ಎಫ್.ಎಂ. ನಂದಗಾವ್
ಈ ವರ್ಷದ ಆದಿಯಲ್ಲಿ ಚೀನಾದಲ್ಲಿ ಪ್ರಥಮ ಬಾರಿಗೆ ತನ್ನ ಇರುವನ್ನು ತೋರಿಸಿದ ಕೊರೊನಾ ವೈರಾಣು (ವೈರಸ್), ಜಗತ್ತಿನ ವಿವಿಧ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಕಟಿಸಿಕೊಂಡು, ಇದುವರೆಗೂ 3500ಕ್ಕೂ ಅಧಿಕ ಜನರ ಬಲಿ ತೆಗೆದುಕೊಂಡಿದೆ. ಜಗತ್ತಿನಾದ್ಯಂತ 95000ಕ್ಕೂ ಅಧಿಕ ಜನಕ್ಕೆ ಈ ಸೋಂಕು ತಗುಲಿದೆ. ಇಂದು 40ಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಮೂಡಿದಂತಾಗಿದೆ.
ನ್ಯುಮೋನಿಯಾ ರೋಗ ಲಕ್ಷಣದ ಪ್ರಾಣಿ ಮೂಲದ ಈ ಸೋಂಕು, ಶೀತ, ಸ್ನಾಯ ನೋವು, ಆಯಾಸ ಮತ್ತು ಉಸಿರಾಟಕ್ಕೆ ತೊಂದರೆ ತಂದು ಅಂತಿಮವಾಗಿ ಸೋಂಕು ಪೀಡಿತ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ. ಹಿಂದೆ, 2002ರಲ್ಲೂ ಇದೇ ಬಗೆಯಲ್ಲಿ ಅದೇ ಚೀನಾ ದೇಶದಲ್ಲಿ ಕಾಣಿಸಿಕೊಂಡ ಸಾರ್ಸ್ ವೈರಾಣುವಿನಿಂದ ಆಗ ಜಗತ್ತಿನಲ್ಲಿ ಒಟ್ಟು 700ಕ್ಕೂ ಅಧಿಕ ಜನ ಅಸುನೀಗಿದ್ದರು.
ಸುಮಾರು 2 ರಿಂದ 14 ದಿನಗಳಲ್ಲಿ ವ್ಯಕ್ತಿಯ ದೇಹವನ್ನು ಆಕ್ರಮಿಸಿಕೊಳ್ಳುವ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಈ ಹೊಸ ಕೊರೊನಾ ವೈರಾಣು ಸೋಂಕು ಪಾಕಿಸ್ತಾನ, ಇರಾನ್, ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಯುರೋಪ ಖಂಡದ ದೇಶಗಳಲ್ಲಿ ಹರಡತೊಡಗಿದ್ದು ಆತಂಕಕ್ಕೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು, ಸದ್ಯಕ್ಕೆ ಇನ್ನೂ ಔಷಧಿ ಕಂಡುಹಿಡಿಯದ ಈ ಹೊಸ ಸೋಂಕು ಹರಡುವುದನ್ನು ತಡೆಯಲು ಕಟ್ಟೆಚ್ಚರದ ನಿಗಾವಹಿಸಿ ಹಲವಾರು ಉಪಕ್ರಮಗಳನ್ನು ಸೂಚಿಸಿದೆ.
ಜಗತ್ತಿನ ವಿವಿಧ ದೇಶಗಳು ಒಂದು ಕಡೆ ತಮ್ಮ ತಮ್ಮ ನಾಗರಿಕರನ್ನು ಚೀನಾದಿಂದ ವಾಪಸು ಕರೆಯಿಸಿಕೊಂಡರೆ, ಇನ್ನೊಂದು ಕಡೆ ಚೀನಾದೊಂದಿಗಿನ ರಫ್ತು ಆಮದು ವ್ಯವಹಾರ ನಡೆಸುವುದಕ್ಕೆ ಹಿಂದೇಟು ಹಾಕುತ್ತಿವೆ. ವಿವಿಧ ದೇಶಗಳು ಚೀನಾಕ್ಕೆ ಹೋಗುವ, ಚೀನಾದಿಂದ ಬರುವ ವಿಮಾನಗಳ ಮೇಲೆ ನಿಗಾ ಇರಿಸಿವೆ. ಇನ್ನಿತರ ದೇಶಗಳು ಚೀನಾ ದೇಶಕ್ಕೆ ತೆರಳುವ ವಿಮಾನ ಸಂಚಾರಗಳನ್ನು ರದ್ದುಗೊಳಿಸಿವೆ. ಅಂತರ್ರಾಷ್ಟ್ರೀಯ ಆಟೋಟಗಳನ್ನು, ಆರ್ಥಿಕ, ಸಾಮಾಜಿಕ, ವಿವಿಧ ಬಗೆಯ ವಿಷಯಗಳ ವಿಚಾರ ಸಂಕಿರಣಗಳನ್ನು ರದ್ದು ಪಡಿಸಲಾಗಿದೆ ಇಲ್ಲವೇ ಮುಂದೂಡಲಾಗಿದೆ. ಪ್ರವಾಸೋದ್ಯಮಕ್ಕೂ ಪೆಟ್ಟು
ಬಿದ್ದಿದೆ.
