Thursday, 13 February 2020

ಕ್ರಿಸ್ತನ ಅಧ್ಯಾತ್ಮ (ಭಾಗ - 2)


ಜೋವಿ 
ಆಧ್ಯಾತ್ಮಿಕ ಹಸಿವು
2004 ರಂದು ಪ್ರಕಟವಾದ ಡ್ಯಾನ್ ಬ್ರೌನನ the Da Vinci Code ಅತ್ಯಧಿಕವಾಗಿ ಮಾರಾಟಗೊಂಡು ದಾಖಲೆಯನ್ನು ಸೃಷ್ಟಿಸಿದ ಒಂದು ಬೆಸ್ಟ್ ಸೆಲರ್ ಕಾದಂಬರಿ. ಈ ಕಾದಂಬರಿ ಆಧಾರಿತವಾಗಿ ಮೂಡಿಬಂದ ಚಲನಚಿತ್ರ ಕೂಡ ಹಣಗಳಿಕೆಯಲ್ಲಿ ಎಲ್ಲಾ ದಾಖಲೆಗಳನ್ನು ಧೂಳಿಪಟವಾಗಿಸಿತ್ತು. ಇಂತಹ ಪುಸ್ತಕಗಳು ಮತ್ತು ಚಲನಚಿತ್ರಗಳು ಜನಪ್ರಿಯಗೊಳ್ಳಲು ಕಾರಣವೇನು? ಇದು ನಮ್ಮ ಈಗಿನ ಮನಸ್ಥಿತಿಯ ಬಗೆ ಏನು ಹೇಳುತ್ತದೆ? ದ ವಿಂಚಿ ಕೋಡ್ ಒಂದು ಐತಿಹಾಸಿಕ ಕಾದಂಬರಿಯಾದರೂ ಇತಿಹಾಸ ದೋಷಗಳಿಂದ ಕೂಡಿದುದಲ್ಲದೆ ಇದು ಕಲೆಯ ಇತಿಹಾಸ ಮತ್ತು ಕ್ಯಾಥೊಲಿಕ್ ಚರ್ಚುಗಳ ರಚನೆ ಅಥವಾ ಸಂಘಟನೆಯ ಬಗೆಗಿನ ಗಮನಾರ್ಹ ಅಜ್ಞಾನವನ್ನು ತೋರಿಸುವ ಕಟ್ಟುಕತೆಯ ಕಾದಂಬರಿ. ಆದರೂ ಜನರು ಇಂತಹ ಕಾದಂಬರಿ ಬಗೆ ಗಮನಾರ್ಹ ಆಸಕ್ತಿ ತೋರಿಸಿದ್ದೇ ಆಶ್ಚರ್ಯ!
ಡಾನ್ ಬ್ರೌನ್ ಕಾದಂಬರಿಯ ಮೂಲ ಕಥೆ ಇಷ್ಟೆ: ಯೇಸು ಮೇರಿ ಮಗ್ದಲೇನಳನ್ನು ಮದುವೆಯಾಗಿದ್ದು, ಅವರಿಬ್ಬರ ಕೂಡುವಿಕೆಯಲ್ಲಿ ಸಾರಾ ಎಂಬ ಮಗು ಹುಟ್ಟಿ, ಈ ವಂಶವೂ ಮುಂದುವರಿದು ಇಂದಿಗೂ ಅಸ್ತಿತ್ವದಲ್ಲಿದೆ ಎಂಬ ಚಿದಂಬರ ರಹಸ್ಯವನ್ನು ಸುಮಾರು ಎರಡು ಸಾವಿರ ವರ್ಷಗಳಿಂದ ರಹಸ್ಯವಾಗಿಸಿಕೊಂಡು ಕೆಲ ಜನರಿಗೆ ಮಾತ್ರ ಸಂಕೇತಭಾಷೆಯ ಮೂಲಕ ಹಸ್ತಾಂತರಿಸಲಾಗುತ್ತಿದೆಂಬುದು ಕಾದಂಬರಿ ಕಥೆಯ ಒಟ್ಟು ಒಳಹಂದರ. ಚರ್ಚಿನ ಆರಂಭಿಕ ದಿನಗಳಲ್ಲಿ ಮೇರಿ ಮಗ್ದಲೇನಳು ವಹಿಸಿದ ಪಾತ್ರದ ಬಗೆಗಿನ ಪಾಂಡಿತ್ಯಪೂರ್ಣ ಆಸಕ್ತಿಯನ್ನು ಕೆರಳಿಸಿರುವ ಇತ್ತಿಚಿನ ದಿನಗಳಲ್ಲಿ ಈ ಕಾದಂಬರಿ ಎಲ್ಲರ ಗಮನ ಸೆಳೆದಿದ್ದರಲ್ಲಿ ಆಶ್ಚರ್ಯವೆನಿಲ್ಲ!
