ಎಫ್.ಎಂ. ನಂದಗಾವ್
ನಮ್ಮ ದೇಶದಾದ್ಯಂತ ಈಗ ಎಲ್ಲಿ ನೋಡಿದಲ್ಲಿ, ಮುದ್ರಣ ಮಾಧ್ಯಮಗಳಲ್ಲಿ, ದೂರದರ್ಶನ ವಾಹಿನಿಗಳಲ್ಲಿ, ಸಾಮಾಜಿಕ ತಾಣಗಳಲ್ಲಿ, ಈಗ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ (ಸಿಟಿಜನ್ ಅಮೆಂಡಮೆಂಟ್ ಆಕ್ಟ್) ಚರ್ಚೆ, ಕಾವು. ಎಲ್ಲೆಲ್ಲೂ ಪ್ರತಿಭಟನೆ ಜೋರಾಗಿದೆ. ಅಕ್ರಮ ವಲಸಿಗರ ತಡೆಗಾಗಿ ಕೇಂದ್ರ ಸರ್ಕಾರ ಪೌರತ್ವ ಕಾಯಿದೆಗೆ ಮಾಡಿರುವ ಹೊಸ ತಿದ್ದುಪಡಿಯ ಬಗ್ಗೆ ಒಂದುಕಡೆ ಟೀಕೆಗಳ ಮಹಾಪೂರವೇ ಹರಿದುಬರುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ಪ್ರತಿಯಾಗಿ ಅಧಿಕಾರಾರೂಢ ಪಕ್ಷದ ಸಚಿವರೊಂದಿಗೆ, ಆ ಪಕ್ಷದ ಕಾರ್ಯಕರ್ತರು ಅದರ ಸಮರ್ಥನೆಗೆ ನಿಂತಿದ್ದಾರೆ.
ನಮ್ಮ ದೇಶವು ಈಗ ಸ್ವಾತಂತ್ರದ ನಂತರದಲ್ಲಿ ಯಾವ ಕಾಲದಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಅನುಭವಿಸದ ಸಂಕಷ್ಟಗಳನ್ನು ಎದುರಿಸುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ಹೆಚ್ಚಾಗುತ್ತಿವೆ. ಬಡವ ಬಲ್ಲಿ ದರ ಅಂತರ ಹೆಚ್ಚುತ್ತಿದೆ, ದಲಿತರು, ಆದಿವಾಸಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ, ಬಡವರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗುತ್ತಿದೆ, ದೇಶದ ಆರ್ಥಿಕತೆ ಕುಂಠಿತಗೊಂಡಿದೆ, ಯುವಜನತೆ ಉದ್ಯೋಗದಿಂದ ವಂಚಿತರಾಗಿದ್ದಾರೆ, ಹೆಚ್ಚುತ್ತಿರುವ ಹಣದುಬ್ಬರದಿಂದ ಜನ ಕಂಗಾಲಾಗಿದ್ದಾರೆ. ಇವುಗಳ ಬಗೆಗೆ ಸೂಕ್ತ ಕ್ರಮ ಜರುಗಿಸದ ಸರ್ಕಾರ, ಈ ಪೌರತ್ವ ತಿದ್ದುಪಡಿ ಕಾಯಿದೆ ರಚಿಸಿ ದೇಶದ ಜನತೆಯ ಗಮನ ಬೇರೆಡೆಗೆ ಸೆಳೆದು ದಿಕ್ಕು ತಪ್ಪಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ತಿದ್ದುಪಡಿಯ ಪ್ರಕಾರ, ದೌರ್ಜನ್ಯಕ್ಕೊಳಗಾಗಿ ನೆರೆಯ ದೇಶಗಳಿಂದ ವಲಸೆ ಬರುವ ಮುಸ್ಲೀಂ ಧರ್ಮದವರು ಭಾರತದ ಪೌರತ್ವ ಪಡೆಯುವಂತಿಲ್ಲ. ಆದರೆ, ಹಿಂದೂ, ಜೈನ್, ಬೌದ್ಧ, ಪಾರ್ಸಿ, ಶಿಖ್ ಮತ್ತು ಕ್ರೈಸ್ತರು ಪೌರತ್ವ ಪಡೆಯಬಹುದಾಗಿದೆ. ನಮ್ಮ ಸಂವಿಧಾನ ಸಾರುವ ಪ್ರಕಾರ ನಮ್ಮದು ಸಕಲ ಧರ್ಮದವರನ್ನು ಸಮಾನವಾಗಿ ಕಾಣುವ ಧರ್ಮನಿರಪೇಕ್ಷ, ಜಾತ್ಯತೀತ ದೇಶ. ಆದರೆ, ಸದ್ಯದ ಸರ್ಕಾರ ತಂದಿರುವ ತಿದ್ದುಪಡಿ, ಒಡೆದು ಆಳುತ್ತಿದ್ದ ಬ್ರಿಟಿಷರು ದೇಶದ ಇಬ್ಭಾಗಕ್ಕೆ ಬಿಜಾಂಕುರ ಮಾಡಿದಂತೆಯೇ ಧರ್ಮದ ಹೆಸರಿನಲ್ಲಿ ದೇಶದಲ್ಲಿನ ನಿವಾಸಿಗಳನ್ನು ಇಬ್ಭಾಗ ಮಾಡುತ್ತಿದೆ ಎಂಬ ಆರೋಪಿತ ಕೂಗು ದಿನೇದಿನೇ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕ ಚರ್ಚೆಯಲ್ಲಿರುವ ಈ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಹಿಂಪಡೆಯುವುದೋ ಇಲ್ಲವೋ ಕಾಲ ನಿರ್ಣಯಿಸಲಿದೆ.
ವಲಸಿಗರ ಪ್ರತಿಮೆಯಲ್ಲಿ ಯೇಸುಸ್ವಾಮಿ ಕುಟುಂಬ:
ಅನೇಕ ಅನಿವಾರ್ಯ ಕಾರಣಗಳಿಂದ ತಾಯ್ನೆಲವನ್ನು ತೊರೆದು ಪರದೇಶಕ್ಕೆ ವಲಸೆ ಹೋಗುವವರು ಅನುಭವಿಸುವ ಸಂಕಟ, ತಲ್ಲಣ ಮತ್ತು ತಳಮಳಗಳು ನಿಜಕ್ಕೂ ಅನುಭವಿಸಿದವರಿಗಷ್ಟೇ ಗೊತ್ತು. ಆ ಎಲ್ಲಾ ನೋವು ಬಿಕ್ಕಟ್ಟುಗಳನ್ನು ಪ್ರತಿಮಾ ರೂಪಕವಾಗಿ ಕೂಸು ಯೇಸುಸ್ವಾಮಿಯ ಕುಟುಂಬವು ನಿಲ್ಲುತ್ತದೆ ಎಂಬ ಭಾವ ಕ್ರೈಸ್ತ ಜಗತ್ತಿನಲ್ಲೆಲ್ಲಾ ಸುಳಿದಾಡುತ್ತಿದೆ.
ಈಚೆಗೆ ಕಥೋಲಿಕ ಕ್ರೈಸ್ತರ ಪರಮೋಚ್ಚಗುರು ಪಾಪು ಸ್ವಾಮಿಗಳ (ಪೋಪರ) ಅಧಿಕೃತ ನೆಲೆಯಾದ ರೋಮ ಪಟ್ಟಣದ ವ್ಯಾಟಿಕನ್‍ನಲ್ಲಿ ಸ್ಥಾಪಿಸಿದ ಸಂತ್ರಸ್ತ ವಲಸಿಗರ ಸ್ಮರಣೆಯ `ಅರಿವಿಗೆ ಬಾರದ ದೇವದೂತರು’ (ಏಂಜಲ್ಸ್ ಅನ್ ಅವೇರ್) ಹೆಸರಿನ ಕಂಚಿನ ಪ್ರತಿಮೆ ಈ ಬಗೆಯ ಭಾವಕ್ಕೆ ಪುಟ ನೀಡಿದ್ದಂತೂ ಹೌದು. ಆ ವಲಸಿಗರ ಪ್ರತಿಮೆಯ ಗುಚ್ಛಿನಲ್ಲಿ ಯೇಸುಸ್ವಾಮಿಯ ಕುಟುಂಬವೂ ಸೇರಿಕೊಂಡಿದೆ.
