Saturday, 8 February 2020

ಜೆಸ್ವಿತ್ ವರದಿಗಳ ಮೂಸೆಯಲ್ಲಿ ಇತಿಹಾಸ


ಸಿ ಮರಿಜೋಸೆಫ್

ಗೆಳೆಯರೊಬ್ಬರ ನೆರವಿನಿಂದ 'ಜೆಸ್ವಿತ್ಸ್ ಇನ್ ಮೈಸೂರ್' ಎಂಬ ಪುಸ್ತಕವು ನನ್ನ ಖಾಸಗಿ ಗ್ರಂಥಾಲಯ ಸೇರಿತು. ಇತಿಹಾಸದ ಬಗೆಗಿನ ನನ್ನ ಕುತೂಹಲದ ಬಗ್ಗೆ ಅರಿತಿದ್ದ ಆ ಗೆಳೆಯರು ಆ ಪುಸ್ತಕವನ್ನೂ ಅದರ ಜೊತೆಗೆ 'ಜೆಸ್ವಿತ್ಸ್ ಇನ್ ಮಲಬಾರ್' ಎಂಬ ಮತ್ತೊಂದು ಪುಸ್ತಕವನ್ನೂ ನನಗೇ ಕೊಡುಗೆಯಾಗಿ ಕೊಟ್ಟರು. 
ಜೆಸ್ವಿತ್ (ಯೇಸುಸಭೆಯ) ಪಾದ್ರಿಯಾದ ಡಿ. ಫೆರೊಲಿ ಎಂಬುವರು ಆ ಎರಡೂ ಪುಸ್ತಕಗಳ ಕರ್ತೃ. ಜೆಸ್ವಿತ್ ಎಂಬುದು ಸೊಸೈಟಿ ಆಪ್ ಜೀಸಸ್ ಎಂಬುದರ ಹ್ರಸ್ವರೂಪ. ಈ ಜೆಸ್ವಿತ್ ಸಂಸ್ಥೆಯು (ಯೇಸುಸಭೆಯು) ಸುಮಾರು 16ನೇ ಶತಮಾನದಲ್ಲಿ ರೋಮಿನಲ್ಲಿ ಸ್ಥಾಪಿತವಾಯಿತು. ಅಂದು ಕೆಲ ವಿಚಾರವಾದಿಗಳು ಕ್ರೈಸ್ತ ಧರ್ಮದ ಪರಮೋಚ್ಛ ಗುರುಪೀಠವನ್ನು ಲೇವಡಿ ಮಾಡುತ್ತಾ ಧಾರ್ಮಿಕ ತತ್ವಗಳನ್ನು ತೆಳುಗೊಳಿಸುವ ಕಾಯಕದಲ್ಲಿ ತೊಡಗಿದ್ದಾಗ ಆ ಪಾಷಂಡಿಗಳಿಂದ ಧರ್ಮವನ್ನು ರಕ್ಷಿಸುವ ಪಣ ತೊಟ್ಟು ಜಗದ್ಗುರುಗಳ ಪರ ನಿಂತವರು ಈ ಜೆಸ್ವಿತರು. ಎಲ್ಲವೂ ತಹಬಂದಿಗೆ ಬಂದ ಮೇಲೆ ಈ ಜೆಸ್ವಿತರು ದೇಶವಿದೇಶಗಳಲ್ಲಿ ಯೇಸುಕ್ರಿಸ್ತನ ಶುಭಸಂದೇಶವನ್ನು ಸಾರುವ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡರು. ``ದೇವರ ಪರಮೋನ್ನತ ಸ್ತುತಿಗಾಗಿ'' ಎಂಬ ಅವರ ಧ್ಯೇಯವಾಕ್ಯವೇ ಹೇಳುವ ಹಾಗೆ, ಅವರು ಧರ್ಮಸಂಸ್ಥಾಪನೆಗಾಗಿ ಹಮ್ಮಿಕೊಂಡ ಎರಡು ಮುಖ್ಯ ಕಾರ್ಯಚಟುವಟಿಕೆಗಳು ಶಿಕ್ಷಣ ಮತ್ತು ಧರ್ಮಪ್ರಚಾರ. 
