Tuesday, 16 April 2019
Monday, 8 April 2019
ಬರೆದುದು ಬರೆದಾಯ್ತು - ಫ್ರಾನ್ಸಿಸ್.ಎಂ.ಎನ್.
ನಜರೇತಿನ ಯೇಸು,
ಯೆಹೂದ್ಯರ ಅರಸು.
‘ನಾನು ಬರೆದುದು ಬರೆದಾಯ್ತು
ಅದನ್ನು ಬದಲಾಯಿಸಲಾಗದು
ಇದು ಪಿಲಾತನ ಉವಾಚ.
ಅಯ್ಯೋ ಅದು ಹಾಗಲ್ಲ
ಅಲವತ್ತುಕೊಂಡರು
ಹಲವು ಮಂದಿ ಯೆಹೂದ್ಯರು.
‘ಆತ, ನಮ್ಮ ಅರಸನಲ್ಲ,
ಯೆಹೂದ್ಯರ ಅರಸನೆಂದು
ಬರೆಯುವುದ ಬೇಡ ಕನಲಿದರವರು,
‘ಅವನು ಯೆಹೂದ್ಯರ ಅರಸನಲ್ಲ,
ಯೆಹೂದ್ಯರ ಅರಸನೆಂದು
ಹೇಳಿಕೊಂಡವನು ಅವನು'
‘ನಾನು ಬರೆದುದು ಬರೆದಾಯ್ತು
ಅದನ್ನು ಬದಲಾಯಿಸಲಾಗದು
ಮತ್ತೆ ನುಡಿದನಂತೆ ಪಿಲಾತ.
ಅದಕ್ಕೂ ಮೊದಲು,
‘ನೀನೊಬ್ಬ ಅರಸನೋ?
ರಾಜ್ಯಪಾಲ ಪಿಲಾತ ಕೇಳಿದಾಗ,
‘ಅದು, ನಿನ್ನ ಬಾಯಿಯಿಂದಲೇ
ಬಂದಿದೆ.
ಅರಸು ಎನ್ನುವುದು,
ನೀನು ಹೇಳುವ ಮಾತು,
ನನ್ನದೋ,
ಸತ್ಯದಪರರೆಲ್ಲರಿಗೂ
ಸತ್ಯದ ಸಾಕ್ಷಿ ಹೇಳುವ ಕೆಲಸ.
ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ,
ಪರಲೋಕದ್ದು.
ನಂತರದಲ್ಲಿ,
ಪಾಸ್ಖದ ಪದ್ಧತಿಯ ಸೆರೆಯಾಳು
ಬಿಡುಗಡೆಗೆ, ಈತನೋ ಬರಬ್ಬನೋ?
ಪಿಲಾತನ ಪ್ರಶ್ನೆಗೆ,
ಈತನಲ್ಲ, ನಮಗೆ
ದರೋಡೆಕೋರ ಬರಬ್ಬನನ್ನು
ಬಿಟ್ಟುಬಿಡು ಬೊಬ್ಬಿಟ್ಟರು ಜನ.
ಬರಬ್ಬನ ಬಿಡುಗಡೆಯಾಯ್ತು.
‘ಈತನೋ ನಿಮ್ಮ ಅರಸ'
ಎಂದು ಉಲಿದ
ಹಾಸುಗಲ್ಲಿನ ಕಟ್ಟೆಯ ನ್ಯಾಯಾಧಿಪತಿ,
'ರೋಮಾಪುರಿಯ ಚಕ್ರವರ್ತಿಯ ಹೊರತು
ಬೇರೆ ಅರಸರಿಲ್ಲ ಎಮಗೆ,
ಸಾಯಿಸು ಶಿಲುಬೆಗೇರಿಸು ಅವನ'
ಆರ್ಭಟದಿ ಕೂಗಿದವರ
ಕೈಗೊಪ್ಪಿಸಿ ಕೈ ತೊಳೆದುಕೊಂಡ.
**********
ಚುನಾವಣಾ ಬಾಧ್ಯತೆ - ಸಮೀರ್ ಫ್ರಾನ್ಸಿಸ್
ಈ ಬೇಸಿಗೆಯ ಬಿಸಿಯ ಜೊತೆ ಜೊತೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಬಿಸಿಯೂ ಏರುತ್ತಿದೆ. ಎಲ್ಲ ಪಕ್ಷಗಳು ತಮ್ಮ ಪಕ್ಷದಿಂದ ಆಳಿಗೆ ಎದುರಾಳಿಯಾಗಿ ನಿಲ್ಲಲು ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದರಲ್ಲಿ ಬಿಸಿಯಾಗಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಪ್ರಜಾಪ್ರಭುತ್ವ ಭಾರತವು ಎದುರಿಸುತ್ತಿರುವ 17ನೇ ಚುನಾವಣೆಯಾಗಿದ್ದು, ಎಲ್ಲರ ಮನಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಈ ಹಿಂದಿನ 16 ಚುನಾವಣೆಗಳಲ್ಲಿ ನಡೆದ ಪ್ರಚಾರಗಳಂತೆ ಈ ಚುನಾವಣೆಯಲ್ಲಿ ಸಹ ಬರೀ ಸುಳ್ಳು ಪೊಳ್ಳಿನ ಆಶ್ವಾಸನೆಗಳನ್ನು ಕೊಡುವುದು ಸಾಮಾನ್ಯದ ಸಂಗತಿಯಾಗಿದೆ.
ರಾಜಕಾರಣಿಗಳು ನಮ್ಮೆಲ್ಲರ ಮನಸ್ಸಿನ ದೌರ್ಬಲ್ಯವನ್ನು ಅರೆದು ಕುಡಿದಿರುವಂತವರು. ಅವರು ಪ್ರಜೆಗಳಿಗೆ ಯಾವಾಗ ಏನು ಹೇಳಬೇಕು, ಏನು ಮಾಡಬೇಕು ಎಂಬುದನ್ನು ಅರಿತು ಜನರ ಮನಸ್ಸಿನಲ್ಲಿ ಚುನಾವಣೆಯ ಬಗ್ಗೆ ಹಣಕೊಟ್ಟು ಮತವನ್ನು ಕೊಳ್ಳುವಂತಹ ಮನೋಭಾವವನ್ನು ದೃಢವಾಗಿ ಕಟ್ಟಿದ್ದಾರೆ. ಮಹಾಭಾರತದಲ್ಲಿ ದುರ್ಯೋಧನನಿಗೆ ತನ್ನ ತೊಡೆಯಲ್ಲಿದ್ದ ದೌರ್ಬಲ್ಯದಂತೆ ಎಲ್ಲರಲ್ಲೂ ಚುನಾವಣೆಯ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಜಾತಿ ಹಾಗೂ ಭಾಷೆಗಳ ದೌರ್ಬಲ್ಯವಿರುವುದನ್ನು ಅರಿತಿದ್ದಾರೆ. ಅದನ್ನೇ ಅವರು ಮತ್ತೆ ಮತ್ತೆ ಹೇಳಿ ಇಟ್ ಇಸ್ ನಾರ್ಮಲ್ ಟು ತಿಂಕ್ ಅಂಡ್ ಸ್ಪೀಕ್ ಲೈಕ್ ದ್ಯಾಟ್ ಎನ್ನುವ ಮನಸ್ಥಿತಿಯನ್ನು ಕಟ್ಟಿದ್ದಾರೆ. ಈ ದೌರ್ಬಲ್ಯವನ್ನು ರಾಜಕಾರಣಿಗಳು ತಮ್ಮ ಆಯುಧಗಳನ್ನಾಗಿಸಿಕೊಂಡು ಚುನಾವಣೆಯ ಸಂದರ್ಭಗಳಲ್ಲಿ ಭಾವನಾತ್ಮಕ ಭಾಷಣಗಳನ್ನು ಮಾಡಿ ಪ್ರಜೆಗಳ ಭಾವೋದ್ರೇಕವನ್ನು ಉಕ್ಕೇರಿಸಿ ಲಾಭವನ್ನು ಪಡೆಯುತ್ತಿದ್ದಾರೆ.
ಕಳೆದ ಸಲ ನಮ್ಮ ಊರಿಗೆ ಹೋಗಿದ್ದಾಗ ನಾನು ಕಂಡದ್ದು ಎರಡು ವರ್ಷಗಳಿಂದ ಗುಂಡಿ ಬಿದ್ದಿದ್ದ ರಸ್ತೆಗಳ ಪ್ಯಾಚ್ ವರ್ಕ್ಗಳ ಕಾಮಗಾರಿ. ಚುನಾವಣೆಯ ಸಂದರ್ಭಗಳಲ್ಲಿ ಇದೇ ರೀತಿಯ ಕಾಮಗಾರಿಗಳು ನಡೆಯುವುದು ಸರ್ವೆಸಾಮಾನ್ಯವಾಗಿವೆ. ಭಾಷಣಗಳ ಸಂದರ್ಭಗಳಲ್ಲಿ ದುಡ್ಡು, ಬಿರಿಯಾನಿ, ಬಟ್ಟೆ ಬರೆಗಳನ್ನು ಹಂಚುವುದು ಕೂಡ ರೂಢಿಯಲ್ಲಿರುವ ನಾಟಕಗಳು. ಇವೆಲ್ಲವೂ ನಮ್ಮ ದೇಶವು ಹದಗೆಟ್ಟಿರುವ ಪರಿಸ್ಥಿತಿಯನ್ನು ತೋರಿಸುತ್ತದೆ ಹೊರತು ಜನಗಳ ಮೇಲಿನ ಕಾಳಜಿಯನ್ನಲ್ಲ.
ಇದೆಲ್ಲದರ ನಡುವೆ ಮಾಧ್ಯಮಗಳು ರಾಜಕಾರಣಿಗಳ ಹಾಗೂ ಅಂಬಾನಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಜನಗಳಿಗೆ ತಮಗೆ ಬೇಕಾದಂತೆ ಉಹಾ ಪೋಹಗಳನ್ನು ಸೃಷ್ಟಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತಿದ್ದಾರೆ. ಜನಗಳು ಮಾಧ್ಯಮಗಳಲ್ಲಿ ಬರುವುದನ್ನೇ ನಿಜವೆಂದು ನಂಬಿ ಮೋಸ ಹೋಗುತ್ತಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲ ತಾಣಗಳಲ್ಲಿ ಪಕ್ಷ ಭೇದಗಳ ಚಿತ್ರಗಳನ್ನು ವಿಡಿಯೋಗಳನ್ನು ಹರಿ ಬಿಟ್ಟು ಜನರಲ್ಲಿ ಗೊಂದಲಗಳನ್ನು ಉಂಟುಮಾಡಿ ಪ್ರಚಾರ ಮಾಡುತ್ತಿರುವುದು ತಡೆಯಲಾಗದ ಸಂಗತಿಯಾಗಿವೆ.
ಈ ಒಂದು ಸಂದರ್ಭದಲ್ಲಿ ಭಾರತದ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರನ್ನು ನೆನಪಿಸಿಕೊಳ್ಳುವುದು ಒಳಿತು. ಇವರು ಭಾರತವೊಂದು ಭೌಗೋಳಿಗ ಪ್ರದೇಶವಲ್ಲ ಬದಲಾಗಿ ದೇಶವಾಸಿಗಳೇ ದೇಶವೆಂದು ಹೇಳಿದರು. ಲೋಹಿಯಾರವರು ರಾಷ್ಟ್ರವಾದವನ್ನು ಖಂಡಿಸಿ ಇದಕ್ಕೆ ಪ್ರಜಾತಂತ್ರದ ಮೂಗುದಾರವನ್ನು ಹೆಣೆದು ದೇಶದಲ್ಲಿನ ಎಲ್ಲರ ಭಾವಶೀಲ ಆಶೋತ್ತರಗಳ ಸಾಧನೆಗೆ ನಿಂತರು. ಧರ್ಮವನ್ನು ಜನಗಳ ಒಳಿತಿಗಾಗಿ ಹಾಗೂ ಆತಂಕಗಳಿಂದ, ಸ್ವಾರ್ಥದಿಂದ ಹೊರಬರುವುದಕ್ಕೆ ದಾರಿಯೆಂದು, ಅದನ್ನು ರಾಜಕಾರಣಕ್ಕೆ ಬಳಸುವುದು ಒಳಿತಲ್ಲವೆಂದು ಹೇಳಿದರು.
ಈ ಜಾತಿ, ಧರ್ಮ, ಭಾಷೆಗಳ ಚಕ್ರವ್ಯೂಹದಲ್ಲಿ ಸಿಲುಕಿರುವ ನಾವುಗಳು ಬದುಕಬೇಕೆಂದರೆ ಒಂದೇ ಹಾದಿ, ಅದೇ ನಮ್ಮ ಒಂದು ಮತವನ್ನು ಎಲ್ಲರ ಹಿತಕ್ಕಾಗಿ ಹಾಕಿ, ಜನರ ಹಿತಕ್ಕಾಗಿ ಚಿಂತನೆ ಮಾಡುವ ನಾಯಕರನ್ನು ಆಯ್ಕೆ ಮಾಡುವುದು. ಜಾತಿ, ಧರ್ಮಗಳನ್ನೆಲ್ಲ ಬಿಟ್ಟು, ಯಾರು ನಮ್ಮ ಸಂವಿಧಾನದ ಪ್ರಕಾರ ಆಳ್ವಿಕೆ ಮಾಡಿ ಜನರಿಗೆ ಸ್ವಾತಂತ್ರ‍್ಯ, ಸಮಾನ ಹಕ್ಕು, ಭ್ರಾತೃತ್ವವನ್ನು ಹಾಗೂ ಎಲ್ಲದಕ್ಕೂ ಮಿಗಿಲಾಗಿ ನೆಮ್ಮದಿಯಿಂದ ಜೀವಿಸುವ ನೆಲೆಯನ್ನು ಕಲ್ಪಿಸುತ್ತಾರೋ ಅಂಥ ನಾಯಕರನ್ನು ಆಯ್ಕೆ ಮಾಡುವ ಜವಬ್ದಾರಿ ನಮ್ಮ ಮೇಲಿದೆ.
**********
ಫ್ರಾನ್ಸ್ನ ಬೆಥರಮ್ ಮಾತೆ - ಶ್ರೀಮತಿ ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ
1503ರ ಒಂದು ದಿನ ಕೆಲವು ಕುರುಬರು ತಮ್ಮ ಕುರಿಗಳನ್ನು ಗೇವ್ ನದಿಯ ತೀರದಲ್ಲಿ ಮೇಯಿಸುತ್ತಿದ್ದಾಗ ಅಲ್ಲಿದ್ದ ಬಂಡೆಗಳಿಂದ ಅಸಾಮಾನ್ಯವಾದ ಬೆಳಕು ಹೊಮ್ಮುವುದನ್ನು ಕಂಡರು. ಹತ್ತಿರಕ್ಕೆ ಹೋಗಿ ಸೂಕ್ಷ್ಮವಾಗಿ ವೀಕ್ಷಿಸಿದಾಗ ಅಲ್ಲಿ ಅವರಿಗೆ ಕನ್ಯಾಮರಿಯಮ್ಮನವರ ಸ್ವರೂಪ ಕಂಡಿತು. ಈ ಸಂಗತಿ ಕಾಳ್ಗಿಚ್ಚಿನಂತೆ ಹರಡಿ ಸುತ್ತಮುತ್ತಲಿನ ಊರುಗಳ ಜನರು ಆ ಸ್ವರೂಪವನ್ನು ಕಾಣಲು ತಂಡೋಪತಂಡವಾಗಿ ಧಾವಿಸಿದರು. ಎಲ್ಲರೂ ಸೇರಿ ಮಾತೆಗಾಗಿ ಒಂದು ಮಂದಿರವನ್ನು ಸ್ಥಾಪಿಸಲು ನಿಶ್ಚಯಿಸಿದರು. ನದಿಯ ಈ ದಡದಲ್ಲಿ ಸ್ಥಳದ ಅಭಾವವಿದ್ದುದರಿಂದ ಆಚೆ ದಡದಲ್ಲಿ ಮಂದಿರ ನಿರ್ಮಾಣವಾಯಿತು. ಮುಂದಿನ ದಿನಗಳಲ್ಲಿ ಸ್ವರೂಪ ಕಂಡುಬಂದ ಅದೇ ತೀರದಲ್ಲಿ ಮಂದಿರವನ್ನು ರೂಪಿಸುವ ಯೋಚನೆಗಳಿದ್ದವು. ಹಾಗೆಯೇ ಮುಂದೊಂದು ದಿನ ಮಾತೆಯ ಪ್ರತಿಮೆ ಸಿಕ್ಕ ಸ್ಥಳದಲ್ಲೇ ಮಂದಿರ ರೂಪುಗೊಂಡಿತು.
ಸುಮಾರು 1616ರಲ್ಲಿ ಮನ್ಟೌಟ್ ಎಂಬ ಗ್ರಾಮದ ರೈತರು ತಮ್ಮ ದಿನನಿತ್ಯದ ಕೃಷಿ ಕೆಲಸಗಳನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಇದ್ದಕ್ಕಿದ್ದಂತೆಯೇ ಭಯಂಕರ ಬಿರುಗಾಳಿಯೊಂದು ಘೋರವಾಗಿ ಆರ್ಭಟಿಸಿತು. ನೋಡನೋಡುತ್ತಿದ್ದಂತೆ ಅಲ್ಲಿದ್ದ ಮರದ ಬೃಹತ್ ಶಿಲುಬೆ ಅತ್ತಿತ್ತ ಓಲಾಡಿ ಭಾರೀ ಶಬ್ದದೊಂದಿಗೆ ನೆಲಕ್ಕೆ ಬಿತ್ತು. ಅತ್ಯಾಶ್ಚರ್ಯವೋ ಎಂಬಂತೆ ಬಿದ್ದ ಶಿಲುಬೆಯನ್ನು ಯಾರೋ ಎತ್ತಿ ನಿಲ್ಲಿಸಿದರೋ ಎಂಬ ಹಾಗೆ ಕೆಳಗೆ ಬಿದ್ದ ಶಿಲುಬೆ ದಿವ್ಯಕಾಂತಿಯೊಂದಿಗೆ ಹೊಳೆದು ಮತ್ತೆ ತಾನಾಗಿ ಮೊದಲಿನಂತೆಯೇ ನಿಂತುಕೊಂಡಿತು.
