ನಾವೀಗ ಕಿಸ್ಮಸ್ಆಚರಣೆಯ ಹೊಸ್ತಿಲಲ್ಲಿದ್ದೇವೆ. ಮನುಷ್ಯರನ್ನು ಪಾಪ ಮುಕ್ತರನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ರಕ್ಷಕ ಪ್ರಭು ಯೇಸುಸ್ವಾಮಿಯು ಭೂಮಿಗಿಳಿದ ಸಂದರ್ಭದ ಮತ್ತು ಸನ್ನಿವೇಶದ ಸ್ಮರಣೆಯು ಆಚರಣೆಯು ವಿವಿಧ ಬಗೆಯಲ್ಲಿ ಅನುರಣಿಸಲಿದೆ. ಪ್ರತಿಯೊಂದು ಕ್ರಿಸ್ಮಸ್ ಆಚರಣೆಯು ದೇವರು ತನ್ನ ಮಕ್ಕಳ ಮೇಲಿನ ಪ್ರೀತಿಯನ್ನು ಅನಾವರಣಗೊಳಸಲು, ತನ್ನ ಮಗನು ಭೂಮಿಯಲ್ಲಿ ಅವತಾರ ತಾಳುವ ವಿಸ್ಮಯವನ್ನು, ಅದ್ಭುತವನ್ನು, ಮಹಿಮೆಯನ್ನು ಸಾರುವ ಸಂಧರ್ಭವಾಗಿದೆ.
ಮನೆಮನೆಗಳಲ್ಲಿ, ಚರ್ಚುಗಳಲ್ಲಿ ಅಸುಗೂಸು ಯೇಸುಸ್ವಾಮಿ ಪವಡಿಸಿದ್ದ ಗೋದಲಿಗಳ ನಿರ್ಮಾಣ, ಅವುಗಳನ್ನು ಬಗೆಬಗೆಯಲ್ಲಿ ಅಲಂಕರಿಸುವುದು, ಸಾಂತಾಕ್ಲಾಸ್ ಬಟ್ಟೆ ತೊಡುವ ಹಿರಿಯರು ಮಕ್ಕಳಿಗೆ ತಿನಿಸು, ಕಾಣಿಕೆಗಳನ್ನು ಕೊಡುವುದು, ಕ್ರಿಸ್ಮಸ್ ಗಾಯನ, ಕ್ರಿಸ್ಮಸ್ ಮರದ ಅಲಂಕಾರ ಮೊದಲಾದವು ಕ್ರಿಸ್ಮಸ್ ಆಚರಣೆಯ ಅವಿಭಾಜ್ಯ ಅಂಗಗಳಾಗಿವೆ.
ಈ ಎಲ್ಲಾ ಆಚರಣೆಗಳಲ್ಲಿ ಪ್ರಮುಖವಾಗಿ ಕಣ್ಣು ಸೆಳೆಯುವ ನಕ್ಷತ್ರವನ್ನು ಕಟ್ಟುವ ಪ್ರಕ್ರಿಯೆಯ ಮೂಲ ಪ್ರೇರಣೆಯನ್ನು ನಾವು ಶಿಶು ಯೇಸುವನ್ನು ಕಾಣಲು ಬರುವ ಮೂರು ರಾಯರ ಭೇಟಿಯಲ್ಲಿ ಗುರುತಿಸಬಹುದಾಗಿದೆ. ಈ ಮೂವರು ಪೂರ್ವದ ನಾಡಿನ ರಾಯರು ಜೆರುಸಲೇಮಿಗೆ ಬಂದು ಇಸ್ರಯೇಲರ ಅರಸ ಯೇಸುಸ್ವಾಮಿ ಎಲ್ಲಿ? ಎಂದು ಕೇಳುತ್ತಾರೆ (ಮತ್ತಾಯ 2,1-2). ಈ ಮೂವರು ರಾಯರನ್ನು ಪಂಡಿತರು, ಜ್ಯೋತಿಷಿಗಳು ಒಮ್ಮೊಮ್ಮೆ ಅರಸರು ಎಂದೂ ಗುರುತಿಸಲಾಗುತ್ತದೆ.
‘ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ; ಜುದೇಯ ನಾಡಿನ ಬೆತ್ಲೆಹೇಮ್ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. ``ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ, ಅವರೆಲ್ಲಿ?'' ಎಂದು ವಿಚಾರಿಸಿದರು; ``ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ'' ಎಂದರು.' ಇದು, ಮತ್ತಾಯನ ಶುಭಸಂದೇಶದಲ್ಲಿನ ಪಠ್ಯ.
