Tuesday, 24 April 2018

ಯಾಯೀರನ ಮಗಳು



ಮುದ್ದು ಮಗಳು, ಒಬ್ಬಳೇ ಮಗಳೂ ಇದ್ದಿರಬಹುದು, ಸಭಾಮಂದಿರದ ಪ್ರತಿಷ್ಠಿತ ಅಧಿಕಾರಿ ಯಾಯೀರನ ಹನ್ನೆರಡು ವರ್ಷದ ಹೊಸ್ತಿಲಲ್ಲಿ ನಿಂತಿದ್ದ ನೆಚ್ಚಿನ ಮಗಳು. ತನ್ನ ಪುಟ್ಟ ದೇಹದಲ್ಲಿ ಜರುಗುತ್ತಿರುವ ವಿವಿಧ ರಸಧೂತಗಳ ಅಬ್ಬರವನ್ನು ಕಂಡು ತತ್ತರಿಸಿದವಳು. ತನ್ನಿಂದ ಜೀವವೇ ಸೋರಿಹೋಗುತ್ತಿದೆ ಎಂದು ಭಾವಿಸಿದ ಸೂಕ್ಷ್ಮಹೃದಯದ ತರಳೆ. ಅವಳ ತೀವ್ರವಾದ ಭಯ, ಭೀತಿ, ಆತಂಕ, ಅಂಜಿಕೆಗಳು ಅವಳ ಹೃದಯದ ಮೇಲೆ ತಮ್ಮ ಅಪಾಯಕರ ಒತ್ತಡವನ್ನು ಬೀರಿ, ಆ ಮುಖ್ಯ ಅಂಗ ತನ್ನ ಕಾರ್ಯದಲ್ಲಿ ಮುಗ್ಗರಿಸಿದಾಗ, ಆ ಎಳೆ ಜೀವ ಎಚ್ಚರತಪ್ಪಿ ನೆಲಕ್ಕೆ ಬಿದ್ದಳು!
ಸುತ್ತಲೂ ಅಳುತ್ತಾ. ಗೋಳಾಡುತ್ತಾ ಇರುವ ತಾಯಿ, ನೆಂಟರಿಷ್ಟರು. ತಂದೆಗೆ ಏನು ಮಾಡಲೂ ತೋಚಲಿಲ್ಲ! "ಸಹಸ್ರಾರು ಜನರಿಗೆ ಜೀವವನ್ನೂ ಆರೋಗ್ಯವನ್ನೂ ನೀಡುತ್ತಿರುವ ಯೇಸುವಲ್ಲದೆ ಬೇರೆ ಯಾರೂ ನನ್ನ ಪ್ರಿಯ ಮಗಳನ್ನು ಉಳಿಸಲಾರರು"  ಎಂಬ ದೃಢನಂಬಿಕೆಯೊಡನೆ, ದೀನಮನಸ್ಸನ್ನು ಹೊತ್ತು , ತಗ್ಗಿದ ಮನೋಭಾವದಿಂದ ಯೇಸುವಿನ ಬಳಿಗೆ ಓಡಿಬಂದು, ಅವರ ಪಾದಗಳಿಗೆ ಬಿದ್ದನು. "ನನ್ನ ಮುದ್ದುಮಗಳು ಸಾಯುತ್ತಿದ್ದಾಳೆ, ಸ್ವಾಮೀ! ಕಾರಣ ನಮಗೆ ತಿಳಿಯದು. ನೀವು ಬಂದು, ಅವಳನ್ನು ದಯವಿಟ್ಟು ವಾಸಿಮಾಡಿರಿ, ಅವಳನ್ನು ಬದುಕಿಸಿಕೊಡಿರಿ" - ಹೀಗೆ, ಆತನು ಯೇಸುಕ್ರಿಸ್ತರನ್ನು ಬಹಳವಾಗಿ ಬೇಡಿಕೊಂಡನು.
