ಮಾರ್ಚ್ ಎಂಟರಂದು ಜಗತ್ತಿನಾದ್ಯಂತ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಇಂಡಿಯಾದಲ್ಲಿ ಮೊದಲ ಬಾರಿಗೆ 1931ರಲ್ಲಿ ಲಾಹೋರಿನಲ್ಲಿ ಸಂಘಟಿಸಿದ್ದ ‘ಸಮಾನತೆಗಾಗಿ ಏಷ್ಯಾದ ಮಹಿಳಾ ಸಮಾವೇಶ’ದಲ್ಲಿ ಈ ದಿನಾಚರಣೆ ಆಚರಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಹಿಳೆಯರಿಗೆ ಸಮಾನತೆ ನೀಡಬೇಕೆಂಬುದರ ಜೊತೆಗೆ ಬಂಡವಾಳಶಾಹಿ, ಪುರುಷ ಪ್ರಧಾನ ಸಮಾಜದ ಶೋಷಣೆಯ ವಿರುದ್ಧ ಮತ್ತು ಮಹಿಳಾ ಉನ್ನತೀಕರಣಕ್ಕಾಗಿ ನಡೆದ ಚಳವಳಿಯ ಸಂಕೇತವಾಗಿದೆ.
ಮಹಿಳೆ, ಹೆಣ್ಣು, ಹೆಂಗಸು, ಸ್ತ್ರೀ, ವನಿತೆ, ಪ್ರಮೀಳೆ, ಪ್ರಮದೆ, ರಮಣಿ ಎಂದೆಲ್ಲ ಕರೆಸಿಕೊಳ್ಳುವ ನಮ್ಮ ನಿಮ್ಮ ಅಕ್ಕಂದಿರು ಅಮ್ಮಂದಿರು ಅಜ್ಜಿಯರು ಅತ್ತೆ ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಶಿಕ್ಷಕಿ ವೈದ್ಯೆ ನರ್ಸು ನಮ್ಮ ಮನೆಯಲ್ಲಿ ಕಚೇರಿಯಲ್ಲಿ ಕೆಲಸ ಮಾಡುವ ಹೆಂಗಸರು ಕನ್ಯಾಮಠದ ಸೋದರಿಯರು, ಮುಖ್ಯವಾಗಿ ಹೆಂಡತಿ ಇವರೆಲ್ಲ ನಾವು ಪ್ರತಿನಿತ್ಯ ಕಾಣುವ ನಮ್ಮೊಂದಿಗೆ ಸಮಾಜದಲ್ಲಿ ಜೀವಿಸುವ ಮಹಿಳೆಯರೇ ಆಗಿದ್ದಾರೆ. ನಾವು ದಿನಂಪ್ರತಿ ಮಾಡುವ ಜಪಗಳಲ್ಲಿನ ಒಡತಿ ಮಾತೆ ಮರಿಯಮ್ಮನವರೂ ಒಬ್ಬ ಭಾಗ್ಯವಂತ ಮಹಿಳೆ ಎಂದರಿತಿದ್ದೇವೆ.

