Thursday, 13 February 2020

ಸೃಷ್ಟಿಯ ಕತೆ (ಭಾಗ 6)

ಜಗತ್ತು, ಆರು ದಿನಗಳ ಸೃಷ್ಟಿ 
- ಎಫ್ ಎಂ ಎನ್
---------------------------------
ಯೆಹೂದಿಗಳ ಪವಿತ್ರಗ್ರಂಥ ಮತ್ತು ಕ್ರೈಸ್ತರ ಶ್ರೀಗ್ರಂಥ ಪವಿತ್ರ ಬೈಬಲ್ಲಿನಲ್ಲಿನ ಸೃಷ್ಟಿಯ ಕತೆ.
------------------------

ಆದಿಯಲ್ಲಿ ದೇವರು ಯಹೋವ (ಎಲೊಹಿಂ), ಸ್ವರ್ಗ(ಪರಲೋಕ)ವನ್ನು ಮತ್ತು ಭೂಮಿ(ಭೂಲೋಕ)ಯನ್ನು ಸೃಷ್ಟಿಸಿದರು. ಭೂಮಿಯು ನಿರಾಕಾರಿಯಾಗಿಯೂ ಬರಿದಾಗಿಯೂಇತ್ತು. ಆದಿ ಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು. ಆಗ ದೇವರು, `ಬೆಳಕಾಗಲಿ’ ಎನ್ನಲು ಬೆಳಕಾಯಿತು. ದೇವರಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನು ಕತ್ತಲೆಯನ್ನು ಬೇರೆ ಬೇರೆ ಮಾಡಿ, ಬೆಳಕಿಗೆ ಹಗಲೆಂದು ಕತ್ತಲೆಗೆ ಇರುಳೆಂದು ಹೆಸರಿಸಿದರು. ಹೀಗೆ ಬೈಗೂ ಬೆಳಗೂ ಆಗಿ ಮೊದಲನೇ ದಿನವಾಯಿತು.
 ಆ ಬಳಿಕ ದೇವರು, `ಜಲರಾಶಿಯ ನಡುವೆ ಒಂದು ಗುಮ್ಮಟವು ಉಂಟಾಗಲಿ. ಅದು ಕೆಳಗಿನ ನೀರನ್ನು ಮೇಲಿನ ನೀರನ್ನು ಬೇರೆ ಬೇರೆ ಮಾಡಲಿ’ ಎಂದರು. ಅಷ್ಟಾದ ಮೇಲೆ, ದೇವರು ಆ ಗುಮ್ಮಟಕ್ಕೆ `ಆಕಾಶ’ ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೇ ದಿನವಾಯಿತು.
ಆನಂತರ ದೇವರು, ‘ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಕಡೆ ಕೂಡಿಕೊಳ್ಳಲಿ, ಒಣ ನೆಲ ಕಾಣಿಸಿಕೊಳ್ಳಲಿ’ ಎಂದರು. ಹಾಗಾದ ಮೇಲೆ ದೇವರು, ಒಣ ನೆಲಕ್ಕೆ `ಭೂಮಿ’ ಎಂತಲೂ, ಜಲರಾಶಿಗೆ `ಸಮುದ್ರ’ವೆಂತಲೂ ಹೆಸರಿಟ್ಟರು. ತರುವಾಯ ದೇವರು, `ಭೂಮಿಯಲ್ಲಿ ಎಲ್ಲಾ ಬಗೆಯ ದವಸಧಾನ್ಯ, ಹಣ್ಣುಹಂಪಲು ಬಿಡುವ ಗಿಡಮರಬಳ್ಳಿಗಳು ಬೆಳೆಯಲಿ’ ಎಂದರು. ಹಾಗೆ ಆಯಿತು. ಅವು ದೇವರ ಕಣ್ಣಿಗೆ ಚೆನ್ನಾಗಿ ಕಂಡವು. ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ           ದಿನವಾಯಿತು.