ಆ ಅಧಿಕಾರಿಯ ಕಡೆಯವರು, "ನಿನ್ನ ಮಗಳು ಸತ್ತಳು" ಎಂದು ಹೇಳಿದರೂ, ಯೇಸು ಅವರ ಮಾತುಗಳನ್ನು ಲಕ್ಷಿಸದೆ, ಆ ಅಧಿಕಾರಿಗೆ, "ಅಂಜಬೇಡ, ನಂಬಿಕೆ ಮಾತ್ರ ಇರಲಿ" ಎಂದು ಧೈರ್ಯಹೇಳಿ, ತಮ್ಮ ಪ್ರಿಯಶಿಷ್ಯರಾದ ಪೇತ್ರರು, ಯಾಕೋಬ, ಯೋಹಾನರನ್ನು ತಮ್ಮೊಡನೆ ಕರೆದುಕೊಂಡು ಹೋಗುತ್ತಾರೆ.
ಒಳಗೆ ಪ್ರವೇಶಿಸಿ, ಗದ್ದಲ ಮಾಡುತ್ತಿದ್ದವರನ್ನು ಸುಮ್ಮನಿರಿಸುತ್ತಾರೆ. "ನಿಮ್ಮ ಹುಡುಗಿ ಜೀವದಿಂದಿದ್ದಾಳೆ. ನಿದ್ರೆಮಾಡುತ್ತಿದ್ದಾಳೆ, ಅಷ್ಟೇ" ಎಂದು ಯೇಸು ಹೇಳಿದಾಗ, ಅಳುತ್ತಿದ್ದವರು ಈಗ ನಕ್ಕು ಅವರನ್ನು ಹಾಸ್ಯಮಾಡಿದರು. ಇವು ಯಾವುದನ್ನೂ ಯೇಸುಕ್ರಿಸ್ತರು ಲೆಕ್ಕಿಸದೆ ಹುಡುಗಿಯ ಪೋಷಕರು ಹಾಗೂ ತಮ್ಮ ಮೂರು ಶಿಷ್ಯರೊಡನೆ ಹುಡುಗಿ ಮಲಗಿದ್ದ ಕೋಣೆಯನ್ನು ಪ್ರವೇಶಿಸುತ್ತಾರೆ.
ಆ  ಹನ್ನೆರಡು ವರ್ಷದ ಅಮಾಯಕ ಪೋರಿ ಕಣ್ಣು ಮುಚ್ಚಿದ್ದಾಳೆ, ಮುಖ ಪೇಲವವಾಗಿದೆ, ಉಸಿರಾಟದ ಏರಿಳಿತವೂ ಏರುಪೇರಾಗಿದೆ. ಯೇಸು ಸ್ವಲ್ಪಹೊತ್ತು ಅವಳನ್ನು ಗಮನಿಸಿ, ಮೆಲ್ಲಗೆ ಹತ್ತಿರಕ್ಕೆ ಬಂದು, ಅವಳ ಕೈಹಿಡಿದು, ಸಿರಿಯಾದ ಭಾಷೆಯಲ್ಲಿ "ತಲಿಥಾ ಕೂಮಿ" ಎಂದು ಅಧಿಕಾರವಾಣಿಯಲ್ಲಿ ಆಜ್ಞಾಪಿಸಿದರು. ಅದೇ ದಿನದಲ್ಲಿ ಅವರು, ಗೆರಸೇನ ಸೀಮೆಯ  ದೆವ್ವಹಿಡಿದವನನ್ನು ವಾಸಿಮಾಡಿದ್ದರು, ಹನ್ನೆರಡು ವರ್ಷಗಳಿಂದ ವಾಸಿಯಾಗದ ರೋಗದಲ್ಲಿ ನರಳುತ್ತಿದ್ದ ಸ್ತ್ರೀ , ಅವರ ಉಡುಪನ್ನು ಮುಟ್ಟಿದಾಗ ಯೇಸುಕ್ರಿಸ್ತರ ದಿವ್ಯಶಕ್ತಿ ಹೊರಟು ಅವಳು ಗುಣಹೊಂದಿದ್ದಳು. ಈಗ ಅದೇ ಶಕ್ತಿ ಅವರಿಂದ ಪ್ರವಹಿಸಿ ಆ ಹುಡುಗಿಗೆ ಸಮಗ್ರ ಆರೋಗ್ಯದ ದಾನಮಾಡಿತು.
