ಪ್ರೀತಿಯ ಅನುಗೆ, ಸ್ನೇಹಾಂಜಲಿ.
ಜಗತ್ತಿನಲ್ಲಿ ತಾಯಿ ಮರಿಯಳನ್ನು ಕುರಿತು ಬರೆದಷ್ಟು ಬೇರೆ ಯಾವ ಮಹಿಳೆಯ ಬಗ್ಗೆ ಬರೆದಿಲ್ಲವೇನೋ! ಹೌದು ಈ ಒಂದು ಹೇಳಿಕೆ ಉತ್ಪ್ರೇಕ್ಷೆಯ ಮಾತಲ್ಲ. ಇದು ಸತ್ಯ. ತಾಯಿಯ ಈ ರೀತಿಯ ಪ್ರಸಿದ್ಧಿಗೆ ವಿವಿಧ ಕಾರಣಗಳಿರಬಹುದು. ಆದರೆ ಪ್ರಮುಖವಾಗಿ ನಾವು ಎರಡು ಕಾರಣಗಳನ್ನು ಗುರುತಿಸಬಹುದು: ಒಂದು ಬೇರೆ ಯಾವ ವ್ಯಕ್ತಿಗೂ ಸಿಗದ, ದೇವಪುತ್ರನಿಗೆ ತಾಯಿಯಾಗುವ ಪರಮ ಸಂತಸದ ಸೌಭಾಗ್ಯ ಅವರಿಗೆ ಲಭಿಸಿತೆಂಬ ವಿಶ್ವಾಸ; ಎರಡು ಆಧ್ಯಾತ್ಮಿಕವಾಗಿ ಮನುಷ್ಯನಿಗೆ ಬೇಕಾದ ಒಬ್ಬ ತಾಯಿಯ ಅವಶ್ಯಕತೆ. ತಾಯಿಯಲ್ಲಿ ಸಿಗುವಂತಹ ಮಮತೆಯ ಹಾಗೂ ಕಾರುಣ್ಯದ ಮನೋಭಾವ ಬೇರೆ ಯಾವ ವ್ಯಕ್ತಿಯಿಂದಲೂ ಸಿಗಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಮರಿಯಳ ಹೆಸರಿನಲ್ಲಿ ಸಾವಿರಾರು ಚರ್ಚುಗಳು, ಪುಣ್ಯಕ್ಷೇತ್ರಗಳು ಆವಿರ್ಭವಿಸಿವೆ. ಆಕೆಗೆ ಲಕ್ಷಾಂತರ ಭಕ್ತರಿದ್ದಾರೆ. ಜತೆಗೆ ಸಾವಿರಾರು ಜನರು ಮರಿಯಳ ಪುಣ್ಯಕ್ಷೇತ್ರಗಳಿಗೆ ಹೋಗಿ ಹರಕೆ ಪ್ರಾರ್ಥನೆಗಳನ್ನು ಸಲ್ಲಿಸುವ ಪರಿಪಾಠವನ್ನು ನಾವು ದಿನನಿತ್ಯ ಕಾಣಬಹುದಾಗಿದೆ.
ಆದರೆ ಮರಿಯಳನ್ನು ಪೂಜ್ಯ ಭಾವನೆಯಿಂದ ಗೌರವಿಸುವ ನಾವು, ಅವಳನ್ನು ದೈವಿಕ ವ್ಯಕ್ತಿಯಂತೆ ನೋಡಿದ್ದೆ ಹೆಚ್ಚು. ದೇವರಿಂದ ವಿಶೇಷವಾಗಿ ಆಶೀರ್ವಾದಿಸಲ್ಪಟ್ಟವಳು, ಪುನೀತಳು, ಮಹಾತ್ಮಳು ಎಂದು ಆಕೆಯನ್ನು ನಿತ್ಯ ಸ್ತುತಿಸುತ್ತಾ ದೈವತ್ವದ ಪಟ್ಟಕ್ಕೆ ಅವಳನ್ನು ಏರಿಸುತ್ತೇವೆ ವಿನಃ ಆಕೆಯ ಮಾದರಿಯ ಜೀವನ, ವಿಶ್ವಾಸದ ಬದುಕು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅಥವಾ ಜಾಣ ಕುರುಡರಂತೆ ನಾವು ಅವುಗಳ ಬಗ್ಗೆ ಒಂದಿನಿತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೌದು ಆಕೆ ದೇವರ ತಾಯಿ ನಿಜ! ಆದರೆ ಆಕೆ ಕೂಡ ನಮ್ಮಂತೆ ಈ ಮಾಯಾ ಪ್ರಪಂಚದಲ್ಲಿ ಹುಟ್ಟಿ ಬೆಳೆದು ತನ್ನ ವಿಶ್ವಾಸ ಮತ್ತು ಸಂಕಲ್ಪಭರಿತ ಜೀವನದಿಂದ ಮಹಿಮಾಭರಿತಳಾದಳು ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.
