Thursday, 13 February 2020

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು (ಲೇಖನ-10)



ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

---------------------------
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಉತ್ತಂಗಿಯವರ ಅವಿರತ ಶ್ರಮದಿಂದ ಸರ್ವಜ್ಞನ ಸುವಿಚಾರಗಳು ಹಳ್ಳಿಯ ಮುಗ್ಧರಿಂದಿಡಿದು ಪಟ್ಟಣದ ಪಂಡಿತರವರೆಗೂ ಹರಡಿದವು ಎಂಬುದನ್ನು ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅವರ ಬರವಣಿಗೆಯ ಸೇವೆಯ ಅಮೋಘತೆಯನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
-----------------------------

ಅ. ಉತ್ತಂಗಿ ಚನ್ನಪ್ಪನವರ ಕೊಡುಗೆಗಳ ಮಹತ್ವ:
ಕ್ರೈಸ್ತ ಧರ್ಮದ ಕೃತಿಗಳು : ಉತ್ತಂಗಿ ಚನ್ನಪ್ಪನವರ ಮೊದಲ ಕೃತಿ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ ಇದು ಕ್ರಿಸ್ತಶಕ1921ರಲ್ಲಿ ಧಾರವಾಡದ ಕರ್ನಾಟಕ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮುದ್ರಣಗೊಂಡು ಪ್ರಕಟವಾಗಿದೆ. ಕ್ರಿಸ್ತಶಕ 1918, ಡಿಸೆಂಬರ್ 24ರಂದು ಕ್ರಿಸ್‍ಮಸ್ ಹಬ್ಬದಂದು ರಾಣಿಬೆನ್ನೂರಿನ ಹರಿಜನ ಕೇರಿಯಲ್ಲಿ ನೆರೆದ ವಿದ್ಯಾವಂತ ಸಭಿಕರೆದುರು ಕ್ರಿಸ್ತನ ಸಂದೇಶವನ್ನು ಕುರಿತು ಮಾಡಿದ ಭಾಷಣದ ವಸ್ತುವೇ ಪುಸ್ತಕ ರೂಪದ ಈ ಕೃತಿ. ಪ್ರಪಂಚದ ಸಮಸ್ತ ಸಮುದ್ರಗಳಲ್ಲಿ ‘ಭೂಮಧ್ಯ ಸಮುದ್ರ’ವೆಂದು ಹೆಸರಾಂತ ಮಧ್ಯ ಸಮುದ್ರದ ಸಮೀಪದಲ್ಲಿ ‘ಪಾಲೆಸ್ತೀನ’ ಎಂಬುದೊಂದು ದೇಶವುಂಟು. ‘ಬೆತ್ಲೆಹೇಮ್’ ಎಂಬುದು ‘ಪಾಲೆಸ್ತೀನ’ ದೇಶದೊಳಗಿನದೊಂದು ಕುಗ್ರಾಮವಾಗಿದೆ. ಯೇಸುಕ್ರಿಸ್ತನು ಈ ಬೆತ್ಲೆಹೇಮ್ ಗ್ರಾಮದಲ್ಲಿಯೇ ಹುಟ್ಟಿದನು. ‘ಬನಾರಸ’ (ಕಾಶಿ) ಹಿಂದೂ ಧರ್ಮದವರಿಗೆ ಪುಣ್ಯಕ್ಷೇತ್ರ, ಭೂಕೈಲಾಸವೆನಿಸಿದೆ. ಭೂಮಂಡಲದ ತತ್ವಜ್ಞರೆಲ್ಲ ತಲೆದೂಗಿ ‘ಸೈ! ಸೈ’! ಎಂದು ಜಯ ಜಯಕಾರ ಮಾಡುತ್ತಿರುವ, ಶ್ರೇಷ್ಠತರದ ತತ್ವ ವಿಚಾರದ ತವರೂರಾಗಿದೆ. ಹೀಗೆ ‘ಬೆತ್ಲೆಹೇಮ’ ಮತ್ತು ‘ಬನಾರಸ’ ಈ ಉಭಯ ಕ್ಷೇತ್ರಗಳು ಜಗತ್ತಿನ ಎರಡು ಶ್ರೇಷ್ಠ ಧರ್ಮಗಳ ಕ್ಷೇತ್ರ ಸ್ಥಾನಗಳಾಗಿವೆ. ಬೆತ್ಲಹೇಮ ಬನಾರಸದ ಯೋಗ್ಯತೆಯನ್ನು ಗುರುತಿಸಿದೆ. ಬನಾರಸವು ಬೆತ್ಲಹೇಮನ್ನು ಅರಿತುಕೊಳ್ಳಬೇಕೆಂಬುದೇ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ಯಾಗಿದೆ. ಕ್ರೈಸ್ತ ಧರ್ಮದ ಸಂಸ್ಥಾಪಕನಾದ ಯೇಸುಕ್ರಿಸ್ತನೆಂದರೆ ಯಾರು? ಆತನ ಯೋಗ್ಯತೆಯೇನು? ಎಂಬುದನ್ನು ನಿರ್ಣಯಿಸುವುದೇ ಮುಖ್ಯ ವಿಷಯವಾಗಿದೆ ಎಂದು ಉತ್ತಂಗಿಯವರು ತಮ್ಮ ಕೃತಿಯ ಪ್ರಾರಂಭದಲ್ಲಿ ಹೇಳಿರುವರು. 
