Monday, 23 April 2018

ಪ್ರಭು ಪುನರುತ್ಥಾನರಾಗಿದ್ದಾರೆ!


ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ (ಲೂಕ ೪:೧೮) ಎಂದು ಪ್ರಭುಯೇಸು ನಜರೇತಿನ ಪ್ರಾರ್ಥನಾಮಂದಿರದಲ್ಲಿ ತಮ್ಮ ಸೇವೆಯ ಗುರಿ-ಉದ್ದೇಶಗಳನ್ನು ಬಹಿರಂಗವಾಗಿ ಘೋಷಿಸಿದರು. ಅಲ್ಲಿಂದ ಪ್ರಾರಂಭಗೊಂಡ ಅವರ ಸೇವೆ ಹಾಗೂ ಬೋಧನೆ ಎಲ್ಲಾ ಅಡೆತಡೆಗಳನ್ನೂ ಹಿಮ್ಮೆಟ್ಟಿ ಬರಲಿರುವ ಘೋರ ಶಿಲುಬೆಯ ಮರಣಕ್ಕೂ ಹೆದರದೆ ದಿಟ್ಟತನದಿಂದ ನಿರಂತರವಾಗಿ ಮುಂದೆ ಸಾಗಿತು. ಅವರ ಬೋಧನೆಯ ವೈಖರಿ ಹಲವರ ಮನಸೂರೆಗೊಂಡು ಮೆಚ್ಚುಗೆಯಾದರೆ, ಯೆಹೂದ್ಯ ಧಾರ್ಮಿಕ ಮುಖಂಡರಿಗೂ, ಸದ್ದುಕಾಯರಿಗೂ, ಪರಿಸಾಯರಿಗೂ ನುಂಗಲಾರದ ತುತ್ತಾಗಿತ್ತು. ಯಾಕೆಂದರೆ ಪ್ರಧಾನ ಹಾಗೂ ಮುಖ್ಯಯಾಜಕರು ಸತ್ವರಹಿತವಾಗಿ ಬೋಧಿಸುವುದರಲ್ಲಿಯೂ, ಜನಸಾಮಾನ್ಯರನ್ನು ಶೋಷಿಸುವುದರಲ್ಲಿಯೂ, ಅಳಿದು ಹೋಗುವ ಲೌಕಿಕ ಸ್ಥಾನಮಾನಗಳನ್ನು ಗಳಿಸುವುದರಲ್ಲಿಯೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರಿಗೆ ತಮ್ಮ ಸ್ಥಾನಮಾನಗಳು ಧಾರ್ಮಿಕ ಬಾಹ್ಯ ಆಚರಣೆಗಳು ಪ್ರಮುಖವಾಗಿದ್ದವು ಮತ್ತು ಜನರಿಂದಲೂ ಅವರು ಅದನ್ನೇ ಬಯಸುತ್ತಿದ್ದರು. ನೈಜ ಧರ್ಮದ ಸತ್ವಭರಿತ ಆರಾಧನೆಯನ್ನು ಅವರು ಪಾಲಿಸುವುದರಿಂದ ಬಹುದೂರವಿದ್ದರು.
ಆದುದರಿಂದಲೇ ಪ್ರವಾದಿ ಯೆಶಾಯನು ಅವರನ್ನು ಕುರಿತು ಹೀಗೆನ್ನುತ್ತಾನೆ "ಈ ಜನರು ನನ್ನನ್ನು ಸಮೀಪಿಸುವುದು ಬರೀ ಮಾತಿನ ಮರ್ಯಾದೆಯಿಂದ, ಇವರು ನನ್ನನ್ನು ಸನ್ಮಾನಿಸುವುದು ಬರೀ ಮಾತಿನ ಮಾಲೆಯಿಂದ, ಇವರ ಹೃದಯವಾದರೋ ಬಲು ದೂರವಿದೆ ನನ್ನಿಂದ. ಇವರು ಸಲ್ಲಿಸುವ ಭಕ್ತಿ ಕೂಡಿದೆ ಕೇವಲ ಭಯದಿಂದ, ಕಲಿತಿಹರಿವರು ಮಾನವಕಲ್ಪಿತ ಕಟ್ಟಳೆಯನು ಬಾಯಿಪಾಠದಿಂದ" (ಯೆಶಾಯ ೨೯:೧೫).