ಇದೊಂದು ಬಗೆಯಲ್ಲಿ ಸ್ವಯಂ ದಿಗ್ಬಂಧನ ಹೇರಿದಂತೆ, ಹೇರಿಕೊಂಡಂತೆ ಎಂದರೆ ತಪ್ಪಾಗದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಚೀನಾದ ಜೊತೆಗೆ ವಿವಿಧ ದೇಶಗಳಲ್ಲೂ ಕಾಣಿಸುತ್ತಿರುವ ಈ ವೈರಾಣು ಸೋಂಕು, ಚೀನಾದ ಜನ ಸಮುದಾಯದ ಆರೋಗ್ಯದ ಮೇಲಷ್ಟೇ ಅಲ್ಲ, ಆ ದೇಶದ ಆರ್ಥಿಕ, ಸಾಮಾಜಿಕ ಚಟುವಟಿಕೆಗಳ ಮೇಲೆ, ಜೊತೆಗೆ ಆ ದೇಶದ ಆರ್ಥಿಕ ಚಟುವಟಿಕೆಗಳನ್ನು ಅವಲಂಬಿಸಿರುವ ವಿವಿಧ ದೇಶಗಳ ಮೇಲೂ ತನ್ನ ಕರಾಳ ಛಾಯೆ ಮೂಡಿಸುತ್ತಿದೆ.
ಯುರೋಪಿನ ದೇಶಗಳಲ್ಲಿ ಪ್ರಮುಖವಾಗಿ ಇಟಲಿಯಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಮೊನ್ನೆಮೊನ್ನೆಯವರೆಗೂ ಸುಮಾರು 4600 ಜನರಿಗೆ ಈ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ. ಜೊತೆಗೆ 197 ಸಾವುಗಳು ಸಂಭಿವಿಸಿವೆ. ರೋಮ್ ಪಟ್ಟಣದಲ್ಲೂ ಮೂವರು ಈ ಸೋಂಕಿಗೆ ಬಲಿಯಾಗಿದ್ದಾರೆಂದು ಶಂಕಿಸಲಾಗಿತ್ತು, ಈಗ ಅವರ ಆರೋಗ್ಯ ಸ್ಥಿತಿ ಬಹಳ ಸುಧಾರಿಸಿದೆ.
ಆದರೆ, ಬೂದಿ ಬುಧವಾರ ಅಂದರೆ ಅದೇ ವಿಭೂತಿ ಬುಧವಾರದಂದು ಕೊರೊನಾ ವೈರಸ್ ಪೀಡಿತರಿಗೆ ಸಹಾನುಭೂತಿ ತೋರಿಸುವ ಕ್ರಮವಾಗಿ ಮುಖ ಗೌಸು ತೊಡದೇ ಪೂಜೆಯಲ್ಲಿ ಭಾಗವಹಿಸಿದ್ದ, ವಿಶ್ವಾಸಿಕರಿಗೆ ದರ್ಶನ ನೀಡಿದ್ದ ಕಥೋಲಿಕ ಕ್ರೈಸ್ತರ ಜಗದ್ಗುರು ಪಾಪು ಸ್ವಾಮಿ(ಪೋಪ್)ಗಳು ಅಸ್ವಸ್ಥರಾಗಿದ್ದಾರೆ. ಅವರು ಕೆಮ್ಮುತ್ತಿರುವ ವಿಡಿಯೋ ತುಣುಕುಗಳು ಹರಿದಾಡತೊಡಗಿವೆ, ಅವರಿಗೆ ಕೊರೊನಾ ಸೋಂಕು ತಗುಲಿದೆಯೇ ಇಲ್ಲವೇ ಕುರಿತಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆಯೇ? ಎಂಬುದನ್ನು ವ್ಯಾಟಿಕನ್ ಅಧಿಕೃತ ವಕ್ತಾರರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಅವರು ನಂತರದ ಪೂಜಾವಿಧಿಗಳಲ್ಲಿ ಭಾಗವಹಿಸದಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿರುವುದಂತೂ ನಿಜ. ಇತ್ತ ಚೀನಕ್ಕೆ ತೀರಾ ಹತ್ತಿರದಲ್ಲಿರುವ ದಕ್ಷಿಣ ಕೋರಿಯಾ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಅದರಿಂದ ಆತಂಕಗೊಂಡಿರುವ ಅಲ್ಲಿನ ಧರ್ಮಕ್ಷೇತ್ರಗಳು(ಡಿಯಾಸಿಸ್)ವಿಭೂತಿ ಬುಧವಾರದ ಆಚರಣೆಗಳು ಸೇರಿದಂತೆ ಪ್ರಸಕ್ತ ಸಾಲಿನ ಮಾರ್ಚ 5ರವರೆಗೂ ಮೂರುವಾರಗಳ ಕಾಲ ಪೂಜೆಗಾಗಿ ಜನ ಸೇರುವ ದೈನಂದಿನ ಮತ್ತು ಭಾನುವಾರದ ಧಾರ್ಮಿಕ ಪೂಜಾವಿಧಿಗಳ ಸಮಾವೇಶ (ಮಾಸ್)ಗಳನ್ನು ರದ್ದುಪಡಿಸಿವೆ. ಇದಕ್ಕೂ ಮೊದಲು ಹಾಂಗಕಾಂಗ್ ಧರ್ಮಕ್ಷೇತ್ರವೂ ಇಂಥದೇ ಕ್ರಮ ಕೈಗೊಂಡಿತ್ತು.