ನಾವು ಈಗ ಕಾಣುತ್ತಿರುವ ಇಂದಿನ ವಲಸೆ ಸಂತ್ರಸ್ತರಿಗೂ ಮತ್ತು ಈಜಿಪ್ಟಿಗೆ ವಲಸೆ ಹೋದ ಯೇಸುಸ್ವಾಮಿಯ ಪವಿತ್ರ ಕುಟುಂಬದೊಂದಿಗೆ ಮಾಡುವ ಈ ಹೋಲಿಕೆ ಸರಿಯೋ ತಪ್ಪೋ ಗೊತ್ತಿಲ್ಲ.
ಎಂದಿನಂತೆ ಪ್ರಸಕ್ತ ಸಾಲಿನ (2019-2020) ಕಥೋಲಿಕ ಪೂಜಾ ಪಂಚಾಂಗದ ಪ್ರಕಾರ ಈಚೆಗೆ ಡಿಸೆಂಬರ 28ರಂದು `ಪಾವನ ಶಿಶುಗಳು, ರಕ್ತಸಾಕ್ಷಿಗಳು’ (ಫೀಸ್ಟ್ ಆಫ್ ಹೋಲಿ ಇನೊಸೆಂಟ್ಸ್) ಹಬ್ಬ ಆಚರಿಸಲಾಯಿತು. ಆಗ ಪೂಜಾವಿಧಿಯ ಸಂದರ್ಭದಲ್ಲಿ ಮತ್ತಾಯನ ಶುಭಸಂದೇಶದ ಎರಡನೇ ಅಧ್ಯಾಯದ 13-18ರ ಚರಣಗಳನ್ನು ಪಠಿಸಲಾಯಿತು.
ಪವಿತ್ರ ಬೈಬಲ್ಲಿನ ಹೊಸ ಒಡಂಬಡಿಕೆಯ ಮತ್ತಾಯನು ಬರೆದ ಶುಭಸಂದೇಶದಲ್ಲಿನ ಎರಡನೇ ಅಧ್ಯಾಯದ 13 ರಿಂದ 18ರವರೆಗಿನ ಚರಣಗಳು ಯೇಸುಸ್ವಾಮಿ ಕುಟುಂಬವು ಬಂಧು ಬಳಗವಿದ್ದರೂ ಅನಾಥವಾಗಿ ಈಜಿಪ್ತಿಗೆ ವಲಸೆ ಹೋಗುವ ಪ್ರಕರಣವನ್ನು ಚಿತ್ರಿಸಿದೆ. ಅಂತೆಯೇ, ಅಂದಿನ ದುರ್ಭರ ದಿನಗಳನ್ನು, ಅಧಿಕಾರಸ್ಥರ ದರ್ಪ, ಹಸುಗೂಸುಗಳ ಕೊಲೆ, ಸಂತ್ರಸ್ತರ ಗೋಳಾಟ ಮೊದಲಾದ ದುರಾಡಳಿತಗಳನ್ನು ಆ ಚರಣಗಳು ಚಿತ್ರಿಸಿವೆ.
ಈಜಿಪ್ಟಿಗೆ ಪಲಾಯನಗೈದ ಪವಿತ್ರಕುಟುಂಬ :
ಜ್ಯೋತಿಷಿಗಳು ಹೊರಟುಹೋದ ಮೇಲೆ ದೇವದೂತರು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು `ಏಳು, ಎದ್ದೇಳು. ಹೆರೋದನು ಮಗುವನ್ನು ಕೊಂದು ಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವತನಕ ಅಲ್ಲೇ ಇರು’ ಎಂದನು. ಅದರಂತೆ, ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು. ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, `ಈಜಿಪ್ಟ ದೇಶದಿಂದ ನನ್ನ ಕುಮಾರನನ್ನು ಕರೆದನು’ ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.
ಹಸುಗೂಸುಗಳ ಕಗ್ಗೊಲೆ :
ಜ್ಯೋತಿಷಿಗಳಿಂದ ತಾನು ವಂಚಿತನಾದೆನೆಂದು ಅರಿತ ಹೆರೋದನು ರೋಷಾವೇಶÀಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದುಹಾಕಿಸಿದನು. `ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ ಅಘೋರ, ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು, ಇನ್ನಿಲದವುಗಳಿಗಾಗಿ ಉಪಶಮನ ಒಲ್ಲೆನುತಿಹಳು’. ಪ್ರವಾದಿ ಯೆರೇಮೀಯನ ಈ ಪ್ರವಚನಅಂದು ಸತ್ಯವಾಯಿತು.
