Thursday, 13 February 2020

ಪರಮ ಸಂಸ್ಕಾರ [ಭಾಗ 3) - ಸಿಎಂಜೆ


ಪರಮಪ್ರಸಾದ
ಯೇಸುಕ್ರಿಸ್ತರು ತಾವು ಮರಣಯಾತನೆ ಅನುಭವಿಸುವ ಮುನ್ನ ತಮ್ಮ ಆಪ್ತ ಶಿಷ್ಯರೊಂದಿಗೆ ಕೊನೆಯ ಊಟವನ್ನು ಮಾಡುತ್ತಾ ರೊಟ್ಟಿರಸಗಳನ್ನು ತಮ್ಮ ಪೂಜ್ಯ ಶರೀರ ಮತ್ತು ರಕ್ತದೊಂದಿಗೆ ಸಮೀಕರಿಸಿ ಎಲ್ಲರಿಗೂ ಹಂಚಿದರು ಹಾಗೂ ಅವರ ಸ್ಮರಣೆಗಾಗಿ ಆ ಆಚರಣೆಯನ್ನು ಅನುಗಾಲವೂ ಮಾಡುವಂತೆ ಆದೇಶ ನೀಡಿದರು. (ನೋಡಿ. ಮತ್ತಾಯ 26:26-28). ಪ್ರತಿ ಬಲಿಪೂಜೆಯಲ್ಲೂ ನಾವು ಯೇಸುವಿನ ಕೊನೆಯ ಭೋಜನದ ಸ್ಮರಣೆ ಮಾಡುತ್ತೇವೆ. ಇದೇ ಆಧಾರದಲ್ಲಿ ಕ್ರೈಸ್ತ ಕುಟುಂಬದ ಮಗುವಿಗೆ ತಿಳಿವು ಬಂದ ಮೇಲೆ ಅಂದರೆ ಸುಮಾರು ಏಳೆಂಟು ವಯಸ್ಸಿನಲ್ಲಿ ಪವಿತ್ರ ಪರಮಪ್ರಸಾದದಲ್ಲಿ ಯೇಸುಕ್ರಿಸ್ತರು ಇದ್ದಾರೆಂಬುದರ ಬಗ್ಗೆ ವಿಶೇಷ ಅರಿವು ಮತ್ತು ಭಕ್ತಿಯನ್ನು ಮೂಡಿಸಿ ಪರಮಪ್ರಸಾದ ಸಂಸ್ಕಾರವನ್ನು ನೀಡಲಾಗುತ್ತದೆ. ಅಲ್ಲಿಂದಾಚೆಗೆ ಆ ಹುಡುಗ ಹುಡುಗಿಯರು ಯೇಸುವಿನಲ್ಲಿ ಭಕ್ತಿಯಿಂದ ಒಂದಾಗಿ ದಿನದಿನವೂ ಅನೂಚಾನವಾಗಿ ಪರಮಪ್ರಸಾದ ಸ್ವೀಕರಿಸುವ ಮೂಲಕ ಕ್ರಿಸ್ತೀಯ ಚೇತನದಲ್ಲಿ ಬಲಗೊಳ್ಳುತ್ತಾರೆ ಹಾಗೂ ನಿಜಕ್ರೈಸ್ತರಾಗಿ ಜೀವಿಸುತ್ತಾರೆ. 
ಮೊದಲ ಪರಮಪ್ರಸಾದವನ್ನು ಬಿಷಪರು ನೀಡುತ್ತಾರಾದರೂ ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಬಿಷಪರು ತಮ್ಮ ಪರವಾಗಿ ಬೇರೆ ಯಾರಾದರೂ ಗುರುಗಳಿಗೆ ಅಧಿಕಾರ ನೀಡಿ ಕಳಿಸುವುದುಂಟು. ಹೊಸದಾಗಿ ಕ್ರೈಸ್ತ ಧರ್ಮಕ್ಕೆ ಬಂದವರಿಗೆ   ದೀಕ್ಷಾಸ್ನಾನ ಮತ್ತು ಪರಮಪ್ರಸಾದವನ್ನು ಆಯಾ ಧರ್ಮಕೇಂದ್ರದ ಗುರುಗಳೇ ನೀಡುವುದಕ್ಕೆ ಅನುಮತಿಯಿದೆ.   ದೀಕ್ಷಾಸ್ನಾನದಂತೆಯೇ ಪರಮಪ್ರಸಾದ ಸಂಸ್ಕಾರ ಸ್ವೀಕಾರದ ಸಂದರ್ಭವನ್ನು ನೆಂಟರಿಷ್ಟರೊಂದಿಗೆ ಸೇರಿ ಸಂಭ್ರಮದಿಂದ ಔತಣ ಮಾಡಿ ಆಚರಿಸುವುದು ವಾಡಿಕೆಯಾಗಿ ನಡೆದುಬಂದಿದೆ.