ಪವಿತ್ರ ಭೂಮಿ ಬೆತ್ಲೆಹೇಮಿನಲ್ಲಿರುವ ಪುರಾತನವಾದ ಕ್ರಿಸ್ತನ ಜನನವನ್ನು ಸಾರುವ `ಕ್ರಿಸ್ತನ ಜನನೋತ್ಸವ ಸ್ಮರಣೆಯ ಚರ್ಚ್' ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಮುಖವಾದ ಪವಿತ್ರವಾದ ಚರ್ಚು. ಅದು, ವಿಶ್ವಾಸಿಕರಿಗೆ ಬೆಚ್ಚನೆಯ ಅನುಭವ ನೀಡುವ ತಾಣವಾಗಿದೆ. ಯೇಸುಸ್ವಾಮಿ ಜನ್ಮ ತಾಳಿದ ಜಾಗದ ಮೇಲೆಯ ಈ ಚರ್ಚ್ಅನ್ನು ಕಟ್ಟಲಾಗಿದೆ. ಜನನೋತ್ಸವದ ಚರ್ಚಿನ ಪೂಜಾಂಕಣ – ಪೀಠದ ಅಡಿಯಲ್ಲಿ ಆ ಯೇಸುಸ್ವಾಮಿ ಜನ್ಮತಾಳಿದ ಸ್ಥಳವೆಂದು ಗುರುತಿಸಲಾಗುವ ಗುಹೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಯೆಹೂದಿಗಳಿದ್ದ ಪ್ರದೇಶದ ಮೇಲೆ ರೋಮನ್ಚಕ್ರವರ್ತಿಯು ಪ್ರಭುತ್ವ ಹೊಂದಿದ್ದ. ಅವನ ಆಣತಿಯ ಮೇರೆಗೆ ಆರಂಭವಾಗಿದ್ದ ಖಾನೆಸುಮಾರಿ ಅಂದರೆ ಜನಗಣತಿ ನಡೆಯುವ ಸಂದರ್ಭದಲ್ಲಿ ಜೆರುಸಲೇಮಿನಿಂದ ತಮ್ಮ ಪೂರ್ವಜರ ಊರು ಬೆತ್ಲೆಹೇಮಿಗೆ ತಂದೆ ಜೋಸೆಫ್ ಮತ್ತು ತುಂಬ ಗರ್ಭಿಣಿತಾಯಿ ಮರಿಯಳು ಕತ್ತೆಯ ಮೇಲೆ ಕುಳಿತು ಬಂದಿದ್ದರು. ಅವರಿಗೆ ತಂಗಲು ಎಲ್ಲೂ ಸ್ಥಳಾವಕಾಶ ಸಿಗದೇ ಕೊನೆಗೆ ಮನೆಯೊಂದರ ದನದ ಕೊಟ್ಟಿಗೆಯಲ್ಲಿ ಉಳಿದುಕೊಳ್ಳಬೇಕಾಯಿತು. ಅಲ್ಲಿ ಯೇಸುಸ್ವಾಮಿ ದೀನರಲ್ಲಿ ದೀನನಾಗಿ ಹುಟ್ಟಿದ ಎಂಬುದು ಜನಪರದ ನಂಬುಗೆ. ಅಂತೆಯೇ ಕೊಟ್ಟಿಗೆ, ಅದರಲ್ಲಿ ಗೋದಲಿಯಲ್ಲಿ ಅಸುಗೂಸು ಪ್ರಭು ಯೇಸುಸ್ವಾಮಿಯನ್ನು ಕೂರಿಸುವ ಸಂಪ್ರದಾಯ ಪ್ರಚಲಿತದಲ್ಲಿದೆ.
ಆದಿ ಕಾಲದಿಂದಲೂ ಗುಹೆಗಳು ಯೆಹೂದಿಗಳ ಸಮಾಧಿ ತಾಣಗಳು. ಅದೇ ಪದ್ಧತಿ ಕ್ರೈಸ್ತರಲ್ಲೂ ಮುಂದುವರೆದಿತ್ತು. ಮೊದಮೊದಲು ರೋಮನ್ ಪ್ರಭುತ್ವವದ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಆದಿ ಕ್ರೈಸ್ತರಿಗೆ ಗುಹೆಗಳು ಪ್ರಮುಖ ಅಡುಗು ತಾಣಗಳು ಹಾಗೂ ಪ್ರಾರ್ಥನೆಗೆ ಒಟ್ಟು ಸೇರುವ ಸ್ಥಳಗಳಾಗಿದ್ದವು. ಈ ಐತಿಹಾಸಿಕ ಹಿನ್ನೆಲೆಯಲ್ಲಿ ಹಿಂದೆ ಪ್ರತಿಯೊಂದು ಚರ್ಚಿನಲ್ಲೂ ನೆಲಮಾಳಿಗೆಯಂಥ ಆಕಾರಗಳು ಇರುತ್ತಿದ್ದವು. ಮಾತೆ ಮರಿಯಳು ದರ್ಶನಕೊಟ್ಟಿದ್ದೂ ಗುಹೆಯಲ್ಲಿಯೆ.