ಇದಾದ ನಂತರ ಗೇವ್ ನದಿಯ ತೀರದಲ್ಲಿ ಯುವ ಹುಡುಗಿಯೊಬ್ಬಳು ಹೂವು ಕೊಯ್ಯುವಾಗ ಅಕಸ್ಮಾತಾಗಿ ಜಾರಿ ನದಿಯೊಳಕ್ಕೆ ಬಿದ್ದಳು. ಹುಡುಗಿ ಬಿದ್ದ ಸ್ಥಳದಲ್ಲಿ ಇಳಿಜಾರು ಇದ್ದು, ಅಲ್ಲಿ ನೀರು ಅತಿ ವೇಗವಾಗಿ ಹರಿಯುತ್ತಿತ್ತು. ಅದಾಗಲೇ ನದಿಯ ತೀರದಲ್ಲಿ ಬೆಥರಮ್ ಮಾತೆಯ ಪುಣ್ಯಕ್ಷೇತ್ರ ತಲೆಯೆತ್ತಿತ್ತು. ಆ ಹುಡುಗಿ ಕಿರುಚುತ್ತಾ ಬೆಥರಮ್ ಮಾತೆಗೆ ಮೊರೆಯಿಟ್ಟಳು. ಆ ಕೂಡಲೇ ನದಿಯ ತೀರದಲ್ಲಿ ಬಾಲ ಯೇಸುವನ್ನು ಕರಗಳಲ್ಲಿ ಹಿಡಿದು ನಿಂತಿದ್ದ ಮಾತೆಯನ್ನು ಕಂಡಳು. ಮರಿಯಾ ಮಾತೆಯು ತೋರಿದ ಮರದ ಬೇರು ಹಿಡಿದು ಆ ಹುಡುಗಿ ಸುರಕ್ಷಿತವಾಗಿ ಮೇಲೆ ಬಂದಳು. ನಡೆದ ಈ ಅದ್ಭುತಕ್ಕೆ ಕೃತಜ್ಞತೆಯಾಗಿ ಆ ಹುಡುಗಿ ಚಿನ್ನದ ಬೇರೊಂದನ್ನು ಮಾಡಿಸಿ ದೇವಮಾತೆಗೆ ಕಾಣಿಕೆಯಾಗಿ ಅರ್ಪಿಸಿದಳು. ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಬೆಥರಮ್ ಎಂದರೆ ಸುಂದರ ಬೇರು ಎಂದರ್ಥ.
ಈ ಸುಂದರ ಮರದ ಬೇರಿನ ಹೆಸರೇ ಅಲ್ಲಿನ ಪುಣ್ಯಕ್ಷೇತ್ರದ ಹಾಗೂ ಊರಿನ ಹೆಸರಾಗಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಈ ಪುಣ್ಯಸ್ಥಳದಲ್ಲಿ 1620 ರಿಂದ 1642 ರ ಮಧ್ಯೆ ಕುರುಡನಿಗೆ ದೃಷ್ಟಿ, ಪಾರ್ಶ್ವವಾಯುವಿನಿಂದ ಮುಕ್ತಿ, ಕ್ಷಯರೋಗದಿಂದ ಮುಕ್ತಿ ಹೊಂದಿದವರನ್ನೂ ಒಳಗೊಂಡು 82 ಅದ್ಭುತಗಳು ದಾಖಲಾಗಿವೆ.
ಬೆಥರಮ್ ಮಾತೆಯ ಪುಣ್ಯಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಸಂತ ಬೆರ್ನದೆತ್ ಸೌಬಿರೋ (Bernadette soubirous)ನವರು ಲೂರ್ದು ನಗರದಲ್ಲಿ ಭೂತ ಪ್ರೇತಗಳನ್ನು ಓಡಿಸಲು ಕೈಯಲ್ಲಿ ಹಿಡಿದು ಪ್ರಾರ್ಥಿಸುತ್ತಿದ್ದ ಜಪಮಾಲೆಯು ಬೆಥರಮ್‍ನದ್ದೇ ಆಗಿತ್ತು. ಅವರ ನಂತರ ಬೆಥರಮ್‍ನ ಗುರುಗಳಾದ ಸಂತ ಮೈಕಲ್ ಗ್ಯಾರಿಕೋಸ್‍ನವರನ್ನು ಅದೇ ಕಾರ್ಯಕ್ಕೆ ಕಳುಹಿಸಲಾಗಿತ್ತು. ಈ ಸಂತರೊಬ್ಬರಿಗಷ್ಟೇ ಸಂತ ಬೆರ್ನದೆತ್ ಮಾಡಿದ್ದ ಮಹಾ ಕಾರ್ಯಗಳ ಅರಿವಿತ್ತು. ಹತ್ತನೇ ಭಕ್ತಿನಾಥರು ಬೆಥರಮ್ ಪುಣ್ಯಕ್ಷೇತ್ರಕ್ಕೆ ಬೇರುಗಳಿಂದ ಹೆಣೆದ ಎರಡು ಚಿನ್ನದ ಕಿರೀಟಗಳನ್ನು ಅರ್ಪಿಸಿದ್ದರು.
ಪುಣ್ಯಕ್ಷೇತ್ರದ ಶಿಲಾಫಲಕದ ಮೇಲೆ ಹೀಗೆ ಬರೆಯಲಾಗಿದೆ:
ದೇವ ಪುತ್ರನೂ ಅವನ ಮಾತೆಯೂ
ನಮ್ಮ ಕೊಡುಗೆಗಳನ್ನು ಸ್ವೀಕರಿಸಲಿ,
ನಮ್ಮ ನಂಬಿಕೆ ನಿರೀಕ್ಷೆಗಳನ್ನು ಹರಸಿ ಒಂದು ದಿನ
ಮಲಿನವಾಗದ ಮಹಿಮೆಯಲ್ಲಿ ನಮ್ಮನ್ನಿರಿಸಲಿ.
ಬಿರುಗಾಳಿಯ ಸಂದರ್ಭದಲ್ಲಿ ನಾಶವಾಗದೇ ಉಳಿದ ಮಹಾ ಶಿಲುಬೆಯು ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಕೆಲ ನಾಸ್ತಿಕರಿಂದ ನಾಶವಾಗಿ, ಆ ಸ್ಥಳವನ್ನು ಆಕ್ರಮಿಸಿಕೊಂಡು ಗುರುಗಳನ್ನು ಓಡಿಸಲಾಯಿತು.
1833 ರಲ್ಲಿ ಅಲ್ಲಿನ ಧರ್ಮಾಧ್ಯಕ್ಷರು ಗುರುಮಠವನ್ನು ಮುಚ್ಚಿದಾಗ ಅಲ್ಲಿನ ಪುಣ್ಯಕ್ಷೇತ್ರದ ಹಾಗೂ ಯಾತ್ರಿಗಳ ಜವಾಬ್ದಾರಿಯನ್ನು ಫಾದರ್ ಮೈಕಲ್ ಎಂಬುವರಿಗೆ ವಹಿಸಿಕೊಟ್ಟರು. ಆ ಸಂದರ್ಭದಲ್ಲಿ ಫಾದರ್ ಮೈಕಲ್‍ನವರು ಗುರುಗಳಿಗಾಗಿ, ಸಹೋದರರಿಗಾಗಿ ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿತವಾದ ಒಂದು ಸಭೆಯನ್ನು ಸ್ಥಾಪಿಸಿದರು.
ಪೈರ್ನೀಸ್ ಎಂಬಲ್ಲಿನ ಬೆಟ್ಟದಂಚಿನಲ್ಲಿರುವ ಬೆಥರಮ್, ಫ್ರಾನ್ಸ್ನ ಲೂರ್ದುನಗರದಿಂದ 8 ಕಿ. ಮಿ., ದೂರವಿದೆಯಾದರೂ ಈ ಎರಡೂ ಪುಣ್ಯ ಕ್ಷೇತ್ರಗಳು ಒಂದೇ ನದಿಯ ದಂಡೆಯ ಮೇಲಿವೆ. ಈ ಬೆಥರಮ್ ಮಾತೆಯ ಹಬ್ಬವನ್ನು ಪವಿತ್ರ ಧರ್ಮಸಭೆಯು ಪ್ರತಿ ವರ್ಷ ಏಪ್ರಿಲ್ ತಿಂಗಳ 22ನೇ ತಾರೀಖಿನಂದು ಆಚರಿಸುತ್ತದೆ.
**********
ನಾವು ಬದಲಾಗಬೇಕಿದೆ - ಸಹೋ. ಜಾರ್ಜ್ ಫೆರ್ನಾಂಡಿಸ್, ಎಂ. ದಾಸಾಪುರ
ಜಗತ್ತು ಅಂದಿನಿಂದ ಇಂದಿನವರೆಗೂ ಬದಲಾವಣೆಯ ಪಥದಲ್ಲಿ ಸಾಗುತ್ತಾ ಬಂದಿದೆ. ನಾವು ಗಮನಿಸಿದಂತೆ ನಮ್ಮ ಆಹಾರ ಪದ್ಧತಿಗಳಿಂದ ಹಿಡಿದು, ನಾವು ತೊಡುವ ಬಟ್ಟೆಗಳ ತನಕವೂ ಬದಲಾವಣೆಯು ಭರ್ಜರಿ ಬೇಟೆಯನ್ನೇ ಆಡುತ್ತಿದೆ. ಹೀಗಿರುವಲ್ಲಿ ಈ ಬದಲಾವಣೆಯೆಂಬ ಪದ ಎಂತಹ ಬಿರುಗಾಳಿಯನ್ನು ಎಬ್ಬಿಸಿದೆ ಎಂದು ತಿಳಿದುಕೊಳ್ಳಲು ಅಷ್ಟೇನು ಸಮಯವನ್ನು ವ್ಯಯಮಾಡಬೇಕೆಂದಿಲ್ಲ. ಏಕೆಂದರೆ ಕಾಲದ ಬದಲಾವಣೆಗಳು ಮನುಷ್ಯನನ್ನು ನಿರ್ಜೀವವನ್ನಾಗಿ ಮಾಡಿ ವಸ್ತುಗಳು ಜೀವಿಸುವಂತೆ ಮಾಡುತ್ತಿವೆ. ಬಹುಶಃ ಈ ಬದಲಾವಣೆಗಳು ಮಾನವನನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿ. ಅವನ ಬಾಹ್ಯ ಬದಲಾವಣೆಗಳಲ್ಲಿ ನಾಟಕೀಯ ತಿರುವುಗಳನ್ನು ಹುಟ್ಟಿಹಾಕಿವೆ. ಹೀಗಿರುವಾಗ ಈ ಬದಲಾವಣೆ ಸಮಾಜಕ್ಕೆ ಅವಶ್ಯಕವೇ?
ನಾವು ಜೀವಿಸುತ್ತಿರುವ ಈ ಸಮಾಜದಲ್ಲಿ ಹಲವಾರು ಬದಲಾವಣೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿವೆ. ಆದರೆ ಮಾನವ ಎಂಬ ಜೀವಿ ಈ ಬದಲಾವಣೆಯ ಸುಳಿಗೆ ಸಿಲುಕಿ ಬಾಹ್ಯವಾಗಿ ತನ್ನನ್ನೇ ತನಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದಾನೆ. ಇದಕ್ಕೆ ಉದಾಹರಣೆ ಬೇಕಾದರೆ ಪ್ರಸ್ತುತ ನಮ್ಮ ದೇಶದಲ್ಲಿ ಆಗುತ್ತಿರುವ ಬಾಹ್ಯ ಬದಲಾವಣೆಯನ್ನು ಅವಲೋಕಿಸಿ ನೋಡಬಹುದಾಗಿದೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಸ್ವಾರ್ಥ ಸಾಧನೆಯ ಶಿಖರವನ್ನೇರಿ, ಅಭಿವ್ಯಕ್ತಿ ಸ್ವಾತಂತ್ರದ ನಿರ್ಮೂಲನೆಗೆ ನಾಂದಿ ಹಾಡಲು ಕರೆನೀಡುತ್ತಿದೆ. ಮಾನವ ಬಾಹ್ಯವಾಗಿ ತುಂಬಾ ಬದಲಾವಣೆ ತಂದುಕೊಂಡಿದ್ದಾನೆ. ತನ್ನ ತಲೆ ಕೂದಲು ಬಾಚುವುದರಿಂದ ಹಿಡಿದು, ಸವೆದು ಹೋಗುವ ಚಪ್ಪಲಿಗಳ ತನಕ ವೈವಿಧ್ಯತೆಯಲ್ಲಿ ವೈವಿಧ್ಯತೆಯನ್ನು ಬದಲಾವಣೆ ಎಂದುಕೊಳ್ಳುತ್ತಾ, ತನ್ನನ್ನೇ ತಾನು ವಿಜ್ರಂಭಿಸಿಕೊಳ್ಳುತ್ತಾ, ಬಾಹ್ಯ ಬದಲಾವಣೆಗೆ ಜೈ ಜೈ ಎನ್ನುತ್ತಾ, ಮುಖ್ಯವಾಗಿ ತನ್ನ ಆಂತರ‍್ಯದಲ್ಲಿ ಕೋಪ, ಮದ, ಮತ್ಸರ, ದ್ವೇಷ, ಹಿಂಸೆ, ಜಂಭ, ಜಾತಿಯಲ್ಲಿ ಮೇಲುಕೀಳು ಎಂಬ ಕೆಟ್ಟ ಭಾವನೆಗಳ ಗೂಡು ಮಾಡಿಕೊಂಡು ಪ್ರೀತಿ, ಸ್ನೇಹ, ಸಂಬಂಧ ಮತ್ತು ವಿವೇಚನಾಶಕ್ತಿ ಎಂಬ ಸದ್ಗುಣಗಳನ್ನು ಗಾಳಿಗೆ ತೂರಿ, 'ಆಂತರಿಕವಾಗಿ ಮಾತ್ರ ನಾ ಬದಲಾಗಲಾರೆ' ಎಂಬ ಮಾತನ್ನು ಪರೋಕ್ಷವಾಗಿ ಆಡುತ್ತಿದ್ದಾನೆ.
ಎಂಥಾ ವಿಚಿತ್ರ ಅಲ್ಲವೇ? ಕೇವಲ ನಮ್ಮ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಎಂದು ತಿಳಿದಿದ್ದರೂ ಆಂತರಿಕ ಬದಲಾವಣೆಗೆ ಆದ್ಯತೆ ನೀಡುತ್ತಿಲ್ಲವಲ್ಲಾ? ಇಂದಿನ ಸಮಾಜವೂ ಬದಲಾವಣೆಯ ಸುಳಿಯಲ್ಲಿ ಹೊರಬರಲಾಗದೆ ಒದ್ದಾಡುತ್ತಿದೆ. ಏಕೆಂದರೆ ಸಮಾಜದ ನಿರ್ಮಾತೃವಾದ ಈ ಮಾನವನೇ ಬದಲಾವಣೆಗೆ ಅಡಿಗಲ್ಲು ಹಾಕಿದ್ದು. ವಿಪರ್ಯಾಸವೆಂದರೆ ಈ ಬದಲಾವಣೆಯನ್ನು ಕೇವಲ ಸಮಾಜಕ್ಕೆ ಸೀಮಿತಗೊಳಿಸಿ, ಅಂದರೆ ಸಮಾಜವನ್ನು ಒಂಟಿ ಜೀವಿಗಳ ಆಶ್ರಯ ತಾಣವನ್ನಾಗಿ ಮಾಡಿ 'ನಾ ಮಾತ್ರ ಆಂತರ‍್ಯದಲ್ಲಿ ಬದಲಾಗಲು ಪಣತೊಡುವುದಿಲ್ಲ' ಎಂಬ ಕಟು ಸತ್ಯವನ್ನು ನುಡಿಯುತ್ತಿದ್ದಾರೆ.
ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೂಡ ಮಾನವ ತನ್ನ ಮೂರ್ಖತೆಯನ್ನು ಎಷ್ಟರ ಮಟ್ಟಿಗೆ ಮೈಗೂಡಿಸಿಕೊಂಡಿದ್ದಾನೆ ಎಂದರೆ, ಯಾರೋ ಸಮಾಜದ ವಿರುದ್ಧ ಸುಳ್ಳು ಹೇಳಿ ಅದನ್ನೇ ಬದಲಾವಣೆ ಎಂದು ಬಿಂಬಿಸುತ್ತಿದ್ದರೆ, ಅದಕ್ಕೆ ತಕ್ಕಂತೆ ತನ್ನ ವಿವೇಕವನ್ನು ಉಪಯೋಗಿಸದೆ, ಆ ಸುಳ್ಳಿನ ಕಂತೆಯ ಬದಲಾವಣೆಯನ್ನು ಸರಿ ಎನ್ನುವಷ್ಟರಮಟ್ಟಿಗೆ ಬದಲಾಗಿದ್ದಾನೆ. ಹೀಗಿರುವಲ್ಲಿ ಬಾಹ್ಯ ಬದಲಾವಣೆಯನ್ನು ಸುಮ್ಮನೆ ಒಪ್ಪಿಕೊಂಡು, 'ಆಂತರ‍್ಯದಲ್ಲಿ ನಾ ಬದಲಾಗಲಾರೆ' ಎನ್ನುತ್ತಿರುವ ಈ ಮನುಷ್ಯನಿಗೆ ಏನೆನ್ನಬೇಕೋ?