ಪ್ರತಿ ಬಲಿಪೂಜೆಯಲ್ಲೂ ಗುರುಗಳು ಗೋದಿಹಿಟ್ಟಿನಿಂದ ಅಚ್ಚು ತೆಗೆದ ಅಪ್ಪವನ್ನು ಮತ್ತು ದ್ರಾಕ್ಷಾರಸವನ್ನು ಬಲಿಯರ್ಪಣೆಯ ಸಂದರ್ಭದಲ್ಲಿ ಎರಡೂ ಹಸ್ತಗಳನ್ನಿಟ್ಟು ಪವಿತ್ರೀಕರಿಸುತ್ತಾ ‘ಪ್ರಭುಯೇಸುವೇ ಈ ರೊಟ್ಟಿರಸಗಳಲ್ಲಿ ನೀವು ಇಳಿದು ಬಂದು ಪಾವನಗೊಳಿಸಿರಿ’ ಎಂದು ಪ್ರಾರ್ಥಿಸುವಾಗ ಅದರಲ್ಲಿ ಯೇಸುಕ್ರಿಸ್ತರು ನೆಲೆಗೊಳ್ಳುತ್ತಾರೆ. ಆ ಸಮಯದಲ್ಲಿ ದೇವರು ಇಳಿದು ಬರುವ ಆ ಸಂದರ್ಭವನ್ನು ಉದ್ಘೋಷಿಸುವುದೋ ಎಂಬಂತೆ ಪೀಠಸೇವೆಯ ಹುಡುಗರು ಕೈಗಂಟೆಯನ್ನು ನುಡಿಸುತ್ತಾರೆ. 
ಪ್ರಸಾದ ಹಂಚುವಿಕೆಯ ನಂತರ ಮಿಕ್ಕಿದ ಪರಮಪ್ರಸಾದವನ್ನು ದೇವಾಲಯದ ಪ್ರಸಾದಮಂಜೂಷದಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗೂ ಮರಣಾವಸ್ಥೆಯಲ್ಲಿರುವವರನ್ನು ಸಂಧಿಸಲು ಹೋದಾಗ ಅವರಿಗೆ ನೀಡುವುದಕ್ಕಾಗಿ ಪರಮಪ್ರಸಾದವನ್ನು ಈ ಮಂಜೂಷದಿಂದಲೇ ಗುರುಗಳು ಕೊಂಡೊಯ್ಯುತ್ತಾರೆ.       ದಿನನಿತ್ಯದ ಆರಾಧನೆಗಾಗಿ ಕೆಲವು ದೇವಾಲಯ, ಗುರುಮಠ, ಕನ್ಯಾಮಠ, ಆಸ್ಪತ್ರೆಗಳ ಪ್ರಾರ್ಥನಾಮಂದಿರಗಳಲ್ಲಿ ದೊಡ್ಡಗಾತ್ರದ ಪ್ರಸಾದವನ್ನು ಪ್ರಭಾವಳಿಯ ನಡುವೆ ಪ್ರದರ್ಶಿಸಿ ಸಾರ್ವಜನಿಕ ಆರಾಧನೆಗೆ  ಇಡುತ್ತಾರೆ. 
