ವಿಶ್ವದಾದ್ಯಂತ ಕ್ರಿಸ್‍ಮಸ್ ಅನ್ನು ಸಂಭ್ರಮದ ಸೆಕ್ಯುಲರ್ ಹಬ್ಬ ಎಂದು ಶುರುವಿನಿಂದಲೇ ಹೇಳುತ್ತ ಬರಲಾಗಿದೆ. ಯೇಸುವಿನ ಜೀವನದ ದಾಖಲೆಗಳಂತಿರುವ ಸುವಾರ್ತೆಗಳು ಆತನ ಹುಟ್ಟಿದ ದಿನದ ಬಗ್ಗೆ ನಿಖರವಾಗಿ ಏನನ್ನೂ ಹೇಳುವುದಿಲ್ಲ. ಆದರೆ ಕ್ರೈಸ್ತರ ಮೊದಲ ಪೆÇೀಪ್ ಜೂಲಿಯಸ್ 1 ಮೊದಲ ಬಾರಿಗೆ ಡಿಸೆಂಬರ್ 25 ಕ್ರಿಸ್‍ಮಸ್ ದಿನ ಎಂಬುದಾಗಿ ಹೇಳಿದ್ದರು. ವಿಗ್ರಹಾರಾಧನೆಯನ್ನು ಮಾಡುತ್ತಿದ್ದುದರಿಂದ ಕ್ರಿಸ್ತ ತತ್ತ್ವಪಾಲಕರ ಕಣ್ಣಲ್ಲಿ ಕ್ಷುದ್ರ ಧರ್ಮೀಯರೆನಿಸಿಕೊಂಡಿದ್ದ ಆ ಕಾಲದ ವಿಗ್ರಹಾರಾಧಕರ ಸಂಸ್ಕೃತಿಯಲ್ಲಿದ್ದ ಯೇಸುವಿನ ಹುಟ್ಟುಹಬ್ಬದ ಆಚರಣೆಯನ್ನು ಕ್ರಿಸ್ತೀಯಗೊಳಿಸುವ ಪ್ರಯತ್ನವಾಗಿ ಈ ದಿನವನ್ನು ಕ್ರಿಸ್‍ಮಸ್ ಹಬ್ಬವಾಗಿ ಮೊತ್ತ ಮೊದಲು 4ನೇ ಶತಮಾನದಲ್ಲಿ ಆಚರಿಸಲಾಯಿತು.
ಹಾಗಾಗಿ ಕ್ರಿಸ್‍ಮಸ್ ಹಬ್ಬದ ಆಚರಣೆ ಎಂದರೆ ಒಂದು ಬಗೆಯಲ್ಲಿ ಕ್ರೈಸ್ತ, ಪೇಗನ್ (ವಿಗ್ರಹಾರಾಧಕ) ಮತ್ತು ಜನಪದ ಸಂಸ್ಕೃತಿ-ಪರಂಪರೆಗಳ ವಿಚಿತ್ರ ಸಂಗಮವಾಗಿದೆ. 17ನೆಯ ಶತಮಾನದ ಮಧ್ಯಭಾಗ ಮತ್ತು 18 ನೆಯ ಶತಮಾನದ ಆರಂಭದಲ್ಲಿ ರಾಣಿ ಎಲಿಜಬೆತ್ ಕಾಲಾವಧಿಯಲ್ಲಿ ಯೂರೋಪ್ ಮತ್ತು ಅಮೆರಿಕಗಳಲ್ಲಿ ಕಾಣಿಸಿಕೊಂಡ ಕ್ರಿಶ್ಚಿಯನ್ ಧರ್ಮಶುದ್ಧಿ ಚಳವಳಿಯ ಕಾರಣಕ್ಕಾಗಿ ಕ್ರಿಸ್ಮಸ್ ಆಚರಣೆಗೆ ನಿಷೇಧ ಹೇರಲಾಯಿತು. ನೈತಿಕ ಮಾರ್ಗದ ನಡೆ, ಸದಾ ಪ್ರಾರ್ಥನೆ ಮತ್ತು ಹೊಸ ಹೊಸಬಂಡಿಕೆಯ ತತ್ತ್ವಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಆಗ್ರಹಿಸುತ್ತಿದ್ದ ಈ ಧರ್ಮಶುದ್ಧಿವಾದಿಗಳು ಯೇಸುವಿನ ಜನ್ಮದಿನಾಂಕ ಸುವಾರ್ತೆಗಳಲ್ಲಿ ಖಚಿತವಾಗಿ ನಮೂದಾಗಿಲ್ಲದಿರುವುದರಿಂದ ಜನರು ಪೇಗನ್ ರೋಮನ್ ಸಂಸ್ಕೃತಿಯನ್ನು ಆಚರಣೆಯಲ್ಲಿ ತರುತ್ತಿದ್ದಾರೆ ಎಂದು ಭಾವಿಸಿ ಕ್ರಿಸ್ಮಸ್ ಆಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಆದರೆ 19ನೆಯ ಶತಮಾನದ ಕೊನೆಯ ಭಾಗದಲ್ಲಿ ವಿಕ್ಟೋರಿಯನ್ ರಾಣಿಯ ಯುಗದಲ್ಲಿ ಮತ್ತೆ ಕ್ರಿಸ್ಮಸ್ ಸಂಭ್ರಮಾಚರಣೆಯ ದೊಡ್ಡ ವಾರ್ಷಿಕ ಹಬ್ಬವಾಯಿತು.
ಮನುಷ್ಯ ಲೋಕದ ಚರಿತ್ರೆಯನ್ನು ತಿರುವಿ ಹಾಕಿದರೆ ಪ್ರಾಚೀನ ಮಾನವ ಕೆಲವೊಮ್ಮೆ ಹೊಸ ನಡೆ-ನುಡಿಯ, ಅಪರೂಪದ ವ್ಯಕ್ತಿತ್ವದ ಜನರ ಮಾತುಗಳಲ್ಲಿ ಪಾರಮಾರ್ಥಿಕ ಅರ್ಥ ಕಲ್ಪಿಸುತ್ತಾ ಅವರನ್ನೇ ಗುರುವಾಗಿ ಸ್ವೀಕರಿಸಿ, ಬದುಕಿನುದ್ದಕ್ಕೂ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂಥವರ ಬೆಂಬಲಕ್ಕೆ ದೊಡ್ಡ ಜನ ಸಮೂಹವೇ ಇರುತ್ತದೆ. ಇನ್ನು ಕೆಲವೊಮ್ಮೆ ತನಗಿಂತ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುವ, ಹೊಸ ಭಾಷೆಯಲ್ಲಿ ಮಾತನಾಡುತ್ತ ಸ್ಥಿತಪ್ರಜ್ಞನಾಗಿ ನಿಗೂಢವೆಂಬಂತೆ ಕಾಣುವ ವ್ಯಕ್ತಿಯನ್ನು ಸಂಶಯದ ಕಣ್ಣಲ್ಲಿ ಕಂಡು, ಆ ವ್ಯಕ್ತಿಯ ಜೊತೆ ಅಂತರ ಕಾಯ್ದುಕೊಂಡು ನೋಡುವುದು ಮತ್ತು ಅವರ ಬಗೆಗೆ ಏನೇನೂ ತಿಳಿದುಕೊಳ್ಳಲಾಗದೇ ಅವರ ಸಾವಿನ ಬಳಿಕ ಆರಾಧಿಸುತ್ತಾ ಅವರ ಅಮರತ್ವವನ್ನು ಪ್ರತಿಷ್ಠಾಪಿಸುವ ಬಗೆಯನ್ನು ನಾವು ಕಾಣುತ್ತೇವೆ.