ಹಾಗೆ ನೋಡಿದರೆ, ಜೆಸ್ವಿತ್ ಸಂಸ್ಥೆಗೆ ಸೇರಿ ಸಂನ್ಯಾಸ ಸ್ವೀಕರಿಸಿದವರೆಲ್ಲ ಐರೋಪ್ಯ ಸಮಾಜದ ಕುಲೀನ ವರ್ಗದವರು. ಅಪಾರ ಶ್ರೀಮಂತರೂ, ಮೇಧಾಶಕ್ತಿಯುಳ್ಳವರೂ ಆದ ಇವರು ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿದ್ದವರು. ತಮ್ಮೆಲ್ಲ ಐಶ್ವರ್ಯವನ್ನೂ ಅನುಕೂಲಗಳನ್ನೂ ಬಂಧುಬಳಗವನ್ನೂ ತೊರೆದು ಕ್ರಿಸ್ತಸಂದೇಶದ ಪ್ರಚಾರದ ವ್ರತ ಸ್ವೀಕರಿಸಿ ಯೂರೋಪಿನಿಂದ ಪಶ್ಚಿಮಕ್ಕೆ ಹೊರಟ ಸ್ಪೇನಿನ ಹಡಗುಗಳಲ್ಲೂ ಪೂರ್ವಕ್ಕೆ ಹೊರಟ ಪೋರ್ಚುಗೀಸ್ ಹಡಗುಗಳಲ್ಲೂ ಪವಿತ್ರಯಾನ ಕೈಗೊಂಡರು. ಹಾಗೆ ಇಂಡಿಯಾ ದೇಶಕ್ಕೆ ಪೋರ್ಚುಗೀಸ್ ನಾವೆಗಳಲ್ಲಿ ಬಂದ ಜೆಸ್ವಿತ್ ಮಿಷನರಿಗಳು ಗೋವಾದಲ್ಲಿ ಕೇಂದ್ರ ಕಚೇರಿ ತೆರೆದು ದೇಶದ ಹಲವು ಭಾಗಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ವಿವಿಧ ರಾಜಾಳ್ವಿಕೆಗಳ ಒಳನಾಡುಗಳಲ್ಲಿ ಕ್ರಿಸ್ತಸಂದೇಶದ ಪ್ರಸರಣಕ್ಕೆ ಇಳಿದರು. ದೇಶದ ವಿವಿಧ ಭಾಗಗಳಲ್ಲಿ ನಡೆದ ಹಾಗೆ ಮೈಸೂರು ಪ್ರಾಂತ್ಯದಲ್ಲಿಯೂ ಕ್ರೈಸ್ತ ಧರ್ಮಪ್ರಚಾರ ನಡೆಸಿದ ಮೊದಲಿಗರು ಜೆಸ್ವಿತರೇ ಆಗಿದ್ದಾರೆ. 
ಗೋವಾದಿಂದ ದಕ್ಷಿಣದ ಒಳನಾಡಿಗೆ ನಿಯುಕ್ತರಾದ ಲಿಯೊನಾರ್ಡೊ ಚಿನ್ನಮಿ ಎಂಬ ಮಿಷನರಿ 1648ರಲ್ಲಿ ಮೈಸೂರು ಸೀಮೆಯ ಶ್ರೀರಂಗಪಟ್ಟಣಕ್ಕೆ ಬಂದು ಮೈಸೂರು ಮಹಾರಾಜರ ಅನುಮತಿ ಪಡೆದು ಜನ ಭಾಷೆ ಆಚಾರ ವಿಚಾರಗಳ ಹೊಕ್ಕುಬಳಕೆಯಿಲ್ಲದ ಅಪರಿಚಿತ ನೆಲದಲ್ಲಿನ ಹಳ್ಳಿಗಾಡಿನಲ್ಲಿ ಎಲ್ಲ ತೊಂದರೆ ತಾಪತ್ರಯಗಳ ನಡುವೆಯೂ ಅಪ್ರತಿಮ ಸ್ಥೈರ್ಯ ಮತ್ತು ಉತ್ಸಾಹಗಳಿಂದ ತಮ್ಮ ಧರ್ಮತತ್ವಗಳನ್ನು ಬೋಧಿಸತೊಡಗಿದರು. 
ತದನಂತರದಲ್ಲಿ ಚಿನ್ನಮಿಯವರನ್ನು ಹಿಂಬಾಲಿಸಿ ಐರೋಪ್ಯನಾಡುಗಳಿಂದ ಆಗಮಿಸಿದ ಹಲವಾರು ಜೆಸ್ವಿತ್ ಮಿಷನರಿಗಳು ಹದಿನೇಳು ಮತ್ತು ಹದಿನೆಂಟನೇ ಶತಮಾನಗಳಲ್ಲಿ ಮೈಸೂರು ಸೀಮೆಯಾದ್ಯಂತ ಸಂಚರಿಸಿ ಬಸವಾಪುರ, ರಾಮಾಪುರ, ಕಿರಂಗೂರು, ಅಜ್ಜಿಪುರ, ಅರಶಿನಕೆರೆ (ಇಂದು ಚಿಕ್ಕರಸಿನಕೆರೆ), ಕೂಟಗಲ್ಲು, ಕಾಮನಹಳ್ಳಿ (ಇಂದಿನ ಚಿಕ್ಕಕಮ್ಮನಹಳ್ಳಿ), ಬೇಗೂರು, ಕಾನಕಾನಹಳ್ಳಿ, ಕೂಡಲೂರು, ಉಯ್ಯಂಬಳ್ಳಿ, ಹಾರೋಬೆಲೆ, ಗಾಡೇನಹಳ್ಳಿ, ಮೂಡಲದಾಸಾಪುರ, ಮಗ್ಗೆಗಳಲ್ಲಿ ಹಾಗೂ ಇಂದು ತಮಿಳುನಾಡಿಗೆ ಸೇರಿಹೋಗಿರುವ ಆದರೆ ಆಗ ಕನ್ನಡನಾಡಿನ ಭಾಗವೇ ಆಗಿದ್ದ ಮರದನಹಳ್ಳಿ, ಪೆನ್ನಾಗರ, ಸಾಂಬಳ್ಳಿ, ಸತ್ಯಮಂಗಲ, ಸಿಂಗಪಟ್ಟಿ, ಎಲ್ಲಮಂಗಲ, ಕರುಮತ್ತಂಪಟ್ಟಿ ಮುಂತಾದೆಡೆ ತಮ್ಮ ಮನೆಗಳನ್ನು ಕಟ್ಟಿಕೊಂಡು ನವಕ್ರೈಸ್ತರಿಗೆ ಆಧ್ಯಾತ್ಮಿಕ ಪೋಷಣೆ ನೀಡುತ್ತಿದ್ದರು. ಕುತೂಹಲದ ಅಂಶವೆಂದರೆ ಈ ಎಲ್ಲ ಪ್ರಾಚೀನ ಕ್ರೈಸ್ತಕೇಂದ್ರಗಳ ಚರ್ಚುಗಳ ಹೆಸರಿನಲ್ಲಿ ಜೆಸ್ವಿತ್ ಸಂತರಾದ ಇಗ್ನೇಷಿಯಸ್ (ಇನ್ನಾಸಿ) ಹಾಗೂ ಝೇವಿಯರ್ (ಚೌರಪ್ಪ) ನವರ ಹೆಸರುಗಳಿರುವುದನ್ನು ನೋಡಬಹುದು. 
ಹೀಗೆ ಜೆಸ್ವಿತ್ ಮಿಷನರಿಗಳು ಇಲ್ಲಿ ನೆಲೆಗೊಂಡಿದ್ದಷ್ಟು ದಿನವೂ ತಮ್ಮ ದಿನಚರಿಗಳನ್ನು ಬರೆದು ವರ್ಷಕ್ಕೊಮ್ಮೆ ಅವನ್ನು ವಿಸ್ತೃತ ವರದಿಯ ರೂಪದಲ್ಲಿ ರೋಮ್ ನಲ್ಲಿದ್ದ ತಮ್ಮ ಸಂಸ್ಥೆಯ ವರಿಷ್ಠರಿಗೆ ಕಳಿಸುತ್ತಿದ್ದರು. ಆ ವರದಿಗಳು ಪ್ರಚಾರಕಾರ್ಯದ ಆಗುಹೋಗುಗಳು, ಅದಕ್ಕಿದ್ದ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಭೂಪಟ, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ನೆಲದ ಆಚಾರವಿಚಾರ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಸಿರಿಸಂಪದ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಅದರೊಂದಿಗೆ ಧರ್ಮಪ್ರಚಾರಕಾರ್ಯದಲ್ಲಿ ಮಿಷನರಿಗಳು ಅನುಭವಿಸುತ್ತಿರುವ ಕಷ್ಟಸಂಕಟ ಯಾತನೆಗಳ ಚಿತ್ರಣವೂ ಇರುತ್ತಿತ್ತು. ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ಅವರು ತಾವು ಆ ವರ್ಷ ಎಷ್ಟು ಜನರಿಗೆ ಕ್ರೈಸ್ತದೀಕ್ಷೆ ನೀಡಿದರೆಂಬುದರ ಕುರಿತಾಗಿ ಲೆಕ್ಕ ಹೇಳಬೇಕಿತ್ತು. 
