Saturday, 9 May 2020

ಸ್ವರ್ಗವೆಂದರೇನು?


ಪ್ರೀತಿಯ ಅನುಗೆ

ಶುಭಹಾರೈಕೆಗಳು. ಸ್ವರ್ಗ ಎಂದರೇನು? ಸ್ವರ್ಗಕ್ಕೆ ಯಾರು ಆರ್ಹರು? ಹೀಗೆ ಅನೇಕ ಪ್ರಶ್ನೆಗಳು ಶತಮಾನಗಳಿಂದ ಜನರನ್ನು ಕಾಡುತ್ತಾ ಬಂದಿವೆ. ಬಸವಣ್ಣವರು “ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ! ಸತ್ಯವ ನುಡಿವುದೇ ದೇವಲೋಕ. ಮಿಥ್ಯವ ನುಡಿವುದೇ ಮರ್ತ್ಯಲೋಕ. ಆಚಾರವೇ ಸ್ವರ್ಗ, ಅನಾಚಾರವೇ ನರಕ. ಕೂಡಲಸಂಗಮದೇವಾ, ನೀವೇ ಪ್ರಮಾಣು” ಎಂದು ಹೇಳುತ್ತಾನೆ. ಎಲ್ಲಿ ಆಚಾರ ವಿಚಾರಗಳು ನಡೆಯುತ್ತವೋ, ಎಲ್ಲಿ ಆಚಾರವಂತರು ಇದ್ದಾರೋ, ಎಲ್ಲಿ ವಿನಯವಂತರು ಇದ್ದಾರೋ ಅದಕ್ಕಿಂತ ಸ್ವರ್ಗ ಬೇರೆ ಇಲ್ಲ, ಇಂಥ ಪರಿಸರವೇ ಸ್ವರ್ಗ ಲೋಕ ಎಂದು ಭಾವಿಸುವ ಮಾತಿದು. ಎಲ್ಲಿ ಆದರ, ಅನಾಚಾರ, ಮೋಸ, ಲಂಚ ಇವೆಲ್ಲಾ ಇರುತ್ತದೋ ಅದೇ ನರಕ. ಅದಕ್ಕಿಂತ ಕೆಟ್ಟ ನರಕ ಬೇರೆ ಇಲ್ಲ ಎಂದು ಹೇಳುತ್ತಾ ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ಸೂಚಿಸುತ್ತಾ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮ ದೇವನಲ್ಲಿ ಬೇಡಿಕೊಳ್ಳುತ್ತಾರೆ.

ಇಲ್ಲಿ ಒಂದು ಘಟನೆ ಬಗ್ಗೆ ನಿನಗೆ ಹೇಳಲು ಬಯಸುತ್ತೇನೆ. ಮುಗ್ಧ ಮಕ್ಕಳು ಪೋಪ್ ಫ್ರಾನ್ಸಿಸ್‍ರವನ್ನು ಪ್ರಶ್ನಿಸುವ ಒಂದು ಕಾರ್ಯಕ್ರಮ. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಪೋಪ್ ಫ್ರಾನ್ಸಿಸ್ ಉತ್ತರಿಸುತ್ತಿದ್ದರು. ಇಮ್ಯಾನುವೆಲ್‍ಗೆ ಪ್ರಶ್ನೆ ಕೇಳುವ ಸರದಿ. ಪ್ರಶ್ನೆ ಕೇಳಲು ಮೈಕ್ ಮುಂದೆ ಬರುವ ಇಮ್ಯಾನ್ಯುವೆಲ್ ಪ್ರಶ್ನೆ ಕೇಳಲಾಗದೆ ಹೆಪ್ಪುಗಟ್ಟಿದ ದುಃಖದಿಂದ ಅಳಲು ಪ್ರಾರಂಭಿಸಿ, ‘ನನಗೆ ಪ್ರಶ್ನೆ ಕೇಳಲು ಸಾಧ್ಯವಾಗುತ್ತಿಲ್ಲ’ ಎಂದು ರೋಧಿಸುತ್ತಾನೆ. ಪರಿಸ್ಥಿತಿಯನ್ನು ಆರ್ಥಮಾಡಿಕೊಂಡ ಪೋಪ್ರವರ ಸಹಾಯಕನು ಬಾಲಕನ ಹತ್ತಿರ ಬಂದು ಹುಡುಗನನ್ನು ಸಮಾಧಾನ ಪಡಿಸಿ, ಪ್ರಶ್ನೆ ಕೇಳಲು ಹುರಿದುಂಬಿಸಿದರೂ, ಇಮ್ಯಾನ್ಯುವೆಲ್‍ಗೆ ಪ್ರಶ್ನೆ ಕೇಳಲು ಸಾಧ್ಯವಾಗಲಿಲ್ಲ. ಹೆಪ್ಪುಗಟ್ಟಿದ ದು:ಖದಿಂದ ಅವನ ನಾಲಿಗೆ ಕಟ್ಟಿದಂತಾಗಿದೆ. ತಕ್ಷಣಪೋಪ್ರವರು “ಪ್ರಶ್ನೆಯನ್ನು ನನ್ನ ಕಿವಿಯಲ್ಲಿ ಪಿಸುಗಟ್ಟಿ ಹೇಳು” ಆದರದಿಂದ ಬಾಲಕನನ್ನು ತನ್ನ ಬಳಿಗೆ ಕರೆದು ಹೇಳುತ್ತಾರೆ. ಸಹಾಯಕನ ಒತ್ತಾಸೆಯಿಂದ ಬಾಲಕ ಪೋಪ್ಬಳಿಗೆ ಬರುತ್ತಾನೆ. ಪೋಪ್ ಅವನನ್ನು ಅಪ್ಪಿಕೊಂಡುಪೋಪ್ ಮತ್ತು ಬಾಲಕ ಪರಸ್ಪರ ಪಿಸುಗುಟ್ಟುತ್ತಾ ಮಾತನಾಡಿಕೊಳ್ಳುತ್ತಾರೆ. ತದನಂತರ ತನ್ನ ಆಸನಕ್ಕೆ ಹುಡುಗ ವಾಪಸ್ಸಾಗುತ್ತಾನೆ. “ನಮ್ಮ ಹೃದಯ ನೊಂದಂತಹ ಸಮಯದಲ್ಲಿ ನಾವು ಕೂಡ ಇಮ್ಯಾನ್ಯುವೆಲ್‍ನಂತೆ ಅಳುತ್ತಾ ನಮ್ಮ ನೋವನ್ನು ಹೊರಹಾಕಬೇಕು” ಎಂದು ಮುಂದುವರಿಸುತ್ತಾ “ಇಮ್ಯಾನ್ಯುವೆಲ್ ತನ್ನ ತಂದೆಗೋಸ್ಕರÀ ದುಃಖಿಸುತ್ತಿದ್ದಾನೆ. ತನ್ನ ತಂದೆಯ ಮೇಲಿರುವ ಅತೀವ ಪ್ರೀತಿಯಿಂದ ತಂದೆಯನ್ನು ನೆನಪಿಕೊಂಡು ನಮ್ಮೆಲ್ಲರ ಮುಂದೆ ಧೈರ್ಯದಿಂದ ಅಳುತ್ತಿದ್ದಾನೆ” ಎಂದು ಪೋಪ್ ಪ್ರಾನ್ಸಿಸ್‍ರವರು ಸಭೆಯನ್ನು ಉದ್ದೇಶಿಸಿ ಹೇಳುತ್ತಾರೆ. ಹುಡುಗನ ಅಪ್ಪಣೆ ಪಡೆದು, ಹುಡುಗನು ಪೋಪ್ರವರನ್ನು ಕೇಳಿದ ಪ್ರಶ್ನೆಯನ್ನು ಸಭೆಯ ಮುಂದೆ ಬಹಿರಂಗಪಡಿಸುತ್ತಾರೆ; “ಸ್ವಲ್ಪ ಸಮಯ ಹಿಂದೆ, ನನ್ನ ತಂದೆ ತೀರಿಕೊಂಡರು. ಅವರು ನಾಸ್ತಿಕರಾಗಿದ್ದರು. ಆದರೂ ನನಗೂ ಮತ್ತು ನನ್ನ ಸಹೋದರನಿಗೂ ದೀಕ್ಷೆಸ್ನಾನ ಕೊಡಿಸಲು ಹಿಂಜರಿಯಲಿಲ್ಲ. ಅವರು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬದುಕಿದರು. ಈಗ ನನ್ನ ತಂದೆ ಸ್ವರ್ಗದಲ್ಲಿದ್ದಾರೆಯೇ?” ಇದು ಹುಡುಗನ ಪ್ರಶ್ನೆಯಾಗಿತ್ತು. “ಹೌದು, ಮಗ ತನ್ನ ತಂದೆಯ ಬಗ್ಗೆ ಇಂತಹ ಒಳ್ಳೆಯ ಮಾತುಗಳಾವುದೆಂದರೆ, ತಂದೆಯು ಕೆಟ್ಟವನಾಗಿರಲು ಸಾಧ್ಯವೇ? ತನ್ನ ತಂದೆಗೊಸ್ಕರ ಸಭೆಯ ಮುಂದೆ ಅಳುವ  ಧೈರ್ಯವನ್ನು ತನ್ನ ತಂದೆಯಿಂದಲೇ    ಪಡೆದಿದ್ದಾನೆ. ಆದ್ದರಿಂದ ಆತನ ತಂದೆಯು ಒಳ್ಳೆಯ ವ್ಯಕ್ತಿಯಾಗಿರಲೇ ಬೇಕು” ಎಂದು ಪೋಪ್ ಸ್ಪಷ್ಟಪಡಿಸುತ್ತಾರೆ. “ಸ್ವರ್ಗಕ್ಕೆ ಯಾರ್ಯಾರು ಹೋಗಲು ಆರ್ಹರೆಂದು ದೇವರು ಮಾತ್ರ ಹೇಳಲು ಸಾಧ್ಯ. ದೇವರಿಗೆ ತಂದೆಯಂತಹ ಹೃದಯವಂತಿಕೆ ಇದೆ. ಮಕ್ಕಳಿಗೆ ಜ್ಞಾನದೀಕ್ಷೆ ಕೊಡಿಸಿ ಒಳ್ಳೆತನದಲ್ಲಿ ಬೆಳೆಸಿರುವ ವ್ಯಕ್ತಿಯಿಂದ ದೇವರು ದೂರ ಸರಿಯಲು ಸಾಧ್ಯವೇ? ಅಂತಹ ಮಗನನ್ನು ಅನಾಥ ಮಾಡುವರೇ?” ಎಂದು ಪ್ರಶ್ನಿಸಿದ್ದಾಗ, ನೆರೆದಿದ್ದ ಮಕ್ಕಳೆಲ್ಲರು “ಇಲ್ಲ” ಎಂದು ಉತ್ತರಿಸುತ್ತಾರೆ. ಮಕ್ಕಳ ಉತ್ತರವನ್ನು ಆಧಾರಿಸಿ “ಇದು ನನ್ನ ಉತ್ತರವೂ ಹೌದು” ಎಂದು ಹುಡುಗನಿಗೆ ಉತ್ತರಿಸುತ್ತಾರೆ. ದೇವರಿಗೆ ಖಂಡಿತವಾಗಿಯೂ ನಿಮ್ಮ ತಂದೆಯ ಬಗ್ಗೆ ಹೆಮ್ಮೆ ಇದೆ, ನಿನ್ನ ತಂದೆಯೊಂದಿಗೆ ಮಾತನಾಡು, ನಿಮ್ಮ ತಂದೆಯ ಬಳಿ ಪ್ರಾರ್ಥಿಸು” ಎಂದು ಹುಡುಗನನ್ನು ಉತ್ತೇಜಿಸುತ್ತಾರೆ.

ಸ್ವರ್ಗವೆಂದರೇನು? ಅದನ್ನು ಹೇಗೆ ವ್ಯಾಖ್ಯಾನಿಸುವುದು? ರೊಮಿಯ ಈ ಮಾತನ್ನು ಕೇಳು:

Out beyond ideas of wrongdoing and right-doing,

There is a field. I’ll meet you there.

When the soul lies down in that grass,

The world is too full to talk about.

Ideas, language, even the phrase ‘each other’ doesn’t make any sense.

 

ಇಂತಿ ನಿನ್ನವ

ಆನಂದ್


ಗೀತಾಂಜಲಿಯ ತುಣುಕು - ಜೀವದ ಜೀವವೇ, ನಿನ್ನ ಜೀವಸ್ಪರ್ಶವಿಹುದೆನ್ನ ಅಂಗಾಂಗಗಳ ಮೇಲೆ


ಜೀವದ ಜೀವವೇ, ನಿನ್ನ ಜೀವಸ್ಪರ್ಶವಿಹುದೆನ್ನ ಅಂಗಾಂಗಗಳ ಮೇಲೆ

ಅದಕಾಗಿ ತನುವೆನ್ನ ಮಡಿಯಿರಲೆಂದು ತುಡಿಯುವೆ ನಾ ಸದಾ.