ತಾಯಿಯ ಬದುಕನ್ನು ಬಿಡಿ ಬಿಡಿಯಾದ ಘಟನೆಗಳನ್ನು ಆಧಾರಿಸಿಕೊಂಡು ಇಡಿಯಾಗಿ ನೋಡಬೇಕಾಗಿದೆ. ಅವರ ಬದುಕಿನಲ್ಲಿ ಧಾರ್ಮಿಕ ಮತ್ತು ಬದುಕಿನ ಮೌಲ್ಯಗಳು ಜೊತೆಜೊತೆಯಾಗಿ ನಡೆಯುವುದನ್ನು ಅರ್ಥಪೂರ್ಣವಾಗಿ ಗ್ರಹಿಸಬೇಕಾಗಿದೆ. ಆಗ ತಾಯಿಯ ಪಾರಮಾರ್ಥಿಕ ಬದುಕು ಅನಾವರಣಗೊಳ್ಳುತ್ತಾ ನಮ್ಮ ಆತ್ಮವಿಮರ್ಶೆಗೆ ಅನುವು ಮಾಡಿಕೊಡುತ್ತಾ ಉತ್ಕೃಷ್ಟ ಮಾದರಿಯ ಜೀವನಕ್ಕೆ ನಮಗೆ ಖಂಡಿತವಾಗಿಯೂ ಸ್ಪೂರ್ತಿಯಾಗಬಹುದು. ಅವಳು ವಹಿಸಿದ ನಾನಾ ಪಾತ್ರಗಳನ್ನು ಗಮನಿಸುತ್ತಾ ಇಡಿಯಾಗಿ ಮರಿಯಳನ್ನು ಅರ್ಥಮಾಡಿಕೊಳ್ಳಬೇಕಿದೆ. ತಾಯಿಯಾಗಿ, ಪತ್ನಿಯಾಗಿ, ಭಕ್ತೆಯಾಗಿ, ದೇವತೆಯಾಗಿ, ಕ್ರಾಂತಿಕಾರಿಯಾಗಿ, ನಾಯಕಿಯಾಗಿ, ಸತ್ಯವಂತಳಾಗಿ, ದುಃಖಿಯಾಗಿ, ಸೇವಕಿಯಾಗಿ, ಧರ್ಮಸಭೆಯ ತಾಯಿಯಾಗಿ, ಮಧ್ಯವರ್ತಿಯಾಗಿ ಅವಳು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ವಿಶಿಷ್ಟವಾಗಿ ಕಣ್ಣಿಗೆ ಕಟ್ಟುವಂತಿವೆ.
ಆ ಪಾತ್ರಗಳ ಸಾರ, ಸತ್ವ, ತತ್ವಗಳು ನಮ್ಮ ಕಣ್ಣು ತಪ್ಪಿ ಹೋಗದಂತೆ ಎಚ್ಚರ ವಹಿಸಿದರೆ ಮರಿಯಳ ಬದುಕು ನಮ್ಮ ಗ್ರಹಿಕೆಗೆ ಸ್ಪಲ್ಪವಾದರೂ ಸಿಗಬಹುದೇನೋ! ಈ ರೀತಿಯ ಒಂದು ಅವಲೋಕನ ಮರಿಯಳ ಸಾತ್ವಿಕ ಬದುಕನ್ನು ಅನಾವರಣಗೊಳಿಸುತ್ತಾ ಕ್ರಿಸ್ತನ ಜೊತೆಗೆ ನಮ್ಮ ಆತ್ಮೀಯತೆಯನ್ನು ವೃದ್ಧಿಸದಿರದು.
ಕ್ರಿಸ್ತನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಅನೇಕರಲ್ಲಿ ತಾಯಿ ಮರಿಯಳ ಪಾತ್ರ ಹಿರಿದು ಮತ್ತು ಮಹತ್ವಪೂರ್ಣವಾದುದು. ಬೆಳೆಯುವ ಗಿಡಕ್ಕೆ ಬೇರಿನಂತಿರುವ ಪಾತ್ರವದು. ಆದ್ದರಿಂದ ಕ್ರಿಸ್ತನ ಜೀವನದಲ್ಲಿ ಮರಿಯಳು ವಹಿಸಿದ ಗಮನಾರ್ಹ ಪಾತ್ರವನ್ನು ಸುಮಾರು ಐದು ಸ್ಥಳಗಳಲ್ಲಿ ಜರುಗಿದ ಘಟನೆಗಳ ಮೂಲಕ ಅರ್ಥೈಸಿಕೊಂಡರೆ ಮರಿಯಳು ನಮ್ಮ ಅರಿವಿಗೆ ಸ್ವಲ್ಪವಾದರೂ ಸಿಗುವಳೋ ಏನೋ!
