Friday, 13 March 2020

ರೆಬೆಕ್ಕಾ


ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

ಒಂದು ದಿನ ಸೂರ್ಯನು ಆಕಾಶದ ಪಶ್ಚಿಮ ಅಂಚನ್ನು ದಾಟಿ ಮುಳುಗುತ್ತಿದ್ದ ವೇಳೆ, ಮೆಸಪೆÇಟೋಮಿಯಾದ ಆರಾಮಿನ ಯುವತಿಯೊಬ್ಬಳು ಈಶಾನ್ಯ ಕಾನಾನಿನಿಂದ 500 ಮೈಲಿ ದೂರವಿದ್ದ ನಾಹೋರ್ ನಗರದ ಹೊರಗಿದ್ದ ಬಾವಿ ಕಡೆಗೆ ಹೋಗುತ್ತಿದ್ದಳು. ಇವಳು ಅಬ್ರಹಾಮನ ತಮ್ಮ ನಹೋರನ ಮಗ ಬೆತುವೇಲನ ಮಗಳು. ಪ್ರತಿ ಸಂಜೆ ಶುದ್ಧ ನೀರು ತರುವುದು ಮಹಿಳೆಯರ ಕೆಲಸವಾಗಿತ್ತು. ಆ ಸಂಜೆಯೂ ಸಹ ಎಂದಿನಂತೆ ಬಾವಿಯಿಂದ ನೀರು ಸೇದಿ ತುಂಬಿಸಿಕೊಂಡು, ಆ ತಂಪಾದ ಮುದನೀಡುವ ಕೊಡವನ್ನು ಹೆಗಲಮೇಲೆ ಹೊತ್ತು ನಡೆಯಲು ಹಿಂತಿರುಗಿದಾಗ ಅಪರಿಚಿತನೊಬ್ಬ ಕುಡಿಯಲು ನೀರನ್ನು ಕೇಳಿದನು. ಅವಳ ನಿಸ್ಸಂಶಯವಾಗಿ ಅವನಿಗೂ ಒಂಟೆಗಳಿಗೂ ನೀರನ್ನು ಕೊಟ್ಟಳು. ರೆಬೆಕ್ಕಾ, ಅಲ್ಲಿ ಅವನ ಮುಖದಲ್ಲಿದ್ದ ಹೊಳೆಯುವ ಆಶ್ಚರ್ಯದ ಆನಂದದ ನೋಟವನ್ನು ಗಮನಿಸಿದಳು. ಅವನೊಂದಿಗಿದ್ದ ಹತ್ತು ಒಂಟೆಗಳಿಗೆ ತುಂಬಾ ನೀರು ಬೇಕಾಗುತ್ತದೆಂಬುದು ಅವಳಿಗೆ ಗೊತ್ತಿತ್ತು. ಅವುಗಳಿಗೆಲ್ಲ ನೀರು ಸೇದುತ್ತಲೇ, ಆ ಸೇವಕ ಪಿಸುಗುಡುತ್ತಾ ಬೇಡುತ್ತಿದ್ದುದನ್ನು ಕಂಡಳು. ಅವನ ಪ್ರಾರ್ಥನೆ ಹೀಗಿತ್ತು; " ಓ ಪ್ರಭುವೆ, ನನ್ನ ಯಜಮಾನ ಅಬ್ರಹಾಮನ ದೇವರೇ, ಇಂದು ನನಗೆ ಯಶಸ್ಸು ಕೊಟ್ಟು ನನ್ನ ಯಜಮಾನ ಅಬ್ರಹಾಮನಿಗೆ ದಯೆ ತೋರಿಸು. ನಾನು ಮಡಿಕೆಯನ್ನು ಇಳಿಸಿ ಕುಡಿಯಲು ಕೊಡೆಂದು ಕೇಳಿದಾಗ, 'ಕುಡಿಯಿರಿ, ನಾನು ನಿಮ್ಮ ಒಂಟೆಗಳಿಗೂ ನೀರನ್ನು ನೀಡುವೆನು' ಎಂದು ಹೇಳುವ ಹುಡುಗಿ ಇವಳೇ ಆಗಿರಲಿ. ನೀವು ನಿಮ್ಮ ಸೇವಕ ಈಸಾಕನಿಗಾಗಿ ಆಯ್ಕೆ ಮಾಡಿದವಳು ಇವಳೇ ಆಗಿರಲಿ".
