ಆತ್ಮೀಯರೇ, ದನಿ ಎಂಬ ಇ-ಪತ್ರಿಕೆಗೆ ನಾಲ್ಕು ವರ್ಷದ ಸಂಭ್ರಮ. ಈ ನಾಲ್ಕು ವರ್ಷಗಳಲ್ಲಿ ಸುಮಾರು ೪೬ ಸಂಚಿಕೆಗಳನ್ನು ಹೊರತಂದು ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ. ಈಗ ನಿಮ್ಮ ಕೈಸೇರಿರುವುದು ೪೬ರ ಸಂಚಿಕೆ. ದನಿ ಹುಟ್ಟಿದ್ದು ಕೆಲ ಸ್ಪಷ್ಟ ಉದ್ದೇಶಗಳ ಈಡೇರಿಕೆಗೆ. ಕನ್ನಡ ಕ್ರೈಸ್ತ ಬರಹಗಾರರನ್ನು ಗುರುತಿಸಿ ಅವರನ್ನು ಬೆಳೆಸುವ ಉನ್ನತ ಉದ್ದೇಶದಿಂದ. ಈ ಒಂದು ಪ್ರಾಥಮಿಕ ಉದ್ದೇಶದ ಜತೆಗೆ ಇನ್ನೂ ಹಲವು ಉದ್ದೇಶಗಳಿದ್ದವು: ಕನ್ನಡ ಕ್ರೈಸ್ತ ಸಾಹಿತ್ಯವನ್ನು ವೃದ್ಧಿಪಡಿಸುವುದು, ನಮ್ಮ ಹಬ್ಬ ಆಚರಣೆಗಳನ್ನು ದಾಖಲಿಸುವುದು, ಅನುವಾದ ಕಾರ್ಯಗಳು ಮತ್ತು ನಮ್ಮ ವಿಶ್ವಾಸವನ್ನು ಬರಹಗಳ ಮೂಲಕ ಅಭಿವ್ಯಕ್ತಿಸಿ ಪ್ರಸ್ತುತಗೊಳಿಸುವುದು ಇತ್ಯಾದಿ.
ಈ ಎಲ್ಲಾ ಉದ್ದೇಶಗಳು ಈಡೇರಿದವಾ? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಹೌದು /ಇಲ್ಲ ಎಂಬ ಉತ್ತರಗಳು ಬರಬಹುದು. ಮೊದಲಿಗೆ ಕನ್ನಡ ಕ್ರೈಸ್ತ ಯುವ ಬರಹಗಾರನ್ನು ಗುರುತಿಸಿ ಅವರನ್ನು ಉತ್ತೇಜಿಸಿ ಪತ್ರಿಕೆಯ ನಿಯಮಿತ ಬರಹಗಾರನಾಗಿಸಿಕೊಂಡಿದ್ದು ನಿಜ. ಆದರೆ ನಾನಾ ಕಾರಣಗಳಿಂದ ಕೆಲವರು ಜಾಸ್ತಿ ದಿನ ಪತ್ರಿಕೆಯ ಕೈ ಹಿಡಿಯಲಿಲ್ಲವೆಂಬುದು ಅಷ್ಟೇ ಸತ್ಯ. ಪತ್ರಿಕೆಯ ಧೋರಣೆಗಳ ಜತೆ ಅವರ ವೈಯಕ್ತಿಕ ಧೋರಣೆಗಳು ಸರಿಹೊಂದದ ಕಾರಣಗಳಿಗೆ ಪತ್ರಿಕೆಯಿಂದ ಅವರು ದೂರ ಉಳಿದಿರಬಹುದು ಅಥವಾ ಇನ್ನಾವುದೋ ಕಾರಣಗಳಿಂದ ಪತ್ರಿಕೆಯ ಸಹವಾಸಕ್ಕೆ ವಿದಾಯ ಹೇಳಿರಬಹುದು. ಆದರೆ ಪತ್ರಿಕೆಯ ಬೆಳೆವಣಿಗೆಗೆ ಅವರ ಪಾಲನ್ನು ನಾವು ಪ್ರೀತಿಯಿಂದ ಸ್ಮರಿಸುತ್ತೇವೆ. ಇನ್ನೂ ಕೆಲವರಂತೂ ವಿಷಯ ಪಾಂಡಿತ್ಯವಿದ್ದರೂ ಕನ್ನಡದಲ್ಲಿ ಬರೆಯುವುದು ಕಷ್ಟ ಎಂದು ಹೇಳಿ ಹಿಂಜರಿಕೆಯಿಂದಲೇ ಪತ್ರಿಕೆಯಿಂದ ದೂರ ಸರಿದರು. ಆದರೆ ಪತ್ರಿಕೆಗೆ ಬರೆಯುತ್ತಿರುವ ಬೆರಳೆಣಿಕೆಯಷ್ಟು ಜನ ಮಾತ್ರ ತಮ್ಮ ಬರವಣಿಗೆಯಲ್ಲಿ ಸದೃಢರಾಗುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಅವರು ತಮ್ಮ ಅಲೋಚನೆಯ ಧಾಟಿಯನ್ನು ವಿಸ್ತರಿಸಿಕೊಳ್ಳುತ್ತಾ ಅಭಿವ್ಯಕ್ತಿಯಲ್ಲಿ ನೈಜತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಅಶ್ಚರ್ಯವೆಂದರೆ, ಹಿರಿಯ ಮತ್ತು ಪ್ರಸಿದ್ಧ ಲೇಖಕರಂತೂ ತಮ್ಮ ಬರವಣಿಗೆಗಳ ಮುಖಾಂತರ ಈ ಪತ್ರಿಕೆಯ ಯುವ ಬರಹಗಾರರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಪತ್ರಿಕೆಯ ಬೆಳೆವಣಿಗೆಗೆ ಅವರ ಅಮೂಲ್ಯವಾದ ಕೊಡುಗೆಗಳನ್ನು ಇಲ್ಲಿ ಸ್ಮರಿಸಲೇ ಬೇಕು.
ಎಷ್ಟೆಲ್ಲಾ ಏಳುಬೀಳುಗಳ ನಡುವೆ, ನಮ್ಮ ಊರುಕೇರಿಗಳಲ್ಲಿ ನಡೆಯುವ ಆಚರಣೆಗಳ ದಾಖಲೀಕರಣ ಸ್ಪಲ್ಪ ಮಟ್ಟಿಗಾದರೂ ನಡೆಯುತ್ತಿದೆ. ನಮ್ಮ ವಿಶ್ವಾಸವನ್ನು ಬಲಪಡಿಸುವ ಅಗ್ರಲೇಖನಗಳು ಈ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ, ಅಷ್ಟೇ ಅಲ್ಲದೆ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ವಸ್ತುಸ್ಥಿತಿಯನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿ ಅನ್ಯಾಯವನ್ನು ಖಂಡಿಸುವ ಕೆಲ ಲೇಖಕರ ಧೋರಣೆಯನ್ನು ನಾವು ಮೆಚ್ಚದೆ ಇರಲಾಗದು. ಕೋಮುವಾದ, ಪ್ಯಾಸಿಸಂ, ಭ್ರಷ್ಟಾಚಾರ, ರಾಜಕೀಯ ಅನೈತಿಕತೆ ಹೀಗೆ ಇವೆಲ್ಲವನ್ನು ಖಂಡಿಸುವ ಮೂಲಕ ಪತ್ರಿಕೆಯು ಕ್ರಿಸ್ತನಿಗೆ ಆಪ್ತವಾಗುತ್ತಿದೆ.
