ಯಡವನಹಳ್ಳಿಯ ಸಂತ ಅಂತೋಣಿಯವರ ದೇವಾಲಯದ ವಿಚಾರಣೆಯಿಂದ ಪ್ರವಾಸಕ್ಕೆ ಹೋದಾಗ ಮಲೆಯಾಟ್ಟೂರ್ ಎಂಬ ಸ್ಥಳವನ್ನು ಸಹ ನಾವು ಸಂಧಿಸಿದೆವು. ಶೀಘ್ರವಾಗಿ ಬೆಟ್ಟವನ್ನು ಏರಿಳಿದ ನಾನು ಉಳಿದವರಿಗಾಗಿ ಬಹುಕಾಲ ಕಾಯಬೇಕಾಯಿತು. ಅಲ್ಲೆ ಮರದ ಕೆಳಗೆ ಒಂದು ಬಂಡೆಯ ಮೇಲೆ ಕುಳಿತೆ. ಒಂಟಿಯಾಗಿ ಅಲ್ಲಿ ಕುಳಿತಿದ್ದ ನನ್ನ ಬಳಿಗೆ ಹರೆಯಕ್ಕೆ ಹತ್ತಿರವಿದ್ದ ಮಹಿಳೆ ಒಬ್ಬರು ಬಂದು ಪಕ್ಕದಲ್ಲಿ ಕುಳಿತು ಮಾತನಾಡ ತೊಡಗಿದರು. ಅಪರಿಚಿತರಾದ ಕಾರಣ ನಾನು ಹೆದರಿ ಯಾರಾದರೂ ನನ್ನ ಸಹಾಯಕ್ಕೆ ಬರಬಾರದೆ ಎಂದುಕೊಂಡೆ. ನಂತರ ಅವರ ಮುಖದ ಮೇಲಿನ ಹುಮ್ಮಸ್ಸಿನ ನಗು ಹಾಗೂ ಉದ್ಭೋದಕ ಮಾತುಗಳನ್ನು ಕಂಡು ತಲ್ಲೀನಳಾಗಿ ಧೈರ್ಯದಿಂದ ಅವರ ಮಾತುಗಳಿಗೆ ಕಿವಿಗೊಡ ತೊಡಗಿದೆ. ಅವರು ಹೇಳಿದ ಮಲೆಯಾಟ್ಟೂರಿನ ಕಥೆಯ ವಿಸ್ತಾರವಿದು.
ಕೇರಳದ ಈಶಾನ್ಯ ಪ್ರದೇಶದಲ್ಲಿನ ಎರ್ಣಾಕುಲಂ ಜಿಲ್ಲೆಯ ಮಲೆಯಾಟ್ಟೂರ್ ಎಂಬ ಗ್ರಾಮದಲ್ಲಿನ ೬೦೯ ಮೀಟರ್ ಎತ್ತರದ ಕುರಿಶುಮುಡಿ ಬೆಟ್ಟದ ಮೇಲ್ತುದಿಯಲ್ಲಿ ಕ್ರಿ. ಶ. ೯೦೦ ರಲ್ಲಿ ನಿರ್ಮಿಸಲಾದ ಸಂತ ತೋಮಸರ ಪುಣ್ಯಕ್ಷೇತ್ರವಿದೆ. ಗುಡ್ಡಗಾಡು ಪ್ರದೇಶಗಳ ನಡುವೆ ಪಶ್ಚಿಮ ಘಟ್ಟಗಳ ವಲಯದಲ್ಲಿ ಸ್ಥಾಪಿತಗೊಂಡಿರುವ ಈ ಪುಣ್ಯಕ್ಷೇತ್ರವು, ಯೇಸುವಿನ ಪ್ರೇಷಿತರಾದ ಸಂತ ತೋಮಸರೇ ಸ್ವತಃ ಕೇರಳದಲ್ಲಿ ಕ್ರೈಸ್ತ ಸಮುದಾಯವನ್ನು ರೂಪಿಸಲು ಬಿತ್ತಿದ ಬೀಜ ಎನ್ನಲಾಗಿದ್ದು ಇದನ್ನು ಕೇರಳದ ಏಕೈಕ ಅಂತರಾಷ್ಟ್ರೀಯ ಪುಣ್ಯಕ್ಷೇತ್ರವೆಂದು ಸಹ ಪರಿಗಣಿಸಲಾಗಿದೆ. ಕುರಿಶುಮುಡಿಯು ಕೊಚ್ಚಿಯಿಂದ ೫೨ ಕಿ. ಮೀ ದೂರದಲ್ಲಿದ್ದು ಪೆರಿಯಾರ್ ನದಿ ತೀರದಲ್ಲಿದೆ. ಮಲೆಯಾಟ್ಟೂರ್ ಸ್ಥಳವು ನದಿ, ಬೆಟ್ಟ ಹಾಗೂ ಭೂಮಿ ಕೂಡುವ ಸ್ಥಳವಾಗಿದ್ದು ಅಕ್ಷರಶಃ ಇದನ್ನು ಮಲೈ(ಬೆಟ್ಟ), ಆರ್ (ನದಿ), ಊರ್(ಊರು) ಎಂದು ವಿಂಗಡಿಸಬಹುದಾಗಿದೆ.