ಅದಾದ ನಂತರ ದೇವರು, ಹಗಲಿರುಳುಗಳನ್ನು ಬೇರೆ ಬೇರೆ ಮಾಡಲು, ಋತುಮಾನಗಳನ್ನು, ದಿನ ಸಂವತ್ಸರಗಳನ್ನು ಸೂಚಿಸಲು ಹಾಗೂ ಭೂಮಿಗೆ ಬೆಳಕನ್ನು ನೀಡಲು ಎರಡು ಆಕಾಶ ದೀಪಗಳು ಉಂಟಾಗಲಿ ಎಂದರು. ಹಾಗಾದಾಗ ಹಗಲನ್ನು ಆಳುವುದಕ್ಕೆ ಸೂರ್ಯನನ್ನು, ಇರುಳನ್ನು ಆಳುವುದಕ್ಕೆ ಚಂದ್ರನನ್ನು ನಿಯಮಿಸಿದರು. ಜೊತೆಗೆ ನಕ್ಷತ್ರಗಳನ್ನೂ ಸೃಷ್ಟಿಸಿ ಆಕಾಶದಲ್ಲಿ ಕೂರಿಸಿದರು. ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೇ ದಿನವಾಯಿತು.
 ಆಮೇಲೆ ದೇವರು, `ಹಲವಾರು ಜೀವ ಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಭೂಮ್ಯಾಕಾಶಗಳ ನಡುವೆ ಪಕ್ಷಿಗಳು ಹಾರಾಡಲಿ’ ಎಂದರು. ಅದು ನೆರವೇರಿತು. ಅದು ದೇವರ ಕಣ್ಣಿಗೆ ಚೆನ್ನಾಗಿ ಕಂಡಿತು. ಹೀಗೆ ಬೈಗೂ ಬೆಳಗೂ ಆಗಿ ಐದನೇ ದಿನವಾಯಿತು.
 ಆ ಬಳಿಕ ದೇವರು, `ಭೂಮಿಯಲ್ಲಿ ಎಲ್ಲಾ ತರಹದ ಜೀವಜಂತುಗಳು – ದೊಡ್ಡಚಿಕ್ಕ ಸಾಕುಪ್ರಾಣಿಗಳು, ಕಾಡು ಮೃಗಗಳು ಹುಟ್ಟಲಿ’ ಎಂದರು, ಅಂತೆಯೇ ಆಯಿತು. ಅವರ ನೋಟಕ್ಕೆ ಅದು ಚೆನ್ನಾಗಿಕಂಡಿತು. ಅದಾದ ನಂತರ ದೇವರು, `ನಮ್ಮಂತೆಯೆ ಇರುವ ಹಾಗೂ ನಮ್ಮನ್ನು ಹೋಲುವ ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆ, ನೆಲದ ಮೇಲಿನ ದೊಡ್ಡಚಿಕ್ಕ ಸಾಕುಪ್ರಾಣಿಗಳು ಮತ್ತು ಕಾಡು ಮೃಗಗಳ ಮೇಲೆ, ನೆಲದ ಮೆಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆ ದೊರೆತನ ಮಾಡಲಿ’ ಎಂದರು. 
 ಮನುಷ್ಯರಿಗೆ ದವಸಧಾನ್ಯಗಳನ್ನು, ಹಣ್ಣುಹಂಪಲುಗಳನ್ನು, ಸೊಪ್ಪುಗಳನ್ನು ಕೊಡಮಾಡಿದರು, ಅದರಂತೆ ಪ್ರಾಣಿಗಳಿಗೂ ಅವಕ್ಕೆ ಬೇಕಾದ ಆಹಾರಗಳನ್ನು ನಿಗದಿ ಮಾಡಿದರು. ದೇವರು ತಮ್ಮ ಸೃಷ್ಟಿಯನ್ನು ನೋಡಿ ಸಂತಸಗೊಂಡರು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನವಾಯಿತು.
 ಸರ್ವೇಶ್ವರ ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು, ಏಳನೆಯ ದಿನ ವಿಶ್ರಾಂತಿಯನ್ನು ಪಡೆದರು. ಆ ಏಳನೇ ದಿನ ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು.