ಮೊದಲಿಗೆ ಬೆತ್ಲೆಹೇಮ್ ಎಂಬ ಸ್ಥಳದಲ್ಲಾದ ಘಟನೆ. ತಾಯಿ ಮರಿಯಳು ಯೇಸುವಿಗೆ ಜನ್ಮಕೊಟ್ಟಂತಹ ಸಂದರ್ಭವಿದು. ಲೋಕವನ್ನು ರಕ್ಷಿಸಲು ತನ್ನ ಸ್ವಂತ ಮಗನನ್ನೇ ಲೋಕಕ್ಕೆ ಕಳುಹಿಸಲು ನಿರ್ಧರಿಸಿದ ದೇವರು, ದೇವರ ಹುಟ್ಟುವಿಕೆಗೆ ಮರಿಯಾಳ ಒಡಲನ್ನು ಕೇಳಿಕೊಂಡಾಗ, ಸಂತೋಷದಿಂದ ಒಪ್ಪಿ, ಪವಿತ್ರಾತ್ಮರ ಸಹಾಯದಿಂದ ಗರ್ಭವತಿಯಾಗಿ ಯೇಸುವಿಗೆ ಜನ್ಮ ಕೊಡುತ್ತಾಳೆ. ಹೌದು, ಒಬ್ಬ ಸಾಧಾರಣ ಮುಗ್ದೆ ಮದುವೆಯ ಮುಂಚಿತವಾಗಿಯೇ ಗರ್ಭ ತಳೆಯುವುದೆಂದರೆ ತನ್ನ ಸಾವನ್ನು ತಾನೇ ಬರಮಾಡಿಕೊಳ್ಳುವುದೆಂದೇ ಅರ್ಥ.
ಹೆಣ್ಣಿಗೆ ಸ್ಥಾನಮಾನವಿಲ್ಲದ ಸಮಾಜದಲ್ಲಿ, ಅನೈತಿಕ ಸಂಬಂಧ, ಅತ್ಯಾಚಾರ ಮುಂತಾದವುಗಳು ಧರ್ಮಶಾಸ್ತ್ರದ ಪ್ರಕಾರ ಶಿಕ್ಷಾರ್ಹ ಅಪರಾಧಗಳೆಂದು ಪರಿಗಣಿಸಲಾದ ಸಮಾಜದಲ್ಲಿ ಅಂದರೆ ಅನೈತಿಕತೆಯಲ್ಲಿ ಸಿಕ್ಕಿಕೊಂಡವರನ್ನು ಮುಖ್ಯವಾಗಿ ಮಹಿಳೆಯರನ್ನು ಕಲ್ಲುಗಳಿಂದ ಹೊಡೆದು ಕೊಲ್ಲುವ ಸಂಪ್ರದಾಯವಿದ್ದ ಸಮಾಜದಲ್ಲಿ ಮರಿಯಳು ದೇವರ ಯೋಜನೆಗೆ “ಇಗೋ ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ” (ಲೂಕ 1:38) ಎಂದು ಹೇಳಿ ದೇವರ ಚಿತ್ತಕ್ಕೆ ತಲೆಬಾಗುತ್ತಾಳೆ. ಈ ಒಂದು ಹಿನ್ನಲೆಯಲ್ಲಿ ಮರಿಯಳು ಯೇಸುವಿಗೆ ಜನ್ಮ ಕೊಡುವುದಕ್ಕೆ ಒಪ್ಪಿದನ್ನು ನಾವು ಪ್ರಶಂಸಿಸದಿರಲು ಸಾಧ್ಯವೇ ಇಲ್ಲ.
