ಡಾ. ದಿನೇಶ್ ನಾಯಕ್
ಕಳೆದ ಐದು ವರ್ಷಗಳ ಕಾಲ ಈ ದೇಶವನ್ನು ಆಳಿದ ಬಿಜೆಪಿ ಆಡಳಿತದ ರಾಜನೀತಿ ಮತ್ತು ಆರ್ಥಿಕ ನೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ವಾದ-ವಾಗ್ವಾದಗಳು ಈ ದೇಶದಾದ್ಯಂತ ನಡೆದಿದ್ದು, ಇದೀಗ ಮತ್ತೆ ಬಿಜೆಪಿ ಮುಂದಾಳತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ. ಚುನಾವಣಾ ಫಲಿತಾಂಶಕ್ಕಿಂತ ಮೊದಲೇ ನಡೆದ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟದ ದಿಗ್ವಿಜಯದ ಬಗ್ಗೆ ಎಲ್ಲ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದಂತೆ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ ಏರಿಕೆ ಕಂಡುಬರಲು ಶುರುವಾಯಿತು. ಮತಎಣಿಕೆ ಆರಂಭಗೊಂಡು, ನಿಜ ಫಲಿತಾಂಶ ಹೊರಬೀಳುತ್ತಿದ್ದಂತೆ ಷೇರುಪೇಟೆಯ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಗೂಳಿಯ ನಾಗಾಲೋಟ ಆರಂಭಗೊಂಡಿತ್ತು. ನರೇಂದ್ರ ಮೋದಿಯವರ ಗೆಲುವಿನಿಂದಾಗಿ ವಿಶ್ವದ 6ನೇ ಅತಿದೊಡ್ಡ ಎಂದು ಹೇಳಲಾಗುತ್ತಿರುವ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಈಗಾಗಲೇ ಒಂದು ಬಗೆಯ ಸಂಚಲನ ಉಂಟಾಗಿದ್ದು, ಮುಂದೆ ಪ್ರಗತಿಗೆ ವೇಗ ದೊರೆಯಲಿದೆ ಎಂದು ಕಾರ್ಪೊರೇಟ್ ಬಳಗ ಗುಸುಗುಸು ಮಾತನಾಡತೊಡಗಿತು. ಮತ್ತೆ ಮೋದಿ ಸರ್ಕಾರ ಎಂಬುದು ಕಾರ್ಪೊರೇಟ್ ಜಗತ್ತಿನಲ್ಲಿ ಹರ್ಷೋಲ್ಲಾಸ ತಂದ ಈ ಹೊತ್ತಲ್ಲಿ ಈಗ ಮತ್ತೆ ದೇಶದ ರಾಜಕೀಯ ಪಂಡಿತರು, ಆರ್ಥಿಕ ವಿಶ್ಲೇಷಣೆಕಾರರು, ರಾಜಕೀಯ ವಿಜ್ಞಾನಿಗಳು ಮತ್ತು ಸಮಾಜ ವಿಜ್ಞಾನಿಗಳು ದೇಶದ ಆರ್ಥಿಕ ನೀತಿ ಮತ್ತು ಸುಧಾರಣೆಗಳ ಬಗ್ಗೆ ಬಿರುಸಿನಿಂದ ಮಾತನಾಡತೊಡಗಿದ್ದಾರೆ.
ಈ ದೇಶದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ 5 ವರ್ಷಗಳ ಕಾಲದ ಮೋದಿ ಸರ್ಕಾರದ ನಡೆಗಳು ಮತ್ತು ಮುಂದೆ ಅವರು ಕ್ರಮಿಸಬಹುದಾದ ದಾರಿ ಅಥವಾ ಮೋದಿಪೂರ್ವದ ಸರಕಾರಗಳ ನೀತಿಗಳ ಬಗ್ಗೆ ನ್ಯಾಯತೀರ್ಮಾನದ ನೆಲೆಯಲ್ಲಿ ತೀರ್ಪನ್ನು ಮುಂದಿಡುವ ಮೊದಲು ಒಟ್ಟು ಆರ್ಥಿಕ ನೀತಿಗಳ ಬಗ್ಗೆ ಒಂದೆರಡು ಅಂಶಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಪಶ್ಚಿಮದ ದೇಶಗಳಲ್ಲಿ ಮುಕ್ತ ಮಾರುಕಟ್ಟೆ ನೀತಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವಾತ್ಮಕ ಆರ್ಥಿಕ ನೀತಿ ಎಂಬ ಎರಡು ರೀತಿಯ ಆರ್ಥಿಕ ನೀತಿಗಳಿವೆ. ಮತ್ತು ಈ ಎರಡು ನೀತಿಗಳನ್ನು ಪ್ರತಿಪಾದಿಸುವ ಬೇರೆ ಬೇರೆ ಪಕ್ಷಗಳು ಇಂದು ಪಶ್ಚಿಮದ ರಾಷ್ಟ್ರಗಳಲ್ಲಿ ಇವೆ. ಮುಕ್ತ ಮಾರುಕಟ್ಟೆ ಆರ್ಥಿಕ ನೀತಿ, ಸರಕು ಸೇವೆಗಳ ಪೂರೈಕೆಯನ್ನು ಹೆಚ್ಚಿಸುವ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಭಾವಿಸಿದರೆ, ಸಾಮಾಜಿಕ ಪ್ರಜಾಪ್ರಭುತ್ವಾತ್ಮಕ ನೀತಿಯು ಜನರ ಮೂಲಭೂತ ಆವಶ್ಯಕತೆಗಳಾದ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಇವುಗಳನ್ನು ಸುಧಾರಿಸುತ್ತಾ ದೇಶವನ್ನು ಅಭಿವೃದ್ಧಿಗೊಳಿಸಬಹುದು ಎಂದು ತಿಳಿಯುತ್ತದೆ. ಭಾರತದಲ್ಲಿ ಕಾಂಗ್ರೆಸ್ ತನ್ನನ್ನು ತಾನು ಸಾಮಾಜಿಕ ಪ್ರಜಾಪ್ರಭುತ್ವಾತ್ಮಕ ಆರ್ಥಿಕ ನೀತಿಯ ಪರ ಎಂದು ಹೇಳುತ್ತಾ ಬಂದಿದೆ. ಹಾಗೆಯೇ ಬಿಜೆಪಿ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನು ಪ್ರಬಲವಾಗಿ ನೆಚ್ಚಿದೆ. ಆದರೆ ತಮ್ಮ ರಾಜನೀತಿಯಲ್ಲಿ ಯಾವಾಗಲೂ ಗೊಂದಲ ಮತ್ತು ಎಡೆಬಿಡಂಗಿತನವನ್ನು ಪ್ರದರ್ಶಿಸುತ್ತಾ ಬರುತ್ತಿರುವ ಈ ಪಕ್ಷಗಳು ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಕೂಡಾ ಅದೇ ರೀತಿಯಲ್ಲಿ ವರ್ತಿಸಿವೆ. ಅಭಿವೃದ್ಧಿ ಹಾಗೂ ರಾಜಕೀಯ ಚಿಂತಕರಾದ ಡಾ. ಎಂ. ಚಂದ್ರ ಪೂಜಾರಿಯವರು ತಮ್ಮ `ನಿಯೋಲಿಬರಲ್ ಅಭಿವೃದ್ಧಿ' ಎಂಬ ಪುಸ್ತಕದಲ್ಲಿ ಸರಿಯಾಗಿಯೇ ಹೇಳುವಂತೆ, ಈ ಎರಡೂ ಪಕ್ಷಗಳೂ ಪ್ರತೀಬಾರಿಯೂ ವಿರೋಧಪಕ್ಷದಲ್ಲಿದ್ದಾಗ ಒಂದು ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಾ, ಅಧಿಕಾರಕ್ಕೆ ಬಂದಾಗ ಮತ್ತೊಂದು ರೀತಿಯಲ್ಲಿ ಕಾರ್ಯವೆಸಗುತ್ತಾ ಬಂದಿವೆ. ಹಾಗಾಗಿ ವಿರೋಧಪಕ್ಷದಲ್ಲಿದ್ದಾಗ ಬಿಜೆಪಿ ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ, ಸರಕು ಸೇವೆಗಳ ತೆರಿಗೆ ಜಾರಿಗೊಳಿಸುವುದರ ಬಗ್ಗೆ, ಇಂಧನಗಳ ಬೆಲೆಯಲ್ಲಿನ ಸಬ್ಸಿಡಿಗೊಳಿಸುವುದರ ಬಗ್ಗೆ, ಉದ್ದಿಮೆಗಳಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪೂರೈಕೆ ಮಾಡುವುದರ ಬಗ್ಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದರೂ ತಾನು ಅಧಿಕಾರಕ್ಕೆ ಬಂದು ಆಳ್ವಿಕೆ ನಡೆಸಿದ ಕಳೆದ 5 ವರ್ಷಗಳಲ್ಲಿ ಅದು ಅನುಸರಿಸಿದ ಆರ್ಥಿಕ ನೀತಿ ಮಾತ್ರ ಸಂಪೂರ್ಣ ಬಂಡವಾಳಪರ ಆರ್ಥಿಕ ನೀತಿಯಾಗಿದೆ. ಈ ಬಗೆಯ ಬಂಡವಾಳಪರ, ಮಾರುಕಟ್ಟೆಪರ ಆರ್ಥಿಕ ನೀತಿಯನ್ನು `ನವ ಉದಾರವಾದಿ ಅಭಿವೃದ್ಧಿ ಆರ್ಥಿಕ ನೀತಿ'ಯೆಂಬುದಾಗಿ ಅರ್ಥಶಾಸ್ತ್ರಜ್ಞರು, ಆರ್ಥಿಕ ತಜ್ಞರು, ಅಭಿವೃದ್ಧಿ ಹಾಗೂ ರಾಜಕೀಯ ಚಿಂತಕರನೇಕರು ಗುರುತಿಸುತ್ತಾರೆ.