 

ನನ್ನೆಲ್ಲ ಯೋಚನೆಗಳಿಂದ ಅಸತ್ಯಗಳು ಹೊರಗುಳಿಯಲಿ, ಏಕೆನೆ

ನನ್ನಂತರಂಗದ ಜೀವಜ್ಯೋತಿಯ ಹೊತ್ತಿಸಿದ ಸತ್ಯ ನೀನೇ

 

ನನ್ನೊಳಗಿನ ಕೆಡುಕೆಲ್ಲ ತೊಲಗಲಿ ದೂರ, ನನ್ನೊಲವಿರಲಿ ಕುಸುಮದೊಳು,

ಏಕೆನೆ ನೀ ಆಸೀನನಾಗಿಹೆ ನನ್ನಂತರಾತ್ಮದ ಗರ್ಭಗುಡಿಯೊಳು.

 

ನನ್ನ ಕ್ರಿಯೆಗಳಲಿ ನಿನ್ನನೇ ಅಭಿವ್ಯಕ್ತಿಸುವ ನೈಜ ಯತ್ನವೆನದು,

ಏಕೆನೆ ನನ್ನೆಲ್ಲ ಕ್ರಿಯೆಯ ಮರೆಯ ಪರಮಶಕ್ತಿ ನೀನೇ ಅಹುದು.

(ಟ್ಯಾಗೋರರ  Life of my life, I shall   ever try to keep my body pure ಕವನದ ಭಾವಾನುವಾದ: ಸಿ ಮರಿಜೋಸೆಫ್)

  


ಉಚಾಲ್ಯಾ ಆತ್ಮಕಥನದ ಕುರಿತ ವಿಮರ್ಶೆ


- ಫಾ. ಸಿರಿಲ್ ರಾಜ್ ಎಸ್.ಜೆ.

 ಪ್ರಸ್ತಾವನೆ

ಇಂದು ಕಣ್ಣಿಗೆ ಕಾಣಿಸದ ಸೂಕ್ಷ್ಮ ವೈರಾಣು ಜಗತ್ತಿನ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ಮಾಹಾಮಾರೀ ಕೊರೊನಾ ಇಡೀ ಜಗತ್ತನ್ನು ಬಂಧನಕ್ಕೆ ಒಳಪಡಿಸಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೆ ಕೊರೊನಾ ವೈರಾಣುವಿನ ಸೋಂಕು ತಡೆಗಟ್ಟಲು ವಿಧಿಸಿರುವ ದಿಗ್ಭಂದನದಿಂದ ಅನೇಕ ವಲಸಿಗರು ವಸತಿಯಿಲ್ಲದೆ, ತಿನ್ನಲು ಆಹಾರವಿಲ್ಲದೆ ಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಿದಾಗ ನಾನು ಓದಿದ ಅದ್ಭುತವಾದ ಆತ್ಮಕಥನ ನನ್ನ ಸ್ಮೃತಿಪಟಲದಲ್ಲಿ ಮೂಡುತ್ತದೆ. ಅದೇ ಉಚಲ್ಯಾ ಆತ್ಮಕಥನ, ಇದು ವ್ಯಕ್ತಿ ಮತ್ತು ಸಮುದಾಯದ ಆತ್ಮಕಥನ, ವ್ಯಷ್ಠಿ, ಸಮಷ್ಠಿಯ ದಾರುಳ ನೈಜಕತೆ.

ಉಚಲ್ಯಾ – ಮಹಾರಾಷ್ಟ್ರದಲ್ಲಿ ಬದುಕುತ್ತಿರುವ ಒಂದು ಜನಾಂಗದ ಹೆಸರು. ಇವರನ್ನು ಸಂತಾಮುಚ್ಚರ ಎಂದೂ ಕರೆಯುತ್ತಾರೆ. ಇವರ ಜಾತಿ ಭಾಷೆ ತೆಲುಗು. ತೆಲುಗಿನಲ್ಲಿ ಸಂತಾಮುಚ್ಚರ ಎಂದರೆ ಸಂತೆಕಳ್ಳ ಎಂದು ಅರ್ಥ. ಉಚಲ್ಯಾ ಎಂದರೆ ಮರಾಠಿಯಲ್ಲಿ ಗಂಟುಚೋರ ಎಂಬರ್ಥ. ಇವರ ಕಸುಬೇ ಕಳ್ಳತನ. ಇವರ ಮೂಲ ಎಲ್ಲಿಯದು ಎಂಬುದು ಖಚಿತವಿಲ್ಲ. ಒಂದು ರೀತಿಯಲ್ಲಿ ಇವರದು ಅಲೆಮಾರಿ ಜನಾಂಗ. ಇಡೀ ಭಾರತದಲ್ಲಿ ಇವರನ್ನು ಜಾಧವ ಹಾಗೂ ಗಾಯಕವಾಡ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇಂಥ ಒಂದು ಜನಾಂಗದಲ್ಲಿ ಹುಟ್ಟಿದ ಲಕ್ಷ್ಮಣ ಗಾಯಕವಾಡರು ಬರೆದ ಆತ್ಮಕಥನ ಉಚಲ್ಯಾ. 1988ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯನ್ನು ಚಂದ್ರಕಾಂತ ಪೆÇೀಕಳೆಯವರು ಕನ್ನಡಕ್ಕೆ ಅದ್ಭುತವಾಗಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಸಾಹಿತ್ಯಿಕವಾಗಿ ಮೌಲ್ಯಮಾಪನ ಮಾಡುವುದಕ್ಕಿಂತ, ಸಮಾಜಶಾಸ್ತ್ರೀಯ ಮೌಲ್ಯಮಾಪನ ಮಾಡಿದಾಗ ನನಗೆ ಉಚಲ್ಯಾ ಜನರ ಜೀವನದ ವಾಸ್ತವ ನನ್ನಲ್ಲಿ ಅನೇಕ ಭಾವನೆಗಳನ್ನು ಕೆರಳಿಸಿತು.

ಯಾವುದನ್ನು ನಾವು ಸಮಾಜ, ಸಮುದಾಯ ಅಂತ ಕರೆಯುತ್ತೇವೆ? ಸಮುಚ್ಚಯ, ಒಟ್ಟಾಗಿ ಜೀವಿಸುವ ಸ್ಥಿತಿ. ಮಾನವೀಯತೆಯನ್ನು ಅರಿಯದ, ಉತ್ತೇಜಿಸದ, ಪರರನ್ನು ಹಿಂಸಿಸುವುದರಲ್ಲಿ, ಮೂಲಭೂತ ಸೌಕರ್ಯಗಳಿಂದ, ಸೌಲಭ್ಯಗಳಿಂದ, ಸಂಪನ್ಮೂಲಗಳಿಂದ ವಂಚಿಸುವ,       ಯೋಗ್ಯವಾಗಿ ಬದುಕನ್ನು ನಡೆಸಲು ಬೇಕಾದ ದಿನನಿತ್ಯದ ಆಹಾರ, ವಸತಿ ಮತ್ತು ವಸ್ತ್ರವನ್ನು ಕಸಿದುಕೊಳ್ಳುವ ವ್ಯವಸ್ಥೆಯಲ್ಲಿ ಜೀವಿಸುವವರ ಗುಂಪನ್ನು ಮಾನವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ. ಈ ಆತ್ಮಕಥನದಲ್ಲಿ ಬರುವ ಪ್ರಧಾನ ಸಮಸ್ಯೆಗಳು/ ಕಾಳಜಿ : ತಿರಸ್ಕಾರ, ವಲಸೆ, ಶೋಷಣೆ (ದೈಹಿಕ ಮತ್ತು ಮಾನಸಿಕ), ಅನಕ್ಷರತೆ, ಕೀಳರಿಮೆ, ನಿರುದ್ಯೋಗ, ಹಸಿವು, ಬಡತನ, ಅನೈತಿಕ ಸಂಬಂಧಗಳು, ಕುಡಿತನ. ಇಂತಹ  ನೈಜ ಆತ್ಮಕಥನವನ್ನು ಓದಿದಾಗ ನಾವು ಕಳ್ಳತನವನ್ನು ಸಮರ್ಥಿಸಬಹುದೆ? ನಿಜವಾದ ಅಪರಾಧಿಗಳು ಯಾರು?

ಲಕ್ಷ್ಮಣ ಗಾಯಕವಾಡ ಅವರ ಜೀವನದ ಮೂರು ಹಂತಗಳು

1. ಗುರುತಿಲ್ಲದ ಇರವಿನ ಹಂತ: ಬಾಲ್ಯಾವಸ್ಥೆ

ಗುರುತು ನಮಗೆ ಯಾವುದರಿಂದ ಬರುತ್ತದೆ? ಧರ್ಮ, ಜಾತಿ, ಸಮುದಾಯ, ವಿದ್ಯಾಭ್ಯಾಸದ ಅರ್ಹತೆ, ವೃತ್ತಿ, ಹೆಸರು, ಅಸ್ತಿತ್ವ? ಜೀವಿಸಲಿಕ್ಕೆ ಗುರುತು ಬೇಕು ಎಂಬುದರ ಪರಿಜ್ಞಾನವನ್ನೆ ಕಳೆದುಕೊಳ್ಳುವ ಹಾಗೆ ವರ್ತಿಸುವ ನೈತಿಕ, ವೈಚಾರಿಕ, ವಿದ್ಯಾವಂತ, ನಾಗರಿಕ ಸಮಾಜವನ್ನು ಕಂಡಾಗ ಇದು ಎಂಥ ವಿಪರ್ಯಾಸ ಎಂಬ ಭಾವನೆ ಒದುಗರಲ್ಲಿ ಮೂಡುವುದು ಸಹಜ. ನಾವು ಸಮಾಜದಲ್ಲಿ ಎರಡು ರೀತಿಯ ಗುರುತನ್ನು ಕಾಣಬಹುದು;

ಶೋಷಣೆಗೆ ಒಳಪಡಿಸುವ ಗುರುತು ieಟಿಣiಣಥಿ ಣhಚಿಣ oಠಿಠಿಡಿesses oಡಿ viಛಿಣimizes

ಕಳ್ಳರು, ಗುನ್ಹೆಗಾರರು, ಕ್ರಿಮಿನಲ್ ಟ್ರೈಬ್ಸ್, ದರೋಡೆಕೋರರು, ದಲಿತರು, ಹಿಂದುಳಿದವರು, ಅನಾಗರೀಕರು, ಹೊಲೆಯರು, ಪಂಚಮರು, ಪಾಥರೂಟ ಜನರು ಎಂಬ ನಾಮಫಲಕಗಳಿಂದ ಗುರುತಿಸಲ್ಪಟ್ಟಿರುವ ಉಚಲ್ಯಾ ಜನರು ಸಮಾಜದ ಎಲ್ಲಾ ಸ್ತರಗಳಿಂದ, ಕ್ಷೇತ್ರಗಳಿಂದ, ಆವರಣದಿಂದ ತಿರಸ್ಕರಿಸಲ್ಪಟ್ಟವರು. ಜೀವಿಸಲು ಸಾಧ್ಯವಾಗುವ ಎಲ್ಲಾ ಮಾರ್ಗಗಳಿಂದ ವಂಚಿತರಾದ ಸಮುದಾಯ. ಇವರಿಗೆ ಕಳ್ಳತನ ಅವಿವಾರ್ಯದ ವೃತ್ತಿಯಾಯಿತು. ಪ್ರಾಣಿಜೀವನ ಜೀವಿಸಲು ಒತ್ತಾಯ ಪಡಿಸಲಾಯಿತು. ಈ ಅಂಶವನ್ನು ಲಕ್ಷ್ಮಣ ಗಾಯಕವಾಡರವರು ತಮ್ಮ ಆತ್ಮಕಥನದಲ್ಲಿ ವರ್ಣಿಸುವ ಅವರ ಜೀವನದ ಕೆಲವು ನೈಜ ಸಂಗತಿಗಳಿಂದ ತಿಳಿದುಕೊಳ್ಳಬಹುದು.