ಜಗದ ರಕ್ಷಣೆಗಾಗಿ ಮರಿಯಳು ತೆಗೆದುಕೊಂಡ ಈ ನಿಲುವು, ತೋರಿದ ದಿಟ್ಟತನ ನಮಗೆ ಪಾಠಗಳಾಗಬೇಕು. ನಾವು ಕೂಡ ತಾಯಿಯಂತೆ ಕ್ರಿಸ್ತ ಇನ್ನೂ ಹುಟ್ಟದೇ ಇರುವ ಸ್ಥಳಗಳಲ್ಲಿ ಕ್ರಿಸ್ತನು ಹುಟ್ಟುವಂತೆ ನೋಡಿಕೊಳ್ಳಬೇಕು. ಕ್ರಿಸ್ತನಿಗೆ ಜನ್ಮ ಕೊಡುವುದೆಂದರೆ ಅಕ್ಷರಶಃ ದೈಹಿಕ ಜನ್ಮ ಕೊಡುವಂತಹದಲ್ಲ. ಕ್ರಿಸ್ತನ ಮೌಲ್ಯಗಳು, ಮಾತುಗಳು ಜನರಲ್ಲಿ ಹುಟ್ಟುವಂತೆ ನೋಡಿಕೊಳ್ಳಬೇಕು. ಎಂತಹ ಕಠಿಣ ಕಷ್ಟ ಬಂದರೂ ಕ್ರಿಸ್ತನಿಗೆ ಜನ್ಮ ಕೊಡುವುದನ್ನು ನಾವು ನಿಲ್ಲಿಸಬಾರದು. ಕ್ರಿಸ್ತ ನಮ್ಮಲ್ಲಿ ನಮ್ಮ ಸಮಾಜದಲ್ಲಿ ನಿರಂತರವಾಗಿ ಹುಟ್ಟುತ್ತಿರಬೇಕು. ಮುಖ್ಯವಾಗಿ ಕೋಮುವಾದಿಗಳಲ್ಲಿ, ಮೂಲಭೂತವಾದಿಗಳಲ್ಲಿ ಕಾಪೆರ್Çೀರೇಟ್ ಮನೆ - ಮನಗಳಲ್ಲಿ ಕ್ರಿಸ್ತ ಹುಟ್ಟುವಂತೆ ನೋಡಿಕೊಳ್ಳಬೇಕಾದುದ್ದು ನಮ್ಮ ಆದ್ಯ ಕರ್ತವ್ಯ. ಇವೆಲ್ಲಕ್ಕಿಂತ ಮುಖ್ಯವಾಗಿ ತಾಯಿ ಮರಿಯಳು ನಮ್ಮ ಹೃದಯಗಳನ್ನು ಕ್ರಿಸ್ತನ ಗರ್ಭಗುಡಿಯಾಗಿಸಲೆಂದು ಕೇಳಿಕೊಳ್ಳೋಣ.
ಎರಡನೆಯದಾಗಿ ಜೆರುಸಲೇಮಿನಲ್ಲಿ ಜರುಗಿದ ಘಟನೆ. ಜೋಸೆಫ್, ಮರಿಯ ಮತ್ತು ಯೇಸು ವಾಡಿಕೆಯಂತೆ ಪಾಸ್ಕ ಹಬ್ಬಕ್ಕೆ ಜೆರುಸಲೇಮಿಗೆ ಹೋಗಿ, ಹಬ್ಬ ಮುಗಿಸಿ ವಾಪಸಾಗುವ ಹೊತ್ತಿಗೆ ಯೇಸು ಕಾಣೆಯಾಗುತ್ತಾರೆ. ಮಗನನ್ನು ಕಾಣದೆ ತಳಮಳಕೊಂಡ ಮರಿಯಳು ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬರುತ್ತಾಳೆ. ಕೊನೆಗೆ ಮಹಾದೇವಾಲಯದಲ್ಲಿ ಯೇಸುವನ್ನು ಕಂಡು ನಿಟ್ಟುಸಿರು ಬಿಡುತ್ತಾಳೆ. ಮಕ್ಕಳು ಕಳೆದು ಹೋಗದಂತೆ ಮುತುವರ್ಜಿ ವಹಿಸುವುದು ತಾಯ್ತನದ ಗುಣ. ಮಕ್ಕಳ ಕ್ಷೇಮಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುವ ಅಮ್ಮಂದಿರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹುತ್ತಾರೆ. ಅವರಿಗೆ ಮಕ್ಕಳನ್ನು ಕಳೆದುಕೊಳ್ಳುವುದೆಂದರೆ ತಮ್ಮ ಸರ್ವಸ್ವವನ್ನೇ ಕಳೆದುಕೊಂಡಂತೆ. ಆದ್ದರಿಂದ ತಪ್ಪಿಹೋದವರವನ್ನು ತಾಯಿ ಎಂದಿಗೂ ಕೈ ಬಿಡುವುದಿಲ್ಲ. ಅವರನ್ನು ಹುಡುಕಿಕೊಂಡು ಖಂಡಿತ ಬಂದೇ ಬರುತ್ತಾಳೆ. ಇಂತಹ ವಿಶ್ವಾಸದಲ್ಲಿ ತಮ್ಮನ್ನೇ ತಾವು ಕಳೆದುಕೊಂಡು ದೇವರಿಂದ ದೂರವಾಗಿರುವವರನ್ನು ಆ ತಾಯಿ ಹುಡುಕಿ ತರಲೆಂದು ಪ್ರಾರ್ಥಿಸುತ್ತಲೇ, ನಾವು ಕೂಡ ನಾನಾ ಕಾರಣಗಳಿಂದ ಕಳೆದು ಹೋದವರನ್ನು ಹುಡುಕಿ ಸಂತೈಸುವ ತಾಯಿಯ ಗುಣವನ್ನು ಮರಿಯಳಿಂದ ಪಡೆದುಕೊಳ್ಳೋಣ.
