- ಜೋವಿ
ಈಶಾನ್ಯ ದೆಹಲಿಯು ದ್ವೇಷದ ಬೆಂಕಿಯಲ್ಲಿ ಹೊತ್ತಿ ಉರಿದು ಸುಮಾರು 42 ಜನರನ್ನು ಬಲಿತೆಗೆದುಕೊಂಡಿದೆ. ಎಷ್ಟೋ ಜನರ ಮೃತ ದೇಹಗಳು ಚರಂಡಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ತನ್ನವರನ್ನು ಕಳೆದುಕೊಂಡ ತಾಯಿಮಕ್ಕಳ ರೋಧನ ಹೇಳತೀರದು. ಮೃತದೇಹಗಳ ಮುಂದೆ ಕೂತು ಅಳುತ್ತಿರುವ ಮಕ್ಕಳನ್ನು ನೋಡಿದರೆ ಎದೆಯನ್ನು ಇರಿದಂತಾಗುತ್ತಿದೆ. ಮನೆಮಠಗಳನ್ನು ಕಳೆದುಕೊಂಡು ಹತಾಶರಾದ ಜನರ ಮಾತುಗಳನ್ನು ಕೇಳಿದರೆ ನೋವು ಕಟ್ಟೆಯೊಡೆದು ಅಸಹಾಯಕತೆಯಿಂದ ಕಿರುಚಿಕೊಳ್ಳುವುದು. ಹೌದು, ಗಲಭೆ ಶ್ರೀಮಂತರ ಮೆದುಳಿನಿಂದ ಆರಂಭವಾಗಿ ಬಡವರ ಶವದ ಮೇಲೆ ಕೊನೆಯಾಗುತ್ತದೆ ಎಂಬ ಮಾತು ಮತ್ತೊಮ್ಮೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳಿಂದ ರುಜುವಾಗಿದೆ.
ಈಶಾನ್ಯ ದೆಹಲಿಯಲ್ಲಿ “ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಪೆÇಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. “ನಮ್ಮ ಪ್ರದೇಶದಲ್ಲಿ ಪೊಲೀಸ್ ನಿಯೋಜಿಸಲಾಗಿದ್ದರೂ ಭಯದ ವಾತಾವರಣವಿದೆ. ನಾವು ಜೊತೆಯಾಗಿ ಈದ್, ಹೋಲಿ, ದೀಪಾವಳಿ ಆಚರಿಸಿದ್ದೆವು. ಆದರೆ ಇಂಥ ಘಟನೆಯನ್ನು ಎದುರಿಸಿರಲಿಲ್ಲ. ಹಿಂಸಾಚಾರದಲ್ಲಿ ತೊಡಗಿದ್ದವರು ಯಾರೂ ಈ ಪ್ರದೇಶದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ಶಿವವಿಹಾರ್ನಲ್ಲಿ ನನ್ನ ಬಟ್ಟೆ ಅಂಗಡಿಯಿದ್ದು, ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳು ಅಂಗಡಿ ಮೇಲೆ ದಾಳಿ ನಡೆಸಿದಾಗ ಸ್ಥಳೀಯ ಹಿಂದೂಗಳು ನನ್ನನ್ನು ರಕ್ಷಣೆ ಮಾಡಿದರು” ಎಂದು ಮೊಹಮ್ಮದ್ ಯೂನಸ್ ಹೇಳಿದ್ದಾರೆ. ಗಲಭೆಯಲ್ಲಿ ಮನೆ ಕಳೆದುಕೊಂಡ ಬಿಎಸ್‍ಎಫ್ ಕಾನ್ಸ್ಟೆಬಲ್ ಮೊಹಮ್ಮದ್ ಅನೀಸ್‍ಗೆ 10 ಲಕ್ಷ ಪರಿಹಾರವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಡುಗಡೆಗೊಳಿಸಿದ್ದಾರೆ. ಬ್ರಹ್ಮಪುರಿ ಸೇರಿದಂತೆ ಹಿಂಸಾಚಾರ ನಡೆದ ಕೆಲ ಪ್ರದೇಶಗಳಿಗೆ ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಭೇಟಿ ನೀಡಿ ಮಾತುಕತೆ ನಡೆಸಿ “ಹಿಂಸಾಚಾರದಿಂದ ಹಲವರು ಆಘಾತಕ್ಕೊಳಗಾಗಿದ್ದು, ಅಂಥವರಿಗೆ ಸಮಾಧಾನ ಹೇಳಲು ಎಲ್ಲರೂ ಜೊತೆಯಾಗಬೇಕು. ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದ್ದಾರೆ. “ದೆಹಲಿ ಕೋಮುಗಲಭೆ ‘ಪೂರ್ವಯೋಜಿತ ಹಿಂಸಾಚಾರ’ವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ದೆಹಲಿಗೆ ಭೇಟಿ ನೀಡಬೇಕು” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಗ್ರಹಿಸಿದ್ದಾರೆ. ‘ದೆಹಲಿ ಗಲಭೆಯ ಸಂತ್ರಸ್ತರಿಗೆ ವಿಶ್ವವಿದ್ಯಾಲಯವು ತೆರೆದಿರುತ್ತದೆ’ ಎಂದು ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ (ಜೆಎನ್ಯುಎಸ್ಯು) ಕರೆಗೆ ಸಂತ್ರಸ್ತರಿಗೆ ಆಶ್ರಯ ನೀಡಿದರೆ ಅಂಥ ವಿದ್ಯಾರ್ಥಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜೆಎನ್ಯು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನೋಟಿಸ್ ಮೂಲಕ ಎಚ್ಚರಿಸಿದ್ದಾರೆ. ಇಷ್ಟೆಲ್ಲಾ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು. ಆದರೆ ಫೇಸ್ ಬುಕ್‍ನಲ್ಲಿ ಓದಿದ ‘ನಾನು ಯಾವ ವರ್ಗಕ್ಕೆ ಸೇರುತ್ತೇನೆ’(Which category do we belong to? by Einaahuwalia)ಎಂಬ ಬರಹ ನಿಜವಾಗಿಯೂ ಕಣ್ಣು ತೆರೆಸುವಂಥದ್ದು. ಅದನ್ನು ಭಾವಾನುವಾದ ಮಾಡಿದ್ದೇನೆ. ದಯವಿಟ್ಟು ಓದಿ.
ನಾವು ಇದೀಗ ಏಳು ರೀತಿಯ ಭಾರತೀಯರನ್ನು ಕಾಣಬಹುದಾಗಿದೆ:
ಕಳವಳಗೊಂಡವರು/ಹೆದರಿರುವವರು
ಬೇಲಿ ಮೇಲೆ ಕುಳಿತುಕೊಂಡಿರುವವರು
ಆರಾಮವಾಗಿ ನಿಶ್ಚಿಂತೆಯಿಂದಿರುವವರು
ಆನಂದಿಸುವವರು/ಸಂಭ್ರಮಿಸುತ್ತಿರುವವರು
ಬಲಿಪಶುಗಳು
ದುಷ್ಕರ್ಮಿಗಳು
‘ನಾಯಕರು’
ಕೋಮುಗಲಭೆಗಳನ್ನು ಕಂಡು ಗಾಬರಿಗೊಂಡವರಿಗೆ ನಿಜವಾಗಲೂ ಧನ್ಯವಾದಗಳನ್ನು ಹೇಳಲೇಬೇಕು. ನಿಮ್ಮದು ತಾಯ್ತನದ ಹೃದಯ; ಇನ್ನೊಬ್ಬ ವ್ಯಕ್ತಿಯ ನೋವನ್ನು ಗ್ರಹಿಸಿವುದಲ್ಲದೆ ಅವರ ಪರವಾಗಿ ಮಿಡಿಯುವ ಅನುಭೂತಿ ಹೃದಯ. ಹೌದು, ಮಾನವೀಯತೆಯನ್ನು ತನ್ನ ಹೃದಯದಲ್ಲಿ ಇರಿಸಿಕೊಳ್ಳುವಷ್ಟು ವಿಶಾಲ ಹೃದಯವನ್ನು ಹೊಂದಿದ್ದಕ್ಕಾಗಿ ಧನ್ಯವಾದ ಹೇಳಲೇ ಬೇಕು. ಸಹಬಾಳ್ವೆ, ಗೌರವ ಮತ್ತು ಶಾಂತಿಯ ಪರಿಕಲ್ಪನೆಗಳನ್ನು ಗ್ರಹಿಸಬಲ್ಲ ಮನಸ್ಸನ್ನು ಹೊಂದಿದ್ದಕ್ಕಾಗಿ ಧನ್ಯವಾದ ಹೇಳಲೇ ಬೇಕು.