ನಮ್ಮ ಮನಸ್ಸು ಸತ್ತಿದ್ದರಿಂದ ಏನೂ ಅನ್ನಿಸುತ್ತಿರಲಿಲ್ಲ

ಖಾಯಿಲೆ – ಮಲರೋಗ, ಎಲ್ಲರಿಗೂ ಒಂದೇ ಹೊದಿಕೆ ನಾಯಿಯು ಸಹ ಇದರ ಫಲಾನುಭವಿ. ಅದು ಉಚ್ಚೆ ಹೊಯ್ದರೂ ಏನೂ ಅನ್ನಿಸುತ್ತಿರಲಿಲ್ಲ. ಹೆಂಗಸರ ಹೇಲುಗೇರಿಯ ದೃಶ್ಯ. ಹೇಲನ್ನು ತಿಂದ ಹಂದಿಯನ್ನು ತಿನ್ನುತ್ತಿದ್ದ ಇವರಿಗೆ ಅದರ ಬಗ್ಗೆ ಹೇಸಿಗೆ ಅನ್ನಿಸುತ್ತಿರಲಿಲ್ಲ. ಏಕೆಂದರೆ ಇವರ ಮನಸ್ಸು ಸತ್ತಿತ್ತು. ಹೇಗೆ ತಿರಸ್ಕಾರ, ವಂಚನೆ, ಮೋಸ, ಅನ್ಯಾಯ ಮನುಷ್ಯನನ್ನು ಯಾವ ಮನೋಸ್ಥಿತಿಗೂ ಕರೆದುಕೊಂಡು ಹೋಗಬಹುದು ಎಂಬುದಕ್ಕೆ ಇವರ ಜೀವನ ಸಾಕ್ಷಿಯಾಗಿದೆ.

ನಮ್ಮ ಮನೆ ಮೊದಲೇ ಚಿಕ್ಕದು. ಅದರಲ್ಲಿ ನೊಣಗಳಂತೆ ವಾಸಿಸುವ ಮನೆಮಂದಿ. ಆಡಿನ ಪಕ್ಕದಲ್ಲೇ ನಮ್ಮ ಹಾಸಿಗೆ. ಚಳಿಗಾಲದಲ್ಲಿ ಗಡಗಡ ನಡುಗುತ್ತ ಒಂದೇ ಹೊದಿಕೆಯೊಳಗೆ ಸೇರುತ್ತಿದ್ದೆವು. ನಾಯಿ ನಮ್ಮ ಹಾಸಿಗೆಯೊಳಗೆ ತೂರುತ್ತಿತ್ತು. ರಾತ್ರಿ ಅದು ಉಚ್ಚೆ ಹೂಯ್ದರೂ ಬೆಚ್ಚಗೆನಿಸುತ್ತಿತ್ತು. ಮರುದಿನ ಮೂತ್ರದ ವಾಸನೆ ಬಂದರೂ ಅದನ್ನೇ ಹೊದ್ದುಕೊಳ್ಳುತ್ತಿದ್ದೆವು.

2. ಗುರುತಿನ ಅರಿವು ಮೂಡುವ ಹಂತ (ಯೌವ್ವನಾವಸ್ಥೆ)

ಲಕ್ಷ್ಮಣ ಗಾಯಕವಾಡರವರಿಗೆ ವರ್ಣವ್ಯವಸ್ಥೆಯ ಅರಿವಾಗುತ್ತದೆ. ಉಚಲ್ಯಾ ಜನರ ದಾರಿದ್ರ್ಯ, ಸಂಕಟ, ಉಸಿರುಗಟ್ಟಿದಂತಾಗುವ ಸ್ಥಿತಿ, ವ್ಯಥೆ, ಅಸಹಾಯಕತೆ, ಹತಾಶೆ, ನಿರಾಶೆಯ ಅರಿವಾಗುತ್ತದೆ. ಯಾಕೆ ಕಳ್ಳತನ ಮಾಡಿ ಜೀವಿಸಬೇಕು? ಪರ್ಯಾಯ ಮಾರ್ಗ ಇದೆಯಾ ಎಂದು ತನ್ನನ್ನೆ ಪ್ರಶ್ನಿಸಿಕೊಳ್ಳುತ್ತಾನೆ ಲಕ್ಷ್ಮಣ.

ಬ್ಲೇಡಿಗೆ ಬದಲಾಗಿ ಸ್ಲೇಟ್ – ಜನ ನನ್ನನ್ನು ಮುಟ್ಟಲಾರಂಭಿಸಿದರು.

ಕಳ್ಳತನದ ಪರಿಣಾಮವನ್ನು ಅರಿತ ಲಕ್ಷ್ಮಣನ ತಂದೆ ಮಗನನ್ನು ಶಾಲೆಗೆ ಕಳುಹಿಸುತ್ತಾನೆ. ಇಲ್ಲಿ ಗುರುತಿಲ್ಲದ ಜೀವನಕ್ಕೆ ಬೇಸತ್ತಿದ್ದ ತಂದೆ ಮಗನು ಸಹ ಹಾಗಾಗಬಾರದೆಂಬ ಕಾಳಜಿ ಸಮಾಜದ ಅನೇಕ ಅಸಮಾನತೆಯ ವ್ಯವಸ್ಥೆಗೆ ಸಿಲುಕಿದ ಜನರ ಸಂಕಷ್ಟವನ್ನು ಅರಿಯಲು ಇಟ್ಟಿದ ಪ್ರಥಮ ಹೆಜ್ಜೆ. ತೋಳದ ಗುಂಪಲಿ ಕುರಿ ನುಸುಳಿದಂತೆ ಲಕ್ಷ್ಮಣ ಶಾಲೆಯನ್ನು ಪ್ರಾರಂಭಿಸುತ್ತಾನೆ. ತಂದೆಯ ಇಚ್ಛೆ, ನಿರ್ಧಾರ ಬೇಕು ಮಕ್ಕಳ ಭವಿಷ್ಯಕ್ಕೆ. ಶಿಕ್ಷಣದಿಂದ ಅರಿವು. ಕಾಲಕಾಲಕ್ಕೆ ತನ್ನನ್ನೆ ಪ್ರಶ್ನಿಸಿಕೊಳ್ಳುತ್ತಿದ್ದ. ಭಾರತ ದೇಶ ನನ್ನದು. ನಾವೆಲ್ಲ ಬಾಂಧವರು, ಆದರೆ ನಾವೇಕೆ ಹೀಗೆ? ಕೊಂಡವಾಡೆ ದನ ಮತ್ತು ಲಕ್ಷ್ಮಣನ ಅಣ್ಣ ಒಂದೇ. ದೇವ್ರು ಈ ಶಿಕ್ಷೆ ನನಗೇಕೆ ಕೊಟ್ರು? ನನಗಿಂತಲೂ ಬಿಕ್ಷುಕ ಮೇಲಲ್ಲವೆ? ನಾನು ಮಾಡಿದ ಪಾಪವಾದರೂ ಏನು? ಹಠವಾದಿಯಾದ ಏನಾದರೂ ವಿದಾಯಕ ಕೆಲಸ ಮಾಡಿ ತೋರಿಸಬೇಕು. ಶಿಕ್ಷಣ ವೈಚಾರಿಕ ಮನಸ್ಸನು ಬೆಳೆಸುತ್ತದೆ. ಪ್ರಶ್ನಿಸುವ ಎದೆಗಾರಿಕೆಯನ್ನು ಸೃಷ್ಟಿಸುತ್ತದೆ.

3. ಗುರುತಿಗಾಗಿ ಹೋರಾಡುವ, ಪ್ರತಿಭಟಿಸುವ ಹಂತ (ಸಂಸಾರಸ್ಥನಾಗಿ) ಪರಿವರ್ತನೆಯ ಹೋರಾಟ

ಶೋಷಣೆಯಿಂದ ವಿಮೋಚನೆ, ಅನ್ಯಾಯದಿಂದ ನ್ಯಾಯದೆಡೆಗೆ, ನೋವಿನ ಅಂಧÀಕಾರದಿಂದ ನೆಮ್ಮದಿಯ ಬೆಳಕಿನೆಡೆಗೆ, ತಿರಸ್ಕಾರದಿಂದ ಸ್ವೀಕಾರ, ಅಂಗೀಕಾರ. ಇಜuಛಿಚಿಣe,giಣಚಿಣe ಚಿಟಿಜ ಔಡಿgಚಿಟಿise: ಶಿಕ್ಷಣ, ಸಂಘರ್ಷ, ಸಂಘಟನೆ ಎಂಬ ಅಂಬೇಡ್ಕರ್ ರವರ ಧೋರಣೆಯಂತೆ ಇಲ್ಲಿ ಲಕ್ಷ್ಮಣನ ಜೀವನದಲ್ಲಿ ಪ್ರತಿಭಟನೆ ಪ್ರಮುಖವಾಯಿತು. ನೂಲಿನ ಗಿರಣಿಯಲ್ಲಿದ್ದ ಕಾರ್ಮಿಕರ ಅನ್ಯಾಯವಾಗಿ ಹೊಡೆಯುತ್ತಿದ್ದರು, ಯುನಿಯನ್ ಪ್ರಾರಂಭಿಸಿ ಅಲ್ಲಿನ ಸ್ಥಿತಿಯನ್ನು ಸುಧಾರಿಸಿದ ಲಕ್ಷ್ಮಣ. ದೀಪಾವಳಿ ಹಬ್ಬದಂದು ಸಹ ಪ್ರತಿಭಟನೆ. ನ್ಯಾಯ ಸಿಕ್ಕಿದಾಗ ಆದ ನಿಜವಾದ ದೀಪಾವಳಿ ಹಬ್ಬವನ್ನು ಆಚರಿಸಿದ. ಬಿತ್ತನೆ ಬೀಜದ ಅಂಗಡಿಯಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ. ಕಾರ್ಮಿಕನಾಗಿ, ಚಹಾ ಅಂಗಡಿ, ಕಾಯಿಪಲ್ಯೆ ಅಂಗಡಿ, ಹಾಲಿನ ಡೈರಿ ಪ್ರಾರಂಭಿಸಿ ಕಳ್ಳತನದ ಮೂಲವೃತ್ತಿಯಿಂದ ಹೊರಬರಲು ಪ್ರಯತ್ನಿಸಿದರೂ ತನ್ನ ಬದುಕಿನ ಪ್ರಶ್ನೆ ಕಳೆದ ಹತ್ತು ವರ್ಷಗಳಿಂದ ಎಷ್ಟೇ ಪ್ರಯತ್ನಿಸಿದರೂ ಬಿಡಿಸುವುದಾಗಲಿಲ್ಲ ಎನ್ನುತ್ತಾನೆ ಲಕ್ಷ್ಮಣ. ಬ್ಯಾಂಕ್ ಸಾಲ ತೆಗೆದು ಹೆಂಡತಿಗೆ ಅಂಗಡಿ ಹಾಕಿಕೊಟ್ಟಿದ್ದೇನೆ. ಅವಳು ನನ್ನ ಸಂಘಟನೆಯ ಕಾರ್ಯದಲ್ಲಿ ತುಂಬ ಸಹಕರಿಸಿದ್ದಾಳೆ. ಈಗಲೂ ಅಷ್ಟೇ ಶ್ರದ್ಧೆಯಿಂದ ಸಹಕರಿಸುತ್ತಾಳೆ. ನನ್ನ ಮಕ್ಕಳು ಸದ್ಯ ಲಾತೂರಿನಲ್ಲಿ ಕಲಿಯುತ್ತಿದ್ದಾರೆ. ನನ್ನ ಅಣ್ಣಂದಿರು ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಅಲೆಯುತ್ತಿದ್ದಾರೆ. ನಾನು ಅಲೆಮಾರಿಗಳ ಸಾಮಾಜಿಕ ಪರಿವರ್ತನೆಗಾಗಿ, ನ್ಯಾಯ ಹಕ್ಕಿಗಾಗಿ ಚಳುವಳಿ ನಡೆಸುತ್ತ ಸಂಚಾರ ಮಾಡುತ್ತಿರುತ್ತೇನೆ. ಇಷ್ಟಾದರೂ ನನ್ನ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ರಾಜಕೀಯ ಪುಢಾರಿಗಳು ಸವಿ ಸವಿಯಾಗಿ ಮಾತನಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇನ್ನೊಂದು ಅರ್ಥದಲ್ಲಿ ನಮ್ಮ ಜನರ ಶೋಷಣೆ ಮಾಡುತ್ತಿದ್ದಾರೆ.

ಈ ಆತ್ಮಕಥನದಲ್ಲಿ ಮೂಡಿಬರುವ ವೈರುಧ್ಯಗಳ ಮುಖಾಮುಖಿ

ಹಸಿವು, ಆಶ್ರಯಕ್ಕಾಗಿ ನ್ಯಾಯಸಮ್ಮತ ಮಾರ್ಗಗಳು ಮುಚ್ಚಲ್ಪಟ್ಟಾಗ, ಕಳ್ಳತನ ಮಾಡಿಯೇ ಬದುಕಬೇಕಾದ ಸಂದರ್ಭ.