 ಡಾನ್ ಬ್ರೌನ್ ಕಾದಂಬರಿಯ ಮಹತ್ವ ಕಾದಂಬರಿಯ ವಿಷಯದ ನಿಖರತೆಯಲಾಗಲಿ ಅಥವಾ ಅನಿಖರತೆಯಲಾಗಲಿ ಇಲ್ಲ. ಮೂಲತಃ ಈ ಕಾದಂಬರಿ ಒಂದು ಮಾಪನವಾಗಿ/ಅಳತೆಗೋಲಾಗಿ ನಮ್ಮ ಈಗಿನ ಮನಸ್ಥಿತಿಯನ್ನು ಹಾಗೂ ಜನರು ಆಂತರಿಕವಾಗಿ ಯಾವುದಕ್ಕಾಗಿ ಹಸಿದಿದ್ದಾರೆ ಎಂಬುದರ ಬಗ್ಗೆ ವಿಮರ್ಶಾತ್ಮಕವಾದ ಮಾಹಿತಿಯನ್ನು ನಮಗೆ ಒದಗಿಸುತ್ತದೆ. ಬಹಳಷ್ಟು ಜನ ವಿಶೇಷವಾಗಿ ಯುವಜನರು ಗತಕಾಲದ ಖಚಿತತೆಗಳಿಗೆ ವಿಮುಖರಾಗಿದ್ದಾರೆ. ಧಾರ್ಮಿಕ, ವೈಜ್ಞಾನಿಕ, ಸಾಂಸ್ಕೃತಿಕ ರಾಜಕೀಯ ಹಾಗೂ ಇತಿಹಾಸದ ಖಚಿತತೆಗಳಿಗೆ ಗುಡ್ ಬೈ ಹೇಳಿಬಿಟ್ಟಿದ್ದಾರೆ. ಎಲ್ಲವನ್ನೂ ಪ್ರÀಶ್ನಿಸಲಾಗುತ್ತಿದೆ. ಇವತ್ತು ಬದುಕಿನ ವಿವಿಧ ಕ್ಷೇತ್ರಗಳಲ್ಲಿನ ವಿದ್ವಾಂಸರು ಅಂದರೆ ಧಾರ್ಮಿಕ ಪಂಡಿತರು, ವಿಜ್ಞಾನಿಗಳು ಬೋಧಿಸಿದ್ದನ್ನು ಇಂದು ಸಂಶಯದಿಂದ ನೋಡಲಾಗುತ್ತಿದೆ. ಸುಮಾರು ಶತಮಾನಗಳಿಂದ ಪರಿಶೋಧಿಸಿ ಪ್ರತಿಷ್ಠಾಪಿಸಿದ ಯಾವುದೇ ರೀತಿಯ ತತ್ವಗಳಿರಬಹುದು, ನಂಬಿಕೆಗಳಿರಬಹುದು ಎಲ್ಲವನ್ನೂ ಇಂದಿನ ಮನುಷ್ಯ ಅಪನಂಬಿಕೆಯ/ಸಂಶಯ ಕಣ್ಣುಗಳಿಂದ ನೋಡುತ್ತಿದ್ದಾನೆ. ಆದ್ದರಿಂದ ನಮ್ಮದು ಅಭೂತಪೂರ್ವ ಸಂಶಯವಾದದ ಯುಗವೆಂದೇ ಕರೆಯಬಹುದು. ಒಂದು ಅಭಿಪ್ರಾಯ ಮತ್ತೊಂದು ಅಭಿಪ್ರಾಯದಷ್ಟೇ ಉತ್ತಮ. ಒಟ್ಟಾರೆ ಏನು ಹೇಳಬಹುದೆಂದರೆ: ಕೆಲವೊಂದು ಅಭಿಪ್ರಾಯಗಳು ಹಳೆಯದಾಗಿ ನೀರಸವಾಗಿದ್ದರೆ, ಇನ್ನೂ ಕೆಲವು ಆಸಕ್ತಿದಾಯವಾಗಿವೆ ಅಷ್ಟೆ. 
