Tuesday, 24 April 2018

ಕ್ರಿಸ್ತರ ಪೂಜ್ಯಪಾಡುಗಳ ಹಾಗೂ ಪುನುರುತ್ಥಾನ' ಮಹಿಮೆ ನಾಟಕ

ಈ ಬಾರಿ ಈ ಅಂಕಣದಲ್ಲಿ ಚಲನಚಿತ್ರದ ಬದಲು ನಾ ನೋಡಿದ, ನೋಡುತ್ತಲೇ ಬಂದಿರುವ ಒಂದು ನಾಟಕದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ನಾಟಕ ಎನ್ನುವುದಕ್ಕಿಂತ ಇದೊಂದು ಗ್ರಾಮದ ಧಾರ್ಮಿಕ, ಸಾಂಸ್ಕೃತಿಕ ಪ್ರತೀಕವಾಗಿ ನಡೆದುಕೊಂಡು ಬಂದಿದೆ . ಇತ್ತೀಚಿನ ವರ್ಷಗಳಲ್ಲಿನ ಜಾಗತೀಕ ಸರ್ವತೋಮುಖ ಬೆಳವಣಿಗೆ ಹಾಗೂ ಬದಲಾವಣೆಯ ಹಿನ್ನಲೆಯಲ್ಲಿ ನೋಡಿದಾಗ ಈ ನಾಟಕ ಈಗ ಹೆಚ್ಚಾಗಿ ಧಾರ್ಮಿಕ ಕ್ರಿಯೆಯಾಗಿಯೇ ಪ್ರಸ್ತುತವಾಗಿದೆ ಎಂದರೆ ತಪ್ಪಾಗಲಾರದು
ಹೌದು ನಾನು ಬರೆಯ ಹೊರಟಿರುವುದು ಹಾರೋಬೆಲೆಯ 'ಕ್ರಿಸ್ತರ ಪೂಜ್ಯಪಾಡುಗಳ ಹಾಗೂ ಪುನುರುತ್ಥಾನ' ಮಹಿಮೆ ನಾಟಕದ ಬಗ್ಗೆ. ಈ ಮಹಿಮೆ ನಾಟಕದ ಹಿನ್ನಲೆ, ಇತಿಹಾಸವನ್ನು ಹಲವಾರು ಲೇಖನಗಳಲ್ಲಿ ನಾವು ಈಗಾಗಲೇ ಓದಿದ್ದೇವಾದ್ದರಿಂದ ಅದರ ಬಗ್ಗೆ ಮತ್ತೆ ದೀರ್ಘವಾಗಿ ಬರೆಯುವ ಅಗತ್ಯವಿಲ್ಲವೆಂದೆನಿಸುತ್ತದೆ. ಚಿಕ್ಕದಾಗಿ ಹೇಳಬೇಕಾದರೆ ಬೆಂಗಳೂರು ಹತ್ತಿರದ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿಗೆ ಸೇರಿದ ಹಾರೋಬೆಲೆ ಗ್ರಾಮ ಕರ್ನಾಟಕದ ಧಾರ್ಮಿಕ, ಅದರಲ್ಲೂ ಕ್ರೈಸ್ತವಲಯದಲ್ಲಿ ತನ್ನ ಹೆಸರನ್ನು ಭದ್ರಪಡಿಸಿಕೊಳ್ಳಲು ಕಾರಣ ಈ ಮಹಿಮೆ ನಾಟಕ. ಇದೇ ಶುಭಶುಕ್ರವಾರದಂದು ಇದು ತನ್ನ ೧೧೩ನೆಯ ಪ್ರದರ್ಶನವನ್ನು ಕಂಡಿತು ಎಂಬುದು ಸೋಜಿಗದ ವಿಷಯವೇ. ಇತ್ತೀಚಿನ ವರ್ಷಗಳಲ್ಲಿ ಅನೇಕ ರೀತಿಯ ಸಾಧನೆಗಳಿಂದ ಎಲ್ಲಾರೀತಿಯಲ್ಲೂ ಸುದ್ದಿಯಲ್ಲಿದ್ದರೂ, ಊರಿನ ಹೆಜ್ಜೆ ಗುರುತುಗಳ ಮೂಲಬೇರು ಮಹಿಮೆ ನಾಟಕವೇ ಎಂದುಹೇಳಬಹುದು. 

