ಸಿ ಮರಿಜೋಸೆಫ್, ಬೆಂಗಳೂರು
ಕನ್ನಡನಾಡಿಗೆ ಕ್ರೈಸ್ತಧರ್ಮವನ್ನು ಮೊದಲು ಪರಿಚಯಿಸಿದ್ದು ಯಾರೆಂಬುದರ ಬಗ್ಗೆ ಗೊಂದಲವಿದೆ. ಕೆಲವರು ಯೇಸುವಿನ ಪ್ರೇಷಿತ ಸಂತ ತೋಮಸರ ಕಾಲದಲ್ಲೇ ಇಂಡಿಯಾ ದೇಶಕ್ಕೆ ಕ್ರೈಸ್ತಧರ್ಮ ಕಾಲಿಟ್ಟಿತು ಎಂದು ಅಭಿಪ್ರಾಯಪಟ್ಟು ಸಂತ ತೋಮಸರನ್ನು ಮೈಸೂರಿಗೆ ಮತಪ್ರಚಾರಕ್ಕೆ ಆಮಂತ್ರಿಸಿದವರು ಕುಟ್ನಾಪ್ಪರ್ ಅಥವಾ ಕಂದಪ್ಪ ರಾಜನಿರಬಹುದೆಂದು ವಾದಿಸುತ್ತಾರೆ. ಈ ಕುಟ್ನಾಪ್ಪರ್ ಎಂಬುವನ ಹೆಸರು ಗುಡ್ನಾಫರ್ ಎಂದೂ ಇವನು ಉತ್ತರ ಇಂಡಿಯಾದವನು ಎಂದೂ ಮತ್ತೊಂದು ವಾದವಿದೆ. ಕ್ರಿಸ್ತಶಕ ಆರನೇ ಶತಮಾನಕ್ಕಾಗಲೇ ಕನ್ನಡನಾಡಿನಲ್ಲಿ ಕ್ರೈಸ್ತಧರ್ಮ ಬಲವಾಗಿ ಬೇರೂರಿತ್ತೆಂದೂ ಇಲ್ಲಿನ ಕಲ್ಯಾಣದಲ್ಲಿ ಒಬ್ಬ ಬಿಷಪರು ಇದ್ದರೆಂದೂ ಕೆಲವರು ಹೇಳುತ್ತಾ ಆ ಕಲ್ಯಾಣವನ್ನು ಕರಾವಳಿಯ ಕಲ್ಯಾಣಪುರವೆಂದು ಪೇಲವವಾಗಿ ಹೇಳುತ್ತಾರೆ, ಇನ್ನು ಕೆಲವರು ಅದು ಮಹಾರಾಷ್ಟ್ರದ ಬೊಂಬಾಯಿನ ಹತ್ತಿರವಿರುವ ಕಲ್ಯಾಣವೆಂದು ಅಭಿಪ್ರಾಯಿಸುತ್ತಾರೆ. ಚಾಲುಕ್ಯರ ಕಲ್ಯಾಣ ಎಂದು ಇದುವರೆಗೆ ಯಾರೂ ಹಕ್ಕು ಮಂಡಿಸಿಲ್ಲ.
ಕ್ರಿಸ್ತಶಕ ಹನ್ನೊಂದನೇ ಶತಮಾನದಲ್ಲಿ ಕಲಬುರ್ಗಿ ಜಿಲ್ಲೆಯ ಬಸವಕಲ್ಯಾಣದಲ್ಲಿ ಹುಟ್ಟಿದ ಶರಣ ಚಳವಳಿಯಲ್ಲಿ ಕ್ರೈಸ್ತತತ್ವಗಳು ಮಿಳಿತವಾಗಿವೆಯೆಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದನ್ನು ಬಲವಾಗಿ ಅನುಮೋದಿಸುವ ಹಿರಿಯ ಕ್ರೈಸ್ತ ಇತಿಹಾಸಜ್ಞ ಫಾದರ್ ಡಾ|| ಐ ಅಂತಪ್ಪ ಸ್ವಾಮಿಯವರು ಬಸವಣ್ಣ ಮತ್ತು ಇತರ ಶರಣರ ಮೇಲೆ ಕ್ರೈಸ್ತಧರ್ಮದ ಪ್ರಭಾವ ಖಂಡಿತವಾಗಿಯೂ ಆಗಿದೆಯೆಂದು ಪ್ರತಿಪಾದಿಸುತ್ತಾರೆ. ಡಾ. ಫ ಗು ಹಳಕಟ್ಟಿಯವರು ಕ್ರೈಸ್ತವಿಚಾರಗಳು ಕಂಡುಬರುವ ಸುಮಾರು 250 ವಚನಗಳನ್ನು ಹೆಕ್ಕಿದ್ದಾರೆ.