20ನೆಯ ಶತಮಾನದ ಸಮಾಜವಾದ ಮತ್ತು ಕೇನ್ಸನ ಆರ್ಥಿಕ ಮಾದರಿಗಳನ್ನು ನಿರಾಕರಿಸುತ್ತಾ ಮುಕ್ತ ಮಾರುಕಟ್ಟೆ ಮತ್ತು ಬಂಡವಾಳವಾದದ ಸಿದ್ಧಾಂತವನ್ನು ಮುನ್ನೆಲೆಗೆ ತಂದ ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ಸೆಪ್ಟೆಂಬರ್ವಾನ್ ಹಯೇಕ್ ಅವರು ಮಾರುಕಟ್ಟೆ ಪರವಾಗಿರುವ ನಿಯೋ ಲಿಬರಲ್ ಆರ್ಥಿಕತೆಯನ್ನು ಬಲವಾಗಿ ಸಮರ್ಥಿಸಿದವರು. 1920ರ ಬ್ರಿಟಿಷ್ ಆರ್ಥಿಕ ಕುಸಿತದ ಬಳಿಕ ಆರ್ಥಿಕ ಸ್ಥಿರತೆ ಮತ್ತು ದೇಶದ ಪ್ರಗತಿಯ ದೃಷ್ಟಿಯಿಂದ ಸಾರ್ವಜನಿಕ ಹೂಡಿಕೆಗಿಂತ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚು ಲಾಭದಾಯಕವಾದುದು ಎಂದುವಾದಿಸಿದ ಹಯೇಕ್ ಅವರು ಈ ಮೂಲಕ ನವ ಉದಾರವಾದೀ ಆರ್ಥಿಕ ನೀತಿಗೆ ಚಾಲನೆ ನೀಡಿದರು. ಆದರೆ ಇತ್ತೀಚೆಗೆ ಖ್ಯಾತ ಯುವ ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿಯವರು ತಮ್ಮ ಆರ್ಥಿಕ ಸಿದ್ಧಾಂತದಲ್ಲಿ ನಿಯೋ ಲಿಬರಲ್ ಆರ್ಥಿಕ ನೀತಿಯಲ್ಲಿ ಹೇಗೆ ಸರಕಾರೀ ಸಂಸ್ಥೆಗಳು ನಿಯಂತ್ರಣಕ್ಕೊಳಗಾಗಿ ಖಾಸಗಿ ಹೂಡಿಕೆದಾರರ ಪಾರಮ್ಯ ಹೆಚ್ಚಾಗಿ ತಾವು ಮತ್ತು ತಮ್ಮ ಪಾಲುದಾರರು ಹೆಚ್ಚು ಲಾಭವನ್ನು ಪಡೆಯುವಂತೆ ವ್ಯವಹಾರವನ್ನು ನಡೆಸುತ್ತಾರೆ. ಮತ್ತು ಇವರು ತಮ್ಮ ಕಾರ್ಮಿಕರಿಗೆ ಇದರಲ್ಲಿ ಏನೇನೂ ಪಾಲು ನೀಡದಿರುವ ಕಾರಣ ಈ ವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆ ಉಂಟಾಗುತ್ತದೆ ಎಂದು ತೋರಿಸಿಕೊಟ್ಟು ಹೇಯಕ್ನ ನಿಯೋ ಲಿಬರಲ್ ಆರ್ಥಿಕ ನೀತಿಯ ಬಗ್ಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಬಿಜೆಪಿ ಅನುಸರಿಸುತ್ತಾ ಬಂದಿರುವ `ನಿಯೋಲಿಬರಲ್ ಅಭಿವೃದ್ಧಿ ನೀತಿ' ಆರ್ಥಿಕ ವ್ಯವಸ್ಥೆಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಎಲ್ಲವೂ ಸೇರಿ ಒಂದಕ್ಕೊಂದು ಸಹಾಯ ಮಾಡುವಂತೆ ಅವು ಕಾರ್ಯನಿರ್ವಹಿಸುತ್ತವೆ. ಹಾಗೆ ನೋಡಿದರೆ ಈ ಆರ್ಥಿಕ ನೀತಿ ಮೋದಿ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜಾರಿಗೆ ಬಂದಿರುವಂಥಾದ್ದು ಎಂದು ಹೇಳುವಂತಿಲ್ಲ. 1991ರಲ್ಲಿ ಮುಕ್ತ ಮಾರುಕಟ್ಟೆ ನೀತಿಯನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಂಡ ಪಿ ವಿ ನರಸಿಂಹ ರಾವ್ ಅವರ ಕಾಂಗ್ರೆಸ್ ಸರಕಾರದಿಂದ ಇದು ಆರಂಭಗೊಂಡಿತ್ತು. ಕಾಂಗ್ರೆಸ್ ಆರ್ಥಿಕ ನೀತಿಯಲ್ಲಿ ತಾನು ಭಾಜಪಕ್ಕಿಂತ ಭಿನ್ನ ಎಂದು ಎಷ್ಟೇ ಹೇಳಿದರೂ ಅದು ವಿರೋಧಪಕ್ಷದಲ್ಲಿದ್ದಾಗಿನ ಮಾತಾಗಿ ಮಾತ್ರ ಉಳಿಯುತ್ತಿತ್ತು. ಈ ಆರ್ಥಿಕ ನೀತಿ ಕಾಂಗ್ರೆಸ್ ಸರಕಾರದಿಂದ ತೊಡಗಿ ಹಂತಹಂತವಾಗಿ ಬೆಳೆದು ಬಂದು ಇದೀಗ ಮೋದಿಯವರ ರಾಜ್ಯಭಾರದಲ್ಲಿ ಭೂತಾಕಾರವಾಗಿ ಬೆಳೆದು ನಿಂತಿದೆ. ಹಾಗಾಗಿ ಇಂದು ಎಚ್ಎಎಲ್, ಬಿಇಎಮ್ಎಲ್ ಬಿಎಸ್ಎನ್ಎಲ್, ಬ್ಯಾಂಕಿಂಗ್ ಕ್ಷೇತ್ರ, ವಿಮಾಕ್ಷೇತ್ರ, ವಿಮಾನ ನಿಲ್ದಾಣಗಳು, ರೈಲ್ವೆ ವಿಭಾಗ, ಶಿಕ್ಷಣ, ಆರೋಗ್ಯ, ಸಾರಿಗೆ-ಸಂಪರ್ಕ - ಹೀಗೆ ಪ್ರತಿಯೊಂದು ಸಾರ್ವಜನಿಕ ಉದ್ದಿಮೆಗಳು ಅಪಾಯದಲ್ಲಿವೆ. ಎಲ್ಲವೂ ಇಂದು ಅಥವಾ ನಾಳೆ ಖಾಸಗಿ ಧನಿಗಳ ಕೈವಶವಾಗುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಭಾರತದ ಈಗಿನ ಎಲ್ಲ ಕಾರ್ಪೊರೇಟ್ ಉದ್ದಿಮೆದಾರರ ಹೆಸರನ್ನು ನಾವು ಗಮನಿಸಿದರೆ ಅವರು ಯಾರೂ ಒಮ್ಮೆಲೇ ರಾತೋರಾತ್ರಿ ಕಾಣಿಸಿಕೊಂಡವರಲ್ಲ. ಇವರೆಲ್ಲರ ಏಳ್ಗೆಯಲ್ಲಿ ನರಸಿಂಹರಾವ್ ಅವರಿಂದ ಹಿಡಿದು ಮನಮೋಹನ್ ಸಿಂಗ್ವರೆಗೆ ಪಾಲು ಇದೆ. ಆದರೆ ಗಮನಿಸಬೇಕಾದದ್ದು ಏನೆಂದರೆ ಮೋದಿ ಪೂರ್ವದ ಖಾಸಗೀಕರಣ ಪ್ರಕ್ರಿಯೆಗೂ ಇವತ್ತಿನ ಕಾರ್ಪೊರೇಟ್ ಶಕ್ತಿಗಳ ಪಾರಮ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೋದಿ ಪೂರ್ವದ ನವ ಉದಾರವಾದದಲ್ಲಿ ವ್ಯಾಪಾರ-ವಹಿವಾಟುಗಳಿಗೆ ಸಂಬಂಧಿಸಿದಂತೆ ಔದಾರ್ಯದ ಜೊತೆಗೆ ಸರಕಾರದ ನಿಯಂತ್ರಣವೂ ಖಾಸಗಿ ಧನಿಗಳ ಮೇಲೆ ಇತ್ತು. ಆದರೆ `ಕನಿಷ್ಠ ಸರಕಾರ ಗರಿಷ್ಠ ಆಡಳಿತ' ಎಂದು