ಮೂರನೆಯದಾಗಿ, ಗಲಿಲೇಯದ ಕಾನಾ ಎಂಬ ಊರಿನಲ್ಲಿ ನಡೆದ ಮೊದಲ ಅದ್ಭುತ ಅಥವಾ ಸೂಚಕ ಕಾರ್ಯ. ಆಮಂತ್ರಣದ ಮೇರೆಗೆ ಯೇಸು, ಅವರ ಶಿಷ್ಯರು ಮತ್ತು ಮರಿಯಳು ಮದುವೆಯ ಜೌತಣಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆತಿಥೇಯರಿಗೆ ಇದರಿಂದ ದೊಡ್ಡ ಅವಮಾನವಾಗಬಹುದು ಎಂಬ ಅರಿವೊಂದಿಗೆ ಮರಿಯಳು ತನ್ನ ಮಗನಲ್ಲಿ ಕೋರಿಕೆ ಸಲ್ಲಿಸಿ, ಸೇವಕರಿಗೆ “ಆತ ಏನು ಹೇಳುತ್ತಾರೋ ಹಾಗೆಯೇ ಮಾಡಿ” ಎಂದು ಹೇಳುತ್ತಾಳೆ. ಕೊನೆಗೆ ಅಲ್ಲಿ ನಡೆದ ಅದ್ಭುತದ ಬಗ್ಗೆ ನಮಗೆ ಗೊತ್ತೇ ಇದೆ. ಬಾನಿಗಳಲ್ಲಿ ತುಂಬಿದ ನೀರು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದಲ್ಲದೆ, ಉತ್ತಮವಾದ ದಾಕ್ಷಾರಸವಾಗಿ ಆತಿಥಿಗಳ ಪ್ರಶಂಸೆಗೆ ಪಾತ್ರವಾಗಿದ್ದನ್ನು ಬೈಬಲಿನಲ್ಲಿ ಓದುತ್ತೇವೆ. ಇವಿಷ್ಟೂ ಪಠ್ಯದ ಮೂಲಪಾಠವಾದರೂ ಆಳದಲ್ಲಿ ಈ ಕಥನಕ್ಕೆ ಮತ್ತೊಂದು ಅರ್ಥವಿರುವುದನ್ನು ಅಲ್ಲಗಳೆಯಲಾಗದು. ಯೆಹೂದ್ಯರ ಸಂಪ್ರದಾಯಲ್ಲಿ ದ್ರಾಕ್ಷಾರಸವೆಂಬುವುದು ಸಮೃದ್ಧಿ, ಸಂತೋಷ, ಸುಖವನ್ನು ಸಂಕೇತಿಸುವಂತಹದ್ದು.