ಆದರೆ ಪ್ರಭು ಯೇಸು ಇದಕ್ಕೆ ಭಿನ್ನವಾಗಿದ್ದರು ಮಾತ್ರವಲ್ಲದೆ ಮುಖಸ್ತುತಿ ಮಾಡುವ ಬದಲು ಮುಕ್ತವಾಗಿ ಸತ್ಯಧರ್ಮದ ನೈಜ ಅರ್ಥವನ್ನು ದಿಟ್ಟ ಹಾಗೂ ನೇರನುಡಿಗಳಿಂದ ಅರ್ಥಗರ್ಭಿತವಾಗಿ ಬೋಧಿಸುತ್ತಿದ್ದರು. ಸ್ವತಃ ತಾವೂ ಅದನ್ನು ಪಾಲಿಸುತ್ತಿದ್ದರು ಹಾಗೂ ಜನರು ಅದನ್ನು ಪಾಲಿಸುವಂತೆ ಪ್ರೇರೇಪಿಸುತ್ತಿದ್ದರು. ಆ ಕಾರಣ ಜನರೆಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು. ಕಾರಣ ಅವರ ಜೀವನ ಪಾರದರ್ಶಕವಾಗಿತ್ತು, ಯಾವ
ಮುಚ್ಚುಮರೆಯೂ ಇರಲಿಲ್ಲ. ಆದರೆ ಧಾರ್ಮಿಕ ಮುಖಂಡರಿಗೆ ಯೇಸುವಿನ ಬೋಧನೆ ಅಂತರಂಗವನ್ನು ಕಲಕಿ, ಆಳವಾಗಿ ಚುಚ್ಚಿ, ಪ್ರಶ್ನಿಸುವ ಸೂಜಿಮುಳ್ಳಾಗಿತ್ತು.
ಧಾರ್ಮಿಕ ಮುಖಂಡರ ಬೋಧನೆಗಳು ಜನರನ್ನು ಮುಕ್ತವಾಗಿ ಶೋಷಿಸಿದರೆ ಕ್ರಿಸ್ತನ ಬೋಧನೆಗಳು ಜನರನ್ನು ಅವರ ಎಲ್ಲಾ ಸಂಕೋಲೆಗಳಿಂದ ಬಿಡಿಸಿ ಅವರ ಮನದಾಳದಲ್ಲಿ ಶಾಂತಿ ಸಮಾಧಾನದ ಬೀಜ ಅಂಕುರಿಸುವಂತೆ ಮಾಡುತ್ತಿತ್ತು. ಯೇಸು ಜನರನ್ನು "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು, ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ" (ಮತ್ತಾಯ ೧೧:೨೮-೨೯) ಎಂದು ತಮ್ಮೆಡೆಗೆ ಸರ್ವರನ್ನೂ ಕೈಬೀಸಿ ಕರೆಯುತ್ತಿದ್ದರು. 
ಆದ್ದರಿಂದ ಅವರ ಬೋಧನೆಗಳನ್ನು ಕೇಳಲು ಜನರು ತಂಡೋಪತಂಡವಾಗಿ ಬರುತ್ತಿದ್ದರು, ರೋಗರುಜಿನಗಳಿಂದಲೂ ಮುಕ್ತರಾಗುತ್ತಿದ್ದರು. ಜನರ ಕಷ್ಟ ಸಂಕಷ್ಟಗಳಿಗೆ ಯೇಸು ಆತ್ಮೀಯವಾಗಿ ಎಲ್ಲಾ ಎಲ್ಲೆಗಳನ್ನೂ ಮೀರಿ ಸ್ಪಂದಿಸುತ್ತಿದ್ದರು. ಮಾತ್ರವಲ್ಲದೆ ಕ್ಷಣಿಕ ಸಂತೋಷ ಹಾಗೂ ಅಳಿದು ಹೋಗುವ ವಸ್ತುಗಳಿಗಾಗಿ ಶ್ರಮಿಸುವ ಬದಲು ಅಳಿಯದ ಅನಂತವಾದ ತಂದೆಯ ರಾಜ್ಯದೆಡೆಗೆ ಸಾಗುವಂತೆ ಪ್ರೇರೇಪಿಸುತ್ತಿದ್ದರು. "ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು. " (ಮತ್ತಾಯ ೬:೩೩).