ದಿ ಡಾ ವಿನ್ಸಿ ಕೋಡ್ ಕಾದಂಬರಿಗೆ ಜನರು ಆಕರ್ಷಿತಗೊಳ್ಳಲು ಕಾರಣವೇನಿರಬಹುದು? ಇದು ಸುಮಾರು ವರ್ಷಗಳ ಧಾರ್ಮಿಕ ಖಚಿತತೆ ಅಥವಾ ಖಚಿತ ಎಂದು ಭಾವಿಸಿಕೊಂಡಿದ್ದ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ಮಾಡಿ ಹಿಂದೆ ಏನಾಗಿರಬಹುದು ಎಂಬ ಊಹಿಸಿ ಒಂದು ಕಲ್ಪಿತ ಒಳಸಂಚಿನ ಕಥೆಯನ್ನು ಹೇಳುವುದರಿಂದ ಜನರು ಇದರ ಮೋಹಕ್ಕೆ ಒಳಗಾಗಿರಬಹುದೆಂದು ಹೇಳಬಹುದು. ಈ ಕಥೆಯಲ್ಲಿ ನಿಜಾಂಶವಿರಬಹುದು ಇಲ್ಲದೆಯೂ ಇರಬಹುದು! ಆದರೆ ಇದು ಯಾವುದೇ ಧಾರ್ಮಿಕ ಅಧಿಕಾರಯುಕ್ತ ಬೋಧನೆಯ ಕಟ್ಟುಪಾಡಿಗೆ ಒಳಗಾಗಿಲ್ಲವೆಂದೇ ಹೇಳಬಹುದು. 
ದಿ ಡಾ ವಿನ್ಸಿ ಕೋಡ್ ಕಾದಂಬರಿಯು ನಮ್ಮ ಕಲ್ಪನಾ ಶಕ್ತಿಯನ್ನು ಮುಕ್ತಗೊಳಿಸಿ ಸಕಲ ಸಾಧ್ಯತೆಗಳನ್ನು ಪರಿಗಣಿಸುವಂತೆ ಮುತುವರ್ಜಿ ವಹಿಸುತ್ತದೆ. ಇದು ನಮ್ಮ ಹೇರಿದ ಖಚಿತತೆಗಳ/ ಸಿದ್ಧಾಂತಗಳ ಮತ್ತು ಮತತತ್ವಗಳಿಂದ ಮನಸ್ಸನ್ನು ಮುಕ್ತಗೊಳಿಸಲು ನಮಗೆ ಒಂದು ಸೂಚಿಯಾಗುತ್ತದೆ.