ದೇಶವಿದೇಶಗಳಿಂದ ಬಂದ ಈ ಎಲ್ಲ ವಾರ್ಷಿಕ ವರದಿಗಳನ್ನು ಇಂದಿಗೂ ರೋಮ್ ನಗರದಲ್ಲಿರುವ ಜೆಸ್ವಿತ್ ಮುಖ್ಯಸಂಸ್ಥೆ ಜೆಸ್ವಿತ್ ಹೋಮ್ ನ ಪತ್ರಾಗಾರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂರಕ್ಷಿಸಿಡಲಾಗಿದೆ. ವಿಶೇಷವೆಂದರೆ ಅವನ್ನು ಲತೀನ್, ಸ್ಪೇನ್, ಪೋರ್ಚುಗೀಸ್, ಇಟಾಲಿಯನ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಬರೆಯಲಾಗಿದೆ. 1773ರಲ್ಲಿ ಜೆಸ್ವಿತ್ ಸಭೆಯನ್ನು ಬರಖಾಸ್ತು ಮಾಡಿದ ಮೇಲೆ ಮೈಸೂರು, ಕರ್ನಾಟಿಕ್ ಮತ್ತು ಮಲಬಾರ್ ಮಿಷನ್ನುಗಳು 1800ರವರೆಗೂ ತಮ್ಮ ಕಾರ್ಯವನ್ನು ಮುಂದುವರಿಸಿದವು. ಅವರನ್ನು ಗಡೀಪಾರು ಮಾಡುವಂತೆ ಪೋರ್ಚುಗೀಸರು ನಿವೇದಿಸಿದಾಗ, ಮೈಸೂರು ಮಹಾರಾಜರು, ``ಕಳೆದ 150 ವರ್ಷಗಳಲ್ಲಿ ಮೈಸೂರು ದೇಶದಲ್ಲಿ ಕೆಲಸ ಮಾಡಿರುವ ಅವರು ನಮ್ಮ ಜನರಿಗೆ ಕೆಡುಕೇನೂ ಮಾಡದೆ ಒಳ್ಳಿತನ್ನೇ ಮಾಡಿದ್ದಾರೆ'' ಎಂದು ಹೇಳಿ ಅವರ ಮನವಿಯನ್ನು ತಿರಸ್ಕರಿಸಿದರು ಎಂಬುದು ಉಲ್ಲೇಖನೀಯ.
ಆದರೂ ಒಂದೂವರೆ ಶತಮಾನಗಳ ಜೆಸ್ವಿತ್ ಮಿಷನರಿಗಳ ಕಾಯಕವು ಹೂವಿನ ಹಾದಿಯಾಗಿರಲಿಲ್ಲ ಎಂಬುದನ್ನು ಮನಗಾಣಬೆಕು. ಅವರಲ್ಲಿ ಎಷ್ಟೋ ಮಂದಿ ಸಣ್ಣಪುಟ್ಟ ಪಾಳೇಗಾರರಿಂದ, ಜನರಿಂದ ಅತೀವ ಹಿಂಸೆಬಾಧೆಗಳಲ್ಲಿ ನಲುಗಿದರೆಂಬುದನ್ನು ಕಾಣುತ್ತೇವೆ. ಅರಸರೂ ಆಡಳಿತಗಾರರೂ ಸಾಮಾನ್ಯವಾಗಿ ಜೆಸ್ವಿತ್ ಮಿಷನರಿಗಳಿಗೆ ಮೊದಲಿನಿಂದಲೂ ಅನುಕೂಲವಾಗಿದ್ದರು ಮಾತ್ರವಲ್ಲದೆ ತಮ್ಮ ಅಧೀನ ಅಧಿಕಾರಿಗಳು ಕಿರುಕುಳ ನೀಡಿದಾಗಲೆಲ್ಲ ಹಾಗೂ ಸ್ಥಳೀಯರು ದೊಂಬಿ ದಾಳಿ ನಡೆಸಿದಾಗಲೆಲ್ಲ ಮಿಷನರಿಗಳ ರಕ್ಷಣೆಗೆ ಮುಂದಾಗಿದ್ದರು ಎಂಬುದೇ ಸಮಾಧಾನಕರ ಅಂಶ.
ಕಳೆದ ಶತಮಾನದಲ್ಲಿ ಜೀವಿಸಿದ್ದ ಸನ್ಮಾನ್ಯ ಫಾದರ್ ದೊಮಿನಿಕೊ ಫೆರೋಲಿ ಯೇ.ಸ. ಅವರು ಜೆಸ್ವಿತ್ ಮಠದವರಾಗಿದ್ದು ರೋಮಿನ ಜೆಸ್ವಿತ್ ಹೋಮ್‍ನಲ್ಲಿರುವಾಗ ಅಂದರೆ 1934ರಲ್ಲಿ ಅಂದು ಜೆಸ್ವಿತ್ ಸಭೆಯ ಮುಖ್ಯಸ್ಥರಾಗಿದ್ದ ಫಾದರ್ ರಂಝಾನಿ ಯೇ.ಸ. ಅವರು ಇಂಡಿಯಾ ದೇಶದ ಕ್ಯಾಲಿಕಟ್ ಮಿಷನ್ ಚರಿತ್ರೆಯ ಬಗ್ಗೆ ಬರೆಯುವಂತೆ ಫೆರೊಲಿಯವರಿಗೆ ವೀಳ್ಯ ನೀಡುತ್ತಾರೆ. ಏಕೆಂದರೆ ಅದಕ್ಕೂ ಮುನ್ನ ಐನೂರು ವರ್ಷಗಳ ಹಿಂದೆ 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ದ ಗಾಮಾನು ಇಂಡಿಯಾಕ್ಕೆ ಸಮುದ್ರಯಾನ ಕೈಗೊಂಡು ಇದೇ ಕ್ಯಾಲಿಕಟ್ ಅಥವಾ ಕಲ್ಲಿಕೋಟೆಯಲ್ಲಿ ಲಂಗರು ಹಾಕಿದ್ದ.
