Thursday, 13 February 2020

ಹಣ ಬೊಕ್ಕಸಕ್ಕೆ, ಕೋರಿಕೆ ಪತ್ರಗಳು ತಿಪ್ಪೆಗೆ


ಎಲ್.ಚಿನ್ನಪ್ಪ, ಬೆಂಗಳೂರು.

ಸುಮಾರು ವರ್ಷಗಳ ಹಿಂದೆ ನಾನು ಕಣ್ಣಾರೆ ಕಂಡ ಘಟನೆಯೊಂದಕ್ಕೆ ಈಗ ಅಕ್ಷರ ರೂಪ ಕೊಟ್ಟಿದ್ದೇನೆ. ಹಣವೇ ಮುಖ್ಯ ಹಣವೇ ಸರ್ವಸ್ವ. ಎಲ್ಲರೂ ಹಣದಾಹಿಗಳೇ, ಹಣದ ಹಪಾಪಿಗಳೇ. ಮನಷ್ಯನ ಮನೋರಥವೇ ಹಣ. ಹಣಗಳಿಸಲು ನಾನಾ ಮಾರ್ಗಗಳಿವೆ. ವಾಮ ಮಾರ್ಗಗಳೂ ಇವೆ. ಉದ್ಯೋಗ, ಧರ್ಮ, ಶಿಕ್ಷಣ, ವ್ಯಾಪಾರ, ರಾಜಕೀಯದಲ್ಲೂ ಹಣ ಮಾಡಬಹುದು. ದೇವರ ಹೆಸರಿನಲ್ಲೂ ಹಣಗಳಿಸುವ ನಾನಾ ದಂದೆಗಳಿವೆ. ಹೆಚ್ಚು ಹಣ ಗಳಿಸುವುದರಿಂದ ಸಮಾಜದಲ್ಲೊಂದು ಗೌರವ, ಪ್ರತಿಷ್ಟೆಗೆ ಪಾತ್ರರಾಗಬಹುದು ಎಂಬುದು ಹಣದಾಹಿಗಳ ವಾಂಛೆ. ಹೌದು, ಹಣ ಪ್ರತಿಯೊಂದು ವ್ಯವಹಾರದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಹಣ ತನ್ನ ಪರೋಕ್ಷ ಪ್ರಭಾವ ಮೆರೆದಿದೆ. ಹಣ ಯಾರಿಗೆ ಬೇಡ? ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ’ ಎಂಬ ಮಾತಿಗೆ ಈ ಲೇಖನ ಒಂದು ದೃಷ್ಟಾಂತ. 
ಬೆಂಗಳೂರು ನಗರದ ಹೃದಯ ಭಾಗದಲ್ಲೊಂದು ಸುಂದರ ಬಡಾವಣೆ. ಅಲ್ಲಿ ನೆಲೆಸಿದ್ದವರ ಪೈಕಿ ಶ್ರೀಮಂತ ವರ್ಗದವರೇ ಹೆಚ್ಚು. ಅಲ್ಲೊಂದು ಸುಸಜ್ಜಿತ ಕಲ್ಯಾಣ ಮಂಟಪ. ಅದಕ್ಕೆ ಹೊಂದಿಕೊಂಡಂತೆ ದೇವಸ್ಥಾನ. ಪ್ರತಿ ನಿತ್ಯ ನೂರಾರು ಭಕ್ತರು ಬೆಳಿಗ್ಗೆ ಮತ್ತು ಸಂಜೆ ದೇವರ ದರ್ಶನಕ್ಕಾಗಿ ಬರುತ್ತಿದ್ದರು. ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳು ಕುಳಿತುಕೊಂಡು ವಿಶ್ರಮಿಸಲು ಬೆಂಚುಗಳಿದ್ದವು. ನೆರಳಿನ ಆಸರೆಗೆ ಮರಗಳೂ ಇದ್ದವು. ನಿವೃತ್ತರಿಗೆ, ವೃದ್ಧರಿಗೆ ಆ ಸ್ಥಳ ಹೇಳಿ ಮಾಡಿಸಿದಂತಿತ್ತು. ವೃದ್ಧರು, ಕೆಲಸವಿಲ್ಲದವರು ಅಲ್ಲಿ ಕುಳಿತುಕೊಂಡು ಮಾತಾಡುತ್ತ ಸಮಯ ಕಳೆಯುತ್ತಿದ್ದರು. 