ಕ್ರಿಸ್ತಶಕ 1320ರ ಹೊತ್ತಿಗೆ ದೊಮನಿಕನ್ ಪಂಥಕ್ಕೆ ಸೇರಿದ ಫಾದರ್ ಜವರ್ದಿನ್ ಕತಲಾನುಸ್ ದೆ ಸೆವೆರಾಕ್ ಎಂಬ ಗುರು ಸಾಲ್ಸೆಟ್ ಎಂಬಲ್ಲಿ ನೆಲೆನಿಂತು ಕರ್ನಾಟಕದ ಒಳನಾಡುಗಳಲ್ಲಿ ಧರ್ಮಪ್ರಚಾರ ಮಾಡಿದ ಬಗ್ಗೆ ಎಸ್ ಎ ಮಾರಾ ಎಂಬುವರು ತಮ್ಮ ‘ಭಾರತೀಯ ಕ್ರೈಸ್ತಸಭಾ ಚರಿತ್ರೆಯ ಪ್ರವೇಶಿಕೆ’ ಎಂಬ ಪುಸ್ತಕದಲ್ಲಿ ಒಕ್ಕಣಿಸಿದ್ದಾರೆ. ಅಲ್ಲದೆ ದೊಮಿನಿಕನ್ನರು ತಮ್ಮ ದಿನಚರಿಗಳಲ್ಲಿ ಮತ್ತು ಪತ್ರಗಳಲ್ಲಿ ತಮ್ಮ ಕಾರ್ಯಕ್ಷೇತ್ರ ಕರ್ನಾಟಕವೆಂದು ಹೇಳಿ ಇಲ್ಲಿನ ಜನಜೀವನ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಕುರಿತು ದಾಖಲಿಸಿದ್ದಾರೆ. ಹದಿನಾಲ್ಕನೇ ಶತಮಾನದ ಕರ್ನಾಟಕವೆಂದರೆ ಇಡೀ ದಕ್ಷಿಣ ಇಂಡಿಯಾವನ್ನೇ ವ್ಯಾಪಿಸಿದ್ದ ವಿಜಯನಗರ ಸಾಮ್ರಾಜ್ಯವೆಂದು ಹೇಳಬಹುದು. ಇವರೇ ಕರ್ನಾಟಕಕ್ಕೆ ಅಧಿಕೃತವಾಗಿ ಬಂದ ಮೊತ್ತಮೊದಲ ಮಿಶನರಿಗಳು. ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಮುದಗಲ್ ಎಂಬ ಊರಿನಲ್ಲಿ ಕರ್ನಾಟಕದ ಮೊತ್ತಮೊದಲ ಚರ್ಚು ತಲೆಯೆತ್ತಿದ ಬಗ್ಗೆ ಅಚ್ಚರಿ ಮೂಡಿಸುವ ದಾಖಲೆ ನಮಗೆ ಲಭ್ಯವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಕಾಣಿಸುತ್ತಿದ್ದ ಈ ಪುರಾತನ ದೇವಾಲಯವನ್ನು ಹೊಸ ದೇವಾಲಯದ ನಿರ್ಮಾಣಕ್ಕಾಗಿ ನೆಲಸಮ ಮಾಡಲಾಯಿತೆಂದು ಅಲ್ಲಿನ ಗುರುಗಳು ಹೇಳುತ್ತಾರೆ.
