Saturday, 8 February 2020

ಸಮಯ!


- ಫಾದರ್ ವಿಜಯ ಕುಮಾರ್ ಪಿ, ಬಳ್ಳಾರಿ

 ಸಮಯ! ಎಲ್ಲಾ ಜೀವರಾಶಿಗಳಿಗೂ ವಿಶೇಷವಾಗಿ, ಮಾನವರೆಲ್ಲರಿಗೂ ದೇವರು ನೀಡಿರುವ ಅನಂತ ವರದಾನ. ಇದರ ಪ್ರತಿ ಕ್ಷಣವೂ ಅಮೂಲ್ಯವಾದುದು. ಇದಕ್ಕಿಂತ ಬೆಲೆಬಾಳುವ ಆಸ್ತಿ ಮತ್ತೊಂದಿಲ್ಲ. ಚಿನ್ನ, ಬೆಳ್ಳಿ, ಮುತ್ತು ರತ್ನಕ್ಕಿಂತಲೂ ಅತೀ ಶ್ರೇಷ್ಠವಾದುದು ಸಮಯ. ಇದು ನಿತ್ಯನೂತನ. ನಿರಂತರವೂ ಮುಂದೆ-ಮುಂದೆ ಸಾಗುತ್ತಲೇ ಇರುತ್ತದೆ. ಇದು ಎಂದೂ ಹಿಂದಕ್ಕೆ ಓಡುವುದಿಲ್ಲ. ಇದಕ್ಕೆ ಬಡವ-ಬಲ್ಲಿದನೆಂಬ ಭೇದವಿಲ್ಲ, ರೂಪವಂತ-ಕುರೂಪಿ ಎಂಬ ಅರಿವಿಲ್ಲ. ಸುಜ್ಞಾನಿ-ಅಜ್ಞಾನಿ ಎಂಬ ಆತಂಕವಿಲ್ಲ. 
ಇದು ಯಾರನ್ನೂ ಲೆಕ್ಕಿಸದೆ ಸತತವೂ ನಿಖರವಾಗಿ ಮುಂದೆ-ಮುಂದೆ ಓಡುತ್ತಲೇ ಇದೆ. ಜೀವಿಗಳ ಉಸಿರು ನಿಲ್ಲಬಹುದು. ಆದರೆ ಸಮಯ ಮಾತ್ರ ಎಂದೂ ನಿಲ್ಲದು. ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಅಥವಾ ದುರುಪಯೋಗ ಪಡಿಸಿಕೊಳ್ಳಲೂ ಬಹುದು. ಸದುಪಯೋಗ ಪಡಿಸಿಕೊಂಡವರು ಆಕಾಶಕ್ಕಿಂತಲೂ ಎತ್ತರಕ್ಕೆ ಬೆಳೆಯಬಹುದು. ಹಾಗೆಯೇ ದುರುಪಯೋಗ ಪಡಿಸಿಕೊಂಡವರು ಪಾತಾಳಕ್ಕಿಂತಲೂ ಆಳಕ್ಕೆ ಬಿದ್ದು ಪತನವಾಗಬಹುದು. 
ಇದು ಯಾರ ಸ್ವತ್ತೂ ಅಲ್ಲ. ಇದು ಗಾಳಿ ಬೆಳಕಿನ ಹಾಗೇ ಸರ್ವರಿಗೂ ಉಚಿತವಾಗಿ ದೇವರು ನೀಡಿರುವ ಅನಂತ ಹಾಗೂ ಅತ್ಯಂತ ಬೆಲೆ ಬಾಳುವ ಆಸ್ತಿ. ಸ್ಥಿರ ಮತ್ತು ಚರ ಆಸ್ತಿಗೆ ಬೆಲೆ ಕಟ್ಟಬಹುದು ಆದರೆ ಸಮಯವೆಂಬ ಆಸ್ತಿಗೆ ಬೆಲೆಕಟ್ಟಲಾಗದು. ಇದನ್ನು ಎಲ್ಲರಿಗೂ ಒಂದೇ ಪ್ರಮಾಣದಲ್ಲಿ (24 ತಾಸುಗಳನ್ನು) ನೀಡಲಾಗಿದೆ. ಭಿಕ್ಷುಕನಿಗೂ, ಉದ್ಯಮಿಗೂ, ಅಕ್ಷರಸ್ಥನಿಗೂ ಹಾಗೂ ನಿರಕ್ಷರಕುಕ್ಷಿಗೂ ಒಂದೇ. ಇದನ್ನು ಸದುಪಯೋಗ ಪಡಿಸಿಕೊಂಡಷ್ಟೂ ಮಾನವರ ಬದುಕು ಪ್ರಗತಿಯತ್ತ ಸಾಗಿ ಹಸನಾಗುತ್ತಲೇ ಹೋಗುತ್ತದೆ.
