"ರಾಜಕೀಯ ನಿರಕ್ಷರಸ್ಥ"
¨ ಸಮೀಶಾ
ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ತಮ್ಮ ವಿರುದ್ಧವಾಗಿ ಮಾತನಾಡುವವರನ್ನು, ಪಿತೂರಿ ಮಾಡುವವರನ್ನು ಗುಪ್ತಚಾರಿಗಳ ಮೂಲಕ ತಿಳಿದುಕೊಂಡು, ರಹಸ್ಯವಾಗಿ ಮುಗಿಸಿಬಿಡುತ್ತಿದ್ದರು. ಹಿಟ್ಲರನೂ ಕೂಡ ಇಂಥ ರಹಸ್ಯ ಕಾರ್ಯಾಚರಣೆಯ ಮೂಲಕ ಲಕ್ಷಾಂತರ ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿದ್ದ. ಇಂದಿನದು ಡಿಜಿಟಲ್ ಯುಗ. ಈ ಯುಗದ ಸಾಧ್ಯಾಸಾಧ್ಯತೆಗಳನ್ನು ಆಳುವ ಮಂದಿ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಅಂಗೈಯೊಳಗಿನ ಮೊಬೈಲಿಗೆ ವಾಟ್ಸಾಪು, ಫೇಸ್ ಬುಕ್ಕು, ಟ್ವಿಟ್ಟರು, ಇತ್ಯಾದಿಗಳ ಮೂಲಕ ದ್ವೇಷ, ಕೋಮುಭಾವನೆ ಕೆರಳಿಸುವ, ವಿಷಕಾರುವ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ಧರ್ಮ, ರಾಷ್ಟ್ರಪ್ರೇಮವನ್ನು ನೆಪವಾಗಿಸುತ್ತಾ ವಿಕೃತ ಸಂತೋಷದಲ್ಲಿ ತೊಡಗಿದ್ದಾರೆ. ನಮ್ಮನ್ನೇ ಗ್ರೂಪುಗಳ ಆಡ್ಮಿನ್ ಮಾಡಿ, ನಾವೇ ಬಡಿದಾಡಿಕೊಂಡು ಸಾಯುವ ಹಾಗೆ ಮಾಡುತ್ತಿದ್ದಾರೆ. ನಮ್ಮ ಮನೆಯ ಒಲೆಯ ಬೆಂಕಿಯನ್ನು ಪಡಸಾಲೆವರೆಗೂ ವಿಸ್ತರಿಸಿ ಖುಷಿ ಪಡುತ್ತಿದ್ದಾರೆ. ನಾವಾದರೋ ಕಷ್ಟಪಟ್ಟು ಹುಡುಕಿದ ಹತ್ತಿಪ್ಪತ್ತು ವರುಷದ ಹಳೆಯ ಗೆಳೆಯರನ್ನು ಅನುಮಾನಸ್ಪದವಾಗಿ ನೋಡಲು ಶುರುಮಾಡಿದ್ದೇವೆ. ಯಾರೊಬ್ಬ ಸರ್ಕಾರದ ವಿರುದ್ಧವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ತೋಳಗಳಂತೆ ಮುಗಿಬೀಳುತ್ತೇವೆ. ಇವನ ಹಿಂದೆ ಎಂಥಾ ಅಸಹ್ಯ ಮುಖವಿದೆ ಎಂದು ಆಡಿಕೊಳ್ಳುತ್ತೇವೆ. ಇತ್ತೀಚೆಗೆ ಪ್ರಸ್ತುತ ರಾಜಕೀಯ ಸನ್ನಿವೇಷದ ಕಾರಣಗಳಿಗಾಗಿ ನಾನೂ ಆ ಒಬ್ಬನಾಗಿದ್ದೇನೆ. ಆದರೆ ನನಗೆ ಸಹ್ಯವಾಗದ ವಿಚಾರವನ್ನು ನಾನು ಏಕೆ ಒಪ್ಪಿಕೊಳ್ಳಬೇಕು? ಅನ್ಯಾಯ ಎನಿಸಿದಾಗ ಪ್ರತಿರೋಧ ತೋರದೆ ಹೇಗಿರಲಿ?
ಜರ್ಮನ್ ಕವಿ, ನಾಟಕಕಾರ, ಬರ್ಟೋಲ್ಟ್ ಬ್ರೆಕ್ಟ್ ಈ ಕುರಿತಾಗಿ ಹೇಳಿದ್ದನ್ನು ಇತ್ತೀಚೆಗೆ ಗೆಳೆಯ ಭಾರವಿ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು. ಅದನ್ನು ಇಲ್ಲಿ ಹಾಗೆಯೇ ಸುರುವಿದ್ದೇನೆ. -
ಅತಿ ಕೆಟ್ಟ ನಿರಕ್ಷರಸ್ಥ ಎಂದರೆ "ರಾಜಕೀಯ ನಿರಕ್ಷರಸ್ಥ". ಆತನಿಗೆ ಕೇಳಿಸುವುದಿಲ್ಲ, ಆತ ಮಾತನಾಡುವುದಿಲ್ಲ, ರಾಜಕೀಯ ಘಟನೆಗಳಲ್ಲಿ ಭಾಗವಹಿಸುವುದೇ ಇಲ್ಲ. ಬದುಕಿನ ಬೆಲೆ, ತರಕಾರಿ, ಮೀನು, ಹಿಟ್ಟು, ಬಾಡಿಗೆ, ಚಪ್ಪಲಿ, ಔಷಧಿಯ ಬೆಲೆ ಎಲ್ಲವೂ ರಾಜಕೀಯ ನಿರ್ಧಾರಗಳ ಮೇಲೆ ಅವಲಂಬಿಸಿವೆ ಎಂಬುದು ಆತನಿಗೆ ತಿಳಿದಿಲ್ಲ. ಈ ರಾಜಕೀಯ ನಿರಕ್ಷರಸ್ಥ ಎಷ್ಟೊಂದು ಮೂರ್ಖನೆಂದರೆ ತಾನು ರಾಜಕೀಯವನ್ನು ದ್ವೇಷಿಸುತ್ತೇನೆ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಾನೆ. ತನ್ನ ರಾಜಕೀಯ ಅಜ್ಞಾನದಿಂದಲೇ ವೇಶ್ಯೆ, ನಿರ್ಗತಿಕ ಮಗು, ಎಲ್ಲರಿಗಿಂತ ಕೆಟ್ಟ ಕಳ್ಳ, ಕೆಟ್ಟ ರಾಜಕಾರಣಿ, ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಭ್ರಷ್ಟ ಹಾಗೂ ಭಟ್ಟಂಗಿ ಹುಟ್ಟುತ್ತಾರೆ ಎಂದು ಈ ದಡ್ಡನಿಗೆ ತಿಳಿದಿಲ್ಲ.
No comments:
Post a Comment