ಬೆತ್ಲೆಹೇಮ್ನ ಕ್ರಿಸ್ತ ಜನನೋತ್ಸವದ ಸ್ಮರಣೆಯ ಚರ್ಚಿನ ಗುಹೆಯೊಂದರಲ್ಲಿ ಕ್ರಿಸ್ತ ಜನಿಸಿದ ತಾಣವೆಂದು ಗುರುತಿಸಿದ ಜಾಗದಲ್ಲಿ ಜನನದ ಪ್ರತೀಕವಾಗಿ ಉಬ್ಬು ಶಿಲ್ಪದ ಬೆಳ್ಳಿಯ ನಕ್ಷತ್ರವೊಂದನ್ನು ಭೂಮಿಯ ಮೇಲೆ ಮಲಗಿಸಲಾಗಿದೆ. ಆ ಚರ್ಚಿಗೆ ಭೇಟಿಕೊಡುವ ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಕನಿಗೆ ಅದನ್ನು ಮುಟ್ಟಿ ಪ್ರಾರ್ಥನೆ ಸಲ್ಲಿಸಿ ಧನ್ಯತೆಯನ್ನು ಅನುಭವಿಸುವುದು ಅವರ ಜೀವನದ ಒಂದು ಅವಿಸ್ಮರಣೀಯವಾದ ಕ್ಷಣ.
ಪೂರ್ವದ ಮೂವರು ರಾಯರು ಕಂಡ ನಕ್ಷತ್ರವನ್ನು ಗ್ರೀಕ್ ಭಾಷೆಯಲ್ಲಿ (ಅಸ್ತೆರ್) ಎಂದು ಕರೆದಿದ್ದಾರೆ. ಈ ಗ್ರೀಕ್ ಪದ ಎಸ್ತೆರ್ಎಂದರೆ, ಸೂರ್ಯ, ಚಂದ್ರರನ್ನು ಹೊರತುಪಡಿಸಿದ ಆಕಾಶದಲ್ಲಿ ಮಿನುಗುವ ಒಂದು ಆಕಾಶ ಕಾಯ. ಈ ಆಕಾಶ ಕಾಯ ನಕ್ಷತ್ರವಾಗಿರಬಹುದು, ಗ್ರಹವಾಗಿರಬಹುದು ಅಥವಾ ಧೂಮಕೇತುವೂ ಆಗಿರಬಹುದು.
ಆ ಆಕಾಶ ಕಾಯ ಕ್ಷೀಣವಾಗಿ ಮಿನುಗಿರಬಹುದು. ಏಕೆಂದರೆ, ಅದು ಇಸ್ರಯೇಲ್ಅರಸ ಹೆರೋದ (ಮತ್ತಾಯ 2:7)ನ ಗಮನಕ್ಕೂ ಬಂದಿಲ್ಲ. ಆತ, ಆ ನಕ್ಷತ್ರ ನಿಮಗೆ ಕಂಡದ್ದು ಎಂದು? ಆತನನ್ನು ಕಾಣಲು ಬಂದ ಆ ಮೂವರು ರಾಯರನ್ನೇ ವಿಚಾರಿಸುತ್ತಾನೆ,
`ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು' ಎಂದು ಮತ್ತಾಯನು ತನ್ನ ಸುವಾರ್ತೆಯಲ್ಲಿ ದಾಖಲಿಸಿದ್ದಾನೆ.
ವಿಪರ್ಯಾಸವೆಂದರೆ, ಈ ಮೂವರು ರಾಯರು - ಪಂಡಿತರು. ಅವರಿಗೆ ಖಗೋಳ ಜ್ಞಾನ ಸಾಕಷ್ಟಿತ್ತು. ಅವರು, ನಕ್ಷತ್ರದ ಇರುವನ್ನಷ್ಟೇ ಗಮನಿಸಿಲ್ಲ. ಅದನ್ನು ಯೆಹೂದಿ ಅರಸನ ಬರುವಿಕೆಗೆ ಸಮೀಕರಿಸುವ, ವಿಶ್ಲೇಷಿಸುವ ಖಗೋಳ ಹಾಗೂ ಪುರಾತನ ಯೆಹೂದಿಗಳ ಇತಿಹಾಸದ ಅಪಾರಜ್ಞಾನವನ್ನು ಅವರು ಹೊಂದಿದ್ದರು.
