- ಎಫ್ ಎಂ ಎನ್
ರಂಗಿನೂಯಿ ಮತ್ತು ಪಾಪತುನುಕು
ಆದಿ ಕಾಲದಲ್ಲಿ `ರಂಗಿನೂಯಿ’ (ಮಹಾ ಬಾನು) ಮತ್ತು `ಪಾಪತುನುಕು’ (ಭೂ ಮಾತೆ) ಹೆಸರಿನ ಆದಿ ತಂದೆತಾಯಿ ಇದ್ದರು. ಆದಿ ತಂದೆ ಆಗಸ ಮತ್ತು ಆದಿ ತಾಯಿ ಭೂಮಾತೆ ಪರಸ್ಪರ ಭದ್ರವಾಗಿ ತಬ್ಬಿಕೊಂಡಿದ್ದರು. ಅವರಿಗೆ ಹಲವಾರು ಮಕ್ಕಳಿದ್ದರು. ಎಲ್ಲಾ ಗಂಡುಮಕ್ಕಳಿಗೆ ಅನಿವಾರ್ಯವಾಗಿ, ಅವರಿಬ್ಬರ ನಡುವಿನ ಕಗ್ಗತ್ತಲೆಯಲ್ಲೇ ಬದುಕು ಸಾಗಿಸುವುದು ಅನಿವಾರ್ಯವಾಗಿತ್ತು. ಅವರೆಲ್ಲಾ ಸ್ವಲ್ಪ ಬೆಳೆದು ದೊಡ್ಡವರಾದ ಮೇಲೆ ಕಲೆತು ವಿಚಾರ ಮಂಥನ ನಡೆಸಿದರು. ಕತ್ತಲೆಯನ್ನು ದಾಟಿಕೊಂಡು ಹೊರಗೆ ಬರಬೇಕು. ಬೆಳಕಲ್ಲಿ ಬದುಕುವುದು ಎಷ್ಟು ಸುಂದರ ಎಂದು ಕನಸು ಕಂಡರು. ಎಲ್ಲಾ ಮಕ್ಕಳಲ್ಲಿ ಅತ್ಯಂತ ಕ್ರೂರಿಯಾಗಿದ್ದ ಮಗ `ತುಮತವುಂಗ’, `ನಮ್ಮ ಈ ನಿತ್ಯದ ಸಂಕಟದಿಂದ ಪಾರಾಗಬೇಕೆಂದರೆ ನಮ್ಮ ತಂದೆ ತಾಯಿಗಳನ್ನು ಸಾಯಿಸಬೇಕು’ ಎಂಬ ಸಲಹೆಯನ್ನು ಎಲ್ಲರ ಮುಂದಿಟ್ಟ.
ಆದರೆ ಅವನ ಸಹೋದರ `ತಾನೆ’, ಈ ಸಲಹೆಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದ. `ಅವರಿಬ್ಬರನ್ನು ದೂರ ತಳ್ಳಿದರೆ ಸಾಕು’ ಎಂದು ತನ್ನ ವಿಚಾರವನ್ನು ಮಂಡಿಸಿದ. `ಜೊತೆಗೆ ತಂದೆ `ರಂಗಿನೂಯಿ’ ಬೇಕಾದರೆ ಅಪರಿಚಿತನಾಗಿ ಮೇಲೆ ಅಂತರಿಕ್ಷದಲ್ಲೇ ಇರಲಿ. `ಪಾಪತುನುಕು’ ಕೆಳಗೆ ನಮ್ಮೊಂದಿಗಿದ್ದು ನಮ್ಮನ್ನು ಸಲಹಲಿ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ. `ತಾನೆ’ಯ ಸಲಹೆಗೆ ಎಲ್ಲಾ ಮಕ್ಕಳು ತಮ್ಮ ಒಪ್ಪಿಗೆ ಸೂಚಿದರು.
ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳ ದೇವರು `ರಾಂಗೊ’ ತನ್ನ ತಂದೆತಾಯಿಗಳ ಗಾಢಾಲಿಂಗನವನ್ನು ಬಿಡಿಸಲು ಹರಸಾಹಸಪಟ್ಟ. ಏನೂ ಪ್ರಯೋಜನ ಆಗಲಿಲ್ಲ. ಸಮುದ್ರದ ದೇವರು `ತಂಗರೊ’ ಮತ್ತು ಅವನೊಂದಿಗೆ ಹುಟ್ಟಿದ್ದ ವನ್ಯಜನ್ಯ ಆಹಾರದ ದೇವರು ‘ಹೌಮಿಯ- ಟಿಕೆಟಿಕೆ’ ಆದಿ ತಂದೆತಾಯಿಗಳ ಮಹಾ ಆಲಿಂಗನವನ್ನು ಬಿಡಿಸಲು ಮುಂದಾದರು. ಅವರಿಬ್ಬರ ಜಂಟಿ ಪ್ರಯತ್ನವೂ ಕೈಗೂಡಲಿಲ್ಲ. `ರಂಗಿ’ ಮತ್ತು `ಪಾಪ’ರ ಒಲವಿನ ಆಲಿಂಗನ ಮತ್ತಷ್ಟು ಗಾಢವಾಗಿಯೇ ಉಳಿದಿತ್ತು.
ಕೊನೆಗೆ ಅರಣ್ಯ ಮತ್ತು ಪ್ರಾಣಿಪಕ್ಷಿಗಳ ದೇವರು `ತಾನೆ’ ನಿರಂತರ ಪ್ರಯತ್ನ ಮಾಡಿ ಮಾಡಿ, ಕೊನೆಗೆ ತನ್ನ ಆದಿ ತಂದೆ ತಾಯಿಗಳ ಆಲಿಂಗನವನ್ನು ಬಿಡಿಸುವಲ್ಲಿ ಯಶಸ್ಸು ಕಂಡುಕೊಂಡ.
ಉಳಿದ ಸಹೋದರರು, ಆದಿ ತಂದೆ ತಾಯಿಗಳ ಆಲಿಂಗನವನ್ನು ಬಿಡಿಸಲು, ಅವರಿಬ್ಬರ ನಡುವೆ ನಿಂತು, ಕೈಗಳಿಂದ ತಳ್ಳುತ್ತಿದ್ದರು. ಅವರ ಪ್ರಯತ್ನಗಳು ಫಲ ನೀಡುತ್ತಿರಲಿಲ್ಲ. ಆದರೆ `ತಾನೆ’ ಬೆನ್ನ ಮೇಲೆ ಮಲಗಿ, ತನ್ನ ಶಕ್ತಿಯುತ ಕಾಲುಗಳಿಂದ ಬಲವಾಗಿ ದೂಡಿ ಆದಿ ತಂದೆ ತಾಯಿಗಳ ಆಲಿಂಗನವನ್ನು ಸಡಿಲಿಸುವಲ್ಲಿ, ಬಿಡಿಸುವಲ್ಲಿ ಯಶಸ್ಸು ಸಾಧಿಸಿದ್ದ. ತನ್ನ ಸ್ನಾಯುಗಳನ್ನು ಮಾಂಸಖಂಡಗಳನ್ನು ಹುರಿಗೊಳಿಸಿ ಕಾಲುಗಳಿಂದ ಬಲವಾಗಿ ದೂಡುತ್ತಾ ಆದಿ ತಂದೆ ತಾಯಿಗಳು ತಮ್ಮ ಆಲಿಂಗನವನ್ನು ನಿಧಾನವಾಗಿ ಸಡಿಲಿಸುವಂತೆ ಮಾಡಿದ್ದ.
`ತಾನೆ’ಯ ಬಲಕ್ಕೆ ಮಣಿದ ಆದಿ ತಾಯಿ `ಪಾಪತುನುಕು’ ಮತ್ತು ಆದಿ ತಂದೆ `ರಂಗಿನೂಯಿ’ ದುಃಖದಿಂದ ಅಳುತ್ತಾ ಜೊತೆಗೆ ಅಚ್ಚರಿಯನ್ನು ಅನುಭವಿಸುತ್ತಾ ಒಬ್ಬರನ್ನುಒಬ್ಬರು ಬಿಟ್ಟು ಅಗಲುತ್ತಾರೆ.
