Friday, 13 March 2020

ಯೊವಾನ್ನರ ಶುಭಸಂದೇಶ


ಸಹೋ. ವಿನಯ್ ಕುಮಾರ್

ಈ ಸಂಚಿಕೆಯಲ್ಲಿ ಸಂತ ಯೊವಾನ್ನರ ಶುಭಸಂದೇಶದ ರಚನೆಯ ಬಗ್ಗೆ ತಿಳಿದುಕೊಳ್ಳೋಣ. ಸಂತ ಯೊವಾನ್ನರ ಶುಭಸಂದೇಶವನ್ನು ಇತರೆ ಶುಭಸಂದೇಶಗಳಿಗೆ ತುಲನೆ ಮಾಡಿದರೆ ಈ ಶುಭಸಂದೇಶವು ಮೇಲ್ನೋಟಕ್ಕೆ ಸಾಧಾರಣವೆಂಬತೆ ಕಂಡುಬರುತ್ತದೆ. ಸಂತ  
ಯೊವಾನ್ನರ ಶುಭಸಂದೇಶವನ್ನು ಮುಖ್ಯವಾಗಿ ಎರಡು ವಿಭಾಗವಾಗಿ ವಿಂಗಡಿಸಬಹುದು; 1) ಸಾಂಕೇತಿಕ ಪುಸ್ತಕ. 2) ಮಹಿಮೆಯ ಪುಸ್ತಕ. ಇದರ ಜೊತೆಗೆ ಮುನ್ನುಡಿ ಹಾಗೂ ಸಮಾಪ್ತಿ. ಮುನ್ನುಡಿ- 1:1-18, ಸಾಂಕೇತಿಕ ಪುಸ್ತಕ 1:19-12:50, ಮಹಿಮೆಯ ಪುಸ್ತಕ 13:1-20:31 ಹಾಗೂ ಸಮಾಪ್ತಿ 21:1-25. ಸ್ಥಳಾಂತರ ಸಿದ್ಧಾಂತವು ನಮಗೆ ಕೆಲವೊಂದು ಅಧ್ಯಾಯಗಳು ಶುಭಸಂದೇಶದ ಒಳಗೆ ಸರಿಯಾದ ಜಾಗದಲ್ಲಿ ಇಲ್ಲ ಎಂಬುದನ್ನು ತಿಳಿಸುತ್ತದೆ. ಒಂದಲ್ಲ ಒಂದು ಕಾರಣಕ್ಕೆ ಕೆಲವು ಅಧ್ಯಾಯಗಳು ಸ್ಥಳಾಂತರಗೊಂಡಿದೆ, ಆದ್ದರಿಂದ ನಾವು ಸರಿಯಾದ ರೀತಿಯಲ್ಲಿ ಶುಭಸಂದೇಶವನ್ನು ತಿಳಿಯಬೇಕಾದರೆ  ನಾವು ಮರುರಚನೆ ಮಾಡಿ ವಿಷಯದ ಬಗ್ಗೆ ಅಧ್ಯಯನ ಮಾಡುವುದು ಸೂಕ್ತವಾಗಿದೆ. ಏಕೆ ಶುಭಸಂದೇಶದ ರಚನೆಯ ಕ್ರಮ ಸರಿ ಇಲ್ಲ? ಎಂಬ ಪ್ರಶ್ನೆಗೆ  ಇಲ್ಲಿ ತಾರ್ಕಿಕವಾದ ಹಾಗೂ ಕ್ರಮಬದ್ಧವಾದ ಹರಿವು ಇಲ್ಲದಿರುವುದು ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ. 2:1 - ಯೇಸುಸ್ವಾಮಿ ಗಲಿಲೇಯದಲ್ಲಿ, 2: 13 - ಯೇಸುಸ್ವಾಮಿ ಜೆರುಸಲೇಮ್‍ನಲ್ಲಿ 4: 1 - ಯೇಸುಸ್ವಾಮಿ ಗಲಿಲೇಯದಲ್ಲಿ, 5: 1 - ಯೇಸುಸ್ವಾಮಿ ಜೆರುಸಲೇಮ್‍ನ. ಅಧ್ಯಾಯ-6 ಆರಂಭವಾಗುವುದು ಯೇಸುಸ್ವಾಮಿ ತಿಬೇರಿಯ ಸರೋವರದಲ್ಲಿ ಇದ್ದಾರೆ ಎಂಬಂತೆ ಕಾಣುತ್ತದೆ. ಅಧ್ಯಾಯ ಏಳರಲ್ಲಿ ಮತ್ತೆ ಅವರು ಗಲಿಲೇಯದಲ್ಲಿದ್ದಾರೆ. ಎಂದು ತಿಳಿಸಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿದುಬರುವ ವಿಷಯ ಈಗಿನಂತೆ ಆಗ ಸಾರಿಗೆ ಸಂಪರ್ಕ ವ್ಯವಸ್ಥೆಗಳಿರಲಿಲ್ಲ. ಅದರಲ್ಲೂ ಇಷ್ಟು ವೇಗವಾಗಿ ಗೆಲಿಲೇಯದಿಂದ ಜೆರುಸಲೇಮಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಗೆಲಿಲೇಯದಿಂದ ಜೆರುಸಲೇಮಿಗೆ ಹೋಗಲು ಬಹಳ ಅಂತರವಿತ್ತು. ಈಗ ನಾವು ಈ ನಗರಗಳ ನಡುವೆ ಇರುವ ಅಂತರ ನೋಡಿದರೆ ಅದು 121 ಕಿಲೋಮೀಟರ್ ದೂರದಲ್ಲಿದೆ. ಈ ಶುಭಸಂದೇಶದ ರಚನೆಯ ಬಗ್ಗೆ ನಾವು ಕಾಲ್ಪನಿಕವಾಗಿ ಒಂದು ರಚನಾ ಕ್ರಮವನ್ನು ಕಲ್ಪಿಸಿಕೊಳ್ಳಬಹುದು. 
ಮುನ್ನುಡಿ 1: 1 - 18 
ಯೊವಾನ್ನರ ಸಂದೇಶದ ಮುನ್ನುಡಿಯೂ ತುಂಬ ವಿಶಿಷ್ಟವಾದದ್ದು  ಹಾಗೂ ಬಹು ಮುಖ್ಯವಾದುದಾಗಿದೆ. ಇದರ ರಚನೆ ವೈವಿಧ್ಯತೆಯಿಂದ ಕೂಡಿದೆ. ಇದು ಗದ್ಯ ಹಾಗೂ ಪದ್ಯ ಮಿಶ್ರಿತಗೊಂಡು ರಚಿಸಿರುವಂತಹ ಮುನ್ನುಡಿಯಾಗಿದೆ. ಈ ಮುನ್ನುಡಿಯೂ ‘ವಾಕ್ಯ’ದ ಸ್ತುತಿಯನ್ನು ಮಾಡುತ್ತದೆ. ಕಾರಣ ದೇವರು ಆ  ವಾಕ್ಯವಾಗಿದ್ದರೆ. ಈ ಮುನ್ನುಡಿಯಲ್ಲಿ ದೇವರ ಇರುವಿಕೆ, ಪ್ರಸನ್ನತೆ, ಸಾಕ್ಷಾತ್ಕಾರ ಹಾಗೂ ಅವರ ಕುರುಹುಗಳನ್ನು ವಾಕ್ಯದ ಜೊತೆ ತಾಳೆಹಾಕಿ ಸೂಚಿಸಲಾಗಿದೆ. ಈ ರೀತಿಯ ಪದ್ಯ ಬರೆಯುವ ಮುಂಚೆಯೇ  ಬೇರೆ ಸಂಸ್ಕೃತಿಯಲ್ಲಿ ಈ ಪದ್ಯ ಇರುವುದನ್ನು ನಾವು ಕಾಣಬಹುದಾಗಿದೆ. ಈ ಪದ್ಯಕ್ಕೆ ತನ್ನದೇ ಆದಂತಹ ಸ್ವಂತ ಅಂಶಗಳನ್ನು ಹಾಗೂ ದೈವೀಶಾಸ್ತ್ರವನ್ನು ಸೇರಿಸಿ ಈ ಶುಭಸಂದೇಶದ ಕರ್ತೃ ಇಲ್ಲಿ ಅದನ್ನು ಅಳವಡಿಸಿದ್ದಾರೆ. 