ವಿಚಿತ್ರ ನೋಡಿ! ಪ್ರೀತಿ ಮೂಲಕ ಮಾನವ ತನ್ನ ಜೀವನದಲ್ಲಿ ಹಲವಾರು ಬದಲಾವಣೆಗೆ ನಾಂದಿ ಹಾಡಬಹುದು ಎಂದು ಗೊತ್ತು. ಇತರರಿಗೆ ಸಹಾಯ ಹಸ್ತ ನೀಡುವುದರ ಮೂಲಕ ಇತರರ ಜೀವನದಲ್ಲಿ ಸಂತೋಷವೆಂಬ ತಂಗಾಳಿ ಬೀಸುವಂತೆ ಮಾಡಬಹುದು ಎಂದು ಗೊತ್ತು. ಮಾನವರು ಪರಸ್ಪರ ಅವಲಂಬಿತರು ಎಂಬುದು ತಿಳಿದ ವಿಷಯ. ಅಂತೆಯೇ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಕಟು ಸತ್ಯದ ಅರಿವೂ ಅವನಿಗುಂಟು. ಹೀಗೆ ಎಲ್ಲವನ್ನು ಅರಿತಿರುವ ಮಾನವ ಸಕಾರಾತ್ಮಕತೆಯ ಮನೋಭಾವನೆಯನ್ನು ಹೊಂದಿ, ಈ ಸಮಾಜವನ್ನು ಪ್ರಶಾಂತತೆಯೆಡೆಗೆ ಕೊಂಡೊಯ್ಯುವುದನ್ನು ಬಿಟ್ಟು, ನಕಾರಾತ್ಮಕ ಬದಲಾವಣೆಯೆ ನಮಗೆ ಮುಖ್ಯ ಎಂಬ ಕುರುಡು ಬದಲಾವಣೆಗೆ, ತನ್ನ ಹಸ್ತವನ್ನು ಚಾಚುತ್ತಿರುವ ಈ ಮನುಜನ ಪ್ರಸ್ತುತ ನಿಲುವು, ಮೂರ್ಖತನದ ಪರಮಾವಧಿ ಎಂದರೆ ತಪ್ಪಾಗಲಾರದು.
ಆದ್ದರಿಂದ ನಮ್ಮೆಲ್ಲರ ಜೀವನವನ್ನು ಒಮ್ಮೆ ಆಂತರಿಕವಾಗಿ ವೀಕ್ಷಿಸಿಕೊಳ್ಳಬೇಕಾಗಿದೆ. ಸ್ವಾರ್ಥಪರ, ಜಂಭ, ಕ್ರೋಧ, ಮದ, ಮತ್ಸರ ಹಾಗೂ ಅಶಾಂತಿಯ ಗುಂಪುಗಳನ್ನು ಕಟ್ಟುವ ಬದಲು ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸೋಣ. ಪ್ರಯತ್ನ ಎಂಬುದು ನಿರಂತರ ಪ್ರಕ್ರಿಯೆ. ಆದ್ದರಿಂದ ಈ ಪ್ರಯತ್ನ ಎಂಬ ಪ್ರಕ್ರಿಯೆಯಲ್ಲಿ ಆಂತರಿಕ ಬದಲಾವಣೆ ಎನ್ನುವ ಕಾಮನ ಬಿಲ್ಲು ನಮ್ಮಲ್ಲಿ ಮೂಡಬೇಕು. ಹೀಗೆ ಆಂತರಿಕ ಬದಲಾವಣೆಯ ಮೂಲಕ ನಿಜ ಮನುಷ್ಯರಾಗಿ ಬಾಳುವುದು ನಮ್ಮೆಲ್ಲರ ಕರ್ತವ್ಯ. ಆ ಕಾಮನ ಬಿಲ್ಲಿನಲ್ಲಿರುವ ಏಳು ಬಣ್ಣಗಳಂತೆ, ನಮ್ಮ ಸದ್ಗುಣಗಳು ಸಹ ನಮ್ಮ ಜೀವನದಲ್ಲಿ ಕಾಮನ ಬಿಲ್ಲಿನ ಹಾಗೆ ಮೂಡಿದಾಗ, ಆಂತರಿಕ ಬದಲಾವಣೆ ತನ್ನಿಂದ ತಾನೇ ಸಾಧ್ಯಾವಾಗುತ್ತದೆ. ಹೀಗೆ ಸಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕಿ, ನವ ಸಮಾಜದ ಅಡಿಗಲ್ಲುಗಳಾಗಿ ಅದರ ಮೇಲೆ ಪ್ರೀತಿ, ಸ್ನೇಹ ಮತ್ತು ಸಂಬಂಧ ಎಂಬ ಸದ್ಗುಣಗಳ ಮನೆಯನ್ನು ನಿರ್ಮಿಸಿ, ನಾವು ಬದಲಾಗುತ್ತಿದ್ದೇವೆ ಎಂಬುದನ್ನು ನಿರೂಪಿಸೋಣ ಈ ನಿರೂಪಣೆಯ ಹಾದಿಯಲ್ಲಿ ಬದಲಾವಣೆ ಎಂದಿಗೂ ನಿಲ್ಲದಿರಲಿ. ಏಕೆಂದರೆ ಬದಲಾವಣೆ ನಿರಂತರ ಪ್ರಕ್ರಿಯೆ ಅಲ್ಲವೇ?
ಇದಕ್ಕೆ ನೀವೇನಂತಿರಾ.........?
————
ದೇವರ ಸೇವಕ ಸ್ವಾಮಿ ರಾಜೇ0ದ್ರ - ಫಾದರ್ ಜಾನ್ ಪ್ರದೀಪ್ ಯೇ.ಸ.
ಮ0ಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಎ0ಬ ಗ್ರಾಮವು ಮದ್ದೂರು ಹಾಗೂ ಮಳವಳ್ಳಿಯ ನಡುವೆ ಇದೆ. ಚಿಕ್ಕರಸಿನಕೆರೆ ಎಂಬ ಈ ಪುಟ್ಟ ಹಳ್ಳಿಗೆ ವಿಶೇಷವಾಗಿ ಮೇ 1 ರ0ದು, ಅಕ್ಟೋಬರ್ 8 ರ0ದು ಹಾಗೂ ಪ್ರತಿ ಭಾನುವಾರದ0ದು ಹಲವಾರು ಕ್ರೈಸ್ತರು ಮತ್ತು ಇತರ ಧರ್ಮಕ್ಕೆ ಸೇರಿದ ಜನರು ಬರುತ್ತಾರೆ. ಇದಕ್ಕೆ ಕಾರಣ ಇಲ್ಲಿ ಸಮಾಧಿಯಾಗಿರುವ ಮೈಸೂರಿನ ಸುತ್ತಮುತ್ತ ಕ್ರೈಸ್ತ ಧರ್ಮ ಪ್ರಚಾರಕರಾಗಿ ಅವಿರತವಾಗಿ ದುಡಿದ ಯೇಸುಸಭೆಗೆ ಸೇರಿದ ಸ್ವಾಮಿ ರಾಜೇ0ದ್ರರವರು.
ದೇವರಿ0ದ ಆಗಮನ
ಸ್ವಾಮಿ ರಾಜೇ0ದ್ರರವರ ಮೂಲ ಹೆಸರು ಅ0ತೋನಿಯೊ ಮರಿಯ ಪ್ಲಾಟೆ. ಇವರು ಇಟಲಿ ದೇಶದ ವೆನಿಸ್ ನಗರದಲ್ಲಿ 25.11.1672 ರಲ್ಲಿ ಪ್ಲಾಟೆ ದ0ಪತಿಗಳಿಗೆ ದೇವರ ಪ್ರೀತಿಯ ಕೊಡುಗೆಯಾಗಿ ಜನಿಸಿದರು. ಅ0ತೋನಿಯೊ ಮರಿಯ ಪ್ಲಾಟೆಯನ್ನು ಹೆತ್ತವರು ದೀಕ್ಷಾಸ್ನಾನ ಕೊಡಿಸಿ ದೈವಭಕ್ತಿಯಲ್ಲಿ ಬೆಳೆಸಿದರು. ‘ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ’ ಎ0ಬ ಕ್ರಿಸ್ತನ ವಾಕ್ಯದಿ0ದ ಹಾಗೂ ಬಾಲ್ಯದಿ0ದಲೇ ಸ0ತ ಫ್ರಾನ್ಸಿಸ್ ಝೇವಿಯರ್ ನವರ ಮಿಷನರಿ ಜೀವನದಿ0ದ ಪ್ರೇರೇಪಿತರಾಗಿ ಎ ಎಂ ಪ್ಲಾಟೆಯವರು 28.01.1690 ರಲ್ಲಿ ಯೇಸುಸಭೆಯ ವೆನಿಸ್ ಪ್ರಾ0ತ್ಯಕ್ಕೆ ಸೇರ್ಪಡೆಗೊ0ಡು 02.02.1708ರ0ದು ಯೇಸುಸಭೆಯಲ್ಲಿ ಅ0ತಿಮ ವ್ರತಗಳನ್ನು ಸ್ವೀಕರಿಸಿದರು. 1709ರ ಜನವರಿಯಲ್ಲಿ ಮೈಸೂರು ಮಿಷನ್ನಿನ ಗುರುಗಳಾಗಿ ಶ್ರೀರ0ಗಪಟ್ಟಣಕ್ಕೆ ಕ್ರಿಸ್ತನ ಸುವಾರ್ತೆ ಸಾರಲು ಆಗಮಿಸಿದರು.
ದೇವರ ಸೇವಾಕಾರ್ಯ
ಮೈಸೂರಿನ ಮಹಾರಾಜರಾಗಿದ್ದ ಚಿಕ್ಕದೇವರಾಜ ಒಡೆಯರ್ (1673-1704) ಆಳ್ವಿಕೆಯ ಅವಧಿಯಲ್ಲಿ ಚಿಕ್ಕರಸಿನಕೆರೆಯಲ್ಲಿ ಹಲವಾರು ಕ್ರೈಸ್ತ ಕುಟು0ಬಗಳಿದ್ದವು. ಅ0ತೋನಿಯೊ ಮರಿಯ ಪ್ಲಾಟೆಯವರು ತನ್ನ ಹೆಸರನ್ನು ಬದಲಾಯಿಸಿಕೊ0ಡು ರಾಜೇ0ದ್ರ ಸ್ವಾಮಿ ಎ0ಬ ಹೆಸರನ್ನು ಸ್ವೀಕರಿಸಲು ಆಗಿನ ಅರಸರೊ0ದಿಗೆ ಇಟ್ಟುಕೊ0ಡಿದ್ದ ಬಾ0ಧವ್ಯವೇ ಕಾರಣವೆನ್ನುತ್ತಾರೆ. ಜೆಸ್ವಿಟ್ ಗುರುಗಳಾದ ಸ್ವಾಮಿ ಚಿನ್ನಮಿ, ಮನುವೇಲ್ ದಕೂನ್ನರವರ0ತೆ ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕ್ರಿಸ್ತನ ಸುಸ0ದೇಶವನ್ನು ಸಾರಿದವರಲ್ಲಿ ಸ್ವಾಮಿ ರಾಜೇ0ದ್ರರವರು ಒಬ್ಬರು. ಚಿಕ್ಕರಸಿನಕೆರೆಯಲ್ಲಿ ನೆಲೆಸಿ ಶ್ರೀರ0ಗಪಟ್ಟಣ ಹಾಗೂ ಆಸುಪಾಸಿನ ಸ್ಥಳಗಳಲ್ಲಿ ಕ್ರೈಸ್ತಭಕ್ತಾದಿಗಳ ಆಧ್ಯಾತ್ಮಿಕ ಜೀವನವನ್ನು 1719 ರವರೆಗೆ ಬಹಳ ಉತ್ಸುಕತೆಯಿ0ದ ಪಾಲನೆ ಮಾಡಿದರು. ತಮ್ಮ ಸೇವಾಕಾರ್ಯವನ್ನು ಶ್ರೀರ0ಗಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸದೆ ಜೆಸ್ವಿಟರ ಪುರಾತನ ಸುವಾರ್ತಾ ಕೇ0ದ್ರಗಳಾದ ಕನಕಪುರದ ಹಾರೋಬೆಲೆ, ಹಾಸನದ ಶೆಟ್ಟಿಹಳ್ಳಿ, ಮಗ್ಗೆ, ಗಾಡೇನಹಳ್ಳಿ ಹಾಗೂ ಮತ್ತಿತರ ಕಡೆಗಳಲ್ಲಿ ಕ್ರೈಸ್ತರ ಸೇವೆಯನ್ನು ಮಾಡಿರುವುದರ ಬಗ್ಗೆ 1709-1710ರ ಜೆಸ್ವಿಟ್ ಪತ್ರಗಳಲ್ಲಿ ಲಿಖಿತವಾಗಿದೆ.
ದೇವರೆಡೆಗೆ ನಿರ್ಗಮನ
ದೇವರಿ0ದ ಆಗಮಿಸಿ, ತನ್ನ ಜೀವಮಾನ ಕಾಲದಲ್ಲಿ ದೇವ-ಮಾನವರ ಸೇವೆಗೈದ ಸ್ವಾಮಿ ರಾಜೇ0ದ್ರರವರು 08.10.1719ರ0ದು ಪುನಃ ದೇವರೆಡೆಗೆ ನಿರ್ಗಮಿಸಿದರು. 07.10.1719ರ0ದು ಚಿಕ್ಕರಸಿನಕೆರೆಯಲ್ಲಿ ಕ್ರೈಸ್ತರೊ0ದಿಗೆ ಜಪಮಾಲೆರಾಣಿಯ ಹಬ್ಬವನ್ನು ವಿಜೃ0ಭಣೆಯಿ0ದ ಕೊ0ಡಾಡಿ ಮಾರನೆಯ ದಿನ 08.10.1719 ರ0ದು ದಿವ್ಯಮರಣವನ್ನು ಅಪ್ಪಿದರು. ಸ್ವಾಮಿ ರಾಜೇ0ದ್ರರವರ ದೇಹವನ್ನು ಚಿಕ್ಕರಸಿನಕೆರೆಯಲ್ಲೇ ಭೂಸ್ಥಾಪನೆ ಮಾಡಲಾಗಿದೆ.
ಚಿಕ್ಕರಸಿನಕೆರೆಗೆ ಬ0ದು ಸ್ವಾಮಿ ರಾಜೇ0ದ್ರರವರ ಬಿನ್ನಹದ ಮೂಲಕ ಪ್ರಾರ್ಥಿಸಿದವರ ಬದುಕಿನಲ್ಲಿ ದೇವರು ಅನೇಕ ಅದ್ಭುತಕಾರ್ಯಗಳನ್ನು ಮಾಡಿದ್ದಾರೆ. ವಿಶೇಷವಾಗಿ ಮಕ್ಕಳಾಗದೇ ಎದೆಗು0ದಿದ ಅನೇಕ ದ0ಪತಿಗಳಿಗೆ ಸ0ತಾನ ಭಾಗ್ಯವು ಸ್ವಾಮಿ ರಾಜೇ0ದ್ರರವರಲ್ಲಿಟ್ಟ ಕೋರಿಕೆಯಿ0ದಾಗಿ ಈಡೇರಿದೆ.
ಸ0ತರ ಪಟ್ಟಕ್ಕೆ ಸೇರುವ ಹಾದಿಯಲ್ಲಿರುವ ಸ್ವಾಮಿ ರಾಜೇ0ದ್ರರವರನ್ನು ಪೋಪ್ ಫ್ರಾನ್ಸಿಸ್‌ನವರು ಇತ್ತೀಚೆಗೆ ‘ದೇವರ ಸೇವಕ’ (Servant of God) ಎ0ಬ ಪದವಿಯನ್ನಿತ್ತು ಗೌರವಿಸಿದ್ದಾರೆ. ಮೈಸೂರು ಧರ್ಮಾಧ್ಯಕ್ಷರಾದ ಅತಿ ವ0ದನೀಯ ಡಾ. ಕೆ. ಎ. ವಿಲಿಯ0ನವರು ಇತ್ತೀಚೆಗೆ ಚಿಕ್ಕರಸಿನಕೆರೆಯನ್ನು ಸ್ವಾಮಿ ರಾಜೇ0ದ್ರರವರ ಪುಣ್ಯಕ್ಷೇತ್ರವೆ0ದು ಘೋಷಿಸಿದ್ದಾರೆ. ತಪಸ್ಸು ಕಾಲವನ್ನು ಅಚರಿಸುತ್ತಿರುವ ನಮಗೆ ಕ್ರಿಸ್ತನಿಗೋಸ್ಕರ ಹಲವಾರು ವೇದನೆ ಹಾಗೂ ಯಾತನೆಯನ್ನು ಸಹಿಸಿ ಎಲ್ಲವನ್ನೂ ದೇವರ ಉನ್ನತ ಮಹಿಮೆಗೋಸ್ಕರ ಮಾಡಿದ ಪೂಜ್ಯ ಸ್ವಾಮಿ ರಾಜೇ0ದ್ರರವರ ಸೇವಾ ಬದುಕು ಕ್ರಿಸ್ತನನ್ನು ಹಿ0ಬಾಲಿಸಲು ಸದಾ ಮಾದರಿಯಾಗಲಿ.
ಸ್ವಾಮಿ ರಾಜೇ0ದ್ರರವರೇ ನಮಗಾಗಿ ಪ್ರಾರ್ಥಿಸಿರಿ
————
ಚುನಾವಣೆ - ಡೇವಿಡ್ ಕುಮಾರ್ .ಎ.
ಖಾಲಿ ಹೊಟ್ಟೆಯ ಮತ ಪೆಟ್ಟಿಗೆಗಳು
ಸಾಲು ಸಾಲಲಿನಿಂತಿವೆ
ಮತ್ತೊಮ್ಮೆ ಬಸುರಾಗಲು
ಹೊಸ ನಾಯಕನ ಹಡೆಯಲು !
ದಂಡು ದಂಡಲಿ ದೌಡಾಯಿಸಿವೆ
ಅಭ್ಯರ್ಥಿ ಕುದುರೆಗಳು
ದಾರಿ ಇಲ್ಲದ ದೇಶದಲಿ
ನಾ ಮುಂದು ತಾ ಮುಂದು !
ಪಕ್ಷಗಳ ಚಿಹ್ನೆಗಳು
ಮಿರಮಿರನೆ ಮಿಂಚಿವೆ
ನಿರೀಕ್ಷೆಯ ನೀಲಾಕಾಶದಿ
ಕುಸುಮಗಳ ಅರಳಿಸಿ
ಮತದಾರ ಪ್ರಭುಗಳೇ...
ನಿಮ್ಮೆದೆಯ ಗುಂಡಿಯ ಒತ್ತಿ
ಗುಂಡು ತುಂಡುಗಳ ಧಿಕ್ಕರಿಸಿ
ಮನೆ ಹಿತ್ತಿಲ ಕುಂಬಳ ಬಳ್ಳಿಯಲೂ
ಹುಟ್ಟಿ ಬರಲಿಹೊಸ ಸೂರ್ಯ !