ಆದಿ ತಾಯಿ `ಪಾಪತುನುಕು’ ಮತ್ತುತಂದೆ `ರಂಗಿನೂಯಿ’ ಒಬ್ಬರನ್ನೊಬ್ಬರು ಬಿಟ್ಟು ಅಗಲಿದಾಗ, ಎಲ್ಲೆಡೆ ಬೆಳಕು ಮೂಡುತ್ತದೆ. ಆದಿ ತಂದೆತಾಯಿಯ ಮಕ್ಕಳು, ಮೊದಲ ಬಾರಿ ಬೆಳಕನ್ನು ಕಾಣುತ್ತಾರೆ. ಮತ್ತು ಸಾಕಷ್ಟು ಜಾಗ ಸಿಕ್ಕ ಸಂಭ್ರಮ ಅವರದಾಗಿರುತ್ತದೆ.
ಆದಿ ತಂದೆ ತಾಯಿಗಳ ಆಲಿಂಗನವನ್ನು ಬಿಡಿಸಲು ಬಹುತೇಕ ಎಲ್ಲಾ ಮಕ್ಕಳು ಒಪ್ಪಿಗೆ ಸೂಚಿಸಿದ್ದರೂ, ಗಾಳಿ ಹಾಗೂ ಚಂಡಮಾರುತಗಳ ದೇವರಾದ `ತಾಹಿರಿಮತೆ’ಗೆ ಅವರಿಬ್ಬರೂ ಬೇರ್ಪಟ್ಟಿದ್ದು ಬೇಸರತರುತ್ತದೆ. ತಂದೆ ತಾಯಿಗಳ ಈ ಸ್ಥಿತಿ ಕಂಡು ಅವನಿಗೆ ಸಿಟ್ಟು ಬರುತ್ತದೆ. ಆದಿ ತಂದೆ ತಾಯಿಗಳು ಒಬ್ಬರನ್ನೊಬ್ಬರು ಅಗಲುವಾಗ ಅನುಭವಿಸಿದ ನೋವು ಅವನಿಗೆ ನೋಡಲಾಗುವುದಿಲ್ಲ. ಮತ್ತು ಅವರ ವಿರಹದ ಅಳು ಹಾಗೂ ಮಹಾಬಾನು `ರಂಗಿನೂಯಿ’ ಕಣ್ಣುಗಳಲ್ಲಿ ಮಟುಗಟ್ಟಿz ದುಃಖದ ಕಣ್ಣೀರು, ಅವನನ್ನು ಮತ್ತಷ್ಟು ಸಿಟ್ಟಿಗೇಳುವಂತೆ ಮಾಡುತ್ತದೆ.
`ಇನ್ನು ಮುಂದೆ, ನೀವು ನನ್ನ ಸಿಟ್ಟಿನ ಫಲವನ್ನು ಅನುಭವಿಸಬೇಕಾಗುತ್ತದೆ’ ಎಂದು ಗಾಳಿ ಹಾಗೂ ಚಂಡಮಾರುತಗಳ ದೇವರಾದ `ತಾಹಿರಿಮತೆ’ ತನ್ನ ಸಹೋದರರಿಗೆ ಎಚ್ಚರಿಕೆಕೊಡುತ್ತಾನೆ.
ತಂದೆ `ರಂಗಿನೂಯಿ’ಯನ್ನು ಸೇರಲು `ತಾಹಿರಿಮತೆ’ ಬಾನಿನತ್ತ ಹಾರಿಹೋಗುತ್ತಾನೆ. ಅಲ್ಲಿಯೇ ನೆಲೆನಿಂತು ಕೊಂಡು ಹಲವು ಮಕ್ಕಳಿಗೆ ಜನ್ಮ ನೀಡುತ್ತಾನೆ. ಹಲವಾರು ಮಾರುತ ಮಕ್ಕಳು ಹುಟ್ಟಿದಾಗ, ಅವನ್ನು ದಶ ದಿಕ್ಕುಗಳಿಗೂ ಕಳಿಸಿಕೊಡುತ್ತಾನೆ. ತನ್ನ ಸಹೋದರರೊಡನೆ ಯುದ್ಧ ಹೂಡಲು ಈ `ತಹಿರಿಮತೆ’ ತನ್ನ ಮಕ್ಕಳ ದೊಡ್ಡ ಸೈನ್ಯವನ್ನೇ ಕಟ್ಟುತ್ತಾನೆ. ಹತ್ತಾರು ಬಗೆಯ ಮಾರುತಗಳು, ನೂರಾರು ಬಗೆಯ ಬೆಳ್ಳಿ ಬಣ್ಣದ, ಗಾಢಕಪ್ಪು ಬಣ್ಣದ ಮೋಡಗಳು, ಸಹಸ್ರಾರು ಸುಂಟರಗಾಳಿಗಳು, ಹತ್ತಾರು ಬಗೆಯ ಮಂಜು, ಇಬ್ಬನಿ, ಬಗೆಬಗೆಯ ಮಳೆಗಳು ಅವನ ಸೇನೆಯಲ್ಲಿ ಸೇರಿರುತ್ತವೆ.
