Wednesday, 11 March 2020

ಪಶ್ಚಾತ್ತಾಪ

 - ಫಾದರ್ ವಿಜಯ ಕುಮಾರ್ ಪಿ, ಬಳ್ಳಾರಿ
ಮಾನವ ಸಂಘ ಜೀವಿ. ಆತ ಒಂಟಿಯಾಗಿ ಜೀವಿಸಲಾರ. ಪ್ರತಿ ಮಾನವನೂ, ಸಮುದಾಯದಲ್ಲಿ ಒಬ್ಬನಾಗಿ ಜೀವಿಸುತ್ತಾನೆ. ಸಮುದಾಯ, ಎಲ್ಲಾ ಮಾನವರ ಅವಿಭಾಜ್ಯ ಅಂಗ. ಪ್ರತಿ ಮಾನವ ಒಂದು ನಿಖರ ಚೌಕಟ್ಟಿನಲ್ಲಿ ನೀತಿ ನಿಯಮಗಳನ್ನು ಅನುಸರಿಸುತ್ತಾ ಸ್ವತಂತ್ರವಾಗಿ ಜೀವಿಸಲು ಕರೆ ಹೊಂದಿದ್ದಾನೆ. ಸಹಬಾಳ್ವೆ ಅವನ ಜೀವನದ ಪರಿ. ಸಹಕಾರವೇ ಸಹಬಾಳ್ವೆಗೆ ತಳಹದಿ. ಹಲವು ಬಾರಿ ಮಾನವ ತನ್ನ ಚೌಕಟ್ಟನ್ನೂ ಮೀರಿ ಸಮಾಜದ ನೀತಿ-ನಿಯಮಗಳನ್ನೂ ಮೀರಿ ವೈಯಕ್ತಿಕವಾಗಿಯೂ, ಸಾಮಾಜಿಕವಾಗಿಯೂ ಹಾಗೂ ಧಾರ್ಮಿಕವಾಗಿಯೂ ಇತರರಿಗೆ ತೊಡಕುಂಟುಮಾಡುತ್ತಾನೆ ಹಾಗೂ ಅವನು ಅವರ ಬಾಳಿಗೆ ಮುಳ್ಳಾಗುತ್ತಾನೆ. ಪ್ರತಿ ಸಮಾಜ ಒಂದು ಸುಂದರ ಕೊಳವಿದ್ದಂತೆ. ಆ ಕೊಳದ ನೀರು ಕದಡಿದಾಗ ನಮ್ಮ ಮೊಗವನ್ನಾಗಲೀ ಹಾಗೂ ಜಲಚರವಗಳನ್ನಾಗಲಿ ನೋಡಲಾಗದು. ಆದರೆ ನೀರು ತಿಳಿಯಾದಾಗ ಅದರಲ್ಲಿ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಹಾಗೆಯೇ ಮಾನವನ ಜೀವನ ಒಂದು ಸುಂದರ ಕೊಳವಿದ್ದಂತೆ. ಅದು ಕದಡಿದಾಗ ಮಾನವ ತಾನು ದೇವರ ಅತ್ಯಮೂಲ್ಯವಾದ ಸೃಷ್ಟಿ ಎಂಬುದನ್ನು ಮರೆತು, ದೇವರ ಹಾಗೂ ಮಾನವರ ಪ್ರೀತಿಗೆ ಮರು ಪ್ರೀತಿಯನ್ನು ತೋರುವ ಬದಲು ದ್ವೇಷವನ್ನು ಕಾರುತ್ತಾನೆ ಹಾಗೂ ತನ್ನ ಸುತ್ತ ಸ್ವಾರ್ಥದ ಸುಭದ್ರ ಗೋಡೆಯನ್ನು ಕಟ್ಟಿಕೊಳ್ಳುತ್ತಾನೆ. ದ್ವೇಷ, ಅಸೂಯೆ, ಅಹಂಕಾರ ಅವನ ನೈಜಕಣ್ಣುಗಳನ್ನು ಮುಚ್ಚಿಹಾಕುತ್ತದೆ, ಹೃದಯ ಕಠಿಣವಾಗುತ್ತದೆ. ಆಗ ಮಾನವ ದೇವರಿಗೂ, ತನಗೂ ಹಾಗೂ ಸಮಾಜಕ್ಕೂ ಹಿತವಲ್ಲದ್ದನ್ನು ಮಾಡುತ್ತಾನೆ. ಇದನ್ನೇ "ಪಾಪ" ಎನ್ನುತ್ತೇವೆ. ಇದು ಮಾನವ-ಮಾನವರ ನಡುವಿನ ಸಂಬಂಧವನ್ನು ಮತ್ತು ದೈವೀ ಸಂಬಂಧಗಳನ್ನು ಹದಗೆಡಿಸಿ, ಮುರಿದು ನುಚ್ಚುನೂರು ಮಾಡಿಬಿಡುತ್ತದೆ. ಮಾನವ ತನ್ನ ಮೂಲ ಘನತೆಯನ್ನು ಮಾತ್ರವಲ್ಲ, ದೇವರ ಪ್ರಸನ್ನತೆಯನ್ನೂ ಕಳೆದುಕೊಳ್ಳುತ್ತಾನೆ. ಆಗ ಅವನ ಪ್ರಶಾಂತವಾದ ಮನಸ್ಸೆಂಬ ಕೊಳವು ಕದಡಿ ರಾಡಿಯಾಗಿಬಿಡುತ್ತದೆ. ಇದನ್ನು ಸಂತ ಯಾಕೋಬರು ತಮ್ಮ ಪತ್ರದಲ್ಲಿ "ಮಾನವನು ಪ್ರಲೋಭನೆಗೆ ಬಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ. ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ, ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ" ಎನ್ನುತ್ತಾರೆ (ಯಾಕೋಬ 1:14-15). 
ಮಾನವ ದೇಹಾತ್ಮಗಳ ಸಮ್ಮಿಲನ. ಕಾರಣ ಪಾಪ ಮಾನವನ ದೇಹವನ್ನು ಮಾತ್ರವಲ್ಲ ಆತ್ಮವನ್ನೂ ಸಹ ಕಲುಷಿತಗೊಳಿಸುತ್ತದೆ. ಅವು ತಿಳಿಯಾಗಿ ಶುದ್ಧವಾಗಬೇಕಾದರೆ, ಮಾಡಿದ ಪಾಪಕ್ಕೆ "ಕ್ಷಮೆ" ದೊರಕಬೇಕು. "ಕ್ಷಮೆ" ದೊರಕಬೇಕಾದರೆ ಮಾಡಿದ ಪಾಪಕ್ಕೆ ಪೂರ್ಣ ಮನಸ್ಸಿನಿಂದ ದುಃಖಪಟ್ಟು ತಕ್ಕ ಪ್ರಾಯಶ್ಚಿತ್ತ ಮಾಡಬೇಕು. ತಕ್ಕ ಪ್ರಾಯಶ್ಚಿತ್ತವಿಲ್ಲದೆ ಮಾಡಿದ ಪಾಪಕ್ಕೆ, ಅದು ಸಣ್ಣದಿರಬಹುದು ಅಥವ ದೊಡ್ಡದಿರಬಹುದು ಕ್ಷಮೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಪ್ರಾಯಶ್ಚಿತ್ತ ಎಂದರೇನು? 
ಪ್ರಾಯಶ್ಚಿತ್ತವೆಂದರೆ,
1. ಆ ಕ್ಷಣದವರೆಗೆ ಮಾಡಿರುವ ಪಾಪಗಳೆಲ್ಲವನ್ನೂ ನೆನಪಿಸಿಕೊಳ್ಳಲು ದೇವರಲ್ಲಿ ಪೂರ್ಣಮನಸ್ಸಿನಿಂದ ಪ್ರಾರ್ಥಿಸುವುದು.