ವಿಭೂತಿ ಬುಧವಾರದ ಆಚರಣೆಯು ಯೇಸುಕ್ರಿಸ್ತನ ಪುನರುತ್ಥಾನವನ್ನು ಸಾರುವ ಕ್ರೈಸ್ತರ ಈಸ್ಟರ್ ಹಬ್ಬದ ಮುಂಚಿನ ಸುಮಾರು 40 ರಿಂದ 50 ದಿನಗಳ ಕಾಲದ ಜಪತಪಗಳು, ದಾನಧರ್ಮಗಳು ಸೇರಿದಂತೆ ಸರಳ, ಸಾತ್ವಿಕ ಜೀವನದ ತಪಸ್ಸು ಕಾಲ(ಲೆಂಟ್ ಸೀಸನ್)ದ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಮದುವೆ ಮೊದಲಾದ ಶುಭಕಾರ್ಯಗಳು ನಡೆಯುವುದಿಲ್ಲ. ಈ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಪ್ರಾರ್ಥನಾ ಮಂದಿರಗಳಲ್ಲಿ ನೆರೆಯುತ್ತಿರುತ್ತಾರೆ.
ಚೀನಾದ ವುಹಾನ್‍ನಲ್ಲಿ ಕಾಣಿಸಿಕೊಂಡ ಮಾನವರ ಜೀವಕ್ಕೆ ಕಂಟಕವಾಗಿರುವ ಕೋವಿಡ್ -19(ಕೊರೊನಾ ವೈರಸ್) ವೈರಾಣು ಚೀನಾದ ತುಂಬೆಲ್ಲ ಸಾಂಕ್ರಾಮಿಕವಾಗಿ ಹರಡುತ್ತಿದೆ. ಹೂಬೈ ಪ್ರಾಂತ್ಯದಲ್ಲಿರುವ ಈ ವುಹಾನ್ ಪಟ್ಟಣದೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಸುಪಾಸಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕೊರೊನಾ ವೈರಾಣು ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇದರ ಜೊತೆಗೆ, ಸರ್ಕಾರವೇ ಮುಂದೆ ನಿಂತು ಮಾಧ್ಯಮಗಳಿಗೆ ಮಾಹಿತಿ ಒದಗಿಸುತ್ತಿದ್ದು, ಆ ದೇಶದಲ್ಲಿನ ನಿಜವಾದ ಪರಿಸ್ಥಿತಿ ಏನೂ ಎಂಬುದು ಹೊರ ಜಗತ್ತಿಗೆ ಸರಿಯಾಗಿ ಸಿಗುತ್ತಿಲ್ಲ. ಕೊರೊನಾ ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಚೀನಾದಲ್ಲಿದ್ದು ಸಾಕ್ಷಾತ್ ವರದಿ ಮಾಡುತ್ತಿದ್ದ ಯುರೋಪ ಮೂಲದ ಪತ್ರಿಕೆಯ ವರದಿಗಾರನನ್ನು ಚೀನಾ ದೇಶದಿಂದ ಹೊರಗಟ್ಟಿದೆ.
ಇರಲಿ, ಜನವರಿ ತಿಂಗಳಲ್ಲಿ ವುಹಾನ್ ನಗರದಲ್ಲಿ ಈ ವೈರಸ್‍ನ ಅಸ್ತಿತ್ವದ ಕುರಿತು ವರದಿ ಆಗುತ್ತಿದ್ದಂತೆಯೇ ತಕ್ಷಣ ಜಾಗೃತಗೊಂಡ ಚೀನಾ ಸರ್ಕಾರ, ನಾನಾ ಬಗೆಯ ಆ್ಯಪ್ ಆಧಾರಿತ ಪ್ರಜಾನಿಯಂತ್ರಣದ ವ್ಯವಸ್ಥೆಯಲ್ಲಿ ಕೊರೊನಾ ವೈರಸ್ ಸೊಂಕು ಪೀಡಿತರ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಒದಗಿಸಿ ಗೃಹಬಂಧನದಲ್ಲಿರಿಸಿ ಅದು ಇತರೆಡೆ ಹರಡದಂತೆ ಕಡಿವಾಣ ಹಾಕಲು ಕ್ರಮ ಕೈಗೊಂಡಿತ್ತು.
