Friday, 13 March 2020

ಪರಮ ಸಂಸ್ಕಾರ [ಭಾಗ 4)


- ಸಿಎಂಜೆ

ದೃಢೀಕರಣ
ಸಾಧಾರಣವಾಗಿ ಬಾಲಕ ಅಥವಾ ಬಾಲಕಿಯ ಹನ್ನೆರಡನೇ ವಯಸ್ಸಿನಲ್ಲಿ ಅಥವಾ ಆನಂತರ ಅವರಿಗೆ ಕೊಡಲಾಗುವ ವಿಶಿಷ್ಟ ಸಂಸ್ಕಾರ ದೃಢೀಕರಣ ಸಂಸ್ಕಾರ. ದೀಕ್ಷಾಸ್ನಾನದಂದು ಮಗು ತನ್ನ ತಂದೆತಾಯಿಯರು ತನ್ನ ಪರವಾಗಿ ಮಾಡಿದ ವಾಗ್ದಾನಗಳನ್ನು ಇಂದು ತಾನೇ ಮಾಡುವುದಕ್ಕಾಗಿ ಈ ವಯಸ್ಸನ್ನು ನಿಗದಿ ಪಡಿಸಲಾಗಿದೆ. ದೃಢೀಕರಣ ಸಂಸ್ಕಾರವನ್ನು ನೀಡುವ       ಅಧಿಕಾರವಿರುವುದು ಬಿಷಪರಿಗೆ ಮಾತ್ರ. ಪೂಜಾಸಂದರ್ಭದಲ್ಲಿ 
ಬಲಿಪೀಠದ ಮುಂದೆ ಬಿಷಪರು ಕುಳಿತು, ಮಗುವಿನ ಹೆಸರಿಡಿದು ಕರೆದು ಅದರ ತಲೆಯ ಮೇಲೆ ಎರಡೂ ಹಸ್ತಗಳನ್ನಿರಿಸಿ ಪವಿತ್ರಾತ್ಮರನ್ನು ವಿಶೇಷ ಪ್ರಾರ್ಥನೆಯ ಮೂಲಕ ಆಹ್ವಾನಿಸಿ ಮಗುವಿನ ಹಣೆಯ ಮೇಲೆ ಪವಿತ್ರತೈಲವನ್ನು ಲೇಪಿಸಿ ಆ ಮಗುವನ್ನು ಕ್ರಿಸ್ತವಿಶ್ವಾಸದಲ್ಲಿ ನೆಲೆಗೊಳಿಸುತ್ತಾರೆ. “ತನ್ನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು ಎಂಬುದೇ ದೇವರ ಉದ್ದೇಶ” (ಯೊವಾನ್ನ 3:16). ತಾನು ಎಳೆಯ ಕೂಸಾಗಿದ್ದಾಗ ಗುರುಗಳು ನೆರವೇರಿಸಿದ ಇದೇ ಕ್ರಿಯೆಯನ್ನು ಇದೀಗ ಬಿಷಪರು ಮಾಡಿದ್ದನ್ನು ಅನುಭವಿಸುವ ಆ ಮಗು ಕ್ರಿಸ್ತವಿಶ್ವಾಸದಲ್ಲಿ ಬಲಗೊಂಡು ಬೆಳೆಯುತ್ತದೆ. ಬಿಷಪರು ಬರಲಾಗದ ಸಂದರ್ಭಗಳಲ್ಲಿ ಅವರು ದೃಢೀಕರಣ ಸಂಸ್ಕಾರ ನೀಡಲು ಆಯ್ದ ಗುರುವೊಬ್ಬರಿಗೆ ಪ್ರಾತಿನಿಧ್ಯ ನೀಡಬಹುದು. ಸಾಮಾನ್ಯವಾಗಿ ದೃಢೀಕರಣ ಸಂದರ್ಭದಲ್ಲಿ ಮಗುವಿಗೊಂದು ವೈಯಕ್ತಿಕ ಶ್ರೀಗ್ರಂಥವನ್ನು ನೀಡುವ ಮೂಲಕ ಅವನನ್ನು ಪವಿತ್ರ ಬೈಬಲ್ ಓದಿಗೆ ಆಹ್ವಾನಿಸಲಾಗುತ್ತದೆ. ಕೆಲ ಧರ್ಮಪ್ರಾಂತ್ಯಗಳಲ್ಲಿ ದೃಢೀಕರಣ ಸ್ವೀಕಾರವನ್ನು ಖಾತರಿ ಪಡಿಸಲು ಒಂದು ಪ್ರಮಾಣಪತ್ರವನ್ನೂ ನೀಡಲಾಗುತ್ತದೆ.
