Friday, 13 March 2020

ಭಾರತದ ಮಾನಸಿಕ ಸ್ವಾಸ್ಥ್ಯವೆಲ್ಲಿದೆ?


ಯೊಗೇಶ್ ಮಾಸ್ಟರ್

 ಜನಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ. ಈ ಜನಸಂಖ್ಯೆಯ ಐದು ಜನರಲ್ಲಿ ಒಬ್ಬರು ಹತ್ತರಿಂದ ಹತ್ತೊಂಬತ್ತು ವರ್ಷದವರಾಗಿದ್ದಾರೆ. ಹಾಗೂ ಸರಾಸರಿಯಲ್ಲಿ ಪ್ರತಿ ಮೂರನೆಯ ವ್ಯಕ್ತಿ 10 ರಿಂದ 24 ವಯೋಮಾನದವರಾಗಿರುತ್ತಾರೆ. ಈಗ ಸದ್ಯಕ್ಕೆ ನಮ್ಮ ದೇಶದಲ್ಲಿ ಮಕ್ಕಳು ಮತ್ತು ಪ್ರೌಢ ಮಕ್ಕಳು ಸೇರಿ 434 ಮಿಲಿಯನ್ ಇದ್ದಾರೆ. ಈ ವಿಷಯದಲ್ಲಿ ಪ್ರಪಂಚದಲ್ಲೇ ಮೊದಲನೆಯ ಸ್ಥಾನ ನಮಗೆ. ಹಾಗೇ ಲೆಕ್ಕ ಹಾಕಿದರೆ 2030ರ ಹೊತ್ತಿಗೆ ವೃತ್ತಿಪರವಾಗಿ ಕ್ರಿಯಾಶೀಲವಾಗಿರುವ ಜನಸಂಖ್ಯೆ 250 ಮಿಲಿಯನ್ ಆಗಿರುತ್ತದೆ. ಇದೂ ಕೂಡಾ ಗಾತ್ರದಲ್ಲಿ ಅತ್ಯಂತ ದೊಡ್ಡದೇ. ಈ ಸಂಖ್ಯೆಯೇನಾದರೂ ರಚನಾತ್ಮಕವಾಗಿ, ಕ್ರಿಯಾಶೀಲವಾಗಿ ಮತ್ತು ಸಕಾರಾತ್ಮಕವಾಗಿ ಸ್ಪಂದಿಸುತ್ತಾ ದುಡಿದರೆ ನಮಗೆ ಬಹುದೊಡ್ಡ ಆಸ್ತಿಯಾಗಿ ರಾಷ್ಟ್ರದ ಅಭಿವೃದ್ಧಿ, ಪ್ರಗತಿ ಮತ್ತು ಪುನರುತ್ಥಾನಕ್ಕೆ ಬಹುದೊಡ್ಡ ಮಾನವ ಸಂಪನ್ಮೂಲವಾಗಿ ಇವರು ಒದಗಲಿದ್ದಾರೆ. ಶಿಕ್ಷಣ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಸೃಜನಶೀಲತೆ, ಮಾನವ ವಿಷಯ ವಸ್ತುಗಳು, ಆಡಳಿತ, ಪರಿಸರ, ನಾಗರಿಕ ಸೇವೆ, ರಾಜಕಾರಣ, ಆರ್ಥಿಕತೆ, ಸಾಹಿತ್ಯ, ಕಲೆ; ಹೀಗೆ ಅನೇಕಾನೇಕ ಉನ್ನತಿ ಸಾಧಿಸಬೇಕಾಗಿರುವಂತಹ ಕ್ಷೇತ್ರಗಳಲ್ಲಿ ಇವತ್ತಿನ ಕಿಶೋರರು ಮತ್ತು ಪ್ರೌಢ ಮಕ್ಕಳು ನಾಳೆ ದಕ್ಕುತ್ತಾರೆ. ಈ ಸಾಧನೆ ಸಾಧ್ಯವಾಗಬೇಕಾದರೆ ಮೊದಲು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಈ ಮಕ್ಕಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು. ಅದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುವಂತಹ, ಉತ್ತಮವಾಗಿಯೇ ಇರಿಸುವಂತಹ ವಾತಾವರಣವಾಗಿರಬೇಕು. 
