Tuesday, 24 April 2018

ಇಂಡೋನೇಷಿಯಾದ ‘ಸೆಮನಾ ಸಾಂತಾ’


ಪ್ರತಿ ವರ್ಷವೂ ಇಂಡೋನೇಷಿಯಾದ ಪೂರ್ವ ಫ್ಲೊರೆಸ್ ನಡುಗಡ್ಡೆಯ ಲರಂತುಕಾ ಪಟ್ಟಣದಲ್ಲಿ ಸೆಮನಾ ಸಾಂತಾ (ಸೆಮನಾ ಸಮುದಾಯದ ಆಚರಣೆ) ಅಂದರೆ ಪವಿತ್ರ ವಾರದ ಆಚರಣೆಯನ್ನು ಆದರದಿಂದ ಆಚರಿಸಲಾಗುತ್ತದೆ.
ವಾರದ ಆಚರಣೆಯಲ್ಲಿ ಪಾಲುಗೊಳ್ಳಲು ಫ್ಲೊರೆಸ್ ನಡುಗಡ್ಡೆಯ ಮತ್ತು ಇಂಡೋನೆಷಿಯದ ಕಥೋಲಿಕ ಕ್ರೈಸ್ತರಷ್ಟೇ ಅಲ್ಲ, ನೆರೆಯ ಜಾವಾ, ಬಾಲಿ ಮೊದಲಾದ ಸುತ್ತಲಿನ ವಿಶ್ವಾಸಿಗಳು ಧಾವಿಸಿ ಬರುತ್ತಾರೆ.
ಸೆಮನಾ ಸಾಂತಾ ಪವಿತ್ರ ವಾರದ ಆಚರಣೆಗೆ ರಬು ತ್ರೆವಾ (ಬೂದಿ ಬುಧವಾರ)ದಿಂದಲೇ ನಾಂದಿ ಹಾಡಿರಲಾಗುತ್ತದೆ. ಭಕ್ತಾದಿಗಳು ಸಾಂಪ್ರದಾಯಿಕ ಮೆರವಣಿಗೆಗೆ ಸಿದ್ಧಪಡಿಸಲಾಗುವ ತ್ವುನ್ ಮಾ (ಆಶೀರ್ವದಿತ ತಾಯಿ/ಕನ್ಯಾ ಮೇರಿ), ತ್ವುನ್ ಮೆನಿನು (ಬಾಲಯೇಸು) ಮತ್ತು ತ್ವುನ್ ಅಣ್ಣಾ (ಯೇಸುಸ್ವಾಮಿ) ಚಿಕ್ಕ ಗುಡಿ(ಚಾಪೆಲ್)ಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪವಿತ್ರ ವಾರದ ಗುರುವಾರದಂದು ಅದರಲ್ಲಿನ ಸ್ವರೂಪಗಳಿಗೆ ಬಟ್ಟೆ ಸುತ್ತಿ ಮರೆ ಮಾಡಿರಲಾಗುತ್ತದೆ. ಶುಭ ಶುಕ್ರವಾರ( ಸೆಸ್ತ ವೆರಾ) ದಂದು ಸಮುದ್ರದಲ್ಲಿ ಏಳು ಕಿಲೊ ಮೀಟರ್ ಸಾಗುವ ಸ್ವರೂಪಗಳ ಮೆರವಣಿಗೆ ಆಚರಣೆಯ ಆಕರ್ಷಣೆ. ಬೆಳಿಗ್ಗೆ ಆಶೀರ್ವದಿತ ತಾಯಿಯ ದರ್ಶನಕ್ಕಾಗಿ ಬಾಲ ಯೇಸುವಿನ ಸ್ವರೂಪದ ಸಮುದ್ರದ ಪಯಣ ಆರಂಭವಾದಾಗ ಭಕ್ತರು ಅದನ್ನು ದೋಣಿಗಳಲ್ಲಿ ಹಿಂಬಾಲಿಸುತ್ತಾರೆ.
