ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
————————
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಉತ್ತಂಗಿ ಚೆನ್ನಪ್ಪರವರ ಬದುಕು ಹಾಗು ಬರವಣಿಗೆಯ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅವಿರತ ಸೇವೆಯನ್ನು ನೀಡಿರುವ ಮತ್ತೋರ್ವ ಪ್ರಮುಖ ಕನ್ನಡ ಸಾಹಿತಿ ರೆವರೆಂಡ್ ಫಾದರ್ ಐ. ಅಂತಪ್ಪ ರವರ ಬದುಕು ಹಾಗು ಸೇವೆಯ ಅಮೋಘತೆಯನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ.
——————————————-
ರೆವರೆಂಡ್ ಫಾದರ್ ಐ. ಅಂತಪ್ಪ :
ಇವರು ಒಬ್ಬ ಕ್ರೈಸ್ತ ಧರ್ಮಗುರು ಮಿಗಿಲಾಗಿ ಕನ್ನಡ ಕ್ರೈಸ್ತ ಸಾಹಿತಿ. ಕನ್ನಡ ನಾಡಿನಲ್ಲಿ ಕ್ರೈಸ್ತ ಧರ್ಮದ ಉಗಮದ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಹತ್ತಾರು ಚಾರಿತ್ರಿಕ ಪುಸ್ತಕಗಳನ್ನು ಪ್ರಕಟಿಸಿ, ಕನ್ನಡ ಭಾಷೆಗೆ, ಕನ್ನಡ ಜನತೆಗೆ ಕೊಡಬೇಕಾದ ಆದ್ಯತೆಯ ಬಗ್ಗೆ ಅನೇಕರ ಕಣ್ಣುಗಳನ್ನು ತೆರೆಸಿದ್ದಾರೆ. ಇವರು ಪ್ರಸ್ತುತವಾಗಿ ಮಹಾಧರ್ಮಾಕ್ಷೇತ್ರದ ವಿಶ್ರಾಂತಿ ನಿಲಯದಲ್ಲಿ ತಮ್ಮ ಕನ್ನಡಾಭಿಲಾಷೆಯ ಸೇವೆಯಲ್ಲಿ ನಿರತರಾಗಿದ್ದಾರೆ.
ಅ) ಬಾಲ್ಯ ಜೀವನ :
ಬೆಂಗಳೂರು ಗ್ರಾಮಾಂತರದ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಾರೋಬಲೆ ಒಂದು ಕ್ರೈಸ್ತ ಊರು. ಈ ಊರಿನ ಉಪದೇಶಿ ಇನ್ನಾಸಪ್ಪ ಮತ್ತು ಅಂತೋಣಮ್ಮನವರ ಮೊದಲ ಮಗನಾಗಿ ಫಾದರ್ ಅಂತಪ್ಪ ಜನಿಸಿದರು. ಇವರಿಗೆ ಏಳು ಜನ ಒಡಹುಟ್ಟಿದವರು. ಇವರ ಮನೆತನದ ಕಸುಬು ವ್ಯವಸಾಯ ಜೊತೆಗೆ ಉಪದೇಶಿ ಅಥವಾ ದೇವಸ್ಥಾನದ ಸೇವೆ ಮಾಡುವುದು. ಮನೆಯಲ್ಲಿ ಬಡತನ. ಏಳು ಮಕ್ಕಳನ್ನು ಸಾಕಿ ಸಲಹುವುದೆಂದರೆ ಸಾಮಾನ್ಯವೇನಲ್ಲ. ಮನೆಯ ಪರಿಸ್ಥಿತಿ ಬಡತನದಿಂದ ಕೂಡಿದ್ದರೂ ಶ್ರೀ ಇನಾಸಪ್ಪನವರು ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು, ಆತನನ್ನು ಒಬ್ಬ ಉತ್ತಮ ಗುರುವಾಗಿ ರೂಪಿಸಬೇಕೆಂಬ ಅಂತರಾಳದ ಬಯಕೆಯನ್ನೊತ್ತಿದ್ದರು. ಚರ್ಚ್ ಮತ್ತು ಗುರುಗಳ ಒಡನಾಟದ ಆತ್ಮೀಯ ಸಂಬಂಧದ ಪ್ರಭಾವದಿಂದಾಗಿ ತನ್ನ ಮಗನನ್ನು ಫಾದರ್ ಮಾಡಬೇಕೆಂಬ ಆಸೆಯನ್ನು ಹೊಂದಿದ್ದ ಅವರು ದುಃಖ-ದುಮ್ಮಾನಗಳ ದವಡೆಗೆ ಸಿಲುಕ್ಕಿದ್ದರೂ ಮಗನನ್ನು ಓದಿಸಲು ದೃಢ ನಿರ್ಧಾರ ಮಾಡಿ, ಅವರ ಆಸೆಯಂತೆ ಮಗನನ್ನು ಶಾಲೆಗೆ ಸೇರಿಸಿದರು. ಅಂತಪ್ಪನವರು ಬಾಲ್ಯದಲ್ಲಿ ಬಹು ಮುಗ್ಧರಾಗಿದ್ದರು. ಊರಿನಲ್ಲಿ ಕೇವಲ ಮೂರನೇ ತರಗತಿಯವರೆಗೆ ಮಾತ್ರ ಶಾಲೆಯಿತ್ತು. ತನ್ನ ತಂದೆಯ ಮನೋಭಿಲಾಷೆಯನ್ನು ಅರಿತವರಂತೆ ಅಂತಪ್ಪ ಶ್ರದ್ಧೆಯಿಂದ ಶಾಲೆಗೆ ಹೋಗುತ್ತಿದ್ದರು. ಜೊತೆಗೆ ಪ್ರತಿನಿತ್ಯ ಪೂಜೆ ಮತ್ತು ಪ್ರಾರ್ಥನೆಯಲ್ಲೂ ಭಾಗವಹಿಸುತ್ತಿದ್ದರು. ಓದಬೇಕೆಂಬ ಬಾಲಕನ ತುಡಿತಕ್ಕೆ ತಕ್ಕಂತೆ ಮೂರನೇ ತರಗತಿಯಿಂದ ಮುಂದೆ ಓದಲು ಊರಿನಲ್ಲಿ ಶಾಲೆಯಿಲ್ಲದೇ ಹೋದದ್ದು ಅಂತಪ್ಪರ ತಂದೆಯ ಆತಂಕಕ್ಕೆ ಕಾರಣವಾಯಿತು. ರಜಾ ದಿನಗಳಲ್ಲಿ ಊರಿನಲ್ಲೇ ಇದ್ದ ಬಾಲಕ ಅಂತಪ್ಪ ಹೊಲದ ಕೆಲಸಗಳಲ್ಲಿ ತಂದೆಗೆ ಆದಷ್ಟು ಸಹಾಯ ಮಾಡುತ್ತಿದ್ದರು. ಅದರಲ್ಲೂ ಮಧ್ಯಾಹ್ನದ ವೇಳೆ ಊಟವನ್ನು ತೆಗೆದುಕೊಂಡು ಹೋಗಿ ಅವರ ಮನೆಯಲ್ಲೇ ಇದ್ದ ಕೂಲಿ ಅಲಗೂರಿ ಚೌರ ಮುಂತಾದವರಿಗೆ ನೀಡುತ್ತಿದ್ದರು.24 ಈ ಸಂದರ್ಭದಲ್ಲಿ ಅಲಗೂರಿ ಚೌರ ಮತ್ತು ಇವರ ನಡುವೆ ನಡೆದ ಒಂದು ಘಟನೆ ಫಾದರ್ ಅಂತಪ್ಪ ಅವರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಈ ಅಲಗೂರಿ ಚೌರ ಗುತ್ತಿಗೆಯ ಆಧಾರದ ಮೇಲೆ ಕೂಲಿ ಕೆಲಸ ಮಾಡುತ್ತಿದ್ದ. ಆಗ ಒಂದು ವರ್ಷಕ್ಕೆ ಇಷ್ಟು ರಾಗಿ ಮತ್ತು ಇಷ್ಟು ಹಣ ಎಂದು ನಿಗಧಿಪಡಿಸಿ ಆಳುಗಳನ್ನು ನೇಮಿಸಿಕೊಳ್ಳುತ್ತಿದ್ದರು. ಅಲಗೂರಿ ಚೌರ ಕೆಲಸ ಕಾರ್ಯಗಳಿಗೆ ಹೋದಾಗ ಇವರು ಅವನೊಂದಿಗೆ ಬಹಳ ಸಲಿಗೆಯಿಂದ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು.