ದೊಡ್ಡದೊಡ್ಡ ಮಾರುತಗಳು ಸುಂಟರಗಾಳಿಗಳು ಭಯಂಕರವಾಗಿ ಬೀಸಿದಾಗ ಧೂಳು ಮುಗಿಲೆತ್ತರಕ್ಕೆ ಏಳುತ್ತದೆ, `ತಾನೆ’ ದೇವರ ಅರಣ್ಯಗಳಲ್ಲಿನ ಗಿಡಮರಗಳು ಧರೆಗೆ ಉರುಳುತ್ತವೆ. ಅವು ಒಣಗಿ ಬೆಂಡಾಗಿ ಹುಳುಹುಪ್ಪಡಿಗಳಿಗೆ ಆಹಾರವಾಗುತ್ತವೆ.
ನಂತರ `ತಹಿರಿಮತೆ’ ಸಮುದ್ರಗಳ ಮೇಲೆ ದಾಳಿ ಮಾಡುತ್ತಾನೆ. ಭಾರಿ ಪ್ರಮಾಣದ ಸಾಗರ ತೆರೆಗಳು ಏಳುತ್ತವೆ, ಸುಳಿಗಳು ಉಂಟಾಗುತ್ತವೆ. ದಿಗ್ಭ್ರಮೆಗೊಂಡ ಸಾಗರದೇವರು `ತಂಗರೊ’ ಹೆದರಿ ಓಡಿಹೋಗುತ್ತಾನೆ.
ಈ `ತಂಗರೊ’ನ ಮಗ `ಪುಂಗ’ನಿಗೆ ಇಬ್ಬರು ಮಕ್ಕಳಿರುತ್ತಾರೆ. ಅವರು, ಮೀನುಗಳ ತಂದೆಯಾದ `ಇಕತೆರೆ’ ಮತ್ತು ಸರಿಸೃಪಗಳ ಆದಿ ಪುರುಷ `ತುತೆ ವನವನ’. `ತಹಿರಿಮತೆ’ಯ ದಾಳಿಯಿಂದ ತತ್ತರಿಸಿದ `ಇಕತೆರೆ’ಯ ಮಕ್ಕಳು ಸಮುದ್ರದಲ್ಲಿ ಆಸರೆಗಾಗಿ ತಡಕಾಡುತ್ತಾರೆ, `ತುತೆ ವನವನ’ನ ಮಕ್ಕಳಾದ ಸರಿಸೃಪಗಳು ಕಾಡುಪಾಲಾಗುತ್ತವೆ. ತನ್ನ ಓಡಿಹೋದ ಮಕ್ಕಳಿಗೆ `ತಾನೆ’ ಆಶ್ರಯ ಒದಗಿಸಿಕೊಡದೆ ಇರುವುದು, `ತಂಗರೊ’ಗೆ `ತಾನೆ’ಯ ಮೇಲಿನ ಸಿಟ್ಟಿಗೆ ಕಾರಣವಾಗುತ್ತದೆ. ಆಗ, `ತಂಗರೊ’ನ ಸಿಟ್ಟನ್ನು ಶಮನಗೊಳಿಸಲು, `ತುಮತವುಂಗ’ ತನ್ನ ಮಕ್ಕಳಿಗೆ ತೋಡುದೋಣಿ, ಮೀನು ಹಿಡಿಯುವ ಗಾಳದ ಕೊಕ್ಕೆ, ಮತ್ತು ಬಲೆಗಳನ್ನು ಕೊಟ್ಟು, `ತಂಗರೊ’ನ ಮಕ್ಕಳನ್ನು ಹಿಡಿಯಲು ಅನುವು ಮಾಡಿಕೊಡುತ್ತಾನೆ. ಅದಕ್ಕೆ ಪ್ರತಿಕಾರವಾಗಿ `ತಂಗರೊ’ ತೋಡು ದೋಣಿಗಳನ್ನು ಮುಳುಗಿಸುತ್ತಾನೆ, ಪ್ರವಾಹದೋಪಾದಿಯಲ್ಲಿ ನುಗ್ಗಿ ಮನೆ, ಭೂಮಿ ಗಿಡಮರಗಳನ್ನು ಕೊಚ್ಚಿಕೊಂಡು ಸಮುದ್ರಕ್ಕೆ ಸೇರಿಸುತ್ತಾನೆ.