2. ಮಾಡಿದ ಎಲ್ಲಾ ಪಾಪಕ್ಕೆ ಮನ ಮರುಗುವುದು (ಮನಸಾರೆ ದುಃಖಿಸುವುದು) ಹಾಗೂ ಅದರ ತೀವ್ರತೆಯನ್ನು ಅರಿತು ಪಶ್ಚಾತ್ತಾಪ ಪಡುವುದು.
3. ಮಾಡಿದ ಎಲ್ಲಾ ಪಾಪವನ್ನು ಮನಸಾರೆ ಒಪ್ಪಿಕೊಂಡು ಕ್ಷಮೆಯಾಚಿಸುವುದು.
4. ಪಾಪವನ್ನು ಮತ್ತೊಮ್ಮೆ ಮಾಡದಿರುವಂತೆ ದೃಢವಾಗಿ ಹಾಗೂ ಪ್ರಾಮಾಣಿಕವಾಗಿ ನಿರಂತರವೂ ಪ್ರಯತ್ನಿಸಲು ಸಂಕಲ್ಪ ಮಾಡುವುದು (ಕಥೋಲಿಕ ಕ್ರೈಸ್ತರಾಗಿದ್ದಲ್ಲಿ ತಪ್ಪದೆ ಪಾಪನಿವೇದನೆ ಸಂಸ್ಕಾರವನ್ನು ಸ್ವೀಕರಿಸುವುದು).
5. ಪಾಪದಿಂದ ಉಂಟಾಗಿರುವ ನಷ್ಟವನ್ನು ತಪ್ಪದೆ ತುಂಬಿಕೊಡುವುದು. 
ಈ ಎಲ್ಲಾ ಕ್ರಿಯೆಗಳು ಪಾಪದಿಂದ ಕದಡಿದ ಮಾನವನ ಅಂತರಂಗವನ್ನು ಸರಿದಾರಿಗೆ ತರಲು ಸನ್ನದ್ಧವಾಗುತ್ತವೆ ಆದರೆ ಇದರ ಸಂಪೂರ್ಣ ಫಲವನ್ನು ಪಡೆಯಬೇಕಾದರೆ ದೇವರ ಕೃಪಾವರ, ಅವರ ಅನುಗ್ರಹ ಬೇಕೇ ಬೇಕು. ಮಾನವನ ಮನಸ್ಸು ಕ್ಷಣ ಕ್ಷಣವೂ ಎಡವಿ ಬೀಳುವಂತಹುದು. ಅದು ಸದೃಢವಾಗಿ, ಉತ್ತಮವಾಗಲು ದೇವರೊಡನೆ ಪ್ರಾರ್ಥನೆಯ ಮೂಲಕ ನಿಕಟ ಸಂಪರ್ಕದಿಂದಿರಬೇಕು. ಪಾಪಕ್ಕೆ ವಿಷಾದ ವ್ಯಕ್ತಪಡಿಸಿದರೆ ಸಾಲದು, ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಪಡಬೇಕು ಹಾಗೂ ಪಾಪಕ್ಕೆ ವಿಮುಖರಾಗಬೇಕು. ಸಂತ ಬೊನವೆಂಚರ್ "ಪಾಪಕ್ಕೆ ಪ್ರಾಯಶ್ಚಿತ್ತ ಪಡದ ಯಾರೊಬ್ಬನೂ ಹೊಸ ಜೀವನವನ್ನು ಪ್ರಾರಂಭಿಸಲಾರ" ಎನ್ನುತ್ತಾರೆ. ಹಾಗೆಯೇ ಪಾಪಕ್ಕಾಗಿ ಪಶ್ಚಾತ್ತಾಪವನ್ನು ದೂರವಿಡುವವನು ಕ್ಷಮೆಯ ಬಾಗಿಲನ್ನು ಮುಚ್ಚುತ್ತಾನೆ. ಹಾಗೂ ದೇವರೆಡೆಗೆ ಅಭಿಮುಖನಾದವನು ಪಾಪಕ್ಕೆ ಅಂಟಿಕೊಂಡಿರಲು ಸಾಧ್ಯವಿಲ್ಲ. ಇದನ್ನು ಕೀರ್ತನಕಾರ "ಆತನತ್ತ ತಿರುಗಿದ ಮುಖ ಅರಳುವುದು| ಲಜ್ಜೆಯಿಂದೆಂದಿಗೂ ಕುಂದಿಹೋಗದು" ಎನ್ನುತ್ತಾನೆ (ಕೀರ್ತನೆ 34:5)