ಚೀನಾದ ಕಮ್ಯುನಿಸ್ಟ್ ಸರ್ಕಾರ ಜಾರಿಗೆ ತಂದಿರುವ `ಸಾಮಾಜಿಕ ಮಾನ್ಯತಾ ವ್ಯವಸ್ಥೆ’ (ಸೋಶಿಯಲ್ ಕ್ರೆಡಿಟ್ ಸಿಸ್ಟಿಮ್) ಇದನ್ನು ಸಾಧ್ಯವಾಗಿಸಿತ್ತು. ಏನಿದು `ಸಾಮಾಜಿಕ ಮಾನ್ಯತಾ ವ್ಯವಸ್ಥೆ’? ಚೀನಾದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ವೈಬೋ, ಯೂಕ್ಕೂ, ವಿಚಾಟ್, ಬೈದು ಇತ್ಯಾದಿ ಹೆಸರುಗಳಲ್ಲಿರುವ ಗೂಗಲ್, ಫೇಸ್ ಬುಕ್, ಟ್ವಿಟರ್, ವಾಟ್ಸ್‍ಆ್ಯಪ್ ಮಾದರಿಯ ಸಾಮಾಜಿಕ ಮಾಧ್ಯಮಗಳ ಆಧಾರದಲ್ಲಿ, ಅವನ್ನು ಬಳಸುವ ಪ್ರತಿಯೊಬ್ಬ ವ್ಯಕ್ತಿಯ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಇದು. ಅದರಲ್ಲಿ ಲಭ್ಯವಾಗುವ ಮಾಹಿತಿ ಕ್ರೋಢಿಕರಿಸಿ ಆಡಳಿತಾರೂಢ ಸರ್ಕಾರದ ನಿಲುವುಗಳನ್ನು ಬೆಂಬಲಿಸುವ, ಅದರ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವ ವ್ಯಕ್ತಿಯಾಗಿ ಉತ್ತಮ ನಾಗರಿಕನಾಗಿದ್ದರೆ, ಅವನಿಗೆ ಅಧಿಕ ಅಂಕಗಳು ಸೇರಿಕೊಂಡು ಬಗೆಬಗೆಯ ಸರ್ಕಾರಿ ಸೌಲತ್ತುಗಳು ಸುಲಭದಲ್ಲಿ ದಕ್ಕುತ್ತವೆ. ಅದೇ ಆತ ಸರ್ಕಾರದ ವಿರುದ್ಧದ ನಿಲುವು ಹೊಂದಿದ್ದರೆ, ಅವನ ಸೌಲತ್ತುಗಳಿಗೆ ಕತ್ತರಿ ಬೀಳುತ್ತದೆ.
ಇದರದೇ ಮುಂದಿನ ಒಂದು ಭಾಗವಾಗಿರುವಂತೆ ಕಾಣುವ, ಅಧಿಕೃತ ಮಾನ್ಯತೆ ಪಡೆದಿರುವ ಸರ್ಕಾರಿ ಪ್ರಾಯೋಜಿತ ಸಾಂಪ್ರದಾಯಿಕ ಸಾಮಾಜಿಕ ಬೇಹುಗಾರಿಕೆ ವ್ಯವಸ್ಥೆಯಲ್ಲಿ ವ್ಯಕ್ತಿಯ ಒಲವುಗಳ ಬಗೆಗೆ, ನಡವಳಿಕೆ ಬಗೆಗೆ ಇತರರು ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಇದು ಪರಸ್ಪರರಲ್ಲಿ, ನೆರೆಹೊರೆಯವರಲ್ಲಿ ಅಪನಂಬಿಕೆ ಮೂಡಿಸುತ್ತಾ, ಅಲ್ಲಿನ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡುತ್ತಿದೆ.
ಧಾರ್ಮಿಕ ಕ್ಷೇತ್ರವೂ ಈ ಸಾರ್ವಜನಿಕ ಬೇಹುಗಾರಿಕೆಗೆ ಹೊರತಾಗಿಲ್ಲ. ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದ ಕ್ರೈಸ್ತ ಧರ್ಮಸಭೆಯ ಸದಸ್ಯರು, ಭೂಗತ ಕ್ರೈಸ್ತ ಧರ್ಮಸಭೆಯ ಸದಸ್ಯರು ಮತ್ತು ಯಾಜಕರ ಕುರಿತು ಬೇಹುಗಾರಿಕೆ ನಡೆಸಿ
ಅಧಿಕಾರಿಗಳಿಗೆ ವರದಿ ಸಲ್ಲಿಸಿ, ಆಯಾ ಧರ್ಮಸಭೆಯ ಸದಸ್ಯರನ್ನು ತಮ್ಮ ಧರ್ಮಸಭೆಗೆ ಸೇರಿಸಿಕೊಳ್ಳುವಲ್ಲಿ ಆಸಕ್ತಿ ಹೊಂದಿರುವುದು ಚೀನಾದಲ್ಲಿನ ಹೊಸ ಬೆಳವಣಿಗೆ. ಆಯಾ ಕ್ರೈಸ್ತ ಧರ್ಮಸಭೆಯ ಯಾಜಕರ ಮೇಲೆ, ಆಯಾ ಧರ್ಮಕ್ಷೇತ್ರದ ವಿಶ್ವಾಸಿಕರೇ ಬೇಹುಗಾರಿಕೆ ನಡೆಸುವುದೂ ಇದೆ!
