Thursday, 13 February 2020

ಲೋಟನ ಮಡದಿ


ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ


ದಿನನಿತ್ಯ ತನ್ನನ್ನು ತಾನು ವ್ಯವಹಾರಗಳಲ್ಲಿ ತೊಡಗಿಸಿ, ಮನೆಯ ಸ್ವಚ್ಛತೆ, ಅಡಿಗೆ ಕಾರ್ಯಗಳು, ನೆರೆಹೊರೆಯವರೊಂದಿಗೆ ಹರಟೆ ಹೊಡೆದು ಜೀವನ ಸಾಗಿಸುತ್ತಿದ್ದ ಲೋಟನ ಮಡದಿಗೆ ಅವಳ ಜೀವನ ಇನ್ನು ಕೆಲವೇ ಗಂಟೆಗಳಲ್ಲಿ ಮುಗಿಯಲಿದೆ ಎಂಬ ಪರಿವೆ ಇರಲಿಲ್ಲ. ಅವಳು ಕೆಲ ವರ್ಷಗಳ ಹಿಂದಷ್ಟೇ ಆರೋನನ ಮಗನಾದ ಲೋಟನನ್ನು ಮದುವೆಯಾಗಿ, ಇಬ್ಬರೂ ಸುಖ ಸಮೃದ್ಧಿಯ ಜೀವನ ನಡೆಸುತ್ತಿದ್ದರು. ಕಡೆಗೆ ದುಷ್ಪರೇ ತುಂಬಿದ್ದ ಸೋದೋಮ್ ನಗರದಲ್ಲಿ ನೆಲೆಯೂರಿದರು. ಆ ದುಷ್ಟ ನಗರದ ಸಂಹಾರಕ್ಕಾಗಿ ಸ್ವರ್ಗದಿಂದ ಸ್ವತಃ ದೇವದೂತರನ್ನೇ ಕಳುಹಿಸಿಕೊಡಲಾಯಿತು. 
ದೂತರು ಬರುವ ವೇಳೆ ನಗರದ ಬಾಗಿಲಲ್ಲೇ ಇದ್ದ ಲೋಟನು ಆ ಹೊಸಬರನ್ನು ಕಂಡು ಅವರನ್ನು ತನ್ನ ಮನೆಗೆ ಕರೆದೊಯ್ದು ಸ್ವಾಗತಿಸಿ ಸತ್ಕರಿಸಿದನು. ರಾತ್ರಿಯಾಗುತ್ತಿದ್ದಂತೆ ಏನಾಗಬಹುದೋ ಎಂಬ ಆತಂಕದೊಂದಿಗೆ ದೂತರೆಲ್ಲರನ್ನೂ ತನ್ನ ಮನೆಯಲ್ಲಿ ರಾತ್ರಿ ಕಳೆಯಲು ವಿನಂತಿಸಿದನು. ಆ ಕಾಲದಲ್ಲಿ ಅತಿಥಿ  ಸತ್ಕಾರವು ಪವಿತ್ರತೆಯ ಗುರುತಾಗಿದ್ದರಿಂದ ಆ ಹೊಸಬರನ್ನು ಲೋಟನ ಮಡದಿಯೂ ಸಹ ಉತ್ಸಾಹದಿಂದ ಸ್ವಾಗತಿಸಿ ಸತ್ಕರಿಸಿದಳು. ಇನ್ನೇನು ಮಲಗುವ ವೇಳೆ, ಹೊರಗಿನಿಂದ ಮಾತುಗಳು ಬರಲಾರಂಭಿಸಿದವು. ಮೊದಲಿಗೆ ಮುಸುಕುಗಟ್ಟಿದ ಮಾತುಗಳು, ನಂತರ ಪ್ರತಿಧ್ವನಿಸುವ ನಗೆ, ಕೊನೆಗೆ ಕೊಳಕು ಮಾತುಗಳು ಮನೆಯ ಸುತ್ತುವರಿದು ಗದ್ದಲ ಹೆಚ್ಚಿತು. ಬಾಗಿಲು ತೆಗೆದು ಅತಿಥಿಗಳನ್ನು ನಮ್ಮ ಖುಷಿಗೆ ಒಪ್ಪಿಸಿ ಎಂದು ಒರಟು ಧ್ವನಿಗಳು ಕೂಗಿದವು. ಇಲ್ಲ ಸ್ನೇಹಿತರೆ ಇಂತಹ ದುಷ್ಟ ಕಾರ್ಯವನ್ನು ಎಸಗಬೇಡಿ ಎಂದು ಲೋಟನು ಕಿರುಚುತ್ತಾ ಮರುತ್ತರ ಕೊಟ್ಟನು. ಅವರು ಬಗ್ಗದ ಕಾರಣ ನಿಸ್ತೇಜನಗೊಳಿಸುವ ಚೌಕಾಸಿ ಪ್ರಾರಂಭಿಸಿದನು. ಯಾರೊಂದಿಗೂ ಮಲಗದ ಅವನ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಅವರನ್ನು ಹೊರಗೆ ಕಳುಹಿಸುವೆನು, ಅವರೊಂದಿಗೆ ನೀವು ಇಷ್ಟ ಬಂದದ್ದು ಮಾಡಿ. ಆದರೆ ನನ್ನ ಮನೆಯಲ್ಲಿ ತಂಗಿ ಆಶ್ರಯ ಪಡೆಯುತ್ತಿರುವ ಈ ಜಾಣರಿಗೆ ಏನೂ ಮಾಡಬೇಡಿ ಎಂದು ಬೇಡಿಕೊಂಡನು. ಆದರೆ ಸೊದೋಮಿನ ಆ ಜನ ಯಾವುದನ್ನೂ ಲೆಕ್ಕಿಸದೆ ಬಾಗಿಲು ಹೊಡೆಯಲಾರಂಬಿಸಿದರು. ಆಗ ಒಮ್ಮೆಲೆ ದೂತರು ಹೊರಗೆ ಹೋಗಿ ಲೋಟನನ್ನು ಮನೆಯೊಳಕ್ಕೆಳೆದು ಬಾಗಿಲಲ್ಲಿದ್ದ ದುಷ್ಟರನ್ನು ಕುರುಡಾಗಿಸಿದರು. ಬಳಿಕ ಅವರು ಲೋಟನ ಕಡೆಗೆ ತಿರುಗಿ " ಈ ನಗರದಲ್ಲಿ ನಿನ್ನವರು, ನಿನಗೆ ಬೇಕಾದವರು ಯಾರೆಲ್ಲ ಇದ್ದಾರೋ ಅವರೆಲ್ಲರನ್ನೂ ಕರೆದುಕೊಂಡು ಕೂಡಲೇ ಹೊರಡು. ಇಲ್ಲಿಂದ ಅವರೆಲ್ಲರನ್ನೂ ಹೊರಗೆ ಕರೆದುಕೊಂಡು ಹೋಗು. ಏಕೆಂದರೆ ನಾವು ಈ ನಗರವನ್ನು ನಾಶಗೊಳಿಸುತ್ತವೆ ಎಂದು ಆಜ್ಞಾಪಿಸಿದರು. ಲೋಟನ ಅಳಿಯನಾದರೋ ದೂತರು ಹಾಸ್ಯ ಮಾಡುತ್ತಿದ್ದಾರೆ ಎಂದುಕೊಂಡು ಹೊರಡಲು ನಿರಾಕರಿಸಿದ. ಮುಂಜಾನೆಯ ವೇಳೆ ದೂತರು ಲೋಟನನ್ನು ಮತ್ತೊಮ್ಮೆ ಪ್ರಚೋದಿಸಿದರು. ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೊರಡದಿದ್ದರೆ, ಇಡೀ ನಗರದೊಂದಿಗೆ ಅವರೂ ನಾಶವಾಗುವರೆಂದು ಎಚ್ಚರಿಸಿದರು. ಆದರೂ ಹಿಂಜರಿಯುತ್ತಿದ್ದ ಕುಟುಂಬವನ್ನು ಕಂಡು, ದೂತರೇ ಅವರುಗಳ ಕೈ ಹಿಡಿದು ಹೊರಗೆಳೆದು, ಓಡಿಹೋಗಿ ಜೀವ ಉಳಿಸಿಕೊಳ್ಳಿ! ಹಿಂದಿರುಗಿ ನೋಡದೆ, ಎಲ್ಲೂ ನಿಲ್ಲದೆ, ಪರ್ವತದತ್ತ ಓಡಿಹೋಗಿ, ಇಲ್ಲವಾದರೆ ನೀವೂ ನಾಶವಾಗುತ್ತೀರಿ, ಎಂದು ಕಟ್ಟೆಚ್ಚರ ನೀಡಿದರು. ಲೋಟನ ಕುಟುಂಬ ಓಡಿಹೋಗುತ್ತಲೇ ಜೋಹಾರ್ ಎಂಬ ಪುಟ್ಟ ಹಳ್ಳಿಗೆ ತಲುಪುತಿದ್ದ ಹಾಗೆ, ಸೂರ್ಯ ಉದಯಿಸಿದ್ದ, ಸುಡುವ ಗಂಧಕದಲ್ಲಿ ಇಡೀ ಸೋದೋಮ್ ನಗರವೇ ಮುಳುಗಿ ಹೋಗಿತ್ತು. ಪುರುಷರು, ಮಹಿಳೆಯರು, ಮಕ್ಕಳು, ದನಕರುಗಳು, ಹೊಲಗದ್ದೆಗಳು ಎಲ್ಲವೂ ಇಲ್ಲವಾಗಿದ್ದವು. ಘೋರ ಪಾಪಕ್ಕೆ ಘೋರ ತೀರ್ಪು ಅದಾಗಿತ್ತು. 