ಶಿಶುತನಕ್ಕಿರುವ ಅಪಾಯಗಳು
ನಮ್ಮ ದೇಶದ ಸಾಮಾನ್ಯ ಸಾಮಾಜಿಕ ಮಟ್ಟದಲ್ಲಿರುವ ಶಿಶುತನವು ಅಪಾಯವನ್ನು ಎದುರಿಸುತ್ತಿದೆ. ಈ ದಿಕ್ಕಿನಲ್ಲಿ ಕಾಣಸಿಗುವ ಮೊಟ್ಟ ಮೊದಲ ಅಂಶ ಶಿಶುಮರಣ. ಭಾರತದಲ್ಲಿ ಐದು ವರುಷದ ಒಳಗಿನ ಶಿಶುಮರಣವೂ ಕೂಡಾ ಅತ್ಯಧಿಕ ಮಟ್ಟದಲ್ಲಿಯೇ ಇದೆ. ಯಾವುದೇ ದೇಶದ ಪ್ರಗತಿ ಮತ್ತು ಸ್ವಾಸ್ಥ್ಯವನ್ನು ಅಳೆಯುವುದು ಆ ದೇಶದ ಶಿಶುಮರಣದ ಪ್ರಮಾಣದಿಂದ.ಅಕ್ರಮ ಸಂತಾನದಿಂದ ಹಿಡಿದು ಒಲ್ಲದ ಸಂತಾನದವರೆಗೆ ಸಾವನಪ್ಪುವುದರಿಂದ, ಪೌಷ್ಟಿಕಾಂಶಗಳ ಕೊರತೆಯಿಂದ, ರೋಗ ನಿರೋಧಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೇ ಇರುವುದರಿಂದ, ಸಾಂಕ್ರಾಮಿಕ ರೋಗಗಳ ದಾಳಿಯೂ ಎಳೆಯ ಮಕ್ಕಳನ್ನೇ ಬಲಿತೆಗೆದುಕೊಳ್ಳುವುದರಿಂದ, ಅಪಘಾತಗಳಿಂದ, ವಂಶವಾಹಿನಿ ಅಥವಾ ಸೋಂಕಿನ ಅನಾರೋಗ್ಯದ ಸಮಸ್ಯೆಗಳಿಂದ,ಕೊಲೆ, ಅತ್ಯಾಚಾರಗಳಿಂದ, ಧಾರ್ಮಿಕ ಅಥವಾ ಸಾಂಪ್ರದಾಯಿಕ ಮೌಢ್ಯತೆಗಳಿಂದ, ಆತ್ಮಹತ್ಯೆಗಳಿಂದ ಮಕ್ಕಳು ಸಾಯಲು ನಾನಾ ಕಾರಣಗಳಿವೆ. ಶಿಶುತನಕ್ಕಿರುವ ಅಪಾಯಗಳಲ್ಲಿ ಈ ಸಂಗತಿಗಳು ದಾರುಣ ಮತ್ತು ಅನಪೇಕ್ಷಿತವೇ ಆದರೂ, ಈ ಮಕ್ಕಳದು ಅಲ್ಲಿಂದಲ್ಲಿಗೆ ಮುಗಿವ ಕತೆ ಎಂದಿಟ್ಟುಕೊಳ್ಳಿ. ಇದರ ಜೊತೆಗೆ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮದುವೆ, ಆರ್ಥಿಕ ಮುಗ್ಗಟ್ಟುಗಳಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ದೈಹಿಕ ಶ್ರಮದ ಕೆಲಸಕ್ಕೆ ಇಳಿಯುವ ಮಕ್ಕಳು, ಬಡತನದ ಕಾರಣದಿಂದ ವಿದ್ಯಾಭ್ಯಾಸ, ಆಹಾರ, ಆರೋಗ್ಯ, ಆಶ್ರಯದಿಂದ ವಂಚಿತರಾಗಿ ಬೀದಿಗಿಳಿವ ಮಕ್ಕಳು. ಒಡಕು ಕುಟುಂಬ ಮತ್ತು ಅವೈಜ್ಞಾನಿಕ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕಾ ಪದ್ಧತಿಗಳಿಂದ ಮಾನಸಿಕವಾಗಿ ವಿಕಾಸವಾಗದ ಅಥವಾ ನಕಾರಾತ್ಮಕ ಮನಸ್ಥಿತಿಗಳನ್ನು ಹೊಂದುವ ಮಕ್ಕಳು, ಅನಾರೋಗ್ಯಕರವಾದ ವಾತಾವರಣಗಳಿಂದ ದುಶ್ಚಟಗಳಿಗೆ ಎಳೆವೆಯಲ್ಲಿಯೇ ಬಲಿಯಾಗುವ ಮಕ್ಕಳು, ವಿಧ್ವಂಸಕ ಮತ್ತು ಅಸ್ವಾಭಾವಿಕ ಮಾದರಿಗಳಿಂದ ಅದರಂತೆಯೇ ರೂಪುಗೊಳ್ಳುವ ಮಕ್ಕಳು; ಹೀಗೆ ಅನೇಕಾನೇಕ ಮಕ್ಕಳು ತಮ್ಮ ಪ್ರೌಢಾವಸ್ಥೆಯ ಹಂತಕ್ಕೇ ರಚನಾತ್ಮಕ ಸಾಮರ್ಥ್ಯವನ್ನು, ಉತ್ಪಾದಕ ಧೋರಣೆಯನ್ನು ಮತ್ತು ಧನಾತ್ಮಕವಾಗಿ ಕ್ರಿಯಾಶೀಲವಾಗಿರುವ ಮನಸ್ಥಿತಿಯನ್ನು ಕಳೆದುಕೊಂಡುಬಿಟ್ಟಿರುತ್ತವೆ.
ಸಮಾಜದ ಮಾನಸಿಕ 
ಸ್ವಾಸ್ಥ್ಯವೆಲ್ಲಿದೆ?
ಯಾವ ಮಕ್ಕಳ ಬಾಲ್ಯಗಳು ಕಡೆಗಣಿಸಲ್ಪಟ್ಟಿರುತ್ತದೆಯೋ, ಅವರಲ್ಲಿ ಬಹಳಷ್ಟು ಜನ ಮಕ್ಕಳು ಒಂದೋ ಅನುತ್ಪಾದಕರಾಗಿ ರೂಪುಗೊಂಡಿರುತ್ತಾರೆ ಅಥವಾ ಕುಟುಂಬಕ್ಕೂ ಮತ್ತು ಸಮಾಜಕ್ಕೂ ತಲೆನೋವಾಗಿ ಪರಿಣಮಿಸಿರುತ್ತಾರೆ. ಹಾಗೂ ಇವರ ಸಂಖ್ಯೆಯೇ ದೊಡ್ಡದಾಗಿ ಸಮಾಜದಲ್ಲಿ ಬಲವಾಗಿರುವಾಗ ಮತ್ತು ಆಕ್ರಮಣಕಾರಿಗಳಾಗಿರುವಾಗ ಆರೋಗ್ಯಕರ ಮತ್ತು ಉತ್ಪಾದಕ ವಯಸ್ಕರು ಅಲ್ಪ ಸಂಖ್ಯಾತರಾಗುತ್ತಾರೆ. ಅದರ ಫಲವಾಗಿ ದೇಶವನ್ನು ಬಿಟ್ಟು ಹೋಗುವಂತಹ ಪ್ರತಿಭಾ ಪಲಾಯನಗಳಾಗುತ್ತವೆ ಅಥವಾ ಇವರ ಉತ್ಪಾದನಾ ಫಲಿತಗಳು ವ್ಯರ್ಥವಾಗುತ್ತವೆ. 