ಹೆರೋದನ ವಿಚಾರಣೆಯ ನಂತರ, ಯೆಹೂದಿಗಳ ಅರಸ ಬೆತ್ಲಹೇಮಿನಲ್ಲಿ ಹುಟ್ಟುವುದನ್ನು ಖಾತರಿಪಡಿಸಲು ಮುಖ್ಯಯಾಜಕರು ಮತು ಧರ್ಮಶಾಸ್ತ್ರಿಗಳು, `ಜುದೇಯನಾಡಿನ ಬೆತ್ಲೆಹೇಮೇ, ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನೂ ಅಲ್ಲ. ಕಾರಣ ನನ್ನ ಪ್ರಜೆ ಇಸ್ರಯೇಲರನ್ನು ಪರಿಪಾಲಿಸುವನು ನಿನ್ನಿಂದಲೇ ಉದಯಿಸಲಿರುವನು' ಎಂದು ಪ್ರವಾದಿ ಬರೆದಿದ್ದನ್ನು ತಿಳಿಸುತ್ತಾರೆ.
ಈ ಮೂವರು ರಾಯರು, ನಾವು ಇಂದು ಕಾಣುವ ಕಾಲವನ್ನು ಗುಣಿಸಿ ಭಾಗಿಸಿ ನಮ್ಮ ಭವಿಷ್ಯವನ್ನು ಹೇಳುವ ಜೋತಿಷಿಗಳಂತೆ ಇರಲಿಲ್ಲ. ತಮ್ಮ ಅಪಾರ ಜ್ಞಾನವನ್ನು ಬಳಸಿ ದೇವಪುತ್ರನ ಜನನೋತ್ಸವ ಆಗಲೇ ಆಗಿ ಬಿಟ್ಟಿದೆ ಎಂದು ಅವರು ಲೆಕ್ಕ ಹಾಕಿಬಿಟ್ಟಿದ್ದರು.
ಆಕಾಶ ಕಾಯಗಳ ಇರುವಿಕೆ, ಅವುಗಳ ಚಲನೆ, ನಕ್ಷತ್ರ ರಾಶಿಗಳು ಒಂದು ರೀತಿಯಲ್ಲಿ ಮಾನವನ ಭವಿಷ್ಯವನ್ನು ನಿರ್ಧರಿಸುತ್ತವೆ. ಮಾನವರ ಹುಟ್ಟಿದ ಗಳಿಗೆಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅವನ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಆತನ ಜೀವನದಲ್ಲಿನ ಒಳಿತು ಕೆಡಕುಗಳಿಗೆ ಆಕಾಶ ಕಾಯಗಳ ಚಲನೆಯ ಕಾರಣ, ಅದು ಅವರವರ ಗ್ರಹಗತಿ ಎಂದೂ ಹಲವಾರು ಧರ್ಮಗಳ ವಿಶ್ವಾಸಿಗಳು, ಧರ್ಮವನ್ನು ಪಾಲಿಸುವವರು ನಂಬುತ್ತಾರೆ.
ಈ ಬಗೆಯ ಆಕಾಶ ಕಾಯಗಳ ಚಲನೆಯನ್ನುಆಯಾ ವ್ಯಕ್ತಿಯ ಜೀವನದ ಭವಿಷ್ಯದ ಘಟನಾವಳಿಗಳಿಗೆ ತಳಕುಹಾಕುವ ವಿದ್ಯಮಾನ- ಅಂಥ ತಿಳಿವಳಿಕೆ ಪುರಾತನ ಕಾಲದಿಂದಲೂ ವಿವಿಧ ಸಮುದಾಯಗಳಲ್ಲಿ ಇರುವುದನ್ನು ನಾವು ಕಾಣಬಹುದು. ಕ್ರಿಸ್ತ ಪೂರ್ವದ ಬೆಬಿಲೋನಿಯ ಸಾಮ್ರಾಜ್ಯದಲ್ಲೂಅಂಥ ತಿಳಿವಳಿಕೆ ಪ್ರಚಲಿತದಲ್ಲಿತ್ತು.
ಆದರೆ, ಶ್ರೀಗ್ರಂಥ `ಬೈಬಲ್'ನಲ್ಲಿ ಮಾತ್ರ ಅಂಥದಕ್ಕೆ ಅವಕಾಶ ಕೊಟ್ಟಂತೆ ಇಲ್ಲ. ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು ಮೊದಲಾದವು ದೇವರ ಸೃಷ್ಟಿ. ಇತರ ಎಲ್ಲಾ ಸೃಷ್ಟಿಗಳಂತೆ ಇವೂ ಅಷ್ಟೇ. ಅವನ ಆಧೀನದಲ್ಲಿರುವ ಈ ಆಕಾಶಕಾಯಗಳನ್ನು ಆದರಿಸುವುದನ್ನು ಶ್ರೀಗ್ರಂಥ ಬೈಬಲ್ ನಿಷೇಧಿಸಿದೆ.