ವಿಪರ್ಯಾಸವೆಂದರೆ ಧಾರ್ಮಿಕ ಮುಖಂಡರು ಜನಹಿತವನ್ನು ಬಯಸುವ ಬದಲು ಸ್ವಾರ್ಥದಿಂದ ತುಂಬಿದವರಾಗಿ ಸ್ವಹಿತವನ್ನು ಬಯಸುತ್ತಿದ್ದರು. ಮಾತ್ರವಲ್ಲದೆ ಯೇಸು ಹೀಗೆ ಬೆಳೆಯುತ್ತಾ ಹೋದರೆ ತಮಗೆ ಉಳಿಗಾಲವಿಲ್ಲವೆಂದು ಮನದಟ್ಟಾದಾಗ ಅವರನ್ನು ಮುಗಿಸಲು ಸಂಚು ಹೂಡಿದರು. ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯ ಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದರು (ಯೊವಾನ್ನ ೧೧-೫೭). ಆನಂತರ ಅವರು ಯೇಸುವನ್ನು ಬಂಧಿಸಿ ಹೀನಾಯವಾಗಿ ಶಿಲುಬೆಗೇರಿಸುವುದರಲ್ಲಿ ಸಫಲರಾದರು.
ಆದರೆ ಅವರ ಯೋಜನೆ ಫಲನೀಡಲಿಲ್ಲ. ಏಕೆಂದರೆ "ಸಾವು" ಯೇಸುವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಧರ್ಮಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದ ಆ ಧಾರ್ಮಿಕ ಮುಖಂಡರಿಗೆ ಯಾಕೆ ಈ ಕಟುಸತ್ಯ ಅರ್ಥವಾಗಲಿಲ್ಲ!? ಅವರು ತಮ್ಮ ಸ್ವಾರ್ಥದ ಸುಳಿಯ ಆಳದಲ್ಲಿ ಮುಳುಗಿಹೋಗಿದ್ದರು. ಆದಿಯೂ ಅಂತ್ಯವೂ ಇಲ್ಲದ ಸೃಷ್ಟಿಕರ್ತನನ್ನು ಸಾವು ಕಟ್ಟಿಹಾಕಲು ಸಾಧ್ಯವೇ? ಪ್ರಭುಯೇಸು ತಾವು ಮೊದಲೇ ತಿಳಿಸಿದಂತೆ ಮೂರನೇಯ ದಿನ ಸಾವನ್ನು ಧ್ವಂಸಗೊಳಿಸಿ ಶಾಶ್ವತವಾಗಿ ಸೋಲಿಸಿದರು. "ಸಾವಿಗೆ ಸೋಲಾಯಿತು, ಜಯವು ಸಂಪೂರ್ಣವಾಯಿತು" (೧ಕೊರಿಂಥ ೧೫:೫೫), ಪ್ರಭು ಯೇಸು ಮೃತ್ಯುಂಜಯರಾಗಿ ಪುನರುತ್ಥಾನರಾದರು.
ಪುನರುತ್ಥಾನವೆಂದರೆ ಏನು? ಸತ್ತವರು ಮತ್ತೆ ಜೀವ ಪಡೆಯುವುದು ಪುನರುತ್ಥಾನವೇ? ಲಾಜರನನ್ನು ಯೇಸುವೇ ಜೀವಕ್ಕೆ ಎಬ್ಬಿಸಿದರು ". . . ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು ಎಂದಾಗ "ನಿನಗೆ ವಿಶ್ವಾಸವಿದ್ದಲ್ಲಿ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ಹೇಳಲಿಲ್ಲವೆ?" ಎಂದು ಮರುನುಡಿದರು ಯೇಸು. ಆನಂತರ ಗಟ್ಟಿಯಾದ ದ್ವನಿಯಿಂದ, "ಲಾಜರನೇ, ಹೊರಗೆ ಬಾ, " ಎಂದು ಕೂಗಿದರು. ಸತ್ತಿದ್ದವನು ಕೂಡಲೇ ಹೊರಗೆ ಬಂದನು" (ಯೊವಾನ್ನ ೧೧:೩೯-೪೩). ಅದೇ ಲಾಜರ್ ಮತ್ತೆ ಸಾವನ್ನು ಅನುಭವಿಸಿದ.
