬೇಕಾದ ಕೃಷಿ ಸಲಕರಣೆ ಕೊಡಲಿ/ಕೊಡ್ಲಿ, ಅದರ ತಾಳಿಕೆ ಬಾಳಿಕೆಯಿಂದ ಆ ಸೀಮೆಯ ಕೃಷಿಕರಲ್ಲಿ ಮನೆಮಾತಾಗಿರಬೇಕು. ಕ್ರಮೇಣ ಮನೆತನಕ್ಕೂ ಅದೇ ಹೆಸರು ಕಾಯಂ ಆಗಿರಬೇಕು. ಬೆಂಗಳೂರಿನ ಹಲಸೂರಿನ ಮರ್ಫಿಟೌನ್ ಚರ್ಚಿನ ಮುಂಭಾಗದಲ್ಲಿ ನೆಲೆಸಿದ್ದ ಕುಟುಂಬದ ಮನೆತನದ ಹೆಸರು, ‘ಕುಲುಮೆ’ಯಿಂದ ಕೊಲಿಮಿ’ ಆಗಿರುವುದನ್ನು ಗಮನಿಸಬಹುದು. ]
ಅಷ್ಟೊಂದು ಸ್ಥಿತಿವಂತರಲ್ಲದ ಮಾರ್ಟಿನ್ ಅವರ ತಂದೆ ಬಸ್ತಿನಪ್ಪ ಅವರು, ಬಡಿಗತನ ಮತ್ತು ಕಮ್ಮಾರಿಕೆಯನ್ನು ಕಲಿತು ತಮ್ಮ ಜೀವನ ಕಟ್ಟಿಕೊಂಡವರು. ದೀನಸಮುದ್ರದ ಮರಿಯಮ್ಮ ಅವರನ್ನು ಮದುವೆಯಾದ ಬಸ್ತಿನಪ್ಪ ಅವರು, ಹೆಂಡತಿಯ ಊರಿಗೆ ಬಂದು ನೆಲೆಸಿದರು. ಅಲ್ಲಿ ಅವರು ಕಮ್ಮಾರಿಕೆಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರು.
ಈ ದಂಪತಿಯ ಒಟ್ಟು ಏಳು ಜನ ಮಕ್ಕಳಲ್ಲಿ ಮಾರ್ಟಿನ್ ಅವರು ಮೂರನೆಯವರು. ಮಾರ್ಟಿನ್ ಅವರಿಗೆ ತಮ್ಮ ಹುಟ್ಟು ಹಬ್ಬದ ದಿನ ಯಾವುದೆಂಬುದು ಗೊತ್ತಿಲ್ಲ. ಅಂದಿನ ದಿನಗಳಲ್ಲಿ ತಂದೆತಾಯಂದಿರು ಇಂಥ ಹುಣ್ಣಿಮೆ, ಇಂಥ ಅಮಾವಾಸ್ಸೆ, ಇಲ್ಲವೇ ಆ ಊರ ಜಾತ್ರೆಯ ಅಥವಾ ಪ್ರಮುಖ ಘಟನೆ ಹಿನ್ನೆಲೆಯ ಅಂದಾಜಿನಲ್ಲಿ ವಯಸ್ಸು ಹೇಳುವ ಪರಿಪಾಠ ಪಾಲಿಸುತ್ತಿದ್ದರು. ಅದು ಏನೇ ಇರಲಿ, ಬ್ರದರ್ ಮಾರ್ಟಿನ್ ಅವರ ಹುಟ್ಟಿದ ದಿನವನ್ನು ೧೫. ೧. ೧೯೪೭ ಎಂದು ದಾಖಲಿಸಲಾಗಿದೆ. ಅವರು,
ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಜವಳಗೆರೆಯ ಸಂತ ಅಂತೋನಿಯವರ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ನಂತರ ಮಾರ್ಟಿನ್ ಅವರು, ಹೈಸ್ಕೂಲ್ ಅಧ್ಯಯನಕ್ಕಾಗಿ ಬಳ್ಳಾರಿಯ ಸಂತ ಜಾನರ ಪ್ರೌಢಶಾಲೆಗೆ ದಾಖಲಾದರು.