ಇಷ್ಟಾದ ಮೇಲೆ, `ತಹಿರಿಮತೆ’, ಕೃಷಿ ಭೂಮಿಗಳ ದೇವರು `ರೊಂಗೊ’ ಮತ್ತು ಬೀಳು ಭೂಮಿಗಳ ದೇವರು `ಹೌಮಿಯಟಿಕೆಟಿಕೆ’ ಅವರ ಮೇಲೆ ದಾಳಿ ಮಾಡುತ್ತಾನೆ. `ರೊಂಗೊ’ ಮತ್ತು `ಹೌಮಿಯಟಿಕೆಟಿಕೆ’ ಅವರು `ತಹಿರಮತೆ’ಯ ದಾಳಿಗೆ ಹೆದರಿಕೊಂಡಿರುತ್ತಾರೆ. ಆದಿ ತಾಯಿ ಭೂತಾಯಿ `ಪಾಪತುನುಕು’, `ರೆಂಗೊ’ ಮತ್ತು `ಹೌಮಿಯ- ಟಿಕೆಟಿಕೆ’ ನನ್ನ ಇತರ ಮಕ್ಕಳಿಗೂ ಬೇಕಾಗುತ್ತಾರೆ ಎಂದು ಅವರ ರಕ್ಷಣೆಗೆ ಮುಂದಾಗುತ್ತಾಳೆ. `ತಹಿರಿಮತೆ’ಯ ಕಣ್ಣಿಗೆ ಅವರು ಬೀಳದಂತೆ ಬಚ್ಚಿಡುತ್ತಾಳೆ.
ಆಗ, `ತಹಿರಿಮತೆಯ ದೃಷ್ಟಿ ಸಹೋದರ `ತುಮತವುಂಗ’ನ ಕಡೆತಿರುಗುತ್ತದೆ. `ತಹಿರಿಮತೆ’ ತನ್ನ ಎಲ್ಲ ಶಕ್ತಿಯನ್ನು ಬಳಸಿ ದಾಳಿ ನಡೆಸಿದರೂ, `ತುಮತವುಂಗ’ ಗಟ್ಟಿಯಾಗಿ ನಿಲ್ಲುತ್ತಾನೆ. `ತಹಿರಿಮತೆ’ಗೆ `ತುಮತವುಂಗ’ನನ್ನು ಏನು ಮಾಡಲೂ ಸಾಧ್ಯವಾಗಲಿಲ್ಲ. `ತುಮತವುಂಗ’, `ತು’ -ಮಾನವಸ್ವರೂಪ ತಾಳುತ್ತಾನೆ. ಅಷ್ಟರಲಿ,್ಲ ದೇವರುಗಳ ನಡುವಣ ಸಿಟ್ಟುಸೆಡುವು ನಿಧಾನವಾಗಿ ಕಡಿಮೆಯಾಗುತ್ತಾ ಸಾಗುತ್ತದೆ. ಅಂತಿಮವಾಗಿ ಶಾಂತಿ ನೆಲೆಸುತ್ತದೆ.