ಈ ಮಹಿಮೆ ನಾಟಕವೆಂಬ ಕಾರ್ಯ ಇತ್ತೀಚಿನ ವರ್ಷಗಳಲ್ಲಿ ಅನೇಕ ಕಡೆ ನಡೆದುಕೊಂಡು ಬರುತ್ತಿದ್ದು, ಮರಿಯಾಪುರದ ಧ್ವನಿ ಬೆಳಕು ನಾಟಕವು ಮುಂಚೂಣಿಯಲ್ಲಿದೆ. ಆದರೂ ಇಂದಿಗೂ ತನ್ನ ಪುರಾತನ ನಾಟಕದ ಪಟ್ಟುಗಳನ್ನೇ ಬಳಿಸಿಕೊಂಡು ಉಳಿಸಿಕೊಂಡು ಬಂದಿರುವ ಹಾರೋಬೆಲೆಯ ಮಹಿಮೆ ನಾಟಕ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಅದಕ್ಕಿಂತ ಮುಖ್ಯವಾಗಿ ಈ ಆಧುನಿಕತೆಯ ಯುಗದಲ್ಲೂ ತನ್ನದೇ ಒಂದಷ್ಟು ಪ್ರೇಕ್ಷಕ ವರ್ಗವನ್ನು ಉಳಿಸಿಕೊಂಡು ಬಂದಿರುವ ಹಿಂದೆ ಕೆಲಸಮಾಡುತ್ತಿರುವುದು ಗ್ರಾಮದ ಜನರ ಅದೇ ಆಧ್ಯಾತ್ಮಿಕತೆ. 

ಈ ಮಹಿಮೆ ನಾಟಕ ತನ್ನ ನಿರೂಪಣೆಯ ದೃಷ್ಟಿಯಿಂದ ಈ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಒಂದಷ್ಟು ಮಾರ್ಪಾಡುಗಳನ್ನು ಕಂಡು ಕೊಳ್ಳಬೇಕೆಂಬ ಸಣ್ಣ ಕೂಗುಗಳಿದ್ದರೂ , ಅದರ ಸಾಹಿತ್ಯದ ದೃಷ್ಟಿಯಿಂದ ಬಹಳ ಎತ್ತರದಲ್ಲಿ ನಿಲ್ಲುತ್ತದೆ. ಈ ಮಹಿಮೆ ನಾಟಕದ ರಚನಾಕಾರರೆಂದೇ ಕರೆಸಿಕೊಂಡಿರುವ ಫಾ ಲಾಜರಸ್ ಹಾಗೂ ಇನ್ನಾಸಪ್ಪನವರ ಸಾಹಿತ್ಯ ಹಾಗೂ ಸಂಗೀತ ಅಭಿರುಚಿ ಇಲ್ಲಿ ಎತ್ತಿಕಾಣುವ ಅಂಶವಾಗಿದೆ. 

ಈ ಮಹಿಮೆ ನಾಟಕದಲ್ಲಿ ನನಗೆ ಬಹಳ ಮೆಚ್ಚುಗೆಯಾದ ಐದಾರು ದೃಶ್ಯಗಳನ್ನು ಈ ಲೇಖನದಲ್ಲಿ ತೆರೆದಿಡಲು ಪ್ರಯತ್ನಿಸುತ್ತೇನೆ. ಬೈಬಲ್ ಗ್ರಂಥವನ್ನು ಅಭ್ಯಸಿಸುವವರಿಗೂ ಈ ಮಹಿಮೆ ನಾಟಕ ಒಂದಷ್ಟು ಹೊಳಹುಗಳನ್ನು ನೀಡುವುದು ಸತ್ಯ. 