ಯೇಸುವಿನ ಬದುಕಿನುದ್ದಕ್ಕೂ ಹಲವಾರು ಮಹಿಳೆಯರು ಹಾದುಹೋಗುತ್ತಾರೆ. ಯೇಸುವನ್ನು ದೇವಾಲಯದಲ್ಲಿ ಮೊದಲು ದರ್ಶಿಸಿ ಪುನೀತಳಾದ ಹನ್ನಾ ಎಂಬ ವಯೋವೃದ್ಧೆ, ಅತಿಥಿ ಸತ್ಕಾರ ಮೊದಲೋ ದೈವನಿಷ್ಠೆ ಮೊದಲೋ ಎಂಬುದರ ಚಿಂತನೆ ಪಡೆದ ಮಾರ್ತಾ ಮರಿಯಾ, ಜಾರಿಹೋದ ಎಲ್ಲ ತಪ್ಪುಗಳಿಗಾಗಿ ಪ್ರಾಯಶ್ಚಿತ್ತಪಟ್ಟು ಹೊಸ ಮನುಷ್ಯಳಾದ ಮಗ್ದಲದ ಮರಿಯಾ, ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದು ದೈವೀ ವರದಾನಗಳ ಸಮಾನಹಂಚಿಕೆಯ ಬಗ್ಗೆ ಯೇಸುವಿನೊಂದಿಗೆ ವಾದ ಮಾಡಿದ ಸಮಾರಿಯಾ ಸ್ತ್ರೀ, ಇಳಿವಯಸ್ಸಿನಲ್ಲೂ ರಕ್ತಸ್ರಾವದ ಕಾರಣ ನಾಚಿಕೆಯಿಂದ ಮುದುಡಿ ಮಾನಸಿಕವಾಗಿ ನರಳಿ ಕೊನೆಗೆ ಯೇಸುವಿನ ಬಟ್ಟೆಯಂಚನ್ನು ಮುಟ್ಟಿ ಗುಣಮುಖಳಾದ ಸ್ತ್ರೀ, ಕಲ್ಲೆಸೆದು ಕೊಲ್ಲುವ ಆರೋಪ ಹೊತ್ತುಬಂದು ಯೇಸುವಿನಿಂದ ಅಭಯ ಹೊಂದಿದ ಸ್ತ್ರೀ, ಅಳಿದುಳಿದ ಎಂಜಲನ್ನವನ್ನು ನಾಯಿಗೆಸೆವಂತೆ ನಿನ್ನ ಕಿಂಚಿತ್ ವರವನ್ನು ನನಗೆ ಕೊಡು ಎಂದ ಸ್ತ್ರೀ, ಶಿಲುಬೆಹಾದಿಯಲ್ಲಿ ಯೇಸುವಿನ ದಣಿದ ಮುಖವನ್ನು ಒರೆಸಿದ ವೆರೋನಿಕಾ, ಕಪಾಲ ಬೆಟ್ಟದ ಬುಡದ ಬಳಿ ಎಂಟನೆಯ ಸ್ಥಳದಲ್ಲಿ ಯೇಸುವನ್ನು ಅತ್ತು ಗೋಳಾಡಿ ಬೀಳ್ಕೊಟ್ಟ ಮಹಿಳೆಯರು, ಯೇಸುವಿನ ಸಮಾಧಿ ದರ್ಶಿಸಿ ಅವರು ಪುನರುತ್ಥಾನರಾದರೆಂದು ಮೊದಲ ಸಂದೇಶ ಪಡೆದ ಮಹಿಳೆಯರು ಹೀಗೆ ಹಲವಾರು ಹೆಂಗಸರು ಯೇಸುಕ್ರಿಸ್ತನ ಒಡನಾಟಕ್ಕೆ ಬಂದು ಪುನೀತರಾಗುತ್ತಾರೆ ಎಂಬುದನ್ನು ಕಂಡಿದ್ದೇವೆ. ಇದರರ್ಥವೇನೆಂದರೆ ಯೇಸುಕ್ರಿಸ್ತರು ಮಹಿಳೆಯರನ್ನೂ ಪುರುಷರ ಸಮವೆಂದು ಭಾವಿಸಿದ್ದರು.
ದೇವರು ಮೊದಲ ಮನುಷ್ಯ ಆದಾಮನನನ್ನು ಸೃಷ್ಟಿಸಿದಾಗ ಅವನಿಗೆ ಸಂಗಾತಿಯಾಗಿ ಇರಲೆಂದು ಏವಳನ್ನು ಉಂಟುಮಾಡಿ ಅವನೊಂದಿಗೆ ಜೊತೆಮಾಡಿದರು. ಅವನು ಆಕೆಯನ್ನು ತನ್ನ ಪಕ್ಕೆಯ ಪಕ್ಕೆ, ಒಡಲಿನ ಒಡಲು ಎಂದು ಭಾವಿಸಿ ತನಗೆ ಸರಿಸಮನಾಗಿ ಆಕೆಯನ್ನು ಸ್ವೀಕರಿಸಿದನು. ಪುರುಷನಿಗೆ ಸಮನಾಗಿ ಜೋಡಿಯಾಗಿರಲೆಂದು ದೇವರು ಹೆಣ್ಣನ್ನು ಸೃಷ್ಟಿಸಿದ್ದಾರೆಂದ ಮೇಲೆ ಪ್ರತಿ ಹೆಣ್ಣನ್ನೂ ದೇವರ ಸೃಷ್ಟಿ ಎಂದು ಭಾವಿಸಿ ಸಮಾನ ಗೌರವ ನೀಡಬೇಕೆಂಬುದೇ ಪವಿತ್ರ ಬೈಬಲಿನ ಆದಿ
ಕಾಂಡದ ಸಂದೇಶವಾಗಿದೆ.
