Wednesday, 11 March 2020

ಅಳುಕಿದೆದೆಯ ಆತ್ಮಕಥೆ

ಅವನು ಕೆಲಸದವನು
ಹಾಕಿದ ಊಟ ಹೇಳಿದ ಕೆಲಸ
ಎದೆಗಾರಿಕೆಗೆ ಹೆಸರಾದವನು
ತೆರೆದೆದೆಗೆ ಗುರಿ ಇಟ್ಟವನು

ಹೊಕ್ಕ ಗುಂಡು
ಗುಂಡಿಗೆಯ ಛಿದ್ರಗೊಳಿಸಿತು ನರನಾಡಿಗಳ
ಈಡೇರದ ಕನಸುಗಳ
ಮುದಿಜೀವದ ಕೊನೆಯ ಆಸೆ ಏನೆಂದು
ಕೇಳದ ಗೋಜಿಗೆ ಬಯಲು ನಿಶ್ಯಬ್ದ

ಅದನ್ನೇ ಮತ್ತೆ ಮತ್ತೆ ರುಜುವಾತುಪಡಿಸಲೇ....?
ಮೇದಿನಿಯ ಮೇರೆ ಮೀರಿ
ಸೂರ್ಯ ಚಂದ್ರ ಗ್ರಹತಾರೆ ಲೋಕವ
ಕರೆದು ಕೂಗಲಿಲ್ಲ
ನಾ ನಾಯಕನೆಂದು
ದೇವರ ರಾಜ್ಯವ ಏರಿ ಹೋಗಿ
ವಿಜಯಪತಾಕೆ ಹಾರಿಸ ಹೊರಟ
ದಂಗೆಕೋರ ನಾನಲ್ಲ ಎಂದು

ಅಪಮಾನಿತರ ಕೊರಳ ಧ್ವನಿಯಾಗಿ
ಅನಾಥನ ಕೊಳಲನಾದದ ಶ್ರುತಿಯಾಗಿ
ಅಮಾಯಕ ಹೂವಿನ ಮಕರಂದವಾಗಿ
ಸತ್ಯದ ದಾರಿಯಲ್ಲಿ
ನ್ಯಾಯದ ನೇರದಲ್ಲಿ
ನೀರವ ಮೌನದಲ್ಲಿ
ಅರೆಬೆತ್ತಲ ಫಕೀರ ನಾನೆಂದು

ಕೆಲಸದವನಿಗೇನು ತಿಳಿಯಬೇಕು?
ನಾನು ಇನ್ನೆಂದೂ ಸವಕಲು ನಾಣ್ಯವೆಂದು
`ಗಾಂಧೀ ಮುರ್ದಾಬಾದ್’ ಕೂಗು ಮುಗಿಲು ಮುಟ್ಟಿದೆಂದು
ತಿದ್ದಲಾಗದ ಇತಿಹಾಸದ ತಪ್ಪಿಗೆ
ಮತ್ತು ನನ್ನ ಹೆಸರಿಗೆ
ಕ್ಷಮೆ ನೀಡಲಾಗದೆಂದು
ನನ್ನ ಸಾವ ನಾನೇ ಬಯಸಿದ್ದೆಂದು

ಕೋವಿಯ ಚಾಪನ್ನು ಎಳೆದ
ಅಚ್ಚ ಬಿಳಿಯ ಕೈ ಬೆರಳಿಗೆ ತಿಳಿದಿತ್ತು
ಅರ್ಧನಾರೀಶ್ವರನ ಕೊರಳ
ಉರುಳು ನಾನೆಂದು
ಮಹಾತ್ಮನ ಕೊಂದ ತಾನು ಹುತಾತ್ಮನೆಂದು
ಚರಿತ್ರೆಯಲ್ಲಿ ಮಹಾಸಾಧಕನೆಂದು


- ಡಾ. ದಿನೇಶ್ ನಾಯಕ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...