ಅನುತ್ಪಾದಕರಿಗೂ ಬಾಯಿ, ಹೊಟ್ಟೆಗಳಿರುತ್ತವೆ. ಅವರು ಬದುಕಲು ಅಗತ್ಯವಸ್ತುಗಳ ಕೊರತೆ ಇರುತ್ತದೆ. ಆಸೆ, ಮೋಜುಗಳ ಸೆಳೆತವಿರುತ್ತದೆ. ಆಗ ಅವರು ಉತ್ಪಾದಕರ ಮತ್ತು ಕ್ರಿಯಾಶೀಲರ ಮೇಲೆ ಅವಲಂಬಿತರಾಗುತ್ತಾರೆ. ಆಗಲೇ ಕೊಲೆ, ಸುಲಿಗೆ, ಕಳ್ಳತನ, ಮೋಸ, ಅನಾಚಾರ, ಅಕ್ರಮ ಸಂಪಾದನೆ; ಇತ್ಯಾದಿ ಅಪರಾಧಗಳನ್ನೆಲ್ಲಾ ಸಮಾಜ ಎದುರಿಸಬೇಕಾಗುವುದು ನಿರೀಕ್ಷಿತವೂ, ಸಹಜವೂ ಆಗುತ್ತದೆ. ಅಪರಾಧವೂ ಕೂಡಾ ವ್ಯವಸ್ಥೆಯ ಒಂದು ಭಾಗವಾಗಿ ಪರಿಗಣಿಸಿದರೂ ಆಶ್ಚರ್ಯವೇನಿಲ್ಲ. ಆಂತರಿಕವಾಗಿ ವ್ಯಕ್ತಿಯಲ್ಲಿ ಮತ್ತು ವ್ಯವಸ್ಥೆಯ ಒಳವರ್ತುಲಗಳಲ್ಲಿ ಅವುಗಳು ಸಹಜವಾಗಿ ಸಾಮಾಜಿಕವಾಗಿ ಒಪ್ಪಿತವಾಗಿಬಿಟ್ಟರೆ, ಅವು ಮುಂದೊಂದು ದಿನ ಅಪರಾಧವಾಗಿಯೂ ಉಳಿಯುವುದಿಲ್ಲ. ಇದೆಷ್ಟು ಅಪಾಯಕರವೆಂದು ಆಲೋಚಿಸಿ. 
ವ್ಯಕ್ತಿ ವ್ಯಕ್ತಿಗಳ ಶಕ್ತಿಗಳು ಸಂಕಲಿತವಾಗಿ ಹೇಗೆ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳುವುದೋ, ಅದೇ ರೀತಿ ವ್ಯಕ್ತಿ ವ್ಯಕ್ತಿಗಳ ಮನಸ್ಥಿತಿಗಳು ಸಮಾಜದ ಮಾನಸಿಕಸ್ಥಿತಿಯಾಗಿ ಅಸ್ತಿತ್ವದಲ್ಲಿ ಕ್ರಿಯಾಶೀಲವಾಗಿರುತ್ತದೆ. 