ಚೀನಾದ ಕಮ್ಯುನಿಸ್ಟ್ ಪಕ್ಷವು ಹಲವಾರು ವರ್ಷಗಳ ಹಿಂದೆಯೇ ನಾಗರಿಕರೇ ತಮ್ಮ ಸಾಮಾಜಿಕ ಪರಿಸರದಲ್ಲಿ ನಡೆಸಬಹುದಾದ ಬೇಹುಗಾರಿಕೆಯನ್ನು ಜಾರಿಗೆ ತಂದಿತ್ತು. ಈಗ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಾವಳಿಯ ತಡೆಗೂ ಅದನ್ನು ಬಳಸಲು ಮುಂದಾಗಿದೆ. ತಮ್ಮ ತಮ್ಮ ಪರಿಸರದಲ್ಲಿ ಕೊರೊನಾ ವೈರಾಣು ಪೀಡಿತರನ್ನು ಪತ್ತೆ ಹಚ್ಚಿ ಅದನ್ನು ಸರ್ಕಾರದ ಗಮನಕ್ಕೆ ತರುವ ಸಾಮಾಜಿಕ ಬೇಹುಗಾರರಿಗೆ ನಗದು ಪುರಸ್ಕಾರ, ಸದ್ಯಕ್ಕೆ ಮುಖ್ಯ ಎನಿಸುತ್ತಿರುವ ಮೂಗು ಮುಸುಕುಗಳನ್ನು ಒದಗಿಸುವುದು ಮತ್ತು ವಿವಿಧ ಬಗೆಯ ಸೌಲತ್ತು ನೀಡುವ ಆಮಿಷ ಒಡ್ಡುತ್ತಿದೆ.
ಅಪಾಯಕಾರಿ ಕೊರೊನಾ ವೈರಾಣು ಹರಡುವುದನ್ನು ತಡೆಯುವುದಕ್ಕಾಗಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿರುವ ಚೀನಾ, ತಮ್ಮ ತಮ್ಮ ಪರಿಸರದಲ್ಲಿ ಕೊರೊನಾ ವೈರಾಣು ಪೀಡಿತರನ್ನು ಪತ್ತೆ ಹಚ್ಚಿ ಅದನ್ನು ಸರ್ಕಾರದ ಗಮನಕ್ಕೆ ತರುವವರಿಗೆ ನಗದು ಮತ್ತು ವಿವಿಧ ಬಗೆಯ ವಸ್ತುಗಳ ಆಮಿಷ ಒಡ್ಡುತ್ತಿದೆ. ಈ ನಗದು ಪುರಸ್ಕಾರ ಮಿತಿ 3000 ಯನ್ (ಸುಮಾರು 430 ಅಮೆರಿಕದ ಡಾಲರ್).
ಮಾವೊ ಝಿಡಂಗ ಅವರ ಕಾಲದಿಂದಲೂ ಸರ್ಕಾರದ ನಿಲುವುಗಳನ್ನು ವಿರೋಧಿಸುವವರ ಬೇಹುಗಾರಿಕೆಗೆ ನಾಗರಿಕರನ್ನು ಬಳಸುವ ಸಂಸ್ಕøತಿ ಆರಂಭವಾಗಿತ್ತು. ಮುಂದೆ 1976ರ ಸುಮಾರು, ಹತ್ತು ವರ್ಷಗಳ ಸಾಂಸ್ಕøತಿಕ ಆಂದೋಲನ ಉತ್ತುಂಗ ಸ್ಥಿತಿಯಲ್ಲಿದ್ದಾಗ, ಈ ಬಗೆಯ ನಾಗರಿಕರ ಬೇಹುಗಾರಿಕೆಯೂ ತನ್ನ ಪರಾಕಾಷ್ಠೆಯನ್ನು ಮುಟ್ಟಿತ್ತು. ಆಗ ಅದು, ಸ್ನೇಹಿತರ, ಕುಟುಂಬಗಳ ಮತ್ತು ಸಮುದಾಯಗಳ ನಡುವೆ ಕಂದಕಗಳನ್ನು ನಿರ್ಮಿಸಿತ್ತು. ಕೊರೊನಾ ವೈರಾಣುವಿನ ಹಿನ್ನೆಲೆಯಲ್ಲಿ ಪ್ರಸಕ್ತ ಅಧ್ಯಕ್ಷ ಕ್ಸಿ. ಜಿನ್ ಪಿಂಗ್ ಸರ್ಕಾರವು, ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಈ ನಾಗರಿಕರ ಬೇಹುಗಾರಿಕೆಯ ಸಂಸ್ಕøತಿಗೆ ಹೊಸ ಬಗೆಯ ವಾಖ್ಯಾನವನ್ನು ನೀಡುತ್ತಿದೆ.
ಕೊರೊನಾ ವೈರಾಣುವಿನಿಂದ ಬಳಲುತ್ತಿರುವವರ ಮಾಹಿತಿ ಮುಚ್ಚಿಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಸಾರ್ವಜನಿಕ ಆರೋಗ್ಯ ನಿರ್ವಹಣೆಗೆ, ಜನಪದರ ಆರೋಗ್ಯ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಬೇಕು ಎನ್ನುವುದು ಎಲ್ಲರೂ ಒಪ್ಪುವ ಮಾತು.