ದೃಢೀಕರಣ ಸಂಸ್ಕಾರವು ಸಂಸ್ಕಾರಗಳಲ್ಲೇ ಮಹತ್ತರವಾದದ್ದು. ಏಕೆಂದರೆ ದೇವರ ಪವಿತ್ರಾತ್ಮರು ಇಳಿದು ಬಂದು ವ್ಯಕ್ತಿಯ ಆಂತರ್ಯಯದಲ್ಲಿ ನೆಲೆಸುವ ಮೂಲಕ ಆ ವ್ಯಕ್ತಿಗೆ ಪರಮ ರಹಸ್ಯಗಳನ್ನು ಅರಿಯುವ ವ್ಯಾಖ್ಯಾನಿಸುವ ಮಹೋನ್ನತ ಶಕ್ತಿಯನ್ನು ದಯಪಾಲಿಸುತ್ತಾರೆ. “ನೀನು ಹೋಗುವ ಎಡೆಗಳಲ್ಲೆಲ್ಲ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನ್ನ ಸಂಗಡ ಇರುತ್ತೇನೆ” ಎಂದು ಅವರೇ ಹೇಳಿದ್ದಾರೆ. (ನೋಡಿ. ಯೆಹೋಶುವ 1:9). ಅದನ್ನೇ ಯೇಸುಸ್ವಾಮಿ “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ” ಎಂದಿದ್ದಾರೆ. (ನೋಡಿ. ಯೊವಾನ್ನ 8:12). ದೃಢೀಕರಣ ಸಂಸ್ಕಾರವನ್ನು ಜೀವನದಲ್ಲಿ ಒಮ್ಮೆ ಮಾತ್ರವೇ ನೀಡಲಾಗುತ್ತದೆ. ಮತ್ತೆ ಮತ್ತೆ ನೀಡುವುದೆಂದರೆ ಅದು ಪವಿತ್ರಾತ್ಮರಿಗೆ ಬಗೆದ ಘೋರ ಅಪಮಾನ.
ನನ್ನ ಸ್ನೇಹಿತರ ಮಗ ಈಗ ಮದುವೆಗೆ ಸಿದ್ಧನಾಗುತ್ತಿದ್ದಾನೆ. ಧರ್ಮಕೇಂದ್ರದ ಗುರುಗಳು ದೃಢೀಕರಣದ ಪುರಾವೆ ತೋರಿಸಲು ಹೇಳಿದರು. ಅವನು 18 ವರ್ಷಗಳ ಹಿಂದೆ ಹಿಂದಿನ ಧರ್ಮಕೇಂದ್ರದಲ್ಲಿ 60 ಮಕ್ಕಳ ಜೊತೆಗೂಡಿ ಹೊಸ ಪರಮಪ್ರಸಾದ ಮತ್ತು ದೃಢೀಕರಣ ಪಡೆದನೆಂದು ಅವನ ತಂದೆತಾಯಿ ಹೇಳುತ್ತಾರೆ. ಆದರೆ ಆ ಧರ್ಮಕೇಂದ್ರದ ರಿಜಿಸ್ಟ್ರಿಯಲ್ಲಿ ಆ ಬಗ್ಗೆ ದಾಖಲಾಗಿಲ್ಲ. ಅಲ್ಲದೆ ಇವರ ಬಳಿ ಆ ಸ್ಮರಣೀಯ ಘಟನೆಯನ್ನು ಸೆರೆ ಹಿಡಿದ ಫೆÇೀಟೋ ಕೂಡಾ ಇಲ್ಲ. ಹದಿನೆಂಟು ವರ್ಷಗಳ ಹಿಂದೆ ನಡೆದ ಆ ಕಾರ್ಯಕ್ರಮದಲ್ಲಿ ಭಾಗಿಯಾದ ಯಾರದೂ ಪರಿಚಯವಿಲ್ಲ, ಮತ್ತು ಆ ದಿನ ಅಲ್ಲಿದ್ದ ಪಾದ್ರಿಯೂ ಜೀವಂತರಿಲ್ಲ. ಈಗ ಏನು ಮಾಡಬೇಕು?
ದೇವಾಲಯದ ರಿಜಿಸ್ತ್ರಿಯಲ್ಲಿ ಈ ಹುಡುಗನ ಹೆಸರು ದಾಖಲಾಗದೇ ಇರಲು ಎರಡು ಕಾರಣಗಳಿವೆ. ಒಂದು ಹುಡುಗನಿಗೆ ಪ್ರಾಪ್ತ ವಯಸ್ಸಾಗಿಲ್ಲವೆಂದು ಅಥವಾ ಧರ್ಮಾಧ್ಯಕ್ಷರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲವೆಂದು ಅವನಿಗೆ ದೃಢೀಕರಣ ಕೊಟ್ಟಿಲ್ಲದೇ ಇರಬಹುದು, ಮತ್ತೊಂದು ಕಾರಣವೆಂದರೆ 