————
ಕಂದೀಲ ಬೆಳಕಲ್ಲಿ ಜ್ಞಾನ; ಮನೆಮನೆಯಲ್ಲೂ ಭೀಮನ ಧ್ಯಾನ - ಶಿವಮೂರ್ತಿ ಕೆ. ಗುಡದಿನ್ನಿ
"ಶಿಕ್ಷಣ ಅನ್ನೋದು ಹುಲಿಯ ಹಾಲಿನಂತೆ
ಅದನ್ನು ಕುಡಿದವನು ಘರ್ಜಿಸಲೇಬೇಕು"
ಈ ಮಾತುಗಳನ್ನು ಯಾರೋ ಒಬ್ಬ ಹುಟ್ಟಿನಿಂದಲೇ ಮಹಾನ್ ಶಿಕ್ಷಣ ಪ್ರೇಮಿ ತಾನು ಅನುಭವಿಸಿ ತನ್ನ ಅಂತರಾಳದಿಂದಲೇ ಇದನ್ನ ನುಡಿದಿರಬೇಕು ಎನಿಸುತ್ತದೆ. ಈ ವಾಕ್ಯವನ್ನು ಹೇಳಿದ ಆ ಮಹಾನ್ ಶಿಕ್ಷಣ ಪ್ರೇಮಿ ಯಾರಿರಬಹುದು ಎಂದುಕೊಳ್ಳುತ್ತಾ ಮನಸಿಗೆ ಮೊದಲು ಮೂಡಿ ಬಂದ ಹೆಸರು ಬೇರೆ ಯಾರದ್ದೋ ಅಂದುಕೊಂಡಿದ್ದೆ. ಅದು ಬಾಬಾ ಸಾಹಬರೇ ಎಂದು ತಿಳಿದಾಗ ನಾ ಮೊದಲೆ ಊಹಿಸಿದ್ದೆ ಇವರಿಂದಲೇ ಇಂತಹ ಪದವನ್ನು ಹೇಳೋಕೆ ಸಾಧ್ಯ ಎಂದು ಸಂತಸಗೊಂಡಿದ್ದು ಇನ್ನೂ ಎದೆಯಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ.
ಬಾಬಾ ಸಾಹೇಬರ ಬಗ್ಗೆ ಹೊಗಳೋಕೆ ಒಂದೆರಡು ಪುಸ್ತಕ ಬರೆದು ಜನರ ಕೈಗೆ ಕೊಟ್ಟರೆ ಜನತೆ ಬದಲಾದೀತೆ? ಅವರ ಆದರ್ಶಗಳನ್ನು ಪಾಲಿಸಿದಂತಾದೀತೆ ಅಥವಾ ಅವರ ಜೀವನಚರಿತ್ರೆಯನ್ನು ತಿಳಿದುಕೊಂಡರೆ ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಿದಂತಾದೀತೇ?
ಒಬ್ಬ ಸುಪ್ರಸಿದ್ಧ ವ್ಯಕ್ತಿಯನ್ನು ಗೌರವಿಸಬೇಕಾದರೆ ಮೊದಲು ನಾವೆಲ್ಲ ಅವರ ವ್ಯಕ್ತಿತ್ವದ ಬಗ್ಗೆ ಅರಿತುಕೊಂಡಿರಬೇಕು. ಅವರ ಆಶಯದ ಕುರಿತು ಆಲೋಚಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಆ ಆಶಯಗಳನ್ನು ಈಡೀರಿಸಬೇಕಾದ ಕರ್ತವ್ಯ ನನ್ನದು ಅನ್ನೋ ಮನೋಭಾವನೆ ಪ್ರತಿಯೊಬ್ಬರಲ್ಲಿ ಮೂಡಿ, ಆ ಪ್ರಗತಿಯತ್ತ ಸಾಗಲು ನಾವು ಕೂಡ ಪಾಲುದಾರರಾದಾಗ ಮಾತ್ರ ಅವರಿಗೆ ಸಲ್ಲಿಸಬೇಕಾದ ಋಣದ ಬಾರ ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೇವೆ. ಭೂಮಿಯ ಮೇಲೆ ಬದುಕುವ ಪ್ರತಿಯೊಬ್ಬ ಮನುಷ್ಯನಿಗೆ ಆಕಾರ-ವಿಕಾರ ಒಂದೇ ರೀತಿಯಲ್ಲಿ ಇರಲಾರವು ಒಂದೇ ತೆರನಾದ ಬುದ್ದಿಶಕ್ತಿಯೂ ಕೂಡ ಇರಲಾರದು. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಮನೋಭಾವ, ಅವರದ್ದೆ ಆಚಾರ ವಿಚಾರ ಅವರದ್ದೇ ರೀತಿಯ ಜೀವನದ ಶೈಲಿ. ಭಿನ್ನ ಭಿನ್ನ ರೀತಿಯಲ್ಲಿ ಆಹಾರದ ಸಂಗ್ರಹಣೆ ಅವರವರ ರುಚಿಗೆ ತಕ್ಕಂತೆ ದೇವರು ಎಲ್ಲರ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿರುವಾಗ ನಮ್ಮಲ್ಲೇಕೆ ಭೇದ-ಭಾವ, ಬಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತವೆ ಅನ್ನೋದಕ್ಕೆ ಸಂಪೂರ್ಣವಾದ ವಿವರಣೆ ಕಂಡುಕೊಳ್ಳುವಲ್ಲಿ ನಾನು ವಿಫಲನಾಗಿದ್ದೇನೆ.
ಯಾರೇ ಒಬ್ಬ ವ್ಯಕ್ತಿಯಲ್ಲಿ, ಆತನ ಜೀವನದ ಸಾಧನೆ ಅಭಿವೃದ್ಧಿಯ ಇತಿಹಾಸದಲ್ಲಿ ಶಿಖರದಷ್ಟು ಇಚ್ಛಾಶಕ್ತಿ ಮತ್ತು ಶ್ರಮದ ಅಳವಡಿಕೆ ಆಳವಾಗಿ ಅಡಗಿರುತ್ತದೆ ಹೊರತು ಯಾವ ಜಾತಿಧರ್ಮದ ಸಹಾಯದಿಂದ ಆತ ಮೇಲೆ ಬಂದಿರುವುದಿಲ್ಲ. ಬಾಬಾ ಸಾಹೇಬರ ಅಷ್ಟು ಸುಧೀರ್ಘ ಜೀವನದ ಹಾದಿಯಲ್ಲಿ ಒಂದು ದಿನವೂ ಸಹ ಸುಖದ ಸುರುಳಿಗೆ ಬಲಿಯಾಗಲಿಲ್ಲ ತಮ್ಮ ಜೀವನದುದ್ದಕ್ಕೂ ತುಳಿತಕ್ಕೊಳಗಾಗಿ ದಬ್ಬಾಳಿಕೆಯ ನೆರಳಲ್ಲಿ ವಾಸವಿದ್ದು, ಕಷ್ಟದ ಆಪ್ತ ಸ್ನೇಹಿತರಂತೆ ಕಂದೀಲ ಕೋಣೆಯಲ್ಲಿ ವಿದ್ಯೆ ಪಡೆದು, ಇಂದು ಜಗಕೆಲ್ಲ ಜ್ಞಾನದ ಕತ್ತಲೆಗೆ ದೀವಿಗೆಯಾಗಿದ್ದಾರೆ ಎಂದು ಹೇಳಲು ತುಂಬಾನೇ ಹೆಮ್ಮೆ ಎನಿಸುತ್ತದೆ. ಅದ್ಯಾವ ಜನ್ಮದ ಪುಣ್ಯ ಮಾಡಿದ್ದೆವೋ ನಾವು ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿರುವ ವ್ಯಕ್ತಿಯೂ ನಮ್ಮ ನೆಲದಲ್ಲಿಯೇ ಇದ್ದ ಅನ್ನೋದು ಕೂಡ ಒಂದು ಹೆಮ್ಮೆಯ ಪರಿಯೇ ಸರಿ. ಹಿಂದೊಮ್ಮೆ 1923ರ ಆಸುಪಾಸಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಜ ಗಾಯಕವಾಡರು ಬಾಬಾ ಸಾಹೇಬರ ಕುರಿತು ಈ ರೀತಿ ಹೇಳುತ್ತಾರೆ "ನೀವೆಲ್ಲ ನಿಜಕ್ಕೂ ಅದೃಷ್ಟವಂತರು! ಅಂಬೇಡ್ಕರಂತಹ ನಾಯಕರನ್ನು ಪಡೆದ ನೀವು ಧನ್ಯರು ಅವರ ಹಾದಿಯಲ್ಲಿ ನೀವು ನಡೆದರೆ ನಿಮಗೆ ಕೇಡುಗಾಲವಿಲ್ಲ. ಅವರ ನಾಯಕತ್ವ ಪಡೆದ ನೀವು ನಿಜಕ್ಕೂ ಧನ್ಯರೇ ಸರಿ" ಎಂದು ದೇಶದ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಬಾಬಾ ಸಾಹೇಬರನ್ನುದ್ದೇಶಿಸಿ ಹಾಡಿ ಹೊಗಳಿದ್ದನ್ನು ಅವರ ಕುರಿತ ಒಂದು ಪುಸ್ತಕದಲ್ಲಿ ಓದಿದ್ದು ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಓದುತ್ತಾ ಓದುತ್ತಾ ಆವೊತ್ತಿನ ಕ್ಷಣದಲ್ಲಿ ರೋಮಾಂಚನಗೊಂಡು ಅವರ ಸಾಧನೆಗೆ ಚಿರಋಣಿಯಾಗಿದ್ದೇನೆಂದು ಹೇಳಿಕೊಳ್ಳಲು ಮನಸಿನಲ್ಲಿ ಉಲ್ಲಾಸವಾಗುತ್ತಿತ್ತು. ಇಂದಿಗೂ ಆ ಉಲ್ಲಾಸದ ವಲಯಕ್ಕೆ ನನ್ನಲ್ಲಿ ಕೊರತೆಯಿಲ್ಲ.
ಭಾರತೀಯರು ನಾವೆಲ್ಲ ಒಂದೇ ಎನ್ನಬೇಕಾದ ಈ ಪುಣ್ಯ ಭೂಮಿಯಲ್ಲಿ, ಇಂದು ನಾವೆಲ್ಲ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನೋ ಹಗ್ಗಜಗ್ಗಾಟದಲ್ಲಿದ್ದೇವೆ. ಇದರಲ್ಲಿ ಬಲಿಪಶುಗಳಾಗುವುದು ಮಾತ್ರ ಅಮಾಯಕ ಜೀವಗಳೇ. ಅಸಾಮಾನ್ಯ ವ್ಯಕ್ತಿತ್ವದ ಬಾಬಾ ಸಾಹೇಬರನ್ನೆ ಈ ಜಾತಿಧರ್ಮ ಅನ್ನೋ ವಿಷಹುಳಗಳು ದೂರಿದ್ದವು, ಇಂದಿಗೂ ಅವರನ್ನ ದೂರುತ್ತಿವೆ ಅನ್ನೋದು ಸಂಕಟಕರ. ಕೆಲವೊಮ್ಮೆ ಆಳವಾಗಿ ಚಿಂತನೆ ಮಾಡಿದಾಗ ಒಂದು ಸತ್ಯ ಹೊರಬೀಳುತ್ತದೆ. ನಮ್ಮಲ್ಲಿ ಅಂದರೆ ನಮ್ಮ ದೇಶದಲ್ಲಿ ಜನರು ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ಆತನ ಧರ್ಮ ಜಾತಿಯನ್ನು ಆಧಾರವಾಗಿ ಇಟ್ಟುಕೊಂಡು ಒಂದು ವೇಳೆ ಕೆಳಜಾತಿಯಲ್ಲಿ ಹುಟ್ಟಿದವನು ದೇವರೇ ಆದರೂ ಆತನನ್ನ ಪೂಜಿಸುವುದಿಲ್ಲ ಆತ ಎಂಥ ಜಗತ್ಪ್ರಸಿದ್ಧ ಸಾಧನೆ ಮಾಡಿದರೂ ಲೆಕ್ಕಕ್ಕಿಲ್ಲವೆಂಬಂತೆ ಕಾಣುವುದು ದುರಂತ ಕಥೆ. ಈ ಜಾತಿ ಅನ್ನೋ ಎರಡಕ್ಷರ, ಒಬ್ಬ ಸಾಧಕನ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಬಹುಶಃ ನಮ್ಮಲ್ಲಷ್ಟೆ ಕಾಣಬೇಕು. ಧರ್ಮದ ವಿಷಯದಲ್ಲಂತೂ ಎಲ್ಲರೂ ಗಂಭೀರವಾಗಿಯೇ ಇದ್ದಾರೆ. ಯಾರು ಕೂಡ ಧರ್ಮವನ್ನು ಅವಮಾನಿಸಲು ಬಿಡುವುದಿಲ್ಲ. ಒಂದು ವೇಳೆ ಆ ರೀತಿಯ ಅವಮಾನವಾದಲ್ಲಿ ಕೋಮುಗಲಭೆ ಸೃಷ್ಟಿಯಾಗುವಲ್ಲಿ ಯಾವ ಅನುಮಾನವೂ ಇಲ್ಲ.
ಆದರೆ ಅದೇ ಜಾತಿ ಮತ್ತು ಧರ್ಮ ಅನ್ನೋ ಹೆಸರಲ್ಲಿ ವ್ಯಕ್ತಿಯನ್ನು ಅವಮಾನಿಸುವುದು ತಪ್ಪಲ್ಲವೇ ಅನ್ನೋದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಇದರಿಂದ ಹೆಚ್ಚಾಗಿ ಅಮಾಯಕರೇ ಬಲಿಯಾಗುತ್ತಿರುವುದು ಮಾತ್ರ ಚಿಂತಾಜನಕವಾಗಿದೆ. ನಮಗೀಗಾಗಲೇ ತಿಳಿದಿರುವಂತೆ ಈ ತಿಂಗಳು ಅಂದರೆ ಏಪ್ರಿಲ್ 14 ತುಂಬಾ ವಿಶೇಷವಾದ ದಿನ. ಅಂದು ಇಡೀ ಜಗತ್ತೇ ಹಬ್ಬದ ವಾತಾವರಣದಿಂದ ಕೂಡಿರುತ್ತದೆ. ಕಾರಣ ಅಂದಿನ ದಿನ ಇಡೀ ಜಗತ್ತೇ ಇಂಡಿಯಾದತ್ತ ತಲೆಯೆತ್ತಿ ನೋಡುವಂತೆ ಮಾಡಿ ಸಾಕಷ್ಟು ಜನರಿಗೆ ಮಾದರಿಯಾದ ನಮ್ಮ ಬಾಬಾ ಸಾಹೇಬರು ಹುಟ್ಟಿದ ದಿನ. ಆವತ್ತಿನ ದಿನ ಕೇವಲ ಭೀಮರಾವ್ರವರ ಜನನವಷ್ಟೇ ಆಗಲಿಲ್ಲ, ಶೋಷಿತರ ಕತ್ತಲೆಯ ಬಾಳಿಗೆ ಬೆಳಕು ಕೂಡ ಪ್ರಜ್ವಲಿಸಿತು. ದುರಂತ ಎಂದರೆ ಇಂದು ಕೆಲವು ಮಾನವೀಯತೆ ಇರದ ವಿಷಜಂತುಗಳು ಅವರನ್ನ ಸುಖಾಸುಮ್ಮನೆ ದೂರುತ್ತಿದ್ದಾರೆ, ಇದಕ್ಕೆ ಜಾತಿಯೇ ಕಾರಣ ಅನ್ನೋದು ಜಾತಿಯ ಹೆಸರಲ್ಲಿ ಪೆಟ್ಟು ತಿಂದವರಿಗೇ ಗೊತ್ತು. ಒಂದೇ ಮಾತಲ್ಲಿ ಹೇಳೋದಾದರೆ ಬಾಬಾ ಸಾಹೇಬರದು ತಮ್ಮ ಇಡೀ ಜೀವನದುದ್ದಕ್ಕೂ ಒಂದು ಇರುವೆಗೂ ಕೂಡ ನೋವು ಕೊಡದಂತಹ ಮೃದು ಮನಸು. ಅಂತಹ ವ್ಯಕ್ತಿಗೆ ಅಪಪ್ರಚಾರ ಮಾಡುವುದು ಎಷ್ಟು ಸೂಕ್ತ. ಹಾಗೇನಾದರು ಅವರ ವಿರುದ್ದ ಅಪಪ್ರಚಾರ ಮಾಡಿದರೆ ಅಂತವರು ಅನಾಗರಿಕರೇ ಸರಿ. ಯಾವ ನಾಗರಿಕನೂ ಸಹ ಅವರ ವಿರೋಧಿಯಾಗಲು ಸಾಧ್ಯವೇ ಇಲ್ಲ. ಮೊದಲಿನಿಂದಲೂ ಬಾಬಾ ಸಾಹೇಬರು ವಿದೇಶಗಳಲ್ಲಿ ತುಂಬಾ ಪ್ರಸಿದ್ಧಿ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಏಪ್ರಿಲ್ 14ರಂದು ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ನಾನಾ ದೇಶಗಳಲ್ಲಿ ತುಂಬಾ ಪ್ರೀತಿಯಿಂದ, ಅಭಿಮಾನದಿಂದ, ವಿಜೃಂಭಣೆಯಿಂದ ಅವರ ಹುಟ್ಟು ಹಬ್ಬ ಆಚರಿಸಲಾಗುತ್ತದೆ. ಇಂದಿನ ದಿನ ಬಾಬಾ ಸಾಧನೆ ಮತ್ತು ಜ್ಞಾನದ ಸಂಪಾದನೆ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಇಲ್ಲಿ ಸಾಕಷ್ಟು ಸಾಕ್ಷಿಗಳಿವೆ.