ಆದರೆ, ಕೊರೊನಾ ವೈರಾಣು ಪೀಡಿತರನ್ನು ಆಸ್ಪತ್ರೆಗಳಿಗೆ ಕರೆತಂದು ಚಿಕಿತ್ಸೆ ನೀಡುವುದನ್ನು ಬಿಟ್ಟು, ಅವರನ್ನು ಪ್ರತ್ಯೇಕವಾಗಿರಿಸುವ ಚೀನಾ ಸರ್ಕಾರದ ಕ್ರಮ, ಅದಕ್ಕೆ ಸಾರ್ವಜನಿಕ ವೈದ್ಯಕೀಯ ಚಿಕಿತ್ಸೆಯ ಕುರಿತು ವಿಶ್ವಾಸ ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದೆ. ಹಿಂದೊಂದು ಕಾಲದಲ್ಲಿ, ಕ್ಷಯರೋಗ ಪೀಡಿತರನ್ನು, ಕುಷ್ಟರೋಗಿಗಳನ್ನು, ಏಡ್ಸ್ ಪೀಡಿತರನ್ನು ನಾಗರಿಕ ಪ್ರಪಂಚದಿಂದ ಹೊರಗಟ್ಟುತ್ತಿದ್ದ ವಿಧಾನದಂತೆಯೇ, ಕೊರೊನಾ ವೈರಾಣು ಪೀಡಿತರನ್ನು ಆಯಾ ಊರುಗಳಿಂದ ಒಬೊಬ್ಬರನ್ನೇ ಹೆಕ್ಕಿ ಹೆಕ್ಕಿ ಹೊರಗೆ ಅಟ್ಟಲಾಗುತ್ತಿದೆ. ಇಂಥ ಕ್ರಮಗಳು ಕೊರೊನಾ ವೈರಾಣು ಪೀಡಿತರು, ತಮ್ಮನ್ನು ಮರೆಮಾಚಿಕೊಳ್ಳುವುದಕ್ಕೆ ಮುಂದಾಗುವಂತೆ ಮಾಡುತ್ತಿರಲೂಬಹುದು.
ಇಂಥ ಪರಿಸ್ಥಿತಿಯಲ್ಲಿ ಕೊರೊನಾ ವೈರಾಣು ಪೀಡಿತರ ಅಸ್ತಿತ್ವದ ವರದಿಗಾರಿಕೆ ಈಗ ಮೋಸದಾಟವಾಗುತ್ತಿದೆ. ಕೆಲವರಿಗಂತೂ, ಯಾರಾದರೂ ಶಂಕಿತ ಕೊರೊನಾ ವೈರಸ್ ಪೀಡಿತರು ಎಂದು ವರದಿ ಮಾಡಿ ಹಣಗಳಿಸುವುದು, ಸುಲಭದ ಗಳಿಕೆಯ ಮಾರ್ಗವಾಗುತ್ತಿದೆ. ಅಧಿಕ ಸಮಯ ಬೇಡುವ ವಿವಿಧ ವೈದ್ಯಕೀಯ ಪರೀಕ್ಷೆಗಳ ನಂತರದ ವರದಿಗಳು ನಕಾರಾತ್ಮಕ ಅಂಶಗಳಿರುವುದನ್ನು ಸೂಚಿಸಿದಾಗ ಇಡೀ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸಂಪನ್ಮೂಲದ ಪೋಲು ಎದ್ದುಕಾಣುತ್ತದೆ.
ಹೀಗಿದ್ದರೂ, ಕೆಲವು ಕುಟುಂಬಗಳವರ ನಿಷ್ಕಪಟ ವರದಿಗಾರಿಕೆಯು, ಶಂಕಿತ ಕೊರೊನಾ ವೈರಾಣು ಪೀಡಿತರು ಸೂಕ್ತ ಸಮಯದಲ್ಲಿ ಯೋಗ್ಯ ವೈದ್ಯಕೀಯ ಸೌಲತ್ತು ಪಡೆಯುವಂತೆ ಆಗಿರುವುದನ್ನು ಅಲ್ಲಗಳೆಯಲಾಗದು.
ಏನೇ ಆಗಲಿ, ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆಯ ಚೀನಾದ ಕಮ್ಯುನಿಸ್ಟ್ ಪಕ್ಷವು, ಪರಸ್ಪರ ಅಪನಂಬಿಕೆಯ ಮತ್ತು ಶಾಂತಿಯನ್ನು ಕಳೆದುಕೊಂಡ ಸಮಾಜವನ್ನು ನಿರ್ಮಿಸುವಲ್ಲಿ ಬಹುಮಟ್ಟಿಗೆ ಯಶಸ್ಸನ್ನು ಕಂಡಂತಾಗಿದೆ. ಈ ಕೊರೊನಾ ವೈರಾಣುವು ಚೀನಾದ ಕಮ್ಯುನಿಸ್ಟ್ ಪಕ್ಷದ ಉದ್ದೇಶಿತ ಭಯಗ್ರಸ್ಥ ಸಮಾಜ ನಿರ್ಮಾಣದ ಅದರ `ಪ್ರಮಾಣಕ ಮುದ್ರೆ’ ವಿಧಾನವು, ನಯವಾಗಿ ಅಲ್ಲಿನ ಜನರ ವೈಯಕ್ತಿಕ ಸ್ವಾತಂತ್ರ್ಯ, ಖಾಸಗಿತನ ಮತ್ತು ನೆಮ್ಮದಿಯ ಬದುಕಿನ ಮೇಲೆ ಸವಾರಿ ಮಾಡಲು ಅವಕಾಶಕೊಟ್ಟಿದಂತೂ ಸತ್ಯ.