ಪ್ರಪಂಚದ ಹಲವೆಡೆಯಿಂದ ಸಾವಿರಾರು ಜನರು ಜಾತಿ ಬೇಧವಿಲ್ಲದೆ ಈ ಪುಣ್ಯಕ್ಷೇತ್ರಕ್ಕೆ ಬಂದು ಕುರಿಶುಮುಡಿ ದರ್ಶನ ಪಡೆಯಲು ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ. ಪಾಸ್ಖ ಹಬ್ಬದ ನಂತರದ ಭಾನುವಾರದಂದು ಇಲ್ಲಿ 'ಮಲೆಯಾಟ್ಟೂರ್ ಪೆರುನಾರ್' ಎಂಬ ದೋಡ್ಡ ಜಾತ್ರೆ ಮಹೋತ್ಸವ ನಡೆಯುತ್ತದೆ.
ಈ ಸ್ಥಳದ ಮೂಲ ತಿಳಿದುಕೊಳ್ಳುವುದಾದರೆ, ಯೇಸುವಿನ ಶಿಷ್ಯರಲ್ಲಿ ಒಬ್ಬರಾದ ತೋಮಸರು ಕೊಡುಂಗಲ್ಲೂರ್ ಬಂದರಿನ ಮುಖೇನ ಕೇರಳಕ್ಕೆ ಪ್ರವೇಶಿಸಿ ಅಲ್ಲಿ ಕ್ರೈಸ್ತ ಧರ್ಮದ ಬೀಜವನ್ನು ಬಿತ್ತಿದರು. ಕೇರಳಾದಿಂದ ಮೈಲಾಪುರಕ್ಕೆ ಪ್ರಯಾಣ ಬೆಳೆಸಿದ ತೋಮಸರು ಕೆಲ ದಿನಗಳ ಕಾಲ ಮಲೆಯಾಟ್ಟೂರ್ ನಲ್ಲಿ ತಂಗಿದ್ದರು. ನಂತರ ಮೈಲಾಪುರಕ್ಕೆ ಹೋಗಿ ಅಲ್ಲಿ ಧೈವಾಧೀನರಾದರು.
ಮಲೆಯಾಟ್ಟೂರಿನ ಪುಣ್ಯಕ್ಷೇತ್ರದ ವಾಸ್ತುಕಲೆ
ಮಲೆಯಾಟ್ಟೂರ್ ಪುಣ್ಯಕ್ಷೇತ್ರವು ಗ್ರೀಕ್ ಮತ್ತು ರೋಮನ್ ಸಾಂಪ್ರದಾಯಿಕ ಶೈಲಿಯಲ್ಲಿದೆ. ಬಲಿಪೀಠವು ಗ್ರೀಕ್ ಸಾಂಪ್ರದಾಯಿಕ ಶೈಲಿಯಲ್ಲಿದ್ದರೆ ದೇವಾಲಯದ ಮುಂಭಾಗವು ರೋಮನ್ ಕಥೋಲಿಕ ಶೈಲಿಯಲ್ಲಿದೆ. ಬಲಿಪೀಠದ ಹಿಂದೆ ನಾವು ನೋಡಿದರೆ ಐದು ಮಹಿಮೆ ರಹಸ್ಯಗಳ ವಿನ್ಯಾಸದೊಂದಿಗೆ ಚಿತ್ರಿಸಿರುವ ಚಿತ್ರಣವನ್ನು ಕಾಣುತ್ತೇವೆ. ಆರಾಧನೆ ಪಾಪನಿವೇದನೆಗೆ ಪ್ರತ್ಯೇಕ ಸೌಲಭ್ಯಗಳಿದ್ದು, ದೀಕ್ಷಾಸ್ನಾನ, ಪ್ರವಚನ ಪೀಠಗಳು ಪ್ರಾಚೀನವೆಂದು ತೋರುತ್ತವೆ.