ನಮ್ಮ ಮುಂದಿನ ಸಮಾಜದಲ್ಲಿ ನಾವೇ ಏನನ್ನು ನಿರೀಕ್ಷಿಸಬೇಕು? ಯಾವ ವಿದ್ಯಮಾನಗಳು ಸಹಜವಾಗಿರಬೇಕು ಎಂಬುದರ ಸ್ಪಷ್ಟವಾದ ದೂರದೃಷ್ಟಿಯೊಂದಿಗೆ ಮಗುತನವನ್ನು ಜತನ ಮಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ವಯಸ್ಕ ವ್ಯಕ್ತಿಯೂ, ವ್ಯವಸ್ಥೆಯೂ, ಆಡಳಿತಾಂಗವೂ ಹೊತ್ತುಕೊಳ್ಳಲೇಬೇಕು. ಯಾವ ವಯಸ್ಕ ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಸರ್ಕಾರಕ್ಕೆ ಪ್ರಸ್ತುತ ಕಣ್ಮುಂದೆ ಇರುವ ಶಿಶುವಿನ ವಯಸ್ಕ ಚಿತ್ರಣವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲವೋ ಅದಕ್ಕೆ ದೂರದೃಷ್ಟಿ ಇಲ್ಲವೆಂದೇ ಅರ್ಥ. ಹಾಗೂ ಅದಕ್ಕೆ ಮುಂಬರುವ ಪೀಳಿಗೆಗಳಿಗೆ ಸಮಾಜ, ವ್ಯವಸ್ಥೆ ಮತ್ತು ವಾತಾವರಣವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದೇ ಅರ್ಥ. ಆದ್ದರಿಂದ ವ್ಯಕ್ತಿಗಳು ಜಾಗೃತರಾಗಬೇಕು. ಕುಟುಂಬಗಳು ಸಿದ್ಧವಾಗಬೇಕು ಮತ್ತು ಸರಕಾರಗಳು ಕಾಯಿದೆಗಳನ್ನು, 
ಯೋಜನೆಗಳನ್ನು ರೂಪಿಸಬೇಕು. 
ಕಿಶೋರ ಮತ್ತು ಪ್ರೌಢ ಮಕ್ಕಳ ಮಾನಸಿಕ ಆರೋಗ್ಯ ಯೋಜನೆ

ಹಾಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆಯು ಸಿ ಎ ಎಂ ಹೆಚ್ ಅಂದರೆ ಚೈಲ್ಡ್ ಅಂಡ್ ಅಡೋಲಸೆಂಟ್ ಮೆಂಟಲ್ ಹೆಲ್ತ್ ಅಸ್ತಿತ್ವಕ್ಕೆ ತಂದಿರೋದು. ಅದಕ್ಕೆ ಕಿಶೋರ ಮತ್ತು ಪ್ರೌಢ ಮಕ್ಕಳ ಮಾನಸಿಕ ಆರೋಗ್ಯ ಯೋಜನೆ ಎಂದು ಕರೆಯಬಹುದು. ಇನ್ನೊಂದು ಸಿ ಎ ಎಂ ಹೆಚ್ ಕೆನಡಾದಲ್ಲಿದೆ. ಅದು ಸೆಂಟರ್ ಫಾರ್ ಅಡಿಕ್ಷನ್ ಅಂಡ್ ಮೆಂಟಲ್ ಹೆಲ್ತ್. ಅದೂ ಕೂಡಾ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವುದಾದರೂ ಅದು ಶುದ್ಧಾಂಗ ಮಕ್ಕಳದ್ದೇನಲ್ಲ. 
ವಿಶ್ವ ಆರೋಗ್ಯ ಸಂಸ್ಥೆಯ ಸಿ ಎ ಎಂ ಹೆಚ್ ನಮ್ಮ ದೇಶಕ್ಕೆ ಯಾವ್ಯಾವ ಸಲಹೆಗಳು ನೀಡುತ್ತದೆ, ಎಂತಹ ಯೋಜನೆಗಳನ್ನು ರೂಪಿಸಲು ಮುಂದಾಗುತ್ತದೆ ಇದನ್ನೆಲ್ಲಾ ನಾವು ತಿಳಿಯಬೇಕು. ಮುಂದೆ ತಿಳಿಯೋಣ.

0-0-0-0-0-0

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...