 ಸರ್ವೇಶ್ವರ ಪರಲೋಕ ಭೂಲೋಕಗಳನ್ನು ಸೃಷ್ಟಿ ಮಾಡಿದಾಗ, ಯಾವ ಗಿಡಗಂಟಿಗಳೂ ಭೂಮಿಯಲ್ಲಿ ಇರಲಿಲ್ಲ. ಯಾವ ಬೀಜವೂ ಮೊಳಕೆಯೊಡೆದಿರಲಿಲ್ಲ. ಏಕೆಂದರೆ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ. ಭೂಮಿಯಿಂದ ನೀರು ಉಕ್ಕಿ ನೆಲಕ್ಕೆ ನೀರೆರೆಯುತ್ತಿತ್ತು.
 ಹೀಗಿರಲು ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ತಮ್ಮ ಆಕಾರದಲ್ಲಿ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿಜೀವಶ್ವಾಸವನ್ನು ಊದಿದರು. ಆಗ ಮನುಷ್ಯ ಜೀವಾತ್ಮನಾದನು. ಪೂರ್ವ ದಿಕ್ಕಿನ ಏಡನ್ ಪ್ರದೇಶದಲ್ಲಿ ಒಂದು ತೋಟವನ್ನು ನಿರ್ಮಿಸಿ, ಅಲ್ಲಿ ಕೃಷಿ ಮಾಡಲು ಮತ್ತು ಅದನ್ನು ಕಾಯಲು ಆ ಮನುಷ್ಯನನ್ನು ಇರಿಸಿದರು. ಆ ತೋಟದ ನಡುವೆ ಒಂದು ನದಿಯು ಹರಿದು, ಅಲ್ಲೆಲ್ಲಾ ನೀರುಣಿಸುತ್ತಿತು. ಆ ನದಿಯು ನಂತರ ನಾಲ್ಕು ಕವಲುಗಳಲ್ಲಿ ಒಡೆದಾಗ ನಾಲ್ಕು ನದಿಗಳಾದವು.
 ಆ ನಾಲ್ಕು ನದಿಗಳು ಜಗತ್ತಿನ ನಾಲ್ಕು ದಿಕ್ಕಿಗೂ ಹರಿಯುತ್ತಿದ್ದವು. ಆ ಏಡನ್ ತೋಟದಲ್ಲಿ ನೋಟಕ್ಕೆ ರಮ್ಯವೂ, ತಿನ್ನಲು ರುಚಿಕರವೂ ಆದ ನಾನಾ ತರದ ಮರಗಳಿದ್ದವು. ಆ ತೋಟದ ಮಧ್ಯದಲ್ಲಿ ಜೀವದಾಯಕ ಅಂದರೆ ಅಮರತ್ವ ನೀಡುವ ಮತ್ತು ಜ್ಞಾನದ ಅಂದರೆ ಒಳಿತು ಕೆಡಕುಗಳ ಅರಿವು ಮೂಡಿಸುವ ಎರಡು ಮರಗಳಿದ್ದವು.
 ಆ `ತೋಟದಲ್ಲಿನ ಸಕಲ ಗಿಡಮರಗಳ ಹಣ್ಣು ಹಂಪಲುಗಳನ್ನು ತಿನ್ನಬಹುದು’ ಎಂದು ಆ ಮನುಷ್ಯನಿಗೆ ತಿಳಿಸಿದ್ದ ದೇವರು, `ಜೀವದಾಯಕ ಹಾಗೂ ಒಳಿತು ಕೆಡಕುಗಳ ಅರಿವು ಮೂಡಿಸುವ ಮರಗಳ ಹಣ್ಣುಗಳನ್ನು ತಿನ್ನಕೂಡದು’ ಎಂದು ನಿರ್ಬಂಧ ಹೇರಿದ್ದರು. ತಪ್ಪಿದರೆ `ಸಾಯುವಿ’ ಎಂದು ಬೆದರಿಕೆಯನ್ನು ಹಾಕಿದ್ದರು.