ಪಾದ್ರಿಯವರು ಅದನ್ನು ದಾಖಲಿಸಲು ಮರೆತಿರಬಹುದು. ಸಾಮಾನ್ಯವಾಗಿ ಅನೇಕ ಮಕ್ಕಳು ಸರತಿಯ ಸಾಲಿನಲ್ಲಿ ನಿಂತಾದ ದೃಢೀಕರಣ ಸ್ವೀಕರಿಸುವವರ ಕೈಯಲ್ಲಿ ಅವರ ಹೆಸರಿನ ಚೀಟಿ ಕೊಡಲಾಗುತ್ತದೆ. ತಮ್ಮ ಸರದಿ ಬಂದಾಗ ಅವರು ಅದನ್ನು ಧರ್ಮಾಧ್ಯಕ್ಷರ ಕೈಗೆ ಹಸ್ತಾಂತರಿಸಬೇಕು. ಅದು ದೃಢೀಕರಣದ ನಂತರ ಗುಡಿಯ ಪಾದ್ರಿಯ ಕೈಸೇರುತ್ತದೆ. ಕೊನೆಗೆ ಆ ಚೀಟಿಗಳ ಆಧಾರದಲ್ಲಿ ಗುರುಗಳು ರಿಜಿಸ್ಟ್ರಿಯಲ್ಲಿ ದಾಖಲಿಸುತ್ತಾರೆ. ಇಲ್ಲಿ ಬಹುಶಃ ಆ ಚೀಟಿ ಕಳೆದಿರಬಹುದು, ಅಥವಾ ಒಂದೇ ಹೆಸರಿನ ಇಬ್ಬರು ಹುಡುಗರಲ್ಲಿ ಒಬ್ಬನಿಗೆ ದೃಢೀಕರಣ ಕೊಟ್ಟಿಲ್ಲದಿರಬಹುದು.
ಆದರೆ ಈ ಹುಡುಗನಿಗೆ ಈಗ ಮದುವೆ ಹತ್ತಿರ ಬರ್ತಾ ಇದೆ. ಏನು ಮಾಡಬೇಕು ಎಂಬುದು ತಾಯ್ತಂದೆಯರ ಅಳಲು. ಮದುವೆ, ಸಾವು ಮುಂತಾದ ಸಂದರ್ಭಗಳಲ್ಲಿ ಸಂಬಂಧಪಟ್ಟ ಗುರುಗಳು ಭಕ್ತಾದಿಗಳನ್ನು ಸತಾಯಿಸಿ ವಿಕೃತಾನಂದ ಹೊಂದುತ್ತಾರೆನ್ನುವುದು ಸುಳ್ಳೇನಲ್ಲ. ಆದರೆ ಈಗ ಈ ಸಮಸ್ಯೆಗೆ ಪರಿಹಾರವೇನು? 
ದೃಢೀಕರಣ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರ, ಚಲನಚಿತ್ರ ಮುಂತಾದ ಪುರಾವೆ ಇಲ್ಲದಿದ್ದಲ್ಲಿ ಧರ್ಮಸಂಹಿತೆಯ ಕ್ಯಾನನ್ 876ರ ಪ್ರಕಾರ ಅಂದು ಹಾಜರಿದ್ದ ಯಾರೇ ಗೌರವಾನ್ವಿತ ವ್ಯಕ್ತಿ, ಅಥವಾ ದೃಢೀಕರಣ ಪಡೆದ ಮತ್ತೊಬ್ಬ ಹುಡುಗನ ತಾಯ್ತಂದೆ ಬಂದು ಸಾಕ್ಷಿ ನುಡಿಯಬೇಕು. ಇದು ಸಾಧ್ಯವಾಗದ ಪಕ್ಷದಲ್ಲಿ ‘ಷರತ್ತುಬದ್ದ ದೃಢೀಕರಣ’ ನೀಡಲಾಗುತ್ತದೆ. ಅದೇನೆಂದರೆ ದೃಢೀಕರಣ ಹೊಂದಿದ್ದರ ಕುರಿತಾದ ಸಾಕ್ಷಿಪುರಾವೆಗಳೆಲ್ಲ ಕಾಲಗರ್ಭದಲ್ಲಿ ಹುದುಗಿರುವುದರಿಂದ, ಈ ಹಿಂದೆ ದೃಢೀಕರಣ ಆಗಿಯೇ ಇಲ್ಲವೆಂದು ಭಾವಿಸಿ ಈಗ ಮತ್ತೊಮ್ಮೆ ದೃಢೀಕರಣ ನೀಡುವುದು, ಹಾಗೇನಾದರೂ ಮುಂದೊಮ್ಮೆ ಮೊದಲ ದೃಢೀಕರಣದ ಬಗ್ಗೆ ತಿಳಿದುಬಂದರೆ ತಪ್ಪಿತಸ್ಥರು ದೇವರ ದಂಡನೆಗೆ ಗುರಿಯಾಗುತ್ತಾರೆ ಎಂಬುದು ಧರ್ಮಸಭೆಯು ನೀಡುವ ತಿಳಿವಳಿಕೆ.

0-0-0-0-0-0

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...