ಒಂದು ದಿನ ಊಟ ಮಾಡುತ್ತಿದ್ದ ಅಲಗೂರಿ ಚೌರನನ್ನು ದಿಟ್ಟಿಸಿ ನೋಡುತ್ತಿದ್ದ ಬಾಲಕ ಅಂತಪ್ಪ, ಅವನಿಗೆ ಒಂದು ಪ್ರಶ್ನೆ ಕೇಳಿದರು - ನಿನಗೆ ಮೀಸೆ ಇದೆಯಲ್ಲಾ, ನನಗೆ ಯಾಕೆ ಮೀಸೆ ಇಲ್ಲಾ? ಅಲಗೂರಿ ಚೌರ ಇವರ ಪ್ರಶ್ನೆಗೆ ಉತ್ತರ ಹೇಳಲಿಲ್ಲ. ಸ್ವಲ್ಪ ಸಮಯದ ನಂತರ ಅಂತಪ್ಪರೇ ಇದೆಲ್ಲಾ ದೇವರ ಇಚ್ಛೆ ಇರಬಹುದು ಎಂದು ಹೇಳಿಕೊಂಡು ಸುಮ್ಮನಾದರಂತೆ. ಆದರೆ, ಅಲಗೂರಿ ಚೌರ ಅಂತಪ್ಪರಿಗೆ ಉತ್ತರಿಸದೆ ಹೋದರೂ ಊರಲ್ಲೆಲ್ಲಾ ಈ ಸುದ್ದಿಯನ್ನು ಪ್ರಚಾರ ಮಾಡಿ ಬೀದಿ ಬೀದಿಗಳಲ್ಲಿ ಹೊಗುತ್ತಿರುವಾಗ ಅಂತಪ್ಪರಿಗೆ ಮೀಸೆ ಇಲ್ಲ, ಇದು ದೇವರ ಇಚ್ಛೆಯಂತೆ ಎಂದು ನಗಾಡುತ್ತಾ ಹೇಳಿಕೊಂಡು ತಿರುಗಾಡಿದ. ಇದು ಬಾಲ್ಯದ ಅಂತಪ್ಪನವರ ಮುಗ್ಧತೆಗೆ ಒಂದು ಸಣ್ಣ ಉದಾಹರಣೆ. ಈ ಸಂದರ್ಭದ ಒಂದು ಘಟನೆ ಹಲವು ತಿರುವುಗಳಿಗೆ ಕಾರಣವಾಗುವುದರಲ್ಲಿತ್ತು. ಅಂತಪ್ಪನವರ ತಾಯಿ ತಮಿಳು ರಾಜ್ಯದ ಸೇಲಂ ಹತ್ತಿರದ ಕೊಹಿಲೂರಿನವರು. ಅಂತಪ್ಪನವರು ಮೂರನೇ ತರಗತಿ ವ್ಯಾಸಂಗ ಮುಗಿಸಿ ಬೇಸಿಗೆ ರಜೆಯನ್ನು ಕಳೆಯಲು ತಾಯಿಯೊಡನೆ ಕೊಹಿಲೂರಿಗೆ ಹೋಗಿ ಅಲ್ಲಿಯೇ ಇದ್ದ ತಮಿಳು ಮಾಧ್ಯಮದ ಶಾಲೆಗೆ ಸೇರಿಸಿದರು. ಆದರೆ ಬಾಲಕ ಅಂತಪ್ಪನಿಗೆ ಕನ್ನಡದ ಮಣ್ಣಿನ ಗುಣವೋ ಅಥವಾ ಆಕರ್ಷಣೆ ಹೆಚ್ಚಾಗಿಯೋ, ತಮಿಳು ಮಾಧ್ಯಮ ಪಥ್ಯವಾಗದೇ ತನ್ನೂರಿಗೆ ಹಿಂದಿರುಗಿದರು. ಊರಿನಲ್ಲಿದ್ದಾಗ ಅಂತಪ್ಪ ಇತರ ಅವರ ವಯಸ್ಸಿನ ಹುಡುಗರಂತೆ ದನ, ಆಡು, ಕುರಿ ಮೇಯಿಸುತ್ತಾ ಕೈಲಾದಷ್ಟು ಹೊಲ ಉಳುತ್ತಾ ರಜೆ ಕಳೆದರು. ಅವರ ತಂದೆಯ ನಿಸ್ವಾರ್ಥ ಉಪದೇಶಿ ಸೇವಾ ಮನೋಭಾವನೆ, ಪ್ರಾಮಾಣಿಕತನ, ಮತ್ತು ಅಂತಪ್ಪನ ಧಾರ್ಮಿಕ ಶ್ರದ್ಧೆಯನ್ನು ಗಮನಿಸಿದ ಅಂದಿನ ಧರ್ಮಕೇಂದ್ರದ ಗುರು ಶೆಂಬ್ರಿಯರವರು ಬಾಲಕನ ವಿದ್ಯಾಭ್ಯಾಸವನ್ನು ಮುಂದುವರೆಸಲು ನೆರವಾದರು.