 ಆ ನಂತರ ದೇವರಾದ ಸರ್ವೇಶ್ವರ, `ಮನುಷ್ಯ ಒಂಟಿಯಾಗಿ ಇರುವುದು ಸರಿಯಲ್ಲ, ಅವನಿಗೆ ಒಬ್ಬ ಸಂಗಾತಿಯನ್ನು ಇಲ್ಲವೆ ಸಹಾಯಕನನ್ನು ಕೊಡಬೇಕು ಎಂದು ಸಕಲ ಪ್ರಾಣಿಗಳನ್ನು ಅವನ ಎದುರು ತಂದು ನಿಲ್ಲಿಸಿದರು. ಅವುಗಳಿಗೆ ಆತ ಒಂದೊಂದು ಹೆಸರಿಟ್ಟ, ಆದರೆ ಅವು ಅವನಿಗೆ ಸಹಾಯಕನಾಗಿರಲು ಅಥವಾ ಸಂಗಾತಿಯಾಗಿರಲು ಸರಿ ಹೊಂದಲಿಲ್ಲ. ಕೊನೆಗೆ ಸರ್ವೇಶ್ವರ ಮನುಷ್ಯನಿಗೆ ಗಾಢ ನಿದ್ರೆ ಬರಮಾಡಿಸಿ, ಅವನು ಮಲಗಿದ್ದಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡರು. ಅದರಿಂದ ಮಹಿಳೆಯನ್ನು ಸಿದ್ಧಪಡಿಸಿ ಅವನ ಬಳಿಗೆ ತಂದು ನಿಲ್ಲಿಸಿದರು. ಆಕೆ, `ನರ’ನಿಂದ ಉತ್ಪತ್ತಿಯಾದವಳು `ನಾರಿ’ ಎನಿಸಿಕೊಂಡಳು.
ಅವರು ಇತರ ಪ್ರಾಣಿಗಳಂತೆಯೆ ಬೆತ್ತೆಲೆಯೆ ಇದ್ದರು. ಸರ್ವೇಶ್ವರನ ಸೃಷ್ಟಿಯಲ್ಲಿ ಅತಿಶಯ ಯುಕ್ತಿಯುಳ್ಳ ಸರ್ಪವು ಒಮ್ಮೆ ಮಹಿಳೆಯ ಹತ್ತಿರ ಬಂದು, `ತೋಟದ ಮಧ್ಯದಲ್ಲಿರುವ ಜೀವದಾಯಕ ಹಾಗೂ ಒಳಿತು ಕೆಡಕುಗಳ ಅರಿವು ಮೂಡಿಸುವ ಮರಗಳ ಹಣ್ಣುಗಳನ್ನು ತಿಂದರೆ ಸಾಯುವುದಿಲ್ಲ’ ಎಂದು ಅವಳ ತಲೆ ಕೆಡಿಸಿತು. `ನೋಡಿಯೆ ಬಿಡೋಣ’ ಎಂದು ಆ ಮಹಿಳೆ `ಅರಿವಿನ ಮರದ ಹಣ’್ಣನ್ನು ಕಿತ್ತು ತಂದು ತಾನೂ ತಿಂದಳು, ತನ್ನ ಗಂಡನಿಗೂ ತಿನ್ನಿಸಿದಳು. ಆಗ ಅವರಿಬ್ಬರಿಗೆ ತಾವು ಬೆತ್ತೆಲೆ ಇರುವುದು ತಿಳಿಯಿತು. 