ಇವೆಲ್ಲಾ ಸಾಧನೆಗಳು ನಮಗೆ ತೃಪ್ತಿ ನೀಡಿವೆ. ಜತೆಗೆ ಮಾಡಬೇಕಾದ ಹಲವಾರು ಕಾರ್ಯಗಳಿಗೆ ಹುಮ್ಮಸ್ಸು ತುಂಬುತ್ತಿವೆ. ನಾವು ಪ್ರಕಾಶನ ಕಾರ್ಯದಲ್ಲಿ, ಅನುವಾದದ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಗಮನ ಹರಿಸಬೇಕಾಗಿದೆ. ದನಿ ಪತ್ರಿಕೆಯು ಸಹ ಇನ್ನೂ ಸ್ವಲ್ಪ professional look ಪಡೆದುಕೊಳ್ಳಬೇಕಾಗಿದೆ; ಎಲೆ ಮರೆಯ ಕಾಯಿಗಳಂತೆ ಹಗಲು ರಾತ್ರಿಯೆನ್ನದೆ ಪತ್ರಿಕೆಯ ಏಳಿಗೆಗೆ ಕೆಲಸ ಮಾಡುತ್ತಿರುವವರು ಸಹ ಸಂಘಟನೆಗೊಳ್ಳಬೇಕಾಗಿದೆ. ಪತ್ರಿಕೆಯ ಲೇಖನಗಳು ಇನ್ನಷ್ಟು ಉತ್ಕೃಷ್ಟಗೊಳ್ಳಬೇಕಾಗಿದೆ.
ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು, ನಾಡಿನ ಒಳಿತಿಗೆ ಅಗತ್ಯವಾಗಿರುವುದನ್ನು ನೀಡಬೇಕು. ಕೆಡಕನ್ನು ಖಂಡಿಸಬೇಕು. ಒಳಿತಿನ ನಿಟ್ಟಿನಲ್ಲಿ ಸಮಾಜವನ್ನು ಮುನ್ನಡೆಸುವ ಕೆಲಸ ಮಾಡಬೇಕು. ಅಂತಹ ಕಾರ್ಯಕ್ಕೆ ನಾವು ಕರೆಯಲ್ಪಟ್ಟಿದ್ದೇವೆ. ಯೆರೆಮೀಯ ಪ್ರವಾದಿಯಂತೆ ನಾವು ಅಯ್ಯೋ ಸ್ವಾಮಿ ಸರ್ವೇಶ್ವರಾ ನಾನು ಮಾತುಬಲ್ಲವನಲ್ಲ, ಇನ್ನೂ ತರುಣ ಎಂದು ಬಿನ್ನವಿಸಬಹುದು. ಆದರೆ ಸರ್ವೇಶ್ವರ ನಮ್ಮನ್ನು ಬಿಡುವುದಿಲ್ಲ. ನಾನೊಬ್ಬ ತರುಣ ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇಬೇಕು; ನಾನು ಅಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು, ಅವರಿಗೆ ಅಂಜಬೇಡ; ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗೆ ಇರುತ್ತೇನೆ; ಇದು ಸರ್ವೇಶ್ವರನಾದ ನನ್ನ ಮಾತು ಎಂದು ಹೇಳಿ ಕಿತ್ತು ಹಾಕುವ ಹಾಗು ಕೆಡುವುವ, ನಾಶಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು ಎಂದು ನೇಮಿಸಿದ್ದಾರೆ ನಮ್ಮನ್ನು. ನಾವು ದೇವರ ಆಜ್ಞೆಗೆ ತಲೆಬಾಗಲೇಬೇಕು. ಈ ಒಂದು ಮನೋಭೂಮಿಕೆಯಲ್ಲಿ ನಮ್ಮ ಪತ್ರಿಕೆಯನ್ನು ಮುನ್ನಡೆಸುತ್ತಿದ್ದೇವೆ. ದಯವಿಟ್ಟು ಈ ಒಂದು ಕಾರ್ಯದಲ್ಲಿ ನಮ್ಮ ಜೊತೆ ನೀವು ಭಾಗವಹಿಸಿ, ಬೇಕಾದಾಗ ಸಲಹೆ ಸೂಚನೆಗಳನ್ನು ಕೊಡಲು ಮರೆಯದಿರಿ.
No comments:
New comments are not allowed.