ಆ) ಶಿಕ್ಷಣಾರ್ಥಿಯಾಗಿ :
ಬಾಲಕ ಅಂತಪ್ಪ ತನ್ನ ತಂದೆ ಹಾಗೂ ಗುರು ಶೆಂಬ್ರಿಯವರೊಡಗೂಡಿ ಬೆಂಗಳೂರಿಗೆ ಬಂದು ಬೆಂಗಳೂರು ಧರ್ಮಕ್ಷೇತ್ರದ ಏಕೈಕ ಶಾಲೆ ಸಂತ ಅಲೋಷಿಯಸ್‍ನಲ್ಲಿ ಫಾದರ್ ಬ್ರೌನರ್ ಅವರ ಉಸ್ತುವಾರಿಯಲ್ಲಿ ಶಾಲೆಗೆ ದಾಖಲಾತಿ ಪಡೆದರು. ಶ್ರೀಯುತನಾಯ್ಡು ರವರು ಬಾಲಕ ಅಂತಪ್ಪರವರ ಶಾಲಾ ಶಿಕ್ಷಕ. ಇವರು ಹಳ್ಳಿಯ ಮುಗ್ಧ ಬಾಲಕ ಅಂತಪ್ಪನಿಗೆ ‘ಎಬಿಸಿಡಿ’ ಗೊತ್ತಿದೆಯಾ? ಎಂದು ಪ್ರಶ್ನಿಸಿದರು. ಪಾಪ! ಕೇವಲ ಕನ್ನಡ ವರ್ಣಮಾಲೆಯನ್ನು ಕಲಿಸುವುದೇ ಆಗಿನ ಕಾಲದ ಹಳ್ಳಿಗಳಲ್ಲಿ ಕಷ್ಟವಾಗಿತ್ತು. ಹಳ್ಳಿಯ ಎಲ್ಲಾ ಬಗೆಯ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಅಕ್ಷರ ಕಲಿಯಲು ಪಟ್ಟ ಪಾಡು ಎಷ್ಟೆಂಬುದನ್ನು ಅನುಭವಿಸಿದ ಹಳ್ಳಿಯವರಿಗೆ ಮಾತ್ರ ಮನವರಿಕೆಯಾಗಲು ಸಾಧ್ಯ. ಹಳ್ಳಿಗರಾಗಿ ಹುಟ್ಟಿ ಏನೇನೂ ಸೌಲಭ್ಯಗಳಿಲ್ಲದೆ ತಮ್ಮ ಹೋರಾಟ, ಮತ್ತು ಛಲದಿಂದ ವಿದ್ಯೆ ಕಲಿತು ಉನ್ನತ ಸ್ಥಾನ ಅಲಂಕರಿಸಿದ ಹಲವು ಕನ್ನಡ ಸಾಹಿತಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಮಗನನ್ನು ಬಿಟ್ಟು ಊರಿಗೆ ಹೊರಡುವ ಮುನ್ನ ಒಂದು ಶಾಲಾ ಕೊಠಡಿಯಲ್ಲಿ ನೂರಾರು ವಿದ್ಯಾರ್ಥಿಗಳಿರುವುದನ್ನು ಕಂಡ ಅಂತಪ್ಪನವರ ತಂದೆಯವರು `ಅರೇ! ನಮ್ಮ ಹಳ್ಳಿ ಶಾಲಾ ತರಗತಿಯಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದಾರೆ ಆದರೆ ಇಲ್ಲಿ ಕೊಠಡಿ ಪೂರ್ತಿ ವಿದ್ಯಾರ್ಥಿಗಳು ತುಂಬಿದ್ದಾರಲ್ಲ ಏನಿದು ಆಶ್ಚರ್ಯ!’ ಎಂದರಿತು, ಇಷ್ಟೊಂದು ಮಕ್ಕಳಿಗೆ ಅದೇಗೆ ಒಬ್ಬ ಮೇಷ್ಟ್ರು ಪಾಠ ಮಾಡ್ತಾನೆ, ಎಂದು ಪ್ರಶ್ನಿಸಿಕೊಂಡರು, ಊರಿಗೆ ಹೋಗುವ ಮುನ್ನ ಬಾಲಕ ಅಂತಪ್ಪನವರನ್ನು ಕರೆದು ಎರಡು ಮುಖ್ಯ ಮಾತುಗಳನ್ನು ಹೇಳಿದರಂತೆ. ಮೇಷ್ಟ್ರು ಬೆರಳಷ್ಟು ಹೇಳಿಕೊಟ್ಟರೆ, ನೀನು ಮೊಳದಷ್ಟು ಅದನ್ನು ತಿಳಿದುಕೊಳ್ಳಬೇಕು. ಇದರರ್ಥ, ಬೆರಳು ತೋರಿಸಿದರೆ ಹಸ್ತವನ್ನು ನುಂಗುವಂಥವನಾಗಬೇಕೆಂಬುದಾಗಿ ಎಚ್ಚರಿಕೆಯ ಮಾತಿನ ತಿಳಿ ಹೇಳಿದರಂತೆ ಅವರು ಎಚ್ಚರಿಸಿದ ಮತ್ತೊಂದು ಮಾತು, ‘ಆಕಸ್ಮಾತ್ ಫೇಲಾಗಿ ಊರಿಗೆ ಬಂದರೆ ಹೊಲ ಉಳುವುದೇ ಗತಿ’ ಹೀಗೆ ಇವರ ತಂದೆಯ ಮಾತುಗಳು ಅಂತಪ್ಪನವರ ನೆನಪಿನಂಗಳದಲ್ಲಿ ಇನ್ನೂ ಉಳಿದಿವೆ ಎಂಬ ಸತ್ಯ ಅವರನ್ನು ಸಂದರ್ಶಿಸಿದಾಗ ತಿಳಿಯಿತು. ತಂದೆಯ ಎಚ್ಚರಿಕೆ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ಬಾಲಕ ಅಂತಪ್ಪ ಶ್ರಮದಿಂದ ಓದಿ ತರಗತಿಗೆ ಪ್ರಥಮರಾಗಿ ಫಾದರ್ ಬ್ರೌನ್‍ರ ಮೆಚ್ಚುಗೆಗೆ ಪಾತ್ರರಾದರು. ಬಾಲ್ಯದಲ್ಲಿಯೇ ಅವರಿಗೆ ಗುರುವಾಗಬೇಕೆಂಬ ಆಸೆ ಅತಿಯಾಗಿ ಚಿಗುರೊಡೆಯಲು ಕಾರಣ ಅವರ ತಂದೆಯವರು. ಅವರು ಮಾಡುತ್ತಿದ್ದ ಉಪದೇಶಿ ಸೇವೆಯಿಂದಾಗಿ ತಾನು ಆಧ್ಯಾತ್ಮದ ಒಲವು ಬೆಳೆಸಿಕೊಂಡಿರುವುದಾಗಿ ಅವರೇ ಈ ಮೂಲಕ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ದೇವಾಲಯದ ಬಾಗಿಲು ತೆರೆಯುವುದು, ಪೂಜೆಯಲ್ಲಿ ಭಾಗವಹಿಸುವುದು, ಸಂಜೆ ಜಪಸರ ಮುಗಿದ ನಂತರ ಎಲ್ಲಾ ಸಕಲ ಸಂತರ ಸ್ವರೂಪಗಳಿಗೆ ಮುತ್ತಿಕ್ಕಿ ಬಾಗಿಲು ಹಾಕಿಕೊಂಡು ಬರುತ್ತಿದ್ದುದ್ದನ್ನು ನೆನಪಿಸಿಕೊಳ್ಳುತ್ತಾರೆ. ಏಳನೇ ತರಗತಿಯನ್ನು ಪೂರ್ಣಗೊಳಿಸಲು ಅಂದಿನ ಬಿಷಪ್ ಪೋತಕಮುರಿಯವರು ಸಹಾಯ ಮಾಡಿದರು. ಮೈನರ್ ಸೆಮಿನರಿಗೆ ಪ್ರವೇಶ ನೀಡಿದ ಅಂದಿನ ಮೈನರ್ ಸೆಮಿನರಿಯ ರೆಕ್ಟರ್ ಫಾದರ್ ಎ. ಡಿ. ಲೋಬೊರವರು ಹಳ್ಳಿಯ ಹುಡುಗರನ್ನು ಬಹು ತುಚ್ಛವಾಗಿ ಕಾಣುತ್ತಿದ್ದರು. ಏಳನೇ ತರಗತಿ ವ್ಯಾಸಂಗ ಮುಗಿಸುವವರೆಗೂ ಪ್ರತಿ ತಿಂಗಳು ಐದು ರೂಪಾಯಿಯಂತೆ ಈ ಬಾಲಕನಿಗೆ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಹಸ್ತ ನೀಡಿದರು.
ದೈವಕೃಪೆ, ಫಾದರ್ ಶೆಂಬ್ರಿಯವರ ಆಶೀರ್ವಾದ, ತಂದೆಯವರ ಪ್ರಾರ್ಥನೆ ಮತ್ತು ಬಿಷಪರು ಹಳ್ಳಿ ಮಕ್ಕಳ ಬಗ್ಗೆ ಹೊಂದಿದ್ದ ಕಾಳಜಿಯ ಫಲವಾಗಿ 8ನೇ ತರಗತಿಗೆ ಅಂತಪ್ಪನವರ ಸೆಮಿನರಿ ಪ್ರವೇಶ ತಡೆಯಲು ರೆಕ್ಟರ್. ಎ.ಡಿ.