ನನ್ನ ನೆಚ್ಚಿನ ದೃಶ್ಯ - 1
ಯಾವುದೇ ಒಂದು ಪ್ರದರ್ಶನದ ಪ್ರಾರಂಭದ ದೃಶ್ಯಗಳು ಪುಳಕವನ್ನು ತರಬಲ್ಲದು. ಈ ಮಹಿಮೆ ನಾಟಕದ ಆರಂಭ ದೃಶ್ಯವೂ ಅದಕ್ಕೆಹೊರತಾಗಿಲ್ಲ. 
'ಯೇಸು ಹೃದಯ ದಾಸರ ಮೇಲೆ ನೀಡಿನಿಮ್ಮಾಶಿರ್ವಾದವ ದೋಷಭರಿತ ನಮ್ಮಗಳಿಗೆ ನೀಡಿ ನಿಮ್ಮವರವ’ ಎಂಬ ಪ್ರಾರಂಭ ಗೀತೆಯೊಡನೆ ನಾಟಕ ಪ್ರಾರಂಭವಾಗುತ್ತದೆ. ಯೇಸುವಿನ ಪ್ರತಿಮೆಯನ್ನು ವೇದಿಕೆಯ ನಡುವೆ ಇರಿಸಿ, ಎಲ್ಲಾ ಪಾತ್ರಧಾರಿಗಳು ಸುತ್ತನೆರೆದು ಕೈಯಲ್ಲಿ ಮೇಣದ ಬತ್ತಿ ಹಿಡಿದು ನಿಂತಿರುವ ದೃಶ್ಯವೇ ಸುಂದರ. ಯೇಸು ಪಾತ್ರಧಾರಿಯ ಪಕ್ಕದಲ್ಲೇನಿಂತ ಪಿಶಾಚಿ ಪಾತ್ರಧಾರಿ ಭಕ್ತಿಯಿಂದ ಸ್ತೋತ್ರದ ಹಾಡಿಗೆ ದನಿಗೂಡಿಸುವುದನ್ನೂ ಇಲ್ಲಿ ಕಾಣಬಹುದು. ಸ್ವಾಗತ ನೃತ್ಯಕ್ಕೆ ಅಣಿಯಾದ ಮಕ್ಕಳೂ ಅದೇ ಹಾಡಿಗೆ ದನಿಗೂಡಿಸಿ ’ದೃಷ್ಟಿಯಿಟ್ಟು ಕಾಪಾಡಿ ನೀವು ಭ್ರಷ್ಟರಾಗದಂತೆ ನಾವು’ ಎನ್ನುತ್ತಿರುವಾಗ ಪೇಕ್ಷಕವರ್ಗ ಚಾಪೆ ಸರಿಮಾಡಿಕೊಂಡು ಕುಳಿತು ನಾಟಕಕ್ಕೆಅಣಿಯಾಗುತ್ತದೆ. 
ಲೂಕನ ಶುಭಸಂದೇಶದ ಪ್ರಾರಂಭದಲ್ಲಿ ’ಸನ್ಮಾನ್ಯಥೆಯೋಫಿಲನೇ’ ಎಂದು ಪ್ರಾರಂಭವಾಗುವ ಪೀಠಿಕೆಯಂತೆ ಇಲ್ಲೂ ನಾಟಕದ ಪ್ರೇಕ್ಷಕರನ್ನು ಉದ್ದೇಶಿಸಿ ಒಂದು ಪೀಠಿಕೆ ಇದೆ. ದೇವದೂತರಂತೆ ವೇಷ ಧರಿಸಿದ ಬಾಲಕರು’ ಸಭೆಗೆಲ್ಲಾ ವಂದನೆ, ಶುಭವಾದ ಸ್ವಾಗತ ಎನ್ನುತ್ತಾ’ “ಈ ಸತ್ಯ ಪವಿತ್ರ ಚರಿತ್ರೆಯನ್ನು ನೋಡುವ ಜನರು ಸರ್ವೇಶ್ವರನ ಅನುಗ್ರಹಕ್ಕೆ ಪಾತ್ರರಾಗಲಿ” ಎನ್ನುತ್ತಾ ನಾಟಕಕ್ಕೆ ಹಾಡಿನ ಮೂಲಕ ಸ್ವಾಗತಿಸುವ ದೃಶ್ಯ ನನ್ನ ಅಚ್ಚುಮೆಚ್ಚಿನ ದೃಶ್ಯಗಳಲ್ಲಿ ಒಂದು. ಪ್ರಾರಂಭದ ಬೆಳಕು, ಧ್ವನಿ ವರ್ಧಕದ ಅವಾಂತರಗಳಿಂದ ಈ ದೃಶ್ಯ ಅಷ್ಟೊಂದು ಪರಿಣಾಮಕಾರಿಯಾಗಿ ಬರದೇ ಹೋಗುವುದು ರಸಭಂಗಕ್ಕೆ ಕಾರಣವಾಗುತ್ತದೆ. 