ದೇವಾಲಯದ ಹೊರ ಆವರಣದಲ್ಲಿ ನಿಂತು ಗಮನಿಸಿದಾಗ ಪೆರಿಯಾರ್ ನದಿ ಹರಿಯುವ ವಿಸ್ಮೃತ ನೋಟವು ಮನಸ್ಸುಗಳನ್ನು ಉಲ್ಲಾಸಗೊಳಿಸುತ್ತದೆ. ನದಿಯಲ್ಲಿ ಜಳಕ ಮಾಡುವ ಸೌಲಭ್ಯ ಸಹ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿನ ಸಂಪ್ರದಾಯದ ಪ್ರಕಾರ ಜನರು ಹರಕೆ ಹೊತ್ತು ಕೇಶ ಮುಂಡನ ಮಾಡಿಸಿಕೊಂಡು ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗುತ್ತಾರೆ.
ಮಲೆಯಾಟ್ಟೂರಿನಲ್ಲಿ ಸಂತ ತೋಮಸರಿಗೆ ಸಮರ್ಪಿಸಿದ ಎರಡು ದೇವಾಲಯಗಳಿವೆ. ಬೆಟ್ಟದ ಮೇಲೆ ಇರುವುದು ಕುರಿಶುಮುಡಿ ಹಾಗೂ ಬೆಟ್ಟದ ಕೆಳ ಭಾಗದಲ್ಲಿ ಇರುವುದು ಸಂತ ತೋಮಸರ ವಿಚಾರಣೆ ದೇವಾಲಯ (ತಾಲೆಟ್ಟೆಪಲ್ಲಿ). ಈ ಆಧುನಿಕ ಪ್ರಾರ್ಥನಾ ಮಂದಿರದ ಪೂರ್ವ ಭಾಗವು ಆನೆಗಳ ದಾಳಿಯಿಂದಾಗಿ ಹಾನಿಗೊಳಗಾಗಿತ್ತು. ಈ ಪ್ರದೇಶವು ದಟ್ಟವಾದ ಬೆಟ್ಟಗಾಡುಗಳಿಂದ ಸುತ್ತುಗಟ್ಟಿದ್ದಾಗ ಇಂತಹದೊಂದು ಅಹಿತಕರ ಘಟನೆ ನಡೆದು ಹೋಗಿತ್ತು. ಘಟನೆಯಿಂದ ಹಾನಿಗೊಳಗಾಗಿದ್ದ ಗೋಡೆಗಳನ್ನು ಇತ್ತೀಚಿನ ದಿನಗಳಲ್ಲಿ ಸಿಮೆಂಟ್ ನಿಂದ ಮುಚ್ಚಲಾಗಿದೆ.
ಬೆಟ್ಟದ ತುದಿಯಿಂದ ಸ್ವಲ್ಪ ಕೆಳಗಿಳಿದು ಬಂದಾಗ ಅಲ್ಲಿ ಸಂತ ತೋಮಸರ ಪಾದ ಮುದ್ರೆಗಳ ಅಥವಾ ಕಾಲ್ ಪಾದಂ ಚಿತ್ರಣವನ್ನು ಬಂಡೆಯ ಮೇಲೆ ನಾವು ಕಾಣುತ್ತೇವೆ. ಚಿತ್ರಣವಿರುವ ಬಂಡೆಯನ್ನು ಗಾಜಿನ ಸಂಪುಟದಲ್ಲಿ ಸಂರಕ್ಷಿಸಲಾಗಿದೆ. ಇದರ ಮುಂದೆ ಬಂದು ಪ್ರಾರ್ಥಿಸುವವರಿಗೆ ಅನೇಕ ಪವಾಡಗಳು ನಡೆದಿವೆ.
ಬೆಟ್ಟದ ಮೇಲೆ ಪ್ರಾಚೀನ ಪ್ರಾರ್ಥನಾ ಮಂದಿರದ ಸಮೀಪದಲ್ಲೊಂದು ಬೆರಗು ಮೂಡಿಸುವ ಬಾವಿಯಿದೆ. ಸಂತ ತೋಮಸರು ದಾಹಗೊಂಡು ಇಲ್ಲಿನ ಬಂಡೆಯ ಮೇಲೆ ಹೊಡೆದಾಗ ತಾಜಾ ನೀರು ಹರಿಯಿತಂತೆ. ಈ ಬಾವಿಯ ನೀರು ಕುಡಿದರೆ ಕಷ್ಟ ತೊಂದರೆಗಳು, ರೋಗಗಳು ಗುಣವಾಗುತ್ತವೆ ಎಂಬುದು ಇಲ್ಲಿನ ಜನರ ವಿಶ್ವಾಸ ಹಾಗೂ ಇದು ಸತ್ಯವಾಗಿಯೂ ನಡೆದಿದೆ ಎನ್ನುವುದಕ್ಕೆ ಪುರಾವೆಗಳಿವೆ.