ಭಕ್ತರ ಕೋರಿಕೆ ಪತ್ರಗಳಿಗೆ ಸಂದ ದುರ್ಗತಿ
ದೇವಸ್ಥಾನದ ಪ್ರಾಂಗಣದಲ್ಲಿ ಆಗಾಗ್ಗೆ ವಿಶೇಷ ಪೂಜೆ ಪ್ರವಚನಗಳು ಜರುಗುತ್ತಿದ್ದವು. ಪ್ರವಚನ ಆಲಿಸಲು ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆಯುತ್ತಿದ್ದರು. ಅಲ್ಲಿನ ಕಲ್ಯಾಣ ಮಂಟಪ ಹಾಗೂ ದೇವಸ್ಥಾನವು ಟ್ರಸ್ಟೊಂದಕ್ಕೆ ಸೇರಿದ್ದು ಅದರ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಟ್ರಸ್ಟಿಗಳು ಅಲ್ಲೇ ಮೊಕ್ಕಾಂ ಮಾಡಿದ್ದರು. ದೇವಸ್ಥಾನದ ಪ್ರಾಂಗಣದಲ್ಲಿ ದೊಡ್ಡ ಸೈಜಿನ ಹುಂಡಿಗಳನ್ನು ಇಟ್ಟಿದ್ದರು. ಭಕ್ತಾಧಿಗಳು ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರಿಂದ ಹುಂಡಿಗಳಲ್ಲಿ ಕಾಣಿಕೆ ತುಸು ಹೆಚ್ಚಾಗಿಯೇ ಬೀಳುತ್ತಿತ್ತು. ವಿವಾಹ ಸಮಾರಂಭಕ್ಕೆ ಬಂದ ದೈವಭಕ್ತರು ಸಹ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರಿಂದ ಅವರಿಂದಲೂ ಹುಂಡಿ ಪೆಟ್ಟಿಗೆಗಳಿಗೆ ಹಣ ಬೀಳುತ್ತಿತ್ತು. ಹಬ್ಬ-ಹರಿ ದಿನಗಳಲ್ಲಿ, ಅಲ್ಲಿ ವಿಶೇಷ ಪೂಜೆ ಪ್ರವಚನಗಳು ಜರುಗುತ್ತಿದ್ದವು. ಟ್ರಸ್ಟಿಗಳು ಅಂದು ಹೆಚ್ಚುವರಿ ಹುಂಡಿಗಳನ್ನು ಇಡುತ್ತಿದ್ದರು. 
ಪ್ರತಿ ದಿನ ರಾತ್ರಿ ಒಂಬತ್ತು ಗಂಟೆಗೆ ಟ್ರಸ್ಟಿಗಳು ಎಲ್ಲಾ ಹುಂಡಿಗಳನ್ನು ತಮ್ಮ ಆಫೀಸಿಗೆ ಸಾಗಿಸುತ್ತಿದ್ದರು. ಅವರ ಆಫೀಸ್ ಕಲ್ಯಾಣ ಮಂಟಪದ ನೆಲಮಾಳಿಗೆಯಲ್ಲಿತ್ತು. ಅಲ್ಲಿ ಅವರ ಜೊತೆ ಇನ್ನಿಬ್ಬರು ಸದಸ್ಯರು ಸೇರಿಕೊಂಡು ಹುಂಡಿಗಳನ್ನು ತೆರೆದು ಸಂಗ್ರಹವಾಗಿದ್ದ ಹಣವನ್ನೆಲ್ಲ ಮೇಜಿನ ಮೇಲೆ ಸುರಿದು ಎಣಿಸುತ್ತಿದ್ದರು. ನೋಟುಗಳÀನ್ನು ಕಣ್ಣಲ್ಲಿ ಕಣ್ಣಿಟ್ಟು ಎಣಿಸಿ ಬಂಡಲ್‍ಗಳನ್ನಾಗಿ ಕಟ್ಟುತ್ತಿದ್ದರೆ ಅದರ ಜೊತೆಗೆ ಸಿಕ್ಕ ಪತ್ರಗಳನ್ನು ಸಿಡುಕಿನಿಂದ ಹೊಸಕಿ ‘ದರಿದ್ರ ಮುಂಡೇವು ಬರೀ ಚೀಟಿಗಳನ್ನೇ ಹಾಕವೆ’ ಎಂದು ಮುಖ ಸಿಂಡರಿಸಿಕೊಂಡು ಅವುಗಳನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುತ್ತಿದ್ದರು. ಭಕ್ತರು ತಮ್ಮ ಕಾಣಿಕೆ ಜೊತೆಗೆ ಕೋರಿಕೆ ಪತ್ರಗಳನ್ನೂ ಬರೆದು ಹಾಕುತ್ತಿದ್ದರು. ಅದರಲ್ಲಿ ತಮ್ಮ ಆಂತರಿಕ ಕಷ್ಟ ಸಮಸ್ಯೆಗಳನ್ನೆಲ್ಲ ತೋಡಿಕೊಂಡು ಅವುಗಳ ಪರಿಹಾರಕ್ಕಾಗಿ ಭಗವಂತನಿಗೆ ಬರೆದಿದ್ದ ಪತ್ರಗಳವು. 