 "ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ನಾಣ್ನುಡಿಯನ್ನು ಕೇಳಿದ್ದೇವೆ. ಹಾಗೆಯೇ ಸಮಯದ ಪ್ರಜ್ಞೆ ಉಳ್ಳವನಿಗೆ ಸಮಯದ ಅಭಾವವಿರುವುದಿಲ್ಲ. ಸಮಯವನ್ನು ಯಾರಿಂದಲೂ ಕಟ್ಟಿಡಲು ಅಥವಾ ಬಚ್ಚಿಡಲು ಸಾದ್ಯವಿಲ್ಲ. ಅದು ನಿಲ್ಲುವ ಕುದುರೆಯಲ್ಲ ಸದಾ ಓಡುತ್ತಿರುವ ಕುದುರೆ. 
ಈ ಸಮಯ ಯಾವಾಗ ಪ್ರಾರಂಭವಾಯಿತು? ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಉತ್ತರಿಸುವುದು ಸ್ವಲ್ಪ ಕಷ್ಟಸಾಧ್ಯವೇ. ಆದರೆ ಇದು ತ್ರೈಏಕ ದೇವರ ಸೃಷ್ಟಿ ಕಾರ್ಯದೊಂದಿಗೆ ಪ್ರಾರಂಭವಾಯಿತೆಂದರೆ ಆಶ್ಚರ್ಯವೇನಿಲ್ಲ. ಯಾಕೆಂದರೆ "ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ" (ಯೊವಾನ್ನ 1:3) ಎಂದು ಸಂತ ಯೊವಾನ್ನನು ಸ್ಪಷ್ಟ ಪಡಿಸುತ್ತಾನೆ. ಹಾಗೆಯೇ ಕೀರ್ತನೆಕಾರನು "ಋತು ಸೂಚನೆಗಾಗಿ ನೀ ನಿರ್ಮಿಸಿದೆ ಚಂದ್ರನನು. ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು" (ಕೀರ್ತನೆ 104:19) ಎನ್ನುತ್ತಾನೆ. ಈ ಕಾರಣ ಸಮಯ ಮಾತ್ರವಲ್ಲ, ಎಲ್ಲದರ ಉಗಮವು ದೇವರೇ ಆಗಿದ್ದಾರೆ. ಇದು ನಿತ್ಯ ನಿರಂತರವಾಗಿ ಸಾಗುತ್ತಲೇ ಇದೆ.
 "ಮುತ್ತು ಒಡೆದರೆ ಹೋಯಿತು, ಹೊತ್ತು ಕಳೆದರೆ ಹೋಯಿತು" ಹಾಗೂ "ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು"? ಎಂಬ ಉಕ್ತಿಗಳನ್ನು ಕೇಳಿದ್ದೇವೆ. ಅಂದರೆ ಕಳೆದು ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ಬದಲಿಗೆ ಇರುವ ಸಮಯವನ್ನು ಜಾಗ್ರತೆಯಿಂದ ಸದುಪಯೋಗ ಪಡಿಸಿಕೊಳ್ಳಲು ಮರಳಿ ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಪ್ರಯತ್ನಿಸಬೇಕು ಹಾಗೂ ಸಫಲರಾಗುವುದು ಹೇಗೆ ಎಂದು ಪ್ರತಿ ಕ್ಷಣವೂ ಆಸಕ್ತಿಯಿಂದಲೂ, ನಿಷ್ಟೆಯಿಂದಲೂ ಯೋಜನೆ ರೂಪಿಸಬೇಕು. ಮಾನವನ ಶ್ರದ್ಧೆ, ಪ್ರಾಮಾಣಿಕತೆ, ಹಾಗೂ ಬದ್ಧತೆಗೆ ಸಮಯ ಖಂಡಿತ ಫಲನೀಡುತ್ತದೆ. 
