ಜಾಜಿ ಎಂ. ದಾಸಾಪರ
ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ನಾವು ನೋಡುವುದಾದರೆ ಅದರಲ್ಲಿ ಪುರುಷರಂತೆ ಮಹಿಳೆಯರೂ ಸಹ ಎಲ್ಲಾ ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಪುರುಷರಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ ಎಂಬ ಮನೋಧೈರ್ಯವನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯರು ಈ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಚಿತ್ರಣ ನಮ್ಮ ಮುಂದಿದೆ. ಹೀಗೆ ಹಿಂದೆ ಅಸ್ತಿತ್ವದಲ್ಲಿದ್ದ ಪುರುಷಪ್ರಧಾನ ವ್ಯವಸ್ಥೆಗೆ ತನ್ನ ಕಾರ್ಯವೈಖರಿಯ ಮೂಲಕ ಉತ್ತರ ನೀಡುತ್ತಾ, ಪ್ರಸ್ತುತ ಸಮಾಜದ ಅಭಿವೃದ್ಧಿಗೆ ಪುರುಷರಂತೆ ಮಹಿಳೆಯರೂ ಕೂಡ ವರವಾಗಬಲ್ಲರು ಎಂಬುದನ್ನು ತಮ್ಮ ದಿಟ್ಟತನದಿಂದ ನಿರೂಪಿಸಿದ್ದಾರೆ.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಮಹಿಳೆಯರಿಗೆ ಅಂದು ಇದ್ದಂತಹ ಪರಿಸ್ಥಿತಿ ನಮಗೆ ಏನೆಂಬುದು ಅರ್ಥವಾಗುತ್ತದೆ. ಕೇವಲ ಮನೆಕೆಲಸಕ್ಕೆ ಮಾತ್ರ ಅವರನ್ನು ಸೀಮಿತಗೊಳಿಸಿ, ಹಲವಾರು ಕೆಟ್ಟ ವಿಧಿ-ಸಂಪ್ರದಾಯಗಳನ್ನು ಅವರ ಮೇಲೆ ಹೇರಿ, ಅವರು ಕುಟುಂಬಕ್ಕೆ ಮಾತ್ರ ಮೀಸಲು ಎಂಬ ಧೋರಣೆಯನ್ನು ಅವರ ಮೇಲೆ ಹೊರಿಸಿ, ಪುರುಷರ ಮಂದೆ ಅವರು ಮಾತನಾಡದಂತೆ ಅವನ್ನು ಹೀನಾಯವಾಗಿ ನೋಡಿಕೊಳ್ಳಲಾಗುತಿತ್ತು. ಅಪರೂಪಕ್ಕೆ ಒಬ್ಬರೋ ಇಬ್ಬರೋ ಎಂಬಂತೆ ವಿದಾಭ್ಯಾಸವನ್ನು ಪಡೆಯುತಿದ್ದರು. ಏಕೆಂದರೆ ವಿದಾಭ್ಯಾಸವೆಂಬುವುದು ಅವರಿಗೆ ಗಗನಕುಸುಮವಾಗಿತ್ತೇ ವಿನಃ ಕೈಗೆಟಕುವಂತದ್ದಾಗಿರಲಿಲ್ಲ. ಮುಕ್ಕಾಲು ಭಾಗ ಮಹಿಳೆಯರು ತಾವಾಯಿತು ತಮ್ಮ ಮನೆಕೆಲಸವಾಯಿತು ಎಂದುಕೊಂಡು ಜೀವನ ಸಾಗಿಸುತ್ತಿದ್ದರು. ಸಮಾಜದ ಆಗುಹೋಗುಗಳ ಬಗ್ಗೆ ಅವರಿಗೆ ತಿಳುವಳಿಕೆಯೇ ಇರಲಿಲ್ಲ. ನಿಜ ಹೇಳಬೇಕೆಂದರೆ ಆಗಿದ್ದ ಪುರುಷಪ್ರಧಾನ ವ್ಯವಸ್ಥೆಯೆಂಬ ಚಕ್ರವ್ಯೂಹಕ್ಕೆ ಸಿಲುಕಿ ಅವರು ಅನುಭವಿಸಿದ ಕಷ್ಟವನ್ನು ಹೇಳತೀರದು. ಇವರ ಮಾತಿಗೆ ಕಿಂಚಿತ್ತೂ ಬೆಲೆಯಿರಲಿಲ್ಲ. ಹೀಗೆ ಇವರಿಗೆ ಏನೂ ತಿಳಿಯದು ಎಂಬ ಸಮಾಜದ ಪರಿಕಲ್ಪನೆಯಲ್ಲಿ ಸಿಲುಕಿ ತುಂಬಾ ನಲುಗಿದ್ದರು. ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಇಂತಹ ಎಷ್ಟೋ ಘಟನೆಗಳು ನಮ್ಮ ಗಮನಕ್ಕೆ ಬಂದಿರುತ್ತವೆ.