ಲೋಬೋಗೆ ಸಾಧ್ಯವಾಗಲಿಲ್ಲ. ಫಾದರ್ ಶೆಂಬ್ರಿಯವರ ವಿಶೇಷ ಗುಣಗಳು-ಪೂಜೆ ಮಾಡುವ ವಿಧಾನ, ಕ್ರಿಸ್ತನಲ್ಲಿ ಅವರಿಗಿದ್ದ ವಿಶ್ವಾಸ, ಅವರ ಉದಾರತೆ ಮತ್ತು ಸರಳತನ ಅಂತಪ್ಪನವರಿಗೆ ಆದರ್ಶವಾಗಿದ್ದವು. ತನ್ನ ತಂದೆಯವರ ಶ್ರಮದ ಜೀವನದ ಜೊತೆಗೆ ಸಂತ ಅನ್ನಮ್ಮರಲ್ಲಿದ್ದ ಅಪಾರ ವಿಶ್ವಾಸ ಹಾಗೂ ಸಂತ ಅನ್ನಮ್ಮನವರು ಕನಸ್ಸಿನಲ್ಲಿ ಹೇಳಿದಂತೆ ಹೇಗಾದರೂ ಮಗನನ್ನು ಗುರು ಮಾಡಬೇಕೆಂದು ನಡೆಸಿದ ಹೋರಾಟ ಅಂತಪ್ಪನವರಲ್ಲಿ ಪ್ರಭಾವ ಬೀರಿದ್ದವು. ತಂದೆಯವರು ಒಮ್ಮೆ ನೀನು ಗುರುವಾಗಲೇಬೇಕು, ಆದರೆ ಶೆಂಬ್ರಿಯವರಂತಹ ಗುರು ಆಗಬೇಕು ಎಂದಿದ್ದರು. ತಂದೆಯ ಈ ಮಾತು ಮಗನಲ್ಲಿ ಸದಾ ಜಾಗೃತವಾಗಿತ್ತು. ಅವರ ತಂದೆಯವರ ಆಸೆ ಮೊದಲ ಗಂಡು ಮಗು ಫಾದರ್ ಆಗಬೇಕು, ಕೊನೆಯ ಹೆಣ್ಣುಮಗಳು ಕನ್ಯಾಸ್ತ್ರೀ ಅಗಬೇಕೆಂಬುದು. ಅವರ ಕನಸು ನನಸಾಯಿತು. ಕೊನೆಯ ಮಗಳು ರೋಸಿ ಸಹ ತಂದೆಯ ಅಭಿಲಾಷೆಯಂತೆ ಕನ್ಯಾಸ್ತ್ರೀ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನು ಬೇಕು?. ಸೆಮಿನರಿಯಲ್ಲಿ ಲ್ಯಾಟಿನ್ ಅಧ್ಯಯನ ನಿರಂತರವಾಗಿ ನಡೆಯುತ್ತಿತ್ತು. ಅಲ್ಲಿ ನಡೆಸುತ್ತಿದ್ದ ಎಲ್ಲಾ ಪರೀಕ್ಷೆಗಳಲ್ಲಿ ಅಂತಪ್ಪ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಹೀಗೆ ಮೈನರ್ ಸೆಮಿನರಿಯ ಜೊತೆಗೆ ಪ್ರೌಢಶಾಲೆ ಅಧ್ಯಯನ ಪೂರೈಸಿದರು. ಮುಂದಿನ ತತ್ವಶಾಸ್ತ್ರ ಮತ್ತು ದೈವಶಾಸ್ತ್ರದ ಅಧ್ಯಯನಕ್ಕೆ ಬೆಂಗಳೂರಿನ ಸೈಂಟ್ ಪೀಟರ್ಸ್ ಸೆಮಿನೆರಿಗೆ ಸೇರಿದರು.
ಇ) ಪೋಂಟಿಫಿಕಲ್ ಸಂತ ಪೀಟರ್ಸ್ ಕನ್ನಡ ಸೆಮಿನರಿಯಲ್ಲಿ ಕನ್ನಡ ಸೇವೆ :
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೆಂಟ್ ಪೀಟರ್ಸ್ ಪೋಂಟಿಫಿಕಲ್ ಸೆಮಿನರಿಯು ಒಂದು ತರಬೇತಿ ಕೇಂದ್ರ. ಇಲ್ಲಿ ಗುರುಗಳಾಗಲು ಬೇಕಾದಂತಹ ತರಬೇತಿಯನ್ನು ನುರಿತ ಅನುಭವಿ ಪ್ರೊಫೆಸರ್ಸ್ ಹಾಗೂ ಗುರುಗಳ ಮೂಲಕ ನೀಡಲಾಗುವುದು. ಇದು ಒಂದು ಕನ್ನಡ ಕ್ರೈಸ್ತ ತರಬೇತಿ ಮತ್ತು ಅಧ್ಯಯನ ಕೇಂದ್ರ. ಫಾದರ್ ಪೀಟರ್ಸ್‍ಗೆ ಹೋಗುವಷ್ಟರಲ್ಲಿ ಕೆಲವು ಹಿರಿಯ ಕನ್ನಡ ಮತ್ತು ಕನ್ನಡದ ಒಲವಿರುವ ತಮಿಳು ಅಭ್ಯರ್ಥಿಗಳಿಂದಾಗಿ ‘ಕನ್ನಡ ಸಾಹಿತ್ಯ ಸಂಘ’ ಕೆಲವು ಚಟುವಟಿಕೆಗಳನ್ನು ನಡೆಸುತ್ತಿತ್ತು. ಚರ್ಚಾಸ್ಪರ್ಧೆ, ಪ್ರಬಂಧ ರಚನೆ, ರಸಪ್ರಶ್ನಾ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳನ್ನು