Thursday, 13 February 2020

ಮನಃಪರಿವರ್ತನೆಗೆ ಸಕಾಲ ಈ ತಪಸ್ಸು ಕಾಲ


ಜಾಜಿ ಎಂ. ದಾಸಾಪುರ

ತಪಸ್ಸು ಕಾಲ ಎಂದಾಕ್ಷಣ ನಮ್ಮ ಮನಸ್ಸಿನ ಸ್ಮøತಿಪಟಲದಲ್ಲಿ ಹಾದುಹೋಗುವ ವಿಷಯಗಳೆಂದರೆ ವಿಭೂತಿ, ಉಪವಾಸ, ಜಪತಪ, ಶಿಲುಬೆಯ ಹಾದಿ ಹಾಗೂ ದೇಹದಂಡನೆ ಇತ್ಯಾದಿಗಳು. ಇವೆಲ್ಲವೂ ನಮಗೆ ತಪಸ್ಸುಕಾಲದ ಬಗ್ಗೆ ಆಸಕ್ತಿವಹಿಸುವಂತೆ ಮಾಡಿ ಪಾಪಿಗಳಾದ ನಾವೆಲ್ಲರೂ ಕ್ರಿಸ್ತರ ಪುನರುತ್ಥಾನಕ್ಕೆ ಸಿದ್ಧರಾಗಲು ಕರೆಯನ್ನೀಯುತ್ತವೆ. ಮುಖ್ಯವಾಗಿ ತಪಸ್ಸಿನ ಆಚರಣೆಯ ಮೂಲಕ ಈ ಕಾಲವನ್ನು ನಿರಾಡಂಬರವಾಗಿ ಆಚರಿಸಲು ಧರ್ಮಸಭೆಯು ತನ್ನ ಇಡೀ ದೈವಜನತೆಗೆ ಪ್ರೀತಿಯ ಕರೆಯೋಲೆಯನ್ನೀಯುತ್ತದೆ. ಈ ಕಾಲವು ಆರಂಭವಾಗುವುದು ವಿಭೂತಿ ಬುಧವಾರದ ಮೂಲಕ. ಈ ವಿಭೂತಿ ಬುಧವಾರವು ತಪಸ್ಸು ಕಾಲಕ್ಕೆ ಮುನ್ನುಡಿಯನ್ನು ಬರೆಯುತ್ತಾ, “ಮನುಜ ನೀನು ಮಣ್ಣು, ಮರಳಿ ಸೇರ್ವೆ ಮಣ್ಣಿಗೆ” ಎಂಬ ಮನುಷ್ಯನ ಬದುಕಿನ ತಾತ್ಪರ್ಯವನ್ನು ನಮಗೆ ತಿಳಿಸಿಕೊಡುತ್ತದೆ. ಹೀಗೆ ಹೆಚ್ಚಿನ ಆಡಂಬರವಿಲ್ಲದ ಈ ಕಾಲವು ನಮ್ಮೆಲ್ಲರನ್ನು ಪ್ರಭುವಿನ ಪಾಡು ಮರಣಗಳನ್ನು ಧ್ಯಾನಿಸುತ್ತಾ ಅವರೊಂದಿಗೆ ನಮ್ಮ ಜೀವನದ ನೋವು ನಲಿವುಗಳನ್ನು ಹಾಗೂ ಏಳುಬೀಳುಗಳನ್ನು ಸಮರ್ಪಿಸಿ, ಅವರೊಂದಿಗೆ ಒಂದಾಗಿ ಬಾಳಲು ಕರೆಕೊಡುತ್ತದೆ.