ಕೋಟ್ಯಾಂತರ ರೂಪಾಯಿಗಳನ್ನು ನ್ಯಾಯಯುತವಾಗಿ ಕಳ್ಳತನ ಮಾಡುವ ಸುಶಿಕ್ಷಿತ, ಪ್ರತಿಷ್ಠಿತ ಸಮಾಜ.

ಲಂಚ ಭ್ರಷ್ಟಾಚಾರಗಳ ಮೂಲಕ ಲಕ್ಷಗಟ್ಟಲೆ ಹಣ ಗಳಿಸುವ ಜನ ಗುನ್ಹೇಗಾರರೆಂದು ಪರಿಗಣಿಸಲ್ಪಡುವುದಿಲ್ಲ.

ಹೊಟ್ಟೆ ಪಾಡಿಗಾಗಿ ಹತ್ತು ಇಪತ್ತು ರೂಪಾಯಿ ಕಳ್ಳತನ ಮಾಡುವ ಜನ ಕ್ರಿಮಿನಲ್ ಟ್ರೈಬ್ಸ್ ಎಂಬ ಪಟ್ಟಕ್ಕೆ ಒಳಗಾಗುತ್ತಾರೆ.

ಕಳ್ಳತನ ಮಾಡುವುದು ತಪ್ಪು ಎಂಬ ಅರಿವಿದ್ದರೂ ಪರ್ಯಾಯ ವೃತ್ತಿಯನ್ನು, ಅವಕಾಶವನ್ನು ನೀಡಲು ಯಾರೂ ಮುಂದಾಗುವುದಿಲ್ಲ. ಇನ್ನೊಂದೆಡೆ ಒತ್ತಾಯಪೂರ್ವಕವಾಗಿ, ಅವಕಾಶಗಳಿಂದ ವಂಚಿತರಾಗಿ ಕಳ್ಳತನವೇ ನಮ್ಮ ಸಮುದಾಯದ ವೃತ್ತಿ, ಅದೇ ನಮ್ಮ ಬದುಕು ಎಂಬ ನಂಬಿಕೆಯನ್ನು ಅಂತರ್ಗತ ಮಾಡಿಕೊಂಡು ಹಿಂಸೆಗೊಳಗಾದರೂ, ಬಂಧನಕ್ಕೊಳಗಾದರೂ, ಅವಮಾನಕ್ಕೊಳಗಾದರೂ, ಪೆÇೀಲಿಸರ ದೌರ್ಜನ್ಯನಿಂದ ಸತ್ತರೂ ನಾವು ಜನ್ಮಜಾತ ಗುನ್ಹೇಗಾರರು ಎಂಬ ಆಳವಾದ ನಂಬಿಕೆ.

ಆತ್ಮಕಥನದ ಆಶಯಗಳು...

ಮನುಷ್ಯರಂತೆ ಬದುಕುಲು ಅವಕಾಶ ಕೊಡಿ ಎನ್ನುವ ಕೂಗು.

ಜನರಿಗೆ ತಿಳುವಳಿಕೆ ಅವಶ್ಯಕತೆ: ಏಕೆಂದರೆ ಸವರ್ಣೀಯರಿಗೆ, ಮಧ್ಯಮ ವರ್ಗದವರಿಗೆ, ಬುದ್ಧಿಜೀವಿಗಳಿಗೆ, ಪಟ್ಟಭದ್ರರಿಗೆ, ಮೂಲಭೂತವಾದಿಗಳಿಗೆ, ಸಂಪ್ರದಾಯವಾದಿಗಳಿಗೆ, ಪ್ರಗತಿಯನ್ನು ವಿರೋಧಿಸುವವರಿಗೆ ಈ ಸಮಾಜದ ತಳಸಮುದಾಯಗಳ ನೋವಿನ ಅರಿವಿಲ್ಲದಿರುವುದು... ಅರಿಯಲು ಪ್ರಯತ್ನಸದಿರುವುದು ಇಂದಿನ ದೊಡ್ಡ ದುರಂತ ... ಉದ್ದೇಶಪೂರ್ವಕ ನಿರ್ಲಕ್ಷ್ಯತನದ ವಾಸ್ತವತೆ ನಿಜಕ್ಕೂ ಶೋಚನೀಯ ಮತ್ತು ನಾಚಿಕೆ ಪಡುವಂತಹದ್ದು.

ಉಪಸಂಹಾರ:

ಹೀಗೆ ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಕೆಳಗಿನ ಅಂಶಗಳನ್ನು ಕಾಣಬಹುದು. ಅನ್ಯಾಯಕ್ಕೆ ಒಳಗಾದ ಸಮಾಜ. ಶೋಷಣೆಗೆ ಒಳಗಾದ ಸಮಾಜದ ಸುಧಾರಣೆಗೆ ಯಾವುದೇ ಯೋಜನೆಯಿಲ್ಲದಿರುವುದು. ಇದ್ದರೂ   ಭ್ರ್ರಷ್ಟಾಚಾರದಿಂದ ಸರಿಯಾಗಿ ಅದು ಜನರಿಗೆ     ತಲುಪುತ್ತಿಲ್ಲದಿರುವುದು. ಬದುಕುವ ಹಕ್ಕನ್ನು ಕಸಿದುಕೊಂಡ ಉಚಲ್ಯಾ ಜನರ ಜೀವನ ಒಂದು ಧಾರುಳ ಕಥೆಯಾಗಿರುವುದು ನಿಜಕ್ಕೂ ಶೋಚನೀಯ. ಈ ಆತ್ಮಕಥನವನ್ನು ಒದುವಾಗ ನನ್ನಲ್ಲಿ ಮೂಡಿಬಂದ ಆಲೋಚನೆ ಮನುಷ್ಯರಾಗಿ ಮಾನವೀಯತೆಯನ್ನು, ಸಂವೇದನಾಶೀಲ ಮನಸ್ಸನ್ನು ಕಳೆದುಕೊಂಡಾಗ ನಾವು ಪರರನ್ನು ಪ್ರಾಣಿಗಳಿಗಿಂತಲೂ ಕ್ರೂರವಾಗಿ ಕಾಣುತ್ತೇವೆ ಎಂಬುದು ಈ ಆತ್ಮಕಥನದಿಂದ ಸ್ಪಷ್ಟವಾಗಿದೆ. ಇಂದು ಕೊರೋನಾ ವೈರಾಣುವಿನ ಸೋಂಕು ಎಲ್ಲಾ ಜಾತಿ, ಧರ್ಮ, ಪಂಗಡ, ಲಿಂಗ, ರಾಷ್ಟ್ರ, ಭಾಷೆ, ವೃತ್ತಿ, ವಿದ್ಯಾರ್ಹತೆ, ಸ್ಥಾನಮಾನ ಎಲ್ಲಾ ನಿರ್ಬಂಧÀಗಳನ್ನು ಮೀರಿದೆ. ಇಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ ಕವನ ನನಗೆ ನೆನಪಾಗುತ್ತದೆ.

 

ಇಲ್ಲಿ ಯಾರೂ ಮುಖ್ಯರಲ್ಲ

ಯಾರೂ ಅಮುಖ್ಯರಲ್ಲ

ಯಾವುದೂ ಯ:ಕಶ್ಚಿತವಲ್ಲ !

 

ಇಲ್ಲಿ ಯಾವುದಕ್ಕೂ ಮೊದಲಿಲ್ಲ

ಯಾವುದೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ

ಕೊನೆಮುಟ್ಟುವುದೂ ಇಲ್ಲ !

 

ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ

ಇಲ್ಲಿ ಎಲ್ಲಕ್ಕೂ ಇದೆ ಅರ್ಥ

ಯಾವುದೂ ಅಲ್ಲ ವ್ಯರ್ಥ

ನೀರೆಲ್ಲವು ತೀರ್ಥ!

 

**********


ಓದಿದ ಪುಸ್ತಕಗಳಿಂದ


 

ನನ್ನ ಪಾಡಿಗೆ ನನ್ನನ್ನು ಬಿಟ್ಟರೆ ತಿಂಗಳುಗಟ್ಟಲೆ ಅಥವಾ ಜೀವನ ಪರ್ಯಂತ ಬೇಕಾದರೂ ಇದ್ದೇನು. ಆದರೆ ನೀನು ಇಲ್ಲೆ ಇರಬೇಕು. ಎಲ್ಲಿಯೂ ಹೋಗುವಂತೆಯೇ ಇಲ್ಲ ಎಂದು ಯಾರಾದರೂ ಅಂದರೆ ಅಲ್ಲಿಗೆ ಮುಗಿಯಿತು ನನ್ನ ಕಥೆ. ಅನಂತರ ಅಲ್ಲಿ ಕಳೆಯುವ ಪ್ರತಿಯೊಂದು ಕ್ಷಣವೂ ನನಗೆ ಭೀಕರವಾಗುತ್ತದೆ.”

 ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ 108

 

ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು, ಅಭಿಮಾನ ಮೂಡುವುದು ಮಹಾ ಯುದ್ಧದ ಮತ್ತು ಅನಂತರ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ, ಮತ್ತು ಓದಿದಾಗ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಅಲ್ಲಿಂದ ಹೇಗಾದರೂ ಮಾಡಿ ಗಡಿ ದಾಟಿ ಸ್ವಾತಂತ್ರ್ಯದ ಉಸಿರಾಡಲು ತವಕಿಸಿದವರ ಕತೆಗಳನ್ನು ಓದುವಾಗ, ಬಡತನ, ಅನಕ್ಷರತೆ ಇತ್ಯಾದಿ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ನಾವು ನಮ್ಮ ಸ್ವಾತಂತ್ರ್ಯವನ್ನೇ ಒತ್ತೆಯಿಡಲು ತಯ್ಯಾರಾಗುವುದು ಅಕ್ಷಮ್ಯ ಎಂದೆನಿಸುತ್ತದೆ.”

 ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ಮಹಾಯುದ್ಧ-2

 

ಈ ಶತಮಾನದ ಅದ್ಭುತಗಳಾಗಿ ಎವರೆಸ್ಟ್ ಹತ್ತಿದ್ದು, ಉಪಗ್ರಹ ಹಾರಿಸಿದ್ದು, ಚಂದ್ರನಲ್ಲಿ ಇಳಿದಿದ್ದು, ಕಂಪ್ಯೂಟರ್ ಚಿಪ್ ಗಳನ್ನು ತಯಾರಿಸಿದ್ದು ಕಣ್ಣು ಕೋರೈಸುವ ಸಾಧನೆಗಳಾದ್ದರಿಂದ ಜನಪ್ರಿಯತೆಯನ್ನೂ ಪ್ರಚಾರವನ್ನೂ ಪಡೆದುಕೊಳ್ಳುತ್ತವೆ. ಆದರೆ ಈ ಶತಮಾನದ ಸಾಧನೆ ಎಂದು ಯಾವುದಾದರೂ ಒಂದೇ ಒಂದು ಸಾಧನೆಯನ್ನು ಹೇಳು ಎಂದು ನನ್ನನ್ನು ಯಾರಾದರೂ ಕೇಳಿದರೆ ನಾನು ನಿಸ್ಸಂಶಯವಾಗಿ ವಿಶ್ವ ಆರೋಗ್ಯ ಸಂಸ್ಥೆ ಸಿಡುಬನ್ನು ಈ ಭೂಮಂಡಲದಿಂದಲೇ ಉಚ್ಚಾಟಿಸಿದ್ದು ಎಂದು ನಾನು ಹೇಳುತ್ತೇನೆ. ಇದು ಇದ್ದಕ್ಕಿದಂತೆ ಧಢೀರೆಂದು ಯಾರೋ ಒಬ್ಬ ಸಹಸ್ರಾರು ಜನರ ಸಮ್ಮುಖದಲ್ಲಿ ಸಾಧಿಸಿ ಚಪ್ಪಾಳೆ ಗಿಟ್ಟಿಸಿದಂಥ ಸಾಧನೆಯಲ್ಲ! ನೂರಾರು ದೇಶಗಳ ಸಹಸ್ರಾರು ಕಾರ್ಯಕರ್ತರು ಮಳೆ ಬಿಸಿಲೆನ್ನದೇ, ಕಗ್ಗಾಡು ಮರಳುಗಾಡೆನ್ನದೇ ಅನೇಕ ವರ್ಷಗಳ ಪರ್ಯಂತ ಕೆಲಸ ಮಾಡಿ ಸಾಧಿಸಿದ ಯಶಸ್ಸು. ನಾಗರೀಕತೆಗಳ ಹುಟ್ಟಿನಿಂದಲೂ ಸತತವಾಗಿ ಸಾವಿರಾರು ಜನಗಳನ್ನು ಬಲಿ ತೆಗೆದುಕೊಂಡ, ವಿರೂಪಗೊಳಿಸಿದ, ಕುರುಡರನ್ನಾಗಿ ಮಾಡಿದ ಈ ಮಹಾಮಾರಿಯಿಂದ ಮನುಕುಲವನ್ನೇ ವಿಮುಕ್ತಿಗೊಳಿಸಿದ್ದು ಈ ಶತಮಾನದ ಮನುಷ್ಯ ಸದ್ದುಗದ್ದಲವಿಲ್ಲದೆ ಸಾಧಿಸಿದ ಆತ್ಯಮೋಘ ಸಾಧನೆ. ಈ ಸಾಧನೆಯಿಂದ ಹಿಂದುಳಿದ ರಾಷ್ಟ್ರಗಳ ಕೋಟ್ಯಂತರ ದೀನರ ಬಡವರ ಆಹುತಿ ತಪ್ಪಿತು. ಇದಕ್ಕಿಂತ ಹೆಚ್ಚಾಗಿ ಇಡೀ ಮನುಕುಲಕ್ಕೆ ಇದರಿಂದ ಒದಗಿದ ಆತ್ಮವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ”

- ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಉಚಾಲ್ಯಾ ಆತ್ಮಕಥನದ ಕುರಿತ ವಿಮರ್ಶೆ


ದಲಿತ ಕ್ರಿಸ್ತ


- ಅಜಯ್ ರಾಜ್

 ಮುಟ್ಟಾಗಿದ್ದು ತಿಳ್ದು ತಿಳ್ದು ಈ ದರಿದ್ರ ಮುಂಡೆ ಚರ್ಚಿಗೋಗವ್ಳಲ್ಲ... ಇವಳಿಗೆ ಏನಾದ್ರೂ ಗ್ಯಾನ ಅಯ್ತ? ಹಿಂಗ್ ಮಾಡಿ ಮಾಡಿನೇ ನಮ್ ಮನೆಗೆ ದರಿದ್ರ ಬಡ್ದಿರೋದು, ಥೂ...” ಎಂದವಳೇ ಮಗ್ದಲೇನಮ್ಮ ತನ್ನ ಸೊಸೆಯನ್ನು ಶಪಿಸುತ್ತಾ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆ ಹಾಕಿಕೊಳ್ಳತೊಡಗಿದಳು. ಅದ್ಯಾವುದ್ಯಾವುದೋ ಪುಸ್ತಕಗಳನ್ನೆಲ್ಲಾ ತಂದು ಮನೆಯಲ್ಲಿ ಗುಡ್ಡೆಹಾಕಿಕೊಂಡು ಈ ಹಳ್ಳಿಯಲ್ಲಿ ಬದಲಾವಣೆ ತರ್ತೀನಿ ಅಂತ ಓಡಾಡ್ಕೊಂಡು ಇದ್ದ ತನ್ನ ಮಗ ಕೈಕಾಲು ಮುರ್ಕೊಂಡು ಆಸ್ಪತ್ರೆಯಲ್ಲಿರುವುದು ಅವಳ ಕರುಳನ್ನು ಹಿಂಡುತ್ತಿತ್ತು. ತನ್ನ ಈ ಸಂಕಟವನ್ನೆಲ್ಲಾ ಅವಳನ್ನು ಮಾತಾಡಿಸಲು ಬರುತ್ತಿದ್ದ ಎಲ್ಲರ ಬಳಿಯೂ ಹೇಳಿಕೊಳ್ಳುತ್ತಿದ್ದಳು. ಇಂದು ಬೆಳಿಗ್ಗೆ ಅವಳ ಎರಡನೇ ಮಗ ಪ್ರವೀಣ “ಇನ್ನೂ ಊರ್ಗೆಲ್ಲಾ ಹೇಳ್ಕೊಂಡು ಬಾ ಇದನ್ನೆಲ್ಲಾ... ಈ ಊರು ಬಿಟ್ಟು ಎಲ್ಲಾದ್ರು ದೂರ ಹೋಗನ ಅಂದ್ರೆ ಕೇಳಲ್ಲ ಮುದುಕಿ ನೀನು,” ಎಂದು ಬೈದಾಗಿನಿಂದ ಮಗನ ಮೇಲಿನ ಕೋಪವನ್ನು ತನ್ನ ಸೊಸೆಗೆ ವರ್ಗಾಯಿಸಿದ್ದಳು. ಆದರೆ ಪ್ರವೀಣ ಮಾತ್ರ ಹಲವು        ದಿನಗಳಿಂದ ನಡೆಯುತ್ತಿರುವ ಘಟನೆಗಳ ಕುರಿತು ಸುಮಾರು ಹೊತ್ತಿನಿಂದ ತೀವ್ರವಾಗಿ ಯೋಚಿಸುತ್ತಿದ್ದ. ಸದಾ ಹುಡುಗರ ಜೊತೆ ಕ್ರಿಕೆಟ್ಟು, ಸಿನಿಮಾ ಹಾಗೂ ಈಜು ಎಂದೆಲ್ಲಾ ಅಲೆಯುತ್ತಿದ್ದವನ ಮುಖ ಇಂದು ಸತ್ವವನ್ನು ಕಳೆದುಕೊಂಡು ಮಂಕಾಗಿತ್ತು.

****

ಬೆಟ್ಟದಪುರ ಸುಮಾರು 500 ವರ್ಷಗಳ ಇತಿಹಾಸವಿರುವ ಒಂದು ಪುಟ್ಟಹಳ್ಳಿ. ಕ್ರಿ.ಶ. 1600ರ ಆಸುಪಾಸಿನಲ್ಲಿ ಫ್ರಾನ್ಸ್ ದೇಶದಿಂದ ಬಂದ ಫ್ರೆಂಚ್ ಮಿಶನರಿಗಳು ಈ ಹಳ್ಳಿಯಲ್ಲಿ ನೆಲೆಸಿದ್ದ ಎಲ್ಲಾ ಜಾತಿ ವರ್ಗಗಳ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದರು. ಮತಾಂತರಗೊಂಡ ಈ ಹಳ್ಳಿಯ ಬಹುತೇಕ ಹಿಂದೂಗಳು ಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದು ಕ್ರಮೇಣ ಈ ಹಳ್ಳಿ ಶೇ 99 ರಷ್ಟು ಕ್ರೈಸ್ತರೇ ವಾಸಿಸುವ ಕ್ರೈಸ್ತ ಪ್ರಧಾನ ಹಳ್ಳಿಯಾಯಿತು. ಪಕ್ಕದ ಹಳ್ಳಿಗಳಲ್ಲಿ ಪುರೋಹಿತ ವರ್ಗದವರ ಹಾಗೂ ಇತರೆ ಮೇಲ್ಜಾತಿ ಜನರ ಕೈಕೆಳಗಿ ಸಿಕ್ಕಿ ನಲುಗಿಹೋದ ದಲಿತರು ಸ್ವಯಂಪ್ರೇರಿತರಾಗಿ ಕ್ರೈಸ್ತರಾಗಿ ಮತಾಂತರಹೊಂದಿ ಸಮಾನತೆಯ ಹಾಗೂ ಘನತೆಯ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಈ ಹಳ್ಳಿಗೆ ವಲಸೆ ಬಂದಿದ್ದರು. ದಶಕಗಳು ಕಳೆದಂತೆ ಮತಾಂತರಗೊಂಡ ದಲಿತ ಕ್ರೈಸ್ತರೂ ಸಹ ಹೆಚ್ಚುಕಮ್ಮಿ ಬೆಟ್ಟದಪುರದ ಕ್ರೈಸ್ತರ ಸಂಖ್ಯೆಗೆ ಸಮನಾಗಿ ವೃಧ್ದಿಯಾಗಿದ್ದರು. ಆದರೆ ಬೆಟ್ಟದಪುರ ಕ್ರೈಸ್ತರಲ್ಲಿ ಅಘೋಷಿತ ಎರಡು ವಿಭಾಗಗಳಿದ್ದವು. ಒಂದು ಸಾಮನ್ಯ ಕ್ರೈಸ್ತರ ಕೇರಿ, ಮತ್ತೊಂದು ದಲಿತ ಕ್ರೈಸ್ತರ ಕೇರಿ. ಇಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಆ ಊರಿಗೆ ಬಂದ ಅನೇಕ ಪಾದ್ರಿಗಳಿಂದಲೂ ಸಾಧ್ಯವಾಗಲಿಲ್ಲ. ಪಾದ್ರಿಗಳೇಕೆ ಸ್ವತಃ ಬಿಷಪ್ಪರುಗಳಿಂದಲೂ ಸಾಧ್ಯವಾಗಲಿಲ್ಲ. ಬಂದವರೆಲ್ಲರೂ ತಮ್ಮ ಎಂದಿನ ಪ್ರಭೋದನೆಯನ್ನು ಕೊಟ್ಟುಹೊಗುತ್ತಿದ್ದರೇ ವಿನಃ ಇಲ್ಲಿನ ಸಮಸ್ಯೆಗಳು ಯಾವುದೇ ರೀತಿಯ ತಾರ್ಕಿಕ ಅಂತ್ಯ  ಕಾಣುತ್ತಿರಲಿಲ್ಲ. ಇಲ್ಲಿನ ದಲಿತ ಕ್ರೈಸ್ತರು ಮೇಲ್ಜಾತಿಯವರ ಮದುವೆಗಳಿಗೆ ಹೋದರೆ ಎಲ್ಲಿ ಅವರಿಗೆಂದೇ ಪ್ರತ್ಯೇಕವಾದ ಊಟದ ಸ್ಥಳವನ್ನು ಮೀಸಲಿಡುತ್ತಿದ್ದರು. ಇಲ್ಲಿನ ಮೇಲ್ಜಾತಿ ಕ್ರೈಸ್ತರಿಗೆ ಊರಿನಲ್ಲಿ ಮೂರ್ನಾಲ್ಕು ಕ್ಷೌರದಂಗಡಿಗಳಿದ್ದರೂ ದಲಿತ ಕ್ರೈಸ್ತರು ಅಲ್ಲಿಗೆ ಹೋಗುವಂತಿರಲಿಲ್ಲ. ಅವರಿಗೆಂದೇ ಒಂದು ಪ್ರತ್ಯೇಕ ಕ್ಷೌರದಂಗಡಿಯಿತ್ತು. ಕೊನೆಗೆ ಚರ್ಚಿನಲ್ಲಿಯೂ ಸಹ ಮೇಲ್ಜಾತಿಯವರು ಇವರೊಡನೆ ಬೆರೆಯುತ್ತಿರಲಿಲ್ಲ. ಹೀಗೆ ಹಲವು ತೆರನಾದ ಅಸಮಾನತೆ ಹಾಗೂ ಅವಮಾನಗಳಿಗೆ ಇಲ್ಲಿನ ದಲಿತ ಕ್ರೈಸ್ತರು ನಿರಂತರವಾಗಿ ಮೈಮನಸ್ಸುಗಳನ್ನೊಡ್ಡಿದ್ದರು.