ದ್ವೇಷದ ಶಕ್ತಿಯನ್ನು ದಮನಿಸಲು ಕಾರ್ಯಪ್ರವೃತರಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಹೇಳಲೇಬೇಕು. ಜನರನ್ನು ಸಂಘಟಿಸುವುದರಿಂದ ಹಿಡಿದು ದುಷ್ಟ ಶಕ್ತಿಯನ್ನು ವಿರೋಧಿüಸಲು ಮಾಡುತ್ತಿರುವ ಪ್ರತಿಯೊಂದು ಕ್ರಿಯೆಯು ಉದಾತ್ತವಾದುದು. ಜನರನ್ನು ಸಂಘಟಿಸಿ, ಸಜ್ಜುಗೊಳಿಸುವುದು ಮಾತ್ರವಲ್ಲದೆ ಧ್ವನಿಮುದ್ರಿಕೆ, ದಾಖಲೀಕರಣ, ಆರ್ಥಿಕ ಸಹಾಯ ಸಾಮಾಜಿಕ ಜಾಲತಾಣಗಳಲ್ಲಿ ಜನಪರ ಫೋಸ್ಟ್ ಹಾಕುವಿಕೆ, ಇವೆಲ್ಲಾ ಕೆಲಸಗಳಿಗೆ ಬೇಕಾದ ತಮ್ಮ ಕೌಶಲ್ಯಗಳನ್ನು ಸಂಪನ್ಮೂಲಗಳನ್ನು ಧಾರೆಯೆರೆಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಲೇಬೇಕು. ದಯವಿಟ್ಟು ನಿಮ್ಮ ಬಗ್ಗೆ ಕಾಳಜಿ ವಹಿಸಿ. ನೀವು ಅಮೂಲ್ಯರು ಮತ್ತು ಈ ಹೋರಾಟವು ದೀರ್ಘವಾಗಿರುತ್ತದೆ ಮತ್ತು ದೀರ್ಘವಾಗಿಸಲು ನಮಗೆ ನೀವು ಬೇಕು.
ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ನೊಂದಿರುವವರೆ, ಅಘಾತಗೊಂಡಿರುವವರೆ ನಿಮ್ಮ ಬಗ್ಗೆಯೂ ಕಾಳಜಿ ವಹಿಸಿ. ಸ್ವಲ್ಪ ವಿಶ್ರಾಂತಿ ಪಡೆಯಿರಿ, ಆದರೆ ಶೀಘ್ರದಲ್ಲೇ ಹಿಂತಿರುಗಿ. ನಿಜವಾದ ಹಿಂಸಾಚಾರದಿಂದ ಬಳಲುತ್ತಿರುವವರಿಗೆ ಹೋಲಿಸಿದರೆ ನಮ್ಮ ಆಘಾತ, ನೋವು ಅಷ್ಟಕಷ್ಟೆ ನಮ್ಮೆಲ್ಲಾ ಭಾವನಾತ್ಮಕ ಶಕ್ತಿಯನ್ನು ಕ್ರೋಢಿಕರಿಸಿ ಧ್ವನಿರಹಿತರ ಧ್ವನಿಯಾಗುವ ಜವಾಬ್ದಾರಿ ನಮ್ಮ ಮೇಲಿದೆ. ದುಷ್ಟತೆಯನ್ನು ಎಲ್ಲಾ ರೀತಿಯಲ್ಲಿ ವಿರೋಧಿಸಿ “ಇದು ನಮಗೆ ಸ್ವೀಕಾರಾರ್ಹವಲ್ಲ” ಎಂದು ಒಕ್ಕೊರಲಿನಿಂದ ಕೂಗಿ ಹೇಳಬೇಕಾದ ಅನಿವಾರ್ಯತೆ ನಮಗಿದೆ. ಈ ಕಾಲಘಟದಲ್ಲಿ ಮತ್ತು ನಮ್ಮ ಹೆಸರಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಘಟಿಸಲು ನಾವು ಅವಕಾಶ ಮಾಡಿಕೊಡಬಾರದು. ನಿಮ್ಮ ಅನುಕಂಪ ಮತ್ತು ಪರಾನುಭೂತಿ ನಿಮ್ಮ ದೊಡ್ಡ ಶಕ್ತಿ. ನಾನು ನಿಮ್ಮನ್ನು ನಂಬುತ್ತೇನೆ.