ನಮ್ಮ ಬಸವಣ್ಣ, ಬುದ್ಧ ಮತ್ತು ಮಹಾವೀರರಿಗೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತರೆ ದೂರದ ಮರುಭೂಮಿಯ ಕಥಾನಕದ ಯೇಸುವಿಗೆ ಪ್ರಾಯಶಃ ಅವರ ಪುನರುತ್ಥಾನÀ ಪೂರ್ವದ ಬದುಕಿನಲ್ಲಿ ಭಾರೀ ಜನ ಬೆಂಬಲ, ಸಹಕಾರ ದೊರೆಯದೇ ಅವರು ಶಿಲುಬೆಗೇರಬೇಕಾಗುತ್ತದೆ. ಹಾಗೆ ನೋಡಿದರೆ ಯೇಸುವಿಗೆ ಅನುಯಾಯಿಗಳಿದ್ದರು. ಆದರೆ ಅವರು ಸಂಖ್ಯೆಯಲ್ಲಿ ಬಹಳ ಕಡಿಮೆ ಇದ್ದರು. ವಾಸ್ತವದಲ್ಲಿ ಯೇಸು ಜನರೊಂದಿಗೆ ಬಾಳಿ ಬದುಕಲು ಬಂದ ಜನಪದೀಯನೇ ಆಗಿದ್ದರು. ಆದರೆ ಜನರು ಅವರನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಲಿಲ್ಲ. ಜನರ ಮತ್ತು ಅವರ ನಡುವೆ ಅಂತರವಿತ್ತು, ಕಂದರವಿತ್ತು. ಜನರು ಅವರ ಮಾತುಗಳನ್ನು ಅಪಾರ್ಥ ಮಾಡಿಕೊಂಂಡರು. ಯೇಸುವಿನ ಶಿಷ್ಯರೆನಿಸಿಕೊಂಡವರು ಹಲವಾರು ಸಂದರ್ಭಗಳಲ್ಲಿ ಅವರನ್ನು ಅತ್ಯಂತ ಬಾಲಿಶವಾಗಿ ಪ್ರಶ್ನಿಸಿದ್ದರು. “ದೇವರ ರಾಜ್ಯದಲ್ಲಿ ನಮ್ಮ ಸ್ಥಾನ ಯಾವುದು? ದೇವರ ಬಳಿ ನಾವು ಎಲ್ಲಿ ನಿಂತಿರುತ್ತೇವೆ? ನಮ್ಮ ಅಧಿಕಾರವೇನು?” ಹೀಗೆಲ್ಲ ಕೇಳುತ್ತಿದ್ದರು. ದೇವರ ರಾಜ್ಯವೆಂಬುದರ ಅರ್ಥ ಅವರಿಗಾಗಿರಲಿಲ್ಲ. ಹೀಗಾಗಿ ಯೇಸು ಜನರಿಗೆ ಮೋಕ್ಷದ ಹಾದಿಯನ್ನು ಹೇಳುತ್ತಾ ಹೋದರೂ, ಪ್ರೇಮದ ಸುಖವನ್ನು ತಿಳಿಸುತ್ತಾ ನಡೆದರೂ ಜನರ ಪ್ರೀತಿಯ ಬಂಧನದಲ್ಲಿ ಸಿಲುಕಲೇ ಇಲ್ಲ.