ಆದರೆ ಆ ಪತ್ರಗಳು ಟ್ರಸ್ಟ್‍ನವರಿಗೆ ಬೇಕಿರಲಿಲ್ಲ. ಅವರಿಗೆ ಬೇಕಿದ್ದುದು ಹಣ ಮಾತ್ರ. ಹಾಗಾಗಿ ಹಣವನ್ನಷ್ಟೆ ಬಾಚಿಕೊಳ್ಳುತ್ತಿದ್ದರು. ನಂತರ ಕಸದ ಬುಟ್ಟಿಗಳಲ್ಲಿದ್ದ ಪತ್ರಗಳನ್ನೆಲ್ಲ ತಿಪ್ಪೆಗೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕುತ್ತಿದ್ದರು. ಭಕ್ತರಲ್ಲಿ ಕೆಲವರು ಉಪವಾಸವ್ರತ ಕೈಗೊಂಡು, ತಾವು ಹರಸಿಕೊಂಡಂತೆ ದೇವರಿಗೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಅದರ ಜೊತೆಗೆ ತಾವು ಹರಸಿಕೊಂಡ ಕಾರ್ಯಗಳು, ಇಷ್ಟಾರ್ಥಗಳು ನೆರವೇರಲೆಂದು ದೇವರಿಗೆ ಪತ್ರಗಳನ್ನು ಬರೆದು ಹುಂಡಿಗಳಲ್ಲಿ ಹಾಕುತ್ತಿದ್ದರು. ಇನ್ನೂ ಕೆಲವು ವಯೋವೃದ್ಧರು ತಮ್ಮ ಉದ್ದೇಶಗಳ ಈಡೇರಿಕೆಗಾಗಿ ತಮ್ಮ ಕೈ ನೋಯಿಸಿಕೊಂಡು ಸಹಸ್ರ ‘ರಾಮನಾಮ’ ವನ್ನು ಬರೆದು ಹಾಕುತ್ತಿದ್ದರು. ನಾನು ಪ್ರತ್ಯಕ್ಷವಾಗಿ ಕಂಡಂತೆ ಆಗಿನ ಕಾಲಕ್ಕೇ ಪ್ರತಿ ನಿತ್ಯ ಸುಮಾರು 20,000-25,000 ದಷ್ಟು ಹಣ ಅಲ್ಲಿನ ಹುಂಡಿಗಳಲ್ಲಿ ಸಂಗ್ರಹವಾಗುತ್ತಿತ್ತು ಹಬ್ಬ ಹರಿದಿನಗಳಲ್ಲಿ ಇನ್ನೂ ಹೆಚ್ಚು ಹಣ. ಕಲ್ಯಾಣ ಮಂಟಪದಿಂದಲೂ ಟ್ರಸ್ಟ್‍ಗೆ ಹೆಚ್ಚಿನ ಆದಾಯ ಬರುತ್ತಿತ್ತು. 
ಭಕ್ತರು ನೀಡಿದ ಕಾಣಿಕೆ ಹಣವÀನ್ನು ಟ್ರಸ್ಟಿಗಳು ಹೇಗೆ ದುರಾಸೆಯಿಂದ ಬಾಚಿಕೊಳ್ಳುತ್ತಿದ್ದರೋ, ಅದೇ ರೀತಿ ಅವರ ಕೋರಿಕೆ ಪತ್ರಗಳನ್ನೂ ಸಂಗ್ರಹಿಸಿ ಅಲ್ಲಿನ ಭಗವಂತನ ಸನ್ನಿಧಿಗೆ ಸಮರ್ಪಿಸುವಂತ ಪುಣ್ಯದ ಕೆಲಸ ಮಾಡಬಹುದಿತ್ತು ಅಥವಾ ಅವುಗಳನ್ನೆಲ್ಲ ಒಟ್ಟುಗೂಡಿಸಿ ಪತ್ರ ಬರೆದಿದ್ದವರ ಹೆಸರಿನಲ್ಲಿ ಪುರೋಹಿತರಿಂದ ಸಾಮೂಹಿಕ ಅರ್ಚನೆ ಮಾಡಿಸಬಹುದಿತ್ತು. ಆದರೆ, ದೇವಸ್ಥಾನದ ಟ್ರಸ್ಟಿಗಳಿಗೆ ಭಕ್ತರ ಹಣ ಬೇಕಾಗಿತ್ತೇ ಹೊರತು ಅವರ ಕೋರಿಕೆ ಪತ್ರಗಳಲ್ಲ. ಭಗವಂತ ಬಯಸುವುದು ‘ಕೃಪಾನಿಧಿ ಕರುಣಿಸೆನ್ನನು,’ ಎಂದು ಅಂಗಲಾಚುವ ದೀನ ದಲಿತರ ಪ್ರಾರ್ಥನೆಯೇ ಹೊರತು ಅವರು ನೀಡುವ ಹಣವಲ್ಲ. 
ದೇವರ ಹೆಸರಿನಲ್ಲಿ ಹಣಗಳಿಸುವ ಇಂತಹ ನಾನಾ ದಂಧೆಗಳು ನಮ್ಮಲ್ಲಿವೆ. ಹಣ ಕೊಟ್ಟರೆ ಬೇಗ ದೇವರ ದರ್ಶನವಾಗುತ್ತದೆ. ಮಂಗಳಾರತಿ ತಟ್ಟೆಗೆ ಚಿಲ್ಲರೆ ಕಾಸು ಹಾಕದಿದ್ದರೆ, ಪೂಜಾರಿಗಳು ಕೆಕ್ಕರಿಸಿಕೊಂಡು ನೋಡುತ್ತಾರೆ. ಹೀಗೆ ದೇವರ ದರ್ಶನದಲ್ಲೂ ತಾರತಮ್ಯವಿದೆ, ಪಕ್ಷಪಾತಗಳಿವೆ. ಇದನ್ನು ವಿಚಾರವಂತರು, ಸಾಮಾಜಿಕ ಕಳಕಳಿ ಉಳ್ಳವರು, ಪರಾಂಬರಿಸಬೇಕು. ಭಕ್ತರ ಪತ್ರಗಳಿಗೆ ನ್ಯಾಯ ಒದಗಿಸುವಂತಹ ವ್ಯವಸ್ಥೆಯಾಗಬೇಕು. ಹಾಗಾದಾಗ ಮಾನವೀಯ ಮೌಲ್ಯಗಳಿಗೆ ಗೌರವ ಕೊಟ್ಟಂತಾಗುತ್ತದೆ. ಹಿಂದೂ ಧರ್ಮದವರಲ್ಲಿ ಇಂತಹ ಅರಾಜಕತೆಯಿದ್ದರೆ, ನಮ್ಮ ಕ್ರೈಸ್ತ ಧರ್ಮದಲ್ಲಿ ಇದಕ್ಕೆ ತದ್ವಿರುದ್ಧವಾದ ಪದ್ದತಿಯೊಂದಿದೆ. ನಮ್ಮ ಎಲ್ಲಾ ದೇವಾಲಯಗಳಲ್ಲಿ ಇದಕ್ಕೆಂದೇ ಪ್ರತ್ಯೇಕವಾಗಿ ‘ಪೆಟಿಶನ್ ಬಾಕ್ಸ್’ ಇಟ್ಟಿರುವುದನ್ನು ಕಾಣಬಹುದು. ಹೀಗೆ ಪೆಟಿಶನ್ ಬಾಕ್ಸ್‍ಗಳಲ್ಲಿ ಸಂಗ್ರಹÀವಾದ ಭಕ್ತರ ಕೋರಿಕೆಯ ಪತ್ರಗಳನ್ನೆಲ್ಲ ತೆಗೆದು ಅವರಿಗೋಸ್ಕರ ಪ್ರಾರ್ಥಿಸುವ ಪದ್ದತಿ ನಮ್ಮಲ್ಲಿದೆ. ಪೋನ್ ಮೂಲಕವೂ ಕೋರಿಕೆ ಸಲ್ಲಿಸಬಹುದು. 