`ತು’ ತಮ್ಮ ಆದಿ ತಂದೆತಾಯಿಗಳ ಆಲಿಂಗನವನ್ನು ಬಿಡಿಸಿದ ಸಹೋದರ `ತಾನೆ’ಯ ಚಟುವಟಿಕೆಗಳ ಬಗ್ಗೆ ಚಿಂತನೆ ನಡೆಸುತ್ತಾನೆ. `ತಾನೆ’ಯ ಮಕ್ಕಳಾದ ಪ್ರಾಣಿ,ಪಕ್ಷಿಗಳ ಕಾಲು, ತಲೆ ಸಿಕ್ಕಿಕೊಳುವಂತೆ ಮಾಡುವ ಸರಿಗುಣಿಕೆಗಳನ್ನು ಸಿದ್ಧಪಡಿಸಿ ಅವುಗಳನ್ನು ಸೆರೆಹಿಡಿದುಕೊಳ್ಳುತ್ತಾನೆ. ಅರಣ್ಯದಲ್ಲಿನ ಗಿಡಮರ ಬಳ್ಳಿಗಳಿಂದ ಬಲೆಗಳನ್ನು ಹೆಣೆದು ಸಮುದ್ರಕ್ಕೆ ಚೆಲ್ಲುತ್ತಾನೆ. `ತಂಗುರೊ’ನ ಮಕ್ಕಳನ್ನು (ಮೀನುಗಳನ್ನು) ಹೆಡಮುರಿಕಟ್ಟಿ ಸಮುದ್ರತೀರಕ್ಕೆ ಎಳೆದು ತರಲು ಉಪಕ್ರಮಿಸುತ್ತಾನೆ.
ಕಳೆ ಗುದ್ದಲಿಯನ್ನು ಸಿದ್ಧಪಡಿಸಿಕೊಂಡು, `ತಹಿರಿಮತೆ’ಯ ದಾಳಿಯಿಂದ ತಪ್ಪಿಸಿಕೊಂಡು, ಭೂತಾಯಿ `ಪಾಪತುನುಕು’ಳ ಎದೆಯಲ್ಲಿ ಬಚ್ಚಿಟ್ಟುಕೊಂಡ `ರೆಂಗೊ’ ಮತ್ತು `ಹೌಮಿಯ -ಟಿಕೆಟಿಕೆ’ಯರನ್ನು ಹೊರತೆಗೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ. ಗಡ್ಡೆಗಳ ರೂಪದಲ್ಲಿದ್ದ ಅವರನ್ನು ನೆಲದಿಂದ ಹೆಕ್ಕಿ ತೆಗೆದುತಿನ್ನಲು ಬುಟ್ಟಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾನೆ.
ಹೇಡಿತನ ಪ್ರದರ್ಶಿಸಿದ ತನ್ನ ಎಲ್ಲಾ ಸೋದರರ ಮೇಲೆ ಸೇಡು ತೀರಿಸಿಕೊಳ್ಳುವ `ತಮತುವುಂಗ’ ಅವರನ್ನೆಲ್ಲಾ ತಿಂದುತೇಗುತ್ತಾನೆ. ಆದರೆ, ಅವನಿಗೆ, `ತಹಿರಿಮತೆ’ಯನ್ನು ದಮನ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ, `ತಹಿರಿಮತೆ’ ದೇವರ ಚಂಡಮಾರುತ ಮತ್ತು ಸುಂಟರಗಾಳಿಗಳು ಇವತ್ತಿನವರೆಗೂ ಮಾನವ ಕುಲವನ್ನು ಬಾಧಿಸುತ್ತಲೇ ಇವೆ.
ಭೂತಾಯಿ `ಪಾಪತುನುಕು’ ಮತ್ತು ಮಹಾಬಾನು `ರಂಗಿನೂಯಿ’ ಆದಿ ತಂದೆತಾಯಿಗಳಿಗೆ ಇನ್ನೊಬ್ಬ ಮಗನೂ ಇದ್ದ. ಆದರೆ ಆತ, ಇನ್ನೂ ಹೊಟ್ಟೆಯಿಂದಲೇ ಹೊರಗೆ ಬಂದಿಲ್ಲ. ಆತ, `ಪಾಪತುನುಕು’ ಭೂತಾಯಿಯ ಉದರದಲ್ಲೇ ಇದ್ದಾನೆ. `ರುವುಮೊಕೊ’ ಹೆಸರಿನ ಆತ ಗರ್ಭಕೋಶದಲ್ಲಿ ಒದ್ದಾಡಿದಾಗಲೆಲ್ಲಾ ಭೂಮಿಯ ಮೇಲೆ ಭೂಕಂಪಗಳು ಸಂಭವಿಸುತ್ತವೆ. ಆತ ಭೂಕಂಪನ ಮತ್ತು ಅಗ್ನಿಪರ್ವತಗಳ ದೇವರು.