ಅಂದಿನಕಾಲದಲ್ಲಿ ಮಹಿಳೆಯರು ಸಾಮಾಜಿಕವಾಗಿ ಬದುಕಲು ಅರ್ಹರಿದ್ದರೂ, ಆ ಬದುಕುವ ಹಕ್ಕನ್ನೇ ಅವರಿಂದ ಕಸಿದುಕೊಂಡು ಅವರು ಸದಾ ಕಣ್ಣೀರಿನಲ್ಲೇ ಕೈತೊಳೆಯುವಂತೆ ಮಾಡಿದ, ಅಂದಿನ ಆ ಕುರುಡು ಸಮಾಜದ ಸ್ಥಿತಿಯನ್ನು ಇವರಿಂದ ಹತ್ತಿಕ್ಕಲಾಗಲಿಲ್ಲವೆಂಬ ನೋವು ಬಹುಶಃ ಅಂದಿನ ಮಹಿಳೆಯರನ್ನು ಹೆಚ್ಚಾಗಿ ಕಾಡಿತ್ತು ಎಂಬುದರಲ್ಲಿ ಯಾವುದೇ ಅನುಮಾನÀವಿಲ್ಲ. ಅಷ್ಟೇ ಅಲ್ಲದೇ ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಉಂಟಾದ ಮಾನಸಿಕ ನೋವು, ದುಃಖ, ಹತಾಶೆ, ಎಷ್ಟಿತ್ತೆಂಬುದನ್ನು ಊಹಿಸಿಕೊಳ್ಳಲು ಅಸಾಧ್ಯ. ಸಮಾಜದ ಅಭಿವೃದ್ಧಿಗೆ ಮಹಿಳೆಯರೂ ಕೂಡ ವರವಾಗಬಲ್ಲರು ಎಂಬುದನ್ನು ಪುರುಷನು ಅರಿತುಕೊಳ್ಳದೇ ಮೂಢನಾಗಿಬಿಟ್ಟ. ಇದರಿಂದಾಗಿ ಮಾಢನಂಬಿಕೆಯೆಂಬ ವಿಷವರ್ತುಲದಲ್ಲಿ ಸಿಲುಕಿ ನೋವನ್ನೇ ತಮ್ಮ ಸಂಗಾತಿನÀನ್ನಾಗಿ ಮಾಡಿಕೊಂಡು ತಮಗೆ ಎಷ್ಟೇ ನೋವಾದರೂ ಅವುಗಳನ್ನೆಲ್ಲಾ ಮನಸ್ಸಿನಲ್ಲಿಯೇ ಅದುಮಿಟ್ಟುಕೊಂಡು ಕುಟುಂಬವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾ ತಮಗೂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ತಮಗೆ ತಾವೇ ಮೌನಿಯಾಗುತ್ತಿದ್ದರು.