‘ಮೃತ್ಯುಂಜಯ’ ಇದು ಉತ್ತಂಗಿಯವರ ಎರಡನೇ ಕೃತಿ. ಕ್ರಿಸ್ತಶಕ 1921ರಲ್ಲಿ ಅವರ ಮೊದಲ ಕೃತಿ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ ಪ್ರಕಟವಾದರೆ, ಸುಮಾರು 40 ವರ್ಷಗಳ ನಂತರ ಮೃತ್ಯುಂಜಯ ಎಂಬ ಹೆಸರಿನಿಂದ ಕ್ರಿಸ್ತಶಕ 1963ರಲ್ಲಿ ಈ ಕೃತಿ ಪ್ರಕಟವಾಯಿತು. ಈ ಕೃತಿ ಯೇಸುಕ್ರಿಸ್ತನ ಜೀವನದ ಕೊನೆಯ ಭಾಗದ ಚರಿತ್ರೆಯನ್ನು ವಿವರಿಸುತ್ತದೆ. ಅಂದರೆ ಯೇಸುಕ್ರಿಸ್ತನು ಹುರುಳಿಲ್ಲದ ರಾಜಕೀಯ ಹಾಗೂ ಧಾರ್ಮಿಕ ಆರೋಪಗಳಿಗೆ ಗುರಿಯಾಗಿ ಶಿಲುಬೆಯಲ್ಲಿ ಚಿತ್ರಹಿಂಸೆಯಿಂದ ಮರಣವನ್ನಪ್ಪಿದರೂ ದಿವ್ಯ ಶರೀರಧಾರೆಯಾಗಿ ಶಿಷ್ಯರೊಂದಿಗೆ 40 ದಿವಸಗಳವರೆಗೂ ವ್ಯವಹರಿಸಿದ ವಿಷಯವನ್ನು ಈ ಗ್ರಂಥದಲ್ಲಿ ವಿವರಿಸಿ ಹೇಳಲಾಗಿದೆ. ಅಂದರೆ ಯೇಸುಕ್ರಿಸ್ತನು ಅನುಭವಿಸಿದ ಪಾಡು-ಮರಣ ಮತ್ತು ಪುನರುತ್ಥಾನದ ವಿಷಯಗಳು ಹೃದಯಂಗವಾಗಿಯೂ ತರ್ಕಬದ್ಧವಾಗಿಯೂ ಇದರಲ್ಲಿ ಹೇಳಲ್ಪಟ್ಟಿವೆ. ಯೇಸುಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮಾಡಿದ ಕೊನೆಯ ಭೋಜನದ (ಐಚಿsಣ Suಠಿಠಿeಡಿ) ಬಗೆಗೆ ವಿವರಿಸಿ ಹೇಳಿದ ಭಾಗವಂತೂ ಕರುಣಾರಸಪೂರಿತ ಕಾದಂಬರಿಯನ್ನೋದಿದಂತೆ ಭಾಸವಾಗುತ್ತದೆ. ಮಹಾನ್ ವ್ಯಕ್ತಿ ಯೇಸುಕ್ರಿಸ್ತ ತನ್ನ ಶಿಷ್ಯರ ಪಾದವನ್ನು ತೊಳೆದ ಸೇವೆಯ ಮಹತ್ವದ ಪ್ರಸಂಗದ ವರ್ಣನೆಯನ್ನು ಓದುತ್ತಿದ್ದಂತೆ ಹೃದಯ ಹಿಂಡಿದಂತಾಗಿ ಕಣ್ಣು ತೇವವಾಗುತ್ತದೆ.