ಇತ್ತೀಚೆಗಿನ ದಿನಗಳಲ್ಲಿ ವಿಜ್ಞಾನವನ್ನು ಐತಿಹಾಸಿಕ ಘಟನೆಗಳೊಂದಿಗೆ ತಳಕು ಹಾಕುವ ವಿಜ್ಞಾನಿಗಳು ಮತ್ತು ಖಗೋಳ ಶಾಸ್ತ್ರಜ್ಞರು, ಬೆತ್ಲೆಹೇಮ್ ನಕ್ಷತ್ರದ ಅರಿವಿನ ಕುರಿತು ವಿಶೇಷ ಆಸಕ್ತಿಯಿಂದ ಅಧ್ಯಯನ ನಡೆಸಲು ಮುಂದಾಗಿದ್ದಾರೆ.
ಮೂವರು ರಾಯರು, ಆಕಾಶದಲ್ಲೊಂದು ಜರುಗಿದ ಅಪರೂಪದ ವಿದ್ಯಮಾನವನ್ನು ದಾಖಲಿಸಿದ್ದಾರೆ. ಜೊತೆಗೆ ಅವರು ಅದನ್ನು ಜುದೇಯ ಪ್ರಾಂತ್ಯದ ಅರಸನ ಜನನದ ಸೂಚಕ ಎಂದು ತರ್ಕಿಸಿರುವುದು ಆಸಕ್ತಿದಾಯಕ ಅಧ್ಯಯನದ ವಿಷಯವಾಗಿದೆ.
ಕ್ರಿಸ್ತ ಪೂರ್ವ ಐದನೇ ವರ್ಷದಲ್ಲಿ ಸುಮಾರು ಎಪ್ಪತ್ತು ದಿನಗಳ ಕಾಲ ಉದ್ದ ಬಾಲದ ಧೂಮಕೇತುವೊಂದು ಕಾಣಿಸಿದ್ದನ್ನು ಚೀನಾದ ಪಂಡಿತರು ದಾಖಲಿಸಿದ್ದನ್ನು ಪ್ರಸ್ತಾಪಿಸುವ ಹಂಪ್ರಿ ಸಿ.ಜೆ ಎನ್ನುವ ಖಗೋಳ ತಜ್ಞರು, `ಅದುವೆ ಬಹುಶಃ ಮೂರು ರಾಯರು ಕಂಡಿದ್ದ, ಅವರನ್ನು ಬೆತ್ಲಹೇಮಿಗೆ ಕರೆದೊಯ್ದ ನಕ್ಷತ್ರವಾಗಿರಬಹುದು' ಎಂದು ಹೇಳುತ್ತಾರೆ. ದ ಸ್ಟಾರ್ಆಫ್ ಬೆತ್ಲಹೇಮ್, ಎ ಕಾಮೆಟ್ಇನ್ 5 ಬಿ ಸಿ ಆಂಡ್ ದ ಡೇಟ್ಆಫ್ಕ್ರೈಸ್ಟ್ಸ ಬರ್ಥ (ಟೆಂಡೇಲ್ ಬುಲೆಟಿನ್ 43 [1992] ಪುಟ 31-36) ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಆ ಧೂಮಕೇತುವು ಸುಮಾರು 70 ದಿನಗಳ ಕಾಲ ಕಾಣಿಸಿಕೊಂಡಿತ್ತು ಎಂದು ಆ ಕಾಲದ ಅಂದರೆ ಕ್ರಿಸ್ತಪೂರ್ವ 5ನೇ ವರ್ಷದ ಸುಮಾರಿನಲ್ಲಿದ್ದ ಚೀನಾದ ಖಗೋಲ ಪಂಡಿತರು ದಾಖಲಿಸಿದ್ದಾರೆ.