ಪರಮಪ್ರಸಾದವು ಸ್ವತಃ ಯೇಸುವಿನ ಶರೀರವೇ ಆಗಿರುವುದರಿಂದ ಅದಕ್ಕೆ ವಿಶೇಷ ಗೌರವ ಭಕ್ತಿಗಳಿಂದ ನಡೆದುಕೊಳ್ಳಬೇಕು. ಯೊವಾನ್ನ 6:35-36ರಲ್ಲಿ ‘ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು. ಆದರೆ ನಾನು ನಿಮಗೆ ಹೇಳಿದಂತೆ ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ’ ಎಂದ ಯೇಸುಸ್ವಾಮಿಯ ಮಾತುಗಳ ಮೇಲೆ ಗಮನವಿರಿಸಿ ದೇವಾಲಯವನ್ನು ಪ್ರವೇಶಿಸಿದಾಗಲೆಲ್ಲ ಪ್ರಸಾದ ಸಂಪುಟಕ್ಕೆ ತಲೆಬಾಗಿ ಮೊಣಕಾಲೂರಿ ವಂದಿಸಬೇಕು. ಪ್ರಸಾದ ಸಂಪುಟದ ಸಮ್ಮುಖದಲ್ಲಿರುವಾಗ ಯಾರೊಂದಿಗೂ ಮಾತಾಡಲೇಬಾರದು. ಅನಿವಾರ್ಯವೆನಿಸಿದ ಸಂದರ್ಭದಲ್ಲಿ ಮೆಲುದನಿಯಲ್ಲಿ ಭಯಭಕ್ತಿಯಿಂದ ಮಾತಾಡುವುದು ಸೂಕ್ತ. ದೇವಾಲಯದಲ್ಲಿ ಪರಮಪ್ರಸಾದದವನ್ನು ಹಂಚುತ್ತಿರುವಾಗ ಇತರರು ಭಕ್ತಿಯಿಂದ ಮೊಣಕಾಲೂರಿ ಪ್ರಾರ್ಥನೆ ಭಜನೆಗಳಲ್ಲಿ ನಿರತರಾಗಬೇಕು ಅಥವಾ ತಲೆಬಾಗಿ ಕುಳಿತಿರಬೇಕು. ಪ್ರಸಾದ ಸ್ವೀಕಾರಕ್ಕೆ ಬರುವವರ ಅಲಂಕಾರ, ಬಟ್ಟೆಬರೆ, ನಡಿಗೆಗಳನ್ನು ಗಮನಿಸುವುದು ಯೇಸುಕ್ರಿಸ್ತರಿಗೆ ನಾವು ತೋರುವ ಅಗೌರವ ಅಪಮಾನ ಎಂಬುದನ್ನು ಮನಗಾಣಬೇಕು. ಪರಮಪ್ರಸಾದ ಸ್ವೀಕಾರವನ್ನು ಯಾವುದೇ ಅಬ್ಬರ ಗತ್ತು ಗಮ್ಮತ್ತುಗಳಿಲ್ಲದೆ 
ದೈನ್ಯದಿಂದ ಕೈಮುಗಿದು ಸ್ವೀಕರಿಸಿ ಅಷ್ಟೇ ಭಕ್ತಿಯಿಂದ ಹಿಂದಿರುಗಿ ಮೊಣಕಾಲೂರಿ ಮೌನದಿಂದ ಮನದೊಳಗಿನ ಯೇಸುವಿನೊಂದಿಗೆ ಸಂಭಾಷಿಸಬೇಕು. ‘ನನ್ನೊಳಗೆ ಬಂದು ನನ್ನ ಮನಸಿನ ಮೊಡಕು ಮೂಲೆಗಳನ್ನೆಲ್ಲ ಬೆಳಗಿರುವ ಯೇಸುವೇ ಅದೇ ಬೆಳಕಿನಲ್ಲಿ ನನ್ನನ್ನು ಮುನ್ನಡೆಸು’ ಎಂದು ಪುನೀತ ಭಾವದಿಂದ ಹೇಳಿ ಪ್ರಾರ್ಥನೆ ಭಜನೆಗಳಲ್ಲಿ ತೊಡಗಬೇಕು. 