ಬೇಲಿ ಮೇಲೆ ಕುಳಿತುಕೊಂಡಿರುವ ಆತ್ಮೀಯರೇ ಮತ್ತು ಗೊಂದಲಕ್ಕೆ ಒಳಗಾಗಿರುವವರೆ ನೀವು ಎರಡೂ ಕಡೆಯವರ ಕಥೆಯನ್ನು ಕೇಳುತ್ತಿದ್ದೀರಿ ಮತ್ತು ನಿಜವಾಗಿಯೂ ಏನು ನಡೆಯುತ್ತಿದೆ ಎಂಬ ಬಗ್ಗೆ ಗೊಂದಲಕ್ಕೊಳಗಾಗಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ವಾಸ್ತವವನ್ನು ಗ್ರಹಿಸಿ ಮಾಹಿತಿಯನ್ನು POST ಅಥವಾ ವರದಿ ಮಾಡುವ ಜನರನ್ನು ಮತ್ತು ತರ್ಕದ ಆಧಾರದ ಮೇಲೆ ಸ್ಪಷ್ಟತೆಯನ್ನು ನೀಡುವ ಜನರನ್ನು ಅನುಸರಿಸಿ, ಆದರೆ ಉನ್ಮಾದಕ್ಕೆ ಒಳಗಾಗಬೇಡಿ. ಗುಲಾಮಿ ಮಾಧ್ಯಮವನ್ನು ಬಿಟ್ಟು ಸ್ವತಂತ್ರ ಮಾಧ್ಯಮವನ್ನು ಓದಿಕೊಳ್ಳಿ. ಸತ್ಯವನ್ನು ನೀವೇ ಪರಿಶೋಧಿಸಿ ಗ್ರಹಿಸಿಕೊಳ್ಳಿ. ನೈಜ ಮಾಹಿತಿ ಪಡೆದುಕೊಳ್ಳಲು ನಿಮಗೆ ನೀವೇ ಶಿಕ್ಷಕರಾಗಿರಿ.
ಆರಾಮವಾಗಿ ನಿಶ್ಚಿಂತೆಯಿಂದಿರುವವರೇ ತಿಳಿದುಕೊಳ್ಳಿ ಅನುಕೂಲವಂತರ ಜನರ ಮನೋಭಾವ ನನಗೆ ಚೆನ್ನಾಗಿ ತಿಳಿದಿದೆ. ನೀವು ಗುಲಾಬಿ ಬಣ್ಣದ ಕನ್ನಡಕದ ಮೂಲಕ ಜಗತ್ತನ್ನು ನೋಡುತ್ತೀರಿ. ಜಗತ್ತಿನ ನ್ಯೂನತೆಗೆ ಕಣ್ಣನ್ನು ಮುಚ್ಚಿ ಜಾಣಕುರುಡರಾಗಿ ವರ್ತಿಸುತ್ತೀರಿ. ಹೌದು ನಿಮಗೂ ಬದುಕು ಸುಂದರ ಹೂವಾಗಿರಲಿಲ್ಲ. ನೀವು ಶ್ರಮಿಸಿದ್ದೀರಿ ಎಂದು ಹೇಳುತ್ತೀರಿ. ಒಂದು ಹೊತ್ತು ಊಟಕ್ಕಾಗಿ ಎಂತಹ ಕೆಲಸ ಮಾಡಲು ಸಿದ್ಧನಿರುವ ದಿನಕೂಲಿಯೊಬ್ಬನ ಜತೆಗೆ ನಿಮ್ಮನ್ನು ಹೋಲಿಸಲು ಬಯಸುತ್ತೀರಾ? ನಿಮ್ಮ ಸುಖಭರಿತ ಮತ್ತು ಅನುಕೂಲಕರ ಬದುಕಿನ ಬಗ್ಗೆ ಅಸಹ್ಯ ಪಡಿ ಎಂದು ಹೇಳುತ್ತಿಲ್ಲ. ನಿಮ್ಮಲ್ಲಿರುವ ಸವಲತ್ತುಗಳನ್ನು ಗುರುತಿಸಿ. ಶ್ರೀಮಂತಿಕೆ, ಸಾಮಾಜಿಕ ಸ್ಥಾನಮಾನ ಜಾತಿ ಧರ್ಮ ಅಥವಾ ಸಕಲ ಸೌಕರ್ಯಗÀಳನ್ನು ಹೊಂದಿರುವ ಕುಟುಂಬದಲ್ಲಿ ಹುಟ್ಟಿರುವ ನೀವು ಅದೃಷ್ಟಹೀನ ಬದುಕುಗಳಿಗೆ ಜೀವ ಕೊಡಲು ನಿಮ್ಮ ಸವಲತ್ತುಗಳನ್ನು ಬಳಸಿ. ಹುಟ್ಟಿನಿಂದ ನೀವು ಸಕಲ ಸವಲತ್ತುಗಳನ್ನ ಪಡೆದುಕೊಂಡರೆ ಹುಟ್ಟಿನಿಂದಲೇ ಎಲ್ಲಾ ರೀತಿಯ ಸ್ಥಾನಮಾನಗಳನ್ನು ಕಳೆದುಕೊಂಡವರು ಅವರು. ಆದ್ದರಿಂದ ನಾವು ಮಾಡಬಹುದಾದ ಕನಿಷ್ಠವೆಂದರೆ ನಮ್ಮ ಜಾಣಕುರುಡತನವನ್ನು ಬಿಟ್ಟು ನಮ್ಮ ಸಂತೃಪ್ತಿಯ ವಲಯದಿಂದ ಹೊರಬಂದು ಎಲ್ಲರನ್ನು ಸಮಾನ ಗೌರವದಿಂದ ಕಾಣುತ್ತಾ, ಈ ಭೂಮಿ, ಆಕಾಶ, ನಗರಗಳು ನಿಮಗೆಷ್ಟು ಅವಶ್ಯಕತೆಯೋ ಅಷ್ಟೇ ಅವಶ್ಯಕತೆ ಬಡವರಿಗೂ ಇದೆ ಎಂದು ತಿಳಿಯಬೇಕಾಗಿದೆ. ನೀವು ಮತ್ತು ಬಡವರು ಧರಿಸಿಕೊಳ್ಳುವ ಬಟ್ಟೆಗಳಲ್ಲಿ, ಸೇವಿಸುವ ಅಹಾರದಲ್ಲಿ, ವಾಸಿಸುವ ಮನೆಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಅವರ ಜೀವನ, ಬದುಕು ನಿಮಷ್ಟೇ ಮೌಲ್ಯವಾದುದ್ದು. ನೀವು ಇದನ್ನು ಓದುವಾಗ ನಿಮಗೆ ಘಾಸಿಯಾಗಬಹುದು, ಅಸಮಾಧಾನವಾಗಬಹುದು! ಆದರೆ ನಾನು ಹೇಳುತ್ತಿರುವ ಮಾತುಗಳು ನಗ್ನ ಸತ್ಯದ್ದು. ನಿಮ್ಮ ಆತ್ಮವನ್ನು ದೀರ್ಘಕಾಲ ದಿಟ್ಟಿಸಿ ನೋಡಿ ನಿಮ್ಮಲ್ಲಿರುವ ಮಾನವೀಯತೆ ಎದ್ದು ಕಾಣುವುದಲ್ಲದೇ ಜಾಗೃತಗೊಂಡು ನನ್ನ ಮಾತು ಸತ್ಯವೆಂದು ನಿಮಗೆ ಸ್ಪಷ್ಟಪಡಿಸುವುದು. ಜೊತೆಗೆ ನಿಮ್ಮ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಕೊಲೆ, ಜೀವಂತ ಸುಡುವುದು, ಬೆಂಕಿ ಹಚ್ಚುವುದು ಹಿಂದೆಂದೂ ಇಲ್ಲದ ರೀತಿಯಲ್ಲಿ ನಿಮಗೆ ನೋವುಂಟು ಮಾಡುವುದು. ಜತೆಗೆ ಸವಲತ್ತುಗಳೊಂದಿಗೆ ಹುಟ್ಟಿರುವ ನೀವು ನಿಮ್ಮ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸಮಾನ ಜಗತ್ತನ್ನು ಸೃಷ್ಟಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬ ಸತ್ಯದ ಅರಿವು ನಿಮಗಾಗುವುದು.