ಮೂವರು ರಾಯರು ಕಂಡ ನಕ್ಷತ್ರದ ಬಗೆಗೆ ಇಂತಹ ಹತ್ತಾರು ವಿವರಣೆಗಳನ್ನು ನಾವು ಗಮನಿಸಬಹುದು. ಆದರೆ, ಯಾವದೂ ಇದಮಿತ್ಥಂ ಎಂದು ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಮತ್ತಾಯನ ಶುಭಸಂದೇಶದಲ್ಲಿ ನಕ್ಷತ್ರಕ್ಕೆ ಅಷ್ಟೇನೂ ಮಹತ್ವದ ಸ್ಥಾನವಿಲ್ಲ. ಅದರಲ್ಲಿ ಅಸುಗೂಸು ಪ್ರಭು ಯೇಸುಸ್ವಾಮಿಯ ಪ್ರಸ್ತಾಪವೇ ಬಹಳ ಮುಖ್ಯ. ಎಂಥ ನಕ್ಷತ್ರ ಕಂಡಿತು? ಹೇಗೆ ಕಂಡಿತು? ಎನ್ನುವುದಲ್ಲ, ಅದು ಏಕೆ ಕಂಡಿತು? ಎನ್ನುವುದು ಮುಖ್ಯ. ಮೂರು ರಾಯರು ಕಂಡ ನಕ್ಷತ್ರವು ಶ್ರೀಗ್ರಂಥ ಬೈಬಲ್ ನಲ್ಲಿ ಹಲವಾರು ಮೂಲೋದ್ದೇಶಗಳನ್ನು ಹೊಂದಿರುವುದನ್ನು ಗುರುತಿಸಬಹುದು. ಹೀಗೆ ಗುರುತಿಸುವುದರಿಂದ ಗೊಂದಲಗಳು ನಿವಾರಣೆ ಆಗಬಹುದೇನೋ?
ಆರಂಭದಿಂದಲೂ ಶುಭಸಂದೇಶಗಳ ಉದ್ದೇಶ ಸ್ಪಟಿಕದಷ್ಟು ಸ್ಪಷ್ಟವಾಗಿದೆ. ಜಗದೋದ್ಧಾರಕ ಯೇಸುಸ್ವಾಮಿಯ ಇತಿಹಾಸವೇ ಶುಭಸಂದೇಶ/ಸುವಾರ್ತೆ. ಈ ಪ್ರಭು ಯೇಸುಸ್ವಾಮಿ, ದಾವಿದರಾಜನ ಮಗ ಜೊತೆಗೆ ಅಬ್ರಹಾಮನ ಮಗನೂ ಹೌದು. ಮತ್ತಾಯನ ಸುವಾರ್ತೆಯ ಒಂದನೇ ಅಧ್ಯಾಯದ ಮೊದಲ ಚರಣ 'ಅಬ್ರಹಾಮನ ಮನೆತನಕ್ಕೆ ಸೇರಿದ ದಾವಿದ ಕುಲದ ಯೇಸುಕ್ರಿಸ್ತರ ವಂಶಾವಳಿ'ಯನ್ನು ಉಲ್ಲೇಖಿಸಿದೆ. ಜಗದೋದ್ಧಾರಕ (ಮಸೀಹ) ಯೇಸುಸ್ವಾಮಿಯ ಹುಟ್ಟಿನೊಂದಿಗೆ ಸಮೀಕರಣಗೊಳ್ಳುವ ಈ ವಂಶಾವಳಿಯ ಚಿತ್ರಣವು ಯೆಹೂದಿಗಳ ಚರಿತ್ರೆಯನ್ನು ಹಿಡಿಯಲ್ಲಿ ಹಿಡಿದಿಟ್ಟಿದೆ.
ಮತ್ತಾಯನ ಸುವಾರ್ತೆಯ 1ನೇ ಅಧ್ಯಾಯದ 2ರಿಂದ 17ರವರೆಗಿನ ಚರಣಗಳು- ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು .. .. .. ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫರು ಹುಟ್ಟಿದರು. ಈ ಮರಿಯಳಿಂದಲೇ `ಕ್ರಿಸ್ತ' ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು. ಹೀಗೆ ಒಟ್ಟು ಅಬ್ರಹಾಮನಿಂದ ದಾವಿದನವರೆಗೆ ಹದಿನಾಲ್ಕು, ದಾವಿದನಿಂದ ಬಾಬಿಲೋನಿನ ದಾಸ್ಯ ದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯ ದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು- ಎಂಬುದನ್ನು ವಿಶದಪಡಿಸುತ್ತವೆ.
ಯೆಹೂದಿಗಳ ಚರಿತ್ರೆಯಲ್ಲಿ ಯೇಸುಸ್ವಾಮಿ ಹುಟ್ಟುವ ಮೊದಲು ಪ್ರಸ್ತಾಪವಾಗುವ ಸಂಗತಿಗಳಲ್ಲಿ ಅಬ್ರಹಾಂ, ದಾವಿದ ಮತ್ತು ಬ್ಯಾಬಿಲೋನಿಯದಲ್ಲಿಇಸ್ರಯೇಲರು ದಾಸ್ಯಕ್ಕೆ ಒಳಗಾಗಿದ್ದ ಸಂಗತಿಗಳು ಮಹತ್ವದ ಹೆಜ್ಜೆಯ ಗುರುತುಗಳು. ಈ ಮೂರು ಸಂಗತಿಗಳು ನಕ್ಷತ್ರಗಳೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿವೆ.