ಪಾರಮಾರ್ಥಿಕತೆಯ ಅಂತಸ್ಸತ್ತ್ವದ ದೀರ್ಘ ಪರಂಪರೆಯನ್ನು ಹೊಂದಿದ್ದ ಪೂರ್ವದ ದೇಶಗಳಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತನ್ನೊಳಗೆ ಆವಾಹಿಸಿಕೊಳ್ಳುವ ಸಲುವಾಗಿ ಗುರುವನ್ನು ಪಡೆಯಲು ಹವಣಿಸುವ ಜನಸಮೂಹಗಳು ಇದ್ದ ಬಗ್ಗೆಅನೇಕ ದಾರ್ಶನಿಕ ಪರಂಪರೆಗಳು ಹೇಳುತ್ತವೆ. ಆದರೆ ಯೇಸು ಬದುಕಿದ ಮರುಭೂಮಿಯ ದೇಶ ಕಾಲದಲ್ಲಿ ಈ ಬಗೆಯ ಚಾರಿತ್ರಿಕ ಸಂದರ್ಭಗಳೇ ಇರಲಿಲ್ಲ. ಹಾಗಾಗಿ ಅವರ ಪಾರಮಾರ್ಥಿಕ ತತ್ತ್ವಜ್ಞಾನದ ಆಳ ಅಗಲವನ್ನು ಆ ಕಾಲದಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನಗಳೇ ಸರಿಯಾಗಿ ಕಾಣುವುದಿಲ್ಲ. ಯೇಸುವಿನ ಗುರುತ್ವಕ್ಕೆ ಹಾತೊರೆಯುತ್ತ ಅದಕ್ಕೊಂದು ರುಜುತ್ವವನ್ನು ಒಪ್ಪಿಸಬಲ್ಲ ಗಟ್ಟಿ ಶಿಷ್ಯ ಪರಂಪರೆ ರೂಪುಗೊಂಡಿದ್ದೇ ಅವರ ಪುನರುತ್ಥಾನದ ಬಳಿಕ.
ಸಾಮಾನ್ಯವಾಗಿ ತತ್ತ್ವಜ್ಞಾನದಲ್ಲಿ ಎರಡು ಬಗೆಯ ಚಿಂತನೆಗಳಿವೆ. ಒಂದು, ತರ್ಕಬದ್ಧ ಚಿಂತನೆಯಾದರೆ ಮತ್ತೊಂದು ಹೋಲಿಕೆಯ ಚಿಂತನೆ. ತರ್ಕಬದ್ಧ ಚಿಂತನೆ ಗಣಿತದ ಲೆಕ್ಕಾಚಾರದಂತೆ. ಇದು ಜನರಿಗೆ ಕೆಲವೊಮ್ಮೆ ಬೇಗ ಅರ್ಥವಾಗುತ್ತದೆ. ಆದರೆ ಹೋಲಿಕೆಯ ಚಿಂತನೆ ಇದಕ್ಕಿಂತ ಭಿನ್ನವಾಗಿದೆ. ಇದು ಒಂದು ರೀತಿಯಲ್ಲಿ ಕಾವ್ಯಮಯವಾಗಿದೆ. ಇದು ತರ್ಕದ ನೆಲೆಗೆ ನಿಲುಕದ್ದು. ಇದು ಎಲೆಕ್ಟ್ರಾನಿಕ್ ಚಲನೆಯಂತೆ. ನಮ್ಮ ಯೇಸು ಈ ರೀತಿಯ ಹೋಲಿಕೆಯೊಡನೆ ಮಾತನಾಡುತ್ತಿದ್ದರು. ಹಾಗೆ ನೋಡಿದರೆ ಪಾರಮಾರ್ಥಿಕ ಜ್ಞಾನದ ಮೂಲ ಇರುವುದೇ ಹೋಲಿಕೆಯ ವಿಶ್ವದಲ್ಲಿ. ಯೇಸು ಎಂದೂ ವಾದ ಮಾಡುತ್ತಿರಲಿಲ್ಲ. ತರ್ಕವನ್ನು ಮುಂದಿಡುತ್ತಿರಲಿಲ್ಲ. ನಿಜದಲ್ಲಿ ಯಾರಲ್ಲಿ ಮನುಷ್ಯ ನೋವಿಗೆ, ಮನುಷ್ಯನ ಕ್ಲೈಬ್ಯಕ್ಕೆ, ದೀನತನಕ್ಕೆ ಮರುಗುವ ಮಿಡಿಯುವ ಸಹಾನುಭೂತಿ ಇದೆಯೋ ಅವರಲ್ಲಿ ಮಾತ್ರ ಹೋಲಿಕೆಯ ಚಿಂತನೆ ಹುಟ್ಟಲು ಸಾಧ್ಯ. ಯೇಸು ಹೀಗೆ ಕಾಣಿಸಿಕೊಂಡವರು. ಅರಮನೆ ಇಲ್ಲದೆ ಗೋದಲಿಯಲ್ಲಿ ಹುಟ್ಟಿ, ಅಧಿಕಾರದ ಮಾನವನ್ನು ಹೊರದೆ, ಒಂದೆಡೆ ನಿಲ್ಲದೆ, ಜಂಗಮ ಜೀವನವನ್ನು ಬದುಕಿ ಪ್ರೀತಿಯ ಮೂಲಕ, ನಿರ್ಮೋಹದ ನೋಟದ ಮೂಲಕ ಮನುಷ್ಯರನ್ನು ತಲುಪ ಬಯಸಿದರು. ಇವರು ಗಾಢ ನೋವಿನ, ದುಃಖದ, ವಿರಹಗಳ ಬಲೆಯಲ್ಲಿ ಬಿದ್ದ, ಅಸಹಾಯಕತೆಯ ಮಡುವಿನಲ್ಲಿ ಬಿದ್ದು ತೊಳಲಾಡುತ್ತಿದ್ದ ಮನುಷ್ಯ ಲೋಕಕ್ಕೆ ಪರಿಹಾರವಾಗಿ ಅಪಾರ ಪ್ರೀತಿಯನ್ನು ಧಾರೆ ಎರೆದರು. ಭೂಮಿ ಮೇಲೆ ಕೆಳಗೆ ಇರುವುದೆಲ್ಲವೂ ನಶ್ವರ ಪ್ರೀತಿಯೊಂದೇ ಈಶ್ವರ, ಸತ್ಯವೊಂದೇ ಪರಮಾತ್ಮ ಎಂದು ತಿಳಿದು, ತನ್ನ ನೋವಿಗೆ ಮಮ್ಮಲ ಮರುಗದೆ ಜಗದ ಪಾಪಿಷ್ಟ ಜೀವರಾಶಿಯನ್ನು ಕ್ಷಮಿಸುವ ಔದಾರ್ಯ ತೋರಿದ ಇವರನ್ನು ಆಗಿನ ಧರ್ಮಾಧಿಕಾರಿಗಳು ಧರ್ಮಭಂಜಕರೆಂದೂ, ದಂಗೆಕೋರನೆಂದೂ ಭಾವಿಸಿದರು. ಮಾನವ ಬದುಕನ್ನು ಸಂಘಟಿಸುವ ಸ್ಥಿರ ನಿಯಮಗಳ ನಶ್ವರತೆಯನ್ನು ವಿಮರ್ಶಿಸುವ ಪ್ರಯತ್ನದಲ್ಲಿ ರಾಜ್ಯದ್ರೋಹ ಮತ್ತು ಧರ್ಮದ್ರೋಹದ ಆಪಾದನೆಯನ್ನು ಎದುರಿಸಿದರೂ ಅನ್ಯಾಯದ ವಿರುದ್ಧ ನ್ಯಾಯವನ್ನು, ಅನೈತಿಕತೆಯ ವಿರುದ್ಧ ನೈತಿಕತೆಯನ್ನು ಹಾಗೂ ಹಿಂಸೆಯ ವಿರುದ್ಧ ಅಹಿಂಸೆಯ ಹೊಸ ಭಾಷೆಯನ್ನು ಜಗತ್ತಿಗೆ ಸಾರಿದ ಒಬ್ಬ ತತ್ತ್ವಪದಕಾರ ಈ ಯೇಸು.