***

ಮಗ್ದಲೇನಮ್ಮಳ ಮಗ ಕಿರಣನೂ ಸಹ ದಲಿತ ಕ್ರೈಸ್ತ. ತನ್ನ ತಲೆಮಾರಿನ ಅನೇಕ ವಿದ್ಯಾವಂತ ಹುಡುಗರಲ್ಲಿ ಈತನೂ ಒಬ್ಬ. ಇಲ್ಲಿನ ದಲಿತ ಕ್ರೈಸ್ತರ ಮಕ್ಕಳೂ ಸಹ ಚೆನ್ನಾಗಿ ಓದಿ, ಮೇಲ್ಜಾತಿಯವರಿಗೇನು ಕಮ್ಮಿಯಿಲ್ಲದಂತೆ ಸುಶಿಕ್ಷಿತರಾಗಿ ಇಂಜಿನಿಯರ್, ಟೀಚರ್, ಕಾಲೇಜು ಪ್ರೊಫೆಸರ್ ಅಲ್ಲದೆ ಸರ್ಕಾರಿ ಉದ್ಯೋಗಗಳನ್ನೂ ಸಹ ಗಿಟ್ಟಿಸಿಕೊಂಡಿದ್ದರು. ಇವರು ಆರ್ಥಿಕವಾಗಿ ಸಾಕಷ್ಟು ಸ್ಥಿತಿವಂತರಾಗಿದ್ದರೂ ಸಹ ಸಾಮಾಜಿಕವಾಗಿ ತಾವು ದಲಿತರೆನ್ನುವುದು ಹಾಗೂ ಊರಿನ ಮೇಲ್ಜಾತಿ ಕ್ರೈಸ್ತರ ನಿರಂತರ ಮಾನಸಿಕ ಕಿರುಕುಳದಿಂದ ಕನಲಿಹೋಗಿದ್ದರು. ಆದರೆ ಇವರ್ಯಾರೂ ಸಹ ಊರಿನ ಈ ತಾರತಮ್ಯವನ್ನು ಪ್ರಶ್ನಿಸಲು ಧೈರ್ಯಮಾಡಿರಲಿಲ್ಲ. ಆದರೆ ಕಿರಣ ಬಾಲ್ಯದಿಂದಲೇ ಓದುವುದನ್ನು ಗೀಳಾಗಿಸಿಕೊಂಡಿದ್ದ. ತನ್ನ ದೊಡ್ಡಪ್ಪನ ಮಗ ಡೇವಿಡನ ಸಹಾಯದಿಂದ ಹಲವಾರು ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದ. ಇದೇ ಸಮುದಾಯಕ್ಕೆ ಸೇರಿದ್ದ ಪಾದ್ರಿಯೊಬ್ಬರು ಇವನ ಉತ್ಸಾಹ ನೋಡಿ ಇವನನ್ನು ಬೆಂಗಳೂರಿನಲ್ಲಿರಿಸಿ ಅಲ್ಲಿಯೇ ಓದಿಸುತ್ತಿದ್ದರು. ತನ್ನ ಕಾಲೇಜು ದಿನಗಳಲ್ಲಿ ಪ್ರಖ್ಯಾತ ದಲಿತ ಕ್ರೈಸ್ತ ಚಿಂತಕ ಹಾಗೂ ಬರಹಗಾರ ಡಾ. ಡೋಮಿನಿಕ್ ರಾಯಪ್ಪ ಅವರ ಸಾಂಗತ್ಯ ಬೆಳೆಸಿಕೊಂಡ ಕಿರಣ ದಲಿತಪರ ಚಿಂತನೆಗಳಿಗೆ ಮಾರಿಹೋಗಿ, ಆ ಕುರಿತು ಹಲವಾರು ಪುಸ್ತಕಗಳು ಹಾಗೂ ಲೇಖನಗಳನ್ನು ಓದುತ್ತಿದ್ದ. ಡಾ. ಡೋಮಿನಿಕ್ ರಾಯಪ್ಪರ ಚಿಂತನೆಗಳು ಹಾಗೂ ಅವರ ದಲಿತಪರ ಕಾರ್ಯಗಳಿಗೆ ಮಾರುಹೋಗಿದ್ದ ಕಿರಣ, ತನ್ನ ಊರಿಗೆ ಅವರನ್ನು ಕರೆಸಿ ಒಂದು ಉಪನ್ಯಾಸ ಕೊಡಿಸುವ  ಯೋಜನೆಯನ್ನು ಹಾಕಿಕೊಂಡಿದ್ದ. ತಮ್ಮ ಯೋಜನೆಯ ಕುರಿತು ಪ್ರೊಫೆಸರ್ ಡೋಮಿನಿಕರ ಹತ್ತಿರ ಅನೇಕ ಬಾರಿ ಪ್ರಸ್ತಾಪಿಸಿದರೂ ಸಹ ಅವರು ಬಿಝಿಯಾಗಿದ್ದರಿಂದ ಕಿರಣನ ಯೋಜನೆಗೆ ಕಾಲ ಕೂಡಿ ಬಂದಿರಲಿಲ್ಲ. ತಿಂಗಳ ಹಿಂದೆ ಪ್ರೊಫೆಸರ್ ಡೋಮಿನಿಕರೇ ಖುದ್ದು ಕಿರಣನಿಗೆ ಕರೆ ಮಾಡಿ ಸಂಜೆ ಮನೆಗೆ ಬರುವಂತೆ ಹೇಳಿದ್ದರು. ಕಿರಣ ಮತ್ತು ಆತನ ಸ್ನೇಹಿತ ಪ್ರಶಾಂತ್ ಪ್ರೊಫೆಸರರ ಮನೆಗೆ ತಲುಪುವುದರಲ್ಲಿ ರಾತ್ರಿ ಎಂಟು ಗಂಟೆಯಾಗಿತ್ತು. ತಡವಾಗಿದ್ದಕ್ಕೆ ಪ್ರೊಫೆಸರ್ ಬಯ್ಯುತ್ತಾರೆ ಎಂಬ ಅಳುಕಿನಿಂದಲೇ ಅವರ ಮನೆಯ     ಕಾಲಿಂಗ್ ಬೆಲ್ ಒತ್ತಿದ ಕಿರಣನಿಗೆ ಹಿತ್ತಲಲ್ಲಿ ಕಟ್ಟಿದ್ದ ನಾಯಿ ಬೊಗಳುವ ಸದ್ದು ಕೇಳಿಸಿತು. ಮನೆಗೆಲಸದಾಕೆ ಗೌರಮ್ಮ ಅರ್ಧ ಊಟಕ್ಕೆ ಎದ್ದು ಬಂದು ಬಾಗಿಲನ್ನು ತೆರೆದಾಗ ಅವಳ ಕೈ ಎಂಜಲಾಗಿರುವುದನ್ನು ಗಮನಿಸಿದ ಕಿರಣ “ಸಾರಿ. ಸರ್ ನಮ್ಮನ್ನ ಬರೋಕೆ ಹೇಳಿದ್ರು. ಅವರು ಇದ್ದಾರಾ?” ಎಂದು ಕೇಳುವ ಮೊದಲೇ ಗೌರಮ್ಮ ಮೇಲಿದ್ದಾರೆ ಹೋಗಿ ನೋಡಿ ಎಂದು ಬಾಗಿಲನ್ನು ಮುಚ್ಚಿದಳು. ಮೆಟ್ಟಿಲು ಹತ್ತಿ ಮೇಲೆ ಹೋದ ಕಿರಣ ಹಾಗೂ ಪ್ರಶಾಂತನಿಗೆ ಮಂದ ಬೆಳಕಿನಲ್ಲಿ, ಚಂದ್ರನನ್ನೇ ದಿಟ್ಟಿಸುತ್ತಾ ಸಿಗರೇಟು ಸೇದುತ್ತಿದ್ದ ಪ್ರೊಫೆಸರ್ ಕಂಡರು. ಕೊಂಚ ದಣಿದವರಂತೆ ಕಂಡರೂ ತಮ್ಮ ಎಂದಿನ ಧಾಟಿಯಲ್ಲಿ “ಬನ್ರಯ್ಯಾ... ಯಾಕಿಷ್ಟು ಲೇಟು? ಊಟ ಮಾಡ್ತೀರೇನಯ್ಯಾ? ಎಂದು ಕೇಳಿದಾಗ ಕಿರಣನಿಗೆ ಇದ್ದ ಅಳುಕು ಮಾಯವಾಗಿ ಕೊಂಚ ಹಾಯೆನಿಸಿತು. ಸುಮಾರು   ದಿನಗಳ ನಂತರ ಬಿಡುವಾಗಿದ್ದ ಪ್ರೊಫೆಸರ್ ಹುಡುಗರ ಓದು, ಕಾರ್ಯ ಚಟುವಟಿಕೆಗಳ ಕುರಿತು ವಿಚಾರಿಸಿ, ತಮ್ಮ ಅನುಭವಗಳು, ಮುಂದೆ ಮಾಡಬೇಕಾದ ಚಳುವಳಿ, ಕಾರ್ಯಾಗಾರಗಳ ವಿಷಯವನ್ನು ಅವರೊಂದಿಗೆ ಹಂಚಿಕೊಂಡರು. ಅಂಬೆಡ್ಕರ್ ಮತ್ತು ಸಂವಿದಾನ, ಪ್ರಸ್ತುತ ರಾಜಕೀಯ, ಧಾರ್ಮಿಕ ಯಜಮಾನಿಕೆ ಹೀಗೆ ಹತ್ತು ಹಲವು ಸಂಗತಿಗಳ ಕುರಿತು ಮಾತಾನಾಡಿದ ಪ್ರೊಫೆಸರ್ ತಮ್ಮ ವಾಚನ್ನು ನೋಡಿಕೊಂಡಾಗ ರಾತ್ರಿ ಮಧ್ಯರಾತ್ರಿ ಹನ್ನೆರಡೂವರೆಯಗಿತ್ತು. ಹುಡುಗರನ್ನು ಇಂದು ಇಲ್ಲಿಯೇ ಉಳಿದುಕೊಳ್ಳಿ ಎಂದಾಗ ಅವರು ಮರು ಮಾತನಾಡದೆ ಒಪ್ಪಿಕೊಂಡರು. ಮೆಟ್ಟಿಲಿಳಿದು ತಮ್ಮ ರೂಮಿನತ್ತ ನಡೆದು ಹೋಗುತ್ತಿದ್ದವರನ್ನು ಒಂದು ಕ್ಷಣ ತಡೆದ ಕಿರಣ ತನ್ನ ಊರಿನಲ್ಲಿ ಒಂದು ಉಪನ್ಯಾಸ ನೀಡಬೇಕೆಂದು ಕೇಳಿಕೊಂಡ. ಇದಕ್ಕೆ ಸಂತೋಷವಾಗಿ ಒಪ್ಪಿಕೊಂಡ ಅವರು “ನೀವು ಒಂದು ಟೈಮ್ ಫಿಕ್ಸ್ ಮಾಡಿ, ಎಲ್ಲಾ ಏರ್ಪಾಡು ಮಾಡೋಳ್ರಯ್ಯಾ... ಅದೆಲ್ಲಾ ಆದ್ಮೇಲೆ ಹೇಳಿ. ಖಂಡಿತ ನಾನು ಬರ್ತೀನಿ” ಎಂದು ಹೇಳಿದಾಗ ಕಿರಣನಿಗೆ ಪರಮಾನಂದವಾಯಿತು. ಅದೇ ಸಮಯಕ್ಕೆ ಕಾಲೇಜಿನ ಬೇಸಿಗೆ ರಜೆ ಬಂತು. ಕಿರಣ ಪ್ರಶಾಂತನನ್ನು ತನ್ನೂರು ಬೆಟ್ಟದಪುರಕ್ಕೆ ಡೋಮಿನಿಕ್ ರಾಯಪ್ಪರ ಉಪನ್ಯಾಸಕ್ಕಾಗಿ ಸಿದ್ಧತೆಮಾಡಿಕೊಳ್ಳುವುದಕ್ಕಾಗಿ ಕರೆದಾಗ ಪ್ರಶಾಂತ್ ಬರಲು ಒಪ್ಪಿಕೊಂಡ. ಅಂದು ಶನಿವಾರದ ಇಳಿಸಂಜೆ ಮೆಜೆಸ್ಟಿಕ್ಕಿನಿಂದ ಹೊರಡುವ ಕೆಂಪು ಬಸ್ಸನ್ನು ಹತ್ತಿದ ಈ ಹುಡುಗರಿಗೆ ಮತ್ತೆ ಎಚ್ಚರವಾಗಿದ್ದು ಕಂಡಕ್ಟರ್ “ಬೆಟ್ಟದಪುರ ಬಂತು ಇಳ್ಕೊಳ್ರಯ್ಯಾ” ಎಂದು ಹೇಳಿದಾಗಲೇ.

***

ಸುತ್ತಲು ಹಸಿರ ಶಾಲನ್ನು ಹೊದ್ದುಕೊಂಡ ಬೆಟ್ಟಗಳು, ರಸ್ತೆಯ ಇಕ್ಕೆಲಗಳ ಗದ್ದೆಗಳಲ್ಲಿ ಜಾನಪದ ಹಾಡುಗಳನ್ನಾಡಿಕೊಂಡು ನಾಟಿ ಮಾಡುತ್ತಿರುವ ಹಳ್ಳಿಯ ಹೆಂಗಸರು, ಕಿರಣ ಮತ್ತು ಪ್ರಶಾಂತ ನಡೆದುಹೋಗುತ್ತಿದ್ದ  ದಾರಿಯುದ್ದಕ್ಕೂ ಬರುವ ತಿಂಗಳು ನಡೆಯುವ ಊರ ಹಬ್ಬದ ಕುರಿತ ವಿಶೇಷ ಫ್ಲೆಕ್ಸು ಮತ್ತು ಬ್ಯಾನರುಗಳೇ ತುಂಬಿ ಹೋಗಿದ್ದವು. ಪ್ರಶಾಂತನು ಹುಟ್ಟಿ ಬೆಳೆದದ್ದೆಲ್ಲಾ ನಗರ ಪ್ರದೇಶವಾಗಿದ್ದರಿಂದ ಹಾಗೂ ಅವನ ಅಜ್ಜಿ ತಾತನೂ ಸಹ ನಗರದವರೇ ಆಗಿದ್ದರಿಂದ ಬೆಟ್ಟದಪುರದ ಪರಿಸರವನ್ನು ನೋಡಿ ಉಲ್ಲಸಿತಗೊಂಡಿದ್ದ.

