ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಈಗಾಗಲೆ ದಿನಾಂಕ ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳೂ ಮತದಾರರನ್ನು ಓಲೈಸುವಲ್ಲಿ ನಿರತರಾಗಿವೆ. ಈ ಒಂದು ನಿರ್ಣಾಯಕ ಘಟ್ಟದಲ್ಲಿ ದಲಿತರು ಪ್ರಧಾನ ಪಾತ್ರ ವಹಿಸುತ್ತಾರೆ. ಇದು ಎಲ್ಲಾ ಪಕ್ಷಗಳಿಗೂ ತಿಳಿದಿರುವ ವಿಷಯ. ದಲಿತರನ್ನು ಕಡೆಗಣಿಸಿ, ಹೀನಾಯವಾಗಿ ನಡೆಸಿಕೊಂಡು, ನಿರಂತರವಾಗಿ ಶೋಷಿಸುತ್ತಿದ್ದ ರಾಷ್ಟ್ರೀಯ ಪಕ್ಷವೊಂದು ಇದೀಗ ತನಗೆ ದಲಿತರ ಮೇಲೆ ವಿಶೇಷ ಒಲವಿದೆ ಎಂಬುದನ್ನು ತೋರ್ಪಡಿಸಿಕೊಳ್ಳಲು ನಿತ್ಯ ವಿವಿಧ ನಾಟಕಗಳನ್ನಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ದಲಿತರು ಈ ಕಪಟ ನಾಟಕವಾಡುತ್ತಿರುವವರಿಗೆ ವೋಟು ಹಾಕುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
*****************
ದಲಿತರು ಮೊತ್ತಮೊದಲನೇಯದಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು "ನಿಮ್ಮನ್ನು ಉದ್ಧರಿಸುತ್ತೇವೆ" ಎಂದು ಹೇಳುವವರ ಸಂವಿಧಾನ ಪ್ರೇಮ. "ನಾವು ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ", "ಜಾತ್ಯಾತೀತರು ಅಪ್ಪ ಅಮ್ಮನ ಪರಿಚಯವಿಲ್ಲದವರು", "ದಲಿತರು ನಾಯಿಗಳು" ಎಂಬಂಥ ಪ್ರಚೋದನಕಾರಿ ಹೇಳಿಕೆಗಳನ್ನು ಬಹಿರಂಗವಾಗಿ ನೀಡುವ ಇವರು ದಲಿತರನ್ನು ಉದ್ಧರಿಸಲು ಸಾಧ್ಯವೇ?
ಸಮಾನತೆಯ ಆಶಯಗಳು ಮತ್ತು ಹಿಂದುಳಿದ ವರ್ಗಗಳ ಅಭ್ಯುದಯವನ್ನೇ ಜೀವಾಳವಾಗಿಸಿಕೊಂಡಿರುವ ಸಂವಿಧಾನವನ್ನೇ ತುಚ್ಛವಾಗಿ ಕಾಣುವ ಈ ಸೋ ಕಾಲ್ಡ್ ಜಾತಿವಾದಿಗಳು ದಲಿತರನ್ನು ಉದ್ಧರಿಸುತ್ತಾರೆಂದರೆ ಅದು ನಂಬುವ ವಿಷಯವಂತೂ ಖಂಡಿತ ಅಲ್ಲ.
*********************
ದಲಿತರು ಸ್ವಾಭಿಮಾನಿಗಳು, ಯಾವುದೇ ಪೊಳ್ಳು ಆಶ್ವಾಸನೆಗಳಿಗೆ ಮರುಳಾಗುವುದಿಲ್ಲ, ಕೇವಲ ಕಣ್ಣೊರೆಸುವ ಗಿಮಿಕ್ಕುಗಳಿಗೆ ಬಲಿಯಾಗುವವರಲ್ಲ ಎಂಬುದು ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಸಾಬೀತಾಗಿದೆ. ಮೈಸೂರಿನಲ್ಲಿ ಬಿಜೆಪಿಯವರು ಹಮ್ಮಿಕೊಂಡಿದ್ದ ದಲಿತ ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದಲಿತರೊಂದಿಗಿನ ಸಂವಾದದಲ್ಲಿ ದಲಿತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬ್ಬಾದದ್ದು ದಲಿತರು ಆತ್ಮಾಭಿಮಾನವುಳ್ಳವರೆಂದು ತೋರ್ಪಡಿಸುತ್ತದೆ. ಅದೇ ಸಭೆಯಲ್ಲಿ ಗದ್ದಲವಾಗಿದ್ದೂ ಸಹ ದಲಿತರು ಈ ಕಪಟ ರಾಜಕೀಯ ನಾಯಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ ಹಾಗೂ ಇವರ ಕುತಂತ್ರಕ್ಕೆ ನಾವು ಸುಲಭವಾಗಿ ತುತ್ತಾಗುವುದಿಲ್ಲವೆಂಬ ನೇರ ಎಚ್ಚರಿಕೆಯನ್ನು ರವಾನಿಸಿದ್ದಾರೆ.
****************
ಈ ನಿಟ್ಟಿನಲ್ಲಿ ದಲಿತರು, ದಲಿತಪರ ಸಂಘಟನೆಗಳು ಅರ್ಥಮಾಡಿಕೊಳ್ಳಬೇಕಾಗಿರುವುದು ಸಮಾನತೆ ಮತ್ತು ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವ ಪಕ್ಷ ಮತ್ತು ಅಭ್ಯರ್ಥಿಗಳನ್ನು ಚುನಾಯಿಸುವುದು. ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸಮಾನತೆ ಮತ್ತು ಸ್ಥಿರತೆಯನ್ನು ಕಾಪಾಡುವ ಇಂಗಿತವಿರುವವರನ್ನು ಪ್ರಜ್ಞಾಪೂರ್ವಕವಾಗಿ ಆರಿಸಿ, ವಿಧಾನಸಭೆಗೆ ಕಳುಹಿಸಿದಾಗ ಮಾತ್ರ ದಲಿತರಿಗೆ ಕಿಂಚಿತ್ತಾದರೂ ಸಾಮಾಜಿಕ ನ್ಯಾಯ ಒದಗಿದಂತಾಗುತ್ತದೆ. ಹಣ, ಹೆಂಡ ಮುಂತಾದ ಆಮಿಷಗಳಿಗೆ ಬಲಿಯಾಗದೆ ಇಂದಿನ ಹಾಗೂ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅಮೂಲ್ಯವಾದ ಮತಗಳನ್ನು ಪ್ರಾಮಾಣಿಕ ಹಾಗೂ ಸಂವಿಧಾನದ ಆಶಯ ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯಕ್ತಿಗೆ ನೀಡಿದಾಗ ಮಾತ್ರ ದಲಿತರ ಅಭ್ಯುದಯ ಸಾಧ್ಯ. ಈ ನಿಟ್ಟಿನಲ್ಲಿ ದಲಿತರು ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ.
- ಅಜಯ್ ರಾಜ್
No comments:
Post a Comment