ಆ ಸರಳ ಭಾವ ಉದಾರ ಪ್ರತಿಕ್ರಿಯೆಯಿಂದ ಆ ಯುವತಿಯ ಭವಿಷ್ಯ ಕ್ಷಣಮಾತ್ರದಲ್ಲಿ ಬದಲಾಗಿ ಹೋಯಿತು. ಬಾವಿಯ ಬಳಿ ರೆಬೆಕ್ಕಾಳಿಗೆ ಎದುರಾದ ವ್ಯಕ್ತಿ ಅಬ್ರಹಮನ ಆಸ್ತಿಪಾಸ್ತಿಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ ಹಿರಿಯ ಸೇವಕನಾಗಿದ್ದ. ಅಬ್ರಹಮನ ಅಜ್ಞೆಯ ಪ್ರಕಾರ ಕಾನಾನಿನ ಸುತ್ತಮುತ್ತಲಿನಲ್ಲಿ ವಾಸವಾಗಿದ್ದವರಲ್ಲದೆ ಅಬ್ರಹಾಮನ ಸಂಬಂಧಿಕರಲ್ಲೇ ಈಸಾಕನಿಗೆ ಹೆಂಡತಿಯನ್ನು ಹುಡುಕಿ ತರುವ ಪವಿತ್ರ ಕಾರ್ಯಾಚರಣೆಯಲ್ಲಿ ಅವನಿದ್ದ. ಅವಳ ಅಜ್ಜಿ ಸಾರಾಳಂತೆ ರೆಬೆಕ್ಕಾಳು ಸಹ ದಕ್ಷಿಣದತ್ತ ಊಹಿಸಲಾಗದ ಭವಿಷ್ಯದ ಪ್ರಯಾಣ ಮಾಡುವವಳಾಗಿದ್ದಳು. ‘ನಗ' ಎಂಬ ಅರ್ಥವುಳ್ಳ, ಅವಳಿಗಿಂತ ಎರಡರಷ್ಟು ವಯಸ್ಸಾದ ವ್ಯಕ್ತಿಯೊಂದಿಗೆ ನಿಶ್ಚಯವಾದಾಗ ಅವಳೊಳಗೆ ಹಠಾತ್ ಮುಜುಗರ ಹುಟ್ಟಿತು. ಅಬ್ರಹಾಮ ಮತ್ತು ಸಾರಾಳ ದೇವರು, ಅವಳನ್ನು ಭರವಸೆಯ ಪಾಲನ್ನು ಸ್ವೀಕರಿಸಲು ಕರೆದಿದ್ದರು. ಇವಳ ಮೂಲಕ ತಮ್ಮ ಸ್ವಂತ ಜನರಾಗಲು ದೇವರು ಇನ್ನೊಂದು ಜನಾಂಗದ ಸೃಷ್ಟಿಗೆ ತಯಾರಿ ನಡೆಸಿದ್ದರು.
ಈಸಾಕನು ರೆಬೆಕ್ಕಾಳನ್ನು ಮೊದಲು ಕಂಡಾಗ ಅವನ ವಯಸ್ಸು ನಲವತ್ತಾಗಿತ್ತು. ಬಹುಶಃ ಆಗ ಅವನ ಹೃದಯದಲ್ಲಿ ಮೊದಲ ಮನುಷ್ಯನ " ನಾನೀಗ ಇವಳು ನನ್ನೇಲುಬಿನ ಎಲುಬು ನನ್ನೊಡಲಿನ ಒಡಲು" ಎಂಬ ಸಂತೋಷದ ನುಡಿಗಳು ಪ್ರತಿಧ್ವನಿಸಿರಬಹುದು. ಹೀಗೆ ಈಸಾಕ ಮತ್ತು ರೆಬೆಕ್ಕಾ ತನ್ನ ತಾಯಿ ಸಾರಾಳ ಗುಡಾರವನ್ನು ಪ್ರವೇಶಿಸಿ ಪ್ರೀತಿ ಮಾಡಿದರು. ರೆಬೆಕ್ಕಾಳು ಸಾರಾಳ ಮರಣದ ನಂತರ ಈಸಾಕನಿಗೆ ಸಾಂತ್ವನ ನೀಡಿದಳು ಎನ್ನುತ್ತದೆ ಪವಿತ್ರ ಗ್ರಂಥ.