ಫೆರೊಲಿಯವರನ್ನು ಈ ಕಾರ್ಯಕ್ಕೆ ಉತ್ತೇಜಿಸಿದ ಉಪಮುಖ್ಯಸ್ಥ ಫಾದರ್ ಮ್ಯಾಗ್ನಿ ಯೇ.ಸ. ಅವರು ಕಲ್ಲಿ ಕೋಟೆಗೆ ಸಂಬಂಧಿಸಿದಂತೆ ತಮ್ಮ ಸಂಸ್ಥೆಯ ಪತ್ರಾಗಾರದಿಂದ ಹೇರಳವಾದ ದಸ್ತಾವೇಜುಗಳನ್ನು ಹೆಕ್ಕಿ ಕೊಡುತ್ತಾರೆ. ಇಂಡಿಯಾಕ್ಕೆ ಬಂದಿಳಿವ ಫೆರೊಲಿ ಸ್ವಾಮಿಗಳು ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಸಂತ ಜೋಸೆಫರ ಶಾಲೆಯ (ಇಂದು ಕಾಲೇಜು) ಆವರಣದಲ್ಲಿರುವ ಜೆಸ್ವಿತ್ ನಿವಾಸದಲ್ಲಿ ಉಳಿದುಕೊಂಡು ತಮ್ಮ ಅಧ್ಯಯನದ ಭಾಗವಾಗಿ ಹಲವು ವರ್ಷಗಳ ಕಾಲ ಕ್ಷೇತ್ರಾಧ್ಯಯನ ಮಾಡಿ 1939ರಲ್ಲಿ 519 ಪುಟಗಳ ''ಜೆಸ್ವಿತ್ಸ್ ಇನ್ ಮಲಬಾರ್' ಮೊದಲ ಸಂಪುಟವನ್ನು ಪ್ರಕಟಿಸುತ್ತಾರೆ.
ಫೆರೊಲಿಯವರು ಈ ಕಾರ್ಯದಲ್ಲಿ ಉತ್ಸಾಹದಿಂದ ಮುನ್ನುಗ್ಗುತ್ತಿರುವಾಗಲೇ ದುರದೃಷ್ಟವಶಾತ್ ಎರಡನೇ ಮಹಾಯುದ್ಧದ ದುಷ್ಪರಿಣಾಮವೋ ಎಂಬಂತೆ ಅಂದಿನ ಬ್ರಿಟಿಷ್ ಸರಕಾರವು ಇಂಡಿಯಾದೊಳಗಿದ್ದ ಎಲ್ಲ ಇಟಲಿ ಮತ್ತು ಜರ್ಮನ್ ಪ್ರಜೆಗಳನ್ನು ಬಂಧಿಸಿ ಕಾರಾಗೃಹಕ್ಕೆ ದೂಡುತ್ತದೆ. ಹಾಗಿ ಬಂಧಿತರಾದ ನೂರಾರು ಮಂದಿಯ ನಡುವೆ ಫೆರೊಲಿಯವರೂ ಸೇರಿದಂತೆ 42 ಜೆಸ್ವಿತರೂ ಇರುತ್ತಾರೆ. 1946ರ ವೇಳೆಗೆ ಫೆರೊಲಿ ಸ್ವಾಮಿಯವರು ನಿಧಾನವಾಗಿ ತಮ್ಮ ಪೆಟ್ಟಿಗೆ ತೆರೆದು ಪತ್ರಗಳು ಮತ್ತು ದಸ್ತಾವೇಜುಗಳನ್ನು ಹರವಿಕೊಳ್ಳುತ್ತಾರೆ. ಹೀಗೆ 1951ರ ವೇಳೆಗೆ ಮಲಬಾರ್ ಮಿಷನ್ ಕುರಿತಾದ 622 ಪುಟಗಳ ಎರಡನೇ ಸಂಪುಟ ಹೊರಬರುತ್ತದೆ.