ವಿಭೂತಿಯನ್ನು ಹಣೆಯ ಮೇಲೆ ಧರಿಸುವುದರ ಮೂಲಕ ತಪಸ್ಸುಕಾಲಕ್ಕೆ ನಾವು ಕಾಲಿಡುತ್ತೇವೆ. ಇಷ್ಟು ದಿನ ಆಡಂಬರದ ಜೀವನಕ್ಕೆ ಹೊಂದಿಕೊಂಡಿದ್ದ ನಾವು ಇಲ್ಲಿಂದ ನಿರಾಡಂಬರಕ್ಕೆ ನಮ್ಮನ್ನೇ ಸಮರ್ಪಿಸಿಕೊಂಡು ಪ್ರಭುವಿನ ಪಾಡು ಮರಣವನ್ನು ಧ್ಯಾನಿಸಲು ನಮ್ಮ ಮನಗಳನ್ನು ಅಣಿಮಾಡಿಕೊಳ್ಳುತ್ತೇವೆ. 
ವಿಭೂತಿ ಧರಿಸುವಿಕೆಯು ನಾವು ಈ ಭೂಮಿಯ ಮೇಲೆ ನಶ್ವರ ಎಂಬ ಸತ್ಯಾಂಶವÀನ್ನು ನಮಗೆ ತಿಳಿಸಿಕೊಡುತ್ತಾ. ಮಾನವರಾದ ನಾವೆಲ್ಲರೂ ಅದನ್ನು ಅರಿತುಕೊಂಡು ಕ್ರಿಸ್ತರ ತತ್ವಗಳಿಗೆ ಅನುಗುಣವಾಗಿ ನಡೆಯಬೇಕೆಂದು ಅದು ಆಶಿಸುತ್ತದೆ. ಈ ಪ್ರಪಂಚದಲ್ಲಿ ಮಾನವನನ್ನು ಬಿಟ್ಟು ಉಳಿದೆಲ್ಲವೂ ತಮ್ಮ ಸಾವಿನ ನಂತರವೂ ಇತರರಿಗೆ ಉಪಯೋಗವಾಗುತ್ತವೆ. ಆದರೆ ಮಾನವರಾದ ನಾವು ನಮ್ಮ ಸಾವಿನ ನಂತರ ಯಾರಿಗೂ ಬೇಡವಾದ ವಸ್ತುಗಳಾಗಿ ಪರಿಣಮಿಸುವುದಲ್ಲದೇ ಮಣ್ಣಲ್ಲಿ ಮಣ್ಣಾಗಿ ಹೋಗುತ್ತೇವೆ. 
ಹೀಗಿರುವಲ್ಲಿ ನಾವು ಇರುವಷ್ಟು ಕಾಲ ದೇವರಿಗೆ ಸ್ವಲ್ಪವಾದರೂ ನಮ್ಮ ಸಮಯವನ್ನು ನೀಡಿ, ಅವರೊಂದಿಗೂ ಸಹ ಒಡನಾಟ ಬೆಳೆಸಬೇಕಲ್ಲವೇ? ಅದನ್ನು ಬಿಟ್ಟು ಕೇವಲ ಲೌಕಿಕ ಹಾಗೂ ಪ್ರಾಪಂಚಿಕ ವಿಷಯಗಳಿಗೆ ನಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟು, ನಮ್ಮನ್ನು ನಿರ್ಮಿಸಿದ ಆ ಜನಕನಿಗೆ ಸಮಯವೇ ಇಲ್ಲ ಎನ್ನುವುದು ಎಷ್ಟು ಸಮಂಜಸ? ಆದ್ದರಿಂದ ಕ್ರಿಸ್ತೇಸುವಿನ ಕಲ್ವಾರಿ ಪಯಣದ ದೃಶ್ಯಾವಳಿಯನ್ನು ಬಹಳ ಅರ್ಥಪೂರ್ಣವಾಗಿ ಅನುಸರಿಸಿ ನಡೆಯಲು ಈ ಕಾಲ ನಮಗೆ ನೆರವಾಗುತ್ತದೆ. 