ನನ್ನ ನೆಚ್ಚಿನ ದೃಶ್ಯ - 2

ಯೇಸುವಿನ ಒಂದಷ್ಟು ಬೋಧನೆ ಹಾಗೂ ಅದ್ಭುತಗಳನೊಳಗೊಂಡ ದೃಶ್ಯಗಳ ನಂತರ ಬರುವುದು ಸೆನೆಡ್ರಿನ್ಸಭೆಯ ದೃಶ್ಯ. ಮಹಿಮೆ ನಾಟಕದಲ್ಲಿ ಈ ಸೆನೆಡ್ರಿನ್ಸಭೆಯ ದೃಶ್ಯಗಳು ಇಂದಿಗೂ ಜನಪ್ರಿಯ. ಮೈನವಿರೇಳಿಸುವಂಥ ಸಂಭಾಷಣೆ ಹಾಗೂ ಗೀತೆಗಳು ಈ ದೃಶ್ಯದ ವೈಶಿಷ್ಟ್ಯ. 
ಪ್ರಾರಂಭದಲ್ಲಿ ಮುಖ್ಯ ಯಾಜಕ ಕೈಪಾಸ್ ತನ್ನದೇ ಗುಣಗಾನ ಮಾಡಿಕೊಳ್ಳುವ ಗೀತೆಯಿಂದ ದೃಶ್ಯ ಪ್ರಾರಂಭವಾಗುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ರಾಗ, ಲಯ ಸಾಹಿತ್ಯದಿಂದ ಕೂಡಿರುವ ಈ ಹಾಡನ್ನು ಚಿಕ್ಕಚೊಕ್ಕದಾಗಿ ಬಳಸಿಕೊಂಡರೆ ರುಚಿ ಇನ್ನಷ್ಟುಹೆಚ್ಚುತ್ತದೆ. 
ಇದೇ ಮಾತನ್ನು ಮಹಿಮೆ ನಾಟಕದ ಅನೇಕಹಾಡುಗಳಿಗೂ ಹೇಳಬಹುದು. ಹಾಡು ಕೇಳುವ ಯಾವ ಸಾಧನಗಳು ಇಲ್ಲದ ಸಮಯದಲ್ಲಿ ರಚಿತವಾದ ಈ ಹಾಡುಗಳು ಅಂದಿನ ಕಾಲದಲ್ಲಿ ನಾಟಕದಂಥ ಪ್ರಕಾರಗಳಲ್ಲಿ ಮಾತ್ರ ಕೇಳಲು ಸಾಧ್ಯವಿತ್ತು. ಅದರಿಂದಲೇ ದೀರ್ಘವಾದ ಹಾಡುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಈಗಿನ ಕಾಲಕ್ಕೂ ಅದನ್ನು ಹಾಗೇ ಉಳಿಸಿಕೊಳ್ಳಬೇಕೇ ಎಂಬುದು ಚಿಂತನಾರ್ಹ. 
ಯೇಸುವನ್ನು ಕೊಲ್ಲುವ ಸಂಚಿಗಾಗಿಯೇ ಸಭೆ ಸೇರುವ ಸೆನೆಡ್ರಿನ್ ಯೇಸುವನ್ನು, ಅವರ ಬೋಧನೆಯನ್ನು ಖಂಡಿಸುವ ಭರದಲ್ಲೇ ಪ್ರೇಕ್ಷಕರ ಮುಂದೆ ಅವರ ದೈವತ್ವವನ್ನು, ಬೋಧನೆಯ ಸಾರವನ್ನು ತೆರೆದಿಡುವಂಥ ಜಾಣ್ಮೆ ಸಂಭಾಷಣೆಯಲ್ಲಿದೆ. ಇಲ್ಲಿ ಅಂದಿನ ಯಹೂದ್ಯರ ಯೇಸುವಿನ ಮೇಲಿನ ಅಸಹನೆ, ಕ್ರೋಧ, ಮತ್ಸರ ಭಾವವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಆದರಿಂದಲೇ ಇದು ನನ್ನಮೆಚ್ಚಿನ ದೃಶ್ಯವಾಗಿ ಉಳಿದುಕೊಂಡಿದೆ. 

