ಫಾದರ್ ಸೆಡ್ರಿಕ್ ಪ್ರಕಾಶ್, ಎಸ್‍ಜೆ
ಕನ್ನಡಕ್ಕೆ: ಅಜಯ್ ರಾಜ್
ಪ್ರೀತಿಯ ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳೇ,
ನಿಮ್ಮ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ)ನ ದ್ವಿವಾರ್ಷಿಕ ಸಾಮಾನ್ಯ ಸಭೆಗಾಗಿ ಇಂದು (ಫೆಬ್ರವರಿ 12) ನೀವು ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಒಟ್ಟಾಗಿ ಸೇರಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ನಾನು ಶುಭಾಶಯಗಳನ್ನು ಕೋರುತ್ತೇನೆ. ಸಾಕಷ್ಟು ವಿವೇಚನೆ ಹಾಗೂ ಹಲವರಲ್ಲಿ ಚರ್ಚಿಸಿ ನಾನು ನಿಮಗೆ (ಪ್ರತಿಯೊಬ್ಬರಿಗೂ) ಈ ಪತ್ರವನ್ನು ಬರೆಯುತ್ತಿದ್ದೇನೆ. ಇದು ಅಷ್ಟು ಸುಲಭವಲ್ಲ. ಆದರೂ ಇಲ್ಲಿ ನಾನು ಸಂಕ್ಷಿಪ್ತವಾಗಿ ಹಾಗೂ ಸವಿಸ್ತಾರವಾಗಿ ಬರೆಯುತ್ತಿದ್ದೇನೆ.
ನಲ್ಮೆಯ ಬಿಷಪ್ಪರುಗಳೇ, ಈ ನಿಮ್ಮ ಭೇಟಿಯು ನಮ್ಮ ದೇಶ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಅತಿ ಸೂಕ್ಷ್ಮ ಹಾಗೂ ನಿರ್ಣಾಯಕ ಹಂತದಲ್ಲಿರುವ ಸಂದರ್ಭದಲ್ಲಿ ನಡೆಯುತ್ತಿದೆ. ತನ್ನ ಪ್ರತಿಯೊಂದು ರಂಗದಲ್ಲೂ ಭಾರತವು ಎಂದಿಗೂ ಇಷ್ಟು ಕೆಟ್ಟದಾಗಿರಲಿಲ್ಲ. ನಮಗೆ ಅಮೂಲ್ಯವಾಗಿರುವ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ನಮ್ಮ ಸಂವಿಧಾನ ಹಾಗೂ ಅದರ ಆಶಯಗಳನ್ನು ಹಂತ ಹಂತವಾಗಿ ನಿರಾಕರಿಸಲಾಗುತ್ತಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ನಮ್ಮ ದೇಶದ ಗುರುತಾಗಿರುವ ವೈವಿಧ್ಯತೆ ಹಾಗೂ ಬಹುಸಂಸ್ಕøತಿ ಎಳೆಯನ್ನು ನಾಶಮಾಡಲಾಗುತ್ತಿದೆ. ನಮ್ಮ ದೇಶದ ಲಕ್ಷಾಂತರ ಜನರು, ಗಂಡಸರು ಹಾಗೂ ಹೆಂಗಸರೂ ಸೇರಿದಂತೆ ಎಲ್ಲರೂ ಬೀದಿಗಿಳಿದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ ಆರ್ ಸಿ), ಹಾಗೂ ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‍ಪಿಆರ್) ಅನ್ನು ವಿರೋಧಿಸುತ್ತಿರುವುದು ನಾವು ಈ ದೇಶದ ನಾಗರೀಕರಾಗಿ ಕೊನೆಯಿರದ ಪ್ರಪಾತಕ್ಕೆ ತಳ್ಳಲ್ಪಟ್ಟಿದ್ದೇವೆ ಎಂಬುದನ್ನು ಸೂಚಿಸುತ್ತದೆ.