ಹೇಯ್ ಕಿರಣ, ಏನೋ ಮಾರಾಯ ನಿಮ್ಮ ಊರು ಇಷ್ಟು ಚೆನ್ನಾಗಿದೆ. ಇಲ್ಲಿರೋ ಬೆಟ್ಟಗಳು, ತೋಪುಗಳು, ಪಕ್ಕದಲ್ಲಿ ಹರಿಯೋ ನದಿ... ಅಬ್ಬಾ,,, ಸ್ವರ್ಗ ಮಗಾ... ಚಾನ್ಸ್ ಸಿಕ್ದ್ರೆ ನಾನು ಇಲ್ಲೇ ಸೆಟಲ್ ಆಗಿಬಿಡ್ತೀನಿ.”

ಕಿರಣ “ಹೂಂ. ಇಲ್ಲೆ ಯಾವ್ದಾದ್ರೂ ಹುಡ್ಗೀನ ಪಟಾಯ್ಸಿ ಮದ್ವೆ ಆಗ್ಬಿಡು. ನಮ್ಮೂರ್ ಅಳಿಯ ಆಗ್ಬಿಡ್ತೀಯಾ,” ಎಂದಾಗ ಇಬ್ಬರು ಗೊಳ್ ಎಂದು ನಕ್ಕರು.

ಊರಿನ ಮುಖ್ಯಬೀದಿಯನ್ನು ತಲುಪುತ್ತಿದ್ದಂತೆ ಕಿರಣ ಪ್ರಶಾಂತನಿಗೆ ಒಂದು ನಿಮಿಷ ಚರ್ಚಿನಲ್ಲಿ ಪ್ರಾರ್ಥನೆ ಮಾಡಿಕೊಂಡು ಬರುವುದಾಗಿ ಹೇಳಿದಾಗ ಪ್ರಶಾಂತ್ ತಾನೂ ಬರುವುದಾಗಿ ಹೇಳಿ ಅವನನ್ನು ಹಿಂಬಾಲಿಸಿದ. ಕಿರಣ ಒಳಗಡೆ ಪ್ರಾರ್ಥನೆಗೆ ಹೋದಾಗ ಪ್ರಶಾಂತ ಚರ್ಚಿನ ಆವರಣದಲ್ಲಿ ನಿಂತು ಚರ್ಚಿನ ವಾಸ್ತುಶಿಲ್ಪ, ಅಲ್ಲಿದ್ದ ಯೇಸು, ಮರಿಯಾ ಹಾಗೂ ಸಂತರುಗಳ ಪ್ರತಿಮೆಗಳನ್ನು ಕುತೂಹಲದಿಂದ      ದಿಟ್ಟಿಸುತ್ತಿದ್ದ. ಇದ್ದಕ್ಕಿದ್ದ ಹಾಗೆ ಚರ್ಚಿನ ಪಕ್ಕದ ಮೈದಾನದಿಂದ ಚಿಕ್ಕ ಹುಡುಗಿ ಜೋರಾಗಿ ಅಳುತ್ತಿರುವುದು ಪ್ರಶಾಂತನಿಗೆ ಕೇಳಿಸಿತು. ಮೊದಲಿಗೆ ಮೆಲ್ಲಗೆ ಕೇಳಿಸುತ್ತಿದ್ದ ಹುಡುಗಿಯ ಅಳುವ ಶಬ್ದ ಕ್ರಮೇಣ ಜೋರಾಗಿ, ಅವಳು ಬಿಕ್ಕಳಿಸುತ್ತಿದ್ದಳು. ಏನಾಗಿದೆ ಎಂದು ನೋಡಲು ಮೈದಾನಕ್ಕೆ ಧಾವಿಸಿದ ಪ್ರಶಾಂತನಿಗೆ ಅಲ್ಲಿನ ದೃಶ್ಯ ಮನಕಲಕುವಂತಿತ್ತು.

ಎಪ್ಪತ್ತರ ಆಸುಪಾಸಿನ ಒಬ್ಬ ವೃದ್ದನನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬ ಮನಬಂದಂತೆ ಥಳಿಸುತ್ತಿದ್ದ. ಆ ಮುದುಕನ ಮೊಮ್ಮಗಳು “ತಾತನನ್ನು ಹೊಡೆಯಬೇಡಿ, ಪ್ಲೀಸ್ ಬಿಟ್ಟುಬಿಡಿ” ಎಂದು ಅಂಗಲಾಚುತ್ತಿದ್ದರೂ ಕೇಳದೆ ಆ ವ್ಯಕ್ತಿ ಮುದುಕನ್ನು ವಾಮಾಗೋಚರವಾಗಿ ಬೈದು ಥಳಿಸುತ್ತಿದ್ದ. ಈ ದೃಶ್ಯವನ್ನು ನೋಡಿದ ಪ್ರಶಾಂತನಿಗೆ ಕರುಳು ಕಿವುಚಿದಂತಾಗಿ ಮುದಕನನ್ನು ಥಳಿಸುತ್ತಿದ್ದ ಆ ವ್ಯಕ್ತಿಯನ್ನು ಹಿಡಿದು ಜೋರಾಗಿ ತಳ್ಳಿ ಮುದುಕನ್ನು ಎಬ್ಬಿಸಿ, ಅವನನ್ನು ಕಲ್ಲುಬೆಂಚಿನ ಮೇಲೆ ಕೂರಿಸಿ, ಕೊಂಚ ನೀರು ಕುಡಿಸಿದ. ಇತ್ತ ಪ್ರಶಾಂತನು ತಳ್ಳಿದ ವೇಗಕ್ಕೆ ಅಷ್ಟು ದೂರ ಹೋಗಿ ಬಿದ್ದಿದ್ದ ವ್ಯಕ್ತಿ ಎದ್ದು ಬಂದು ಪ್ರಶಾಂತನ ಮೇಲೆ ದಾಳಿ ಮಾಡಿದ. ಕಟ್ಟುಮಸ್ತಾಗಿದ್ದ ಪ್ರಶಾಂತ ತನ್ನನ್ನು ಹೊಡೆಯಲು ಬಂದ ಆ ವ್ಯಕ್ತಿಯ ಪಕ್ಕೆಗೆ ಜಾಡಿಸಿ ಒದ್ದಾಗ ಅವನು ಕಿರುಚಿಕೊಂಡು ಕೌಂಪಡಿನ ಗೋಡೆಗೆ ಗುದ್ದಿಕೊಂಡು ಬಿದ್ದ.

ಇದೆಲ್ಲವನ್ನು ದೂರದಿಂದಲೇ ಗಮನಿಸಿದ ಕಿರಣ ಓಡಿ ಬಂದು ಪ್ರಶಾಂತನನ್ನು ಸಮಾಧಾನ ಪಡಿಸಿ, ನಡೆದುದ್ದೇನೆಂದು ಕೇಳಿದಾಗ ಆ ಮುದುಕನ ಮೊಮ್ಮಗಳು ತನ್ನ ತಾತನಿಗೆ ಹಸಿವಾಗಿ ಪಕ್ಕದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಮೇಲ್ಜಾತಿಯವರ ಊಟದ ಪಂಕ್ತಿಯಲ್ಲಿ ಕುಳಿತಿದ್ದಾಗಿಯೂ, ಇದನ್ನು ಕಂಡ ಆ ವ್ಯಕ್ತಿ ತಾತನನ್ನು ಅಲ್ಲಿಂದ ಹೊರಗೆಳೆದುಕೊಂಡು ಬಂದು ಥಳಿಸಿದ್ದಾಗಿಯೂ ಹಾಗೂ ಕಿರಣ ಥಳಿಸುತ್ತಿದ್ದ ಮೇಲ್ಜಾತಿಯವನನ್ನು ಹೊಡೆದು ತನ್ನ ತಾತನನ್ನು ರಕ್ಷಿಸಿದ್ದಾಗಿಯೂ ಎಲ್ಲವನ್ನು ಒಂದೇ ಉಸಿರಿನಲ್ಲಿ ಕಿರಣನಿಗೆ ಒಪ್ಪಿಸಿದಳು. ಪ್ರಶಾಂತನ ಈ ಕೃತ್ಯದಿಂದ ಆಗಬಹುದಾದ ಅನಾಹುತವನ್ನು ಒಮ್ಮೆಲೆ ಗ್ರಹಿಸಿದ ಕಿರಣ ಅವನನ್ನು ವೇಗವಾಗಿ ಕರೆದುಕೊಂಡು ತನ್ನ ಮನೆಯೆಡೆಗೆ ಹೊರಟುಬಿಟ್ಟ.

***

ಅಲ್ವೋ, ಇದೆಲ್ಲಾ ಯಾಕೋ ಬೇಕಿತ್ತು ನಿಂಗೆ? ಈ ಊರಿನ ಸಮಾಚಾರ ನಿನಗೆ ಗೊತ್ತಿಲ್ಲ. ಅವರೇನಾದ್ರೂ ಮಾಡ್ಕೊಳ್ಳಿ ಎಂತ ಸುಮ್ನೆ ಇರ್ಬೇಕಿತ್ತು ನೀನು,” ಎಂದಾಗ ಕಿರಣ ಮುಖದಲ್ಲಿ ಭಯ ಮಿಶ್ರಿತ ಅಸಹನೆಯೊಂದು ಸುಳಿದು ಮಾಯವಾಯಿತು.

ಲೇಯ್, ಆ ಗಡವ ನನ್ಮಗ ಪಾಪ ಆ ಮುದುಕನ್ನ ಒಳ್ಳೆ ನಾಯಿಗೊಡ್ದಂಗ್ ಹೊಡಿತಿದ್ರೆ ನಾನು ನೋಡ್ಕೊಂಡು ಸುಮ್ನಿರ್ಬೇಕಿತ್ತಾ? ನೀನು ಇನ್ನೊಂದ್ ಸ್ವಲ್ಪ ಲೇಟಾಗಿ ಬರ್ಬೇಕಿತ್ತು, ಆ ಬೋಳಿಮಗನ್ ಕೈಕಾಲು ಮುರಿತಿದ್ದೆ.” ಪ್ರಶಾಂತನ ಮುಖ ಕೋಪದಿಂದ ಕಡುಗೆಂಪಾಗಿತ್ತು. ಪ್ರಶಾಂತನ ಈ ಮಾತುಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಕಿರಣ ಮೌನವಾಗಿದ್ದ. ತನ್ನ ಮಾತುಗಳಿಗೆ ಕಿರಣನ ಉತ್ತರವನ್ನು ನಿರೀಕ್ಷಿಸಿದ್ದ ಪ್ರಶಾಂತನಿಗೆ ನಿರಾಸೆಯಾಯಿತು. ತಾನೇ ಮೌನವನ್ನು ಮುರಿದ ಪ್ರಶಾಂತ್ “ಕಿರಣ್, ನಿಮ್ಮ ಕ್ರೈಸ್ತಧರ್ಮದಲ್ಲೂ ಜಾತಿ ತಾರತಮ್ಯವಿದೆ ಅಂತ ಇವತ್ತೇ ಕಣೋ ನಂಗೆ ಗೊತ್ತಾಗಿದ್ದು. ಇಲ್ಲಿಯವರೆಗೂ ನಮ್ಮ ಹಿಂದೂ ಧರ್ಮದಲ್ಲೇ ಈ ರೀತಿಯ ಜಾತಿ ವ್ಯವಸ್ಥೆ ಇದೆ ಅನ್ಕೊಂಡಿದ್ದೆ. ಆದ್ರೆ ಇಲ್ಲೂ ಕೂಡ ಅದೇ ಕತೆ” ಎಂದು ಹೇಳಿ ನಿಟ್ಟುಸಿರು ಬಿಟ್ಟ.

ಸ್ವಲ್ಪ ಸಮಯದ ಹಿಂದೆ ಚರ್ಚಿನ ಮೈದಾನದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ತನ್ನ ಬದುಕನ್ನು ಮೌನದ ಪರಿಧಿಯಲ್ಲಿ ವಿಮರ್ಶಿಸುತ್ತಿದ್ದ ಕಿರಣನ ಮನದ ಸ್ಮøತಿ ಪಟಲದ ಮೇಲೆ ದಲಿತ ಕ್ರೈಸ್ತನಾಗಿ ತಾನು ತನ್ನ ಬಾಲ್ಯದಿಂದ ಅನುಭವಿಸಿದ ನೋವು ಅವಮಾನಗಳು ಒಂದು ಕ್ಷಣ ಮೂಡಿಬಂದು ಮರೆಯಾದವು. ಈಗ ಪ್ರಶಾಂತನ ಮೌನವನ್ನು ಭಂಗಗೊಳಿಸಲು ಕಿರಣ ಮಾತಿಗಿಳಿದ.