ನನ್ನ ನೆಚ್ಚಿನ ದೃಶ್ಯ - 3
ಇದೇ ದೃಶ್ಯದ ಮುಂದಿನ ಭಾಗದಲ್ಲಿ ಕೈಪಾಸ್ ಹಾಗೂ ಆತನ ಮಗಳು ಜಾರಿಪೆ ಮುಖಾಮುಖಿಯಾಗಿ ಯೇಸುವಿನ ಪರಹಾಗೂ ವಿರುದ್ಧವಾಗಿ ಮಾತಾಡುವ ದೃಶ್ಯ ಬಹಳ ವಿಶಿಷ್ಟವಾದ ದೃಶ್ಯವಾಗಿದೆ . ಬಭೃವಾಹನ ಚಿತ್ರದಲ್ಲಿ ತಂದೆ ಮಗ ಎದುರಾಗಿ ನಿಂತು ಮಾತಿನ ಬಾಣಗಳನ್ನು ಕಂದಪದ್ಯದ ಮೂಲಕ ಸುರಿಸುವಂತೆ, ಇಲ್ಲಿ ತಂದೆ ಮಗಳ ವಾಕ್ಝರಿಯನ್ನು ಕಾಣಬಹುದು . ಯೇಸುವನ್ನು ಕೊಲ್ಲಬೇಡಿ ಎಂಬ ಮಗಳ ಮಾತಿಗೆ ಎದುರಾಗಿ ಕೊಂದೇತಿರುತ್ತೇನೆ ಎಂದು ಕೈಪಾಸ್ ಹೊರಟು ಹೋಗುವುದರ ಮೂಲಕ ದೃಶ್ಯ ಮುಗಿಯುತ್ತದೆ. ಇಲ್ಲಿಯವರೆಗೂ ತಮ್ಮ ಧರ್ಮಶಾಸ್ತ್ರಕ್ಕೆ, ತಮ್ಮ ಆಚರಣೆಗೆ , ವೇದಕ್ಕೆ, ಯಹೂದ್ಯರ ಮೇಲ್ಮೆಗೆ ಅಡ್ಡಿಯಾಗಿದ್ದ ಯೇಸು, ಈಗ ತನ್ನ ಮನೆಯ ಮಗಳನ್ನೇ ಮರಳು ಮಾಡಿದ್ದಾನೆ ಎಂಬ ಕೈಪಾಸನ ಕೋಪ ಇಲ್ಲಿ ಕಾಣಿಸುತ್ತದೆ. 
ಇಲ್ಲಿ ಬಳಕೆಯಾಗಿರುವ ಹಾಡುಗಳು ಬಹಳ ಸುಂದರ ಹಾಗುಪ್ರಯೋಗಾತ್ಮಕವಾಗಿದೆ. ಜಾರಿಪೆ ಹಾಡುವ ಈ ಸಾಲುಗಳನ್ನೇ ಗಮನಿಸಿ -

'ತಂದೆ ಆತುರಗೊಳ್ಳಲು ಬೇಡಿ


ಪಾತಕ ಬರುವುದು


ಯಾತಕೆ ನೀವ್ಗಳು ಘಾತಕರಾಗಿ


ಪಾತಕವನ್ನುಗಳಿಸುವಿರಿ


ನೀತಿಯ ನೋಡಿ ಪ್ರೀತಿಯತಾಳಿ


ಸಾರ್ಥಕವಾಗವುದು ನೋಡಿ ತಂದೆ ' 

ಈ ಹಾಡಿನ ಬಹುತೇಕ ಪದಗಳ ಎರಡನೆಯ ಅಕ್ಷರದಲ್ಲಿ 'ತ' ಬಳಕೆಯಾಗಿರುವುದರಿಂದ ಹಾಡಿಗೊಂದು ಪ್ರಾಸ, ಲಯ ದೊರಕಿ ಕಂಠಪಾಠಕ್ಕೆಸುಲಭವಾಗಿದೆ. 
ಕೊನೆಗೆ ನನ್ನಿಂದಲೇ ನನ್ನ ತಂದೆಯ ರೋಷ ಹೆಚ್ಚಾಯಿತೇನೋ ಎಂಬಂತೆ
'ಹಾನಿಯು ಒದಗಿತು ಏನುನಾಮಾಡಲಿ
ನೀನೇ ಸತ್ಯ ದೇವನೆಂದು ನಾನೇ ಆರಿಯುವೆ ಎನ್ನುವ ಮಾತಿನಿಂದ ಈ ದೀರ್ಘವಾದ ದೃಶ್ಯದ ಮುಗಿಯುತ್ತದೆ. 