ಮತ್ತಾಯನ ಶುಭಸಂದೇಶ ಸಾರುವ ಪ್ರಕಾರ, ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲೆಹೇಮಿ£ Àಕುಟುಂಬವೊಂದು, ಅಂದರೆ ಪ್ರಭುಯೇಸುಸ್ವಾಮಿಯ ಕುಟುಂಬ ಅಂದಿನ ಆಡಳಿತಗಾರರ ಆಕ್ರೋಶದಿಂದ, ದೌರ್ಜನ್ಯದಿಂದ ಪಾರಾಗಲು ತಮ್ಮ ತಾಯ್ನಾಡನ್ನು ಬಿಟ್ಟು ಈಜಿಪ್ಟಿಗೆ ಪಲಾಯನ ಮಾಡಿತು. ಅಂದಿನ ಆ ದುರಾದೃಷ್ಟ ಕುಟುಂಬದ ಸ್ಥಿತಿಯೂ ಹೆಚ್ಚುಕಡಿಮೆ ಇಂದಿನ ಆಧುನಿಕಕಾಲದಲ್ಲಿನ ವಲಸೆ ಸಂತ್ರಸ್ತರ ಸ್ಥಿತಿಯನ್ನೇ ಹೋಲುತ್ತದೆ.
ವಲಸೆ ಸಂತ್ರಸ್ತರುಯಾರು?:
ವಿಶ್ವಸಂಸ್ಥೆಯು ಸಂತ್ರಸ್ತ ವಲಸೆಗಾರರನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸಿದೆ. ಹಿಂಸೆ, ಯುದ್ಧ ಹಾಗೂ ಕಿರುಕುಳದ ದೆಸೆಯಿಂದ ಅನಿವಾರ್ಯವಾಗಿ ತಮ್ಮ ತಾಯಿನಾಡನ್ನು ತೊರೆದು ಬರುವವರು ವಲಸೆ ಸಂತ್ರಸ್ತರು. ಸಂತ್ರಸ್ತ ವಲಸೆಗಾರರು ಜಾತಿ, ಮತಧರ್ಮ, ರಾಷ್ಟ್ರೀಯತೆ, ರಾಜಕೀಯ ಭಿನ್ನಾಭಿಪ್ರಾಯ, ಒಂದು ನಿರ್ದಿಷ್ಟ ಸಾಮಾಜಿಕ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ಕಿರುಕುಳದ ಭೀತಿ ಹೊಂದಿರುತ್ತಾರೆ.
ಶುಭಸಂದೇಶಕರ್ತ ಮತ್ತಾಯನು ವಿವರಿಸುವ ಪ್ರಕಾರ, ಒಂದು ಸಾಮಾಜಿಕ ಸಮುದಾಯಕ್ಕೆ ಸೇರಿದ ಯೇಸುಸ್ವಾಮಿಯ ಪವಿತ್ರಕುಟುಂಬವು, ಒಬ್ಬ ಕ್ರೂರ ಆಡಳಿತಗಾರರನ ದುಷ್ಟತನಕ್ಕೆ ಹೆದರಿ ಪಲಾಯನದ ಮಾರ್ಗ ಹಿಡಿದಿತ್ತು. ಕೂಸು ಯೇಸುಸ್ವಾಮಿಯೊಂದಿಗೆ ಈಜಿಪ್ಟಿಗೆ ಪಲಾಯನ ಮಾಡುವಾಗ ತಂದೆ ಜೋಸೆಫ್ ಮತ್ತು ತಾಯಿ ಮರಿಯ ಅಧಿüಕೃತವಾಗಿ ತಮ್ಮನ್ನು ತಾವು ಸಂತ್ರಸ್ತ ವಲಸೆಗಾರರು ಎಂದು ಘೋಷಿಸಿಕೊಂಡು ಎಲ್ಲಾದರೂ ಮನವಿ ಸಲ್ಲಿಸಿದ್ದರೆ? ಇದಕ್ಕೆ ಬಹುಶಃ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ.