ಭಕ್ತರ ಮನವಿ ಪತ್ರಗಳನ್ನು ಗೌರವಿಸುವ ಇಸ್ರೇಲ್ ರಾಷ್ಟ್ರ
ಭಕ್ತರ ಪತ್ರಗಳನ್ನು ಸ್ವೀಕರಿಸಿ ಗೌರವಿಸುವ ಸಂಸ್ಕøತಿಯೊಂದು ಇಸ್ರೇಲ್‍ನಲ್ಲಿದೆ. ಭಕ್ತರು ತಮ್ಮ ಹರಕೆ-ಕಾಣಿಕೆಗಳನ್ನು ಹಣ ಮತ್ತು ವಸ್ತುಗಳ ರೂಪದಲ್ಲಿ ಸಲ್ಲಿಸುವಂತೆಯೇ ತಮ್ಮ ಕೋರಿಕೆಗಳನ್ನು ಪತ್ರಗಳ ಮುಖಾಂತರವೂ ಅಲ್ಲಿ ಸಲ್ಲಿಸಬಹುದು. ಸಾವಿರಾರು ಮೈಲುಗಳ ದೂರದ ಸ್ಥಳಕ್ಕೆ ದೇವರನ್ನು ಅರಸಿಕೊಂಡು ಹೋಗಬೇಕಾಗಿಲ್ಲ. ಮಾಡಿದ ಪಾಪಗಳ ಪರಿಹಾರಕ್ಕಾಗಿ ಅಷ್ಟು ದೂರ ಪ್ರಯಾಣಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿಲ್ಲ. ಈಗ ಎಲ್ಲವೂ ಸರಳಗೊಂಡಿವೆ. ಪ್ರಪಂಚದ ಭೂಪಟದಲ್ಲಿ ಒಂದು ಪುಟ್ಟ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಇಸ್ರೇಲ್ ರಾಷ್ಟ್ರದಲ್ಲಿ ಇಂತಹ ಒಂದು ಪವಿತ್ರ ಸ್ಥಳವಿದೆ. ಕ್ರೈಸ್ತರಿಗೆ ಹಾಗೂ ಯೆಹೂದಿಗಳಿಗೆ ದೇವರಲ್ಲಿ ನಂಬಿಕೆ ಇರುವ ವಿಶ್ವಾಸದ ಕೊಂಡಿಯನ್ನು ಪೋಷಿಸಿ ಬೆಳೆಸುವ ಸೇವೆಯೊಂದನ್ನು ಇಸ್ರೇಲ್ ರಾಷ್ಟ್ರ ಮಾಡುತ್ತಿದೆ. ಇದರ ಸಲುವಾಗಿಯೇ ರಾಷ್ಟ್ರವು ಒಂದು ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಭಕ್ತರು ದೇವರ ಹೆಸರಿಗೆ ಎಲ್ಲಿಂದ ಬೇಕಾದರೂ ಪತ್ರಗಳನ್ನು ಬರೆಯಬಹುದು. ಅಲ್ಲಿನ ಅಂಚೆ ಕಛೇರಿಯು ಅಂತಹ ಪತ್ರಗಳನ್ನೆಲ್ಲಾ ಸ್ವೀಕರಿಸಿ ದೇವರ ಸಾನ್ನಿಧ್ಯಕ್ಕೆ ತಲುಪಿಸುವಂತ ಪುಣ್ಯದ ಕೆಲಸ ಮಾಡುತ್ತಿದೆ. ಅದೊಂದು ಅವರ ಅಳಿಲು ಸೇವೆ. 