ಸ್ವತಃ ವಿಶಾಲ ಹೃದಯದವರಾದ ಪೂಜ್ಯ ಉತ್ತಂಗಿಯವರು ಕ್ರಿಸ್ತನ ಅದ್ಭುತ ಜೀವನದ ಬಗೆಗೆ ಈ ಚಿಕ್ಕ ಹೊತ್ತಿಗೆಯಲ್ಲಿ ಮಾಡಿದ ಸೌಜನ್ಯಯುತವಾದ ವಿಮರ್ಶೆಯನ್ನೋದಿದವರಿಗೆ ಕ್ರಿಸ್ತನ ಬಗೆಗೆ ಗೌರವಾದಾರಗಳು ಸುರಿಸುವವು. ಅಲ್ಲದೆ ಅವನ ಬಗೆಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಲವಲವಿಕೆಯುಂಟಾಗುತ್ತದೆ. ಈ ದೃಷ್ಟಿಯಿಂದ ಪೂಜ್ಯ ಚನ್ನಪ್ಪನವರು ಕ್ರಿಸ್ತನಿಗೆ, ಕ್ರೈಸ್ತ ಧರ್ಮಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಸಂಕುಚಿತ ಮನೋವೃತ್ತಿಗೆ ಬಲಿಬೀಳದೆ, ಕನ್ನಡಿಗರು ಈ ಚಿಕ್ಕ ಹೊತ್ತಿಗೆಯ ಉಪಯೋಗ ಮಾಡಿಕೊಳ್ಳುವರೆಂದು ಹಾರೈಸುವೆ ಎಂದಿದ್ದಾರೆ. ‘ಮೃತ್ಯುಂಜಯ’ ಗ್ರಂಥದಲ್ಲಿ ಪ್ರಕಟಪಡಿಸಿದ ಬೈಬಲ್ ಗ್ರಂಥದ ಬಗೆಗಿನ ಅವರ ಜ್ಞಾನ ಬೆರಗುಗೊಳಿಸುವಂತಹದ್ದಾಗಿದೆ. ಬೈಬಲ್ ಗ್ರಂಥವನ್ನು ಅತ್ಯಂತ ಸೂಕ್ಷ್ಮದೃಷ್ಟಿಯಿಂದ ವೀಕ್ಷಿಸಿ ಅಲ್ಲಿ ಸೂತ್ರರೂಪದಲ್ಲಿ ನಿರೂಪಿಸಲ್ಪಟ್ಟ ಕ್ರಿಸ್ತನ ಚರಿತ್ರೆಯನ್ನು ಸ್ಪಷ್ಟವಾಗಿ ತೋರುವಂತೆ ಈ ಗ್ರಂಥದಲ್ಲಿ ಚಿತ್ರಿಸಿರುವರು. ಇಲ್ಲಿ ಕ್ರಿಸ್ತನು ಉತ್ತಂಗಿಯವರ ಹಸ್ತದಿಂದ ರೇಖಾಚಿತ್ರದಲ್ಲಿ ಬರೆಯಲ್ಪಟ್ಟಿಲ್ಲ-ವರ್ಣಚಿತ್ರದಲ್ಲಿ ತೋರಿಸಲ್ಪಟ್ಟಿದ್ದಾನೆ. ನಾನು ಪೌರಾತ್ಯನಂತೆ ಯೇಸುಕ್ರಿಸ್ತನನ್ನು ಆರಾಧಿಸಬೇಕಾದರೆ ನನಗೆ ಇರುವುದೊಂದೇ ಮಾರ್ಗ: ಅದೇ ಅವನನ್ನು ದೇವರಂತೆ ಮಾತ್ರ ಪೂಜಿಸಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ, ಆ ದೇವಪುರುಷನಾದ ಯೇಸುಕ್ರಿಸ್ತನ ಬಗೆಗೆ ಉತ್ತಂಗಿಯವರು ಮನಮುಟ್ಟುವಂತೆ ವರ್ಣಿಸಿರುವರು. ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ ಗ್ರಂಥದಲ್ಲಿ ವರ್ಣಿತನಾದ ಯೇಸುಕ್ರಿಸ್ತನ ಬಗೆಗೆ ಶ್ರೀ ಹುರಳಿಯವರು ತಳೆದ ಅಭಿಪ್ರಾಯವು ಉತ್ತಂಗಿಯವರ ಅದೇ ವ್ಯಕ್ತಿಯನ್ನು ಕುರಿತ ದ್ವಿತೀಯ ಗ್ರಂಥ ‘ಮೃತ್ಯುಂಜಯ’ದ ಬಗೆಗೂ ಒಪ್ಪವಾಗಿ ತೋರುತ್ತದೆ. ಕನ್ನಡದಲ್ಲಿ ಕ್ರೈಸ್ತಧರ್ಮದ ಮೇಲೆ ಸಾಕಷ್ಟು ಗ್ರಂಥಗಳು ಬಂದಿವೆ. ಆದರೆ ಅವುಗಳಲ್ಲಿ ಯೇಸುಕ್ರಿಸ್ತನ ಜೀವನ ಚರಿತ್ರೆಯನ್ನು ಕುರಿತಾದ ಗ್ರಂಥಗಳ ಸಂಖ್ಯೆ ಬಹಳ ಕಡಿಮೆ. ಆ ದೃಷ್ಟಿಯಿಂದ ಪರಿಶೀಲಿಸಿದರೆ ಉತ್ತಂಗಿಯವರ ಈ ಎರಡು ಕೃತಿಗಳು ಯೇಸುಕ್ರಿಸ್ತನ ಜೀವನವನ್ನು ಅರಿತುಕೊಳ್ಳುವಲ್ಲಿ ಬಹು ಉಪಯುಕ್ತವಾಗಿವೆ. ಕನ್ನಡ ಸಾಹಿತ್ಯದಲ್ಲಿ ಸ್ಥಿರವಾಗಿ ನಿಲ್ಲಬಲ್ಲವುಗಳಾಗಿವೆ. ಹೀಗೆ ಈ ಎರಡು ಕೃತಿಗಳು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದವು.
ಕನ್ನಡ ಸಾಹಿತ್ಯ-ಸಂಸ್ಕøತಿಯ ಕೃತಿಗಳು : 
‘ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ’ ಕೃತಿಯಲ್ಲಿ ಜಗತ್ತಿನ ಇತಿಹಾಸದಲ್ಲಿ ಮಾನವರು ನಡೆಸಿದ ಯುದ್ಧದ ವಿಷಯವಿದ್ದರೆ, ‘ಬಸವೇಶ್ವರನೂ ಅಸ್ಪøಶ್ಯರ ಉದ್ಧಾರವೂ’ ಕೃತಿಯಲ್ಲಿ ನಮ್ಮ ದೇಶ ಹಾಗೂ ಸಮಾಜವನ್ನು ಭಿನ್ನ ವಿಭಿನ್ನಗೊಳಿಸಿರುವ ಜಾತಿ ಪದ್ಧತಿಯ ಧಾರುಣ ಕಥೆಯಿದೆ. ‘ಅನುಭವ ಮಂಟಪ’ ಕೃತಿಯಲ್ಲಿ ಅದರ ಐತಿಹಾಸಿಕತೆಯನ್ನು ಸಿದ್ಧಮಾಡಿ ತೋರಿಸಿದ್ದಾರೆ. ಡಿ.ಎಲ್. ನರಸಿಂಹಾಚಾರ್ ಅವರು ಸಿದ್ಧರಾಮನ ವೀರಶೈವತ್ವದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದಾಗ, ಸಿದ್ಧರಾಮ ಸಾಹಿತ್ಯ ಸಂಗ್ರಹ ಕೃತಿಯನ್ನು ಬರೆದು ಆತನ ವೀರಶೈವತ್ವವನ್ನು ಪ್ರತಿಷ್ಠಾಪಿಸಿದ್ದಾರೆ. ‘ಮೋಳಿಗೆಯಮಾರಯ್ಯ’ ಮತ್ತು ‘ರಾಣಿ ಮಹಾದೇವಿಯವರ ವಚನಗಳು’ ಕೃತಿಗಳಲ್ಲಿ ವಚನ ಸಾಹಿತ್ಯ ಸಂಗ್ರಹದ ಶುದ್ಧೀಕರಣ ಮತ್ತು ಸಂಶೋಧನ ಕಾರ್ಯ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ. ‘ಆದಯನ ವಚನಗಳು’ ಕೂಡ ಇದಕ್ಕೆ ಸಾಕ್ಷಿಯಾಗಿದೆ. 