ಸಾರಾಳಂತೆ ರೆಬೆಕ್ಕಾಳು ಸಹ ಸೌಂದರ್ಯವತಿ ಹಾಗೂ ದೃಢ ಮಹಿಳಿಯಾಗಿದ್ದರೂ ಮದುವೆಯಾದ ಮೊದಲ ಇಪ್ಪತ್ತು ವರ್ಷ ಅವಳಿಗೆ ಮಕ್ಕಳಿರಲಿಲ್ಲ. ಸಾರಾಳಂತೆ ಅವಳೂ ಬಂಜೆತನ ಅನುಭವಿಸಬೇಕಾಗಿ ಬರುತ್ತದೆ. ಈಸಾಕನು ದೇವರಿಗೆ ಮೊರೆ ಹೋದಾಗ ಆತನ ಪ್ರಾರ್ಥನೆಗೆ ಕಿವಿಗೊಟ್ಟ ದೇವರು ಒಂದಲ್ಲ ಎರಡು ಮಕ್ಕಳನ್ನು ಆಶೀರ್ವದಿಸಿದರು. ಉದರದಲ್ಲೇ ಕುಸ್ತಿ ಪ್ರಾರಂಭಿಸಿದ್ದ ಎರಡು ಕೂಸುಗಳವು. ದೇವರು ಅವಳಿಗೆ ಇಂತೆಂದರು; " ನಿಮ್ಮ ಉದರದೊಳಗೆ ಜನಾಂಗಗಳೆರಡು ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು ಬಲಿಷ್ಠವಾಗಿರುವುದು ಒಂದು ಮತ್ತೊಂದಕ್ಕೆ ಜೇಷ್ಠನೆ ದಾಸನಾಗುವನು ಕನಿಷ್ಠನಿಗೆ" (ಆದಿ 25:23). ಹೆರಿಗೆಯ ವೇಳೆ ಯಾಕೋಬನು ಮೊದಲು ಸ್ಥಾನಕ್ಕಾಗಿ ಶ್ರಮಿಸುವಂತೆ ಏಸಾವನ ಇಮ್ಮಡಿಯನ್ನು ಎಳೆದಿದ್ದ. ಹುಟ್ಟುವಾಗ ಎರಡನೆಯವನಾಗಿ ಹುಟ್ಟಿದರೂ ತಾಯಿಯ ಮಮತೆ ಅವನಿಗೆ ಮೊದಲು ಸಿಗುತ್ತಿತ್ತು. ಆದರೆ ತಂದೆಗೆ ಏಸಾವನೆಂದರೆ ಅಚ್ಚು ಮೆಚ್ಚು. ವರ್ಷಗಳ ನಂತರ ಈಸಾಕನು ಮುದುಕನಾಗಿ ಬಹುತೇಕ ಕುರುಡನಾಗಿದ್ದಾಗ, ಅವನ ಮೊದಲನೆಯ ಮಗ ಏಸಾವನಿಗೆ ಜೇಷ್ಠತನದ ಆಶೀರ್ವಾದವನ್ನು ನೀಡಲು ನಿರ್ಧರಿಸಿ ಅವನನ್ನು ಕರೆದು ಕಾಡು ಬೇಟೆಯಾಡಿ ಮಾಂಸ ತಂದು ರುಚಿಯಾದ ಅಡುಗೆ ಮಾಡಿ ಬಡಿಸಲು ಹೇಳುತ್ತಾನೆ.