ದೇವರು ಸದಾ ಪ್ರೇಮಮಯಿ. ಅವರು ಸರ್ವರನ್ನೂ ನಿರಂತರವೂ ಪ್ರೀತಿಸುವವರಾಗಿದ್ದಾರೆ. ಅವರ ಪ್ರೀತಿಗೆ ಅಂತ್ಯವೇ ಇಲ್ಲ. ಅವರು ಪಾಪಿಯನ್ನೂ ದ್ವೇಷಿಸುವುದಿಲ,್ಲ ಬದಲಾಗಿ ಅವರ ಮನ ಪರಿವರ್ತನೆಯನ್ನು ಸತತವೂ ಬಯಸುವವರಾಗಿದ್ದಾರೆ "ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲವಲೇಶವೂ ಸಂತೋಷವಿಲ್ಲ; ಅವನು ತನ್ನ ದುಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ" (ಯೆಜೆಕಿ 33:11) ಎಂದು ದೇವರು ತಮ್ಮ ಚಿತ್ತವನ್ನು ಪ್ರವಾದಿ ಯೆಜೆಕಿಯೇಲನ ಗ್ರಂಥದಲ್ಲಿ ತಿಳಿಸಿದ್ದಾರೆ.
 ಪಾಪ ಕ್ಷಮೆಗೆ ಪ್ರಾಯಶ್ಚಿತ್ತ ಅತಿ ಅವಶ್ಯಕ. ಈ ಕಾರಣ ಭಕ್ತನು (ಪಾಪಿಯು)
"ಖಂಡಿಸಬೇಡೆನ್ನ ಪ್ರಭು, ರೋಷದಿಂದ|
ದಂಡಿಸಬೇಡೆನ್ನ ಕಡುಕೋಪದಿಂ||
ಕನಿಕರಿಸು ಹೇ ಪ್ರಭು, ನಾನು ಬಲಹೀನನು|
ಗುಣಪಡಿಸು ಸಡಿಲವಾದ ಎನ್ನೆಲುಬುಗಳನು||
ಜೀವಾತ್ಮ ನಾ ಬಳಲಿ ತತ್ತರಿಸುತಿರುವೆ|
ಎಲ್ಲಿಯ ತನಕ ಪ್ರಭು ನೀ ಕೈಬಿಟ್ಟಿರುವೇ||" 
(ಕೀರ್ತನೆ 6:1-4) 
ಎಂದು ವಿನಯದಿಂದ ವಿನಂತಿಸಿ,
ಶುದ್ಧ ಹೃದಯವನು ದೇವಾ, ನಿರ್ಮಿಸು|
ಅಂತರಂಗವನು ಚೇತನಗೊಳಿಸು||
ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ|
ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ||
ಜೀವೋದ್ಧಾರವನು ಮರಳಿ
ಸವಿಯುವಂತೆ ಮಾಡು|
ವಿಧೇಯನಾಗಿ ನಡೆವ ಸಿದ್ಧಿ ಮನಸ್ಸನು ನೀಡು|| 
(ಕೀರ್ತನೆ 51:10-12)
ಎಂದು ಮನನೊಂದು, ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಟ್ಟು ಪ್ರಾರ್ಥಿಸಿದರೆ ಕರುಣಾಳುವೂ, ಕೃಪಾಳುವೂ ಆದ ಪ್ರಭು ಮಾನವನ ಪಾಪವನ್ನು ಅಳಿಸಿ ಮತ್ತೆ ಆತನ ಅಂತರಂಗದಲ್ಲಿ ತನ್ನ ಪ್ರಸನ್ನತೆಯನ್ನು ಮರುಸ್ಥಾಪಿಸಿ ಅವನನ್ನು ಪೂರ್ವಸ್ಥಿತಿಗೇರಿಸುವರು. 