ಆದಿಕಾಂಡದ 15ನೇ ಆಧ್ಯಾಯ, ಐದನೆಯ ಚರಣದಲ್ಲಿ ಸರ್ವೇಶ್ವರರು ಅಬ್ರಹಾಮನನ್ನು ಹೊರಗೆ ಕರೆತಂದು `ಆಕಾಶದಕಡೆ ನೋಡು, ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು' ಎಂದಿದ್ದಾರೆ.
ಈ ಮಾತುಗಳೊಂದಿಗೆ ಅಬ್ರಹಾಮನನ್ನು ಆರ್ಶೀವದಿಸುವ ಸ್ವಾಮಿ ಸರ್ವೇಶ್ಚರರು, ಅಬ್ರಹಾಮನನ್ನು ಆದಿಯಲ್ಲಿ ನಿಲ್ಲಿಸಿ, ತನ್ನಏಕಮಾತ್ರ ಪುತ್ರ ಯೇಸುಸ್ವಾಮಿಯನ್ನು ವಂಶಾವಳಿಯ ಕೊನೆಯ ಕೊಂಡಿಯಾಗಿ ತೋರಗೊಡುತ್ತಾರೆ.
ಇದಕ್ಕೂ ಮೊದಲು, ಆದಿಕಾಂಡದ 12ನೇ ಅಧ್ಯಾಯ ಎರಡು ಮತ್ತು ಮೂರನೆಯ ಚರಣಗಳಲ್ಲಿನ ಸ್ವಾಮಿ ಸರ್ವೇಶ್ವರರ ಮಾತುಗಳು, ಅಬ್ರಹಾಮನ ವಂಶಾವಳಿಯ ಕೊಂಡಿಯ ಮೂಲ ಆಶಯವನ್ನು ಸ್ಪಷ್ಟಪಡಿಸುವುದನ್ನು ಗಮನಿಸದೇಇರಲಾಗದು.
ಆ ಪಠ್ಯದ ಪೂರ್ಣ ಪಾಠ ಇಲ್ಲಿದೆ. 'ಸರ್ವೇಶ್ವರ ಅಬ್ರಾಮನಿಗೆ ಹೀಗೆಂದರು- ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನು ಬಿಟ್ಟು ನಾನು ತೋರಿಸುವ ನಾಡಿಗೆ ಹೊರಡುಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ. ನಿನ್ನನ್ನು ಹರಸುವವರನು ನಾ ಹರಸುವೆ. ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.'
ಸ್ವಾಮಿ ಸರ್ವೇಶ್ವರರ ಆಶಯದಂತೆ, ಅವರು ಅಬ್ರಹಾಮರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ವಾಗ್ದಾನವು ಅವನ ವಂಶದ ಕುಡಿಯಾಗಿ ಬರುವ ಯೇಸುಸ್ವಾಮಿಯ ಜನನದೊಂದಿಗೆ ಈಡೇರಿದಂತಾಗಿದೆ.
ಸುದೀರ್ಘವಾದ ಐತಿಹಾಸಿಕ ಹಿನ್ನೆಲೆ ಇರುವ ಇಸ್ರಯೇಲ್ಜನಕ್ಕೆ ಯಾವುದೇ ಬಗೆಯಲ್ಲಿ ಸಂಬಂಧಪಡದ ದೂರದ ಪೂರ್ವದ ನಾಡಿನ ಮೂವರು ಪಂಡಿತರು, ನಕ್ಷತ್ರವನ್ನು ಕಂಡು ಅದನ್ನು ಹಿಂಬಾಲಿಸಿ ಅಸುಗೂಸು ಯೆಹೂದ್ಯರ ಅರಸ ಪ್ರಭು ಯೇಸುಸ್ವಾಮಿಯ ದರ್ಶನಕ್ಕೆ ಹಾತೊರೆದು ಬರುವುದು, ಇಸ್ರೇಲ್ಜನರ ವಂಶಾವಳಿಯ ಕಥಾನಕಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟಿದೆ.