ಜನರ ಈ ರೀತಿಯ ವರ್ತನೆಯನ್ನು ಬುದ್ಧಿಜೀವಿಗಳು ಆಧುನಿಕೋತ್ತರ ಮನೋಭಾವ ಅಥವಾ ಆಟಿಟ್ಯೂಡ್ ಅಂತ ಕರೆಯುತ್ತಾರೆ. ಈ ರೀತಿಯ ಮನೋಭಾವ ಎಷ್ಟು ವಿಸ್ತಾರಗೊಂಡಿದೆ ಎಂದು ಅಳೆಯಲು ದಿ ಡಾ ವಿನ್ಸಿ ಕೋಡ್ ಕಾದಂಬರಿಯು ನಮಗೆ ಮಾಪನವಾಗಿ ಸಹಾಯಕ್ಕೆ ಬರುತ್ತದೆ. ನಿಜವಾಗಲೂ ಇದು ನಮ್ಮ ಈಗಿನ ಕಾಲಘಟ್ಟದ ಮನಸ್ಥಿತಿಯ ಚಿತ್ರಣವೆಂದೇ ಹೇಳಬಹುದು.
ಆಧುನಿಕೋತ್ತರತೆ(Post Modernism)
ಆಧುನಿಕ ಯುಗವನ್ನು ನಾವು ವೈಚಾರಿಕ ಯುಗ ಎಂದ ಕರೆಯಬಹುದು. ಇದು ಜ್ಞಾನೋದಯ ಯುಗದೊಂದಿಗೆ ಆರಂಭಗೊಂಡಿತ್ತು. ಕಾಕತಾಳಿಯ ಎಂಬಂತೆ ಈ ಕಾಲದ ಜತೆಗೆ ನ್ಯೂಟನ್ನನ ಯಾಂತ್ರಿಕಯುಗದ ನೋಟ ಕೂಡ ಸೇರಿಕೊಂಡಿತ್ತು. ಇದನ್ನು ಕೈಗಾರಿಕಾ ಬಂಡವಾಳಶಾಹಿ ಮತ್ತು ಅನಿಯವಿತ ಆರ್ಥಿಕ ಬೆಳವಣಿಗೆಯ ಪರ್ವ ಅಂತಲೂ ಕರೆಯಬಹುದು. 
ಈ ಆಧುನೀಕರಣವು ವಿಜ್ಞಾನ, ತಂತ್ರಜ್ಞಾನ ವೈಚಾರಿಕ ಪ್ರಗತಿಗಳಿಂದ ಮಾನವನ ಸಮಸ್ಯೆಗಳು ಪರಿಹಾರ ಕಂಡುಕೊಂಡು ಆಧುನಿಕಪೂರ್ವ ಯುಗದಲ್ಲಿದ್ದ ಮೂಡನಂಬಿಕೆಗಳು ಕ್ರಮೇಣ ಮಾಸಿದವು. ಧರ್ಮ ನೈತಿಕತೆ ಮತ್ತು ಕಲೆ ಮನುಷ್ಯನ ಖಾಸಗಿತನಕ್ಕೆ ವರ್ಗಾಯಿಸಲ್ಪ್ಪಟ್ಟವು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಧರ್ಮ ನೈತಿಕತೆ ಮತ್ತು ಕಲೆ ಖಾಸಗಿ ಅಥವಾ ವೈಯಕ್ತಿಕ ವಿಷಯಗಳಾದ್ದವು. ಈ ಕಾಲದಲ್ಲಿ ಮಾನವನಿಗೆ ಬಹು ಮುಖ್ಯವಾಗಿದ್ದು ಆರ್ಥಿಕ ಮತ್ತು ರಾಜಕೀಯ ಪ್ರಗತಿಗಳು ಮಾತ್ರ.
ಕ್ರಮೇಣ ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಆಧುನಿಕತೆಯ ಕಸನಸಿನ ಗಾಗೋಪುರ ಕುಸಿಯಲು ಆರಂಭಿಸಿತ್ತು. ಕೈಗಾರಿಕೆಯಲ್ಲಿ ಮುಂದುವರಿದ ರಾಷ್ಟ್ರಗಳು; ನಾಜಿ ಕೈವಶವಾಗಿದ್ದ ಹಾಗೂ ಬಲಪಂಥೀಯ ಇನ್ನು ಇತರ ದೇಶಗಳು ವಿಚಾರಹೀನವಾಗಿ ಹಾಗೂ ಅಮಾನುಷವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಅವರ ಚಿತ್ರಹಿಂಸೆ, ಕೌರ್ಯ, ಹಿಂಸಿಸುತ್ತಿದ್ದ ವಿಧಾನಗಳನ್ನು ಇಂದಿಗೂ ಮಾನವೀಯತೆಯ ಜತೆ ಸಂಧಾನಗೊಳಿಸಲಾಗುತ್ತಿಲ್ಲ.