ಸಾವನ್ನು ಸಂಭ್ರಮಿಸುವವರೆ ಒಂದು ದಿನ ಯಾವುದೋ ಒಂದು ಅತಿಮಾನುಷ ಶಕ್ತಿ ನಿಮ್ಮ ಹೃದಯದ ಬೆಳಕು ಮತ್ತು ಪ್ರೀತಿಯನ್ನು ಜಾಗೃತಗೊಳಿಸುವುದು. ಇಂದು ದ್ವೇಷದಿಂದ ಇತರರ ಸಾವನ್ನು ಸಂಭ್ರಮಿಸುತ್ತಿರುವ ನೀವು ಸಾವನ್ನಪ್ಪಿದ ಜನರು ನಿಮ್ಮ ಸಹೋದರರು ಮತ್ತು ಸಹೋದರಿಯರು ಎಂಬ ಅರಿವು ನಿಮಗೆ ಆಗದೆ ಇರುವುದಿಲ್ಲ. ಸತ್ತವರ ರಕ್ತದ ಕಲೆ ನಿಮ್ಮ ಕೈಗಳಿಗೆ ಅಂಟಿಕೊಂಡಿದೆ.
ದ್ವೇಷಕ್ಕೆ ಬಲಿಯಾದವರೆ ನಿಮ್ಮ ಕ್ಷಮೆಯನ್ನು ಕೋರುತ್ತೇನೆ. ಕ್ರೂರ ಮಾನವರು ನಿಮ್ಮನ್ನು ಹೊಡೆದು ಸಾಯಿಸಿದ್ದಾರೆ. ಹೌದು ಪ್ರಾರ್ಥನೆ ಮುಗಿಸಿ ಮನೆಯಲ್ಲಿದ್ದ ಮಕ್ಕಳಿಗೆ ಊಟವನ್ನು ಹೊತ್ತು ಹಿಂದಿರುಗುವಂತಹ ಸಂದರ್ಭದಲ್ಲಿ ನಿಮ್ಮನ್ನು ಅಮಾನುಷವಾಗಿ ಹೊಡೆದು ಕೊಲ್ಲಲಾಗಿದೆ. ಪ್ರಾಣಕ್ಕೆ ಹೆದರಿ ಮನೆಯಲ್ಲೇ ಸೆರೆಯಾಳಾಗಿರುವವರೆ, ಮನೆಮಠ, ವ್ಯವಹಾರ, ಪೂಜಾ ಸ್ಥಳವನ್ನು ಹೀಗೆ ಎಲ್ಲವನ್ನು ಕಳೆದುಕೊಂಡ ಜನರೆ; ಹೆದರಬೇಡಿ ದ್ವೇಷದ ಅಲೆಯ ವಿರುದ್ಧ ನಾನು ತಡೆಗೋಡೆಯಾಗಿ ನಿಲ್ಲುತ್ತೇನೆ ಎಂದು ನಿಮಗೆ ಭರವಸೆಯನ್ನು ನೀಡುತ್ತೇನೆ. ನಾನು ಮಾತ್ರವಲ್ಲ ಲಕ್ಷಾಂತರ ಜನರು ನಿಮ್ಮ ರಕ್ಷಣೆಗೆ ಎದೆಯೊಡ್ಡಿ ನಿಲ್ಲುತ್ತೇವೆ ಎಂದು ನಿಮಗೆ ಭರವಸೆಯನ್ನು ನೀಡುತ್ತಿದ್ದೇನೆ.