ವಿಶ್ವದ ದೊಡ್ಡಣ್ಣ ಎಂದು ಹೆಸರಾದ ಅಮೇರಿಕಾ ದೇಶವು Dr. BR. Ambedkar in colombia, USA University Library ನಿರ್ಮಿಸಿ ಇಂದು ಅವರ ಹೆಸರಲ್ಲಿ ಶಿಕ್ಷಣ ದಾಹವನ್ನು ತೀರಿಸುವ ಪ್ರಯತ್ನದಲ್ಲಿದ್ದರೆ, ಇತ್ತ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆಡಿ. Ambedkar Statue in Sydney, Australia ಎಂಬ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇತರರು ಅವರನ್ನ ಅನುಸರಿಸಲಿ ಎಂಬ ನಿಟ್ಟಿನಲ್ಲಿ ಅಂಬೇಡ್ಕರ್ ರವರಿಗೆ ಗೌರವಸಲ್ಲಿಸಿದ್ದಾರೆ. ಅಂತೆಯೇ ಸುಮಾರು ಇನ್ನೂರು ವರ್ಷಗಳ ಕಾಲ ನಮ್ಮ ದೇಶವನ್ನು ತಮ್ಮ ಆಡಳಿತದಲ್ಲಿಟ್ಟುಕೊಂಡ ಇಂಗ್ಲೆಂಡ್ ದೇಶವು Dr. B.R. Ambedkar London school of Economics ಎಂಬ ದೊಡ್ಡ ವಿದ್ಯಾಸಂಸ್ಥೆಯನ್ನೆ ಕಟ್ಟಿ ಎಷ್ಟೋ ಮಂದಿ ಶಿಕ್ಷಣ ಪ್ರೇಮಿಗಳಿಗೆ ಆಸರೆಯಾಗಿದೆ. ವಿದೇಶದಲ್ಲಿ ಬಾಬಾ ಸಾಹೇಬರಿಗೆ ಸಂದ ಗೌರವವಿದು.
ವಿದೇಶದಲ್ಲಿ ಮೆಚ್ಚುಗೆ ಪಡೆದದ್ದಷ್ಟೆ ಅಲ್ಲದೆ ಆತನ ಹೆಸರಿನಲ್ಲಿ ಶಿಕ್ಷಣವನ್ನು ಹರಡುತ್ತಿದ್ದಾರೆ ಎಂದರೆ ಅದು ಸಾಮಾನ್ಯವೇ. ಆ ಮಟ್ಟಕ್ಕೆ ಅವರು ಮೇಲೆ ಬರಲು ಕಾರಣವೇನು ಎಂದು ಹುಡುಕುವಲ್ಲಿ ನಾವೆಲ್ಲ ಬಹುಶಃ ವಿಫಲರಾಗಿದ್ದೇವೆ ಎನಿಸುತ್ತಿದೆ. ಹಾಗೆಂದು ನಮ್ಮ ದೇಶದಲ್ಲಿ ಅವರ ಹೆಸರಲ್ಲಿ ಪ್ರತಿಮೆ ಮತ್ತು ಶಿಕ್ಷಣ ಸಂಸ್ಥೆ ಇಲ್ಲವೇ? ಅನ್ನೋ ಪ್ರಶ್ನೆ ತಮ್ಮಲ್ಲಿದ್ದರೆ ಅದಕ್ಕೆ ಉತ್ತರ ಹೀಗಿರುತ್ತೆ. ನಿಜ; ಅವರ ಹೆಸರಲ್ಲಿ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿಯೂ ಇವೆ, ಆದರೆ ಅವರ ಆದರ್ಶಗಳಿಗೆ ಎಷ್ಟೋ ಕಡೆ ಅವಮಾನ ಮಾಡುತ್ತಿದ್ದಾರೆ. ಅವರು ಬರೆದಂತಹ ಪ್ರಪಂಚಕ್ಕೆ ಮಾದರಿಯಾದ ಅಂತಹ ಶ್ರೇಷ್ಠವಾದ ಸಂವಿಧಾನವನ್ನು ಹಾಡಹಗಲೇ ಸುಟ್ಟರು. ದೇಶಕ್ಕೆ ಭದ್ರತೆಯಾಗಿರೋ ಸಂವಿಧಾನ ಸುಟ್ಟರು ಎಂದರೆ ಏನ್ ಅರ್ಥ ಅಲ್ವಾ? ಕಾಣದ ದೇವರ ಪೋಟೋಗೆ ಅವಮಾನ ಮಾಡಿದರೇನೆ ಜನ ಬಿಡೋದಿಲ್ಲ. ಅಂತಹುದರಲ್ಲಿ ಸಂವಿಧಾನ ಸುಟ್ಟರೂ ದೇಶದ ಜನ ಸುಮ್ಮನಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ದುರಂತವನ್ನು ನಾವೆಂದದಾದರೂ ಕಂಡಿದ್ದೇವೆಯೇ ಅಥವಾ ಮುಂದೆ ಕಾಣಲು ಸಾಧ್ಯವೇ. ಪ್ರಪಂಚದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ಅಮೇರಿಕಾ, ಆಸ್ಟ್ರೇಲಿಯಾ ಇಂಗ್ಲೆಂಡ್ ದೇಶಗಳೇ ಅವರ ಆದರ್ಶಗಳನ್ನು ಪಾಲನೆ ಮಾಡಿ ಅಷ್ಟೆಲ್ಲಾ ದೊಡ್ಡ ಮಟ್ಟದ ಗೌರವ ನೀಡುವಾಗ, ಸ್ವತಃ ನಮ್ಮ ದೇಶದವರೇ ನಮ್ಮ ದೇಶದ ಅತ್ಯುನ್ನತ ಸಾಧಕವ್ಯಕ್ತಿಯನ್ನು ಅವಮಾನಿಸೋದು ನಿಜಕ್ಕೂ ಖಂಡನೀಯ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಒಬ್ಬ ಸುಪ್ರಸಿದ್ಧ ವ್ಯಕ್ತಿಗೆ ಸಲ್ಲಿಸಬೇಕಾದ ಗೌರವವನ್ನು ನಾಗರಿಕ ವ್ಯಕ್ತಿಯೂ ಸಲ್ಲಿಸೇ ತೀರುತ್ತಾನೆ. ಯಾರೋ ಅನಾಗರಿಕರು ಅವಮಾನ ಮಾಡಿದರು ಎಂದ ಮಾತ್ರಕ್ಕೆ ಅಂಬೇಡ್ಕರ್ ಅವರ ಸಾಧನೆಯ ಫಲ ವಿಫಲವಾಗುವುದೇ? ಸಾಧ್ಯವೇ ಇಲ್ಲ. ಯಾರು ಹೇಗೇ ಇರಲಿ, ಬನ್ನಿ ಸ್ನೇಹಿತರೆ ಬಾಬಾಸಾಹೇರ ಆಶಯಕ್ಕಾಗಿ ದುಡಿಯೋಣ. ಅವರ ಹೋರಾಟದ ರಥವನ್ನು ಎದೆಗುಂದದೆ ಮುಂದಕ್ಕೆ ಸಾಗಿಸೋಣ.
————
ನಾಡೆನ್ನ ಕಣ್ದೆರೆಯಲಿ
ಎಲ್ಲಿ ಮನಸಿಗೆ ಭಯವಿರದೋ, ಎಲ್ಲಿ ತಲೆಯೆತ್ತಿ ತಿರುಗಾಡಬಹುದೋ;
ಎಲ್ಲಿ ಬಿಡುಬೀಸಾಗಿ ಅರಿವು ದೊರೆವುದೋ;
ಎಲ್ಲಿ ಜಗವದು ಪುಟ್ಟಪುಟ್ಟ ಗೂಡುಗಳಾಗಿ ಒಡೆದು ಚೂರಾಗಿಲ್ಲವೋ;
ಎಲ್ಲಿ ನುಡಿಯದು ಸತ್ಯದಾಳದಿಂದೆದ್ದು ಬರುವುದೋ;
ಎಲ್ಲಿ ಲವಲವಿಕೆಯ ಶ್ರಮವದು ಪೂರ್ಣತೆಯನಾಲಂಗಿಸುವುದೋ;
ಎಲ್ಲಿ ಕಾರಣದ ತಿಳಿಧಾರೆಯದು ದಾರಿಗೆಟ್ಟು
ಮಸುಕು ಮರುಭೂಮಿಯ ಉಸುಕೆಂಬ ಶವವಸ್ತ್ರದೆಡೆ ಹಾಯದೋ;
ಎಲ್ಲಿ ಮನ ನಿನ್ನ ಕರವಿಡಿದು
ನಿತ್ಯವಿಸ್ತಾರದ ಚಿಂತನೆ ಚಟುವಟಿಕೆಗಳೆಡೆ ಮುನ್ನಡೆವುದೋ;
ಆ ಒಂದು ಮುಕ್ತಸ್ವರ್ಗಕೆ,
ಓ ಎನ್ನ ತಂದೆ,
ನಾಡೆನ್ನ ಕಣ್ದೆರೆಯಲಿ.
ಮೂಲ: ರವೀಂದ್ರನಾಥ ಟ್ಯಾಗೋರ್
(Where the mind is without fear)
ಅನುವಾದ: ಸಿ ಮರಿಜೋಸೆಫ್
————
ಚುನಾವಣೆಯಲ್ಲಿ ಕ್ರೈಸ್ತರ ಜವಾಬ್ದಾರಿಗಳು - ಇನ್ಫೆಂಟ್ ಕಿಶೋರ್
ಚುನಾವಣೆ ಎಂದಾಕ್ಷಣ ಮತದಾನ, ಪಕ್ಷಗಳು, ಜಾತಿಗಳು, ಅಧಿಕಾರ-ಅಧಿಕಾರಗಳು, ಧರ್ಮಗಳು, ಒಳಿತು-ಕೆಡುಕುಗಳು, ಸೇವೆಗಳು, ಅನುಕೂಲ ಅನಾನುಕೂಲಗಳು ನೆನಪಿಗೆ ಬರುತ್ತವೆ. ನಮ್ಮಲ್ಲಿ ಆಸೆಗಳು, ಗೊಂದಲಗಳು ಮತ್ತು ತಾರತಮ್ಯಗಳು ಉಂಟಾಗುತ್ತವೆ. ನಾವು ಯಾರನ್ನು ಗೆಲ್ಲಿಸಬೇಕು, ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಅಧಿಕಾರಕ್ಕೆ ತರಬೇಕು ಎನ್ನುವ ಯೋಚನೆ ಉಂಟಾಗುತ್ತದೆ.
ಕೆಲವರು ಯಾರು ಒಳ್ಳೆಯ ಸೇವೆ ಸಲ್ಲಿಸಿ ಒಳಿತನ್ನು ಮಾಡುವರೋ, ದೇಶಕ್ಕಾಗಿ ಮಡಿವರೋ ಅವರನ್ನು ಆಯ್ಕೆ ಮಾಡುತ್ತಾರೆ. ಮತ್ತೆ ಕೆಲವರು ಧರ್ಮಗಳ ಸಂಕಟಕ್ಕೆ ಸಿಲುಕಿ ಅಧರ್ಮಿಗಳಂತೆ ವರ್ತಿಸಿ ಮೇಲು- ಕೀಳು, ಜಾತಿ ಭೇದವನ್ನು ಮೇಲೆತ್ತಿ, ಅದಕ್ಕೆ ಪ್ರೋತ್ಸಾಹಿಸುವವರನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಹಣದ ದಾಹದಿಂದ ತುಂಬಿ ಅವರಿಗೆ ಉಪಕರಿಸುವರನ್ನು ಆಯ್ಕೆ ಮಾಡುತ್ತಾರೆ. ಹೀಗೆ ಇವುಗಳು ನಾವು ಚುನಾವಣೆಯಲ್ಲಿ ಮಾಡುವ ನಮ್ಮ ಆಯ್ಕೆಗಳಾಗಿರುತ್ತವೆ.
ಮತದಾನ
ಮತದಾನ ಪ್ರತಿಯೊಬ್ಬರ ಹಕ್ಕು. ನಾವು ಪೌರತ್ವದ ಹಕ್ಕುದಾರರಾಗಿ, ದೇಶದ ಪ್ರಜೆಗಳಾಗಿ, ದೇಶದ ಒಳಿತಿಗಾಗಿ ಮತದಾನ ನೀಡಬೇಕು ಮತ್ತು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿಗಳು ದೇವರ ಪ್ರಜೆಗಳು ದೇವರ ಆಶೀರ್ವಾದಗಳೊಂದಿಗೆ ನಮ್ಮಿಂದಲೇ ಆರಿಸಲ್ಪಟ್ಟವರಾಗಿರುತ್ತಾರೆ. ಅವರು ನಮ್ಮಿಂದಲೇ ಹೊರತು ಅವರಿಂದ ನಾವಲ್ಲ. ಅವರು ನ್ಯಾಯಬದ್ಧರಾಗಿಯೂ, ಬುದ್ಧಿವಂತರಾಗಿಯೂ, ಧರ್ಮನಿಷ್ಠೆಯಿಂದ ಕಾರ್ಯ ಸಲ್ಲಿಸಬೇಕು.
ಹೀಗಿರುವಾಗ ಕ್ರೈಸ್ತರಾಗಿ ಚುನಾವಣೆಯಲ್ಲಿ ನಮ್ಮ ಪಾತ್ರವೇನು? ಚುನಾವಣೆಯನ್ನು ನಾವು ನಂಬಬೇಕೇ, ಪ್ರೋತ್ಸಾಹಿಸಬೇಕೇ, ಚುನಾವಣೆಗೂ ನಮಗೂ ಸಂಬಂಧವಿದೆಯೇ? ಕ್ರೈಸ್ತರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಸರಿಯೇ? ದೇವರಿಗೂ ಚುನಾವಣೆಗೂ ಸಂಬಂಧವಿದೆಯೇ? ದೇವರು ಚುನಾವಣೆಯನ್ನು ಪ್ರೋತ್ಸಾಹಿಸುವರೇ? ಎಂಬುದು ಕ್ರೈಸ್ತರಾಗಿ ನಮಗೆ ಮೂಡಿ ಬರುವ ಪ್ರಶ್ನೆಗಳಿವು.
ಕೈಸ್ತರು ದೇವ ಭಯ-ಭಕ್ತಿಯುಳ್ಳವರು
ಚುನಾವಣೆ ಅಥವಾ ರಾಜಕೀಯವನ್ನು ಭಕ್ತಿಗೂ ದೇವರಿಗೂ ಹೋಲಿಸಬೇಡಿ, ಇವೆರಡೂ ಬೇರೆ ಬೇರೆಯಾಗಿವೆ, ಇವುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎನ್ನುವರು ಕೆಲವರು. ಅಂದರೆ ಅದು ನಾವು ದೇವರನ್ನು ಅಪಾರ್ಥ ಮಾಡಿಕೊಳ್ಳುವಂತೆ ಮಾಡುವುದು.
ರಾಜಕೀಯ ಎಂದಾಕ್ಷಣ ನಮ್ಮಲ್ಲಿ ತಪ್ಪು ಕಲ್ಪನೆಗಳೇ ಹೊರತು ಬೇರೇನಿಲ್ಲ.ಈಗಿನ ಕಾಲಕ್ಕೆ ಅದು ಸರಿಯೇ, ಏಕೆಂದರೆ ಜಗದಲಿ ನಡೆಯುತ್ತಿರುವುದೂ ಅದೇ ರೀತಿ ಆಗಿದೆ. ರಾಜಕೀಯಕ್ಕೆ ಅರ್ಥವೇ ಇಲ್ಲದಂತಾಗಿದೆ ಹಾಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಸಮಸ್ಯೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ ದೇವರಿಗೂ ರಾಜಕೀಯಕ್ಕೂ ಸಂಬಂಧವಿದೆ. ಅದು ಎಂತಹ ಸಂಬಂಧ?
ರಾಜಕೀಯವು ಒಳ್ಳೆಯ ಅಧಿಕಾರ, ಒಳ್ಳೆಯ ಆಡಳಿತ, ದೈವ ಸಾಮ್ರಾಜ್ಯವನ್ನು ತನ್ನ ಜನರಿಗೆ ನೀಡುವಂತಾಗಿದೆ.
ದೇವರು ರಾಜಕೀಯದಲ್ಲಿ ಆಸಕ್ತರಲ್ಲ ಅವರಿಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರೂ ನಾವು ದೇವರನ್ನು ಅವರ ವಾಕ್ಯವಾದ ಧರ್ಮಗ್ರಂಥವನ್ನು ನಂಬುವುದಿಲ್ಲ. ನಿಜವಾಗಿ ತಿಳಿಯುವುದಾದರೆ ದೇವರಿಗೂ ರಾಜಕೀಯಕ್ಕೂ ಒಡನಾಟವಿದೆ. ದೇವರೇ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಗಮನಿಸುವುದಾದರೆ ನಾವು ದೇವರ ಸಾಮ್ರಾಜ್ಯ ಈ ಧರೆಗೆ ಬರಲಿ, ದೇವರ ಆಳ್ವಿಕೆ ಈಗಲೂ ಎಂದೆಂದಿಗೂ ಇರಲಿ ಎನ್ನುತ್ತಾ ಪ್ರಾರ್ಥಿಸುತ್ತೇವೆ.
ಬಹುಶಃ ರಾಜಕೀಯಕ್ಕೂ, ಚುನಾವಣೆಗೂ, ದೇವರಿಗೂ ದೂರದ ಸಂಬಂಧವಿರಬಹುದು. ಆದರೆ ನಾವು ಕ್ರೈಸ್ತರು ಪ್ರತಿಯೊಂದು ಕ್ಷಣ ಕ್ಷಣವೂ ದೇವರ ರಾಜ್ಯವನ್ನು, ಅವರ ಆಳ್ವಿಕೆಯನ್ನು ಬಯಸುವವರಾಗಿದ್ದೇವೆ. ಕೇವಲ ಐದು ವರ್ಷಕ್ಕೆ ಒಮ್ಮೆಯಲ್ಲ ಬದಲಿಗೆ ಎಂದೆಂದಿಗೂ ಎಂದು ಬೇಡುತ್ತೇವೆ.
ಆದ್ದರಿಂದ ಮತದಾನವು ನಾವು ಮಾಡುವ ಒಂದು ಚಿಕ್ಕ ಸೇವೆ ಸಮಾಜಕ್ಕೆ ದೇಶಕ್ಕೆ ಕೊಡುವ ಉಡುಗೊರೆಯಾಗಿದೆ. ದೇಶಕ್ಕಾಗಿ ಮಾಡುವ ಒಂದು ಪುಟ್ಟ ಜವಾಬ್ದಾರಿಯಾಗಿದೆ.