ಬಂಗಾರದ ಶಿಲುಬೆ (Golden Cross)
ಕೇರಳಕ್ಕೆ ಕಾಲಿಟ್ಟ ತೋಮಸರು ಬಿಸಿಲ ಬೇಗೆಯಂತಹ ಹಲವಾರು ಪ್ರಾಕೃತಿಕ ಎಡರು ತೊಡರುಗಳನ್ನು ಎದುರಿಸಬೇಕಾಯಿತು. ಆಗ ಅವರು ಬೆಟ್ಟದ ಮೇಲೆ ಹೋಗಿ ಬಂಡೆಯ ಮೇಲೆ ಮೊಣಕಾಲೂರಿ ತಮ್ಮ ಬೆರಳುಗಳಿಂದ ಶಿಲುಬೆ ಬರೆದು ಮುತ್ತಿಟ್ಟು ತುಂಬಾ ಹೊತ್ತು ಪ್ರಾರ್ಥಿಸುತ್ತಾರೆ. ಕೆಲವು ದಿನಗಳ ನಂತರ ತೋಮಸರು ಶಿಲುಬೆ ಬರೆದ ಸ್ಥಳದಲ್ಲೊಂದು ಬಂಗಾರದ ಶಿಲುಬೆ ಎಂದು ಹೇಳಲಾಗುವಂತಹ ದೊಡ್ಡ ಆಕಾರದ ಶಿಲುಬೆಯೊಂದು ರೂಪಕಗೊಂಡಿರುತ್ತದೆ. ತೋಮಸರು ಇಲ್ಲಿ ಪ್ರಾರ್ಥಿಸುವಾಗ ಮಾತೆ ಮರಿಯಮ್ಮನವರು ಅವರಿಗೆ ಪ್ರತ್ಯಕ್ಷರಾಗಿ ಧೈರ್ಯ ಸಾಂತ್ವನ ಹೇಳಿದರಂತೆ. ಅಂದಿನಿಂದ ಆ ಬೆಟ್ಟವನ್ನು 'ಪೊನ್ನಿನ್ ಕುರಿಶುಮುಡಿ' ಎಂದರೆ ಬಂಗಾರದ ಶಿಲುಬೆಯ ಪರ್ವತ ಎಂದು ಕರೆಯಲಾಗುತ್ತಿದೆ. ಈ ಶಿಲುಬೆ ಕಲ್ಲು ಭೂಮಿಯಿಂದ ೧೨೬೯ಅಡಿಗಳ ಎತ್ತರದಲ್ಲಿ ಎಂದರೆ ಸುಮಾರು ಮೂರು ಕಿಲೋಮೀಟರು ದೂರದಲ್ಲಿದ್ದು ತಲುಪಲು ಒಂದರಿಂದ ಒಂದೂವರೆ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಅಧಿಕ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು 'ಪೊನ್ನುಂ ಕುರಿಶು ಮುತ್ತಪ್ಪೊ, ಪೊನ್ಮಲ ಕಾಯಟ್ಟೊಂ' (ಬಂಗಾರದ ಶಿಲುಬೆಯ ಪೋಷಕರೆ, ಈ ಬಂಗಾರದ ಬೆಟ್ಟವನ್ನು ನಾವು ಹತ್ತುತ್ತೇವೆ) ಎಂಬ ಮಂತ್ರ ಪಠಿಸುತ್ತಾ ಬೆಟ್ಟ ಹತ್ತುತ್ತಾರೆ.
ಮಾರ್ ತೋಮ ಮಂಟಪ
ಈ ಮಂಟಪವನ್ನು ೧೯೭೨ ರಲ್ಲಿ ಸಂತ ತೋಮಸರ ಪುಣ್ಯತಿಥಿಯ ಸ್ಮರಣಾರ್ಥ ಸ್ಥಾಪಿಸಲಾಯಿತು. ದೇವಾಲಯದ ಸಮೀಪದಲ್ಲಿರುವ ಮಾರ್ ತೋಮ ಮಂಟಪವು ಗ್ರೀಕ್ ಮತ್ತು ಭಾರತೀಯ ಕಲಾ ಶೈಲಿಯಲ್ಲಿದ್ದು ನೋಡಲು ಬಲು ಆಕರ್ಷಕವಾಗಿದೆ. ಸಂತ ತೋಮಸರ ಅಮೂಲ್ಯ ಅವಶೇಷಗಳನ್ನು ಇಲ್ಲಿ ಸುರಕ್ಷಿತಗೊಳಿಸಲಾಗಿದೆ. ಈ ಮಂಟಪವು ಇಪ್ಪತ್ತು ಮೆಟ್ಟಿಲುಗಳನ್ನು ಒಳಗೊಂಡಿದ್ದು ಈ ಇಪ್ಪತ್ತು ಮೆಟ್ಟಿಲುಗಳು ದಕ್ಷಿಣ ಭಾರತದಲ್ಲಿ ತೋಮಸರು ಮಾಡಿದ ಇಪ್ಪತ್ತು ವರ್ಷಗಳ ಮಿಷನ್ ಕಾರ್ಯಗಳನ್ನು ಸೂಚಿಸುತ್ತದೆ.