ಉತ್ತಂಗಿಯವರ ಹೆಸರು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿರುವುದು ಅವರ ಸರ್ವಜ್ಞನ ವಚನಗಳಿಂದ. ಸರ್ವಜ್ಞನ ಸಾಕ್ಷಾತ್ಕಾರಕ್ಕಾಗಿ ಅವರು ಪಟ್ಟ ಪಾಡು, ಪರಿಶ್ರಮ ಅಷ್ಟಿಷ್ಟಲ್ಲ. ತಮ್ಮ ಜೀವನವನ್ನು ಸರ್ವಜ್ಞನ ವಚನಗಳ ಸಂಗ್ರಹ ಕಾರ್ಯಕ್ಕಾಗಿ ಮುಡಿಪಿಟ್ಟು ಸರ್ವಜ್ಞ ಮೂರ್ತಿಯ ಸೇವೆ ಮಾಡಿದರು. ಉತ್ತಂಗಿಯವರ ಸತಿಪತಿ ಭಾವದ ಭಕ್ತಿಗೆ ಸರ್ವಜ್ಞನು ಪ್ರತ್ಯಕ್ಷನಾದನು. ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಕಲ್ಪವೃಕ್ಷವಾಗಿ ಕಾಣಿಸಿಕೊಂಡನು. ಕನ್ನಡದ ಕ್ರಾಂತಿ ಪುರುಷನೆಂಬ ಹೆಗ್ಗಳಿಕೆಗೆ ಪಾತ್ರನಾದ, ದೀನರ, ದಲಿತರ, ಬಿದ್ದವರ, ಅಸ್ಪøಶ್ಯರ ಕಹಳೆಯ ಧ್ವನಿಯಾಗಿ ಮೂಡಿ ಬಂದ ಸರ್ವಜ್ಞನನ್ನು ಕನ್ನಡ ಜಾನಪದದ ಆದಿ ಮಹಾಕವಿ ಎಂಬ ಪಟ್ಟಕ್ಕೇರಿಸಿದ ಕೀರ್ತಿ ಉತ್ತಂಗಿಯವರಿಗೆ ಸಲ್ಲುತ್ತದೆ. ಉತ್ತಂಗಿಯವರು ಸರ್ವಜ್ಞನಿಗೆ ಮರುಹುಟ್ಟು ಕೊಡದಿದ್ದರೆ, ಸರ್ವಜ್ಞ ಅಜ್ಞಾತನಾಗಿಯೇ ಉಳಿಯುತ್ತಿದ್ದನೇನೋ! ಆದ್ದರಿಂದಲೇ ಉತ್ತಂಗಿ ಹಾಗೂ ಸರ್ವಜ್ಞ ಒಂದೇ ಎಂಬ ಭಾವವನ್ನು ತಳೆದು ಉತ್ತಂಗಿಯವರಿಗೆ, ‘ಸರ್ವಜ್ಞ ಸಾಹಿತ್ಯ’, ‘ಅಭಿನವ ಸರ್ವಜ್ಞ’ ಎಂಬ ಅಭಿದಾನಗಳನ್ನು ನೀಡಿದೆ ಜನತೆ.
ಆ. ಉತ್ತಂಗಿ ಚನ್ನಪ್ಪರವರಿಗೆ ಬಯಸದೇ ಬಂದ ಭಾಗ್ಯ :
ಸದ್ದುಗದ್ಧಲವಿಲ್ಲದೆ ಉಪಯುಕ್ತವಾದ ಕೆಲಸ ಮಾಡುವುದು ಉತ್ತಂಗಿಯವರ ಹುಟ್ಟು ಗುಣ. ಅವರ ಮನಸ್ಸು ಅಂತರಮುಖಿಯಾದ ಒಂದು ಕಾಲಕ್ಕೆ, ಆತ್ಮಜ್ಞಾನ ಮಾಡಿಕೊಂಡು ಸದ್ದಿಲ್ಲದೆ ಒಂದು ದಿನ ಇಹಲೋಕವನ್ನು ತ್ಯಜಿಸಿಬಿಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು. ಹೀಗಾಗಿ ಸಮಾಜದಲ್ಲಿ ಯಾವತ್ತು ಉನ್ನತ ಪದವಿ ಅಥವಾ ಪುರಸ್ಕಾರಗಳಿಗಾಗಿ ಹಂಬಲಿಸಿದವರಲ್ಲ. ಭಾರತೀಯ ಕ್ರೈಸ್ತರನ್ನು ವಿದೇಶಿ ಮಿಶನರಿಗಳ ದಾಸ್ಯತ್ವದಿಂದ ಬಿಡಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಡಿಸುವುದಕ್ಕಾಗಿ ಹೋರಾಡುವ ಸಮಯದಲ್ಲಿ ಅನೇಕರು ಉತ್ತಂಗಿಯವರನ್ನು ಸ್ವಾರ್ಥಿಗಳೆಂದು ಮೂದಲಿಸಿದರು. ಅಲ್ಲದೆ ‘ರೆವರೆಂಡ್’ ಪದವಿ ಸಿಕ್ಕಿದಾಗ ಚನ್ನಪ್ಪನವರು ಅದನ್ನು ತೃಣ ಸಮಾನವೆಂದು ತಿರಸ್ಕರಿಸಿದರು. ಕರ್ತವ್ಯಪರರಾದ ಉತ್ತಂಗಿಯವರು ಯಾವುದೇ ತರದ ಗೌರವ, ಪ್ರತಿಷ್ಠೆಗಳಿಗಾಗಿ ಹಾತೊರೆದವರಲ್ಲ, ಕೀರ್ತಿಗಾಗಿ ಪರದಾಡಿದವರಲ್ಲ ಬದಲಿಗೆ ತಮ್ಮ ಕಾಯಕದಲ್ಲೇ ಕೈಲಾಸ ಸುಖವನ್ನು ಕಾಣಲೆತ್ನಿಸಿದವರು. ಸ್ವಲ್ಪ ತಡವಾದರೂ ಅವರು ಮಾಡಿದ ಸಾಹಿತ್ಯ ಸೇವೆ ಸಕಲ ಕನ್ನಡಿಗರ ಕಣ್ಣಿಗೆ ಒಡೆದು ತೋರುವಂತಾಯಿತು ಮತ್ತು ಅವರ ಪ್ರಶಂಸೆಗೂ ಕಾರಣವಾಯಿತು. ಅಂದಿನ ಜನತೆ ಉತ್ತಂಗಿಯವರನ್ನು ಹಾಡಿ ಹರಸುತ್ತಿದ್ದರು, ಕೀರ್ತಿ, ಗೌರವಗಳು ಅವರನ್ನು ಹಿಂಬಾಲಿಸಿದವು.
ಉತ್ತಂಗಿಯವರಿಗೆ 60 ವರ್ಷಗಳು ತುಂಬಿದಾಗ ತಮ್ಮ ಧರ್ಮೋಪದೇಶ ಹುದ್ಧೆಯಿಂದ ನಿವೃತ್ತರಾದಾಗ ಹುಬ್ಬಳ್ಳಿಯ ಪುರಜನರು ದಿನಾಂಕ 5.4.1942ರಂದು ರವಿವಾರ ಮುಂಬಾಯಿ ಸರಕಾರದ ಮಾಜಿ ಶಿಕ್ಷಣ ಮಂತ್ರಿಗಳಾದ ದಿವಾನ ಬಹದ್ದೂರ, ಸರ್. ಸಿದ್ಧಪ್ಪಕಂಬಳಿ ಇವರ ಅಧ್ಯಕ್ಷತೆಯಲ್ಲಿ ಉತ್ತಂಗಿಯವರ ಷಷ್ಠಿಪೂರ್ತಿಯ ಸಮಾರಂಭವನ್ನು ಏರ್ಪಾಡಿಸಿ, ಉತ್ತಂಗಿಯವರನ್ನು ಸನ್ಮಾನಿಸಲಾಯಿತು, ಸಮಾರಂಭದಲ್ಲಿ ಉತ್ತಂಗಿಯವರ ವಿವಿಧ ವ್ಯಕ್ತಿತ್ವಗಳನ್ನು ಕುರಿತು ಏಳು ಜನ ವಿದ್ವಾಂಸರು ಮಾತನಾಡಿ ಉತ್ತಂಗಿಯವರ ಅಭ್ಯಾಸಕ್ರಮ ಹಾಗೂ ಸಾಹಿತ್ಯ ಸೇವೆಗಳನ್ನು ಮುಕ್ತಕಂಠದಿಂದ ಹೊಗಳಿದರು. ಶ್ರೀಉತ್ತಂಗಿಯವರ ಸಾಹಿತ್ಯಸೇವೆ ಚಿರಸ್ಮರಣೀಯವಾದುದು, ಅವರು ಅನುಭವಿಸಿದ ಕಷ್ಟ, ಮಾಡಿದ ತ್ಯಾಗ ಮುಂತಾದವುಗಳನ್ನು ಯಾವ ಕನ್ನಡಿಗನೂ ಮರೆಯಲಾರ, ಎಂಬುದಾಗಿ ಶ್ರೀ ಮುದವೀಡು ಕೃಷ್ಣರಾಯರ ಗುಣಗಾನವಾದರೆ, ಉತ್ತಂಗಿಯವರ ಸರ್ವಜ್ಞನು ಸ್ವತಂತ್ರನಾದ ದೊಡ್ಡಕವಿ, ನಿರ್ಭೀತನು, ಅಂಥವನ ಕಾರ್ಯವನ್ನು ಕನ್ನಡಿಗರಿಗೆ ಉಣಬಡಿಸಿ, ಪಂಡಿತರು ತಲೆದೂಗುವಂತೆ ವ್ಯವಸ್ಥೆ ಮಾಡಿದ್ದಾರೆ ಶ್ರೀ ಉತ್ತಂಗಿಯವರು. ಇವರು 60 ವರ್ಷ ಬದುಕಿರುವುದೇ ಹೆಚ್ಚು, ಯಾಕೆಂದರೆ ಅವರ ಜೀವನದಲ್ಲಿ ಅವರು ಸಹಿಸಿದ ಕಷ್ಟನಷ್ಟಗಳು ಬಹಳಷ್ಟಿವೆ. ಎಂದು ಉತ್ತಂಗಿಯವರ ಸ್ವಚ್ಛಂದ ವ್ಯಕ್ತಿತ್ವವನ್ನು ಶ್ರೀ ಬೇಂದ್ರೆಯವರು ಬಣ್ಣಿಸಿರುವುದನ್ನು ನಾವು ಗಮನಿಸಬಹುದು.