ಅವರ ಕಾಲದಲ್ಲಿ, ಎರಡು ಸಾವಿರ ವರ್ಷಗಳ ಹಿಂದೆ. ಈ ಬಗೆಯ ಸಂತ್ರಸ್ತರ ವ್ಯಾಖ್ಯಾನಗಳು ಗಡಿ ಕಾನೂನುಗಳು ಜಾರಿಯಲ್ಲಿ ಇದ್ದಿರಲಿಕ್ಕಿಲ್ಲ. ಆ ಕಾಲದಲ್ಲಿ ದೇಶದೇಶಗಳ ನಡುವೆ ಗಡಿಯು ಇಂದಿನ ಕ್ರಮದಲ್ಲಿ ಕ್ರಮಬದ್ಧವಾಗಿ ಇದ್ದಿರಲಿಕ್ಕಿಲ್ಲ. ಒಂದಂತೂ ನಿಜ, ಪುರಾತನ ಇಜಿಪ್ಟ ದೇಶ ಕ್ರಿಸ್ತಶಕಪೂರ್ವ 30ರ ಸುಮಾರು ರೋಮನ್ ಚಕ್ರವರ್ತಿಗಳ ಆಡಳಿತಕ್ಕೆ ಒಳಪಟ್ಟಿತು. ಅದಕ್ಕೂ ಪೂರ್ವದಲ್ಲಿ ಅದು ಸ್ವತಂತ್ರ ದೇಶವಾಗಿಯೇ ಇತ್ತು. ಹೀಗಾಗಿ ಆ ಈಜಿಪ್ಟ ನಾಡು, ಹೆರೋದ ಅರಸನ ಆಡಳಿತವಿದ್ದ ಪ್ರದೇಶದ ಆಚೆ ಇದ್ದ ನಾಡು.
ಪಲಾಯನಕ್ಕೆ ಅನುಕೂಲಕರ ದೇಶ ಈಜಿಪ್ಟ:
ಪುರಾತನ ಈಜಿಪ್ಟ್ ದೇಶವು, ಆದಿಕಾಲದಿಂದಲೂ ಯೆಹೂದಿಗಳ ಪಾಲಿಗೆ ಪಲಾಯನಕ್ಕೆ ಅನುಕೂಲಕರವಾದ ಒಂದು ಸುರಕ್ಷಿತ ತಾಣವೇ ಆಗಿತ್ತು. ಇದನ್ನು ಬೈಬಲಿನ ಹಳೆಯ ಒಡಂಬಡಿಕೆಯ ಅರಸುಗಳು ಪುಸ್ತಕದಲ್ಲಿ ಕಾಣಬಹುದು. ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು, ಈಜಿಪ್ಟಿನ ಅರಸ ಶೀಸಕನ ಬಳಿಗೆ ಹೋಗಿ, ಸೊಲೊಮೋನನು ಜೀವದಿಂದಿರುವವರಿಗೆ ಅಲ್ಲಿಯೇ ಇದ್ದನು. (ಅರಸುಗಳು 1ನೇ ಪ್ರಕರಣ, 11ನೇ ಅಧ್ಯಾಯ 40ನೇ ಚರಣ).
ಈಜಿಪ್ಟಿನ ಪಲಾಯನದ ಇನ್ನೊಂದು ಘಟನೆಯನ್ನು ಪ್ರವಾದಿ ಯೆರೆಮೀಯನ ಗ್ರಂಥದ 26ನೇ ಅಧ್ಯಾಯ 21 ನೇ ಚರಣ ದಾಖಲಿಸಿದೆ. ಅರಸ ಯೆಹೋಯಾಕೀಮನು ಅವನ ಎಲ್ಲ ವೀರಶೂರರು ಹಾಗೂ ನಾಯಕರು ಆ ಊರೀಯನ ಮಾತುಗಳನ್ನು ಕೇಳಿಸಿಕೊಂಡರು. ಕೂಡಲೆ ಅರಸ ಅವನನ್ನು ಕೊಂದುಹಾಕಲು ಮನಸ್ಸು ಮಾಡಿದ. ಈ ಸುದ್ದಿಯನ್ನು ಕೇಳಿದ ಊರೀಯ ಭಯಪಟ್ಟು ಓಡಿಹೋಗಿ ಈಜಿಪ್ಟನ್ನು ಸೇರಿಕೊಂಡ.