ಸಾಂಕೇತಿಕ ಪುಸ್ತಕ
ಈ ವಿಭಾಗದಲ್ಲಿ ನಾವು ಯೇಸುಸ್ವಾಮಿಯ ಬಹಿರಂಗ ಜೀವನ ಕುರಿತು ನೋಡುತ್ತೇವೆ. ಇಲ್ಲಿ ನಾವು 7 ಸಂಕೇತಗಳನ್ನು ಅಥವಾ ಚಿಹ್ನೆಗಳನ್ನು ಕಾಣುತ್ತೇವೆ. ಯೇಸುಸ್ವಾಮಿಯ ಪವಾಡಗಳನ್ನು ಈ ಶುಭಸಂದೇಶದಲ್ಲಿ ಸಂಕೇತವಾಗಿ ಅಥವಾ ಚಿಹ್ನೆಯಾಗಿ  ಸೂಚಿಸಲಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಯೊವಾನ್ನರ ಶುಭಸಂದೇಶದಲ್ಲಿ ಕೇವಲ ಪವಾಡಗಳು ಮಾತ್ರ ಸಂಕೇತವನ್ನು ಸೂಚಿಸುವುದಿಲ್ಲ ಬದಲಾಗಿ ಯೇಸುಸ್ವಾಮಿ ಮಾಡುವ ಪ್ರತಿಯೊಂದು ಕಾರ್ಯವು ಸಹ ಸಂಕೇತ ಎಂದು ಸೂಚಿಸುತ್ತದೆ. 
ಯೇಸುಸ್ವಾಮಿ ವ್ಯಕ್ತಿಯೇ ಒಂದು ಸಂಕೇತವಾಗಿದ್ದಾರೆ. ಯೇಸುಸ್ವಾಮಿಯ ಶಿಲುಬೆ ಮರಣ ಕೂಡ ಒಂದು ದೊಡ್ಡ ಸಂಕೇತವಾಗಿದೆ. ಈ ಕಾರಣಗಳಿಗೆ ಈ ಶುಭಸಂದೇಶವನ್ನು ಸಾಂಕೇತಿಕ ಶುಭಸಂದೇಶ ಎಂದು ಕರೆಯಲಾಗುತ್ತದೆ. 
ಮಹಿಮೆಯ ಪುಸ್ತಕ
ಈ ವಿಭಾಗವು ನಮಗೆ ಯೇಸುಸ್ವಾಮಿಯ ಅಂತಿಮ ದಿನಗಳ ಬಗ್ಗೆ ವಿವರಣೆಯನ್ನು ನೀಡುತ್ತದೆ. ಅವರ ವಿಚಾರಣೆ, ಪಾಡು, ಮರಣ, ಪುನರುತ್ಥಾನ, ಪ್ರೇಷಿತರ ನಿಯೋಗ ಹಾಗೂ ಪವಿತ್ರಾತ್ಮರ ವರದಾನ ಈ ವಿಚಾರಗಳ ಬಗ್ಗೆ ಇಲ್ಲಿ ನಾವು ಕಾಣಬಹುದಾಗಿದೆ. ಈ ಭಾಗದಲ್ಲಿ ವಿಶೇಷವಾಗಿ "ಯೇಸುಸ್ವಾಮಿಯ ಘಳಿಗೆ"  ಎಂಬುದರ ಬಗ್ಗೆ ಉಲ್ಲೇಖಿಸುತ್ತದೆ. 