ಬೆಂಗಳೂರಿನ ಸಂತ ಜೋಸೆಫರ ಕಾಲೇಜಿನಲ್ಲಿ ಗಣಿತ ಮತ್ತು ಖಗೋಳವಿಜ್ಞಾನ ಬೋಧಿಸಿದ ಫೆರೊಲಿಯವರು ಕನ್ನಡನಾಡಿನಲ್ಲಿ ಮಿಷನರಿಗಳಾಗಿ ದುಡಿದ ಜೆಸ್ವಿತರು ಅನುಭವಿಸಿದ ಯಾತನೆಗಳ ಹಾಗೂ ಅಂದಿನ ಯುದ್ಧಗಳ ಕುರಿತಂತೆ ರೋಚಕ ಕತೆಗಳನ್ನು ಕೇಳಿದ್ದರು. ಕೆಲಕಾಲಾನಂತರ ರೋಮ್ ನಗರಕ್ಕೆ ಹಿಂದಿರುಗುವ ಅವರು ತಮ್ಮ ಪತ್ರಾಗಾರದ ದಾಖಲೆಗಳನ್ನು ಮರುಪರಿಶೀಲನೆಗೆ ಹಚ್ಚಿ ಅಧ್ಯಯನ ಕೈಗೊಳ್ಳುತ್ತಾರೆ. ಮಠವು ಕಲಿಸಿದ ದೀರ್ಘಸಹನೆಯಿಂದ ಅಲ್ಲಿ ದೂಳಿನಲ್ಲಿ ಹುದುಗಿದ್ದ ಹಸ್ತಪ್ರತಿಗಳನ್ನು ಹಲವು ವರ್ಷಗಳ ಕಾಲ ಶ್ರಮವಹಿಸಿ ತಮ್ಮ ನೋಟ್ ಪುಸ್ತಕದಲ್ಲಿ ಯಥಾವತ್ ನಕಲು ಮಾಡಿಕೊಂಡು ಲತೀನು, ಪೋರ್ಚುಗೀಸ್ ಮತ್ತು ಇಟಾಲಿಯನ್ ಭಾಷೆಗಳಲ್ಲಿದ್ದ ಅವುಗಳ ಹೂರಣವನ್ನು ಅನುವಾದಿಸಿ ಶತಮಾನಗಳಾಚೆಯ ಆ ಅಗೋಚರ ಜೆಸ್ವಿತ್ ಮುತ್ಸದ್ದಿಗಳ ಆಖ್ಯಾಯಿಕೆಗಳನ್ನು ಅಧ್ಯಯನ ಮಾಡಿ ‘ಜೆಸ್ವಿತ್ಸ್ ಇನ್ ಮೈಸೂರ್' ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ.
ಜೆಸ್ವಿತ್ ಮಿಷನರಿಗಳ ಕುರಿತಾದ ಅಮೂಲ್ಯ ದಾಖಲೆಯಂತಿರುವ ಈ ಇಂಗ್ಲಿಷ್ ಭಾಷೆಯ ಮೂರೂ ಪುಸ್ತಕಗಳನ್ನು ಡಿಜಿಟೈಸ್ ಮಾಡಿಯಾದರೂ ಸಂರಕ್ಷಿಸುವ ಕಾರ್ಯ ಈಗ ತುರ್ತಾಗಿ ನಡೆಯಬೇಕಾಗಿದೆ. ಏಕೆಂದರೆ ಫಾದರ್ ಫೆರೊಲಿಯವರು ಸುಂದರವಾಗಿ ಹಾಗೂ ಖಚಿತವಾಗಿ ಹೆಣೆದ ಈ ವಿದ್ವತ್ಪೂರ್ಣ ಇತಿಹಾಸ ಪುಸ್ತಕಗಳು ನಮ್ಮ ನಾಡಿನ ಇತಿಹಾಸದ ಅಧ್ಯಯನಕ್ಕೆ ಅನುಪಮ ಕೊಡುಗೆಯಾಗಿವೆ ಎಂದರೆ ತಪ್ಪಾಗದು.