ಆದರೆ ಕ್ರಮೇಣ ಯೆಹೂದ್ಯ ಸಂಸ್ಕೃತಿಯಲ್ಲಿ ಹೆಣ್ಣನ್ನು ನಗಣ್ಯವಾಗಿಸಲಾಯಿತು. ಸಾರಾ, ರೂತ್, ಜೂಡಿತ್, ಎಸ್ತೆರ್, ಹನ್ನಾ ಎಂಬ ವನಿತೆಯರನ್ನು ಹೆಸರಿನಿಂದ ಗುರುತಿಸಲಾಗಿದೆ ಆದರೂ ಪವಿತ್ರ ಬೈಬಲಿನಲ್ಲಿ ಬಂದು ಹೋಗುವ ಎಷ್ಟೋ ಹೆಂಗಸರಿಗೆ ಹೆಸರೇ ಇಲ್ಲ. ಲೋತನ ಪತ್ನಿ, ಪೇತ್ರನ ಅತ್ತೆ, ಮುಂತಾದ ಸರ್ವನಾಮಗಳಿಂದಲೇ ಅವರ ಉಲ್ಲೇಖವಿದೆ.
ಶತಶತಮಾನಗಳಿಂದ ಪ್ರಪಂಚದ ಹಲವು ಸಂಸ್ಕೃತಿಗಳಲ್ಲಿ ಹೆಣ್ಣನ್ನು ಆತ್ಮವಿಲ್ಲದವಳೆಂದು, ಕ್ಷುದ್ರಜೀವಿಯೆಂದು, ಸಂತಾನಯಂತ್ರವೆಂದು, ಅಬಲೆಯೆಂದು, ಭೋಗವಸ್ತುವೆಂದು ಪರಿಭಾವಿಸಲಾಗಿದೆ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆಯ ಪ್ರತಿರೂಪ, ಸಹನಶೀಲೆ, ಕ್ಷಮಯಾಧರಿತ್ರಿ ಎನ್ನುವ ನಮ್ಮ ದೇಶದಲ್ಲಿ ಹೆಣ್ಣನ್ನು ಅಪಮಾನಿಸಿದ ಬಗ್ಗೆ ಕಾವ್ಯಗಳೇ ಸಾರಿಹೇಳುತ್ತಿವೆ.
ಹಲವು ಸಂಸ್ಕೃತಿಗಳ ತವರಾದ ನಮ್ಮ ದೇಶದಲ್ಲಿ ಸ್ಥೂಲವಾಗಿ ಉತ್ತರಭಾರತದ ಸಂಸ್ಕೃತಿ ಮತ್ತು ದಕ್ಷಿಣಭಾರತದ ಸಂಸ್ಕೃತಿಗಳನ್ನು ಗುರುತಿಸಬಹುದು. ಉತ್ತರಭಾರತದ ರಾಮಲಕ್ಷ್ಮಣರು ದಕ್ಷಿಣದಲ್ಲಿ ವನವಾಸದಲ್ಲಿದ್ದಾಗ ಅಲ್ಲಿ ವನವಿಹಾರ ಮಾಡುತ್ತಿದ್ದ ಶೂರ್ಪನಖಿಯು ಅವರ ಗೌರವರ್ಣದ ಬಗ್ಗೆ ಮೋಹ ತಳೆಯುತ್ತಾಳೆ. ಆದರೆ ಅವಳ ಪ್ರಸ್ತಾವವನ್ನು ನಯವಾಗಿ ತಿರಸ್ಕರಿಸದೆ ಅಪಮಾನ ಮಾಡಿ ಮೂಗು ಕತ್ತರಿಸಿ ಕಳಿಸಿದ್ದರಿಂದಾಗಿ ಅಣ್ಣ ರಾವಣ ಕೆರಳಿ ಈ ಉತ್ತರಭಾರತೀಯರಿಗೆ ಹೆಣ್ಣಿನ ಬಗ್ಗೆ ಗೌರವ ನೀಡುವುದನ್ನು ಕಲಿಸುವುದಕ್ಕಾಗಿ ಸೀತೆಯನ್ನು ಅಪಹರಿಸಿದ ಎಂಬುದೇ ರಾಮಾಯಣ ಕಾವ್ಯದ ಒಳದನಿ.