ಹೇಳುತ್ತಾ, ಉದ್ಯಮ ನಡೆಸುವುದು ಉದ್ದಿಮೆದಾರರ ಕೆಲಸ ಎಂದು ಭಾವಿಸುವ ಮೋದಿಯವರ ಕಾಲದ ನವ ಉದಾರವಾದೀ ಆರ್ಥಿಕ ನೀತಿಯಲ್ಲಿ ಎಲ್ಲವನ್ನೂ ಕಾರ್ಪೊರೇಟ್ ಒಡೆಯರೇ ನಿಯಂತ್ರಿಸುತ್ತಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ. ತಮಗೆ ಸಿಕ್ಕ ಅಪಾರವಾದ ಪ್ರಾಮುಖ್ಯತೆಯಿಂದಾಗಿ ಅಂಬಾನಿ, ಅದಾನಿಯಂಥವರು ಈ ದೇಶದಲ್ಲಿ ಭದ್ರವಾಗಿ ಬೇರೂರಲು ಸಾಧ್ಯವಾಗಿದೆ. ಹಾಗಾದರೆ ಜನಸಾಮಾನ್ಯರನ್ನು ಮೇಲಕ್ಕೆತ್ತುವವರು ಯಾರು? ಚುನಾವಣೆಯ ಸಂದರ್ಭದಲ್ಲಿ ಬಡತನ ನಿರ್ಮೂಲನೆಯ ಬಗ್ಗೆ ಜನರ ಮುಂದೆ ಮಾತಾಡುವ ಸರಕಾರ ಬಳಿಕ ಬಡವರನ್ನು ಮೇಲೆತ್ತುವ ಪರಿಣಾಮಕಾರಿಯಾದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಎನ್ಡಿಎ ಸರಕಾರ ಕಳೆದ 5 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಅವರ ಕಣ್ಣಿಗೆ ಮಣ್ಣೆರಚುವಂಥಾ ಕೆಲವೊಂದು ಸಣ್ಣ ಪುಟ್ಟ ಯೋಜನೆಗಳನ್ನಷ್ಟೇ ಜಾರಿಗೆ ತಂದಿದೆ. ಹಾಗಾಗಿ ಇಲ್ಲಿ ಬಡವರು ದ್ವೀಪವಾಗಿ ಬಿಟ್ಟಿದ್ದಾರೆ. ತಾವು ಬದುಕುವ ನಾಡಿನಲ್ಲೇ ಅಘೋಷಿತ ಆರ್ಥಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಹಾಗಾಗಿ ಪ್ರಖ್ಯಾತ ವಿದ್ವಾಂಸರಾದ ನೋಮ್ ಚೋಮ್ಸ್ಕಿ ಅವರು ಹೇಳುವಂತೆ, ನಿಯೋ ಲಿಬರಲಿಸಂ ನಾಗರಿಕರಿಗೆ, ಜನಸಾಮಾನ್ಯರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಿಲ್ಲ. ಬದಲಾಗಿ ಇಲ್ಲಿ ಕೊಳ್ಳುಬಾಕ ಸಂಸ್ಕೃತಿ ಅಧಿಕಗೊಂಡು, ಜನರು ಸುಖವನ್ನು ಅರಸುತ್ತಾ, ಅರಸುತ್ತಾ, ಆತ್ಮವಿಶ್ವಾಸವನ್ನು ಕಳೆದುಕೊಂಡು, ನಿರಾಸಕ್ತರಾಗುತ್ತಾರೆ ಮತ್ತು ನಿರುಪಯುಕ್ತರಾಗುತ್ತಾರೆ. ಛಿದ್ರಗೊಂಡ ಸಮಾಜ ಸೃಷ್ಟಿಯಾಗುತ್ತದೆ. ಹಾಗಾಗಿ ದೇಶದ ಸಮಸ್ತರನ್ನು ಒಳಗೊಂಡ, ಅವರ ಸಹಭಾಗಿತ್ವವಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ನಿಯೋ ಲಿಬರಲ್ ಆರ್ಥಿಕ ನೀತಿ ದೊಡ್ಡ ಶತ್ರುವಾಗಿದೆ.