ಹೀಗೆ ಸಮಾರಂಭದಲ್ಲಿ ಘನವಿದ್ವಾಂಸರಿಂದ ಪ್ರಶಂಸಿಸಲ್ಪಟ್ಟು ಗೌರವಸ್ವೀಕೃತರಾದ ಉತ್ತಂಗಿಯವರು ಕೃತಜ್ಞತೆಗಳನ್ನು ಅರ್ಪಿಸುತಾ ಹೇಳಿದ ಮಾತುಗಳು ಅವರ ವಿನಯಭಾವವನ್ನು ಎತ್ತಿ ತೋರಿಸುತ್ತವೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇದು ಅನುಪಮ ಮತ್ತು ಚಿರಸ್ಮರಣೀಯ ದಿನ. ಕ್ರಿಶ್ಚಿಯನ್ನರಲ್ಲಿ ಅನೇಕರು ಸಾಹಿತ್ಯ ಸೇವೆ ಮಾಡಿದ್ದುಂಟು ಆದರೆ ಅವರಿಗೆ ಬೇಕಾದ ಪ್ರೋತ್ಸಾಹ ಈ ಮೊದಲು ದೊರಕಿಲ್ಲ. ಈ ತರಹದ ಸಂಭಾವನೆ ದೊರತದ್ದು ಇದೇ ಮೊದಲು. ನನಗೆ ಕಂಠ ನೋವು ಇರುವುದರಿಂದ ನಾನು ಹೇಳುವುದನ್ನು ಸ್ವಲ್ಪದರಲ್ಲಿ ಹೇಳುತ್ತೇನೆ, ಸುದೈವವಶಾತ್ ಇಂದು ಯೇಸುಕ್ರಿಸ್ತನು ಉತ್ಥಾನವಾದ ದಿನ. ಕೊನೆಯ ರಾತ್ರಿ ಭೋಜನ ಸಮಾರಂಭದ ಕಾಲದಲ್ಲಿ ವಾಡಿಕೆಯಂತೆ ಪಾದಪೂಜೆ ಮಾಡಲು ಕರೆದಾಗ ಯೇಸುವಿನ ಶಿಷ್ಯರಾರೂ ಒಪ್ಪಲಿಲ್ಲ. ಆ ಸಂದರ್ಭ ಸ್ವತಃ ಯೇಸುಕ್ರಿಸ್ತನೇ ಶಿಷ್ಯರ ಪಾದಪೂಜೆ ಮಾಡಿ, ಶಿಷ್ಯರಿಗೆ ಉಪದೇಶ ಮಾಡಿದನು. ನಾನಾದರೂ ಒಬ್ಬ ಕ್ರೈಸ್ತ, ಕನ್ನಡ ಭಾಷಾವನಿತೆಯ ಪಾದಸೇವೆ ಮಾಡುವವರಲ್ಲೊಬ್ಬ. ಸರ್ವಜ್ಞನು ಸ್ವತಂತ್ರ ಕವಿ. ಅವನ ವಿಚಾರ ಸ್ವಾತಂತ್ರ್ಯವು ಅನುಪಮವಾದುದು. ಆ ಕವಿಯ ನೇರವಾದ, ಸ್ವಲ್ಪದರಲ್ಲಿಯೇ ಎಲ್ಲವನ್ನೂ ವಿವರಿಸುವಂತಹ ಅಗಾಧ ಪ್ರತಿಭೆ ಹಾಗೂ ಸ್ಪಷ್ಟೋಕ್ತಿಗೆ ನಾನು ಮರುಳಾದೆ. ಅವನಿಗಿಂತ ಹೆಚ್ಚಿನ ಕವಿ ನನಗೆ ದೊರಕಲಿಲ್ಲ. ಎಲ್ಲಾ ಕವಿಗಳು ಒಂದು ಗುಂಪು, ಸರ್ವಜ್ಞನೊಬ್ಬನೇ ಒಂದು. ಅವನ ಸಮಾನರು ಇನ್ನೊಬ್ಬರಿಲ್ಲ. ಎಂಬುದಾಗಿ ಸರ್ವಜ್ಞನ ವ್ಯಕ್ತಿತ್ವವನ್ನು ಗುಣಗಾನ ಮಾಡಿದ್ದಾರೆ. ಉತ್ತಂಗಿಯವರಿಗೆ ಕನ್ನಡದ ಜನತೆ ಅಪಾರ ಗೌರವವನ್ನು ಸಲ್ಲಿಸಿದೆ. ಅವರ ಅದ್ಭುತ ಕನ್ನಡ ಸೇವೆಯನ್ನು ಗುರುತಿಸಿ ಕೊಂಚ ತಡವಾದರೂ ಕ್ರಿಸ್ತಶಕ 1949ರಲ್ಲಿ ನಡೆದ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಕನ್ನಡ ನಾಡು ತನ್ನನ್ನೇ ತಾನು ಗೌರವಿಸಿಕೊಂಡಿತು. 
ಈ ಮಹಾಸಮ್ಮೇಳನದಲ್ಲಿಯೇ ಉತ್ತಂಗಿಯವರು ಬಹಳ ವಿನಮ್ರದಿಂದ, ‘ತಿರುಳ್‍ಗನ್ನಡ ತಿರುಕ’ ಎಂದು ತಮ್ಮನ್ನು ತಾವು ಕರೆದುಕೊಂಡದ್ದು ಅವರ ವಿನಯಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಅವರೇ ಹೀಗೆ ಹೇಳುತ್ತಾ ನಾನು ಮಾಡಿದ ಸೇವೆಯೆಂದರೆ ಸರ್ವಾಂಗ ಸುಂದರಿಯಾದ ಕನ್ನಡ ಸರಸ್ವತಿಯ ಹಾವುಗೆಯ ಮುರಿದ ಉಂಗುಷ್ಠವನ್ನು ಹೊಲಿದಿದ್ದು, ಏನೇ ಆದರೂ ನಾನು ಒಬ್ಬ ತಿರುಕ, ನೀವು ನನ್ನನ್ನು ಹೊಗಳಿ ವ್ಯಕ್ತಪಡಿಸಿದ ಸಮಾರಂಭ ಈ ತಿರುಕನನ್ನು ಸ್ವಪ್ನ ಲೋಕಕ್ಕೆ ಒಯ್ದಿದೆ. ಇದೂ ಕೂಡ ತಿರುಕನ ಕನಸಿನಂತೆಯೇ ಇದೆ ಎನ್ನುತ ಭಾವುಕರಾದ ಉತ್ತಂಗಿಯವರು ತಮ್ಮ ಕೊನೆಯ ಉಸಿರಿನವರೆಗೆ ಕನ್ನಡದ ಏಳ್ಗೆಗಾಗಿ ದೇಹ ಸವೆಯಿಸಿದ ಹಿರಿಯರು. ಇವರ ವ್ಯಕ್ತಿತ್ವ ಬಹುರೂಪಕ ಯಂತ್ರವಿದ್ದಂತೆ, ವೈವಿಧ್ಯಮಯವಾದುದು. ಇವರ ವಿನಯಕ್ಕೆ ಒಳಗಾದವರಿಲ್ಲ. ವಿದ್ವತ್ತಿಗೆ ಮಣಿಯದವರಿಲ್ಲ. ಸರಳ ಸಜ್ಜನಿಕೆಗೆ ಅವರನ್ನು ಮೀರಿದವರಿಲ್ಲ ಮತ್ತು ಅವರ ಸೇವೆಯನ್ನು ಸ್ಮರಿಸಿ ಮರೆಯುವಂತಿಲ್ಲ ಹೀಗೆ ಕನ್ನಡ ತಾಯಿಯ ಕುವರತೆಗೆ ಪಾತ್ರರಾದವರು ಉತ್ತಂಗಿ ಚನ್ನಪ್ಪನವರು. ಇವರು 28.08.1962ರಲ್ಲಿ ದೈವಾಧೀನರಾದರು.
-0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...