ಪ್ರೀತಿಯ ಬಿಷಪ್ಪರುಗಳೇ, ಇಂದಿನ ವಾಸ್ತವತೆಯ ಹಿನ್ನೆಲೆಯಲ್ಲಿ ನಾನು ಈ ಹಿಂದೆ ನಡೆದ ನಿಮ್ಮ ಸಭೆಗಳ ಹೇಳಿಕೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 2018ರಲ್ಲಿ ನಿಮ್ಮ ಸಾಮಾನ್ಯ ಸಭೆಯ ಶೀರ್ಷಿಕೆ ‘ಕರುಣೆ ಮತ್ತು ಸಾಕ್ಷಿಯ ಸೇವಾಕಾರ್ಯಕ್ಕಾಗಿ ವಿವಿಧತೆಯಲ್ಲಿ ಒಂದಾಗಿರುವುದು: ಇಗೋ ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ (ಮತ್ತಾಯ 28:20)’ ಆಧಾರದ ಮೇಲೆ ನೀವು ನೀಡಿದ ಹೇಳಿಕೆಗಳನ್ನು ಇಲ್ಲಿ ಪುನರುಚ್ಛರಿಸ ಬಯಸುತ್ತೇನೆ.
ಯಾವುದೇ ಒಂದು ನಿರ್ದಿಷ್ಟ ಸಂಸ್ಕøತಿ ಅಥವಾ ಧರ್ಮದ ಆಧಾರದ ಮೇಲೆ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವುದು ಒಂದು ಅತ್ಯಂತ ಅಪಾಯಕಾರಿ ನಡೆ. ಇದು ತಾತ್ಕಾಲಿಕ ಒಗ್ಗಟ್ಟನ್ನು ಮೂಡಿಸುವ ಭ್ರಮೆಯನ್ನು ಹುಟ್ಟುಹಾಕುತ್ತಾದರೂ ಎಂದಿಗೂ ನೈಜ ಒಗ್ಗಟ್ಟನ್ನು ಮೂಡಿಸುವುದಿಲ್ಲ. ಇಂತಹ ವ್ಯರ್ಥ ಪ್ರಯತ್ನಗಳು ನಮ್ಮ ದೇಶವನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತವೆ. ಬಹುಸಂಸ್ಕøತಿ, ವೈವಿಧ್ಯತೆ ಹಾಗೂ ಹಲವಾರು ಧರ್ಮಗಳ ತಾಣವಾಗಿರುವ ನಮ್ಮ ಭಾರತ ದೇಶದಲ್ಲಿ ಶಾಂತಿ, ಬೆಳವಣಿಗೆ ಹಾಗೂ ಅಭಿವೃದ್ದಿಗೆ ಏಕ ಸಂಸ್ಕøತಿ ಎನ್ನುವುದು ಎಂದಿಗೂ ಸರಿಯಾದ ಉತ್ತರವಾಗುವುದಿಲ್ಲ. ಇಂದು ಅಥವಾ ನಾಳೆ ಹಿಂಸೆ ಹಿಂಸೆಯನ್ನೇ ಪ್ರತಿಪಾದಿಸುತ್ತದೆ... ನಮ್ಮ ದೇಶದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಚಾರ, ದಲಿತರ ಕೊಲೆ ಹಾಗೂ ಅವರ ಮೇಲಿನ ಹಿಂಸಾಚಾರಗಳು ಹಾಗೂ ಕ್ರೈಸ್ತ ಚರ್ಚುಗಳು ಹಾಗೂ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತೇವೆ... ನಿಜವಾದ ರಾಷ್ಟ್ರೀಯತೆ ಹಾಗೂ ದೇಶಪ್ರೇಮ ಈ ದೇಶದ ನಾಗರೀಕರ ಘನತೆಯನ್ನು ಅವರ ಧರ್ಮ, ಸಂಸ್ಕøತಿ, ಭಾಷೆ, ಜಾತಿ ಹಾಗೂ ಆರ್ಥಿಕ ಸ್ಥಿತಿಯ ಹೊರತಾಗಿಯೂ ಗೌರವಿಸುತ್ತದೆ.