ನವ ಉದಾರವಾದೀ ಆರ್ಥಿಕ ತತ್ತ್ವದಲ್ಲಿ ಒಂದು ಸರಳ ಮೇಲ್ಪದರದ ತರ್ಕವಿದೆ. ಅದೇನೆಂದರೆ ಸರಕು ಸೇವೆಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಏರಿಕೆಯಾದರೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಸರಕುಗಳು ದೊರೆಯುತ್ತವೆ, ಇದರಿಂದ ಬಡತನ ನಿವಾರಣೆಯಾಗುತ್ತದೆ, ಜೊತೆಗೆ ನಿರುದ್ಯೋಗ ಓಡಿ ಹೋಗುತ್ತದೆ. ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಇದರಿಂದ ಸಮಷ್ಟಿಗೆ ಒಳ್ಳೆಯದಾಗುತ್ತದೆ. ದೇಶ ಅಭಿವೃದ್ಧಿಯಾಗುತ್ತದೆ. ಆದರೆ ಮೋದಿಯವರು ಅಂದುಕೊಂಡಂತೆಯೇ ಎಲ್ಲವೂ ಆಗಿಬಿಟ್ಟಿದೆಯೇ ಎಂದು ಕೇಳಿದರೆ ಇಲ್ಲ, ಹಾಗಾಗಲಿಲ್ಲ. ವಾಸ್ತವ ಬೇರೆಯೇ ಇದೆ. ಈ ಆರ್ಥಿಕ ನೀತಿಯಿಂದ ಬಡತನ ಕಡಿಮೆ ಆಗಲಿಲ್ಲ. ನಿರುದ್ಯೋಗ ನಿವಾರಣೆ ಆಗಲಿಲ್ಲ. ಸ್ವಲ್ಪ ಮಟ್ಟಿಗೆ ಅಸಂಘಟಿತ ಉದ್ಯೋಗಿಗಳು ಹೆಚ್ಚಾಗಿದ್ದಾರೆ. ಅನುಕೂಲಸ್ಥರು ಕಟ್ಟಬೇಕಾದ ನೇರ ತೆರಿಗೆಯೂ ಇಲ್ಲಿ ಹೆಚ್ಚಾಗಲಿಲ್ಲ. ಬದಲಾಗಿ ಬಡವರು ಕಟ್ಟಿದ ಪರೋಕ್ಷ ತೆರಿಗೆ ಮಾತ್ರ ಹೆಚ್ಚಾಗಿದೆ.
ಹಾಗಿದ್ದರೆ ಪ್ರಯೋಜನವಾದದ್ದು ಯಾರಿಗೆ ಎಂದರೆ ಕಾರ್ಪೊರೇಶನ್ಗಳಿಗೆ. ಹಾಗಾಗಿ ನಮ್ಮ ದೇಶದ ಕಾರ್ಪೊರೇಟ್ಸ್ಗಳಿಗೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು. ನಿಜದಲ್ಲಿ ನೋಡಿದರೆ ಕೆಲವು ಕಾರ್ಪೊರೇಶನ್ಗಳೇ ಈ ದೇಶವನ್ನು ಆಳುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ರಿಲಯನ್ಸ್, ಟಾಟಾ, ಎಸ್ಸಾರ್, ಇನ್ಫೋಸಿಸ್ ಮೊದಲಾದ ಕಾರ್ಪೊರೇಶನ್ಗಳು ಅಮೆರಿಕಾ ಮೂಲದ ರಾಕ್ ಫೆಲ್ಲರ್ ಮತ್ತು ಫೋರ್ಡ್ ಫೌಂಡೇಶನ್ಸ್ಗಳಂತೆ ಕೆಲಸ ಮಾಡುತ್ತಿವೆ. ರಾಕ್ ಫೆಲ್ಲರ್ ಮತ್ತು ಫೋರ್ಡ್ ಫೌಂಡೇಶನ್ಸ್ ಪ್ರಭುತ್ವದ ಜೊತೆಗೆ ಹತ್ತಿರದ ನಂಟನ್ನು ಬೆಳೆಸಿಕೊಂಡು ಸರಕಾರ ಮತ್ತು ತಮ್ಮ ಉದ್ದೇಶಗಳಿಗೆ ಪೂರಕವಾಗಿ ಕೆಲಸ ಮಾಡಿದಂತೆಯೇ ನಮ್ಮ ಕಾರ್ಪೊರೇಶನ್ಸ್ ಅದೇ ಬಗೆಯ ತಂತ್ರಗಾರಿಕೆಯನ್ನು ಬಳಸಿಕೊಂಡು ಕೆಲವೊಂದು ರಾಜಕೀಯ ಪಕ್ಷಗಳನ್ನು ನಡೆಸುತ್ತಿವೆ. ಜೊತೆಗೆ ಈ ದೇಶದ ಮಾಧ್ಯಮಗಳನ್ನು ಕೂಡಾ. ಹಾಗೆಯೇ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಭಾರತೀಯ ಖಾಸಗಿ ಕಂಪೆನಿಗಳು ಚ್ಯಾರಿಟೇಬಲ್ ಫೌಂಡೇಶನ್ಸ್ಗೆ ಹಣವನ್ನು ಹಂಚಿ ಅವುಗಳ ಮೂಲಕ ಸಾರ್ವಜನಿಕ ವಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ದಾರಿಗಳನ್ನು ಕಂಡುಕೊಳ್ಳುತ್ತಿವೆ. ಹೀಗಾಗಿ ಕಾರ್ಪೊರೇಟ್ಸ್ಗಳ ಕಾರ್ಯತಂತ್ರ ಸ್ಪಷ್ಟವಾಗಿದೆ - ನಿಧಾನಕ್ಕೆ ಸಾರ್ವಜನಿಕರ ಭಾವನೆಗಳನ್ನು ನಂಬಿಕೆಗಳನ್ನು ನಿಯಂತ್ರಿಸುವುದು, ಬಳಿಕ ಜನಸಾಮಾನ್ಯರ ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣಕ್ಕಾಗಿ ಸರಕಾರದಿಂದ ಹಣ ಮಂಜೂರಾಗದ ಸಂದರ್ಭದಲ್ಲಿ ತಮ್ಮ ನಿಯಂತ್ರಣದಲ್ಲಿರುವ ಸರಕಾರೇತರ ಚ್ಯಾರಿಟೇಬಲ್ ಸಂಸ್ಥೆಗಳ ಮೂಲಕ ಜನರಿಗೆ ಧನಸಹಾಯವನ್ನು ನೀಡುವುದು, ಆಗ ಆರ್ಥಿಕ ಸಹಾಯವನ್ನು ಪಡೆದ ಜನಸಾಮಾನ್ಯರ ಕಣ್ಣಲ್ಲಿ ಇವರು ಉದಾರಿಗಳಾಗುತ್ತಾರೆ. ಈ ಮೂಲಕ ದೇಶವನ್ನು ಕಾರ್ಪೊರೇಟ್ ಬಂಡವಾಳದ ಮುಕ್ತ ಮಾರುಕಟ್ಟೆಯನ್ನಾಗಿ ಮಾಡುವುದು. ಇದು ಒಂದು ರೀತಿಯಲ್ಲಿ ವಸಾಹತುಶಾಹಿ ಆಳ್ವಿಕೆಯಲ್ಲಿ ಮಿಶನರಿಗಳು ಮಾಡುತ್ತಿದ್ದ ಕೆಲಸದ ಹಾಗೆಂದು ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಅವರು ಹೇಳುತ್ತಾರೆ.
ದೇಶದ ಸಂಪತ್ತು ಎಂಬುದು ಕೆಲವೇ ಕೆಲವು ಮಂದಿಯ ಕೈಯಲ್ಲಿ ಉಳಿಯುವಂತೆ ಮಾಡಿ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ಹುಟ್ಟುಹಾಕುವ ಇಂಥಾ ಔದಾರ್ಯರಹಿತ ಮತ್ತು ಕೇವಲ ಭೀಕರತೆಯನ್ನು ಮಾತ್ರ ಹೊಂದಿರುವ ಆರ್ಥಿಕ ನೀತಿಯನ್ನು ಜಾರಿಗೆ ತರುವ ಸಲುವಾಗಿ ಮೋದಿ ಸರಕಾರ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ, ಬಂಡವಾಳ ಹಿಂತೆಗೆತಕ್ಕೆಂದೇ ಒಬ್ಬ ಸಚಿವನನ್ನು ಆಯ್ಕೆಮಾಡಿ ಅದಕ್ಕಾಗಿ ಒಂದು ಸಚಿವಾಲಯವನ್ನು ಆರಂಭ ಮಾಡಿದ್ದು ಈಗ ಇತಿಹಾಸ. ಹಾಗೆಯೇ ಛತ್ತೀಸ್ಗರ್ನಲ್ಲಿ 1 ಲಕ್ಷ 70 ಸಾವಿರ ಹೆಕ್ಟೇರ್ ಅರಣ್ಯಭೂಮಿಯನ್ನು ಅದಾನಿಯವರಿಗೆ ನೀಡಿದ ಉದ್ದೇಶವನ್ನು ಈ ದೇಶದ ಪ್ರಜೆಗಳು ಏನೆಂದು ಅರ್ಥೈಸಬೇಕೆಂದು ಮೋದಿಯವರೇ ಹೇಳಬೇಕು. ರಾಷ್ಟ್ರೀಯ ಸಂಪನ್ಮೂಲಗಳನ್ನು, ಸರಕಾರಿ ಸಂಸ್ಥೆಗಳನ್ನು ಖಾಸಗಿ ಬಂಡವಾಳಿಗರಿಗೆ ಕೈಗಿತ್ತು ಅವರ ಬದುಕನ್ನು ಹಸನು ಮಾಡುವ ಮೋದಿ ಮತ್ತು ಅವರ ತಂಡದ ಸದಸ್ಯರ ಕಣ್ಣಿಗೆ ಕಾಣುವುದು ಇಂದು ಈ ದೇಶದಲ್ಲಿ ಅತ್ಯಂತ ಸಂತೋಷದಲ್ಲಿರುವ ಗುಜರಾತಿನ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅಂಥವರು ಮಾತ್ರ. ಆದರೆ ಅದಾನಿಯವರು ಮಂಗಳೂರು ವಿಮಾನ ನಿಲ್ದಾಣವನ್ನು ಕೊಂಡುಕೊಂಡರೆ ಅಲ್ಲಿ ಯಾರಿಗೆ ಉದ್ಯೋಗ ದೊರೆಯುತ್ತದೆ ಎಂಬುದನ್ನು ನಾವು ಪ್ರಶ್ನಿಸಬೇಕಾಗಿದೆ. ಖಾಸಗಿ ಬಂಡವಾಳ ಹೂಡಿಕೆಯಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಸಮಾನತೆ ಎಲ್ಲವೂ ಓಡಿಹೋಗಲು ಸಾಧ್ಯವೇ? ಎಂಬುದನ್ನು ಜನರು ಗಂಭೀರವಾಗಿ ಯೋಚಿಸಬೇಕು.