ಅದೇ ರೀತಿ ಮಹಾಭಾರತದಲ್ಲಿ ದ್ರೌಪದಿಯನ್ನು ಭೋಗವಸ್ತುವಾಗಿಸಿ, ಪಗಡೆಯಾಟದ ಪಣವಾಗಿಸಿ, ತುಂಬಿದ ಸಭೆಯಲ್ಲಿ ಮಾನಭಂಗ ಮಾಡಿದ್ದೇ ಅಲ್ಲದೆ ಇಡೀ ಕಾವ್ಯದಲ್ಲಿ ಹಾಗೂ ಅದಕ್ಕೆ ಪೂರಕವಾದ ಪುರಾಣಗಳಲ್ಲಿ ಹಾದರ ಬಹುಪತಿತ್ವ ಬಹುಪತ್ನಿತ್ವ ಕಾನೀನಹುಟ್ಟನ್ನು ಗೌರವಿಸಿದರೂ ಹೆಣ್ಣನ್ನು ಅಬಲೆಯಾಗಿ ತೋರಿರುವುದು ಢಾಳಾಗಿ ಕಾಣುತ್ತದೆ.
ಹೆಣ್ಣು ತಾಯಿಯಾಗಿ ಹೊತ್ತು ಹೆತ್ತು ನೋವನನುಭವಿಸಿದರೂ ಮಕ್ಕಳ ಮೇಲೆ ಆಕೆ ತೋರುವ ಮಮತೆ ಅನನ್ಯ. ಅದಕ್ಕೇ ತಾಯಪ್ರೇಮವನ್ನು ಎಲ್ಲಕ್ಕೂ ದೊಡ್ಡದೆನ್ನುತ್ತಾರೆ ತಾಯ ಋಣವನ್ನ ತೀರಿಸಲಾಗದು ಎನ್ನುತ್ತಾರೆ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ತಾಯಿಯನ್ನು ಬರಿ ಸ್ತ್ರೀ ಎಂದು ವರ್ಗೀಕರಿಸಿದರೆ ಸಾಲದು ತಾಯಿ ಎಂಬ ವ್ಯಕ್ತಿತ್ವವೇ ಎಲ್ಲಕ್ಕಿಂತ ಮೇಲಾದುದು ಎನ್ನುತ್ತಾ
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
ಎಂದು ಬಣ್ಣಿಸಿದ್ದಾರೆ. ಬಾಲಯೇಸುವನ್ನು ನಮಿಸುತ್ತಾ ಅವನನ್ನು ಹೊತ್ತು ನಮ್ಮೆಡೆಗೆ ಅಭಯ ತೋರುವ ಮೇರಿಮಾತೆಯಲ್ಲಿ ಅಮ್ಮನನ್ನು ಕಂಡ ಕವಿ ಕುವೆಂಪುನವರು,
ಇಹಳು ತಾಯಿ ಹೊರೆವುದವಳ ಹಾಲ ತೊಟ್ಟಿಲೆಂದು
ನಂಬಿ ಬಾಳು ತುಂಬಿ ಬದುಕು ಅವಳು ಪ್ರೇಮಸಿಂಧು
ಎಂದಿದ್ದಾರೆ.
ಶರಣ ಚಳವಳಿಯ ಸಮಾನತೆಯ ಹರಿಕಾರರಿಂದ ಹಿಡಿದು ಮೈಸೂರು ಮಹಾರಾಜರವರೆಗಿನ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಜನರಾಳ್ವಿಕೆಗಳಲ್ಲೂ ಕನ್ನಡ ನಾಡಿನ ಮಹಿಳೆಯರಿಗೆ ಸಮಾನಸ್ಥಾನ ಕಲ್ಪಿಸಲಾಗಿದೆಯಾದರೂ ಮಹಿಳೆಯರ ಕುರಿತ ಜನಸಾಮಾನ್ಯರ ದೃಷ್ಟಿ ಬದಲಾಗಿಲ್ಲ. ನಮ್ಮ ದಿನನಿತ್ಯದ ಸುದ್ದಿಗಳೂ, ಟಿವಿವಾಹಿನಿಯ ಧಾರಾವಾಹಿಗಳೂ, ಚಲನಚಿತ್ರಗಳೂ ಸ್ತ್ರೀಯ ಬಗ್ಗೆ ಉದಾತ್ತ ಭಾವನೆಗಳನ್ನು ಪಸರಿಸುವ ಬದಲು ಕೀಳು ಅಭಿರುಚಿಯನ್ನೇ ಹಂಚುತ್ತಿವೆ ಎಂಬುದು ಸುಳ್ಳೇನಲ್ಲ.
ಹೆಣ್ಣುಮಗು ಬೇಡವೆನ್ನುವ, ಭ್ರೂಣದಲ್ಲೇ ಅದನ್ನು ಹೊಸಕುವ, ಬೆಳೆದರೂ ಗಂಡುಮಕ್ಕಳ ಹಾಗೆ ಶಿಕ್ಷಣ ಮುಂತಾದ ಸವಲತ್ತು ನೀಡದ, ಕೆಲಸಕ್ಕೆ ಸಮಾನ ಕೂಲಿ ನೀಡದ, ಪ್ರತಿಭೆಗಳನ್ನು ಪ್ರೋತ್ಸಾಹಿಸದ, ವರದಕ್ಷಿಣೆಗಾಗಿ ಪೀಡಿಸುವ ಮನಃಸ್ಥಿತಿಯನ್ನು ನಾವು ಅಳವಡಿಸಿಕೊಂಡು ಆಚರಿಸುತ್ತಿದ್ದೇವೆ. ಕರ್ನಾಟಕದಲ್ಲಿ ಲಿಂಗಾನುಪಾತ 2007ರಲ್ಲಿ 1000:1004 ಇದ್ದಿದ್ದು 2016ರ ವೇಳೆಗೆ 1000 ಹುಡುಗರಿಗೆ 896 ಹುಡುಗಿಯರಿಗೆ ಕುಸಿದಿತ್ತು ಎಂಬುದು ತುಂಬಾ ಆತಂಕದ ವಿಚಾರವಾಗಿದೆ. ಶಿಶುಮರಣಪ್ರಮಾಣ ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೆಯದಾಗಿದೆ. ನಮ್ಮಲ್ಲಿ ಗರ್ಭಿಣಿ ಆರೈಕೆಗಳು ಸೋತಿವೆಯೋ ಅಥವಾ ಹೆಣ್ಣು ಭ್ರೂಣಹತ್ಯೆಗಳು ಹೆಚ್ಚಾಗಿವೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಯೂನಿಸೆಫ್ ಸಮೀಕ್ಷೆಯ ಪ್ರಕಾರ, ಶೇಕಡಾ 57 ರಷ್ಟು ಯುವಕರು ಮತ್ತು ಶೇಕಡ 55 ರಷ್ಟು ಮಹಿಳೆಯರು ಹೆಂಡತಿಗೆ ಗಂಡ ಹೊಡೆಯುವುದು ಸ್ವಾಭಾವಿಕ ಎನ್ನುತ್ತಾರಂತೆ. ಆದರೆ ನಮ್ಮ ದೇಶದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ಗಂಡ ಮಾತ್ರವಲ್ಲ ಗಂಡನ ಮನೆಯ ಎಲ್ಲರೂ ಹಿಂಸಿಸುವುದು ಸ್ವಾಭಾವಿಕ ಎನಿಸಿದೆ. ಬಲವಾದ ಕಾನೂನುಗಳ ಬೆಂಬಲವಿದ್ದರೂ ಮಹಿಳೆಯರನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ.