2014ರ ಸಭೆಯಲ್ಲಿ ನೀವು ಭಾರತದಲ್ಲಿ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾದ ಭ್ರಷ್ಟಾಚಾರದ ಕುರಿತು ಚರ್ಚಿಸಿದಿರಿ ಹಾಗೂ ಭ್ರಷ್ಟಚಾರವನ್ನು ನಿಗ್ರಹಿಸುವ ಹಾಗೂ ತೊಡೆದುಹಾಕುವ ನಿಟ್ಟಿನಲ್ಲಿ ನಮ್ಮ ಚರ್ಚುಗಳು ಹಾಗೂ ಸಂಸ್ಥೆಗಳು ಮಾದರಿಯಾಗಿರಬೇಕು ಎಂದು ಹೇಳಿದಿರಿ.
2012ರ ಬೆಂಗಳೂರಿನ ಸಭೆಯಲ್ಲಿ ಮಾತನಾಡಿ ನಮ್ಮ ಸಂವಿಧಾನ, ನಮ್ಮ ದೇಶದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಹಾಗೂ ಈ ದೇಶವನ್ನು ಉತ್ತಮ ದೇಶವನ್ನಾಗಿಸುವಲ್ಲಿ ನಮ್ಮ ಕೊಡುಗೆಗಳ ಕುರಿತು ಚರ್ಚಿಸಿದಿರಿ. ಧರ್ಮಸಭೆ ಬಡವರ ಪರವಾಗಿ ಕೆಲಸ ಮಾಡುತ್ತದೆ ಹಾಗೂ ಈ ನಿಟ್ಟಿನಲ್ಲಿ ನಾವು ಸದಾ ಕಾರ್ಯಪ್ರವೃತ್ತರಾಗಿದ್ದೇವೆ ಎಂಬುದನ್ನು ನೀವು ಪುನರುಚ್ಚರಿಸಿದಿರಿ.
ಪ್ರೀತಿಯ ಬಿಷಪ್ಪರುಗಳೇ, ದಯವಿಟ್ಟು ಈ ನಿಮ್ಮ ಮಾತುಗಳನ್ನು ಮತ್ತೊಮ್ಮೆ ಜ್ಞಾಪಿಸಿಕೊಳ್ಳಿ. ಅದೇಗೆ ನೀವು 2012 ಮತ್ತು 2014ರಲ್ಲಿ ನಮ್ಮ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ನೇರ ಹಾಗೂ ದಿಟ್ಟವಾಗಿ ಚರ್ಚಿಸಿದ ನೀವು, 2016 ಮತ್ತು 2018 ರಲ್ಲಿ ಯಾಕೆ ಮೌನಕ್ಕೆ ಜಾರಿದಿರಿ? ಅಂದು ನೀವು ಮಾತನಾಡಿದ ವಿಷಯಗಳು ಕಾರ್ಯರೂಪಕ್ಕೆ ಬಂದಿವೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸುತ್ತಿಲ್ಲ ಏಕೆ?
ಪ್ರೀತಿಯ ಬಿಷಪ್ಪರುಗಳೇ, ನಿಮ್ಮ ಈ ಸಭೆಯ ಶೀರ್ಷಿಕೆ ‘ಸಂಭಾಷಣೆ.’ ಎನ್ನುವುದು ಪ್ರಶಂಸನೀಯ. ಆದರೆ ಇದು ಯಾರೊಂದಿಗಿನ ಸಂಭಾಷಣೆ ಎನ್ನುವುದು ತಿಳಿಯುತ್ತಿಲ್ಲ. ಸಂಭಾಷಣೆ ಎಂದರೆ ಅದು ಎರಡು ವ್ಯಕ್ತಿಗಳು ಪರಸ್ಪರ ಮಾತನಾಡಲು ಒಪ್ಪಿಕೊಂಡ ಮೇಲೆ ನಡೆಯುವ ಒಂದು ಕ್ರಿಯೆ. ಒಬ್ಬ ವ್ಯಕ್ತಿ ಮತ್ತೊಬ್ಬನಿಗಿಂತ ತಾನು ಮೇಲಿದ್ದೇನೆ ಎಂದು ಕೊಂಡರೆ ಅಲ್ಲಿ ಯಾವುದೇ ರೀತಿಯ ಸಂಭಾಷಣೆ ಸಾಧ್ಯವಾಗುವುದಿಲ್ಲ.