ಆದರೆ ಅದನ್ನು ಕದ್ದು ಕೇಳಿದ ರೆಬೆಕ್ಕಾಳು ಕೂಡಲೇ ಯಾಕೋಬನನ್ನು ಕರೆದು ಈಸಾಕನಿಂದ ಆಶೀರ್ವಾದವನ್ನು ಕಸಿದುಕೊಳ್ಳಲು ಯೋಜನೆಯನ್ನು ರೂಪಿಸುತ್ತಾರೆ. ಮೇಕೆ ಮರಿಗಳು ಚರ್ಮವನ್ನು ಯಾಕೋಬನ ಕೈಗೆ ಹೊದಿಸಿ, ಮನೆಯಲ್ಲಿದ್ದ ಕುರಿಗಳನ್ನು ಕೊಯ್ದು ಊಟ ತಯಾರಿಸಿ ಈಸಾಕನಿಗೆ ಬಡಿಸಲು ಕಳುಹಿಸುತ್ತಾಳೆ. ಯಾಕೋಬನು ಬಡಿಸಿದ ಊಟಮಾಡಿದ ಈಸಾಕ ಯಾಕೋಬನನ್ನೇ ಏಸಾವನೆಂದು ಭಾವಿಸಿ ಹೀಗೆಂದು ಆಶೀರ್ವದಿಸುತ್ತಾನೆ; " ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರ ಉಳ್ಳ ಹೊಲವನು, ಅನುಗ್ರಹಿಸಲಿ ಹೇರಳ ದವಸ ಧಾನ್ಯವನು, ದ್ರಾಕ್ಷಾರಸವನು. ಸೇವೆಗೈಯಲಿ ನಿನಗೆ ಹೊರನಾಡುಗಳು ಅಡ್ಡಬೀಳಲಿ ನಿನಗೆ ಹೊರಜನಾಂಗಗಳು. ಒಡೆಯನಾಗು ಸೋದರರಿಗೆ ಅಡ್ಡ ಬೀಳಲಿ ತಾಯ ಕುಡಿ ನಿನಗೆ ಶಾಪವಿರಲಿ ನಿನ್ನನ್ನು ಜಪಿಸುವವರಿಗೆ ಆಶೀರ್ವಾದವು ನಿನ್ನನ್ನು ಹರಸುವವರಿಗೆ!". ಈಸಾಕನು ತನ್ನ ಕರಗಳನ್ನು ಚಾಚಿ ಉದರದಲ್ಲಿ ಸ್ಥಾನಕ್ಕಾಗಿ ಕಿತ್ತಾಡಿದ ಸಂಗತಿಯನ್ನು ನೆನೆಯುತ್ತಲೇ ಯಾಕೋಬನಿಗೆ ನೀಡಿದ ಆಶೀರ್ವಾದವನ್ನು ಏಸಾವನ ಕಣ್ಣೀರು, ತಮ್ಮನನ್ನು ಕೊಂದುಹಾಕುವ ಆಕ್ರೋಶ ಇಂತಹ ಯಾವುದೇ ಕಾರಣಕ್ಕೂ ಹಿಂಪಡೆಯಲು ಸಾಧ್ಯವಿರಲಿಲ್ಲ.
ಯಾಕೋಬನನ್ನು ಕೊಂದುಹಾಕುವ ಏಸಾವನ ಆಕ್ರೋಶವನ್ನು ಗ್ರಹಿಸಿದ ರೆಬೆಕ್ಕಾಳು ಈಸಾಕನ ಸಮ್ಮತಿಯೊಂದಿಗೆ ಯಾಕೋಬನನ್ನು ಹುಡುಗಿ ನೋಡಿ ಮದುವೆ ಮಾಡಿಕೊಳ್ಳಲು ತನ್ನ ತಮ್ಮ ಲಬಾನನ ಮನೆಗೆ ಕಳುಹಿಸುತ್ತಾಳೆ. ವರ್ಷಗಳು ಉರುಳಿದಂತೆ, ರೆಬೆಕ್ಕಾ ತನ್ನ ಕಿರಿಯ ಮಗನನ್ನು ಅಪ್ಪಿಕೊಳ್ಳಲು ಹಂಬಲಿಸುತ್ತಾ, ತನ್ನ ಮಕ್ಕಳನ್ನು ತನ್ನ ಅಪ್ಪುಗೆಯಲ್ಲಿ ಸೇರಿಸಿಕೊಳ್ಳುವ ಭಾಗ್ಯವನ್ನು ಆಶಿಸುತ್ತಾಳೆ. ಆದರೆ ಯಾಕೋಬನು ಮರಳಿ ಬರುವ ಮುನ್ನ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳು ಆಗಾಗಲೇ ಕಳೆದು ಹೋಗಿರುತ್ತವೆ. ತನ್ನ ಮಗನನ್ನು ಸ್ವಾಗತಿಸಲು ಈಸಾಕನು ಜೀವ ಹಿಡಿದುಕೊಂಡಿದ್ದನು ಆದರೆ ರೆಬೆಕ್ಕಾಳಿಗಾಗುತ್ತಿರಲಿಲ್ಲ. 