ಇಷ್ಟೆಲ್ಲಾ ನೋವುಗಳನ್ನು ಅನುಭವಿಸಿದ್ದ ಮಹಿಳೆಯರಿಗೆ ಕಾಲಚಕ್ರ ಉರುಳಿದಂತೆ, ಬದಲಾವಣೆಯೆಂಬ ತಂಗಾಳಿ ಅವರ ಮೇಲೆ ಬೀಸತೊಡಗಿತು. ಮಾನವನ ಯೋಚನಾ ಲಹರಿ ಹಲವಾರು ಆಯಾಮಗಳನ್ನು ಕಂಡುಕೊಂಡಿತು. ಆ ಯೋಚನೆಗಳು ಮಹಿಳೆಯರಿಗೆ ವರವಾಗಿ ಪರಿಣಮಿಸಿದ್ದರಿಂದ ಅವರಿಗೂ ಸಮಾಜದಲ್ಲಿ ಒಂದು ಸ್ಥಾನಮಾನ ಎಂಬುವುದು ದೊರಕಿತು. ಮಹಿಳೆಯರ ಬದುಕಿನಲ್ಲಿ ಮಹತ್ತರ ಸ್ಥಾನಪಲ್ಲಟ ಆರಂಭವಾಯಿತು. ಮಹಿಳೆಯರಿಂದ ಏನೂ ತಾನೇ ಸಾಧ್ಯ ಎಂದುಕೊಂಡಿದ್ದ ಪುರುಷರಿಗೆ ಸಾಮಾಜಿಕ ಕೊಡುಗೆಗಳ ಮೂಲಕವೇ ಇವರು ನೇರವಾಗಿಯೇ ಉತ್ತರಕೊಡಲು ಸನ್ನದ್ಧರಾದರು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮಿಂದಲೂ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪುರುಷರಿಗೆ ತೋರಿಸಿಕೊಟ್ಟರು. ಹೀಗೆ ಪುರುಷರಷ್ಟೇ ನಾವು ಶಕ್ತರು ಎಂಬುದನ್ನು ತಮ್ಮ ಕಾರ್ಯರೂಪದಲ್ಲಿ ತೋರಿಸಿಕೊಟ್ಟರು.
ಇಂದಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಮಹಿಳೆಯರ ಪಾತ್ರ ಏನೆಂಬುದು ನಮಗೆ ತಿಳಿಯುತ್ತದೆ. ಸಮಾಜದ ಅಭಿವೃದ್ಧಿಗೆ ತಮ್ಮ ಕೈಗಳನ್ನು ಸೇರಿಸುವುದರ ಮೂಲಕ ವಿವಿಧ ಸ್ತರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವನ್ನೇ ಅವರು ನಿರ್ಮಿಸುತ್ತಿದ್ದಾರೆ. ತಾವೆÉೀ ಮಹಾಪುರುಷರು ಎಂದುಕೊಂಡಿದ್ದ ಅವರಿಗೆ ತಕ್ಕ ಉತ್ತರವನ್ನೇ ನೀಡುತ್ತಿದ್ದಾರೆ. ಇದರ ಮೂಲಕ ನಾವು ಸಬಲರಾಗಿದ್ದೇವೆÉಂದು ಇಡೀ ಜಗತ್ತಿಗೆ ಸಾರುತ್ತಿದ್ದಾರೆ. ಇಂದು ಎಷ್ಟೋ ಜನರಿಗೆ ಸಾಧನೆ ಮಾಡಲು ಇವರೆ ಸ್ಫೂರ್ತಿಯಾಗಿದ್ದಾರೆ. ತಾಯಿಯಾಗಿ ಮಕ್ಕಳ ಜವಾಬ್ದಾರಿ ಹೊತ್ತು, ಅವರ ಭವಿಷ್ಯದ ಕನಸಿಗೆ ತಮ್ಮ ಭುಜವನ್ನು ನೀಡುತ್ತಿದ್ದಾರೆ. ಅವರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬ ತಮ್ಮ ಯಶೋಗಾಥೆಯನ್ನು ಸಮಾಜದಲ್ಲಿ ಹಲವಾರು ರೀತಿಯಲ್ಲಿ ಬರೆದು, ಎಲ್ಲರಿಗೂ ತಮ್ಮ ತಾಕತ್ತು ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಅವರು ಸಮಾಜದ ಒಳಿತಿಗಾಗಿ ಪ್ರತಿದಿನವೂ ಇದೇ ರೀತಿ ಶ್ರಮಿಸಲಿ ಎಂದು ಹಾರೈಸುತ್ತಾ, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದುಕೊಂಡು ಮುನುಗ್ಗುತ್ತಿರುವ ಎಲ್ಲಾ ಮಹಿಳೆಯರಿಗೆ ಶ್ರೇಯಸ್ಸನ್ನು ಬಯಸುತ್ತಾ, ಅವರ ಈ ಸಾಧನೆ ಎಂಬ ದೀಪ ಎಂದೂ ಅವರ ಬಾಳಿನಲ್ಲಿ ಆರದಿರಲಿ ಎಂದು ಶುಭಕೋರೋಣವೇ?
0-0-0-0-0-0
No comments:
Post a Comment