ತನ್ನ ಧಾವಂತ ಬದುಕಿನಲ್ಲಿ ಮಾನವ ಹೆಚ್ಚಾಗಿ ಆಡಂಬರವನ್ನೇ ತನ್ನ ಬದುಕಿನ ಬಂಡವಾಳವಾಗಿಸಿ ಕೊಂಡಿದ್ದಾನೆ. ಈ ಪರಿಪಾಠವನ್ನು ಹೊರತುಪಡಿಸಿ ತನ್ನನ್ನು ಸೃಷ್ಟಿಸಿದ ದೇವರನ್ನು ಹತ್ತಿರದಿಂದ ದೃಷ್ಟಿಸಿ ಅವರನ್ನು ಮನಸ್ಸಾರೆ ಧ್ಯಾನಿಸಲು ಈ ವಿಭೂತಿಯು ನಮ್ಮನ್ನು ಎಚ್ಚರಿಸುತ್ತದೆ. ಈ ವಿಭೂತಿಯು, ನಾವೆಲ್ಲರೂ ಈ ಭೂಮಿಯ ಮೇಲೆ ಬಾಡಿಗೆದಾರರು ಎಂಬ ನಿಜಾಂಶವನ್ನು ತಿಳಿಸಿಕೊಡುತ್ತಾ, ನಮ್ಮ ಬಾಡಿಗೆ ಮುಗಿದ ನಂತರ ನಾವು ತೆರಳಬೇಕಾದ ಲೋಕವನ್ನು ಪ್ರವೇಶಿಸಲು ಈ ಭುವಿಯಲ್ಲಿ ಆ ದೇವರನ್ನು ಕಂಡುಕೊಂಡು ಅವರ ಪಾಡು ಮರಣದಲ್ಲಿ ಪಾಲ್ಗೊಂಡು ಅವರ ಇಚ್ಛೆಗೆ ತಕ್ಕಂತೆ ನಮ್ಮ ಜೀವನ ಸಾಗಿಸಬೇಕೆಂದು ಅದು ನಮ್ಮನ್ನು ಎಚ್ಚರಿಸುತ್ತದೆ. 
ಈ ತಪಸ್ಸುಕಾಲವು ಆ ದೇವರೇ ನಮಗೆ ನೀಡಿರುವ ಒಂದು ವರದಾನ. ಏಕೆಂದರೆ ಕ್ರಿಸ್ತ ಜಯಂತಿಯ ಸಮಯದಲ್ಲಿ ಕ್ರಿಸ್ತÀರ ಜನನವನ್ನು ಸಂಭ್ರಮಿಸುವ ನಾವು ಅದೇ ಕ್ರಿಸ್ತರು ನಮ್ಮ ಪಾಪಗಳಿಗಾಗಿ ಸ್ವತಃ ತಾವೇ ಬಲಿಯಾಗಿ ನಮ್ಮೆಲ್ಲರ ಪಾಪಗಳನ್ನು ತೊಳೆಯಲು ತಮ್ಮ ಅಮೂಲ್ಯ ರಕ್ತವನ್ನು ಸುರಿಸಿದ ಈ ಕರುಣಾಭರಿತ ಘಟನೆಯನ್ನು ಈ ನಲ್ವತ್ತು ದಿನಗಳ ಕಾಲ ಧ್ಯಾನಿಸಿ ಅದನ್ನು ಅರ್ಥೈಸಿಕೊಂಡು ನಮ್ಮ ಬಾಳು ದೇವರಿಗೆ ಮೀಸಲು ಎಂಬುದನ್ನು ನಾವು ಗ್ರಹಿಸಿಕೊಂಡು ಪ್ರಾರ್ಥನೆ ಹಾಗೂ ಜಪತಪಗಳ ಮೂಲಕ ಈ ಕಾಲವನ್ನು ಬಹಳ
ಅರ್ಥಗರ್ಭಿತವಾಗಿ ಆಚರಿಸುವುದು ನಮ್ಮ ಕರ್ತವ್ಯವಲ್ಲವೇ?