ವಿಶ್ವಸಂಸ್ಥೆಯ ಸಮೀಕ್ಷಾ ವರದಿಯೊಂದರ ಪ್ರಕಾರ, ಇಂಡಿಯಾದಲ್ಲಿ ಚುನಾವಣೆ ಎದುರಿಸುವ ಶೇಕಡಾ 50 ರಷ್ಟು ಮಹಿಳಾ ಅಭ್ಯರ್ಥಿಗಳು ಒಂದಲ್ಲ ಒಂದು ರೀತಿಯಲ್ಲಿ ನಿಂದನೆ ಅಪಮಾನಗಳನ್ನು ಎದುರಿಸಿದ್ದಾರೆ. ಎಷ್ಟೋ ವೇಳೆ ಅವರ ಜನಪ್ರಿಯತೆಯನ್ನು ತಗ್ಗಿಸಲು ಚಾರಿತ್ರ‍್ಯಹರಣ ಮಾಡುವ ಕೀಳುಮಟ್ಟಕ್ಕೂ ಜನ ಇಳಿದಿದ್ದಾರೆ. ಚಾರಿತ್ರ‍್ಯಹರಣದ ಸಂದೇಶಗಳನ್ನು ವಾಟ್ಸಾಪಿನಲ್ಲಿ ಹರಿಬಿಡುವ ವಿಕೃತ ಸಂತೋಷದಲ್ಲಿ ಜನಸಾಮಾನ್ಯರೂ ಭಾಗಿಯಾಗಿದ್ದಾರೆಂದರೆ ನಮ್ಮ ಜನರ ಮಾನಸಿಕ ಎತ್ತರವೇನೆಂದು ಊಹಿಸಬಹುದು.
ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟಿದ್ದರೂ, ಶಿಕ್ಷಣದಲ್ಲಿ ಮುಂದಿದ್ದರೂ ನಮ್ಮ ಸಮಾಜದ ಹೆಣ್ಣು ಶೋಷಣೆಯಿಂದ ಹೊರತಾಗಿಲ್ಲ. ತಾರತಮ್ಯವನ್ನು ಇನ್ನೂ ಅನುಭವಿಸುತ್ತಿದ್ದಾಳೆ. ಪ್ರತಿದಿನ ಒಂದಿಲ್ಲೊಂದು ಕಡೆ ಅತ್ಯಾಚಾರಕ್ಕೆ ಈಡಾಗುತ್ತಿದ್ದಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ. ಎಷ್ಟೋ ಕಡೆಗಳಲ್ಲಿ ಮಾನವಸಂಪನ್ಮೂಲದಲ್ಲಿ ಹೆಣ್ಣಿನ ಪಾಲೂ ಇದೆ ಎಂಬುದನ್ನು ಕಡೆಗಣಿಸಲಾಗುತ್ತಿದೆ. ಶಿಕ್ಷಣದ ವಿಚಾರದಲ್ಲೂ ಆಕೆಗೆ ತಾರತಮ್ಯ ಎಸಗಲಾಗುತ್ತಿದೆ. ’ಹೆಣ್ಣೊಬ್ಬಳು ಕಲಿತರೆ ಅವಳ ಪರಿವಾರವೇ ಕಲಿತಂತೆ’ ಎಂಬ ಮಾತು ಮಾತಾಗಿಯಷ್ಟೇ ಬಳಕೆಯಾಗಿ ಸವಕಲಾಗಿದೆ. ಎಷ್ಟೋ ಕುಟುಂಬಗಳಲ್ಲಿ ಹೆಣ್ಣಿಗೆ ಪ್ರಾಥಮಿಕ ವಿದ್ಯೆಯಷ್ಟೇ ಪಾಲಿಗೆ ಬಂದ ಪಂಚಾಮೃತ. ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲಪಲು ಸಾಧ್ಯ.
ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಿಳೆಯರನ್ನು ನಾವು ಗೌರವಿಸಬೇಕು. ಎಲ್ಲ ಸ್ತ್ರೀಯರಲ್ಲೂ ಅಮ್ಮನನ್ನು ಕಾಣುವುದೇ ಕನ್ನಡದ ಸಂಸ್ಕೃತಿ.
*******