 ಏಕೆಂದರೆ ಪ್ರಭುವಿಗೆ ಬಲಿಯರ್ಪಣೆಯಲ್ಲಿ ಒಲವಿಲ್ಲ, ದಹನ ಬಲಿಯಿತ್ತರೂ ಅವರಿಗೆ ಬೇಕಿಲ್ಲ "ಮುರಿದ ಮನವೇ ದೇವನೊಲಿದ ಯಜ್ಞವು| ನೊಂದು ಬೆಂದ ಮನವನಾತ ಒಲ್ಲೆಯೆನನು|| (ಕೀರ್ತನೆ 51:16-17) ಎನ್ನುತ್ತಾನೆ ಕೀರ್ತನಕಾರ. ಪಾಪದಲ್ಲಿ ಬಿದ್ದವರು ಮನನೊಂದು ಪಾಪದ ದುಷ್ಪರಿಣಾಮವನ್ನು ದ್ವೇಷಿಸಿ ಪ್ರಾಯಶ್ಚಿತ್ತ ಪಟ್ಟು ನಷ್ಟವನ್ನು ತುಂಬಿಕೊಡಲು ಬದ್ಧರಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾದರೆ ಪ್ರಭು ದೇವರು ಉದಾರವಾಗಿ ಕ್ಷಮಿಸುವರು. "ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ" ಎನ್ನುತ್ತಾನೆ ಪ್ರವಾದಿ ಯೆಶಾಯ (1:18-19) ಹೀಗೆ ಕ್ಷಮೆ ಪಡೆದ ಮಾನವರ ಅಂತರಂಗ ದೇವನ ತಾಣವಾಗಿ ಪರಿವರ್ತನೆಗೊಂಡು, ದ್ವೇಷ ಅಳಿದು ಪ್ರೀತಿ ಉದಯಿಸಿ, ಅದರ ಘಮಲು ಪರ ಸೇವೆಯ ಮೂಲಕ ಹೊರ ಹೊಮ್ಮತ್ತದೆ.
ಪಾಪ ವೈಯಕ್ತಿಕ ಸಂಬಂಧವನ್ನು ಮಾತ್ರವಲ್ಲ ಸಾಮಾಜಿಕವಾಗಿಯೂ ಸಂಬಂಧಗಳನ್ನು ಮುರಿದು ಛಿದ್ರಗೊಳಿಸುತ್ತದೆ. ಪೂರ್ಣ ಪ್ರಾಯಶ್ಚಿತ್ತ ಮುರಿದ ಎಲ್ಲಾ ಸಂಬಂಧಗಳನ್ನು ಮರು ಸ್ಥಾಪಿಸುತ್ತದೆ. ಆಗ ದೇವ-ಮಾನವನ ಸಂಬಂಧವು ಎಂದಿನಂತೆ ಮುಂದುವರಿಯುತ್ತದೆ. ಅದನ್ನು ಉಳಿಸಿಕೊಳ್ಳಲು ಮಾನವ ನಿರಂತರವೂ ಪ್ರಭು ದೇವನ ಸನಿಹವಿರಲು ಪ್ರಾರ್ಥನೆ, ಪರಪ್ರೀತಿ, ತ್ಯಾಗ, ದೇಹದಂಡನೆಗಳಿಂದ ಎಡಬಿಡದೆ ಪ್ರಯತ್ನಿಸುತ್ತ ಸಹನೆಯಿಂದಲೂ, ಸಂತೋಷದಿಂದಲೂ ಮುಂದೆ ಸಾಗಬೇಕು.

0-0-0-0-0-0

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...