ನನ್ನ ನೆಚ್ಚಿನ ದೃಶ್ಯ - 4
ಯೇಸು ಜೆರುಸಲೇಮ್ ನಗರವನ್ನು ಪ್ರವೇಶಿಸುವದರಿಂದ ಹಿಡಿದು ಗೆತ್ಸೆಮಣಿ ತೋಪಿನಲ್ಲಿ ಬಂಧಿತರಾಗುವ ತನಕದ ದೃಶ್ಯಗಳು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಹಿಡಿದಿಡುವಂತೆ ಮಾಡುತ್ತವೆ. ಯೇಸು ಜೆರುಸಲೇಮ್ ನಗರವನ್ನು ಪ್ರವೇಶಿಸುವುದು, ಅಲ್ಲಿನ ಮಹಾದೇವಾಲಯದ ವರ್ತಕರನ್ನು ಓಡಿಸುವುದು, ಜುದಾಸ್ ಅದೇ ವರ್ತಕರೊಂದಿಗೆ ಸೇರಿ ಸೇನೆಡ್ರಿನ್ ಸಭೆಗೆ ಬಂದು ಮೂವತ್ತು ಬೆಳ್ಳಿನಾಣ್ಯಗಳಿಗೆ ಯೇಸುವನ್ನು ತೋರಿಸಲು ಒಪ್ಪುವುದು, ಕೊನೆಯ ಭೋಜನ, ಗೆತ್ಸೆಮನಿ ತೋಪಿನಲ್ಲಿ ಮರಣಭಯದಿಂದ ಅಳುಕಿದರು ಯೇಸು ದಿಟ್ಟವಾಗಿ ನಿಲ್ಲುವುದು, ಇದೆಲ್ಲವೂ ಬಹಳ ಮನೋಜ್ಞವಾಗಿ ಮೂಡಿಬರುತ್ತದೆ. ಸುಂದರವಾದ ಹಾಡುಗಳು ಈ ದೃಶ್ಯದಲ್ಲಿಕಾಣಸಿಗುತ್ತದೆ
ಮಕ್ಕಳ ಹೊಸಾನ್ನ ಹಾಡಿನ ನಡುವೆ ಯೇಸು ನಡೆದುಕೊಂಡು ಬರುವ ದೃಶ್ಯ ಮನಮೋಹಕ. ಸೆನೆಡ್ರಿನ್ ಸಭೆಯ ಮುಂದೆ ಜುದಾಸ್ ತನ್ನ ಅಳಲನ್ನು ಹೇಳುವ ಹಾಗೂ ಕೈಪಾಸ್ ಸೈನಿಕರಿಗೆ ತೆರಳಿ ಸೈನವೇ ಬೇಗ ಹೋಗಿರಿ ಎಂದು ಹಾಡುವ ಹಾಡುಗಳು ಈ ದೃಶ್ಯಗಳ ಹೈಲೈಟ್. ಪಾದ ತೊಳೆಯುವಾಗ ಹಾಗೂ ಗೆತ್ಸೆಮನೀ ತೋಪಿನಲ್ಲಿ ಹಾಡುವ ಹಾಡುಗಳು ಕರುಣಾರಸದಿಂದ ಕೂಡಿದ್ದರೆ, ಪೇತ್ರ ಸೈನಿಕರನ್ನು ಎದುರಿಸುವ ಹಾಡು ರೌದ್ರರಸದಿಂದ ಕೂಡಿದೆ. 
ಮುಂದೆ ಯೇಸು ಬಂಧಿತರಾಗಿ ಸೇನೆಡ್ರಿನ್ ಸಭೆಯ ಮುಂದೆ ಬಂದಾಗ ನಡೆಯುವ ದೃಶ್ಯಗಳು ರೋಚಕವಾಗಿ ಕಂಡರೆ, ಪಿಲಾತ ಹಾಗೂ ಹೆರೋದರಾಜನ ಮುಂದೆ ನಿಲ್ಲುವ ಯೇಸುವಿನ ದೃಶ್ಯಗಳು ಕನಿಕರ ಹುಟ್ಟಿಸುತ್ತದೆ. ಶಿಲುಬೆಯ ಹಾದಿಯ ದೃಶ್ಯಗಳಂತೂ ಶೋಕರಸದಲ್ಲಿ ಅದ್ದಿ ತೆಗೆದಂಥ ಪರಿಣಾಮ ಬೀರುತ್ತದೆ. ಈ ನಡುವೆ ಸ್ಥಳೀಯ ಕಾರ್ಯಗಳಲ್ಲಿ ಬಳಕೆಯಾಗುವ ತಮಟೆಸದ್ದು ಈ ನಾಟಕದಲ್ಲಿ ಒಂದು ಪಾತ್ರವೇ ಆಗಿ ನಾಟಕದ ಕೊನೆಯ ಮೂರೂ ಗಂಟೆಯಲ್ಲಿ ತನ್ನದೇ ಆದ ಮಹತ್ವವನ್ನುಪಡೆಯುವ ಪರಿಯನ್ನು ಮುಂದಿನ ಸಂಚಿಕೆಯಲ್ಲಿ ಮುಂದುವರಿಸುತ್ತೇನೆ.


¨ ಪ್ರಶಾಂತ್ ಇಗ್ನೇಷಿಯಸ್- 











No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...