ಘೋಷಣೆಗಳನ್ನು ಕೂಗುವ, ಸುಡುವ, ಇರಿಯುವ, ಹೊಡೆಯುವ, ಆಸಿಡ್ ಮತ್ತು ಪೆಟ್ರೋಲ್ ಬಾಂಬ್ ಎಸೆಯುವ ಜನಸಮೂಹವೇ ನೆನಪಿಟ್ಟುಕೊಳ್ಳಿ - ಭಾರತೀಯರನ್ನು ನೀವು ನಾನಾ ವರ್ಗಗಳಾಗಿ ವರ್ಗಿಸಬಹುದು, ಆದರೆ ಇರುವುದು ಒಂದೇ ಮಾನವಕುಲ. ನಿಮ್ಮ ಕ್ರೂರ ದಾಳಿಗಳು ನಡೆಯುತ್ತಿರುವುದು ನಿಮ್ಮ ಆತ್ಮದ ಮೇಲೆ ಎಂಬುವುದನ್ನು ಮರೆಯದಿರಿ.
ದ್ವೇಷವನ್ನು ಆರಾಧಿಸುವ ಆತ್ಮೀಯ ನಾಯಕರೇ ತಿಳಿದುಕೊಳ್ಳಿ ನಿಮಲ್ಲಿ ಅಗಾಧ ಶಕ್ತಿ ಇರಬಹುದು. ಆದರೆ ಒಂದು ದಿನ ನೀವು ಖಂಡಿತ ಸೋಲುತ್ತೀರಿ. ಆಗ ಸೂರ್ಯ ಪ್ರಕಾಶಮಾನವಾಗಿ ಉದಯಿಸುತ್ತಾನೆ. ಏಕೆಂದರೆ ದ್ವೇಷಕ್ಕಿಂತಲೂ ಪ್ರೀತಿ ಹೆಚ್ಚು ಶಕ್ತಿಶಾಲಿ ಎಂಬ ಸರಳ ಸತ್ಯವನ್ನು ನಾನು ಎಂದೂ ನಂಬುತ್ತೇನೆ.
ಕೊನೆಗೆ,
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ಕೂಡಲಸಂಗಮದೇವಾ.
ನಮ್ಮ ರಕ್ಷಣೆ ಮಾಡಬೇಕಾಗಿರುವ ನಾಯಕರೇ “ಗೋಲಿ ಮಾರೊ” (ಗುಂಡಿಕ್ಕಿ) ಎಂಬ ಘೋಷಣೆಗಳಿಂದ ಪ್ರಚೋದಿಸಿ ಕೊಲೆಗೆ ಕರೆಕೊಟ್ಟರೆ ನಮ್ಮ ರಕ್ಷಣೆಗೆ ಯಾರ ಬಳಿ ಹೋಗುವುದು?
“ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ, ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥ ಮೂಲವಾದ ಕುರುಡು ನೆಪದಲ್ಲಿ, ಅವಿವೇಕದ ಮೌಢ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ಚಿನ್ನದ ನಕಲಿ ಮುಲಾಮು ಹಚ್ಚಿ, ಜನರನ್ನು ದಿಕ್ಕು ತಪ್ಪಿಸಿ ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನ ದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚಕ ಮತ್ತು ಪರವಂಚಕತನದ ಉದ್ಯೋಗ ಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೇ ಫೋ್ಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರೆದರೂ, ವೈಜ್ಞಾನಿಕ ದೃಷ್ಠಿಯಾಗಲಿ, ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ.” ಎಂಬ ಕುವೆಂಪು ಅವರ ಮಾತುಗಳು ಆಗಾಗ ನನ್ನಲ್ಲಿ ಪ್ರತಿಧ್ವನಿಸುತ್ತಿದೆ.
0-0-0-0-0-0
No comments:
Post a Comment