ಕೊರಿಂಥದವರಿಗೆ ಬರೆದ ಮೊದಲಪತ್ರ 10: 16-17ರಲ್ಲಿ ಹೇಳಿರುವ ಪ್ರಕಾರ ‘ನಾವು ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ’. ಪರಮಪ್ರಸಾದವನ್ನು ಸ್ವೀಕರಿಸಿದ ಮೇಲೆ ನಾವು ಜೀವಂತ ಪ್ರಸಾದ ಸಂಪುಟಗಳಾಗುತ್ತೇವೆ. ಮತ್ತೊಬ್ಬರಲ್ಲೂ ಅದೇ ಜೀವಂತ ಸಂಪುಟವನ್ನು ಕಾಣುವ ಮೂಲಕ ನಾವು ದೇವರಿಗೆ ಸ್ತೋತ್ರ ಎನ್ನುತ್ತೇವೆ. ಪೂಜೆ ಮುಗಿದ ನಂತರ ದೊಡ್ಡವರು ಚಿಕ್ಕವರೆನ್ನದೆ ಒಬ್ಬರು ಮತ್ತೊಬ್ಬರಿಗೆ ಕೈ ಮುಗಿಯುತ್ತಾ ದೇವರಿಗೆ ಸ್ತೋತ್ರ ಎನ್ನುವುದು ಬಹು ಒಳ್ಳೆಯ ರೂಢಿಯಾಗಿದೆ. ಒಂದೇ ಪೀಠದಲ್ಲಿ ಒಂದೇ ರೊಟ್ಟಿಯನ್ನು ಒಟ್ಟಿಗೆ ಭುಜಿಸುವ ನಾವೆಲ್ಲರೂ ಒಂದೇ ಆಗಿದ್ದೇವೆ. ಪ್ರೇ.ಕಾ. 2:42-46ರಲ್ಲಿ ಹೇಳಿರುವ ಪ್ರಕಾರ ಪರಮಪ್ರಸಾದ ಸ್ವೀಕರಿಸುವ ನಾವೆಲ್ಲರೂ ಅನ್ಯೋನ್ಯವಾಗಿ ಜೀವಿಸಬೇಕು.
ಇಂದಿಗೆ ಸುಮಾರು ಒಂಬೈನೂರು ವರ್ಷಗಳ ಹಿಂದೆ ಜೀವಿಸಿದ್ದ ಅಂತೋಣಿಯವರು ಪರಮಪ್ರಸಾದ ಭಕ್ತಿಯನ್ನು ಎಲ್ಲೆಡೆ ಪ್ರಚುರಗೊಳಿಸುತ್ತಿದ್ದರು. ಆಗ ಪಾಷಂಡಿ ಪಾಳೇಗಾರನೊಬ್ಬ ‘ನಿನ್ನ ಪರಮಪ್ರಸಾದದಲ್ಲಿರುವ ದೇವರನ್ನು ನನ್ನ ಕತ್ತೆ ಗುರುತಿಸಿದರೆ ನಾನು ನಂಬುತ್ತೇನೆ’ ಎಂದು ಪಂದ್ಯ ಕಟ್ಟಿದ. ಅವನ ಮನ ಪರಿವರ್ತನೆಗಾಗಿ ಮೂರುದಿನ ಎಡಬಿಡದೆ ದೇವರಲ್ಲಿ ಪ್ರಾರ್ಥಿಸಿದ ಅಂತೋಣಿಯವರು ಮೂರನೇ ದಿನ ಪ್ರಭಾವಳಿಯಲ್ಲಿರಿಸಿದ ಪರಮಪ್ರಸಾದವನ್ನು ಭಯಭಕ್ತಿಯಿಂದ ಎತ್ತಿಹಿಡಿದು ಕತ್ತೆಯ ಕಡೆ ಗಾಂಭೀರ್ಯದಿಂದ ನಡೆದು ಬಂದರು. ಪಾಳೇಗಾರನು ಆ ಕತ್ತೆಗೆ ಮೂರು ದಿನದಿಂದ ಊಟವನ್ನೇ ಹಾಕಿರಲಿಲ್ಲ. ಇದೀಗ ಕತ್ತೆಯ ಮುಂದೆ ಹುಲ್ಲುಕಂತೆ ಹಿಡಿದ ಅವನು, ಜೊತೆಗೆ ಪರಮಪ್ರಸಾದ ಹಿಡಿದ ಅಂತೋಣಿಯವರು ನಿಂತಿದ್ದರು. ಎಲ್ಲರೂ ನೋಡನೋಡುತ್ತಿದ್ದಂತೆ ಆ ಕತ್ತೆ ಹುಲ್ಲನ್ನು ತಿರಸ್ಕರಿಸಿ ಪರಮಪ್ರಸಾದವನ್ನು ನೋಡುತ್ತಾ ಭಕ್ತಿಯಿಂದ ಮೊಣಕಾಲೂರಿತು. ಪರಮಪ್ರಸಾದದ ಪಾರಮ್ಯದ ಬಗ್ಗೆ ಇದಕ್ಕಿಂತ ಉತ್ತಮ ಉದಾಹರಣೆ ಇರಲಾರದು.

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...