ಇಂದಿನ ಭಾರತದಲ್ಲಿನ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ) ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್.ಪಿ.ಆರ್) ವಿರೋಧಿ ಪ್ರತಿಭಟನೆಗಳು ದೇಶದ ವಿರುದ್ಧವಲ್ಲ, ಕೇಂದ್ರ ಸರ್ಕಾರದ ಆಡಳಿತಾರೂಢ ಪಕ್ಷದ ಸರ್ಕಾರದ ನಿಲುವುಗಳ ವಿರುದ್ಧದ ಚಟುವಟಿಕೆಗಳಾಗಿದ್ದರೂ, ಸ್ವಯಂಘೋಷಿತ ದೇಶಪ್ರೇಮಿಗಳಿಂದ ಅವನ್ನು ದೇಶದ್ರೋಹ ಎಂಬಂತೆ ಅಮಾಯಕರಲ್ಲಿ ಬಿಂಬಿಸಲಾಗುತ್ತಿದೆ.
ಚೀನಾದ ನಾಗರಿಕ ಬೇಹುಗಾರಿಕೆಯ ನಗದು ಪುರಸ್ಕಾರದ ಮಾದರಿಯನ್ನು ಹೋಲುವಂತೆಯೇ, ಈಚೆಗೆ ಮುಂಬೈಯಲ್ಲಿನ ಬಿಜೆಪಿ (ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ) ಯ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು, ತನ್ನ ಊಬರ್ ಕ್ಯಾಬ್ (ಬಾಡಿಗೆ ಕಾರಿ)ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯದೇ ನೇರ ಪೊಲೀಸ್ ಠಾಣೆಗೆ ಕರೆದೊಯ್ದ ಕ್ಯಾಬ್ ಚಾಲಕ ರೋಹಿತ್ ಗೌರ್ ಅವರನ್ನು ಸನ್ಮಾನಿಸಿ, `ಜಾಗೃತ ನಾಗರಿಕ ಪ್ರಶಸಿ’್ತ ನೀಡಿದ್ದರು!
ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿದ್ದ ಜೈಪುರ್ ಮೂಲದ ಕವಿ ಮತ್ತು ಚಳುವಳಿಕಾರ ಬಪ್ಪಾದಿತ್ಯ ಸರ್ಕಾರ್ ಅವರು, `ನಾಗರಿಕ ತಿದ್ದುಪಡಿ ಕಾನೂನು’ ವಿರೋಧಿಸಿ ದೇಶದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಚರ ದೂರವಾಣಿಯಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದುದು ಕ್ಯಾಬ್ ಚಾಲಕನಿಗೆ `ರಾಷ್ಟ್ರ ವಿರೋಧಿ ಚಟುವಟಿಕೆ’ ಎಂದು ಅನ್ನಿಸಿತಂತೆ. ಹಾಗನ್ನಿಸಿದ್ದೇ ತಡ, ಚೀನಾದಲ್ಲಿರುವಂಥ ಸಾಮಾಜಿಕ ಜವಾಬ್ದಾರಿಯ ಬೇಹುಗಾರಿಕೆಯ ಮಾದರಿಯಲ್ಲಿಯೇ, ಕ್ಯಾಬ್ ಚಾಲಕ ರೋಹಿತ್ ಗೌರ್, ಸರ್ಕಾರ್ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯದೇ ಪೆÇೀಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು.
ಪೊಲೀಸರು ವಿಚಾರಣೆ ನಡೆಸಿ ಕ್ಯಾಬ್ ಚಾಲಕನ ಆರೋಪದಲ್ಲಿ ಹುರಳಿಲ್ಲವೆಂದು ತಿಳಿದು ಕ್ಯಾಬ್ ಪ್ರಯಾಣಿಕ ಸರ್ಕಾರ್ ಅವರನ್ನು ಪೊಲೀಸ್ ಠಾಣೆಯಿಂದ ಕಳುಹಿಸಿಕೊಟ್ಟಿದ್ದರು. ಪೊಲೀಸ್ ಠಾಣೆಯಿಂದ ಹೊರಗೆ ಕಳುಹಿಸುವಾಗ, ನಗರದಲ್ಲಿನ ಪರಿಸ್ಥಿತಿ ಸರಿಯಾಗಿಲ್ಲ, ಪ್ರತಿಭಟನೆಯ ವಿರೋಧದ ಕಾವು ಇದೆ. ಕಾರಣ ಕಮ್ಯುನಿಸ್ಟರನ್ನು ಪ್ರತಿನಿಧಿಸುವ ಕೆಂಪು ಬಣ್ಣದ ಸ್ಕಾರ್ಫನ್ನು ಬಳಸದಂತೆ ಸಲಹೆ ನೀಡಿದ್ದರು.