ದೇವರಿಗೆ ಶ್ವಾಶ್ವತ ವಿಳಾಸವಿಲ್ಲದಿದ್ದರೂ ಭಕ್ತರು ತಮಗೆ ತೋಚಿದ ರೀತಿಯಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನೆಲ್ಲ ತೋಡಿಕೊಂಡು ದೇವರಿಗೆ ಪತ್ರಗಳನ್ನು ಬರೆಯುವುದುಂಟು. ‘ಜೆರುಸಲೆಂ ಪರಮಾತ್ಮನ ಸನ್ನಿಧಿಗೆ, ಪಶ್ಚಿಮ ಗೋಡೆಯ ಭಗವಂತನ ಸನ್ನಿಧಿಗೆ, ಜೀವಂತ ದೇವರ ಸನ್ನಿಧಿಗೆ” ಎಂದೆಲ್ಲಾ ಹೆಸರಿಸಿ ದೇವರಿಗೆ ಪತ್ರಗಳನ್ನು ಬರೆಯುತ್ತಾರೆ. ಪ್ರಪಂಚದ ನಾನಾ ಕಡೆಗಳಿಂದ    ಅಲ್ಲಿಗೆ ಅಂಚೆಯ ಮೂಲಕ ಬರುವ ಭಕ್ತರ ಪತ್ರಗಳನ್ನು ಇಸ್ರೇಲ್ ರಾಷ್ಟ್ರವು ಸ್ವೀಕರಿಸಿ ಭಕ್ತಾಧಿಗಳ ಇಚ್ಛೆಯಂತೆ ಅಲ್ಲಿನ ಅಂಚೆ ಸಿಬ್ಬಂದಿಗಳು ಅವುಗಳನ್ನು ಜೆರುಸಲೆಂ ಗೋಡೆಗೆ ಪ್ರಾಮಾಣಿಕಬದ್ದರಾಗಿ ರವಾನಿಸÀುತ್ತಾರೆ. ‘ಇಲ್ಲಿಗೆ ಬರುವ ಭಕ್ತಾಧಿಗಳ ಸಂದೇಶವನ್ನು ದೇವರ ಅವಗಾಹನೆಗೆ ಇಡುತ್ತೇವೆ. ಅವುಗಳಿಗೆ ಸ್ಪಂದಿಸುವುದು ಬಿಡುವುದು ದೇವರ ಇಚ್ಛೆಗೆ ಬಿಟ್ಟದ್ದು, ನಮ್ಮ ಪಾಲಿನ ಕರ್ತವ್ಯವನ್ನಷ್ಟೆ ನಾವು ಪ್ರಮಾಣಿಕವಾಗಿ ಮಾಡುತ್ತೇವೆ’ ಎಂಬುದು ಅಲ್ಲಿನ ಅಂಚೆ ಸಿಬ್ಬಂದಿಗಳ ಹೇಳಿಕೆ. 
ಇಲ್ಲಿ ನಮ್ಮ ಅಂಚೆ ಇಲಾಖೆಗಳು ವ್ಯಕ್ತಿಗಳ ಹೆಸರಿಗೆ ಬಂದಿರುವ ಪತ್ರಗಳನ್ನು ಕೆಲವು ವೇಳೆ ಸರಿಯಾಗಿ ತಲುಪಿಸುವುದಿಲ್ಲ. ಆದರೆ ಇಸ್ರೇಲ್‍ನ ಪ್ರಾಮಾಣಿಕ ಶ್ರದ್ಧಾಳುಗಳು ಅಂತಹ ಪುಣ್ಯದ ಕೆಲಸ ಮಾಡುತ್ತಾರೆ. ಅಲ್ಲಿನ ಅಂಚೆ ಕಛೇರಿಯ ಹೆಸರು ‘ಡೆಡ್ ಲೆಟರ್ ಪೋಸ್ಟ್ ಆಫೀಸ್ ‘ (ಆಐPಔ) 
ಅಲ್ಲಿಗೆ ಖುದ್ದು ಭೇಟಿ ಕೊಡುವ ಯಾತ್ರಾರ್ಥಿಗಳು ಗೋಡೆಯ ಮುಂದೆ ನಿಂತು ನಿವೇದನೆ, ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಬೇಡಿಕೆಗಳನ್ನು ಬರೆದು ಪತ್ರವನ್ನು ಗೋಡೆಯ ಕಿಂಡಿಗೆ ಸಿಕ್ಕಿಸುತ್ತಾರೆ. ಬೇರೆಯವರಿಗಾಗಿಯೂ ಬೇಡಿಕೆ ಚೀಟಿ ಬರೆದು ಗೋಡೆಗೆ ತುರುಕುವುದುಂಟು. ಗೋಡೆಯ ಕಿಂಡಿಯಲ್ಲಿ ಸಿಕ್ಕಿಸಲಾಗಿದ್ದ ನೂರಾರು ಚೀಟಿಗಳನ್ನು ಅಂಚೆ ಇಲಾಖೆಯವರು ಸಂಗ್ರಹಿಸಿ ಅವುಗಳನ್ನು ಸಭಾ ಮಂದಿರಕ್ಕೆ ಹೊತ್ತೊಯ್ದು ಪ್ರಾರ್ಥಿಸಿ ಅವುಗಳÀನ್ನು ಮೂಟೆ ಕಟ್ಟುತ್ತಾರೆ. ಅಲ್ಲಿಗೇ ಅದು ಕೊನೆಗೊಳ್ಳದೇ,. ನಂತರ ಎಂದಾದರೊಂದು ದಿನ ಆ ಪತ್ರಗಳನ್ನೆಲ್ಲ ಹರಾಜು ಹಾಕುವ ಪದ್ದತಿಯೂ ಅಲ್ಲಿದೆ. 