13:1 - ನಲ್ಲಿ ಯೇಸುಸ್ವಾಮಿಯ ಘಳಿಗೆಯನ್ನು ಮಹಿಮೆಯ ಘಳಿಗೆ ಎಂದು ಗುರುತಿಸಲಾಗುತ್ತದೆ. ಈ ಶುಭಸಂದೇಶದಲ್ಲಿ ಯೇಸುಸ್ವಾಮಿಯ ಮರಣವು ಅವರ ವೈಭವೀಕರಣಕ್ಕೆ ಸಮಾನವಾಗಿದೆ ಅಥವಾ ಅವರ ಮಹಿಮೆಗೆ ಸಮಾನವಾಗಿದೆ ಎಂದು ಸೂಚಿಸುತ್ತದೆ. ಶುಭಸಂದೇಶವು ಪ್ರತ್ಯೇಕವಾಗಿ ಕೂಡಿರುವಂತಹ ಈ ಪರಿಭಾಷೆಯನ್ನು ಹೊಂದಿದೆ -  ಅದೇನೆಂದರೆ ಮೇಲಕ್ಕೇರುವುದು ಅಥವಾ ಮೇಲಕ್ಕೆತ್ತಲ್ಪಡುವುದು. 3:14 ಹಾಗೂ 8:28ರಲ್ಲಿ ನಾವು ನೋಡುತ್ತೇವೆ ಮೇಲಕ್ಕೇರುವುದು ಎಂಬುದನ್ನು. ಈ ಮೇಲಕ್ಕೇರುವುದು ಎಂಬ ಪರಿಭಾಷೆ ಎರಡು ಮುಖ್ಯ ಅಂಶವನ್ನು ನಮಗೆ ತಿಳಿಸುತ್ತದೆ. ಪ್ರಪ್ರಥಮವಾಗಿ ಯೇಸುಸ್ವಾಮಿ  ದೈಹಿಕವಾಗಿ ಶಿಲುಬೆಯ ಮೇಲೆ ಏರುವುದಾಗಿದೆ. ಎರಡನೆಯದು ಯೇಸುಸ್ವಾಮಿಯ ದೈವಿ ಅಂತಸ್ತು ಮೇಲಕ್ಕೇರುವುದು ಅಥವಾ ಅವರು ಮಹಿಮೆಗೆ ಏರಲ್ಪಡುವುದನ್ನು ಸೂಚಿಸುತ್ತದೆ. 
ಸಮಾಪ್ತಿ
 ಇದನ್ನು ಬಹುಷಃ ಪುಸ್ತಕ ಬರೆದ ನಂತರ ಸೇರಿಸಿರಬಹುದು ಅಥವಾ ಇದು ಒಂದು ಅನುಬಂಧದಂತೆ ಕಂಡುಬರುತ್ತದೆ. ಅನೇಕ ಬೈಬಲ್ ವಿದ್ವಾಂಸರು ಇದನ್ನು ನಂತರದ ದಿನಗಳಲ್ಲಿ ಶುಭಸಂದೇಶಕ್ಕೆ ಸೇರಿಸಲಾಗಿದೆ ಎನ್ನುತ್ತಾರೆ. ಇದಕ್ಕೆ ಕೆಲವು ಕಾರಣಗಳಿವೆ; 1) 20:30-31 - ಇಲ್ಲಿ ಶುಭಸಂದೇಶ ಸಮಾಪ್ತಿಗೊಂಡಂತೆ ಕಂಡು ಬರುತ್ತದೆ. 2) ಎರಡನೆಯ ಸಮಾಪ್ತಿಯನ್ನು ನಾವು 21:24-25 ರಲ್ಲಿ ನೋಡುತ್ತೇವೆ. ಇದು ಪುನರಾವರ್ತಿತವಾಗಿರುವುದನ್ನು ಕಾಣಬಹುದಾಗಿದೆ. ಬಹುಶಃ ಇದನ್ನು ಪರಿಷ್ಕರಿಸಿದ ಸಂಪಾದಕರು ಪರಿಷ್ಕರಣೆಯ ನಂತರ ಶುಭಸಂದೇಶಕ್ಕೆ ಸೇರಿಸಲಾಗಿದೆ ಎಂಬುದು ಹಲವರ ವಾದವಾಗಿದೆ.
ಮುಂದುವರಿಯುವುದು

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...