ಇಷ್ಟಲ್ಲದೆ ಫಾದರ್ ಫೆರೊಲಿಯವರು ಮೈಸೂರು ಪ್ರಾಂತ್ಯದಲ್ಲಿ ಕ್ಷೇತ್ರಕಾರ್ಯ ಮಾಡಿದ ಇಟಾಲಿಯನ್ ಜೆಸ್ವಿತರ ರೋಮಾಂಚಕಾರಿ ಕತೆಗಳನ್ನು ತಮ್ಮ ದೇಶಸ್ಥರಿಗೆ ತಲಪಿಸುವ ಮಹದಾಶೆಯಿಂದ ಇಟಾಲಿಯನ್ ಭಾಷೆಯಲ್ಲಿ I SANIASSI ROMANI, o, Storia di una missione dimenticata  (ಇ ಸನಿಯಾಸಿ ರೊಮಾನಿ, ಒ, ಸ್ತೋರಿಯಾ ದಿ ಊನಾ ಮಿಸ್ಸಿಯೋಂ ದಿಮೆಂತಿಕಾತಾ = ರೋಮನ್ ಸಂನ್ಯಾಸಿ ಅಥವಾ ಮರೆತುಹೋದ ಒಂದು ಮಿಷನ್ನಿನ ಕತೆ) ಎಂಬ 546 ಪುಟಗಳ ಪುಸ್ತಕವನ್ನು 1961ರಲ್ಲಿ ಪ್ರಕಟಿಸುತ್ತಾರೆ. ಇಟಲಿಯವನಿಂದ ಇಟಲಿಯವರಿಗಾಗಿ ಬರೆದ ಆದರೆ ಜೆಸ್ವಿತ್ಸ್ ಇನ್ ಮೈಸೂರ್ ಪುಸ್ತಕದ ಎರಡರಷ್ಟು ದೊಡ್ಡದಾದ ಈ ಪುಸ್ತಕದಲ್ಲಿ 1648ರಿಂದ 1800ರವರೆಗೆ ಮೈಸೂರು ಪ್ರಾಂತ್ಯದಲ್ಲಿ ಕ್ಷೇತ್ರಕಾರ್ಯ ನಡೆಸಿದ ಜೆಸ್ವಿತ್ ಮಿಷನರಿಗಳ ವಾರ್ಷಿಕ ವರದಿಗಳ ಬೆಳಕಿನಲ್ಲಿ ಮೈಸೂರು ಸೀಮೆಯ ಇತಿಹಾಸವು ಪುನರ್ ರೂಪಿತವಾಗಿದೆ. ಫೆರೊಲಿ ಸ್ವಾಮಿಯವರು ಜೆಎಂ ಪುಸ್ತಕವನ್ನು ಒಂದು ಕಥಾನಕದಂತೆ ನಿರೂಪಣೆ ಮಾಡಿದ್ದರೆ ಐಎಸ್‍ಆರ್ ಪುಸ್ತಕದಲ್ಲಿ ಮೂಲದ ಉಲ್ಲೇಖಗಳನ್ನೂ ನೀಡುತ್ತಾರೆ. ಜೆಸ್ವಿತ್ ಮಿಷನರಿಗಳಾದ ಲಿಚೆಟ್ಟಾ, ಪವೋನೆ ಹಾಗೂ ಚಿನ್ನಮಿಯವರ ವರದಿಗಳ ಪೂರ್ಣ ಪಾಠವನ್ನು ಕೊಡುತ್ತಾರೆ. ಮದ್ದೂರು ಮಿಷನರಿ ರಾಜೇಂದ್ರಸ್ವಾಮಿಗಳ ಮರಣದ ಆಖ್ಯಾಯಿಕೆ ವಿಸ್ತೃತವಾಗಿದೆ.
ಇ ಸನಿಯಾಸಿ ರೊಮಾನಿ ಎಂಬ ಈ ಅಮೂಲ್ಯವಾದ ಇಟಾಲಿಯನ್ ಭಾಷೆಯ ಪುಸ್ತಕವನ್ನು ರೋಮ್  ನಗರದಲ್ಲಿದ್ದ ನನ್ನ ಗೆಳೆಯರ ಮೂಲಕ ನೆರಳಚ್ಚು ಮಾಡಿಸಿ ತರಿಸಿಕೊಂಡೆ. ಮುಂದೊಂದು ದಿನ ತಜ್ಞರ ಮೂಲಕ ಅದನ್ನು ಅನುವಾದಿಸುವ ಉದ್ದೇಶ ನನ್ನದಾಗಿತ್ತು. ಸುದೈವವೋ ಎಂಬಂತೆ ಬೆಂಗಳೂರು ಜೆಸ್ವಿತ್ ಸಂಸ್ಥೆಯ ವಯೋವೃದ್ಧ ಹಾಗೂ ಜ್ಞಾನವೃದ್ಧ ರಿಚರ್ಡ್ ಸಿಕ್ವೆರಾ ಸ್ವಾಮಿಗಳು ಸ್ವಯಂಪ್ರೇರಿತರಾಗಿ ಆ ಪುಸ್ತಕವನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಿದ್ದಾರೆಂದು ತಿಳಿದಾಗ ರೋಮಾಂಚನಗೊಂಡೆ. ಇತಿಹಾಸದ ಕುರಿತ ನನ್ನ ಕುತೂಹಲವನ್ನು ಅರ್ಥ ಮಾಡಿಕೊಂಡ ಅವರು ತಮ್ಮ ಪುಸ್ತಕವನ್ನು ನನಗೆ ಕೊಡುಗೆಯಾಗಿ ನೀಡಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. 