ಹಿರಿಯ ಸಹೋದರರು ನಡೆಸುತ್ತಿದ್ದರು. ಇಲ್ಲಿಂದ ಅಂತಪ್ಪನವರಲ್ಲಿ ಕನ್ನಡ ಅಭಿಮಾನ ಮೂಡಲಾರಂಭಿಸಿರಬೇಕು. ಕನ್ನಡದ ಕ್ರೈಸ್ತ ಸಾಹಿತ್ಯಕ್ಕೆ ಸಂಬಂಧಿಸಿದ ಅವಶ್ಯಕವಾದ ಪುಸ್ತಕಗಳನ್ನು ಭಾಷಾಂತರಿಸಿ ಹೊರತರುವಲ್ಲಿ ಪ್ರಯತ್ನಿಸಿದ್ದು ಆಗಿನ ಕನ್ನಡ ಅಭ್ಯರ್ಥಿಗಳ ದೊಡ್ಡ ಸಾಧನೆಯೇ ಆಗಿತ್ತು ಎನ್ನಬಹುದಾಗಿದೆ. ಅಂತಪ್ಪನವರು ದೈವಶಾಸ್ತ್ರದ ಅಂತಿಮ ವರ್ಷಕ್ಕೆ ಬರುವ ವೇಳೆ ಹಲವು ಕನ್ನಡ ಅಭ್ಯರ್ಥಿಗಳ ಪ್ರವೇಶದಿಂದ ಕನ್ನಡ ಸಾಹಿತ್ಯ ಸಂಘ ಹೆಚ್ಚು ಪ್ರಬಲವಾಗಿ ಬೆಳೆಯಲು ಸಾಧ್ಯವಾಯಿತು. ಆ ಸಮಯಕ್ಕೆ ಅಂತಪ್ಪ, ಸ್ಟ್ಯಾನಿ ಬ್ಯಾಪ್ಟಿಸ್ಟ್ ಮುಂತಾದವರು ಪ್ರೊಫೆಸರ್ ಪೆನ್‍ವಿನರ್ ಜೊತೆ ಸೇರಿ ಹೊಸ ಒಡಂಬಡಿಕೆಯ ನಾಲ್ಕು ಪುಸ್ತಕಗಳಾದ ಸಂತ ಮತ್ತಾಯ, ಸಂತ ಮಾರ್ಕ, ಸಂತ ಲೂಕ, ಸಂತ ಯೊವಾನ್ನ ಈ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದರೆಂಬುದನ್ನು ಅವರನ್ನು ಸಂದರ್ಶಿಸಿದಾಗ ತಿಳಿದು ಬಂದ ವಿಷಯವಾಗಿದೆ. ಅಲ್ಲದೆ ಬೈಬಲ್‍ನ್ನು ಕನ್ನಡಕ್ಕೆ ಪೂರ್ಣ ಪ್ರಮಾಣದಲ್ಲಿ ಭಾಷಾಂತರ ಮಾಡುವ ಕಾರ್ಯ ಆರಂಭವಾಗಿದ್ದು ಇಲ್ಲಿಂದಲೇ. ರಾತ್ರಿ ಎಲ್ಲರೂ ಮಲಗಿದ ನಂತರ ಇವರು ಮತ್ತು ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಒಟ್ಟಿಗೆ ಫಾದರ್ ಪೆನ್‍ವಿನರ ಕೊಠಡಿಯಲ್ಲಿ ಸೇರಿ ಈ ಭಾಷಾಂತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂತಪ್ಪನವರಿಗೆ ಫಾದರ್ ಶೆಂಬ್ರಿ ಆದರ್ಶವಾದರೆ ಅಂದಿನ ಬಿಷಪ್ ಪೋತಕಮುರಿ ಗಾಡ್‍ಫಾದರ್ ಆಗಿದ್ದರು. ಅಂತಪ್ಪನವರು ಧೈರ್ಯಗುಂದಿದಾಗ, ಮಾನಸಿಕ ಒತ್ತಡಕ್ಕೆ ಒಳಗಾದಾಗ, ಜಿಗುಪ್ಸೆಗೊಂಡಾಗ ನೈತಿಕ ಸ್ಥೈರ್ಯ ತುಂಬಿ ಪ್ರೋತ್ಸಾಹ ನೀಡುತ್ತಿದ್ದರು. ಜೊತೆಗೆ ಅಂತಪ್ಪನವರಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡುವಂತೆ ಮತ್ತು ಅದನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂದು ಬುನಾದಿ ಹಾಕಿಕೊಟ್ಟು ಕನ್ನಡ ಪ್ರಜ್ಞೆ ಮೂಡಿಸಿದವರೇ ಬಿಷಪರು.
ಈ) ಸೇವಾ ಬದುಕು :
ದಿನಾಂಕ 06.04.1957ರಂದು ಬಿಷಪ್ ತೋಮಸ್ ಪೋತಕಮುರಿಯವರಿಂದ ದೀಕ್ಷೆ ಪಡೆದು ಕ್ರಿಸ್ತನ ಸಂದೇಶವನ್ನು ಸಾರಲು ಗುರುಜೀವನಕ್ಕೆ ತನ್ನನ್ನೇ ಸಮರ್ಪಿಸಿಕೊಂಡ ಶುಭದಿನ. ಫಾದರ್ ಅಂತಪ್ಪರಿಗೆ ಗುರು ಸೇವೆಯ ಮೊದಲ ಅನುಭವವಾದದ್ದು ಶಿವಾಜಿನಗರದ ಆರೋಗ್ಯಮಾತೆ ದೇವಾಲಯದಲ್ಲಿ. ಇಲ್ಲಿದ್ದದ್ದು ಕೇವಲ ಐದು ತಿಂಗಳು ಮಾತ್ರ, ಇಲ್ಲಿ ಪ್ರತಿ ದಿನ ಪೂಜೆ ಮತ್ತು ಪ್ರಬೋಧನೆ ಮುಂತಾದ ಆಧ್ಯಾತ್ಮಿಕ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಐದು ತಿಂಗಳ ನಂತರ ಬಿಷಪ್ ಪೋತಕಮುರಿ ಮತ್ತು ಅವರ ಸಲಹಾ ಸಮಿತಿಯು ಅಂತಪ್ಪರವರನ್ನು ಉನ್ನತ ವ್ಯಾಸಂಗಕ್ಕೆ ರೋಮ್ ದೇಶದ ಗ್ರೇಗೋರಿಯನ್ ಯೂನಿವರ್ಸಿಟಿಗೆ ಕಳುಹಿಸಲು ತಿರ್ಮಾನಿಸಿದರು. ಮೊಟ್ಟ ಮೊದಲಿಗೆ ಒಬ್ಬ ಕನ್ನಡ ಗುರು ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆದರು ಎಂಬ ಹೆಗ್ಗಳಿಕೆಗೆ ಭಾಜನರಾದರು. ರೋಮನಲ್ಲಿದ್ದಾಗ ಇವರು ಅನೇಕ ಒದ್ದಾಟಗಳು, ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸಿದರು. ಉನ್ನತ ವ್ಯಾಸಂಗಕ್ಕೆ ಅವಶ್ಯಕವಾಗಿದ್ದ ಅದರಲ್ಲೂ ಗ್ರೇಗೋರಿಯನ್ ಯೂನಿವರ್ಸಿಟಿಯ ಅಧಿಕೃತ ಭಾಷೆಗಳಾಗಿದ್ದ ಹೀಬ್ರೂ ಮತ್ತು ಗ್ರೀಕ್ ಭಾಷೆಗಳನ್ನು ಪ್ರಥಮವಾಗಿ ಅಧ್ಯಯನ ಮಾಡಿ ಓದಲು ಬರೆಯಲು ಸಮರ್ಥರಾದರು. ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೊಂದಿಗೆ ಗ್ರೇಗೋರಿಯನ್ ಯೂನಿವರ್ಸಿಟಿ ಪ್ರವೇಶಿಸಿದರು. ಇಲ್ಲಿದ್ದ ಎರಡು ವರ್ಷಗಳಲ್ಲಿ ತಾನು ಈಗಾಗಲೇ ಪಾರಂಗತರಾಗಿದ್ದ ಲ್ಯಾಟಿನ್ ಭಾಷೆಯಲ್ಲಿ ಸುದೀರ್ಘ ಪ್ರಬಂಧ ಮಂಡಿಸಿ ಮಾರ್ಗದರ್ಶಕರು ಮತ್ತು ಪರಿಶೀಲನಾ ಮಂಡಳಿಯಿಂದ ಪ್ರಶಂಸೆ ಪಡೆದರು. ಹೀಗೆ ಯಶಸ್ವಿಯಾಗಿ ತಮ್ಮ ಸಂಶೋಧನೆಯನ್ನು ಪೂರೈಸಿ ದೈವ ಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದರು.
————————————————
ಮುಂದಿನ ಸಂಚಿಕೆಯಲ್ಲಿ ರೆವರೆಂಡ್ ಫಾದರ್ ಐ. ಅಂತಪ್ಪ ರವರ ಸಾಹಿತ್ಯಿಕ ಸೇವಾ ವಿಚಾರಗಳ ಬಗ್ಗೆ ತಿಳಿಸಲಾಗುವುದು.
———————–————
No comments:
Post a Comment