ರೆಬೆಕ್ಕಾಳ ಚಿಕ್ಕವಯಸ್ಸಿನಲ್ಲೇ, ದೇವರು ತಮ್ಮ ಜನರ ಚರಿತ್ರೆಯಲ್ಲಿ ಪ್ರಮುಖ ಪಾತ್ರವಹಿಸಲು ಅವಳನ್ನು ಕರೆದರು. ಅವಳನ್ನು ಬಹಳವಾಗಿ ಬೆನ್ನಟ್ಟಿದರು. ಸಾರಾಳಂತೆ, ಅವಳು ಸಹ ದೇವ ಜನರ ಮಾತೃಪ್ರಧಾನಳಾಗುತ್ತಾಳೆ ಹಾಗೂ ದೇವರ ವಾಗ್ದಾನದಲ್ಲಿ ಅವಳ ಹಸ್ತಕ್ಷೇಪವನ್ನು ಅರಿತ ಅವಳ ಹೃದಯ ಸಾರಾಳಂತೆ ಅನುಮಾನವನ್ನು ವಿಶ್ವಾಸದಿಂದ ಬೇರ್ಪಡಿಸುತ್ತದೆ. ದೇವರ ವಾಗ್ದಾನದಲ್ಲಿ ನಿಶ್ಚಲವಾಗಿರುವುದು ಕಷ್ಟವೆಂದು ಅರಿತ ಅವಳು, ಅದನ್ನು ಸಾಧಿಸುವ ತಂತ್ರ ಹುಡಿಗಳು ಅವಳ ಹೃದಯವನ್ನು ಪ್ರತಿಬಿಂಬಿಸುವ ಫಲಿತಾಂಶಗಳು ಮಿಶ್ರವಾಗಿದ್ದವು. ತನ್ನ ಮನೆಯಿಂದ ಹಾಗೂ ತುಂಬಾ ಪ್ರೀತಿಸಿದ ತಾಯಿಂದ ಓಡಿಸಲಾದ ಯಾಕೋಬನಾದರೊ ನಿಜಕ್ಕೂ ವಾಗ್ದಾನಕ್ಕೆ ಬದ್ಧನಾಗಿ     ಉತ್ತರಾಧಿüಕಾರಿಯಾದನು. ಇದಲ್ಲದೆ ಅವನ ಮತ್ತು ಅವನ ವಂಶಸ್ಥರು, ಏಸಾವ ಮತ್ತು ಏದೋಮಿನವರೊಂದಿಗೆ ಬಗೆಹರಿಯದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಎರಡು ಸಾವಿರ ವರ್ಷಗಳ ನಂತರ, ಇಡುಮಿಯ (ಏದೋಮಿನ ಗ್ರೀಕ್ ಮತ್ತು ರೋಮನ್ ಹೆಸರು) ದಿಂದ ಬಂದ ಹೇರೋದರಸನು, ಕಂದ ಯೇಸುವನ್ನು ನಾಶಮಾಡುವ ಪ್ರಯತ್ನದಲ್ಲಿ ಅನೇಕ ಮುಗ್ಧ ಮಕ್ಕಳನ್ನು ವಧಿಸುತಾನೆ. ಆದರೂ ದೇವರು ತಮ್ಮ ಉದ್ದೇಶಗಳನ್ನು ಪೂರೈಸುವ ಸಲುವಾಗಿ ಆ ಮಹಿಳೆಯ ಮುಖಾಂತರ ಕಾರ್ಯನಿರ್ವಹಿಸುತ್ತಿದ್ದರು.

0-0-0-0-0-0

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...