ಜೆಸ್ವಿತ್ ಪತ್ರಗಳ ಮೂಸೆಯಲ್ಲಿ ಕನ್ನಡ ನಾಡಿನ ಕ್ರಿಸ್ತ ಸಾಮ್ರಾಜ್ಯದ ಉಗಮದ ಜೊತೆಗೇ ನಾಡಿನ ಇತಿಹಾಸವನ್ನು ಕಟ್ಟಿಕೊಡುತ್ತಿರುವ ಅಮೋಘ ಕಾಯಕದಲ್ಲಿ ಕಳೆದ ಮೂರು ದಶಕಗಳಿಂದ ತೊಡಗಿಕೊಂಡಿರುವ ಫಾದರ್ ಐ ಅಂತಪ್ಪನವರ ಕೋರಿಕೆಯ ಮೇರೆಗೆ ತಾವು ಈ ಅನುವಾದವನ್ನು ಕೈಗೆತ್ತಿಕೊಂಡಿದ್ದಾಗಿ ಫಾದರ್ ರಿಚರ್ಡ್ ನವರು ತಮ್ಮ ಅರಿಕೆಯಲ್ಲಿ ಹೇಳಿಕೊಂಡಿದ್ದಾರೆ. 
A Still Small Voice, Profiles of Jesuit Pioneers in Karnataka(ಇಂದಿಗೂ ಕ್ಷೀಣವಾಗಿರುವ ಒಂದು ದನಿ, ಕರ್ನಾಟಕದ ಜೆಸ್ವಿತ್ ಮೊದಲಿಗರ ವ್ಯಕ್ತಿಚಿತ್ರಗಳು) ಎಂಬ ಶೀರ್ಷಿಕೆಯುಳ್ಳ ರಿಚರ್ಡ್ ಸ್ವಾಮಿಗಳ ಪುಸ್ತಕವು ಸುಮಾರು 416 ಪುಟಗಳಷ್ಟಿದ್ದು ಐದು ಭಾಗಗಳಲ್ಲಿ ಒಟ್ಟಾರೆಯಾಗಿ 38 ಅಧ್ಯಾಯಗಳನ್ನು ಒಳಗೊಂಡಿದೆ. ಇದನ್ನು ಬೆಂಗಳೂರಿನ ಎಟಿಸಿ ಪಬ್ಲಿಷರ್ಸ್ ನವರು ಪ್ರಕಟಿಸಿದ್ದಾರೆ. ಬೆಲೆ ರೂ.450.
ಪುಸ್ತಕದ ಮೊದಲ ಭಾಗದಲ್ಲಿ ಫೆರೊಲಿ ಸ್ವಾಮಿಯವರು ನಮ್ಮ ದೇಶದ ದೇಸೀ ಸಾಮ್ರಾಜ್ಯಗಳ ಅವನತಿ, ಐರೋಪ್ಯ ಸಾಮ್ರಾಜ್ಯಗಳ ಮೇಲಾಟ, ಕನ್ನಡನಾಡಿನ ಕಾವ್ಯಪರಂಪರೆ, ಮಹಿಷಮಂಡಲದ ಇತಿಹಾಸ, ಕನ್ನಡಿಗರ ಜನಜೀವನ, ಕನ್ನಡಿಗರ ಧರ್ಮಾಚರಣೆಗಳ ಬಗ್ಗೆ ಹೇಳುತ್ತಾರೆ. ಆನಂತರ ಸುಭಗ ಸುಂದರವಾಗಿ ಮಿಷನರಿಗಳ ಆಗಮನ ಮತ್ತು ಅವರ ಸಾಹಸಗಾಥೆಗಳನ್ನು ಕಟ್ಟಿಕೊಡುತ್ತಾರೆ. ಹೈದರಾಲಿ ಮತ್ತು ಟಿಪ್ಪುಸುಲ್ತಾನರಿಗಾಗಿ ಎರಡು ಅಧ್ಯಾಯಗಳು ಮೀಸಲಾಗಿವೆ. ಮೊದಲ ರಕ್ತಸಾಕ್ಷಿ ಮನೊವೆಲ್ ಡಿಕುನ್ನನವರ ಕುರಿತು ಒಂದು ಅಧ್ಯಾಯವಿದೆ. ಪುಸ್ತಕದಲ್ಲಿ ಹೆಸರಿಸಲಾದ ವ್ಯಕ್ತಿಗಳನ್ನು ಹಾಗೂ ಸ್ಥಳನಾಮಗಳನ್ನು ಪಟ್ಟಿಕರಿಸಲಾಗಿದೆ. ಗೊಂದಲಕ್ಕೆಡೆಗೊಡದೆ ಸರಳ ಸುಲಲಿತವಾದ ಭಾಷೆಯಲ್ಲಿ ಓದಿಸಿಕೊಂಡು ಹೋಗುವ ಈ ಅನುವಾದ ಮೆಚ್ಚತಕ್ಕದ್ದಾಗಿದೆ. 

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...