ಹಿಂದಿನ ಒಂದು ವರ್ಷದಿಂದ ಪೆಟ್ಟಿಗೆಯಲ್ಲಿದ್ದ ಕನ್ಯಾ ಮೇರಿಯ ಸ್ವರೂಪವನ್ನು ಹೊರದೆಗೆದು ಸ್ನಾನ ಮಾಡಿಸಿ, ಅದಕ್ಕೆ ದುಃಖ ಸೂಚಕ ಕಪ್ಪು ಬಣ್ಣದ ಅಥವಾ ಜಾಂಬಳಿ ಬಣ್ಣದ ಬಟ್ಟೆಯನ್ನು ತೊಡಿಸಿ ಮೆರವಣಿಗೆಗೆ ಸಜ್ಜುಗೊಳಿಸಲಾಗುತ್ತದೆ. ಈಗ ಅವಳು ದುಃಖಿಸುವ ತಾಯಿ (ಮಾತೆರ್ ಡೋಲೊರೊಸ), ಬಾಲಯೇಸುವಿನ ಸ್ವರೂಪದ ಭೇಟಿಯ ನಂತರ, ಯೇಸುಸ್ವಾಮಿಯ ಸ್ವರೂಪದ ಸಮುದ್ರದಲ್ಲಿ ದೋಣಿಗಳ ಮೆರವಣಿಗೆ ನಡೆಯುತ್ತದೆ. ಸಾಬ್ಟು ಸಾಂತೋ (ಪವಿತ್ರ ಶನಿವಾರ) ಮತ್ತು ಯೇಸುಸ್ವಾಮಿ ಪುನರುತ್ಥಾನದ ಸಂಭ್ರಮದ ಮಿಂಗು ಪಷ್ಕಾ (ಈಸ್ಟರ್ ಭಾನುವಾರ) ಸಾಂಗ್ಯಗಳೊಂದಿಗೆ ಸೆಮನಾ ಸಾಂತಾ ಸಂಪನ್ನಗೊಳ್ಳುತ್ತದೆ.
ಇದು, ಕನ್ನಡ ನಾಡಿನ ಕೆಲವು ದೇವಸ್ಥಾನಗಳಲ್ಲಿ ಅಲ್ಲಿನ ಹೊಂಡಗಳಲ್ಲಿ ನಡೆಯುವ ತೆಪ್ಪೋತ್ಸವ ಕ್ರಮವನ್ನು ಹೋಲುತ್ತದೆ! ಹುಬ್ಬಳ್ಳಿಯ ಹಳೆಹುಬ್ಬಳ್ಲಿಯ ಸಿದ್ಧಾರೂಢ ಮಠದಲ್ಲಿ ಹಾಗೂ ಉಡುಪಿಯ ಶ್ರೀಕೃಷ್ಣ ಮಠಗಳಲ್ಲಿ ಉತ್ಸವದ ಸಂದರ್ಭಗಳಲ್ಲಿ ತೆಪ್ಪೋತ್ಸವ ಧಾರ್ಮಿಕ ಆಚರಣೆಗಳು ನಡೆಯುತ್ತಿರುತ್ತವೆ. ಇಂಡೋನೇಷಿಯದ್ದು ಕ್ರೈಸ್ತರದ್ದು ತೆಪ್ಪ ಅಲ್ಲ ದೋಣಿಯ ಉತ್ಸವ, ಕೆರೆ ಅಥವಾ ಹೊಂಡದಲ್ಲಲ್ಲಾ ನಡುಗಡ್ಡೆ ನಡುವಿನ ಜಾಗವನ್ನು ವ್ಯಾಪಿಸಿರುವ ಸಮುದ್ರದಲ್ಲಿ!