ಉದಾಹರಣೆಗೆ, ಇಬ್ಬರ ಸಂಭಾಷಣೆಯಲ್ಲಿ ಒಬ್ಬನು ಸಂವಿಧಾನದ ಕುರಿತು ಮಾತನಾಡುತ್ತಿರುತ್ತಾನೆ ಅಂತಿಟ್ಟುಕೊಳ್ಳಿ. ಈ ಇಬ್ಬರೂ ಸಹ ಸಂವಿಧಾನದ ಮೂಲ ಆಶಯ, ಅದರ ಪ್ರಜಾಸತ್ತಾತ್ಮಕ ಮೌಲ್ಯಗಳು, ಜಾತ್ಯಾತೀತತೆ ಹಾಗೂ ವೈವಿಧ್ಯತೆಯ ಕುರಿತು ಮರು ಮಾತನಾಡದೆ ಒಪ್ಪಿಕೊಳ್ಳುತ್ತಾರೆಯೇ? ಸಂವಿಧಾನದ ಅನುಚ್ಛೇದ 19ರ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅನುಚ್ಛೇದ 25 ರಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಆರೋಗ್ಯದಾಯಕ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯಕ ಎಂಬುದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತಾರೆಯೇ? ಹೌದು, ಸಂಭಾಷಣೆ ಮುಖ್ಯ. ಆದರೆ ಒಬ್ಬನ್ನು ಮತ್ತೊಬ್ಬನನ್ನು ಕಡೆಗಣಿಸಿ, ಅಥವಾ ತನ್ನ ನಂಬಿಕೆಗಳನ್ನು ಬಲವಂತವಾಗಿ ಮತ್ತೊಬ್ಬನ ಮೇಲೆ ಹೇರಿದಾಗ ಅಲ್ಲಿ ಸಂಭಾಷಣೆ ಎನ್ನುವುದು ಇರುವುದೇ ಇಲ್ಲ. ಪ್ರಭು ಯೇಸುಕ್ರಿಸ್ತರು ತಮ್ಮ ಸಾರ್ವಜನಿಕ ಜೀವನದುದ್ದಕ್ಕೂ ಬಡವರ, ಶೋಷಿತರ, ನೊಂದವರ ಹಾಗೂ ಸಮಾಜದ ಮುಖ್ಯವಾಹಿನಿಯಿಂದ ತಿರಸ್ಕರಿಸಲ್ಪಟ್ಟವರ ಪರವಾಗಿ ನಿಂತರು. ಬಡವರನ್ನು ನಿರಂತರವಾಗಿ ಶೋಷಿಸಿ ಅವರ ಮೇಲೆ ‘ಭಾರ ಹೋರಿಸುವವರನ್ನು’ ಕಟುವಾಗಿ ಟೀಕಿಸಿದರು. ಕ್ರಿಸ್ತರು ಫರಿಸಾಯರ, ಧರ್ಮಶಾಸ್ತ್ರಿಗಳು, ಪಿಲಾತ - ಹೆರೋದರೊಂದಿಗೆ ಸಂಭಾಷಣೆ ನಡೆಸಲು (ಅವರನ್ನು ಶೋಧಿಸಲು ಬಂದ ಸೈತಾನನೊಂದಿಗೂ ಸಹ) ಒಪ್ಪಲಿಲ್ಲ.