ಒಳ್ಳೆಯ ನಂಬಿಗಸ್ಥರಾಗಿ, ದೇವರ ಪ್ರಜೆಗಳಾಗಿ, ದೇಶದ ಪ್ರಜೆಗಳಾಗಿ, ನಮ್ಮ ಹಕ್ಕಿನ ಸಮಾನತೆಯನ್ನರಿತು, ದೇಶದ ಒಳಿತಿಗಾಗಿ ಸರಿಯಾದ ಆಯ್ಕೆ ಮಾಡುವುದು ಹಾಗೂ ಒಳ್ಳೆಯ ಅಧಿಕಾರಿಯನ್ನು ದೇಶಕ್ಕೆ ನಮ್ಮೆಲ್ಲರ ಉಡುಗೊರೆಯಾಗಿ ನೀಡುವುದು ನಮ್ಮ ಜವಾಬ್ದಾರಿ.
ಧರ್ಮಶಾಸ್ತ್ರದಲ್ಲಿ ರಾಜಕೀಯ ಹಾಗೂ ಚುನಾವಣೆಯ ಬಗ್ಗೆ ಉಲ್ಲೇಖವಾಗಿರುವ ಈ ಕೆಳಕಂಡ ಕೆಲವು ವಿವರಗಳನ್ನು ಗಮನಿಸೋಣ.
1. ಸರ್ಕಾರಕ್ಕೆ ಸಲ್ಲತಕ್ಕ ಸೇವೆ: ರೋಮನ್ನರಿಗೆ ಬರೆದ ಪತ್ರ 13ನೇ ಅಧ್ಯಾಯದಲ್ಲಿ, ಪ್ರತಿಯೊಬ್ಬನು ತನ್ನ ಮೇಲಿನ ಅಧಿಕಾರಿಗಳಿಗೆ ಅಧೀನನಾಗಿರಬೇಕು. ಅಧಿಕಾರ ಎಲ್ಲವೂ ಬರುವುದು ದೇವರಿಂದಲೇ ಈಗಿರುವ ಅಧಿಕಾರಿಗಳು ದೇವರಿಂದಲೇ ನೇಮಕಗೊಂಡವರು ಎನ್ನಲಾಗಿದೆ.
2. ಮತದಾನವು ಎಲ್ಲರ ಸಮಾನತೆ ಮತ್ತು ಹಕ್ಕುಗಳನ್ನು ಗುರುತಿಸುತ್ತದೆ ಎಂದು ಧರ್ಮೋಪದೇಶಕಾಂಡ 10ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.
3. ನಾನು ಯಾವ ನಗರಕ್ಕೆ ನಿಮ್ಮನ್ನು ಸಾಗಿಸಿದ್ದೇನೋ ಅದರ ಕ್ಷೇಮವನ್ನು ಹಾರೈಸಿ. ಅದಕ್ಕಾಗಿ ಸರ್ವೇಶ್ವರನಾದ ನನ್ನನ್ನು ಪ್ರಾರ್ಥಿಸಿರಿ. ಅದರ ಕ್ಷೇಮವೇ ನಿಮ್ಮ ಕ್ಷೇಮ. ಇದು ನಿಮ್ಮ ದೇವರಾದ ನನ್ನನ್ನು ಆದರಿಸುವ ಒಂದು ಮಾರ್ಗವಾಗಿದೆ ಎಂದು ಯೆರೆಮಿಯ ಗ್ರಂಥ 29ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.
4. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ-ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸನಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು ನಮ್ಮ ಉದ್ಧಾರಕರಾದ ದೇವರಿಗೆ ಮೇಲುಗೈಯಾದುದು ಎಂದು ತಿಮೊಥಿಯರಿಗೆ ಬರೆದ ಮೊದಲ ಪತ್ರ 2ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.
5. ಬಿಡು ಕೆಟ್ಟದನ್ನು, ಹಾಡು ಒಳಿತನ್ನು, ಹುಡುಕು ಶಾಂತಿಯನ್ನು, ಬೆನ್ನಟ್ಟು ಅದನ್ನು ಸಜ್ಜನರನ್ನು ಪ್ರಭು ಕಟಾಕ್ಷಿಸುವನು. ಅವರ ಮೊರೆಗಾತ ಕಿವಿಗೊಡುವನು ದುರ್ಜನರಿಗಾದರೋ ಪ್ರಭು ವಿಮುಖನು, ಅವರ ಹೆಸರನ್ನು ಧರೆಯಿಂದ ಅಳಿಸುವನು ಎಂದು 34ನೇ ಕೀರ್ತನೆಯಲ್ಲಿ ಹೇಳಲಾಗಿದೆ.
6. ಈ ಧರೆಗೆ ನೀವೇ ಉಪ್ಪು, ಉಪ್ಪೇ ಸಪ್ಪೆಯಾಗಿ ಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿ ಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ, ದಾರಿಗರು ಅದನ್ನು ತುಳಿದು ಬಿಡುತ್ತಾರೆ. ನಮ್ಮ ಸಮಾಜವನ್ನು ಒಳ್ಳೆಯದಕ್ಕೆ, ಒಳ್ಳೆಯ ಮತದಾನಕ್ಕೆ ಉತ್ತೇಜನ ಪಡಿಸುವ ರೀತಿ ಎಂದು ಮತ್ತಾಯನ ಸುವಾರ್ತೆ 5ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.
7. ನಮ್ಮ ಪ್ರಜಾಪ್ರಭುತ್ವದ ಫಲಗಳನ್ನು ಅನುಭವಿಸುವವರು, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಲ್ಲಿ ಮತ್ತು ಅದರ ಉನ್ನತಿಗೆ ಶ್ರಮಿಸಬೇಕು. ಇದೊಂದು ತೆಗೆದು ಕೊಳ್ಳಬೇಕಾದ ಒಂದು ಬಹುದೊಡ್ಡ ಸವಾಲಾಗಿದೆ.
8. ಮತದಾನವು ಫಲಿತಾಂಶವನ್ನು ಪ್ರಭಾವಿಸುತ್ತದೆ. ನಮ್ಮ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಅಲ್ಲದೆ ನಮ್ಮ ಕೊರತೆಯನ್ನು ನಾವೇ ನಿಭಾಯಿಸಬೇಕು ಎಂದು ಲೂಕನು ಬರೆದ ಸುವಾರ್ತೆ 10ನೇ ಅಧ್ಯಾಯದಲ್ಲಿ ಇದಕ್ಕೆ ಅನುಗುಣವಾಗಿ ವಿವರಿಸಲಾಗಿದೆ.
9. ದಾನಿಯೇಲನ ಗ್ರಂಥದಲ್ಲಿ ರಾಜ್ಯ ಆಡಳಿತ ನಿರ್ವಹಣೆಗಾಗಿ 120 ಮಂದಿ ಪ್ರಾಂತಾಧಿಪತಿಗಳನ್ನು ಆಯಾಯ ಪ್ರಾಂತ್ಯಗಳ ಮೇಲೆ ನೇಮಿಸಿದ್ದನು. ಇವರ ಮೇಲ್ವಿಚಾರಣೆಗಾಗಿಯೂ ತನ್ನ ಹಿತಾಸಕ್ತಿಯ ದೃಷ್ಟಿಯಿಂದಲೂ ಮೂವರು ಮುಖ್ಯ ಅಧಿಕಾರಿಗಳನ್ನು ನೇಮಿಸಲು ನಿಶ್ಚಯಿಸಿದನು.
10. ಚಕ್ರವರ್ತಿ ಔಗುಸ್ತನು ಜನಗಣತಿ ಆಗಬೇಕು ಎಂದು ಆಜ್ಞೆ ಹೊರಡಿಸಿದಾಗ ಮೊಟ್ಟಮೊದಲ ಜನಗಣತಿ ಸಿರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ ನಡೆಯಿತು. ಆಗ ಜೋಸೆಫನು ಗರ್ಭವತಿಯಾದ ಮರಿಯಳನ್ನು ಕರೆದುಕೊಂಡು ನಜರೆತ್ತಿನಿಂದ ಬೆತ್ಲೆಹೆಮಿಗೆ ಹೊರಟನು.
11. ಆದಿಕಾಂಡದಲ್ಲಿ ದೇವರು ಜೋಸೆಫನನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದು ಉಲ್ಲೇಖವಾಗಿದೆ.
ನಮಗಿರುವ ಎಲ್ಲ ಸಂಪನ್ಮೂಲಗಳನ್ನು ಉಪಯೋಗಿಸಲು ಮತದಾನವು ದೇವರು ಕೊಟ್ಟ ಒಂದು ಕೊಡುಗೆ. ಒಂದು ಅನುಚಿತ ಮತದಾನವು ಅಥವಾ ಮತದಾನ ಮಾಡದಿರುವುದು ದೇವರ ಕೊಡುಗೆಯನ್ನು ನಿರಾಕರಿಸಿದಂತೆ ಅಥವಾ ಹಾಳು ಮಾಡಿದಂತೆ ಆದ್ದರಿಂದ ದೇವರು ಹೇಳಿದ ಹಾಗೆ ಚಕ್ರವರ್ತಿಗೆ ಸಲ್ಲತಕ್ಕದನ್ನು ಚಕ್ರವರ್ತಿಗೆ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ.
————
ಸಂತ ಯೊವಾನ್ನರ ಶುಭಸಂದೇಶ – 8 - ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
ಯೊವಾನ್ನರ ಶುಭಸಂದೇಶದ ಕರ್ತೃ
ಇಲ್ಲಿಯವರೆಗೆ ನಾವು ನೋಡಿದಂತಹ ಯಾವ ಸಾಕ್ಷಿಗಳು ಕೂಡ ಈ ಶುಭ ಸಂದೇಶವನ್ನು ಬರೆದಿದ್ದು ಜೆಬೆದಾಯನ ಮಗ ಸಂತ ಯೊವಾನ್ನಎಂದು ಹೇಳುವುದಿಲ್ಲ. ಯೊವಾನ್ನ- ಜೆಬೆದಾಯನ ಮಗ, ಯೇಸುವಿನ ಆಪ್ತ ಶಿಷ್ಯ. ಸಂತ ಯೊವಾನ್ನರ ಶುಭ ಸಂದೇಶ ನಮಗೆ ತಿಳಿಸುತ್ತದೆ ಈ ಆಪ್ತ ಶಿಷ್ಯ ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಉಪಸ್ಥಿತನಿದ್ದ ಎಂದು. ಬೇರೆ ಮೂರು ಶುಭ ಸಂದೇಶಗಳ ಪ್ರಕಾರ ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಕೇವಲ ಆಯ್ದುಕೊಂಡ 12 ಮಂದಿ ಪ್ರೇಷಿತರು ಮಾತ್ರ ಇದ್ದರು. ಹಾಗಾದರೆ 12 ಮಂದಿಯಲ್ಲಿ ಆಪ್ತ ಶಿಷ್ಯ ಕೂಡ ಒಬ್ಬ ಎಂದು ಹೇಳಬಹುದೇ? ಹಾಗಾದರೆ ಯಾರು ಈ ಆಪ್ತ ಶಿಷ್ಯ? ಬಹುಶಃ ಆಪ್ತ ಶಿಷ್ಯ ಜೆಬೆದಾಯನ ಮಗ ಯೊವಾನ್ನ ಇರಬಹುದು. ಏಕೆಂದರೆ ಮೂರು ಶುಭಸಂದೇಶಗಳಲ್ಲಿ ವಿಶೇಷವಾಗಿ 4ನೇ ಶುಭಸಂದೇಶದಲ್ಲಿ ಕೂಡ ಈತನ ಕುರುಹುಗಳನ್ನು ಕಾಣಬಹುದು. ಸಂತ ಯೊವಾನ್ನರ ಶುಭಸಂದೇಶ 13:1 ಅಲ್ಲಿ ನಾವು ಕಾಣುತ್ತೇವೆ; ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಭಾಗವಹಿಸಿದ ಎಲ್ಲರೂ ಆತನ ಶಿಷ್ಯರು ಎಂದು. ಇಲ್ಲಿ ಇನ್ನೊಂದು ನಾವು ಗಮನಿಸಬೇಕಾದದ್ದು ಎರಡು ವಿಶೇಷವಾದ ಪದಗಳನ್ನು;
1)ಶಿಷ್ಯ
2) ಹಿಂಬಾಲಕ.
ಎರಡು ಪದಗಳ ಬಳಕೆಯನ್ನು ಶುಭಸಂದೇಶದ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಯೇಸುಸ್ವಾಮಿಯನ್ನು ಅನೇಕರು ಹಿಂಬಾಲಿಸುತ್ತಿದ್ದರು ಅವರನ್ನ ಹಿಂಬಾಲಕರು ಆಂಗ್ಲ ಭಾಷೆಯಲ್ಲಿ Disciples ಎಂದು ಕರೆಯಲಾಗಿದೆ. ಅದೇ ಯೇಸುಸ್ವಾಮಿ ಆರಿಸಿಕೊಂಡ ತನ್ನ ಆಪ್ತ ಶಿಷ್ಯರನ್ನ ಆಂಗ್ಲ ಭಾಷೆಯಲ್ಲಿ Apostles ಎಂದು ಕರೆಯಲಾಗಿದೆ. ಇಲ್ಲಿ ಯೊವಾನ್ನ ಯಾವ ಗುಂಪಿಗೆ ಸೇರುತ್ತಾನೆ ಎನ್ನುವುದು ಚರ್ಚಾ ವಸ್ತು. ಹಾಗಾದರೆ ಈ ಕಡೆಯ ರಾತ್ರಿಯ ಭೋಜನದ ಸಮಯದಲ್ಲಿ ಯಾರು ಇದ್ದರು? ಎನ್ನುವುದನ್ನು ಕಾಣಬೇಕಾಗಿದೆ.
ಅ) ಪ್ರೇಷಿತರ ಕಾರ್ಯಕಲಾಪ 1:22-23 ರಲ್ಲಿ ಇಲ್ಲಿ ಇಬ್ಬರ ಹೆಸರುಗಳನ್ನು ಉಲ್ಲೇಖಿಸಿ ಇವರು ಯೇಸುವಿನ ಎಲ್ಲಾ ಹಾಗೂಹೊಗುಗಳಲ್ಲಿ ಜೊತೆಗಿದ್ದು ಸಾಕ್ಷಿಗಳಾಗದವರು ಎಂದು ಹೇಳಲಾಗಿದೆ. ಇವರು ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಇದ್ದರೆ?
ಆ) ಯೇಸು ಸ್ವಾಮಿ ಎಪ್ಪತ್ತು ಮಂದಿಯನ್ನು ಸೇವಕಾರ್ಯಕ್ಕೆ ಕಳುಹಿಸುವುದನ್ನು ನೋಡಿದ್ದೇವೆ. ಇವರಲ್ಲಿ ಯಾರಾದರೂ ಕಡೆಯ ರಾತ್ರಿಯ ಭೋಜನದ ಸಮಯದಲ್ಲಿ ಇದ್ದರೆ?
ಇ) ಯೇಸುಸ್ವಾಮಿ ಕಡೆಯ ರಾತ್ರಿಯ ಭೋಜನವನ್ನು ಮೇಲ್ಕೋಣೆಯಲ್ಲಿ ಜೇರೂಸಲೇಮ್ ನಗರದಲ್ಲಿ ಆಚರಿಸಿದರು ಎಂದು ತಿಳಿದು ಬರುತ್ತದೆ. ಬಹುಶಃ ಆಚರಣೆಗೆ ಮನೆ ಕೊಟ್ಟ ಯಜಮಾನನನ್ನ ಕೂಡ ಈ ಭೋಜನಕ್ಕೆ ಆಹ್ವಾನಿಸಿರಬೇಕು ಅವರನ್ನು ಯೇಸುಸ್ವಾಮಿಯ ಪಕ್ಕದಲ್ಲಿ ಕೂರಿಸಿರಬೇಕು. ಈ ಎಲ್ಲಾ ಕಾರಣಗಳಿಂದ ಯೊವಾನ್ನ- ಪ್ರೇಷಿತ, ಜೆಬೆದಾಯನ ಮಗ, ಯೇಸುವಿನ ಆಪ್ತ ಶಿಷ್ಯನೇ ಈ ಶುಭ ಸಂದೇಶವನ್ನು ಬರೆದಿರುವುದು ಎನ್ನುವುದು ವಿವಾದಾತ್ಮಕವಾಗಿದೆ. ಫೋಲಿಕ್ರೇಟ್ಸ್ ಅವರು ಈ ಶುಭ ಸಂದೇಶದ ಕರ್ತೃ ಒಬ್ಬ ಯಾಜಕ ಎಂದು ತಿಳಿಸುತ್ತಾರೆ. ಕಾರಣಗಳು ಹೀಗಿವೆ:
1) ಯೊವಾನ್ನರ ಶುಭಸಂದೇಶ 17 ಅಧ್ಯಾಯದ್ದಲ್ಲಿ ನಾವು ಕಾಣುತ್ತೇವೆ ಯೇಸುಸ್ವಾಮಿ ಶಿಷ್ಯರಿಗೋಸ್ಕರ ಪ್ರಾರ್ಥನೆ ಮಾಡುತ್ತಾರೆ, ಇದನ್ನು ಯಾಜಕೀಯ ಪ್ರಾರ್ಥನೆ ಎಂದು ಹಲವರು ಕರೆಯುತ್ತಾರೆ.
2) ಯೊವಾನ್ನರ ಶುಭಸಂದೇಶ 11:49- 52 ನಲ್ಲಿ ಯೇಸುಸ್ವಾಮಿಯ ಸಾವಿನ ಉದ್ದೇಶವನ್ನು ಕಾಯಫನು ಹೇಳುವುದರ ಬಗ್ಗೆ ಬೈಬಲ್ ವಿದ್ವಾಂಸರು ಈ ಉಲ್ಲೇಖವನ್ನು ಕರ್ತೃವಿನ ಕಾಯಕಕ್ಕೆ ತಾಳೆ ಹಾಕುತ್ತಾರೆ. ಇದನ್ನು ಒಬ್ಬ ಯಾಜಕ ಬರೆದಿರಬಹುದು ಎಂದು ತಿಳಿಸುತ್ತಾರೆ.
3) ಈ ಶುಭಸಂದೇಶದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಯಹೂದಿ ಹಬ್ಬಗಳಿಗೆ ಕೊಡಲಾಗಿದೆ. ಇದರಿಂದಲೂ ಕೂಡ ಶುಭ ಸಂದೇಶದ ಕರ್ತೃ ಒಬ್ಬ ಯಾಜಕ ಎಂದು ತಾಳೆ ಹಾಕುತ್ತಾರೆ.