ವಿಜಯನಗರ ಸಾಮ್ರಾಜ್ಯದ ಸೇನೆಯಲ್ಲಿದ್ದ ಕ್ರೈಸ್ತಸಿಪಾಯಿಗಳು ರಾಜಧಾನಿಯಲ್ಲಿ ತಮ್ಮ ಚರ್ಚು ಕಟ್ಟಿಕೊಳ್ಳಲು ರಾಜನು ಅನುಮತಿ ನೀಡಿದ್ದನೆಂಬ ವಿಷಯವೂ ಇತಿಹಾಸದÀಲ್ಲಿ ಕಾಣಸಿಗುತ್ತದೆ. ದೊಮಿನಿಕನ್ನರ ನಂತರ ಫ್ರಾನ್ಸಿಸ್ಕನರು ಹಾಗೂ ಅಗಸ್ಟಿನ್ ಸಭೆಯ ಸನ್ಯಾಸಿಗಳು ಅಲ್ಲದೆ ಬೇರೆಬೇರೆ ಸಭೆಗಳಿಗೆ ಸೇರಿದ ಗುರುಗಳು ಕರ್ನಾಟಕಕ್ಕೆ ಬಂದು ಧರ್ಮಪ್ರಚಾರ ಮಾಡಿದರು ಎಂದು ಇತಿಹಾಸದಲ್ಲಿ ಅರಿಯುತ್ತೇವೆ. ಇವರೆಲ್ಲರ ನಂತರ ಕರ್ನಾಟಕಕ್ಕೆ ಬಂದ ಪ್ರಮುಖ ಕ್ರೈಸ್ತ ಗುರುಗಳೆಂದರೆ ಯೇಸುಸಭೆಯವರು.
ಕ್ರಿಸ್ತಶಕ 1498ರಲ್ಲಿ ನಾವೆಯ ಮೂಲಕ ಇಂಡಿಯಾಕ್ಕೆ ಬಂದಿಳಿದ ಪೋರ್ಚುಗೀಸರು ಇಂಡಿಯಾದಲ್ಲಿ ಕ್ರೈಸ್ತಮತ ಪ್ರಚಾರವನ್ನು ಚುರುಕುಗೊಳಿಸಿದರು. ಯೇಸುಸಭೆಯ ಸಂತ ಫ್ರಾನ್ಸಿಸ್ ಝೇವಿಯರರ ಪ್ರವೇಶವಾದ ಮೇಲೆ ಇಂಡಿಯಾದಲ್ಲಿ ಕ್ರೈಸ್ತಧರ್ಮಕ್ಕೆ ಸುಭದ್ರ ನೆಲೆಗಟ್ಟು ಸಿಕ್ಕಿದಂತಾಯಿತು. ಗೋವಾದಲ್ಲಿ ತಮ್ಮ ಕೇಂದ್ರಕಚೇರಿಯನ್ನು ಕಟ್ಟಿಕೊಂಡು ಮತಪ್ರಚಾರಕ್ಕಿಳಿದ ಜೆಸ್ವಿತರ ಪ್ರತಿನಿಧಿಯಾಗಿ ಫಾದರ್ ಲಿಯಾನಾರ್ಡೊ ಚಿನ್ನಮಿ ಎಂಬ ಯೇಸುಸಭೆಯ ಗುರುಗಳು 1648ರಲ್ಲಿ ಶ್ರೀರಂಗಪಟ್ಟಣಕ್ಕೆ ಆಗಮಿಸಿ ಮಹಾರಾಜರನ್ನು ಭೇಟಿಯಾಗಿ 'ನಾನು ಸತ್ಯಧರ್ಮವನ್ನು ಬೋಧಿಸುತ್ತೇನೆ, ಇಷ್ಟವುಳ್ಳವರು ಬಂದು ಸೇರಬಹುದು' ಎಂದು ಹೇಳಿ ಧರ್ಮಪ್ರಚಾರಕ್ಕೆ ಅನುಮತಿ ಪಡೆದುಕೊಂಡರು. ಹೀಗೆ ಇವರಿಂದ ಕೊಳ್ಳೇಗಾಲದ ಬಳಿಯ ಬಸವಾಪುರದಲ್ಲಿ ಮೈಸೂರು ಸೀಮೆಯ ಮೊದಲ ಚರ್ಚು ಪ್ರಾರಂಭವಾಯಿತು.