ಹಾಗಾದರೆ ಪುನರುತ್ಥಾನವೆಂದರೇನು? ಮಾನವರಾದ ನಾವು ದೈಹಿಕ ಸಾವಿನ ನಂತರ ಪರಿವರ್ತಿತ ದೇಹದೊಂದಿಗೆ (Transformed body) ತ್ರೈಏಕ ದೇವನೊಡನೆ ಶಾಶ್ವತವಾಗಿ ಆತ್ಮಾನಂದದಿಂದ ಜೀವಿಸುವುದು. ಈ ಆತ್ಮಾನಂದದ ಸವಿಯನ್ನು ನಮಗೆ ಉಣಬಡಿಸಲು ಯೇಸು ಮಾನವರಾಗಿ ಜನಿಸಿದರು "ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ ತನ್ನನ್ನೇ ಬರಿದು ಮಾಡಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು, " (ಫಿಲಿಪ್ಪಿ ೨:೬-೭) ಪಾಪದಿಂದ ಮಲಿನವಾಗಿದ್ದ ಮಾನವಕುಲವನ್ನು ತಮ್ಮ ಪವಿತ್ರ ರಕ್ತದಿಂದ ಶಿಲುಬೆಯ ಮರಣದ ಮೂಲಕ ಶುದ್ಧೀಕರಿಸಿ; ತಾವು ಮುಂಚಿತವಾಗಿ ತಿಳಿಸಿದಂತೆ ಪುನರುತ್ಥಾನರಾಗಿ ಸ್ವರ್ಗದಲ್ಲಿ ತಂದೆಯ ಬಲಪಾರ್ಶ್ವದಲ್ಲಿ ಕುಳಿತು ರಾರಾಜಿಸುತ್ತಿದ್ದಾರೆ ಮತ್ತು ನಾವೂ ಸಹ ಆ ಪುನರುತ್ಥಾನದ ಮಹಿಮೆಯನ್ನು ಅನುಭವಿಸುವಂತೆ ಮುಕ್ತ ಆಹ್ವಾನವನ್ನು ನೀಡುತ್ತಿದ್ದಾರೆ. ಪ್ರಭು ಯೇಸು ಪುನರುತ್ಥಾನವಾಗಿರುವುದನ್ನು ಸಂತ ಪೌಲನು ಕೊರಿಂಥಿಯರಿಗೆ ಬರೆದಿರುವ ಮೊದಲ ಪತ್ರದಲ್ಲಿ ಹೀಗೆ ದೃಢಪಡಿಸುತ್ತಾನೆ ". . . ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರನ್ನು ಭೂಸ್ಥಾಪನೆ ಮಾಡಲಾಯಿತು. . . ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು" (೧೫:೩-೪).
ಪುನರುತ್ಥಾನಿ ಪ್ರಭು ಯೇಸು ತಾವಿರುವಲ್ಲಿ ನಾವಿರಬೇಕೆಂದು ಬಯಸುತ್ತಾರೆ ಅದುವೇ ನಿಜವಾದ ಪನರುತ್ಥಾನ. ಆದರೆ ಸತ್ತ ನಂತರ ಪನರುತ್ಥಾನ ಹೊಂದಿ ತ್ರೈಏಕ ದೇವನೊಡನೆ ನಿರಂತರ ಆತ್ಮಾನಂದವನ್ನು ಪಡೆಯಬೇಕಾದರೆ ಅದು ಜೀವಿಸುತ್ತಿರುವಾಗಲೇ ಪ್ರಾರಂಭವಾಗಬೇಕು. ಅದು ನಮ್ಮ ಕ್ರೈಸ್ತ ವಿಶ್ವಾಸದ ಬದುಕಿನ ಜೀವದ ಜೀವಾಳ. ಅದು ನಮ್ಮ ಕ್ರೈಸ್ತ ವಿಶ್ವಾಸದ ಅಂತಿಮ ಹಾಗೂ ಪರಮ ಸಂಪತ್ತು. ಪ್ರಭು ಯೇಸು ತಮ್ಮ ಪವಿತ್ರ ರಕ್ತವನ್ನು ಚೆಲ್ಲಿ ನಮಗಾಗಿ ಸಂಪಾದಿಸಿರುವ ಅಳಿಯದ ಆಸ್ತಿ. ಆ ಅಳಿಯದ ಶಾಶ್ವತ ಸಂಪತ್ತು ಎಲ್ಲರಿಗೂ ಸೇರಿದ್ದು, ಅದು ನಮ್ಮದೂ ಸಹ. ಆದರೆ ಅದು ಸುಮ್ಮನೆ ಸಿಗುವ ಆಸ್ತಿಯಲ್ಲ. ಸ್ವಾರ್ಥ ಅಳಿದಾಗ, ಕ್ರಿಸ್ತನಲ್ಲಿ ದೃಢವಿಶ್ವಾಸ ಚಿಗುರಿದಾಗ ಹಾಗೂ ನಿಸ್ವಾರ್ಥ ಸೇವೆ ಪ್ರಾರಂಭವಾದಾಗ ಅದು ಸಿಕ್ಕರೂ ಸಿಗಬಹುದು. ಏಕೆಂದರೆ ಅದು ನಮ್ಮ ಶ್ರಮದಿಂದ ಸಂಪಾದಿಸಬಹುದಾದ ಆಸ್ತಿಯಲ್ಲ. ಅದು ತ್ರೈಏಕ ದೇವನು ನಮಗೆ ನೀಡುವ ಉಚಿತ ಕೊಡುಗೆ. ಆ ಕಾರಣ ನಾವು ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದಲೂ ಶ್ರದ್ಧೆಯಿಂದಲೂ ಹಾಗೂ ಪ್ರೀತಿಯಿಂದಲೂ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರಬೇಕು. ಆಗ ಆ ಅನಂತ ಸಂಪತ್ತಿನಲ್ಲಿ ಪಾಲು ಸಿಗದೇ ಇರದು!