ಸನ್ನಿಧಿ
ಮಲೆಯಾಟ್ಟೂರಿನ ಕಟ್ಟಡ ವಿನ್ಯಾಸಗಳಲ್ಲಿ ಈ ಮಂದಿರವು ಆಧುನಿಕ ಕಲಾಶೈಲಿಯ ವಿನ್ಯಾಸದಿಂದ ಕೂಡಿದ್ದು ಉತ್ತರದಂಚಿನಲ್ಲಿ ನೆಲೆಯೂರಿದೆ. ಮಂದಿರದ ಮೇಲಿರುವ ಪಿಯತಾ ಪ್ರತಿಮೆಯು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ. ಪ್ರಾರ್ಥಿಸಲು ಬೇಕಾದ ವಿಸ್ತಾರವಾದ ಸ್ಥಳಾವಕಾಶ ಈ ಮಂದಿರದಲ್ಲಿದೆ.
ಈ ಪುಣ್ಯಕ್ಷೇತ್ರಲ್ಲಿನ ವೈಶಿಷ್ಟ್ಯವೆಂದರೆ ಭಕ್ತಾದಿಗಳು ದೊಡ್ಡ ಶಿಲುಬೆಯನ್ನು ಮಾಡಿ ಮಂತ್ರವನ್ನು ಪಠಿಸಿ ಜಪಿಸುತ್ತಾ ಬಂಡೆ ಕಲ್ಲುಗಳ ನಡುವೆ ನಡೆಯುತ್ತಾ ಬೆಟ್ಟ ಹತ್ತುತ್ತಾರೆ. ಕೆಲವರಾದರೋ ಕಾವಿ ತೊಟ್ಟು ಕೈಯಲ್ಲಿ ಚಿಕ್ಕದೊಂದು ಶಿಲುಬೆ ಹಿಡಿದು ಜಪಿಸುತ್ತಾ ಹೆಜ್ಜೆ ಹಾಕುತ್ತಾರೆ. ಮಹಿಳೆಯರು ತಮ್ಮ ಜೀವನದಲ್ಲಿನ ಕಷ್ಟ ನಿವಾರಿಸಿಕೊಳ್ಳಲು ತಲೆಯ ಮೇಲೆ ಕಲ್ಲುಗಳನ್ನು ಹೊತ್ತು ನಡೆಯುತ್ತಾರೆ. ಇನ್ನೂ ಕೆಲವರು ಮಂಡಿಕಾಲೂರಿ ಬೆಟ್ಟ ಹತ್ತುತ್ತಾರೆ. ಶಿಲುಬೆ ಹಾದಿಯ ಪ್ರತಿಯೊಂದು ಸ್ಥಳಗಳಲ್ಲಿ ನಿಂತು ಪ್ರಾರ್ಥಿಸಿ ನಂತರ ಮುನ್ನಡೆಯುತ್ತಾರೆ.
ಮಲೆಯಾಟ್ಟೂರು ಪ್ರತಿಯೊಬ್ಬರೂ ಬಂದು ನೊಡಲೇಬೇಕಾದ ಒಂದು ಯಾತ್ರಾ ಸ್ಥಳ. ಇಲ್ಲಿಗೆ ಬಂದವರ ಮನಸ್ಸುಗಳು ಹಗುರವಾಗುತ್ತವೆ. ಜಾತಿ ಭೇದವಿಲ್ಲದೆ ಜನ ಇಲ್ಲಿಗೆ ಬರುತ್ತಾರೆ. ಈ ಪುಣ್ಯ ಸ್ಥಳದಲ್ಲಿನ ಪ್ರತಿಯೊಂದು ಅನುಭವಗಳು ಅವಿಸ್ಮರಣೀಯ ಹಾಗೂ ಅಮೋಘ.
¨ ಶ್ರೀಮತಿ ದೀಪ್ತಿ ಫ್ರಾನ್ಸಿಸ್ಕಾ
No comments:
Post a Comment