ಹೀಗೆ ಉತ್ತರದಲ್ಲಿ ಫ್ರಾನ್ಸಿಸ್ಕನರ ಹಾಗೂ ದಕ್ಷಿಣದಲ್ಲಿ ಜೆಸ್ವಿತರ ಪರಿಶ್ರಮದ ಫಲವಾಗಿ ಇಂಡಿಯಾ ದೇಶದಲ್ಲಿ ಕ್ರೈಸ್ತರ ಸಂಖ್ಯೆ ದಿನೇದಿನೇ ಹೆಚ್ಚುತ್ತಾ ಹೋಗಿ ಕ್ರೈಸ್ತಧರ್ಮವು ಗಣನೀಯವಾಗಿ ವಿಸ್ತರಿಸುತ್ತಾ ಹೋಯಿತು. ದುರಾದೃಷ್ಟಕರವಾಗಿ 1773ರಲ್ಲಿ ಪೋಪ್ ಜಗದ್ಗುರುಗಳು ಜೆಸ್ವಿತ್ ಸಭೆಯನ್ನು ಬರಖಾಸ್ತು ಮಾಡಿದ ಫಲವಾಗಿ ಪ್ರಪಂಚದೆಲ್ಲೆಡೆ ಹರಡಿದ್ದ ಜೆಸ್ವಿತ್ ಗುರುಗಳು ತಮ್ಮ ತಾಯ್ನಾಡುಗಳಿಗೆ ಹಿಂದಿರುಗಬೇಕಾಯಿತು. ಹೀಗಾಗಿ ದಕ್ಷಿಣ ಇಂಡಿಯಾದಲ್ಲಿ ಜೆಸ್ವಿತ್ ಗುರುಗಳಿಂದ ಆಧ್ಯಾತ್ಮಿಕವಾಗಿ ಪೋಷಿತರಾಗಿದ್ದ ಕ್ರೈಸ್ತಬಾಂಧವರನ್ನು ಸ್ಥಳೀಯ ಉಪದೇಶಿಗಳು ಜಪತಪಗಳ ಮೂಲಕ ಮುನ್ನಡೆಸಿದರು.
ಪಾಂಡಿಚೇರಿ ಎಂಬ ಫ್ರೆಂಚ್ ದೇಶದ ವಸಾಹತಿನಲ್ಲಿ ಬೇರೂರಿದ್ದ ಎಂಇಪಿ ಸಂಸ್ಥೆಯ ಗುರುಗಳು ಮೈಸೂರು ಸೀಮೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು 1776ರಿಂದೀಚೆಗೆ ಚಿತ್ರದುರ್ಗದಿಂದ ಕೊಯಿಮತ್ತೂರುವರೆಗಿನ ಮೈಸೂರು ಸೀಮೆಯಲ್ಲಿ ಕ್ರೈಸ್ತರನ್ನು ಪೋಷಿಸಿದರು.
ಸವಲತ್ತುಗಳೇ ಇಲ್ಲದಿದ್ದ ಕಾಲದಲ್ಲಿ, ನಿರಂಕುಶ ರಾಜಾಳ್ವಿಕೆ ಹಾಗೂ ಅಸಹಿಷ್ಟು ಪಾಳೇಗಾರ ಮತ್ತು ಸ್ಥಳೀಯ ನಾಯಕರ ಹಿಂಸೆಗಳನ್ನು ಸಹಿಸಿ ಅತೀವ ಕಷ್ಟದಿಂದ ಜೀವನ ಸಾಗಿಸುತ್ತಾ, ಕ್ರೈಸ್ತಧರ್ಮವನ್ನು ಬೇರೂರಿಸಿದ ಆ ಪುಣ್ಯಾತ್ಮರು ಧರ್ಮಪ್ರಚಾರದೊಂದಿಗೆ ಕನ್ನಡ ನಾಡುನುಡಿಗೆ ಹಾಗೂ ಕನ್ನಡಸಂಸ್ಕೃತಿಗೆ ತಮ್ಮ ಕೈಲಾದ ಸೇವೆಯನ್ನು ಮಾಡಿ ಕ್ರೈಸ್ತಧರ್ಮವನ್ನು ನಮಗೆ ಕೊಟ್ಟು ಹೋಗಿದ್ದಾರೆ.
ಇಂದು ಎಸ್ಟಾಬ್ಲಿಷ್ಢ್ ಚರ್ಚುಗಳ ದಂತಗೋಪುರಗಳಲ್ಲಿ ವಾಸಿಸುತ್ತಿರುವ ನಾವು ನಮ್ಮ ಭವ್ಯ ಇತಿಹಾಸವನ್ನು ಮರೆಯದೇ ಧರ್ಮಪ್ರಚಾರಾಂದೋಲನದಲ್ಲಿ ನಮ್ಮ ಪಾತ್ರವೂ ಇದೆ ಎಂದರಿತು ಸನ್ಮಾರ್ಗದಲ್ಲಿ ಮುನ್ನಡೆದು ಸಮಾಜಕ್ಕೆ ಮಾದರಿಯಾಗೋಣ.
0-0-0-0-0-0
No comments:
Post a Comment