ಆದ್ದರಿಂದ ಸಂತೋಷವನ್ನು ಕಳೆದುಕೊಂಡ ನಮ್ಮ ಮನಮನೆಗಳಿಗೆ ಸಮೃದ್ಧಿ ಸಂತೋಷ ತರಲು ಮಾತೆ ಮರಿಯಳು ನಿತ್ಯವೂ ಮಗನಲ್ಲಿ ಕೋರಿಕೆ ಸಲ್ಲಿಸುತ್ತಿರುತ್ತಾರೆ ಎಂಬುವುದು ಈ ಪಠ್ಯದ ಅಂತರಾರ್ಥ. ಈ ಕಾರಣದಿಂದಲೇ ಸಾವಿರಾರು ಜನರು ಮನ ಶಾಂತಿಗಾಗಿ ಮರಿಯಳ ಪುಣ್ಯಕ್ಷೇತ್ರಗಳಿಗೆ ಹೋಗುವುದನ್ನು ನಾವು ಕಾಣುತ್ತೇವೆ. ಹೌದು, ಇಂದು ಎಷ್ಟೋ ಕುಟುಂಬಗಳು ವೈಮನಸ್ಸಿನಿಂದ ನುಚ್ಚು ನೂರಾಗಿವೆ. ಕುಟುಂಬಗಳಲ್ಲಿ ನೆಮ್ಮದಿ ಸಂತೋಷ ಮರೀಚಿಕೆಯಾಗಿ ನೈತಿಕತೆಯ ಅಧಃಪತನವಾಗಿದೆ. ಇಂತಹ ಕುಟುಂಬಗಳಲ್ಲಿ ಕ್ರಿಸ್ತನ ಅದ್ಭುತಗಳಾಗಬೇಕಿದೆ. ನೀರು ದಾಕ್ಷಾರಸದಂತೆ ಕುಟುಂಬಗಳಲ್ಲಿ ಕಂಡುಬರುತ್ತಿರುವ ಕಲಹಗಳು, ಅಪಸವ್ಯಗಳೆಂಬ ನಕಾರಾತ್ಮಕತೆಯ ಕತ್ತಲು ಸರಿದು ಸಮೃದ್ಧಿಯ ಬೆಳಕು ಮೂಡಬೇಕಿದೆ.
ಆದ್ದರಿಂದ ಆಕೆಯ ಪ್ರಾರ್ಥನೆ ಪವಾಡಗಳನ್ನು ಮಾಡಿಸಲಿ. ಜತೆಗೆ ಕ್ರಿಸ್ತ ಹೇಳಿದಂತೆ ನಾವು ಮಾಡಿದರೆ, ಅಂದರೆ ಕ್ರಿಸ್ತನ ಮಾತುಗಳನ್ನು ಅನುಸರಿಸಿ ನಡೆದರೆ ಖಂಡಿತವಾಗಿಯೂ ಅದ್ಭುತಗಳು ನಮ್ಮ ಬದುಕಿನ ತೋರಣಗಳಾಗುತ್ತವೆ ಎಂದು ಮರಿಯಳು ನಮಗೆ ತಿಳಿಸುತ್ತಾಳೆ. ಸುಖ ಸಂತೋಷ ಕಳೆದುಕೊಂಡ ಮನಗಳಿಗೆ ಮರಿಯಳಂತೆ ನಾವು ಕೂಡ ಸಮೃದ್ಧಿ, ಸುಖ ಶಾಂತಿ ಹೊತ್ತು ತರುವ ಸಾಧನಗಳಾಗಬೇಕಿರುವ ತುರ್ತು ನಮಗಿರುವುದನ್ನು ನಾವು ಮರೆಯಬಾರದು.
ನಾಲ್ಕನೆಯದಾಗಿ, ಕಲ್ವಾರಿ ಬೆಟ್ಟ. ಶಿಲುಬೆ ಮೇಲೆ ನೋವಿನಿಂದ ನೇತಾಡುತ್ತಿರುವ ಮಗನನ್ನು ಬೆರಳೆಣಿಕೆಯಷ್ಟು ಜನರನ್ನು ಸೇರಿ ಅಸಹಾಯಕತೆಯಿಂದ ದಿಟ್ಟಿಸುವ ಮರಿಯಳನ್ನು ಕಾಣುತ್ತೇವೆ. ಹೌದು, ಆಪ್ತ ಶಿಷ್ಯರು ಪ್ರಾಣಭಯದಿಂದ ಕ್ರಿಸ್ತನನ್ನು ಬಿಟ್ಟು ಓಡಿಹೋದರು. ಆಪ್ತರೇ ಕ್ರಿಸ್ತನನ್ನು ನಿರಾಕರಿಸಿ ಆವನಿಗೆ ದ್ರೋಹ ಬಗೆದರು. ಆದರೆ ಮರಿಯಳು ಕ್ರಿಸ್ತನ ನೋವಿನಲ್ಲೂ ದೃಢವಾಗಿ ಅವನ ಜೊತೆ ನಿಂತಳು. ಭಾರವಾದ ಶಿಲುಬೆ ಹೊತ್ತು ಕಲ್ವಾರಿ ಕಡೆ ಹೆಜ್ಜೆ ಹಾಕುತ್ತಿದ್ದ ಕ್ರಿಸ್ತನ ಜೊತೆ ನಿರ್ಭೀತಿಯಾಗಿ ಹೆಜ್ಜೆ ಹಾಕಿದಳು. ಪ್ರಾಣಕ್ಕೆ ಅಪಾಯವಿದ್ದರೂ ಕ್ರಿಸ್ತನನ್ನು ಬಿಟ್ಟು ಆ ಮಹಾತಾಯಿ ಒಂದಿನಿತೂ ಕದಲಲಿಲ್ಲ. ನಮ್ಮ ತಾಯಿಯಾಗಿರುವ ಅವಳು ನಮ್ಮ ಕಷ್ಟದಲ್ಲೂ ನಮ್ಮ ಒತ್ತಾಸೆಯಾಗಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಒಂದು ವಿಶ್ವಾಸದಲ್ಲಿ ಅನ್ಯಾಯವನ್ನು ಖಂಡಿಸುವ ಮನೋಧರ್ಮ ನಮ್ಮಲ್ಲಿ ಬೆಳೆಯಬೇಕಿದೆ.