4) ಯೊವಾನ್ನರ ಶುಭಸಂದೇಶ 18:15-17ರಲ್ಲಿ ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನ ಕುರಿತು ಮಾತನಾಡಲಾಗಿದೆ. ಈ ಇನ್ನೊಬ್ಬ ಶಿಷ್ಯ ಯೊವಾನ್ನ! ಇಲ್ಲೂ ಕೂಡ ಕರ್ತೃ ಒಬ್ಬ ಯಾಜಕ ಒಂದು ತಾಳೆ ಹಾಕುತ್ತಾರೆ. ಇವೆಲ್ಲವನ್ನು ಗಮನಿಸಿದ ನಮಗೆ ಒಂದು ಪ್ರಶ್ನೆ ಉದ್ಭವಿಸುವುದು ಸಹಜ. ಈ ಯೊವಾನ್ನ - ಪ್ರೇಷಿತ, ಜೆಬೆದಾಯನ ಮಗ ಏನಾದರೂ ಯಾಜಕ ಕುಲದ ಮೂಲದವನೋ? ಎನಿಸುತ್ತದೆ. ಆದರೆ ಒಬ್ಬ ಯಾಜಕ ಮೀನು ಹಿಡಿಯುವವನು ಆಗಲು ಸಾಧ್ಯವಿಲ್ಲ. ನಾವು ಮಾತನಾಡುತ್ತಿರುವಂತಹ ಪ್ರೇಷಿತ ಯೊವಾನ್ನ ಮೂಲತಃ ಮೀನು ಹಿಡಿಯುವವ. ಜೆಬೆದಾಯನ ಮಗ ಯೊವಾನ್ನ ಈ ಶುಭ ಸಂದೇಶವನ್ನು ಬರೆದಿದ್ದರೆ ಏಕೆ ಅವರ ಹೆಸರು ಇಲ್ಲಿ ಉಲ್ಲೇಖವಾಗಿಲ್ಲ? ಎನ್ನುವುದು ಪ್ರಶ್ನೆ. ಇದನ್ನ ಬೈಬಲ್ ವಿದ್ವಾಂಸರು Self effacement theory ಎನ್ನುತ್ತಾರೆ. ಹಾಗಂದರೆ ಸ್ವಯಂ ನಾಶಪಡಿಸಿಕೊಳ್ಳುವಂತಹ ಸಿದ್ಧಾಂತ - ಇದು ತನ್ನನ್ನು ತಾನು ಗುರುತಿಸಿಕೊಳ್ಳದೇ ಇರುವುದು ಅಥವಾ ತನ್ನ ಕುರುಹುವನ್ನು ನಾಶಪಡಿಸುವುದಾಗಿದೆ. ಕರ್ತೃ ವಿಧೇಯತೆ ವಿನಮ್ರತೆಗೋಸ್ಕರ ತನ್ನನ್ನು ತಾನು ಎಲ್ಲೂ ಕೂಡ ಗುರುತಿಸಿಕೊಳ್ಳುವುದಿಲ್ಲ. ಇದು ಆತನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಅದಕ್ಕಾಗಿ ನಾವು ಈ ವ್ಯಕ್ತಿ ಯಾರನ್ನು ಕೂಡ ಗುರುತಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಅನೇಕ ವ್ಯಕ್ತಿಗಳ ಹೆಸರುಗಳು ಇಲ್ಲಿ ಉಲ್ಲೇಖವಾಗಿದೆ. ಹೆಸರು ಹೇಳಿಕೊಳ್ಳದೆ ಇರುವುದನ್ನು ಅನಾಮಧೇಯತೆ ಎಂದು ಕರೆಯಲಾಗುತ್ತದೆ. ಈ ಶುಭಸಂದೇಶದಲ್ಲಿ ಅನಾಮಧೇಯತೆಯು ಕೂಡ ವಿಶೇಷವಾದಂತಹ ದೈವಶಾಸ್ತ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.
ಎರಡನೇ ಅಭಿಪ್ರಾಯ ಜೆಬೆದಾಯನ ಮಗ ಯೊವಾನ್ನ ಮತ್ತು ಆಪ್ತ ಶಿಷ್ಯ ಯೊವಾನ್ನ ಇಬ್ಬರೂ ಒಬ್ಬರೇ ಆಗಿರುವುದರಿಂದ ಇದು ಆಗಬಹುದು ಎಂದು ತಿಳಿದು ಇದನ್ನ ಬರೆಯಲಾಗಿಲ್ಲ ಎನಿಸುತ್ತದೆ. ಹಾಗಾದರೆ ಜೆಬೆದಾಯನ ಮಗ ಈ ಶುಭಸಂದೇಶದ ಕರ್ತೃವಾಗಿದ್ದರೆ ಏಕೆ ಶುಭಸಂದೇಶ ಈ ವ್ಯಕ್ತಿಯು ಹಲವು ಸನ್ನಿವೇಶಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು ಕೂಡ ಹೆಸರು ಉಲ್ಲೇಖಿಸಿಲ್ಲ? ಉದಾಹರಣೆ - ಯೇಸುವಿನ ಮಹಿಮಾ ರೂಪಾಂತರ, ಗೆತ್ಸೇಮಿನ ತೋಪಿನಲ್ಲಿ ಪ್ರಾರ್ಥನೆ... ಮಾರ್ಕ 9 10:39 - ಇಲ್ಲಿ ತಿಳಿಯುತ್ತದೆ ನಮಗೆ ಯಕೋಬನೊಂದಿಗೆ ಯೊವಾನ್ನನು ರಕ್ತ ಸಾಕ್ಷಿಯಾಗಿ ಮಣಿಯ ಬೇಕೆಂದು. ಯೊವಾನ್ನರ ಶುಭಸಂದೇಶ 21:20-23ರಲ್ಲಿ ತಿಳಿಸುವಂತೆ ಈ ಆಪ್ತ ಶಿಷ್ಯನಿಗೆ ಸಾವು ಇಲ್ಲ ಎಂದು ತಿಳಿಯುತ್ತದೆ.
ಸಾಮಾನ್ಯವಾಗಿ ಅನೇಕ ವಿದ್ವಾಂಸರು ಶುಭ ಸಂದೇಶದ ಕರ್ತೃ ಪ್ಯಾಲೆಸ್ಟೀನ್ ದೇಶದ ಯಹೂದಿ, ಈತ ಬಹುಷ್ಯ ಜೆರುಸಲೇಮ್ ನಿವಾಸಿಯಾಗಿದ್ದು, ಈತನಿಗೆ ಯಹೂದ್ಯ ದೈವಶಾಸ್ತ್ರದ ಹಾಗೂ ಯಹೂದಿ ಹಬ್ಬಗಳ ಒಳ್ಳೆಯ ಜ್ಞಾನವಿದ್ದು, ಯೇಸುವಿನ ಸನ್ನಿವೇಶಗಳನ್ನ ಅತ್ಯಂತ ಎತ್ತರವಾದ ದೈವೀಶಾಸ್ತ್ರದ ಚಿಂತನೆಗಳೊಂದಿಗೆ ಈ ಶುಭ ಸಂದೇಶವನ್ನು ಬರೆದಿದ್ದಾನೆ ಎಂದು ತಿಳಿದು ಬರುತ್ತದೆ.
————
Friday, 5 April 2019
ಪರಿವರ್ತನೆ! ಫಾದರ್ ಪಿ ವಿಜಯಕುಮಾರ್, ಬಳ್ಳಾರಿ
ಪರಿವರ್ತನೆ ಜಗದ ನಿಯಮ. ಪರಿವರ್ತನೆ ಸ್ಥಗಿತಗೊಂಡರೆ ಜಗತ್ತೇ ಒಂದು ಕ್ಷಣ ಸ್ತಬ್ಧವಾಗಬಹುದೇನೋ! ಈ ಪ್ರಕೃತಿಯ ಮಡಿಲಿನಲ್ಲಿ ಮಾನವನ ಪರಿವರ್ತನೆ ನಿರಂತರವೂ ಸಾಗುತ್ತಲೇ ಇದೆ. ಅದು ಸಕಾರಾತ್ಮಕವಾದಾಗ ಬದುಕು ಎಡಬಿಡದೆ ನೈಜ ಪ್ರಗತಿ ಹಾಗೂ ಪರಿಪೂರ್ಣತೆಯತ್ತ ಸಾಗುತ್ತಲಿರುತ್ತದೆ. ಆದರೆ ಇಂದು ಮಾನವನ ಭೌತಿಕ ಹಾಗೂ ಸುತ್ತಮುತ್ತಲಿನ ಬದಲಾವಣೆಗಿಂತ ಆಂತರಿಕ ಬದಲಾವಣೆ ಬಹುಮುಖ್ಯ. ಇದನ್ನು ಕಥೋಲಿಕ ಧರ್ಮಸಭೆಯ ಧಮೋಪದೇಶ (ಸಿಸಿಸಿ) 1430ರಲ್ಲಿ conversion of heart, interior conversion"(ಹೃದಯ ಪರಿವರ್ತನೆ ಹಾಗೂ ಆಂತರಿಕ ಪರಿವರ್ತನೆ) ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ. ನೈಜ ಪರಿವರ್ತನೆಯಲ್ಲಿ ಮಾನವನ ನಡೆ-ನುಡಿ, ಅಲೋಚನೆ, ಮಾಡುವ ಕಾಯಕ ಹಾಗೂ ಎಲ್ಲದರಲ್ಲಿಯೂ ಪಾರದರ್ಶಕತೆ, ನಿಷ್ಠೆ ಹಾಗೂ ಪ್ರಾಮಾಣಿಕತೆಗಳು ಮನೆಮಾಡುತ್ತವೆ. ಒಟ್ಟಾರೆ ಮಾನವ ತನ್ನನ್ನು ತಾನು ಅರಿತುಕೊಂಡು ತನ್ನ ಸೃಷ್ಟಿಕರ್ತನೆಡೆಗೆ ಸಾಗಿ ಅನಂತನಲ್ಲಿ ಅನಂತನಾಗಲು ತನುಮನಗಳ ಪರಿವರ್ತನೆ ಅತ್ಯಗತ್ಯ. ಮಾನವ ತನ್ನ ಸಮಗ್ರ ಜೀವನಕ್ಕೆ ಹಾಗೂ ಆಧ್ಯಾತ್ಮಿಕವಾಗಿ ದೇವರೆಡೆಗೆ ಸಂಪೂರ್ಣವಾಗಿ ಅಭಿಮುಖನಾಗಲು ಮನಪರಿವರ್ತನೆಯ ಕ್ರಿಯೆ ಪ್ರಾಮಾಣಿಕವಾಗಿ ಸಾಗುತ್ತಲಿರಬೇಕು. ಇದೊಂದು ನಿತ್ಯ ಸತ್ಯ ಹಾಗೂ ನಿರಂತರ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಎಲ್ಲಕ್ಕಿಂತ ಮಿಗಿಲಾಗಿ ದೈವೀಸ್ಪರ್ಶ ಅವಶ್ಯಕ.ಇದು ಮಾನವನ ಬೌತಿಕ ಶಕ್ತಿಗೆ ನಿಲುಕದ್ದು.
ಮಾನವ ದೈವೀಸ್ಪರ್ಶದಿಂದ ಭೂಷಿತನಾಗಿ, ಆಧ್ಯಾತ್ಮಿಕವಾಗಿ ಪ್ರಗತಿಯಾಗಲು ನಿರಂತರ ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮಗಳು ಸರಳ ಸಾಧನಗಳಾಗಿವೆ. ಇವುಗಳನ್ನು ನಿಷ್ಠೆಯಿಂದ ಪಾಲಿಸಿದಾಗ ಅದು ಸಕಾರಾತ್ಮಕ ಹಾಗೂ ಫಲಭರಿತ ಮನಪರಿವರ್ತನೆಗೆ ಚಾಲನೆ ನೀಡುತ್ತದೆ. ಪ್ರಾರ್ಥನೆಯು ಮಾನವ ಮತ್ತು ದೈವೀಕ ಸಂಬಂಧವನ್ನು ಬೆಸೆದರೆ, ಉಪವಾಸ ಅದನ್ನು ಬಲಗೊಳಿಸುತ್ತದೆ, ದಾನ-ಧರ್ಮ ಅದನ್ನು ವೃದ್ಧಿಗೊಳಿಸುತ್ತದೆ. ಮಾನವ ಮತ್ತು ದೇವರ ಸಂಬಂಧ ಸ್ಥಿರವಾಗಬೇಕಾದರೆ ಈ ಮೂರೂ ಅನರ್ಘ್ಯ ರತ್ನಗಳು ಬಹಳ ಪ್ರಮುಖವಾಗುತ್ತವೆ. ಇವು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಇವು ಮಾನವನ ಆಧ್ಯಾತ್ಮಿಕ ಪ್ರಗತಿಯ ಸ್ಥಿರ ಮೆಟ್ಟಲುಗಳು! ಆದರೆ ಹೃದಯ ಪರಿವರ್ತನೆ "cumpunctio cordis"- "repentance of heart" ಆಗದಿದ್ದಲ್ಲಿ ಇವುಗಳ ಅನುಸರಣೆ ವ್ಯರ್ಥವೆನ್ನುತ್ತಾರೆ ನಮ್ಮ ಧರ್ಮಸಭೆಯ ಪಿತಾಮಹರು
ತಾಯಿ ಪವಿತ್ರ ಧರ್ಮಸಭೆಯು ತನ್ನ ಪ್ರೀತಿಯ ಮಕ್ಕಳು ತಮ್ಮ ಸ್ವಾರ್ಥದ ಸೆರೆಯಿಂದ ಬಿಡುಗಡೆಯಾಗಿ ಆಧ್ಯಾತ್ಮಿಕ ಪರಿಪಕ್ವತೆಗೆ ಅವಶ್ಯವಿರುವ ದೈವಜ್ಞಾನವನ್ನು ಹೊಂದಲು, ವಿಶೇಷವಾಗಿ, ತಡೆಗೋಡೆಗಳಂತಿರುವ ಸ್ವಾರ್ಥ, ಅಸೂಯೆಗಳಿಂದ ಮುರಿದ, ಮಾನವ ಮತ್ತು ದೈವ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಪ್ರತಿ ವರ್ಷ ತಪಸ್ಸು ಕಾಲವನ್ನು ವರದಾನವಾಗಿ ನೀಡುತ್ತಾಳೆ ಹಾಗೂ ಮಾನಸಾಂತರ ಹೊಂದಿ ಹೃದಯ ಪರಿವರ್ತನೆಹೊಂದಲು ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮಗಳಲ್ಲಿ ನಿರತರಾಗುವಂತೆ ಕರೆನೀಡುತ್ತಾಳೆ. ಯಾರು ಆಕೆಯ ಕರೆಗೆ ಓಗೊಟ್ಟು ಈ ಮೂರು ಅನರ್ಘ್ಯ ರತ್ನಗಳನ್ನು ಕ್ರಿಯಾತ್ಮಕವಾಗಿ ಅಳವಡಿಸಿಕೊಳ್ಳುತ್ತಾರೋ ಅವರು ಪವಿತ್ರಾತ್ಮರ ಅನುಗ್ರಹಕ್ಕೆ ಪಾತ್ರರಾಗಿ ನೈಜ ಮನಪರಿವರ್ತನೆಗೆ ತೆರೆದುಕೊಳ್ಳುತ್ತಾರೆ.
ಮನಪರಿವರ್ತನೆಯ ಪ್ರಥಮ ಹೆಜ್ಜೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ. ಹಳೆಯ ಕಾಲದಲ್ಲಿ ಪ್ರವಾದಿಗಳು ದೇವಜನರನ್ನು ಎಚ್ಚರಿಸಿದಾಗ ಅವರು ಪ್ರಾಯಶ್ಚಿತ್ತದ ಸಂಕೇತವಾಗಿ ತಮ್ಮ ಬಟ್ಟೆನ್ನು ಹರಿದುಕೊಂಡು,ಗೊಣಿತಟ್ಟನ್ನು ತೊಟ್ಟುಕೊಂಡು, ಮೈಗೆ ಬೂದಿಯನ್ನು ಬಳಿದುಕೊಂಡು, ಬೂದಿಯ ಮೇಲೆ ಕುಳಿತು ಕಠಿಣ ತಪಸ್ಸು ಮಾಡುತ್ತಿದ್ದರು. ಇದು ಕಾಲ ಉರುಳಿದಂತೆ ನೈಜತೆಗಿಂತ, ಅಧಿಕವಾಗಿ ತೋರಿಕೆಯ ತಪಸ್ಸಾಗಿ ಪರಿಣಮಿಸಿತ್ತು. ಇದನ್ನು ಗಮನಿಸಿದ ಪ್ರವಾದಿ ಯೊವೇಲನು ದೇವರಿಂದ ದೂರ ಸರಿದಿದ್ದ ಇಸ್ರಯೇಲ್ ಜನಾಂಗದವರಿಗೆ "ಈಗಲಾದರೊ ಮನ:ಪೂರಕವಾಗಿ ನನ್ನ ಕಡೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತುಗೋಳಾಡಿ. ನಿಮ್ಮ ಉಡುಪುಗಳನ್ನು ಅಲ್ಲ ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾದ ದಂಡನೆಗಾಗಿ ಮನ ನೊಂದುಕೊಳ್ಳುವಂಥವರು" (2:12-13) ಎಂದು ಎಚ್ಚರಿಸಿ ನೈಜ ಪ್ರಾಯಶ್ಚಿತ್ತಕ್ಕೆ ಕರೆನೀಡುತ್ತಾನೆ. ಇಂತಹ ಕರೆ ಇಂದೂ ಸಹ ಪ್ರಸ್ತುತವಾಗಿದೆ! ಮನಪರಿವರ್ತನೆಯ ಎರಡನೆಯ ಹೆಜ್ಜೆ ದೃಢ ನಿಧಾರ. ಲೂಕನ ಸುವಾರ್ತೆಯ 15:11-32ರಲ್ಲಿ ನಾವು ದುಂದುಗಾರನ ಸಾಮತಿಯನ್ನು ಓದುತ್ತೇವೆ. ಅಲ್ಲಿ ತಂದೆಯಿಂದ ದೂರ ಸರಿದಿದ್ದ ಕಿರಿಯ ಮಗನಿಗೆ ತನ್ನ ತಪ್ಪಿನ ಅರಿವಾದಾಗ "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ" ಎಂದು ನಿರ್ಧರಿಸಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಪಡುತ್ತಾ ತಂದೆಯ ಬಳಿಗೆ ಹೊರಟ. ತಂದೆ ಅವನ ಬರುವಿಕೆಗಾಗಿ ತವಕಿಸುತ್ತಿದ್ದ. ಆತನ ತಪ್ಪನ್ನು ಲೆಕ್ಕಿಸದೆ ಆತನನ್ನು ಯಾವ ನಿಬಂಧನೆಗಳಿಲ್ಲದೆ ಮುಕ್ತವಾಗಿ ತನ್ನ ಮನೆಗೆ ಸೇರಿಸಿಕೊಳ್ಳುತ್ತಾನೆ. ಪ್ರತಿ ಮಾನವನಿಗೂ ಅವನವನ ತಪ್ಪಿನ ಅರಿವಾಗಬೇಕು. ಆಗ ಮನಪರಿವರ್ತನೆಯ ನೈಜ ಪ್ರಕ್ರಿಯೆ ತನಗರಿವಿಲ್ಲದಂತೆ ಚಾಲನೆಗೊಳ್ಳುತ್ತದೆ. ಅದು ದೃಢನಿರ್ಧಾರವನ್ನು ಕೈಗೊಳ್ಳಲು ಆತ್ಮರ ಶಕ್ತಿಯನ್ನು ನೀಡುತ್ತದೆ.