ಮಕ್ಕಬಿಯರ ಕಾಲದಲ್ಲೂ ಪ್ರಧಾನಯಾಜಕ ನಾಲ್ಕನೇ ಓನೀಯನು ಆಶ್ರಯ ಅರಸಿಕೊಂಡು ಈಜಿಪ್ಟಿಗೆ ಓಡಿಹೋಗಿದ್ದನ್ನು ಗಮನಿಸಬಹುದು.
ಆದಿಕಾಂಡದಲ್ಲಿ ಮೊದಲ ಬಾರಿ (37ನೇ ಅಧ್ಯಾಯ) ಯಕೋಬನ ಮಕ್ಕಳಾದ ಜೋಸೆಫ್ ಮತ್ತು ಸೋದರರ ಚರಿತ್ರೆಯಲ್ಲಿ ಈಜಿಪ್ಟಿನ ಪ್ರಸ್ತಾಪವಾಗಿದೆ. ಕನಸುಗಾರ ಜೋಸೆಫ್ ನನ್ನು ಸಾಯಿಸಲು ಉದ್ದೇಶಿಸಿದ ಸೋದರರು ಅವನನ್ನು ಈಜಿಪ್ಟಿಗೆ ಹೊರಟಿದ್ದ ವ್ಯಾಪಾರಿಗಳಿಗೆ ಮಾರಿಬಿಡುತ್ತಾರೆ. ಮುಂದೆ ಆತ ಈಜಿಪ್ಟಿನ ಅರಸರ ಆಸ್ಥಾನದಲ್ಲಿ ಉನ್ನತ ಸ್ಥಾನದಲ್ಲಿದ್ದಾಗ, ತಮ್ಮ ನಾಡಿನಲ್ಲಿನ ಬರಗಾಲದಿಂದ ಬೆಂದ ಅವನ ಸೋದರರು ಅಲ್ಲಿಗೆ ತೆರಳುತ್ತಾರೆ. ಮುಂದೆ ಯೆಹೂದಿಗಳು ಅಲ್ಲಿ ಈಜಿಪ್ಟಿನ ಜನರ ಗುಲಾಮರಾಗುತ್ತಾರೆ. ತಲೆಮಾರುಗಳ ನಂತರ ಪ್ರವಾದಿ ಮೋಶೆಯ ಕಾಲದಲ್ಲಿ ಅವರಿಗೆ ಬಿಡುಗಡೆ ಸಿಗುತ್ತದೆ.
ದೇವದೂತನ ಪ್ರಕಾರವೂ ಇದು ವಲಸೆ ಸಂತ್ರಸ್ತ ಕುಟುಂಬ:
ಅಧಿಕಾರಸ್ಥರ ಕಿರುಕುಳದ ಭಯದಿಂದಲೇ ಶಿಶು ಯೇಸುಸ್ವಾಮಿ ಅವರ ಕುಟುಂಬ, ತಮ್ಮ ನಾಡನ್ನು ಬಿಟ್ಟು ಪರದೇಶಕ್ಕೆ ವಲಸೆ ಹೋಗಬೇಕಾಯಿತು.
ಜೋತಿಷಿಗಳು ಹೊರಟು ಹೋದ ಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, `ಏಳು, ಹೆರೋದನು ಮಗುವನ್ನು ಕೊಂದು ಹಾಕಲು ಹವಣಿಸುತ್ತಿದ್ದಾನೆ. ಮಗುವನ್ನು ತಾಯಿಯನ್ನು ಕರೆದುಕೊಂಡು ಈಜಿಪ್ಟ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವತನಕ ಅಲ್ಲೇ ಇರು’ ಎಂದರು. (ಮತ್ತಾಯ 2ನೆಯ ಅಧ್ಯಾಯ, 13ನೆಯ ವಚನ)
ಇಲ್ಲಿ, ಪವಿತ್ರ ಬೈಬಲ್ಲಿನ ಹೊಸ ಒಡಂಬಡಿಕೆಯ ಮತ್ತಾಯನ ಶುಭಸಂದೇಶದ ಅನುವಾದದಲ್ಲಿ `ಓಡಿಹೋಗು’ ಎನ್ನುವ ಪದವನ್ನು ಇಂಗ್ಲಿಷ ಭಾಷೆಯ `ಫ್ಲೀ’ ಪದಕ್ಕೆ ಸಂವಾದಿಯಾಗಿ ಬಳಸಲಾಗಿದೆ. ಇದೇ `ಫ್ಲೀ’ ಪದ `ವಲಸೆ ಸಂತ್ರಸ್ತ’ ಎಂಬ ಅರ್ಥದ `ರಿಫುಜಿ’ ಪದದ ಮೂಲ ಎನ್ನಲಾಗುತ್ತದೆ. ಮತ್ತಾಯನ ಶುಭಸಂದೇಶದಲ್ಲಿನ ದೇವದೂತ ಶಿಶು ಯೇಸುಸ್ವಾಮಿಯ ಕುಟುಂಬವನ್ನು ವಲಸೆ ಸಂತ್ರಸ್ತ ಕುಟುಂಬವೆಂದು ಗುರುತಿಸುತ್ತಾನೆ!