ಗೋಳಾಟದ ಗೋಡೆ
ದೇವರು ಗೋಡೆಯಲ್ಲಿ ಇನ್ನೂ ಜೀವಂತವಾಗಿದ್ದಾನೆ ಎಂಬುದು ಯೆಹೂದಿಗಳ ನಂಬಿಕೆ. ದೇವಾಲಯದ ಗೋಡೆ ಪಶ್ಚಿಮ ದಿಕ್ಕಿಗಿರುವುದರಿಂದ ಇದಕ್ಕೆ ಪಶ್ಚಿಮದ ಗೋಡೆ (ವೆಸ್ಟರ್ನ್ ವಾಲ್) ಎನ್ನುವ ಹೆಸರು ಬಂದಿದೆ. ಇದಕ್ಕೆ ಗೋಳಾಟದ ಗೋಡೆ (ವೇಲಿಂಗ್ ವಾಲ್) ಎಂಬ ಹೆಸರೂ ಇದೆ. ಯೆಹೂದ್ಯರು ಈ ಗೋಡೆಯ ಕಡೆಗೆ ಮುಖಮಾಡಿಕೊಂಡು ತಮ್ಮ ಧರ್ಮಗ್ರಂಥ (ಥೋರಾ)ದ ಪಠಣ ಮಾಡುವರು ಮತ್ತು ದೇವಾಲಯದ ಗತ ವೈಭವವನ್ನು ನೆನೆ ನೆನೆದು ಕಣ್ಣೀರು ಇಡುವರು. ಇದಕ್ಕಾಗಿಯೇ ಆ ಗೋಡೆಗೆ ಗೋಳಾಟದ ಗೋಡೆ ಎಂಬ ಹೆಸರು ಬಂದಿದೆ. 
ಭೌಗೋಳಿಕ
ಇಸ್ರೇಲ್ ರಾಷ್ಟ್ರವು ಯೆಹೂದ್ಯರಿಗೆ, ಕ್ರೈಸ್ತರಿಗೆ ಹಾಗೂ ಮುಸ್ಲಿಮರಿಗೆ ಪವಿತ್ರ ಸ್ಥಳವಾಗಿದೆ. ಇಸ್ರೇಲ್ ರಾಷ್ಟ್ರ ಪುಟ್ಟದಾದರೂ ಗಳಿಸಿರುವ ಕೀರ್ತಿ ಮಾತ್ರ ದೊಡ್ಡದು. ನಮ್ಮ ರಾಯಚೂರು, ಬಳ್ಳಾರಿ ಜಿಲ್ಲೆಗಳ ವಿಸ್ತೀರ್ಣಕ್ಕಿಂತ ಇದು ಚಿಕ್ಕದು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ಈ ದೇಶವು 470 ಕಿ.ಮೀ. ಉದ್ದ, 135 ಕಿ.ಮೀ. ಅಗಲವಿದೆ. ದೇಶವನ್ನೆಲ್ಲ ಒಂದೇ ದಿನದಲ್ಲಿ ಸುತ್ತಿ ಬರಬಹುದು. ಜನ ಸಂಖ್ಯೆಯೂ ತೀರಾ ಕಡಿಮೆ. ಇಲ್ಲಿನ ಜನ ಸಂಖ್ಯೆ ಕೇವಲ 90 ಲಕ್ಷ. ದೇಶದ ಅರ್ಧಭಾಗದಷ್ಟು ಸ್ಥಳವನ್ನು ಮರುಭೂಮಿಯೇ ಆಕ್ರಮಿಸಿಕೊಂಡಿದೆ. ಉತ್ತರ ಭಾಗದಲ್ಲಿ 40 ಸೆ.ಮೀ. ಮಳೆ ಬಿದ್ದರೆ, ದಕ್ಷಿಣ ಭಾಗದಲ್ಲಿ ಕೇವಲ 3.ಸೆ.ಮೀ. ಮಳೆ ಬೀಳುವುದು. ಪ್ರಾರಂಭದಲ್ಲಿ ಮರುಭೂಮಿ ಪ್ರದೇಶವೆಲ್ಲ ಕೃಷಿಗೆ ಅನುಪಯುಕ್ತವೇ ಆಗಿತ್ತು. ಆದರೂ ಶತಪ್ರಯತ್ನದಿಂದ ಆ ಪ್ರದೇಶವನ್ನು ಕೃಷಿಯೋಗ್ಯ ಪ್ರದೇಶವನ್ನಾಗಿ ಮಾಡಿದ್ದಾರೆ. 