ಕಲ್ವಾರಿಯಲ್ಲಿ ನಡೆದ ಮತ್ತೊಂದು ಘಟನೆ ನಮ್ಮ ಅರಿವಿಗೆ ಬಾರದಿರಲು ಸಾಧ್ಯವಿಲ್ಲ. ಕ್ರಿಸ್ತನು ಶಿಲುಬೆಯ ಮೇಲೆ ಸಾಯುವ ಮುನ್ನ, “ಅಮ್ಮಾ ಇದೋ ನಿನ್ನ ಮಗನು” ಎಂದು ಹೇಳಿ ಯೊವಾನ್ನನನ್ನು ತಾಯಿಗೆ ಮಗನಾಗಿ ನೀಡಲಾಯಿತು. ಯೊವಾನ್ನನಿಗೆ “ಇಗೋ ನಿನ್ನ ತಾಯಿ” ಎಂದು ತಾಯಿಯನ್ನು ನೀಡಲಾಯಿತು. ಈ ಒಂದು ಕೊಡುವಿಕೆಯಲ್ಲಿ ಯೊವಾನ್ನನಂತೆ ಯೊವಾನ್ನನ ಮೂಲಕ ಎಲ್ಲಾ ಪ್ರೇಷಿತರು ಮತ್ತು ನಾವೆಲ್ಲರೂ ಆ ಮಹಾತಾಯಿಯ ಮಕ್ಕಳಾಗಿದ್ದೇವೆ. ಮಾನವ ಕುಲದ ಆ ತಾಯಿಯ ಸಂರಕ್ಷಣೆಯ ಪರಿಧಿಯಲ್ಲಿ ಒಳಪಡುವ ನಾವು ತಾಯಿಯ ಸುರಕ್ಷೆಯಲ್ಲಿ ಬಾಳುವ ಸೌಭಾಗ್ಯ ನಮಗಿದೆ.
ಕೊನೆಗೆ. ಕ್ರಿಸ್ತನ ಕ್ರೂರ ಮರಣದಿಂದ ಭಯಭೀತರಾಗಿ ಚದುರಿದ ಶಿಷ್ಯರನ್ನು, ಒಟ್ಟುಗೂಡಿಸಿ, ಪವಿತ್ರಾತ್ಮರು ಅವರ ಮೇಲೆ ಆಗಮಿಸುವವರೆಗೂ ಅವರೊಟ್ಟಿಗಿದ್ದು ಧರ್ಮಸಭೆಯ ಹುಟ್ಟಿಗೆ, ಸಂರಕ್ಷಣೆಗೆ ಕಾರಣಕರ್ತರಾದ ತಾಯಿ ಮರಿಯಳು ಕ್ರಿಸ್ತನ ಸಂದೇಶವನ್ನು ಸಾರಲು ಧರ್ಮಸಭೆಯ ಮುಂದಾಳತ್ವ ವಹಿಸಿ ಇಂದಿಗೂ ಧರ್ಮಸಭೆಯನ್ನು ಮುನ್ನಡೆಸುತ್ತಿದ್ದಾಳೆ. ಆದ್ದರಿಂದ ನಾವೆಲ್ಲರೂ ಮರಿಯಳನ್ನು ಧರ್ಮಸಭೆಯ ನಾಯಕಿ ಪಾಲಕಿ ಎಂದು ಕರೆಯುತ್ತೇವೆ. ಅಷ್ಟು ಮಾತ್ರವಲ್ಲ, ಮರಿಯಳು ಆಗಾಗ ಕಾಣಿಸಿಕೊಂಡು ಧರ್ಮಸಭೆಗೆ ಅವಶ್ಯಕವಾದ ಸಂದೇಶ ಮತ್ತು ಮಾರ್ಗದರ್ಶನ ನೀಡುತ್ತಾ ಧರ್ಮಸಭೆಯನ್ನು ಮುನ್ನಡೆಸುತ್ತಿದ್ದಾಳೆ. ಈ ರೀತಿಯ ದರ್ಶನಗಳು ಕೂಡ ಧರ್ಮಸಭೆಯ ಬಗ್ಗೆ ತಾಯಿ ತೋರುವ ಕಾಳಜಿಯ ಅಭಿವ್ಯಕ್ತಿಯೆಂದೇ ಹೇಳಬಹುದು.