ಇತ್ತ, `ತಾನೆ’ಯು, ಬೆಳಕಿಗಾಗಿ ಸ್ವರ್ಗದ ಕಾಯಗಳನ್ನು ಹುಡುಕಾಡುತ್ತಿದ್ದ. ಆಗ ತಂದೆಯು ಸುಂದರವಾಗಿ ಕಾಣಬಹುದು ಎಂಬುದು ಅವನ ಲೆಕ್ಕಚಾರವಾಗಿತ್ತು. ಆತ ಕೊನೆಗೆ ನಕ್ಷತ್ರಗಳನ್ನು ಹುಡುಕಿಕೊಂಡು ಬಂದು, ಸೂರ್ಯ ಮತ್ತು ಚಂದ್ರರೊಟ್ಟಿಗೆ ಅವನ್ನು ಮೇಲೆ ತೂರಿದ. ಅದಾದ ಮೇಲೆ, ಆದಿ ತಂದೆ `ರಂಗಿನೂಯಿ’ ಸುಂದರಾಂಗನಾಗಿ ಕಾಣತೊಡಗಿದ.
ಆದಿ ತಂದೆ, ಮಹಾಬಾನು `ರಂಗಿನೂಯಿ’ ಮತ್ತು ಆದಿ ತಾಯಿ, ಭೂತಾಯಿ `ಪಾಪತುನುಕು’ ಇವತ್ತಿನವರೆಗೂ ಪ್ರತಿದಿನವೂ ವಿರಹದಿಂದ ದುಃಖಿಸುತ್ತಲೇ ಇದ್ದಾರೆ. ಮಹಾಬಾನು `ರಂಗಿನೂಯಿ’ ಅತ್ತಾಗ, ಅವನ ಅಳು ಮಳೆಯ ರೂಪದಲ್ಲಿ ಭೂತಾಯಿ `ಪಾಪತುನುಕು’ವಿನತ್ತ ಸಾಗಿಬರುತ್ತವೆ. ಅವು `ರಂಗಿನೂಯಿ’, `ಪಾಪತುನುಕು’ಳನ್ನು ಎಷ್ಟು ಗಾಢವಾಗಿ ಪ್ರೀತಿಸುವನು ಎಂಬುದನ್ನು ಶೃತಪಡಿಸುತ್ತವೆ.
ಪಾಪ ತುನುಕುಳೂ ಕೆಲವೊಮ್ಮೆ ನಿಟ್ಟುಸಿರು ಬಿಡುತ್ತಿರುತ್ತಾಳೆ. ಮತ್ತೆ ಕೆಲವೊಮ್ಮೆ ತಾಪದಿಂದ `ರಂಗಿನೂಯಿ’ಯನ್ನು ಸೇರುವತವಕ ಹೆಚ್ಚಾದಾಗ ಅವಳಲ್ಲಿ ದೊಡ್ಡದೊಡ್ಡ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಆಕೆಗೆ ತನ್ನ ಜೊತೆಗಾರನನ್ನು ಸೇರಲು ಆಗುವುದೇ ಇಲ್ಲ. ಸಸ್ಯ ಶಾಮಲೆ ಭೂತಾಯಿ ಬಿಸಿಯುಸಿರು ಬಿಟ್ಟಾಗ ಇಬ್ಬನಿ, ಮಂಜು ಕಾಣಿಸಿಕೊಳ್ಳುತ್ತವೆ. ಆದಿ ಮಾತೆ ಭೂತಾಯಿ `ಪಾಪತುನುಕು’ಳ ಬೆಚ್ಚಗಿನ ದೇಹ ಸದಾಕಾಲ ಮಾನವ ಕುಲವನ್ನು ಪೋಷಿಸುತ್ತಲೆ ಸಾಗಿದೆ.
---
*ನ್ಯೂಜಿಲೆಂಡಿನ ಮೌರಿ ಬುಡಕಟ್ಟು ಜನರ ಸೃಷ್ಟಿಯ ಪೌರಾಣಿಕ ಕತೆ.
0-0-0-0-0-0
No comments:
Post a Comment