 ನಡೆದ ಸಂಗತಿ ಗಮನಕ್ಕೆ ಬಂದಾಗ ಸರ್ವೇಶ್ವರ ದೇವರು, `ಹಗೆತನವಿರಲಿ ನಿನಗೂ ಮಹಿಳೆಗೂ ಮತ್ತು ಮಹಿಳೆಯ ಸಂತಾನಕ್ಕೂ’ ಎಂದು ಸರ್ಪಕ್ಕೆ ಶಾಪ ಕೊಟ್ಟರು. ಮಕ್ಕಳ ಆಸೆಯನ್ನು ಹೊಂದಿರುವ ನಿನಗೆ `ಹೆಚ್ಚಿಸುವೆನು ನಿನ್ನ ಪ್ರಸವಕಾಲದ ವೇದನೆಯನ್ನು’ ಎಂದು ಮಹಿಳೆಗೆ ಶಿಕ್ಷೆ ನೀಡಿದರು. `ಜೊತೆಗೆ, ಆಕೆ ಗಂಡನ ಅಧೀನದಲ್ಲಿರಲಿ’ ಎಂದೂ ಕಟ್ಟಪ್ಪಣೆ ಮಾಡಿದರು. `ಮಡದಿಯ ಮಾತನ್ನು ಕೇಳಿ ತಿನ್ನಬಾರದೆಂದು ಹೇಳಿದ ಮರದ ಹಣ್ಣನ್ನು ತಿಂದ ತಪ್ಪಿಗೆ ಇನ್ನು ನೀವಿಬ್ಬರೂ ಕಷ್ಟಪಟ್ಟು ಬಿತ್ತಿ ಬೆಳೆದು ಬದುಕಿರಿ’ ಎಂದು ಅವರಿಬ್ಬರಿಗೂ ಶಪಿಸಿದರು.** 
 `ಒಳಿತು ಕೆಡಕುಗಳ ಅರಿವು ಮೂಡಿಸುವ ಮರದ ಹಣ್ಣನ್ನು ತಿಂದ ಈ ಮನುಷ್ಯನಿಗೆ ಈಗ ಒಳ್ಳೆಯದು ಮತ್ತು ಕೆಟ್ಟದುದರ ಬಗ್ಗೆ ತಿಳಿವಳಿಕೆ ಮೂಡಿದೆ. ಮುಂದೆ ಆತ ಜೀವದಾಯಕ ಮರದ ಹಣ್ಣನ್ನು ತಿಂದರೆ ನಮ್ಮಂತೆಯೇ ಅಜರಾಮರ ಆಗಿಬಿಡುತ್ತಾನೆ’ ಎಂದು ಯೋಚಿಸಿದ ದೇವರು ಸರ್ವೇಶ್ವರ, ಅವರಿಬ್ಬರಿಗೂ ಬಟ್ಟೆ ತೊಡಿಸಿ, ಅವರಿಬ್ಬರನ್ನು ಏಡನ್ ತೋಟದಿಂದ ಹೊರಗೆ ದಬ್ಬಿದರು. ಅವರಿಬ್ಬರು ಮತ್ತೆ ಏಡನ್ ತೋಟಕ್ಕೆ ಕಾಲಿಡದಂತೆ ತಡೆಯಲು, ಅರ್ಧ ಸಿಂಹ ಮತ್ತು ಅರ್ಧ ಮಾನವದೇಹದ ರೆಕ್ಕೆಗಳುಳ್ಳ ಪ್ರಾಣಿಯನ್ನು ಆ ತೋಟದ ಕಾವಲಿಗೆ ನಿಯೋಜಿಸಿದರು.
 ಹಿಬ್ರೂ ಭಾಷೆಯಲ್ಲಿ `ಆದಾಮ’ ಎಂದರೆ ಮಣ್ಣಿನಿಂದ ಆದವನು ಎಂಬ ಅರ್ಥವಿದೆ. ಹೀಗಾಗಿ ದೇವರು ಸೃಷ್ಟಿಸಿದ ಮೊದಲ ಮನುಷ್ಯನ ಹೆಸರು ಆದಾಮ. ಆದಾಮನ ಹೆಂಡತಿಯ ಹೆಸರು `ಹವ್ವ’. ಹಿಬ್ರೂ ಭಾಷೆಯಲ್ಲಿ ಹವ್ವ ಎಂದರೆ ಜೀವ ಎಂಬ ಅರ್ಥವಿದೆ. ಈ `ಆದಾಮ’ ಮತ್ತು `ಹವ್ವ’ರು ಮಾನವಕುಲದ ಆದಿ ದಂಪತಿ. ಈ ದಂಪತಿಯಿಂದಲೇಜಗತ್ತಿನಲ್ಲಿ ಮಾನವ ಕುಲ ವಿವಿಧ ಪಂಗಡಗಳಲ್ಲಿ ಅರಳುತ್ತಾ ಸಾಗುತ್ತಿದೆ.
----
** ಆದಿ ತಂದೆ ತಾಯಿಗಳು ಮಾಡಿದ ಈ ತಪ್ಪು, `ಆದಿ ಪಾಪ’ ಎಂಬ ಕಲ್ಪನೆಗೆ ದಾರಿ ಮಾಡಿಕೊಟ್ಟಿದೆ. 
-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...