ಅಷ್ಟರಲ್ಲಿ ಸಾಕಷ್ಟು ಜೀವನಾನುಭವ ಪಡೆದಿದ್ದ ಅವರಲ್ಲಿ ಆಧ್ಯಾತ್ಮದ ಗೀಳು ಹತ್ತಿಕೊಂಡಿತು. ತಾವು ವಿರಕ್ತರಂತೆ ಬಾಳುವೆ ನಡೆಸಬೇಕು, ಸನ್ಯಾಸಿ ಜೀವನ ನಡೆಸಬೇಕೆಂಬು ಗೀಳು ಅವರನ್ನು ತುಂಬಿಕೊಂಡಿತು. . ಊರಲ್ಲಿದ್ದಾಗ, ಎತ್ತುಗಳನ್ನು ಮೇಯಿಸಲು ಅಡವಿಗೆ ಹೋದಾಗ, ಎತ್ತಿನ ಕೊರಳಿಗೆ ಕಟ್ಟಿದ ಹುರಿಹಗ್ಗವನ್ನು ಸೊಂಟಕ್ಕೆ ಬಿಗಿದುಕೊಂದು, ತಾವು ಓದಿದ ಪುಸ್ತಕದಲ್ಲಿನ ಚಿತ್ರದಲ್ಲಿ ಕಂಡ ಫ್ರಾನ್ಸಿಸ್ಕನ್ ಗುರುಗಳಂತೆ ವರ್ತಿಸತೊಡಗಿದರು. ಸಮಯ ಸಿಕ್ಕಾಗಲೆಲ್ಲಾ ಪ್ರಾರ್ಥನೆಗಳಲ್ಲಿ ಮುಳುಗುತ್ತಿದ್ದ ಬಾಲಕನನ್ನು ಕಂಡ ಊರವರಿಗೆ ಅವರದು ಹುಚ್ಚಾಟದ ನಡವಳಿಕೆಯಾಗಿ ಕಾಣತೊಡಗಿತು.
ಅಂತಿಮವಾಗಿ, ದೈವಕರೆಯಂತೆ ಬೆನೆಡಿಕ್ಟರ ಮಠವಾದ ಬೆಂಗಳೂರು ಸಮೀಪದ ಕುಂಬಳಗೋಡಿನ ‘ಆಶೀರ್ವನಂ’ ಸೇರಿದ ಬ್ರದರ್ ಮಾರ್ಟಿನ್ ಬಸ್ತಿನಪ್ಪ ಅವರು, ಎರಡು ವರ್ಷಗಳ ನಂತರ ೧೯೬೮ ಜುಲೈ ೧೧ರಂದು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಬ್ರಹ್ಮಚರ್ಯ, ವಿಧೇಯತೆ, ಬಡತನ ಮೊದಲಾದವುಗಳ ಪಾಲನೆಯ ವ್ರತಕ್ಕೆ ಬಾಧ್ಯಸ್ಥರಾಗಿ ನಡೆದು, ೧೯೯೩ರ ಜುಲೈ ೧೧ ರಂದು ಸನ್ಯಾಸ ವ್ರತ ಸ್ವೀಕಾರದ ಬೆಳ್ಳಿಹಬ್ವವನ್ನು ಸಾರ್ಥಕತೆಯಿಂದ ಆಚರಿಸಿಕೊಂಡಿದ್ದರು.
ಕುಂಬಳಗೋಡಿನಲ್ಲಿದ್ದಾಗ ಕನ್ನಡ ಶಾಲೆಯೊಂದನ್ನು ತೆರೆದು ಆಶ್ರಮದ ಸುತ್ತಮತ್ತಲಿನ ಮಕ್ಕಳಲ್ಲಿ ಅಕ್ಷರ ಜ್ಞಾನ ಬಿತ್ತಿದ, ಅಧ್ಯಯನಶೀಲ, ಕಾಯಕ ಜೀವಿ ಮಾರ್ಟಿನ್ ಅವರು, ಕಳೆದೊಂದು ದಶಕದಿಂದ ಸಿಂಧನೂರು ತಾಲ್ಲೂಕು ಜಾಲಿಹಾಳು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿನ ರಂಗಾಪುರ ಕ್ಯಾಂಪಿನಲ್ಲಿ ನೆಲೆಸಿದ್ದರು. ಬಳ್ಳಾರಿ ಧರ್ಮಕ್ಷೇತ್ರದ ವ್ಯಾಪ್ತಿಯ ಪ್ರದೇಶಕ್ಕೆ ಬರುವ ಈ ಸ್ಥಳದಲ್ಲಿ ಒಂದು ಬೆನೆಡಿಕ್ಟಿಯನ್ ಮಠ ಸ್ಥಾಪಿಸುವ ಮಹದಾಸೆ ಹೊಂದಿದ್ದ ಅವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು.