ಪರಿಪೂರ್ಣತೆಯನ್ನು ಹುಡುಕಿ ಹೊರಟ ಕವಿ ಈ ರೀತಿ ಹೇಳುತ್ತಾನೆ;
ಹೊನ್ನಿಗೆ ಪರಿಮಳವಿಲ್ಲ
ಕಬ್ಬಿಗೆ ಪುಷ್ಪವಿಲ್ಲ
ಗಂಧದ ಮರದೊಳು ಒಂದಿನಿತೂ ಫಲವಿಲ್ಲ;
ರಾಜನಿಗೆ ದೀರ್ಘಾಯುವಿಲ್ಲದ
ಪಂಡಿತನಲ್ಲಿ ಕಾಂಚಾಣವಿಲ್ಲದ
ಈ ಲೋಕದೊಳಗೆ ಪರಿಪೂರ್ಣತೆ
ದಕ್ಕುವ ಜಾಗವೇ ಬಲು ಮಜವಾಗಿದೆ.
ಅಲ್ಲಿ, ನೆಲ ಕೆಳಕ್ಕೆ ಜಾರುತ್ತಿರುತ್ತದೆ;
ಆಕಾಶ ಮೇಲಕ್ಕೆ ಹಾರುತ್ತಿರುತ್ತದೆ.
ಅಲ್ಲಿಗೆ ಪರಿಪೂರ್ಣತೆ ಎಂಬುವುದು ಮರೀಚಿಕೆ.
ಯಾರಿಗೂ ದಕ್ಕದೇ ಇರುವಂಥದ್ದು.
ಇಷ್ಟಕ್ಕೂ ಪರಿಪೂರ್ಣತೆ ಅಂತನ್ನುವ ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯೇ?
ಎಂಬ ಪ್ರಶ್ನೆಯನ್ನು ಕೇಳುತ್ತಲೇ ಕೊನೆಗೆ ಈ ರೀತಿ ಹೇಳುತ್ತಾನೆ;
ಅರೇ, ತನ್ನನ್ನು ತಾನು ಆಕರ್ಷಿಸಿಕೊಳ್ಳಲು ಚಿನ್ನಕ್ಕೆ ಪರಿಮಳದ ಆಸರೆಯಾದರೂ ಯಾಕಿರಬೇಕು?
ಹೌದು ಬದುಕಿನಲ್ಲಿ ಪವಾಡಗಳನ್ನು ಮಾಡಲಿಲ್ಲ. ಅವಳು ಶ್ರೀಮಂತಳಾಗಿರಲಿಲ್ಲ, ಯಾವುದೇ ಪುಸ್ತಕಗಳನ್ನು ಬರೆಯಲಿಲ್ಲ, ಯಾವುದೇ ಕಲಾಕೃತಿಗಳನ್ನು ರಚಿಸಲಿಲ್ಲ, ಕಾನೂನುಗಳು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಿ ಯಾವುದೇ ದೊಡ್ಡ ಮಟ್ಟದ ಸಾಮಾಜಿಕ ಆಂದೋಲನವನ್ನು ಮುನ್ನಡೆಸಲಿಲ್ಲ. ಆದರೂ 2000 ಸಾವಿರ ವರ್ಷಗಳು ಕಳೆದರೂ ಮರಿಯಳನ್ನು ನಾವು ಸ್ಮರಿಸಲು ಕಾರಣವೇನು?
ತನ್ನ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಅವಳು ಮಾಡಿದಳು. ಆಕೆಯ ದೀನತೆ, ವಿಧೇಯತೆ, ಕರ್ತವ್ಯಪಾಲನೆ ಪರಿಪೂರ್ಣವಾಗಿತ್ತು. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ವಿಶ್ವಾಸ ಮತ್ತು ದೀನತೆಯ ಮೂಲಕ ದೈವತ್ವಕೇರಬಹುದು ಎಂಬುದಕ್ಕೆ ಆಕೆ ಉದಾಹರಣೆಯಾದಳು. ಈ ದೃಷ್ಟಿಯಿಂದ ಇಡೀ ಮಾನವ ಕುಲಕ್ಕೆ ಆದರ್ಶಳಾದಳು.
- ಆನಂದ್
-0--0--0--0--0--0-