ಮನಪರಿವರ್ತನೆಯ ಮೂರನೆಯ ಹೆಜ್ಜೆ ಪವಿತ್ರ ಸಂಸ್ಕಾರಗಳ ಸ್ವೀಕಾರ. ಕಥೋಲಿಕ ಕ್ರೈಸ್ತರಿಗೆ ಪವಿತ್ರ ಸಂಸ್ಕಾರಗಳು ದೇವರ ಕೃಪಾವರದ ಹೊನಲನ್ನು ಹರಿಸುತ್ತವೆ. ಇವು ಮಾನವನ ಅಂತರಂಗವನ್ನು ಶುದ್ಧೀಕರಿಸಿ,ಬೆಳಗಿಸಿ ದೇವರ ವಾಸಕ್ಕೆ ಯೋಗ್ಯವಾಗಿಸುತ್ತವೆ. ವಿಶೇಷವಾಗಿ ಪಾಪ ನಿವೇದನೆಯ ಸ್ವೀಕಾರದಿಂದ ಪಾಪದ ಕತ್ತಲು ಅಳಿದು, ಜ್ಞಾನದ ಬೆಳಕು ಉದಯಿಸುತ್ತದೆ. ಆ ಬೆಳಕಿನ ಬಲ ಪಾಪವನ್ನು ವರ್ಜಿಸಲು ಆಧ್ಯಾತ್ಮಿಕ ಶಕ್ತಿನೀಡುತ್ತದೆ. ಆ ಅಳಿಯದ ದೈವಿಕ ಬೆಳಕಿನಲ್ಲಿರುವವರೆಗೂ ಪಾಪದಲ್ಲಿ ಬೀಳಲು ಸಾಧ್ಯವಿಲ್ಲ. ಆ ಅಳಿಯದ ಬೆಳಕು ಸೈತಾನನ ಕುತಂತ್ರಗಳನ್ನು ಸಮಗ್ರವಾಗಿ ನಿಯಂತ್ರಿಸುತ್ತದೆ. ಪ್ರಭು ಕ್ರಿಸ್ತನೇ ಆ ಶಾಶ್ವತ ಬೆಳಕು! ಅವರು ತಮ್ಮ ಪವಿತ್ರ ರಕ್ತದಿಂದ ಇಡೀ ಲೋಕವನ್ನು ಪಾವನಗೊಳಿಸಿ ಸೈತಾನನ ಸಾಮ್ರಾಜ್ಯವನ್ನು ದ್ವಂಸಗೊಳಿಸಿದ್ದಾರೆ. ಅವರ ಪ್ರೀತಿ ಶಾಶ್ವತ, ಅವರ ಕ್ಷಮೆ ನಿರಂತರ! "ಕೃಪಾಳು, ದೇವಾ ಕರುಣಿಸೆನ್ನನು, ಕರುಣಾನಿಧಿ, ಅಳಿಸೆನ್ನ ದೋಷವನು. ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು, ದೋಷ ಪರಿಹರಿಸಿ ಶುದ್ಧಗೊಳಿಸೆನ್ನನು" (ಕೀರ್ತನೆ 51:1-2) ಎಂದು ಪಾಪಕ್ಕೆ ನೈಜ ಪ್ರಾಯಶ್ಚಿತ್ತಪಟ್ಟು, ಪಾಪ ನಿವೇದನೆಯ ಸಂಸ್ಕಾರವನ್ನು ಪೂರ್ಣವಿಶ್ವಾಸದಿಂದ ಸ್ವೀಕಾರ ಮಾಡಿ, ದೀನ ಹೃದಯದಿಂದ ಪ್ರಾರ್ಥಿಸಿದರೆ ಪಾಪ ಕ್ಷಮೆ ದೊರೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಕಾರಣದಿಂದಲೇ ಕೀರ್ತನೆಕಾರ "ಬಲಿಯರ್ಪಣೆಯಲಿ ನಿನಗೊಲವಿಲ್ಲ, ದಹನಬಲಿಯಿತ್ತರೂ ನಿನಗೆ ಬೇಕಿಲ್ಲ, ಮುರಿದ ಮನವೇ ದೇವನೊಲಿವ ಯಜ್ಞವು, ನೊಂದು ಬೆಂದ ಮನವನಾತ ಒಲ್ಲೆಯೆನನು" (51:16-17) ಎನ್ನುತ್ತಾನೆ.
ಮನಪರಿವರ್ತನೆಯ ಅಂತಿಮ ಹೆಜ್ಜೆ ಸೇವೆ. ಸೇವೆ ಕ್ರೈಸ್ತ ಜೀವನದ ಅವಿಬಾಜ್ಯ ಅಂಗ. ಸೇವೆ ಕ್ರೈಸ್ತ ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ನಿಸ್ವಾರ್ಥ ಹಾಗೂ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದು ಪ್ರತಿಯೊಬ್ಬ ಕ್ರೈಸ್ತನ ಆದ್ಯ ಕರ್ತವ್ಯ. ಇದು ಮನಪರಿವರ್ತನೆಯ ಫಲವೂ ಹೌದು! ಸೇವೆ ಮಾಡಲು ಯಾರೂ ಹಿಂಜರಿಯಬಾರದೆಂದು ಪ್ರಭುವೇ ಸೇವೆ ಮಾಡಲು ಟೊಂಕಕಟ್ಟಿ ನಿಂತರು. "ನಾನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ ಸೇವೆ ಮಾಡಲು ಬಂದಿದ್ದೇನೆ" (ಮತ್ತಾಯ 20:28) ಎಂದು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದು ತಮ್ಮ ಶಿಷ್ಯರಿಗೆ ಸೇವೆಯ ಮಹತ್ವವನ್ನು ತಿಳಿಸಿದರು. ಹೀಗಿರುವಾಗ ಕ್ರೈಸ್ತ ಭಕ್ತರು ಸೇವೆ ಮಾಡಲು ಯಾವಾಗಲು ಸನ್ನದ್ದರಾಗಿರಬೇಕು. ದೀನರ, ನಿರಾಶ್ರಿತರ, ಬಡವರ, ನೊಂದವರ, ಹಾಗೂ ತಿರಸ್ಕೃತರ ಸೇವೆ ಮಾಡಲು ಅವಕಾಶಕ್ಕಾಗಿ ಕಾಯುವ ಮನಸ್ಸು ಮತ್ತು ಸಮಯ ದೊರಕಿದಾಗ ಮುಕ್ತ ಮನದಿಂದ ಹಾಗೂ ಪೂರ್ಣಪ್ರೀತಿಯಿಂದ ಸೇವೆ ಮಾಡಲು ತವಕಿಸಬೇಕು. ಪ್ರೀತಿ ಇಲ್ಲದ ಸೇವೆ ಸೇವೆಯಲ್ಲ! ಸೇವೆ ಮುಕ್ತವಾಗಿರಬೇಕು. ಅದು ನಮ್ಮ ಕುಟುಂಬಕ್ಕೆ, ನಮ್ಮ ಸಮುದಾಯಕ್ಕೆ, ಧರ್ಮಕ್ಕೆ ಸೀಮಿತವಾಗಿರಬಾರದು. ಆದಿ ಕವಿ ಪಂಪ ಹೇಳಿದಹಾಗೆ "ಮಾನವಕುಲಂ ತಾನೊಂದೇ ವಲಂ" ಎಂಬ ವಿಶಾಲವಾದ ಮನೋಭಾವ ಬೆಳೆಯುತ್ತಿರಬೇಕು. "ವಸುಧೈವ ಕುಟುಂಬಕಂ" ಅಂದರೆ ಈ ವಿಶ್ವವೇ ಒಂದು ಕುಟುಂಬವೆಂದು ತಿಳಿದು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ನಿಸ್ವಾರ್ಥ ಸೇವೆಯ ನೈಜ ಸಂದೇಶವನ್ನು ಸಾರುವುದೇ ತಪಸ್ಸುಕಾಲದ ಪ್ರಮುಖ ಉದ್ದೇಶ ಹಾಗೂ ಧ್ಯೇಯ. ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬರೂಸಮಗ್ರವಾಗಿ ಪರಿವರ್ತನೆಗೊಳ್ಳಲೇ ಬೇಕು. ಇಲ್ಲದಿದ್ದಲ್ಲಿ ಸಮುದ್ರದ ನೀರು ಎಷ್ಟಿದ್ದರೇನಂತೆ ಕುಡಿಯಲು ಸಾಧ್ಯವೇ!
————
ಪರಮನ ಮಿತ್ರ - ಫಿಲೋ, ಸುಂಟಿಕೊಪ್ಪ
ಮೂಡಣದಿ ನೇಸರು ಮೂಡುವ ಹೊತ್ತಿನೊಳು
ಕೈಯಲೊಂದು ಚೀಲವನು ಹಿಡಿದು ಧ್ಯಾನಿಸುತೆ
ಹೊರಟಿಹನು ಯತಿ ದಿವ್ಯನಗರಿಯ ದಿಸೆಯಲಿ.
ದೂರದಾ ಬಾನಂಚಿನಲಿ ಕದ್ದಿಣಕಿದ ನೇಸರನು
ಹೊಂಗದಿರ ಚೆಲ್ಲುತ ಮೆಲ್ಲನೆ ಮೇಲೇರುತಿರಲು
ರೋಮಾಪುರಿಯತ್ತ ಸಾಗಿಹನು ಕ್ಯಾಂತಿಯುಸ್.
'ದೀನರ ಸೇವೆಯೆ ಪರಮನ ಸೇವೆ' ಎನ್ನುತಲಿ
ಪರಹಿತವನೆ ಬಯಸುತ ಮನುಕುಲದ ಸೇವೆಗೆ
ತನ್ನನೆ ಅರ್ಪಿಸಿಹ ಶ್ರೇಷ್ಟತಮ ಯಾಜಕನಾತ.
ಮುಳ್ಳಂತೆ ನಿಮಿರಿ ನಿಂತ ಹುಲ್ಲಿನ ನಡುವಿನ
ಅಂಕುಡೊಂಕು ಹಾದಿಯೊಳು ನಿಲ್ಲದೆ ಎಲ್ಲೂ
ಲವಲವಿಕೆಯಲಿ ಸಾಗಿಹನಾ ನರೋತ್ತಮನು.
ಹಿಂದೆ ಹಿಂದಕೆ ಚಲಿಸುತಿದೆ ಬಯಲುದಾರಿ
ಮುಂದೆ ಸಾಗಿತಲಿಹನು ಗುರಿಯತ್ತ ಯೋಗಿ
ನಡೆಯುವ ಕಾಲ್ಗಳಲ್ಲಿದೆ ಕುಂದದ ಸುಚೇತನ.
ಹೊತ್ತು ನೆತ್ತಿಗೇರಿದರೂ ಉಳಿದಿಹುದು ಹಾದಿ
ಎನ್ನುವ ಹೊತ್ತಿನೊಳು ಕಂಡನು ಠಕ್ಕರ ಪಡೆ
ಅಂಜದಿಹ ಯೋಗಿ ನಡೆದನು ಅದಕಾಣದೆ.
ಸುತ್ತುವರಿಯಿತವನನು ದುಷ್ಟ ನಿರಂಕುಷ ಪಡೆ
ಕಿತ್ತು ತೆಗೆಯಿತು ಯೋಗಿಯ ಕೈಯ ಹೊರೆ
ಹುಡುಕುತಲಿ ಇನ್ನೇನು ಸಿಗುವುದೋ ಎನುತೆ.
ಏನಿಹುದು ನಿನ್ನಲ್ಲಿ, ಇರುವುದೆಲ್ಲವನು ಕೊಡು!
ಎಂದಬ್ಬರಿಸಿದನಾ ದುಷ್ಟಕೂಟದ ನಾಯಕನು,
ಅವನಲ್ಲಿರುವುದನು ಕಿತ್ತು ತೆಗೆವ ಸನ್ನಾಹದಲಿ.
ಎನ್ನದೆಂಬುದೇನು ಇಲ್ಲ, ಇರುವುದು ನಿಮ್ಮಲ್ಲಿಹುದು,
ಉಳಿದಿಹುದು ಎನ್ನುಡುಗೆಗಳು ಮಾತ್ರವೇ! ಎಂದು
ಮಾರ್ನುಡಿದಿಹನು ಅಂಜದೆ ಆ ಸಾತ್ವಿಕ ಯೋಗಿ.
ಭಿಕಾರಿಗಳೊಳು ಭಿಕಾರಿಯಿವನು ಎಂದುಸುರುತೆ
ನಡೆದರಾ ಕಳ್ಳರು ನಿರಾಸೆಯಲಿ ಹೆಜ್ಜೆಯನಿಕ್ಕುತೆ
ಇನ್ನೋರ್ವನು ಸಿಗುವನೆ ಹಾದಿಯಲೆಂದರಸುತೆ.
ಡೊಂಕು ಹಾದಿಯಲಿ ಮರೆಯಾಗುತಿಹ ಕಳ್ಳರನು
ನೋಡುತಿರಲು ಫಕ್ಕನೆ ಹೊಳೆಯಿತು ಯೋಗಿಗೆ
ಎನ್ನಲ್ಲೇನೋ ಉಳಿದಿಹುದಲ್ಲ ಎನುತ ಹುಡುಕಿಹನು.
ಉಡಿಯಲಿ ಸಿಕ್ಕಿತು ಮಿರಮಿರಗುವ ಲೋಹದಮಾಲೆ
'ನಿಲ್ಲಿರಿ, ನಿಲ್ಲಿರಿ' ಎಂದರಚುತೆ ಓಡಿಹನಾ ಯೋಗಿ
ದೂರದ ಹಾದಿಯಲಿ ಸಾಗಿಹ ಕಳ್ಳರನು ಹಿಂಬಾಲಿಸಿ.
ಹಿಂದೆ ಬರುತಿಹ ಯೋಗಿಯ ಕಂಡು ಬೆರಗಿನಿಂ
ನಿಂತಿಹ ಕಳ್ಳರ ಬಳಿ ಸಾಗಿ ಕೈಗಿತ್ತನು ವಿನಯದಿ
ನುಡಿಯುತಲಿ, 'ನಿಮಗಿದು ಸೇರಬೇಕು!' ಎನುತ.
ಬೆಕ್ಕಸ ಬೆರಗಿನಿಂ ನೋಡುತ ನಿಂತಿತು ಕಳ್ಳರ ಪಡೆ
ಕೈಯಲ್ಲಿ ಹೊಳೆದಿಹುದು ಲೋಹದೊಂದು ಮಾಲೆ
ಸಾಧುವಿನ ಮೊಗದಲಿಣಕುತಿದೆ ಸಂತೃಪ್ತಿಯ ಸೆಲೆ.
ದಿವ್ಯನಗರಿಯತ್ತ ಹೊರಟಿಹ ಯಾಜಕನ ಕಂಡು
ಇರಲೆಂದು ನೀಡಿದ್ದನೋರ್ವ ಸುಮನಸಿನ ಧನಿಕ
ವಿಶ್ವಾಸ ನಲ್ಮೆಯಿಂದಲಿ ಇನಿತು ಉಡುಗೊರೆಯಾಗಿ.
ಕರಗಿ ನೀರಾಗಿ ಹರಿದವು ದುಷ್ಟರ ಕಟುಹೃದಯಗಳು
ತಟ್ಟನೆ ಕಾಲಿಗೆರಗಿದ ಠಕ್ಕರ ಗುರು ಭಾವತೀವ್ರತೆಯಲಿ
ನುಡಿದನು ಮನ್ನಿಸೆಮ್ಮನು, ನಾವೆಸಗಿದಾ ಪಾಪಗಳನು.
————
Subscribe to:
Posts (Atom)
ಎತ್ತಿತೋರಿಸಲಾದ ಪೋಸ್ಟ್
ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ
ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...
-
- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ) ಸ್ವಾತಂತ್ರ‍್ಯ ಪೂರ್ವದಲ್ಲಿ ಕ್ರೈಸ್ತರು: ಮಿಷನರಿಗಳ ಆಗಮನಕ್ಕೂ ಮುಂಚೆ ಅಂದರೆ ಮೂರನೇ ಶತಮಾನದಲ್ಲೇ ಕ್ರೈಸ್ತ ಧರ್ಮವನ...
-
ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ) ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ಮಾಲಿಕೆಯಲ್ಲಿ ಸ್ವಾತಂತ್ರ್ಯಪೂರ...
-
ಸ್ಥೂಲವಾಗಿ ಹೇಳುವುದಾದರೆ, ಕ್ರೈಸ್ತರಲ್ಲಿ ಎರಡು ಪ್ರಮುಖ ಪಂಗಡಗಳಿವೆ ಎಂದು ನಾವು ಅಂದು ಕೊಂಡಿದ್ದೇವೆ. ಭಾರತೀಯರಾದ ನಮ್ಮ ತಿಳುವಳಿಕೆಯ ಆಧಾರದ ಮೇಲೆ ಕ್ರೈಸ್ತರು ಎಂದ...