ಇದಲ್ಲದೇ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಪ್ರದೇಶದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸುವ ಕನಸು ಕಂಡಿದ್ದರು. ಅದನ್ನು ನನಸು ಮಾಡಲು ಮುಂದಾಗಿದ್ದರು. ಅವರ ಅಪಾರ ಶ್ರಮದ ಫಲವಾಗಿ, ಇಂದು ಶಾಲಾ ಕಟ್ಟಡದ ಕಾಮಗಾರಿ ಅಂತಿಮ ಹಂತಕ್ಕೆ ಮುಟ್ಟಿದೆ. ಆ ಶಾಲೆ ಆರಂಭಿಸಲು ಅಗತ್ಯವಾಗಿದ್ದ ಪೂರಕ ಸರ್ಕಾರಿ ಕಚೇರಿಗಳಲ್ಲಿನ ಕೆಲಸಗಳೆನ್ನಲ್ಲಾ ಪೂರೈಸಿದ್ದರು. ಆಶ್ರಮ ಮತ್ತು ಆಶ್ರಮದಲ್ಲಿನ ಚರ್ಚ್ ಕಟ್ಟಡಗಳೂ ಒಂದು ಹಂತವನ್ನು ತಲುಪಿದ್ದವು. ಇನ್ನೇನು ಎಲ್ಲ ಕೆಲಸಗಳು ಮುಗಿದು, ನಿರಮ್ಮಳವಾಗಿ ಇರಬಹುದಾಗಿದ್ದ, ಬ್ರದರ್ ಮಾರ್ಟಿನ್ ಅವರು ಈಗ ನಮ್ಮೊಂದಿಗಿಲ್ಲ. ಅವರು ಕ್ರಿಸ್ತ ಕರೆದನೆಂದು ಸನ್ಯಾಸಿ ಮಠ ಸೇರಿದಂತೆ, ‘ಸಾಕು ಬಾ ಇನ್ನು’ ಎಂದು ಯೇಸುಕ್ರಿಸ್ತರು ಕರೆದಾಗ ತಡಮಾಡದೇ ಅವರ ಸನ್ನಿಧಾನವನ್ನು ಸೇರಿಯೇ ಬಿಟ್ಟರು.
ರಂಗಾಪುರ ಕ್ಯಾಂಪಿನ ತಮ್ಮ ನಿವಾಸದಲ್ಲಿದ್ದಾಗ ಕಾಣಿಸಿಕೊಂಡ ವಾಂತಿಬೇಧಿ, ಅವರನ್ನು ತೀವ್ರ ನಿತ್ರಾಣರನ್ನಾಗಿ ಮಾಡಿತ್ತು. ಸ್ಥಳೀಯ ಆಸ್ಪತ್ರೆಗಳಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ದೊರೆಯದ ಕಾರಣ, ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಅವರನ್ನು ಬಳ್ಳಾರಿಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರು ಏಪ್ರಿಲ್ ೨೦ ರಂದು ತೀರಿಕೊಂಡರೆ, ಆಶೀರ್ವನಂ ಬೆನೆಡಿಕ್ಟಿನ್ ಸನ್ಯಾಸಿ ಮಠದಲ್ಲಿ ಏಪ್ರಿಲ್ ೨೨ ರಂದು ಸಾವಿನ ಪಾಡುಪೂಜೆ ನೆರವೇರಿಸಿ ಮಠದ ಮರ್ಯಾದೆಯಂತೆ ಅವರ ಪಾರ್ಥಿವ ಶರೀರದ ಸಮಾಧಿ ಮಾಡಲಾಯಿತು. ಅವರ ಕರ್ಮಭೂಮಿಯ ಪ್ರದೇಶದಲ್ಲಿದ್ದ ಅವರ ಅಭಿಮಾನಿಗಳು, ಕುಟುಂಬದವರು, ಸಂಬಂಧಿಕರು ಹತ್ತಾರು ವಾಹನಗಳಲ್ಲಿ ಬಂದು ಮೃತರಿಗೆ ತಮ್ಮ ಅಂತಿಮ ನಮನ ಸಲ್ಲಿದರು.