ಪ್ರಶಾಂತ್, ನಮ್ಮ ಪೂರ್ವಜರು ಮೂಲತಃ ಹಿಂದೂಗಳು, ಅದರಲ್ಲೂ ದಲಿತರು. ನಮ್ಮ ಮೂಲ ಧರ್ಮದಲ್ಲಿ ಶತಮಾನಗಳಷ್ಟು ಶೋಷಣೆ ಅನುಭವಿಸಿದ ಅವರು, ಘನತೆ, ಸ್ವಾಭಿಮಾನದ ಬದುಕು ನಮ್ಮದಾಗುತ್ತದೆ ಎಂದು ಕ್ರೈಸ್ತಧರ್ಮಕ್ಕೆ ಮತಾಂತರವಾದರು. ಆದರೆ ಇಲ್ಲೂ ಸಹ ಶತಮಾನಗಳ ಹಿಂದೆ ಕ್ರೈಸ್ತಧರ್ಮಕ್ಕೆ ಮತಾಂತರವಾದ ಮೇಲ್ಜಾತಿಯವರೇ ಇದ್ದಾರೆ. ಅವರ ಆಚರಣೆಗಳು, ಭಕ್ತಿ, ಆರಾಧನೆಗಳು ವಿಭಿನ್ನವಾಗಿದ್ದರೂ ಮನಸ್ಸಿನಲ್ಲಿನ ಜಾತಿ ವ್ಯಸನ ಎಳ್ಳಷ್ಟೂ ಕಡಿಮೆಯಾಗಿಲ್ಲ ಕಣೊ.” ಕಿರಣ ತನ್ನ ಒಡಲಾಳದ ವೇದನೆಗಳನ್ನು ಪ್ರಶಾಂತನಲ್ಲಿ ನಿವೇದಿಸಿಕೊಂಡ.

ಅಲ್ವೋ, ಕ್ರಿಸ್ತ ಹುಟ್ಟಿದ್ದು ಒಂದು ದನದ ಕೊಟ್ಟಿಗೆಯಲ್ಲಿ. ಬೆರೆತಿದ್ದು ಬಡವರೊಡನೆ ದಲಿತರೊಡನೆ. ನಾನು ಬೈಬಲಿನಲ್ಲಿ ಓದಿದ ಹಾಗೆ ಯೇಸುಕ್ರಿಸ್ತ ದಲಿತರು, ಬಡವರು, ಸಮಾಜದಿಂದ ತಿರಸ್ಕøತರಾಗಿದ್ದವರ ಜೊತೆ ಬೆರೆತರು. ಅದರಲ್ಲೂ ಅವರ ಶಿಷ್ಯರೆಲ್ಲ ಬಹುತೇಕ ದಲಿತರೇ ಆಗಿದ್ದರು. ಈಗಿರೋವಾಗ ಅವನ ಹಿಂಬಾಲಕರು ಅನ್ನಿಸಿಕೊಳ್ಳೋ ಇವರಲ್ಲೇಕೋ ಈ ಭೇಧಭಾವ? ಎಲ್ಲರಲ್ಲೂ ಹರಿಯೋದು ಒಂದೇ ರಕ್ತ ತಾನೇ?”

ಅದು ನನಗೂ ನಿನಗೂ ಅರ್ಥ ಆಗುತ್ತೆ ಆದ್ರೆ ಈ ಜನಕ್ಕೆ. ನಮ್ಮ ಪಾಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬರು ಇರದೆ ಹೋಗಿದ್ದರೆ ಈಗಲೂ ಸಹ ನಾವು ಜೀತಧಾಳುಗಳಾಗಿರಬೇಕಿತ್ತು. ನಮ್ಮ ಪಾಲಿಗೆ ವಿದ್ಯೆ, ಘನತೆಯ - ಸ್ವಾಭಿಮಾನದ ಬದುಕು ಕನಸಾಗಿಯೇ ಉಳಿಯುತ್ತಿತ್ತು. ನಮ್ಮ ದೇಶದಲ್ಲಿ ಸಂವಿಧಾನ ಇದ್ದರೂ, ನಾವು ನಮ್ಮ ಜೀವನ ಸಾಕಷ್ಟು ಸುಧಾರಣೆಯಾದರೂ ಸಹ ಇವತ್ತಿಗೂ ದಲಿತರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೀತಾನೆ ಇದೆ. ತನ್ನ ಸಮಾಜದಲ್ಲಿ ಬಡವರ ಶೋಷಿತರ, ದಮನಿತರ ಪರ ದನಿಯೆತ್ತಿದ. ಪ್ರಭುತ್ವವನ್ನು ಧಿಕ್ಕರಿಸಿ, ಜನರಿಗೆ ಕಬ್ಬಿಣದ ಕಡಲೆಯಂತಿದ್ದ ಧಾರ್ಮಿಕ ಕಟ್ಟಳೆಗಳನ್ನು ಸರಳಗೊಳಿಸಿ ತನ್ನ ಸಾಮತಿಗಳ ಮೂಲಕ ‘ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು,’ ಎಂದು ಸಾರಿದ. ಕ್ರಿಸ್ತ ದಲಿತರಲ್ಲಿ ದಲಿತನಾಗಿ ಅವರ ಬವಣೆಗಳನ್ನು ಅರ್ಥಮಾಡಿಕೊಂಡ. ಶತಮಾನಗಳುದ್ದಕ್ಕೂ ದಲಿತರು, ಸಮಾಜದಿಂದ ತಿರಸ್ಕರಿಸಲ್ಪಟ್ಟವರು ಎಂಬ ಹಣೆಪಟ್ಟಿಯನ್ನೊತ್ತಿಕೊಂಡು ನಿರಂತರ ಶೋಷಣೆಯನ್ನನುಭವಿಸಿದವರಿಗೆ ಕ್ರಿಸ್ತನ ಸಾಂಗತ್ಯ ಬದುಕಿಗೆ ಸಾಂತ್ವನವನ್ನು ನೀಡಿತು. ಆತನ ಭರವಸೆಯ ಮಾತುಗಳಿಂದ ಅವರ ಹೃನ್ಮನಗಳ ಬಾರ ಹಗುರವಾಯಿತು. ಆದರೆ ಇಂದು ಆತನನ್ನು ಹಿಂಬಾಲಿಸುತ್ತಿದೇವೆ ಎಂಬುವವರ ನಡವಳಿಕೆಗಳು ಆತನ ಬೋಧನೆಗಳಿಗೆ ವಿರುಧ್ಧವಾಗಿದೆ. ಕ್ರಿಸ್ತೀಯ ಬದುಕಿನ ಮೂಲ ಆಶಯವನ್ನೇ ಇವರು ಮರೆತಿದ್ದಾರೆ,” ಹೀಗೆ ಕಿರಣ ಭಾವಾವೇಷದಿಂದ ಮಾತನಾಡುತ್ತಿರುವಾಗಲೇ ಅವನ ಚಿಕ್ಕಪ್ಪ ಕ್ವಾಟ್ರು ಇನ್ನೇಶಿ ಓಡಿಬಂದವನೇ ಒಂದೇ ಉಸಿರಿನಲ್ಲಿ “ಲೋ, ಕಿರಿಣ, ಮಧ್ಯಾಹ್ನ ನೀನು ನಿನ್ ಪ್ರೆಂಡು ದೊಡ್ಮನೆ ಚಿನ್ನಪ್ಪನ ತಾವ ಜಗ್ಳ ಮಾಡ್ಕಂಡು ಅವನ್ನ ಹೊಡ್ದ್ ಬಂದ್ರಂತೆ! ಅದ್ಕೆ ಮೇಲ್ನೋರು ನಿಮ್ಮನ್ನ ಹುಡ್ಕೊಂಡ್ ಬತ್ತಾವ್ರೆ. ಈಗಿಂದೀಗ್ಲೆ ಊರ್ ಬಿಡ್ರೋ,” ಎಂದವನೇ ಊರಿನ ತೋಪಿಗಳ ಕಡೆ ಓಡಿಹೋದ.

ಇದನ್ನು ಕೇಳಿಸಿಕೊಂಡ ಕಿರಣನ ಅಣ್ಣ ಪ್ರವೀಣ “ಕಿರಣ, ಈ ಊರಿನ ಬುದ್ಧಿ ನಿನಗೆ ಗೊತ್ತೆ ಇದೆ. ಅವ್ರು ಸರಿಯಿಲ್ಲ. ನಿನ್ನ ಜೀವಕ್ಕೆ ಅಪಾಯ ಬಂದ್ರೂ ಬರ್ಬೋದು. ಗೊತ್ತಿಲ್ದೆ ನಿನ್ ಸ್ನೇಹಿತ ದೊಡ್ಮನೆ ಚಿನ್ನಪ್ಪನ ಮೇಲೆ ಕೈಮಾಡ್ಬಿಟ್ಟವ್ನೆ. ಪರಿಸ್ಥಿತಿ ಕೆಟ್ಟೋಗಿದೆ ಕಣ್ರೋ. ನೀವು ಈಗಿಂದೀಗ್ಲೆ ಊರ್ ಬಿಡಿ,” ಎಂದು ಹೇಳಿ ಅವರನ್ನೆಳೆದು ಕೊಂಡು ಹಿಂಬಾಗಿಲಿನಿಂದ ಸಾಗಹಾಕಲು ಹೋಗುತ್ತಿದ್ದಂತೆ ಹಿಂಬಾಗಿಲಿನಿಂದ ಬಂದ ಚಿನ್ನಪ್ಪನ ಅಣ್ಣನ ಮಕ್ಕಳು ಮನಸ್ಸೋ ಇಚ್ಛೆ ಕಿರಣನನ್ನೂ ಹಾಗೂ ಪ್ರಶಾಂತನನ್ನು ಥಳಿಸಿದರು. ಇದನ್ನು ತಡೆಯಲು ಬಂದ ಪ್ರವೀಣನಿಗೆ ಹಾಗೂ ಮಗ್ದಲೇನಮ್ಮಳಿಗೂ ಹೊಡೆತಗಳು ಬಿದ್ದವು. ಮನಬಂದಂತೆ ನಿಂದಿಸಿದ ದೊಡ್ಮನೆ ಚಿನ್ನಪ್ಪನ ಮಕ್ಕಳು ಹೊಡೆದ ಹೊಡೆತವನ್ನು ತಾಳಲಾರದೆ ಪ್ರಶಾಂತನ ಪ್ರಜ್ಞೆ ತಪ್ಪಿತು. ಇದೇ ವೇಳೆ ಊರಿನವರ್ಯಾರೋ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೋಲೀಸರ ಆಗಮನವಾಗುತ್ತಿದ್ದಂತೆ ಚಿನ್ನಪ್ಪನ ಮಕ್ಕಳು ಅಲ್ಲಿಂದ ಪರಾರಿಯಾದರು. ತೀವ್ರವಾಗಿ ಹಲ್ಲೆಗೊಳಗಾಗಿದ್ದ ಕಿರಣನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವನ ಕಾಲಿನ ಮೂಳೆಗಳು ಮುರಿದು ತಲೆ, ಕೈ, ಮತ್ತು ಹೊಟ್ಟೆಯ ಭಾಗಗಳಿಗೆ ಗಾಯಗಳಾಗಿದ್ದವು. ಮಗ್ದಲೇನಮ್ಮಳು ತನ್ನ ಮಗನ ಸ್ಥಿತಿಗೆ ಕಾರಣರಾದವರನ್ನೆಲ್ಲಾ ಶಪಿಸುತ್ತಾ, ಪದೇ ಪದೇ ಕಣ್ಣೀರಾಕುತ್ತಿದ್ದಳು. ತನ್ನ ಮಗ ಆಸ್ಪತ್ರೆಯಲ್ಲಿ ಮಲಗಿರುವುದನ್ನು ನೆನೆದಾಗಲೆಲ್ಲಾ ಅವಳ ಹೊಟ್ಟೆ ಹುರಿಯುತ್ತಿತ್ತು. ತನ್ನ ಈ ಆಕ್ರೋಶವನ್ನೆಲ್ಲಾ ಆಗಾಗ್ಗೆ ತನ್ನ ಸೊಸೆಗೆ ವರ್ಗಾಯಿಸುತ್ತಿದ್ದಳು. ಆಗಲೇ “ಈ ಮುಂಡೆ ಮುಟ್ಟಾದಾಗ ಚರ್ಚಿಗೋಗವ್ಳೆ” ಎಂದು ಬೈದದ್ದು. ಆದರೆ ಪ್ರವೀಣ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ಬಹಳ ಹೊತ್ತಿನಿಂದ ಮನೆಯ ಮುಂದಣ ಜಗುಲಿಯ ಮೇಲೆ ಕುಳಿತುಕೊಂಡು ದೂರದ        ದಿಗಂತವನ್ನೇ ದಿಟ್ಟಿಸುತ್ತಿದ್ದನು.

**********


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...