ಲೋಟನು ಮತ್ತು ಅವರ ಮಕ್ಕಳು ಊಹಿಸಿಕೊಂಡಿದ್ದಕ್ಕಿಂತ ಭಯಾನಕವಾಗಿತ್ತು ಆ ತೀರ್ಪು. ಬದುಕುಳಿದೆವೆಂಬ ತೃಪ್ತಿಯೊಂದಿಗೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ, ಅವರಲ್ಲಿ ಯಾರೋ ಒಬ್ಬರೂ ಕಳೆದು ಹೋಗಿದ್ದಾರೆ ಎಂದು ದಿಗ್ಭ್ರಮೆಗೊಂಡು, ಸಿಗುವರು ಎಂಬ ಭರವಸೆಯೊಂದಿಗೆ ಅವರು ಕಳೆದು ಹೋದವರನ್ನು ಹುಡುಕಿರಬಹುದು. ಮಹಿಳೆಯ ಆಕಾರದಲ್ಲಿ ಸೊದೋಮಿನತ್ತ ತಿರುಗಿ ಗಗನದತ್ತ ನೋಡುತ್ತಿರುವ ಬಿಳಿಯ ಉಪ್ಪಿನ ಕಂಬದ ಆಕೃತಿಯು ಕಣ್ಣಿಗೆ ಬೀಳುವ ವರೆಗೂ ಹುಡುಕಿರಬಹುದು. ಉಪ್ಪಿನ ಕಂಬವನ್ನು ನೋಡಿ ಅವರಿಗೆ ಅದು ಲೋಟನ ಮಡದಿ ಎಂದು ಖಾತರಿಯಾಗುತ್ತದೆ.
ದೇವದೂತರ ಸ್ಪಷ್ಟ ಎಚ್ಚರಿಕೆಯ ನಂತರವೂ ಅವಳು ಏಕೆ ತಿರುಗಿದಳು? ಅವಳ ಮನಸ್ಸು ನಗರದ ಸುಖ ಸಂತೃಪ್ತಿಯ ಐಷಾರಾಮಿ ಜೀವನಕ್ಕೆ ಅಷ್ಟೊಂದು ಹೊಂದಿಕೊಂಡು ಬಿಟ್ಟಿತ್ತೇ? ಇಲ್ಲಾ ಅವಳಿಗೆ ಸಂಬಂಧ ಪಟ್ಟವರು ಯಾರಾದರೂ ನಗರದಲ್ಲಿ ಸಿಲುಕಿದ್ದರೆ? ಅಥವಾ ಅವಳ ಹಿಂದೆ ನಡೆಯುತ್ತಿದ್ದ ಆ ದುರಂತದ ಘಟನೆ ಅವಳಲ್ಲಿ ಕುತೂಹಲ ಮೂಡಿಸಿ ಆಕರ್ಷಿಸಿತೇ? ಬಹುಶಃ ಈ ಎಲ್ಲಾ ಗ್ರಹಚಾರಗಳು ಒಟ್ಟಾಗಿ, ಅವಳ ಪಾದಗಳನ್ನು ನಿಧಾನಿಸಿ ತಿರುಗಿ ನೋಡುವಂತೆ ಮಾಡುದವೇನೋ... ಅವಳ ಸ್ವಂತ ಆಯ್ಕೆಯಿಂದ ಹಾಗೂ  ಅದೇ ಕೊನೆಯ ಆಯ್ಕೆಯಿಂದ ಕರುಣೆಯನ್ನು ಬದಿಗಿಟ್ಟು ತೀರ್ಪಿಗೆ ಗುರಿಯಾಗಿ ಹೋದಳು.
ಯೇಸು ಸ್ವಾಮಿ ಲೋಕಾಂತ್ಯದ ಕುರಿತು ಬೋಧಿಸುವಾಗ ಇದನ್ನು ಉಲ್ಲೇಖಿಸಿದ್ದಾರೆ; " ಲೋಟನು ಸೋದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆಸುರಿದು ಎಲ್ಲರನ್ನೂ ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು. ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕು ಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ ಹೊಲದಲ್ಲಿರುವವನು ಮನೆಗೆ ಹಿಂತಿರುಗದಿರಲಿ. ಲೋಟನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ. ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಚಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. (ಲೂಕ 17:29-33). ಗಾಂಭೀರ್ಯದ ಘಟನೆಯನ್ನು ನೆನಪಿಸುವ ಗಂಭೀರ ಪದಗಳಿವು. ವಚನಗಳು ನಮ್ಮನ್ನು ದುಷ್ಟ ಭ್ರಮೆಯಿಂದ ದೂರವಿದ್ದು ದಯೆಯ ತೋಳಲ್ಲಿ ಸುರಕ್ಷಿತವಾಗಿರಲು ಕರೆ ನೀಡುತ್ತವೆ. ಅವುಗಳಲ್ಲಿ ವಿಶ್ವಾಸವಿಡೋಣ..
-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...