ಅಗಲಿರುವ ಮನೆಯ ಮಗನನ್ನು ನೆನೆಸಿಕೊಂಡ ರಾಯಚೂರು, ಮಾನ್ವಿ ತಾಲ್ಲೂಕಿನ ಬಡ್ನಾಪುರ ಉದ್ನಾಳ ಗ್ರಾಮದ ಗ್ರಾಮಸ್ಥರು, ಬಂಧು ಬಳಗದವರು ಮತ್ತು ಅಭಿಮಾನಿಗಳು, ಅಲ್ಲಿನ ಸಂತ ಯಾಗಪ್ಪರ ದೇವಾಲಯದಲ್ಲಿ ಏಪ್ರಿಲ್ ೪ ರಂದು ಸ್ಮರಣೆಯ ಪೂಜೆ ಇರಿಸಿದ್ದರು. ಅದೇ ಸಂದರ್ಭದಲ್ಲಿ ಬ್ರದರ್ ಮಾರ್ಟಿನ್ ಅವರು ಆರಂಭಿಸಿದ ಕೆಲಸಗಳನ್ನು ಪೂರೈಸಲು ಧರ್ಮಸಭೆ ಮತ್ತು ಸನ್ಯಾಸಿ ಮಠಗಳಿಗೆ ಅಗತ್ಯವಾದ ಸಕಲ ಬಗೆಯಲ್ಲಿ ಸಹಾಯ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಕನ್ನಡ ನಾಡಿನ ಉಪೇಕ್ಷಿತ ಪ್ರದೇಶ ಎಂದೇ ಗುರುತಿಸಲಾಗುವ ಹೈದ್ರಾಬಾದ ಕರ್ನಾಟಕದ ಕನ್ನಡ ಕ್ರೈಸ್ತ ಸಂಸ್ಕೃತಿಯ ಹರಿಕಾರರಾಗಿದ್ದ ಅವರು, ರಾಯಚೂರು ಜಿಲ್ಲೆಯ ಮೊತ್ತಮೊದಲ ಕ್ರೈಸ್ತ ಸನ್ಯಾಸಿ. ಇದು, ಈ ಭಾಗದ ಕಥೋಲಿಕ ಕ್ರೈಸ್ತರ ಅಳಿಸಲಾಗದ, ಮರೆಯಲಾಗದ ಐತಿಹಾಸಿಕ ದಾಖಲೆ.
ಇವರನ್ನು ಒಂದು ಬಗೆಯಲ್ಲಿ, ಈ ಉಪೇಕ್ಷಿತ ಪ್ರದೇಶದಿಂದ ಕಥೋಲಿಕ ಕ್ರೈಸ್ತ ಯುವಕರು, ಯುವತಿಯರು ಆಸಕ್ತಿ ತಳೆದು ಗುರುಮಠಗಳು ಮತ್ತು ಕನ್ಯಾಸ್ತ್ರೀ ಮಠ(ಕಾನ್ವೆಂಟು)ಗಳನ್ನು ಸೇರಿ ಗುರುಗಳು, ಕನ್ಯಾಸ್ತ್ರೀಯರು ಆಗುವುದಕ್ಕೆ ಪ್ರೇರಣೆ ಒದಗಿಸಿದ ಕಾರಣಪುರುಷ, ಆದಿಪುರುಷ ಎಂದರೆ ತಪ್ಪಾಗದು. ಏಕೆಂದರೆ, ಇವರ ಹಜ್ಜೆ ಗುರುತುಗಳಲ್ಲಿ ಹೆಜ್ಜೆ ಇರಿಸಿ ಮುಂದೆ ಸಾಗಿಬಂದ ಯುವಕರು ಯುವತಿಯರು ಇಂದು ವಿವಿಧ ಸಭೆಗಳ, ಧರ್ಮಕ್ಷೇತ್ರಗಳ ಪಾದ್ರಿಗಳಾಗಿ, ಕನ್ಯಾಸ್ತ್ರೀಯರಾಗಿ, ಆಶ್ರಮವಾಸಿ ಸಹೋದರರಾಗಿ ಸ್ವಾಮಿ ಯೇಸುಕ್ರಿಸ್ತನ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಎಫ್. ಎಂ. ನಂದಗಾವ್
No comments:
Post a Comment