ನೆಹರೂ ಕಾಲದಲ್ಲಿ ಅಷ್ಟಾಗಿ ಬಂಡವಾಳ ಹೂಡಲು ಮುಂದಾಗದಿದ್ದ ಖಾಸಗಿ ಧನಿಗಳು ನೆಹರೂ ವಿರೋಧಿ ಸರಕಾರದ ಕಾಲದಲ್ಲಿ ಅತ್ಯುತ್ಸಾಹದಿಂದ ಸಾಲು ಸಾಲಾಗಿ ಮುಂದೆ ಬರುತ್ತಿರುವುದು ಖಂಡಿತವಾಗಿಯೂ ದೇಶೋದ್ಧಾರಕ್ಕಾಗಿ ಅಲ್ಲ ಅನ್ನುವ ಸಂಗತಿ ಯಾರಿಗಾದರೂ ಅರ್ಥವಾಗುವಂಥಾದ್ದು. ಸದಾ ಮಣ್ಣಿನ ಪವಿತ್ರೀಕರಣದ ಮೂಲಕ ಜನರ ಭಾವುಕ ಪ್ರಪಂಚವನ್ನು ತಲುಪಿ ಸಮೂಹದ ನಾಯಕನಾಗಿ ಬೆಳೆದು, ತನ್ನ ಅಭೂತಪೂರ್ವ ವಾಕ್ ಪ್ರತಿಭೆಯಲ್ಲಿ ನಿತ್ಯ ನೂತನ ಪರಿಭಾಷೆಗಳನ್ನು ಜನರ ಮುಂದಿಟ್ಟು ಜನರ ಕಣ್ಣು, ಕಿವಿ, ಮನಸ್ಸುಗಳಲ್ಲೆಲ್ಲಾ ತುಂಬಿ ದೇಶದ ಪ್ರಧಾನಮಂತ್ರಿಯೆನ್ನಿಸಿಕೊಂಡವರು ಮುಂದಕ್ಕೆ ಈ ದೇಶದ ಸಂಪನ್ಮೂಲಗಳನ್ನು ಖಾಸಗಿಯವರ ಕೈಗೆ ಒಪ್ಪಿಸುವ ಮೊದಲು ದೇಶವೆಂದರೆ ಯುದ್ಧೋನ್ಮಾದ ಅಲ್ಲ, ದೇಶದ ಕಾವಲುಗಾರನೆಂದರೆ ಇಲ್ಲಿನ ಸಂಪನ್ಮೂಲಗಳನ್ನು ಮಾರಿ `ಮೈಸೂರನ್ನು ಪ್ಯಾರಿಸ್ ಮಾಡ್ತೇನೆ, ಉದಯ್ಪುರ್ ಮಾಡ್ತೇನೆ' ಅಂತ ಜನರು ಹುಚ್ಚೇಳುವಂತೆ ಭಾಷಣ ಮಾಡುವುದಲ್ಲ ಎಂಬುದನ್ನು ತಿಳಿಯಬೇಕು. ದೇಶ ಅಂದರೆ ಜನ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿ ಜನ ಮನುಷ್ಯರಾಗಿ ಬಾಳಬೇಕಾದರೆ ಅವರಿಗೆ ಪ್ರಯೋಜನಕಾರಿಯಾದ ಸರಕಾರೀ ಸಂಸ್ಥೆಗಳ ಮೂಲಕ ಆಹಾರ, ಶಿಕ್ಷಣ, ಆರೋಗ್ಯ, ವಸತಿ ದೊರೆಯಬೇಕು ಎಂಬುದು ಅರ್ಥ ಆಗಬೇಕು. ಆದರೆ ದೇಶದ ಬಗ್ಗೆ ನಿಜ ಕಾಳಜಿ ಇರುವ ಒಬ್ಬ ಪ್ರಾಮಾಣಿಕ ರಾಜಕಾರಣಿಗೆ ಮತ್ತು ಸೂಕ್ಷ್ಮ ಮನಸ್ಸಿನ ಮುತ್ಸದ್ಧಿಗೆ ಮಾತ್ರ ಇಂಥಾ ವಿಚಾರಗಳು ಬಲು ಬೇಗ ತಿಳಿಯಲು ಸಾಧ್ಯ.
***********
ನಿಮ್ಮ ಲೇಖನ ಈಗ ಹೆಚ್ಚು ಅರ್ಥಪೂರ್ಣವಾಗಿದೆ.
ReplyDelete