ಈ ಸಂಪತ್ತಿನಲ್ಲಿ ಪಾಲುದಾರರಾಗಲು ಪ್ರಪ್ರಥಮವಾಗಿ "ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು, ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು" (ಯೊವಾನ್ನ ೧೧: ೨೫-೨೬) ಎಂದು ಹೇಳಿದ ಪುನರುತ್ಥಾನಿ ಪ್ರಭು ಕ್ರಿಸ್ತನಲ್ಲಿ ಅಚಲ ವಿಶ್ವಾಸವಿಟ್ಟು, ಭರವಸೆಯಿಂದ ಮುನ್ನಡೆಯಬೇಕು. ಎರಡನೆಯದಾಗಿ ಅವರ ಬೋಧನೆಗಳನ್ನು ಆಲಿಸಿ ಪರಪ್ರೀತಿಯಲ್ಲಿಯೂ ಹಾಗೂ ದಯಾಕಾರ್ಯಗಳಲ್ಲಿಯೂ ನಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು (ಮತ್ತಾಯ ೨೫:೩೧-೪೬).
ಕ್ರಿಸ್ತ ಪುನರುತ್ಥಾನರಾಗಿ ಇಂದೂ ಎಂದೆಂದೂ ನಮ್ಮ ನಡುವೆಯೇ ಜೀವಿಸುತ್ತಿದ್ದಾರೆ. ಆ ಪುನರುತ್ಥಾನದ ಮಹಿಮೆಯ ಬೆಳಕು ನಮ್ಮದಾಗಬೇಕಾದರೆ ದೇವರು ನಮ್ಮ ಪ್ರಥಮ ಆದ್ಯತೆಯಾಗಬೇಕು! ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೊಬ್ಬರೇ ದೇವರೆಂದು ತಿಳಿದುಕೊಳ್ಳಬೇಕು. ಅವರೇ ನಂಬಿಕಸ್ತರಾದ ದೇವರು; ತಮ್ಮನ್ನು ಪ್ರೀತಿಸಿ ತಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ತಾವು ಮಾಡಿದ ವಾಗ್ದಾನವನ್ನು ನೆರವೇರಿಸಿ, ತಮ್ಮ ಅಚಲಪ್ರೀತಿಯನ್ನು ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ತೋರಿಸುವರು (ಧರ್ಮೋ ೭:೯೪) ಎನ್ನುತ್ತದೆ ದೇವರನುಡಿ. ಅದನ್ನು ಪಾಲಿಸಿದಾಗ ಎಲ್ಲವೂ ಸಾಧ್ಯ. ಪುನರುತ್ಥಾನಿ ಕ್ರಿಸ್ತ ನಮ್ಮ ನಡುವೆ, ನಮ್ಮ ನೆರೆಹೊರೆಯವರಲ್ಲಿ, ನಮ್ಮ ಸುತ್ತಮುತ್ತ ಹಾಗೂ ನಮ್ಮೊಳಗೆಯೇ ಇದ್ದಾನೆಂಬ ಅರಿವು ನಮ್ಮಲ್ಲಿ ಸಂವೃದ್ಧಿಯಾಗಬೇಕು. ಲೌಕಿಕ ಕತ್ತಲೆ ಅಳಿದು, ಅಲೌಕಿಕ ಅನಂತ ಬೆಳಕು ನಮ್ಮನ್ನು ಆವರಿಸಿದಾಗ ನಮ್ಮ ಪುನರುತ್ಥಾನ ಪ್ರಾರಂಭವಾಗುತ್ತದೆ.


¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...