ನಾನು ಮೋಸೇಸ
ಕ್ರಿಸ್ತನ ಕೊಲೆಯಲ್ಲಿ ಎನಗಿಲ್ಲ ಪಾಪ ಲವಲೇಶ
ದೇವರು ಕೊಟ್ಟರೆನಗೆ ಹತ್ತು ಕಟ್ಟಳೆ
ಬಿಸಾಡಿ ಬರೆದೆ ನನ್ನದೇ ನೂರೆಂಟು ಕಟ್ಟಳೆ
ಧರ್ಮಗುರು ಪುರೋಹಿತ ಬಿಷಪರೆಲ್ಲ ನನ್ನದೇ ವೇಷ
ನನ್ನ ಕಟ್ಟಳೆಗಳಿಗಿಲ್ಲ ದೇಶ ಕಾಲಗಳ ಕ್ಲೇಶ
ನನ್ನವೋ ಆರೂನೂರ ಇಪ್ಪತ್ತೆರಡು
ಇವರವು ಸಾವಿರದೇಳುನೂರಾ ನಲವತ್ತೆರಡು
‘ಎಲ್ಲ ಕಟ್ಟಳೆಗಳಿಗಿಂತ ಮಿಗಿಲು ತನ್ನ ಕಟ್ಟಳೆಯೆಂದ
ಸ್ನೇಹ ಪ್ರೀತಿಗಳೆರಡೂ ದೇವರೆಡೆಗೆ ಮೆಟ್ಟಿಲೆಂದ’
ಅಂಥ ಯೇಸುವನೂ ಬಿಡಲಿಲ್ಲ ನನ್ನ ಕಟ್ಟಳೆಗಳು
ಕೊಚ್ಚಿ ಕೊಲ್ಲುವ ನೀತಿ ನಿಯಮಾವಳಿಗಳು
ಹೊಸ ಕಟ್ಟಳೆಗಳ ನಾನೀಗಲೂ ಬರೆಯುತಿರುವೆ
ಧರ್ಮದ ಹೆಸರಲ್ಲಿ ಮಾನ್ಯತೆ ಪಡೆಯುತಿರುವೆ
ಕ್ರಿಸ್ತನೊಬ್ಬ ಬಡಪಾಯಿ ಅವ ಸತ್ತರೆ ಸಾಯಲಿ
ಅವನ ಶಿಲುಬೆಗೆ ಜಡಿದು ನನ್ನ ಕಟ್ಟಳೆ ಉಳಿಯಲಿ
ನಾನು ಮೋಸೇಸ
ಕ್ರಿಸ್ತನ ಕೊಲೆಯಲ್ಲಿ ಎನಗಿಲ್ಲ ಪಾಪ ಲವಲೇಶ
- ಸಿ ಮರಿಜೋಸೆಫ್
No comments:
Post a Comment