ನಲ್ಮೆಯ ಬಿಷಪ್ಪರುಗಳೇ, ನಮ್ಮ ದೇಶದಲ್ಲಿ ಲಕ್ಷಾಂತರ ಸಹೋದರ ಸಹೋದರಿಯರು ಮಾನವೀಯ, ನ್ಯಾಯಯುತ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ಪರಿತಪಿಸುತ್ತಿದ್ದಾರೆ. ಅವರು ಅಳುತ್ತಿದ್ದಾರೆ ಏಕೆಂದರೆ ಸರ್ಕಾರದ ವಿಭಜಕ, ತಾರತಮ್ಯದಿಂದ ಕೂಡಿದ ಕಠೋರ ಕಾನೂನುಗಳು ಅವರ ನಾಗರೀಕತ್ವವನ್ನು ಪ್ರಶ್ನಿಸುತ್ತಿವೆ. ಅವರ ಧರ್ಮ ಹಾಗೂ ವಿಶ್ವಾಸವನ್ನು ಪ್ರಶ್ನಿಸಲಾಗುತ್ತಿದೆ. ಅವರು ಬಡವರು ಹಾಗೂ ಅಶಕ್ತರಾಗಿದ್ದಾರೆ; ಅವರು ಅಳುತ್ತಿದ್ದಾರೆ ಏಕೆಂದರೆ ಅವರು ದಲಿತರು, ಆದಿವಾಸಿಗಳು, ಹೆಂಗಸರು, ಮಕ್ಕಳು, ನತದೃಷ್ಟ ರೈತರು ಹಾಗೂ ನಿರುದ್ಯೋಗಿ ಯುವಕ ಯುವತಿಯರಾಗಿದ್ದಾರೆ. ಅವರು ಅಳುತ್ತಿದ್ದಾರೆ ಏಕೆಂದರೆ ಅವರ ಕಷ್ಟಗಳನ್ನು ಕೇಳುವವರು ಬೇಕೆಂದು, ಅವರೊಂದಿಗೆ ಸಂಭಾಷಿಸಬೇಕೆಂದು ಹಾಗೂ ಅವರ ಜೊತೆಯಲ್ಲಿ ನಡೆಯಬೇಕೆಂದು.
ಪ್ರೀತಿಯ ಬಿಷಪ್ಪರುಗಳೇ, ಭಾರತದ ಧರ್ಮಸಭೆಯಾಗಿ ನಾವು ಇಂದು ಎಲ್ಲಿ ನಿಂತಿದ್ದೇವೆ? ಕೆಲವು ಬಿಷಪ್ಪರುಗಳು ಬಹಿರಂಗವಾಗಿ, ಪ್ರತಿಭಟನೆಗಳಲ್ಲಿ ಪಾಲ್ಗೊಂಡು ವಿವಾದಾತ್ಮಕ ಸಿಎಎ ಕಾನೂನನ್ನು ಕಠಿಣ ಶಬ್ಧಗಳಲ್ಲಿ ವಿರೋಧಿಸಿ, ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಈ ಕಾನೂನಿನ ವಿರುದ್ದ ಭಾರತದಾದ್ಯಂತ ಹಲವಾರು ಗುರುಗಳು, ಕನ್ಯಾಸ್ತ್ರೀಯರು ಹಾಗೂ ಧಾರ್ಮಿಕ ಸಹೋದರ ಸಹೋದರಿಯರು ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇವೆಲ್ಲವೂ ಹೃದಯಸ್ಪರ್ಶಿಯಾಗಿವೆ ಹಾಗೂ ನಮ್ಮ ಪ್ರಭುವಿನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಬಹಳ ಪೂರಕವಾಗಿದೆ.
ಆದರೆ, ಪ್ರೀತಿಯ ಬಿಷಪ್ಪರುಗಳೇ, ಇದು ಸಾಕಾಗುವುದಿಲ್ಲ. ಇದು ಸಾಗರದಲ್ಲಿ ಒಂದು ಹನಿ ಮಾತ್ರ. ನಾವೆಲ್ಲರೂ ಇದಕ್ಕಿಂತ ಜಾಸ್ತಿ ಒಟ್ಟಾಗಿ ಹಾಗೂ ತುರ್ತಾಗಿ ಮಾಡಬೇಕಿದೆ. ನಾವು ಈ ದಿಸೆಯಲ್ಲಿ ಮುಂದುವರೆಯುವುದನ್ನು ತಡೆಯಲು ಅನೇಕ ಕಾರಣಗಳು ಅಡ್ಡಿಯಾಗುತ್ತವೆ. ಈ ವಿಷಯವನ್ನು ಮಾತನಾಡುವಾಗ ಈ ಕಾರಣಗಳು ನಮ್ಮನ್ನು ಬಹಳಷ್ಟು
‘ಡಿಪೆÇ್ಲಮೆಟಿಕ್’ ಹಾಗೂ ‘ಹುಷಾರಾಗಿ’ ಇರುವಂತೆ ಪ್ರೇರೇಪಿಸುತ್ತವೆ. ಭಯ, ನಿರ್ಲಕ್ಷ್ಯ ಹಾಗೂ ಪ್ರತ್ಯೇಕತೆಯೇ ಈ ಕಾರಣಗಳು. ಇವೆಲ್ಲವೂ ಪಾಪಮಯ ಹಾಗೂ ನಮ್ಮ ಪ್ರಭುಕ್ರಿಸ್ತರ ಭೋದನೆಗಳಿಗೆ ವಿರುಧ್ಧವಾಗಿವೆ. ಯೇಸು ನಮಗೆ ಹೇಳುವುದೇನೆಂದರೆ ‘ಭಯಪಡಬೇಡಿ; ನಾನು ನಿಮ್ಮೊಂದಿಗೆ ಇದ್ದೇನೆ,’
ಆಳುವವರು ನಮ್ಮನ್ನು ಹಿಂಸಿಸುತ್ತಾರೆ, ನಮ್ಮನ್ನು ಕೊಲ್ಲಯುತ್ತಾರೆ ಹಾಗೂ ನಮ್ಮ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂಬ ಭಯದಿಂದ ನಾವು ನ್ಯಾಯ ಹಾಗೂ ಸತ್ಯದ ಪರ ನಿಲ್ಲದೆ ಹೋದರೆ, ನಾವು ಕ್ರಿಸ್ತನಲ್ಲಿ ನಮಗೆ ಆಳವಾದ ವಿಶ್ವಾಸವಿಲ್ಲ, ನಮ್ಮದು ಕೇವಲ ಬಾಯಿ ಪಠಣ, ನಾವು ಆತನನ್ನು ನೈಜವಾಗಿ ವಿಶ್ವಾಸಿಸುವುದಿಲ್ಲ, ನಮ್ಮ ಸಂಪತ್ತು ಆಳುವವರ ಕೈಯಲ್ಲಿದೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ. ನಿರ್ಲಕ್ಷ್ಯ ಎಂದಿಗೂ ಒಳ್ಳೆಯ ಮೌಲ್ಯವಾಗಲು ಸಾಧ್ಯವಿಲ್ಲ. ಕ್ರಿಸ್ತ ಯೇಸುವೇ ‘ಕಾಲದ ಚಿಹ್ನೆ’ಗಳನ್ನು ಓದುವ ಅಸಮರ್ಥತೆಯ ಕುರಿತು ಹೇಳಿದ್ದಾರೆ.
ಹೌದು, ನಮ್ಮಲ್ಲಿ ಅನೇಕರು ಸಿಸಿಎಮ್ ರೋಗದಿಂದ (ಚರ್ಚು, ಕಾನ್ವೆಂಟು, ಕಾಂಪೌಂಡು ಮನಸ್ಥಿತಿ) ಇಂದ ಬಳಲುತ್ತಿದ್ದೇವೆ. ನಮ್ಮ ಪ್ರಯತ್ನ ಬೇರೆಯವರನ್ನು ಒಳಗೊಳ್ಳುವುದಿಲ್ಲ. ನಾವು ಗೂಡಿನೊಳಗೆ ಸೇರಿಕೊಂಡು ಬಿಡುತ್ತೇವೆ. ಕ್ರಿಸ್ತರ ತತ್ವವಾದ ಕಳೆದು ಹೋದವರನ್ನು, ಮೂಲೆಗುಂಪಾದವರನ್ನು ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ತಲುಪುವಿಕೆಯನ್ನು ನಾವು ಮರೆತಿದ್ದೇವೆ. ನಮ್ಮ ಕಿಟಕಿಗಳಾಚೆಗೆ ಇಣುಕಿ ನೋಡಿದಾಗ ನಾವು ಹಿಂಸೆಗೆ ಒಳಗಾಗಬಹುದು, ನಮ್ಮನ್ನು ಕೊಲ್ಲಬಹುದು ಹಾಗೂ ಬಹಿಷ್ಕರಿಸಬಹುದು. ಇವೆಲ್ಲದಕ್ಕೆ ಹೆದರಿ ನಾವು ಆಚೆ ಬರದಿದ್ದರೆ ನಾವು ನಮ್ಮ ನಂಬಿಕೆಯನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಕ್ರಿಸ್ತನಿಗೆ ಹಾಗೂ ಆತನ ಸಂದೇಶಕ್ಕೆ ದ್ರೋಹಿಗಳಾಗುತ್ತೇವೆ.