ಅಪರಿಚಿತನಾಗಿದ್ದೆ ಆಶ್ರಯಕೊಟ್ಟಿರಿ:
ಮತ್ತಾಯನ ಶುಭಸಂದೇಶದ 25ನೆಯ ಅಧ್ಯಾಯ 35ನೇ ಚರಣದಿಂದ 45ನೇ ಚರಣದ ವರೆಗಿನ ಪಠ್ಯದಲ್ಲಿ `ಪರರ ಸೇವೆಯೆ ಪರಮಾತ್ಮನ ಸೇವೆ, ಅಪರಿಚತರಲ್ಲಿ ನನ್ನನ್ನು ಕಾಣಿರಿ’ ಎಂದು ಬೋಧಿಸಿರುವುದನ್ನು ಗುರುತಿಸಬಹುದು.
`ನಾನು ಹಸಿದಿದ್ದೆ, ನನಗೆ ಆಶ್ರಯಕೊಟ್ಟಿರಿ, ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ. ಅಪರಿಚಿತನಾಗಿದ್ದೆ, ನನಗೆ ಆಶ್ರಯಕೊಟ್ಟಿರಿ. ಬಟ್ಟೆಬರೆ ಇಲ್ಲದೇ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನ ಆರೈಕೆ ಮಾಡಿದಿರಿ. ಬಂಧಿ ಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ’.. ಈ ಮೊದಲಾದ ಮಾತುಗಳಿಂದ ಅಪರಿಚಿತರನ್ನು ಸತ್ಕರಿಸುವುದೂ ಕ್ರೈಸ್ತರ ಕರ್ತವ್ಯ ಎಂದು ತಿಳಿಸುತ್ತಾರೆ ಯೇಸು.
ಅದರಂತೆಯೇ, ಪಾಪು ಸ್ವಾಮಿಗಳ ಅಧಿಕೃತ ನೆಲೆಯಾದ ರೋಮ ಪಟ್ಟಣದ ವ್ಯಾಟಿಕನ್‍ನಲ್ಲಿ ಕಳೆದ ವರ್ಷ ಸ್ಥಾಪಿಸಿದ ಸಂತ್ರಸ್ತ ವಲಸಿಗರ ಸ್ಮರಣೆಯ `ಅರಿವಿಗೆ ಬಾರದ ದೇವದೂತರು’ ಈ ಭಾವದ ಅಭಿವ್ಯಕ್ತಿ ಎನ್ನಬಹುದು.
ಭಾರತದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಲಪಂಥೀಯ ವಿಚಾರಧಾರೆಯ ಆಡಳಿತ ಪಕ್ಷವು ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಟಿಜನ್ ಅಮೆಂಡಮೆಂಟ್ ಆಕ್ಟ್) ಕುರಿತಂತೆ ಭಾರತ ಮೂಲದ ಕ್ರೈಸ್ತರ ಪೌರ್ವಾತ್ಯ ಧರ್ಮಸಭೆಯ ಬಿಷಪರು, ದೇಶದ ಸಂವಿಧಾನಿಕ ತತ್ವಗಳಿಗೆ ಕುಂದು ಉಂಟಾಗಬಾರದು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರೆ, ಬೆಂಗಳೂರಿನ ಕಥೊಲಿಕ ಕ್ರೈಸ್ತ ಪಂಥದ ಮಹಾಧರ್ಮಾಧ್ಯಕ್ಷರು ಈ ನಿಟ್ಟಿನ ಧರ್ಮಾಧಾರಿತ ನಿಲುವು ತರವಲ್ಲ ಎಂದಿದ್ದಾರೆ.