ಇದೇ ಫೆಬ್ರವರಿ 24ರಿಂದ ನಾವು ತಪಸ್ಸು ಕಾಲವನ್ನು ಆರಂಭಿಸಲು ಅಣಿಯಾಗುತ್ತಿದ್ದೇವೆ. ಕಲ್ವಾರಿಯ ಕಾವ್ಯವನ್ನು ನಮ್ಮ ಪಾಫಪಗಳ ಪರಿಹಾರಕ್ಕಾಗಿ ಪುನಃ ಆಚರಿಸಲು ನಮಗಿದೋ ಪ್ರಭುವಿನ ಪ್ರೀತಿಯ ಕರೆಯೋಲೆ. ವಿಭೂತಿಯನ್ನು ಧರಿಸುವುದರ ಮೂಲಕ ನಾವು ದೇವರೆಡೆಗೆ ನಮ್ಮ ಮನಗಳನ್ನು ತಿರುಗಿಸಿಕೊಳ್ಳುತ್ತೇವೆ ಎಂಬ ಆಶಾಭಾವನೆ ಹೊಂದಿ ಆ ಪ್ರಭುವಿಗೆ ನಮ್ಮನ್ನೇ ಸಮರ್ಪಿಸಲು ಇದು ಸಕಾಲ. ನಮ್ಮ ಪಾಪಮಯ ಪ್ರವೃತ್ತಿಯನ್ನು ಸ್ವಲ್ಪವಾದರೂ ದೂರವಿಡಲು ಈ ಕಾಲ ನಮಗೆ ಸಹಾಯ ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ದೇವರಿಗೆ ನಾವೇನನ್ನೂ ಕೊಡಲು ಸಾಧ್ಯವಿಲ್ಲ. ಆದರೆ ನಮ್ಮ ಪಾಪಮಯ ಜೀವನಕ್ಕೆ ಸತ್ತು, ಕ್ರಿಸ್ತರಲ್ಲಿ ಹೊಸಸೃಷ್ಟಿಗಳಾಗಲು ಈ ತಪಸ್ಸು ಕಾಲವು ನಮ್ಮನ್ನು ಪ್ರೇರೇಪಿಸುತ್ತದೆ ಎಂಬುದನ್ನು ಮನಗಾಣೋಣ. 
ಆದ್ದರಿಂದ ಈ ತಪಸ್ಸು ಕಾಲವು ನಮಗೆ ದೇವರ ಅಪರಿಮಿತ ವರಪ್ರಸಾದಗಳನ್ನು ಹೇರಳವಾಗಿ ಸುರಿಸಿ ಅದರ ಮೂಲಕ ನಾವೆಲ್ಲರೂ ಅವರಿಗೆ ಹತ್ತಿರವಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ನಾವು ಅವರಿಗೆ ಸಂಪೂರ್ಣವಾಗಿ ಶರಣಾದಾಗ ಅವರಂತೆ ಸುಮನಸ್ಕರಾಗಿ ಬಾಳಲು ಸಾಧ್ಯ ಎಂಬ ಕಿವಿ ಮಾತನ್ನು ಈ ಕಾಲ ನಮಗೆ ಪದೇ ಪದೇ ನಮ್ಮ ನೆನೆಪಿಸಿಕೊಡುತ್ತದೆ. ಆದ್ದರಿಂದ ಪ್ರಭುವಿನ ಕಲ್ವಾರಿಯ ಹೆಜ್ಜೆಗಳಲ್ಲಿ ನಮ್ಮ ಹೆಜ್ಜೆಗಳನ್ನಿರಿಸಲು, ಅವರು ಅನುಭವಿಸಿದ ನೋವು, ಯಾತನೆ ಮತ್ತು ಸಂಕಟಗಳನ್ನು ಮನಸಾರೆ ಧ್ಯಾನಿಸಲು ಅಂತೆಯೇ ನಮ್ಮ ಹೃನ್ಮನಗಳು ಪ್ರಭುವಿಗಾಗಿ ಸದಾ ಪರಿವರ್ತನೆಯ ಹಾದಿಯಲ್ಲಿ ಸಾಗಲು ಪ್ರಭುಕ್ರಿಸ್ತರ ಕಲ್ವಾರಿ ಪಯಣವೇ ನಮಗೆ ಪ್ರೇರಣೆಯಾಗಲಿ ಎಂದು ಮನಃಪೂರ್ವಕವಾಗಿ ಆಶಿಸೋಣವೇ? 

  -0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...