ಪ್ರತಿಭಟನಾ ನಿರತರನ್ನು ಮಾತನಾಡಿಸದೇ, ಸಂವಾದಕ್ಕೆ ಅವಕಾಶಕೊಡದೇ, ಬಹುಮತದ ಗುರಾಣಿಯ ಬಲ ಹೊಂದಿರುವ ಆಡಳಿತಾರೂಢ ಪಕ್ಷವು ಕಾನೂನು ಜಾರಿ ಶತಸಿದ್ಧ ಎನ್ನುವ ನಡೆ ಪ್ರಜಾಪ್ರಭುತ್ವಕ್ಕೆ ಪೂರಕವಾದ ನಡೆಯೇ? ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಆಡಳಿತಾರೂಢ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದವರು, ಅದರ ಶಾಸಕರು, ಸಂಸದರು, ಕಾರ್ಯಕರ್ತರು ಜನ ಸಮುದಾಯಗಳಲ್ಲಿ ಭಯದ ವಾತಾವರಣ ಮೂಡಿಸುತ್ತಾ ತಮ್ಮ ನಡೆಯೇ ಅಂತಿಮ, ತಾವು ನಡೆದದ್ದೇ ಹಾದಿ ಎಂದು ಸಾಗುತ್ತಿದ್ದಾರೆ.
ದೊಡ್ಡಣ್ಣ ಎಂದೇ ಗುರುತಿಸಲಾಗುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಸಂದರ್ಭದಲ್ಲಿ ದೇಶದ ರಾಜಧಾನಿ ದೆಹಲಿಯ ಈಶಾನ್ಯಭಾಗದ ಕೆಲವು ಬಡಾವಣೆಗಳಲ್ಲಿ ನಡೆದ ಸಿಎಎ ಪರ-ವಿರೋಧದ ಸಂಘರ್ಷದ ಹಿಂಸಾಚಾರಗಳಲ್ಲಿ, ಒಬ್ಬ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ 40ಕ್ಕೂ ಅಧಿಕ ಜನ ಜೀವಕಳೆದುಕೊಂಡಿದ್ದಾರೆ.
ಈ ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪ ಹೊತ್ತ ಕೇಂದ್ರದ ಅಧಿಕಾರರೂಢ ಪಕ್ಷದ ಸಚಿವರು, ಸಂಸದರು, ನಾಯಕ ಮಣಿಗಳ ಮೇಲೆ ದೂರು (ಎಫ್ ಐಆರ್) ದಾಖಲಿಸಲು ಹಿಂದೇಟು ಹಾಕಿದ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ದೂರು ದಾಖಲಿಸಲು ಪೊಲೀಸರಿಗೆ ನಾಲ್ಕುವಾರಗಳ ಗಡವು ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳಿಧರ್ ಅವರನ್ನು ಆದೇಶ ನೀಡಿದ ದಿನದ ರಾತ್ರಿಯೇ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ವಿವಾದಕ್ಕೂ ಎಡೆಮಾಡಿಕೊಟ್ಟಿದೆ.
ಯಥಾಸ್ಥಿತಿವಾದಿ ಪಕ್ಷದ ಕಾರ್ಯಕರ್ತರು, ದಲಿತರು ಮದುವೆಯ ಮೆರವಣಿಗೆಯಲ್ಲಿ ಕುದುರೆ ಬಳಸುವುದನ್ನು ಅಪರಾಧವಾಗಿ ಪರಿಗಣಿಸುತ್ತಿದ್ದಾರೆ, ಆಯಾ ವ್ಯಕ್ತಿಯ ಜಿಹ್ವಾಚಪಲದ ಮೂಲದ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬೇಕಿದ್ದ ಊಟ ತಿಂಡಿಯ ಆಯ್ಕೆ ಇಂದು ಬೀದಿರಂಪವಾಗುತ್ತಿದೆ ಪ್ರಜಾಪ್ರಭುತ್ವದ ಗಣತಂತ್ರದ ದೇಶವಾದ ಭಾರತದ ಜನಸಮುದಾಯವೂ ಚೀನಾದಂತೆಯೆ ಪರಸ್ಪರ ಅಪನಂಬಿಕೆಯನ್ನು ರೂಢಿಸುವ, ಭಯದ ವಾತಾವರಣದ ಜನಜೀವನದತ್ತ ದಾಪುಗಾಲು ಇಡುತ್ತಿದೆಯೇ?
ಭಾರತವು ಪ್ರಜಾಪ್ರಭುತ್ವದ ಗಣತಂತ್ರದ ದೇಶ. ಇಲ್ಲಿ ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಹಕ್ಕು. ಕಾನೂನೊಂದರ ವಿರುದ್ಧದ ಶಾಂತಿಯುತ ಪ್ರತಿಭಟನೆ ದೇಶದ್ರೋಹದ, ರಾಷ್ಟ್ರವಿರೋಧಿ ಚಟುವಟಿಕೆಯಾಗದು ಎಂದು ನ್ಯಾಯಾಲಯಗಳು ಸಾರುತ್ತಿದ್ದರೂ, ಪ್ರಧಾನಿ ವಿರುದ್ಧದ ಕವನವನ್ನು, ನಾಟಕದ ಮಾತುಗಳನ್ನು ಮತ್ತು ಈ ಬಗೆಯ ಸಾತ್ವಿಕ ಪ್ರತಿಭಟನೆಗಳನ್ನು ರಾಷ್ಟ್ರವಿರೋಧಿ ಚಟುವಟಿಕೆ ಎಂದು ಪರಿಗಣಿಸುತ್ತಾ ಪೊಲೀಸರು ಅಧಿಕಾರರೂಢ ಪಕ್ಷದ ಆಶಯಯಂತೆ ನಡೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
0-0-0-0-0-0