ಇದೇ ಸಮಯದಲ್ಲಿ, ತಮ್ಮದೇ ಆದ ಆಧುನಿಕತೆಯ ರೂಪ ಮತ್ತು ಮಾನವನ ಪ್ರಗತಿಯ ದೃಷ್ಟಿ ಇರಿಸಿಕೊಂಡಿದ್ದ ಕಮ್ಯುನಿಷ್ಟ್ ರಾಷ್ಟ್ರಗಳು ಕೂಡ ಏಕಚಕ್ರಾಧಿಪತ್ಯ ಮತ್ತು ದಬ್ಬಾಳಿಕೆಯನ್ನು ತೋರಿಸಲು ಪ್ರಾರಂಭಿಸಿದರು. ಶತಮಾನದ ಅಂತ್ಯಕ್ಕೆ ಕಮ್ಯುನಿಷ್ಟ ಆಡಳಿತವು ನಮಗೆ ಭಯೋತ್ಪಾದನೆಯನ್ನು ನಿರ್ಮೂಲ ಮಾಡಲು ಯುದ್ಧಕ್ಕೆ ದೃಢಸಂಕಲ್ಪ ತಳೆಯುತ್ತಿರುವ, ಇನ್ನೊಂದು ಕಡೆ ಪರಿಸಾರ ನಾಶ ಮಾಡುತ್ತಿರುವ ಒಂದು ಸೂಪರ್ ಪವರ್ ಕೊಟ್ಟಿದೆ. ನಾವು ಇದನ್ನು ಮಾನವನ ಪ್ರಗತಿ ಎಂದು ಕರೆಯಬಹುದಾ?
ಈ ಎಲ್ಲಾ ವಿದ್ಯಮಾನಗಳಿಂದಾಗಿ, ಯಾವುದೇ ತತ್ವವನ್ನು ಅಥವಾ ಸಿದ್ಧಾಂತವನ್ನು ಒಪ್ಪದೆ, ಅವುಗಳನ್ನು ಸಂಶಯಾಸ್ಪದವಾಗಿ ನೋಡುವ ಒಂದು ಪೀಳಿಗೆಯಿದೆ. ಅವರ ಪ್ರಕಾರ ಯಾವುದೇ ರೀತಿಯ ಯೋಜನೆಗಳು, ರಂಜನೀಯ ನಿರೂಪಣೆಗಳು ಜಗತ್ತನ್ನು ರಕ್ಷಿಸುವುದಿಲ್ಲ. ಅವೆಲ್ಲವೂ ಕೆಲಸಕ್ಕೆ ಬಾರದಾಗಿವೆ.
ಧಾರ್ಮಿಕ ಸಿದ್ಧಾಂತಗಳದ್ದು ಕೂಡ ಇದೇ ಹಣೆಬರಹ. ಹಗರಣಗಳಿಂದ ಜರ್ಜರಿತವಾಗಿರುವ ಚರ್ಚ್ ತನ್ನ ಅಧಿಕಾರವನ್ನು ದುರ್ಬಲಗೊಳಿಸಿಕೊಂಡಿದೆ. ಅನೇಕರಿಗೆ ಇಂದು ಧಾರ್ಮಿಕ ಆಡಳಿತವು ವಿಭಜಕ, ಬಹಿಷ್ಕರಿಸುವ ಹಾಗೂ ದಬ್ಬಾಳಿಕೆಯ ಕೇಂದ್ರವಾಗಿದೆ.
(ಮುಂದುವರಿಯುವುದು)
-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...