ಸುಡಾನ, ಉಗಾಂಡ, ಸೊಮಾಲಿಯ, ಈಥಿಯೋಪಿಯ, ಎರಿಟ್ರಿಯ, ರವಾಂಡ, ಬುರುಂಡಿ, ಇರಾನ್, ಇರಾಕ್, ಅಫಘಾನಿಸ್ತಾನ, ಪಾಕಿಸ್ತಾನ, ಮೈನ್ಮಾರ (ಬರ್ಮಾ), ಬಂಗ್ಲಾ ಮೊದಲಾದ ದೇಶಗಳಲ್ಲಿನ ಅಲ್ಪಸಂಖ್ಯಾತರು ಧರ್ಮದ ಕಾರಣದಿಂದ ಮನೆಮಠಗಳನ್ನು ಬಿಟ್ಟು ತಮ್ಮತಮ್ಮ ದೇಶಗಳನ್ನು ತೊರೆದು ಸಂತ್ರಸ್ತರಾಗಿ ಸುರಕ್ಷಿತ ತಾಣಗಳನ್ನು ಅರಸಿ ತಮ್ಮ ನೆರೆಹೊರೆಯ ದೇಶಗಳಿಗೆ, ದೂರದ ಖಂಡಗಳಿಗೆ ವಲಸೆ ಹೋಗುತ್ತಿದ್ದಾರೆ.
ಶಿಶು ಯೇಸುಸ್ವಾಮಿಯ ಪವಿತ್ರಕುಟುಂಬ ಎದುರಿಸಿದ ಸಂಕಷ್ಟಗಳನ್ನೇ ಇಂದಿನ ವಲಸೆ ಸಂತ್ರಸ್ತ ಕುಟುಂಬಗಳು ಎದುರಿಸುತ್ತಿವೆ. ತಂದೆತಾಯಿ ಎದುರಿನಲ್ಲಿಯೇ ಕಂದಮ್ಮಗಳನ್ನು ಕೊಲ್ಲಲಾಗುತ್ತಿದೆ. ಪುಟಾಣಿ ಮಕ್ಕಳ ಮುಂದೆಯೇ ಅವರ ತಂದೆ ತಾಯಿಗಳನ್ನು, ಪೋಷಕರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗುತ್ತಿದೆ. ಈ ಅಮಾಯಕ ವಲಸೆ ಸಂತ್ರಸ್ತ ಕುಟುಂಬಗಳು ಒಂದು ಬಗೆಯಲ್ಲಿ ಪವಿತ್ರಕುಟುಂಬ ಎದುರಿಸಿದ ಪರಿಸ್ಥಿತಿಯಲ್ಲಿಯೆ ತೊಳಲಾಡುತ್ತಿವೆ.
ಧರ್ಮದ ಹೆಸರಿನಲ್ಲಿ ದೌರ್ಜನ್ಯ ನಡೆಸಿ, ತಮಗೊಪ್ಪದ ಧರ್ಮದವರನ್ನು ಅಸಹನೆಯಿಂದ ಅವರ ನೆಲೆಗಳಿಂದ ಹೊರಗಟ್ಟುವ ಧೂರ್ತತನ ತೋರುವ, ಉಗ್ರಗಾಮಿ ಸಂಘಟನೆಗಳ, ಅಧಿಕಾರಸ್ಥ ಮತಾಂಧರ ಮನಃ ಪರಿವರ್ತನೆಯಾಗಬೇಕಿದೆ. ಇದೊಂದು ಈಗ ಜಾಗತಿಕ ಮಟ್ಟದ ಹೊಸ ಪಿಡುಗಿನ ರೂಪ ತಾಳುತ್ತಿದೆ. ಇಂತಹ ಸಂದರ್ಭದಲ್ಲಿ ಜಾತ್ಯತೀತ ನಿಲುವಿನ ಭಾರತ ಜಾತಿಮತದ ಆಧಾರದ ಮೇಲೆ ವಲಸಿಗರಲ್ಲಿ ತಾರತಮ್ಯ ಮಾಡುತ್ತಿರುವುದು ಪ್ರಜ್ಞಾವಂತರಲ್ಲಿ ತಳಮಳ ಮೂಡಿಸುತ್ತಿದೆ.
-0--0--0--0--0--0-
No comments:
Post a Comment