ಹೌದು, ಪ್ರೀತಿಯ ಬಿಷಪ್ಪರುಗಳೇ, ಇದನ್ನು ನೀವು ನಮ್ಮ ವಿಶ್ವಾಸಕ್ಕಾಗಿ, ಪ್ರಭುವಿನ ಶುಭಸಂದೇಶಕ್ಕಾಗಿ, ನಮ್ಮ ದೇಶದ ಜನರಿಗಾಗಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಸಂವಿಧಾನದ ಘನತೆಗಾಗಿ ಮಾಡಬೇಕಾದ ಅವಶ್ಯಕತೆ ಇದೆ. ಮುಂದೆ ನಮಗೆ ಮತ್ತೊಂದು ಅವಕಾಶ ಸಿಗಲಾರದು. ಭಾರತದಲ್ಲಿ ಧರ್ಮಸಭೆ ಇನ್ನೂ ಪಿತೃಪ್ರಧಾನವಾಗಿದೆ. ಭಾರತದ ಜನರು ಇಂದಿಗೂ ಸಹ ನಿಮ್ಮ ಕ್ರೀಸ್ತೀಯ, ನಿಸ್ವಾರ್ಥ ಹಾಗೂ ಸೇವಾ ಮನೋಭಾವದ ನಾಯಕತ್ವಕ್ಕಾಗಿ ಎದುರು ನೋಡುತ್ತಾರೆ. ಈ ದೇಶದ ಭವಿಷ್ಯದ ದೃಷ್ಟಿಯಲ್ಲಿ ಅವರನ್ನು ನಿರಾಸೆಗೊಳಿಸಬೇಡಿ.
ಸಾರ್ವಜನಿಕ ಹೇಳಿಕೆಗಳ ಮೂಲಕ ಅಸಾಂವಿಧಾನಿಕ ಕಾನೂನಾದ ಪೌರತ್ವ ನಾಗರೀಕ ಕಾಯ್ದೆ, ಎನ್‍ಆರ್ಸಿ, ಎನ್‍ಪಿಆರ್ ವಿರುಧ್ಧ ಧ್ವನಿಯೆತ್ತಿ. ನಮ್ಮ ದೇಶದ ಜಾತ್ಯಾತೀತತೆ ಹಾಗೂ ವೈವಿಧ್ಯತೆಯ ಪರವಾಗಿ ನಿಮ್ಮ ನಿಲುವನ್ನು ವ್ಯಕ್ತಪಡಿಸಲು ಬೆಂಗಳೂರಿನ ಬೀದಿಗಳಿಗೆ ಬನ್ನಿ. ಖಂಡಿತವಾಗಿಯೂ ಬೆಂಗಳೂರಿನ ಜನ ನಿಮ್ಮನ್ನು ಸೇರಿ ಕೊಳ್ಳುತ್ತಾರೆ ಹಾಗೂ ದೇಶದಾದ್ಯಂತ ಲಕ್ಷಾಂತರ ಜನರು ನಿಮ್ಮನ್ನು ಅನುಸರಿಸುತ್ತಾರೆ.
ಅಂತಿಮವಾಗಿ ನಾನು ಜರ್ಮನಿಯ ಪಾಸ್ಟರ್ ಮಾರ್ಟಿನ್ ನಿಮೊಲ್ಲರ್ನ ಮಾತುಗಳನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. "ಆಗ ಅವರು ನನಗಾಗಿ ಬಂದರು; ಆದರೆ ಅಲ್ಲಿ ನನಗಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ," ನಿಮ್ಮ ಆಶೀರ್ವಾದ ಹಾಗೂ ಪ್ರಾರ್ಥನೆಯನ್ನು ಬೇಡುತ್ತಾ, ಹಾಗೂ ನಿಮಗೆ ನನ್ನ ಪ್ರಾರ್ಥನೆಗಳ ಭರವಸೆಯನ್ನೀಯುತ್ತಾ,
ಆತನಲ್ಲಿ ನಿಮ್ಮವ,
ಸೆಡ್ರಿಕ್
No comments:
Post a Comment