ಫ್ಲೋರೆಸ್ ಎಂದರೆ ಹೂವು. ಇಂಡೋನೇಷಿಯದ ಕಥೋಲಿಕ ಕ್ರೈಸ್ತರ ಪ್ರಮುಖ ಯಾತ್ರಾಸ್ಥಳ ಎಂಬ ಹೆಸರು ಮಾಡಿರುವ ಇಲ್ಲಿನ ಪವಿತ್ರ ವಾರದ ಯೇಸುಸ್ವಾಮಿ ಮತ್ತು ದುಃಖತಪ್ತ ಮಾತೆ ಮರಿಯಳ ಸ್ವರೂಪಗಳಿರುವ ದೋಣಿಗಳ ಸಮುದ್ರದಲ್ಲಿನ ಮೆರವಣಿಗೆ, ಈಗ ದೇಶದ ರಾಷ್ಟ್ರೀಯ ಹಬ್ಬದ ಸ್ವರೂಪ ಪಡೆದಿದ್ದು, ಆಚರಣೆಯ ಸಂದರ್ಭದಲ್ಲಿ ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಅಲ್ಲಿನ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ಪೋರ್ಚುಗೀಜರ ವಸಾಹತುವಾಗಿದ್ದ ಇಂಡೋನೇಷಿಯದಲ್ಲಿ ನಾಲ್ಕು ಶತಮಾನಗಳಿಂದ ನೆಲೆಯೂರಿರುವ ಕಥೋಲಿಕ ಕ್ರೈಸ್ತರ ಆಚರಣೆಗಳು ಪೋರ್ಚುಗೀಜ್ ಮತ್ತು ಸ್ಥಳೀಯ ಆಚರಣೆಗಳ ಸಮ್ಮಿಶ್ರಣವಾಗಿದೆ. ಲರಂತುಕಾದ ಅರಸ ಮತ್ತು ಸೆಮನಾ ಹಾಗೂ ಲೆಮಾ ಸಮುದಾಯಗಳ ಕಥೋಲಿಕ ವಿಶ್ವಾಸಿಗಳ ಆಸ್ಥೆಯಿಂದ ಇಲ್ಲಿ ಕಥೋಲಿಕ ಕ್ರೈಸ್ತ ವಿಶ್ವಾಸಿಕರ ಸಂಖ್ಯೆ ಹೆಚ್ಚಿದೆ, ಆಚರಣೆಗಳು ಹೊಸ ರೂಪ ಪಡೆದಿವೆ ಎಂದು ಇತಿಹಾಸಕಾರರು ಗುರುತಿಸಿದ್ದಾರೆ.
ವರ್ಷಕ್ಕೊಮ್ಮೆ ಕರ್ನಾಟಕದ ಹಾಸನದ ಗ್ರಾಮದೇವತೆ ಹಾಸನಾಂಬೆಯ ದೇಗುಲದ ಬಾಗಿಲು ತೆರೆಯಲಾಗುವ ಸಂಪ್ರದಾಯದಂತೆ, ಇಂಡೋನೇಷಿಯಾದ ಲರಂತುಕಾದಲ್ಲಿ ವರ್ಷಕ್ಕೊಮ್ಮೆ ಮಾತ್ರ ಸಮುದ್ರದ ನೀರಿನಲ್ಲಿ ಮೆರವಣಿಗೆ ಮಾಡುವ ಮಾತೆ ಮರಿಯಳ ಶೋಕತಪ್ತ ಸ್ವೂರೂಪವು ವಿಶ್ವಾಸಿಗಳ ದರ್ಶನಕ್ಕೆ ಲಭ್ಯವಾಗುತ್ತದೆ!
ಜಗತ್ತಿನ ಯಾವುದೇ ಜಾಗದಲ್ಲಿದ್ದರೂ ಮಾನವನ ಧಾರ್ಮಿಕ ಆಚರಣೆಗಳಲ್ಲಿ ಅಲ್ಲಲ್ಲಿ ಒಂದಿಷ್ಟು ಸಾಮ್ಯಗಳು ಇದ್ದೇ ಇರುತ್ತವೆ. ಮಾನವ ಎಲ್ಲೇ ಇದ್ದರೂ ಅವನು ಆರಾಧಿಸುವ ಮೂಲ ಕ್ರಮದಲ್ಲಿ ಹೆಚ್ಚೇನೂ ವ್ಯತ್ಯಾಸಗಳನ್ನು ಕಾಣಲಾಗದು.
¨ ಫ್ರಾನ್ಸಿಸ್ ಎ೦ .ಎನ್.



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...