500 ಕಿಲೋಮೀಟರು ದೂರವಿರುವ ಗಲಿಲೇಯ ಸರೋವರದಿಂದ ನೀರನ್ನು ಹಾಯಿಸುವ ಯೋಜನೆಯೊಂದು 1964ರಲ್ಲಿ ಕಾರ್ಯಗತಗೊಂಡಿತು. ಆಮೇಲೆ ದೇಶದ ಕೃಷಿ ಚಟುವಟಿಕೆಗಳು ಸಮರೋಪಾದೆಯಲ್ಲಿ ಗರಿಗೆದರಿದÀವು. ಅನೇಕ ಕೃಷಿ ಸಂಶೋಧನಾ ಕೇಂದ್ರಗಳು ಹುಟ್ಟಿಕೊಂಡವು. ರಾಷ್ಟ್ರವು ಆಧುನಿಕ ವಿಧಾನದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿಗೆ ಪ್ರಾಮುಖ್ಯತೆ ಕೊಟ್ಟಿತು. ಇಂದು ದೇಶದುದ್ದಕ್ಕೂ ಕೊಳವೆಗಳಲ್ಲಿ ನಿರಂತರವಾಗಿ ಹರಿಯುವ ನೀರೇ ಕೃಷಿಗೆ ಆಧಾರವಾಗಿದೆ. ದೇಶವು ಇಂದು ಎಲ್ಲಾ ದವಸ ಧಾನ್ಯಗಳನ್ನು, ತರಕಾರಿ ಹಣ್ಣುಗಳನ್ನು ಬೆಳೆಯುವ ಸಾಮಥ್ರ್ಯ ರೂಢಿಸಿಕೊಂಡಿದೆ. ಇಂದು ಮರುಭೂಮಿಯಲ್ಲೂ ಹಸಿರು ಪೈರುಗಳು ಕಂಗೊಳಿಸುತ್ತಿವೆ. ಪುಷ್ಪೋದ್ಯಮದಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ. ಪ್ರವಾಸೋದ್ಯಮದಿಂದಲೂ ಸಾಕಷ್ಟು ಆದಾಯ ಗಳಿಸುತ್ತಿದೆ. ಮಿಲಿಟರಿ ತಂತ್ರಜ್ಞಾನದಲ್ಲಿಯೂ ದೇಶ ಬಹಳ ಮುಂದಿದೆ. ಈ ಪುಟ್ಟ ರಾಷ್ಟ್ರ ಇಷ್ಟೆಲ್ಲಾ ಮುಂದುವರಿಯಲು ಅದು ಅಳವಡಿಸಿಕೊಂಡ ಕಾರ್ಯಬದ್ದತೆ ಹಾಗೂ ನಿಸ್ಪøಹ ಸೇವೆಯೇ ಕಾರಣ.
---------------------------------
ಮಾಹಿತಿ: ಇಸ್ರೇಲ್ ದೇಶದ ಪ್ರವಾಸ ಪುಸ್ತಕ. 

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...