ಬೆಟ್ಟದ ಮೇಲಿನ ತಮ್ಮ ದೀರ್ಘ ಮಾತುಗಳಲ್ಲಿ ಅವರು ಮತ್ತೆ ಮತ್ತೆ ಪರಿಧಿಗೆ ಸರಿದ ಜನರಿಗೆ, ದುಃಖಿತರಿಗೆ, ರೋಗಿಗಳಿಗೆ, ಅಸಹಾಯಕರಿಗೆ ಆತ್ಮವಿಶ್ವಾಸವನ್ನು ತುಂಬುವ ಅಮೃತ ಮಾತುಗಳನ್ನು ಧಾರೆ ಎರೆದರು. ಮನುಷ್ಯ ತನ್ನ ಬದುಕಿನಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ತನ್ನ ಪಾಪದ, ಅಹಂಕಾರದ ಹಲ್ಲುಗಳನ್ನು ತೊರೆದು ಹದವಾಗಿ, ಸಂಯಮಿಯಾಗಿ, ತನ್ನನ್ನು ನಿಯಂತ್ರಿಸುವ ಮೂಲಕ ತನ್ನನ್ನು ತಾನೇ ಆಳಲು ಸಮರ್ಥನಾದರೆ ಅದುವೇ ಮೋಕ್ಷದ ಪರಮ ಹಾದಿ ಎಂದು ಹೇಳಲೆತ್ನಿಸಿದ ಇವರ ಮಾತುಗಳನ್ನು ಇಂದಿನ ನಮ್ಮ ಅಹಂಕಾರದ ರಾಜಕಾರಣಕ್ಕೆ ಮತ್ತು ಅಧಿಕಾರಶಾಹಿ ದರ್ಪಕ್ಕೆ ಅಹಂಕಾರ ನಿರಸನದ ಮತ್ತು ಅಧಿಕಾರ ನಿಗ್ರಹದ ಹೊಸ ಚಿಂತನೆಯಾಗಿ ಕಂಡುಕೊಳ್ಳಬೇಕಾಗಿದೆ. ಮನುಷ್ಯ ತನ್ನನ್ನು ತಾನು ವಿನಮ್ರನನ್ನಾಗಿಸಿಕೊಳ್ಳಬೇಕು, ವ್ಯಕ್ತಿ ತನ್ನನ್ನು ತಾನು ಶೂನ್ಯನನ್ನಾಗಿ ಮಾಡಿಕೊಳ್ಳಬೇಕು ಎಂದು ಮತ್ತೆ ಮತ್ತೆ ಸಾರಿ ಸಾರಿ ಹೇಳಿದ ಯೇಸು ನಿಜ ಅರ್ಥದಲ್ಲಿ ತತ್ತ್ವಜ್ಞಾನಿಯೇ.
ಈ ಹಿನ್ನೆಲೆಯಲ್ಲಿ ಯೇಸು ಅಂದು ಹೇಳಿದ ಮಾತುಗಳನ್ನು ನಾವು ಮರುನೆನಪಿಸುತ್ತಾ ನಮ್ಮ ನಡೆ-ನಡಾವಳಿಯನ್ನು, ನಮ್ಮ ರಾಜಕಾರಣದ ನಡೆಯನ್ನು ಶುದ್ಧಗೊಳಿಸುತ್ತಾ ಸಮಾಜವನ್ನು, ರಾಷ್ಟ್ರವನ್ನು ಮರುಸಂಘಟಿಸಬೇಕಾಗಿದೆ ಮತ್ತು ಇದಕ್ಕೆ ಯೇಸುವಿನ ಮಾತುಗಳು ನಮಗೆ ದಾರಿದೀಪ ಮತ್ತು ನೈತಿಕ ಸ್ಥೈರ್ಯವನ್ನು ತುಂಬಲಿದೆ.
-0--0--0--0--0--0-
No comments:
Post a Comment