ಆದರೆ ಇಂದು ಮಾನವರು ಸುಕಾಸುಮ್ಮನೆ ಕಾಲಹರಣಮಾಡಿ ಫಲವನ್ನು ಅಪೇಕ್ಷಿಸುತ್ತಾ ಇದ್ದಾರೆ. ಇದು ಖಂಡಿತ ಸಲ್ಲದು. ಬದಲಾಗಿ ಸರ್ವರಿಗೂ ಒಳಿತನ್ನು ಮಾಡುವ ಕಾರ್ಯದಲ್ಲಿ ನಿರಂತರವಾಗಿ ಮಾನವರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಂತ ಪೌಲನು "ಸತ್ಕಾರ್ಯಗಳನ್ನು ಮಾಡುವುದರಲ್ಲಿ ಬೇಸರಪಡದಿರೋಣ; ಆಗ ಸೂಕ್ತಕಾಲದಲ್ಲಿ ಸತ್ಫಲವನ್ನು ಕೊಯ್ಯುವೆವು ಎಂದೇ ಸಮಯ ಸಂದರ್ಭಗಳು ಇರುವಾಗಲೇ ಸರ್ವರಿಗೂ ಉಪಕಾರ ಮಾಡೋಣ" (ಗಲಾತ್ಯ 6:9-10) ಎನ್ನುತ್ತಾನೆ. ಏಕೆಂದರೆ "ಒಬ್ಬನು ಒಳ್ಳೆಯದನ್ನು ಮಾಡಬೇಕೆಂದು ತಿಳಿದಿದ್ದೂ ಅದನ್ನು ಮಾಡದಿದ್ದರೆ ಅದು ಅವನಿಗೆ ಪಾಪವಾಗಿರುತ್ತದೆ" (ಯಕೋಬ 4:17) ಎಂದು ಸಂತ ಯಕೋಬ ಎಚ್ಚರಿಸುತ್ತಾನೆ.
 ಇಂದು ಹಲವರು ಸಮಯವನ್ನು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಬಳಸಲು ಬಯಸುತ್ತಾರೆ. ಅಂಥವರಿಗೆ ಸಂತ ಯಕೋಬನು "ಇಂಥಿಂಥ ದಿನ ಇಂಥಿಂಥ ಪಟ್ಟಣಕ್ಕೆ ಹೋಗೋಣ, ಅಲ್ಲಿ ಒಂದು ವರ್ಷ ಇದ್ದು ಸಂಪಾದಿಸೋಣ, ಎಂದೆಲ್ಲಾ ಆಲೋಚಿಸುವವರೆ, ಈಗ ಕೇಳಿ; ನೀವು ಇಷ್ಟೆಲ್ಲಾ ಆಲೋಚಿಸಿದರೂ ನಾಳೆ ಏನಾಗುವುದೋ ನಿಮಗೇ ತಿಳಿಯದು. ನಿಮ್ಮ ಜೀವಮಾನ ಎಷ್ಟು ಮಾತ್ರದ್ದು? ಈಗ ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹೊಗೆಯಂತೆ ಅದು" (ಯಕೋಬ 4:13-14) ಎಂದು ತಿಳಿ ಹೇಳುತ್ತಾನೆ. ಹಾಗೆಯೇ ಸಂತ ಪೌಲನು "ನೆರೆಯವರ ವಿಷಯದಲ್ಲಿ ಜಾಣತನದಿಂದ ವರ್ತಿಸಿರಿ ನಿಮಗಿರುವ ಸಮಯ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳಿರಿ" (ಕೊಲೊಸ್ಸೆ 4:5) ಎಂದು ವಿನಂತಿಸುತ್ತಾನೆ.