ಆ ಅನಾಮಿಕ ಹೆಣ್ಣುಮಗಳು ದೈಹಿಕವಾಗಿ ಬಳಲಿದ್ದಳು. ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ತೀವ್ರ ಭಯ, ಗಾಬರಿ, ಆತಂಕಗಳಿಂದ ಎದೆಯೊಡೆದು ಕೆಳಗೆ ಬಿದ್ದಿದ್ದಳು. ಯಾವಾಗ ಯೇಸು, ಅವಳ ಕೈಹಿಡಿದರೋ ಆಗ, ಅವರ ದೈವೀಕಶಕ್ತಿ ಅವಳಲ್ಲಿ ಹರಿದು, ಅವಳ ಎಲ್ಲಾ ನೇತ್ಯಾತ್ಮಕ ಭಾವನೆಗಳನ್ನೂ ಅಳಿಸಿಹಾಕಿ, ಅವಳು ಧೈರ್ಯದಿಂದ ಎದ್ದು ನಡೆದಾಡುವಂತಾಯಿತು.
ತನ್ನ ದೇಹದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಸ್ವಾಭಾವಿಕವಾದದ್ದು, ಅದಕ್ಕೆ ಹೆದರಬೇಕಾಗಿಲ್ಲ ಎಂದು ಅವಳಿಗೆ ಮನವರಿಕೆಯಾಯಿತು, ಮನಸ್ಸು ನಿರಾಳವಾಯಿತು.
ಯೇಸು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅವಳಿಗೆ ಪುಷ್ಟಿಕರವಾದ ಆಹಾರದ ಕೊರತೆಯೂ ಇದೆ ಎಂದು ಮನಗಂಡು, ಸ್ತಬ್ಧವಾಗಿ ನಿಂತಿದ್ದ ಅವಳ ಪೋಷಕರಿಗೆ ಈ ಹುಡುಗಿಗೆ ಮೊದಲು ಊಟಮಾಡಿಸಿರಿ ಎಂದು ಹೇಳಿ ಅಲ್ಲಿಂದ ಶಿಷ್ಯರೊಡನೆ ಹೊರಡುತ್ತಾನೆ. ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವಲ್ಲವೇ?
ಇಲ್ಲಿ, ಯೇಸುಕ್ರಿಸ್ತರು ಹೇಳಿದ ಮಾತು ಅಮ್ಮಣ್ಣಿ, ಏಳು ಎನ್ನುತ್ತೇನೆ” ಎಂಬುದು, ಇಡೀ ಸ್ತ್ರೀಸಮುದಾಯಕ್ಕೇ ಅನ್ವಯಿಸುತ್ತದೆ. ಎಚ್ಚರವಾಗಿರಿ. ನಿಮ್ಮ ದೇಹ, ಮನಸ್ಸುಗಳನ್ನು ಅರಿತುಕೊಳ್ಳಿರಿ. ಅವುಗಳನ್ನು ಆರೋಗ್ಯವಾಗಿಟ್ಟುಕೊಳ್ಳಿರಿ. ನಿಮ್ಮನ್ನು ನೀವು ಅಲಕ್ಷ್ಯ ಮಾಡಬೇಡಿರಿ. ನಿಮ್ಮ ಹಕ್ಕುಬಾಧ್ಯತೆಗಳನ್ನು ತಿಳಿದುಕೊಂಡು, ನೀವು ದಿಟ್ಟತನದಿಂದ ಎದ್ದು ನಿಲ್ಲಿರಿ ಎನ್ನುವ ಯೇಸುವಿನ ದಿವ್ಯಸಂದೇಶ ಎಲ್ಲಾ ಸ್ತ್ರೀಯರನ್ನೂ ಮುಟ್ಟಲಿಅವರೆಲ್ಲರಲ್ಲಿ ಜಾಗೃತಿ ಮೂಡಲಿ!
¨ ಡಾ. ಲೀಲಾವತಿ ದೇವದಾಸ್




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...