 ಸಮಯವನ್ನು ಲೌಕಿಕ ಶ್ರೇಯಸ್ಸಿಗೆ ಹಾಗೂ ಅಭಿವೃದ್ಧಿಗೆ ಮಾತ್ರ ಬಳಸಿಕೊಂಡರೆ ಸಾಲದು ಯಾಕೆಂದರೆ ಅವು ಅಳಿದು ಹೋಗುತ್ತವೆ. ಆಧ್ಯಾತ್ಮಿಕ ಪುನಶ್ಚೇತನಕ್ಕೆ ಹಾಗೂ ಸ್ವರ್ಗೀಯವಾದವುಗಳಿಗೆ ಸಮಯವನ್ನು ಬಳಸಿಕೊಂಡರೆ ಅದು ಮಾನವರಿಗೆ ಸಂತೃಪ್ತಿಯನ್ನು ಶಾಶ್ವತ ಬದುಕನ್ನು ನೀಡಬಲ್ಲದು. ಈ ಬದುಕು ಮುಂದಿನ ಬದುಕಿಗೆ ನಾಂದಿ. ಅಂದರೆ ಈ ಅಳಿದು ಹೋಗುವ ಬದುಕಿನ ಮೂಲಕವೇ ಶಾಶ್ವತವಾದ ಬದುಕಿನ ತಾಣವನ್ನು ಸೇರಲು ಸಾಧ್ಯ. ಈ ಕಾರಣ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸದಾ ತವಕಿಸಬೇಕು. "ನಮ್ಮ ಗಮನ ಕೇಂದ್ರಿಕೃತವಾಗಿರುವುದು ಗೋಚರವಾದವುಗಳ ಮೇಲಲ್ಲ, ಅಗೋಚರವಾದವುಗಳ ಮೇಲೆ, ಗೋಚರವಾದವು ತಾತ್ಕಾಲಿಕ: ಅಗೋಚರವಾದವುಗಳು ಶಾಶ್ವತ" (2 ಕೊರಿಂಥಿ 4:18) ಎನ್ನುತ್ತಾನೆ ಸಂತ ಪೌಲ. ಈ ಕಾರಣ ಸುಮ್ಮನೆ ಕಾಲಹರಣ ಮಾಡಿ ಪ್ರಗತಿ ಸಾಧಿಸಬೇಕು, ಕೀರ್ತಿ ಗಳಿಸಬೇಕು ಎಂದರೆ ಅದು ಖಂಡಿತ ಆಗದು. ಬದಲಿಗೆ ಶ್ರಮಪಟ್ಟು ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಅದು ಮಾನವರಿಗೆ ಜ್ಞಾನಸಂಪತ್ತನ್ನು, ಲೌಕಿಕ ಸಂಪತ್ತನ್ನೂ ಹಾಗೂ ಶಾಶ್ವತ ನೆಮ್ಮದಿಯ ತಾಣವನ್ನು ಸಹ ಗಳಿಸಿಕೊಡುತ್ತದೆ. ಸಮಯದ ಸದುಪಯೋಗ ಮಾನವರ ಬದುಕಿನ ಸಕಾರಾತ್ಮಕ ಬೆಳವಣಿಗೆಗೆ ವರದಾನ.
ಇಂದಿನ ಶಾಲಾ-ಕಾಲೇಜು ವಿದ್ರ್ಯಾಥಿಗಳು, ಅಧ್ಯಾಪಕ ಬಳಗ ಹಾಗೂ ಇತರ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವುದು ಕಷ್ಟಕರವಾಗಿದೆ. ಮೊಬೈಲ್ ಇಂದು ಸರ್ವರ ಜೀವನದ ಕೇಂದ್ರಬಿಂದುವಾಗಿಬಿಟ್ಟಿದೆ ಎಂದರೆ ಅತಿಶಯೋಕ್ತಿಯೇನಲ್ಲ! ಇಂದು ದೇಶದ ಶಕ್ತಿಯಾಗಿರುವ ಯುವ ಜನಾಂಗವೂ ಸಹ ಸಮಯವನ್ನು ಪೋಲು ಮಾಡುತ್ತಿದ್ದಾರೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ಇವರು ಉದಾಸೀನತೆ ತೋರುತ್ತಿದ್ದಾರೆ. ಅಜ್ಞಾನದಿಂದ ಸುಜ್ಞಾನದೆಡೆಗೆ ಹಾಗೂ ಅಶಿಸ್ತಿನಿಂದ ಶಿಸ್ತಿನೆಡೆಗೆ ಮುಖ ಮಾಡದೇ ಸಮಯವನ್ನು ವೃಥಾÀ ವ್ಯಯ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಇವರಿಗೆ ಸಮಯದ "ಮೌಲ್ಯ" ತಿಳಿಯದಿರುವುದೇ ಆಗಿದೆ. ಸಮಯ ಮೀರುವ ಮುನ್ನ ಎಲ್ಲರೂ ಇದನ್ನು ಅರಿತು ಕೊಳ್ಳುವುದು ಸೂಕ್ತ ಏಕೆಂದರೆ ಮಾನವ ಜೀವನ ಸಂಪೂರ್ಣವಾಗಲು ಸಮಯದ ಸದುಪಯೋಗ ಬಹು ಅವಶ್ಯಕ.

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...