ಶತ ಶತಮಾನಗಳ ಹಿಂದೆಯೇ ಸ್ವಾಮಿ ಸರ್ವೇಶ್ವರರು ನೀಡಿದ ವಾಗ್ದಾನದಂತೆ, ಅಬ್ರಹಾಮನು ಮುಂದೆ ತನ್ನ ಸಂತತಿಯು ಸಾಂಕೇತಿಕವಾಗಿ ಆಗಸದಲ್ಲಿನ ಅಗಣಿತತಾರಾ ಗಣಗಳಂತೆ ರೂಪ ತಳೆಯುವುದನ್ನು ಮುಂಗಾಣಿದ್ದ. ಆದಿಕಂಡ 15ನೇ ಅಧ್ಯಾಯದ 5ನೇ ಚರಣವನ್ನುಇಲ್ಲಿ ಸ್ಮರಿಸಿಕೊಳ್ಳಬಹುದು.
ಈಗ, ಪ್ರಭು ಯೇಸುಸ್ವಾಮಿಯು ಹುಟ್ಟಿದ ಸಂದರ್ಭದಲ್ಲಿ, ಮೂಡಣ ದಿಕ್ಕಿನ ದೇಶಗಳ ಪಂಡಿತರು ಅಬ್ರಹಾಮನ ಸಂತತಿಯ ಕುಡಿಯಾದ ಅಸುಗೂಸು ಯೇಸುಸ್ವಾಮಿಯನ್ನು ಕಾಣಲು, ನಕ್ಷತ್ರವನ್ನು ಹಿಂಬಾಲಿಸಿಕೊಂಡು ಬರುತ್ತಾರೆ. ಮೂಡಣ ದಿಕ್ಕಿನ ಪಂಡಿತರು ಆಗಸದಲ್ಲಿ ಕಂಡ ನಕ್ಷತ್ರವನ್ನು ಅಬ್ರಹಾಮನ ಸಂತತಿಯ ಕುಡಿಯೊಂದಿಗೆ ಸಮೀಕರಿಸಿಕೊಂಡು ಇಸ್ರೇಲ ನಾಡಿಗೆ ಪ್ರಯಾಣ ಬೆಳಸುತ್ತಾರೆ.
ಇಸ್ರೇಲ್ ನಾಡಿನ ನಜರೇತಿನ ನಿವಾಸಿಗಳಾಗಲಿ, ಯೆಹೂದಿಗಳ ಅರಸ ಹೆರೋದನಾಗಲಿ ಇದ್ರಯೇಲ್ಜನಾಂಗದ ನಿಜವಾದ ಅರಸ ಮತ್ತು ಪ್ರವಾದಿ ಯೇಸುಸ್ವಾಮಿಯನ್ನು ಕಂಡು ಆರಾಧಿಸಲು ಮುಂದಾಗಲೇ ಇಲ್ಲ. ಆದರೆ, ದೂರದ ಮೂಡಣ ನಾಡಿನ ಪಂಡಿತರು ಅಂದರೆ ಜ್ಯೋತಿಷಿಗಳು ಇಸ್ರಯೇಲರ ಅರಸನನ್ನು ಮೊದಲು ಕಂಡು, ಕಾಣಿಕೆಗಳನ್ನು ಸಮರ್ಪಿಸಿ ಆರಾಧಿಸುತ್ತಾರೆ.
ಇದನ್ನು ಮತ್ತಾಯನ ಸುವಾರ್ತೆಯ 2ನೇ ಅಧ್ಯಾಯ ಹನ್ನೊಂದನೆಯ ಚರಣದಲ್ಲಿ ಗಮನಿಸಬಹುದು. `ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನುತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮತಮ್ಮ ಬೊಕ್ಕಸಗಳನ್ನು ಬಿಚ್ಚಿಚಿನ್ನ, ಪರಿಮಣದ್ರವ್ಯ ಮತ್ತು ರಕ್ತಬೋಳ- ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು.'
ಇದರೊಂದಿಗೆ ಪರಸ್ಪರ ಪೂರಕವಾದ ಸಂಬಂಧಗಳನ್ನು ಹೊಂದಿದ ನಕ್ಷತ್ರ, ಪಂಡಿತರ ಮತ್ತು ಶುಭಸಂದೇಶಗಳ ಆದಿಯಲ್ಲಿ ಬರುವ ಅಬ್ರಹಾಮನ ಪ್ರಸ್ತಾಪ ಸರ್ವೇಶ್ವರ ದೇವರು, ಆದಿಕಾಂಡದಲ್ಲಿ ಅಬ್ರಹಾಮನಿಗೆ ನೀಡಿದ ವಾಗ್ದಾನ ನೆರವೇರಿದಂತಾಗುತ್ತದೆ.
ಇನ್ನು ದಾವಿದ ಅರಸನ ಕತೆಗೆ ಬರೋಣ. ಇಸ್ರಯೇಲ್ಇತಿಹಾಸದಲ್ಲಿ ದಾವಿದ ಅರಸನದು ದೊಡ್ಡ ಹೆಸರು. ಶ್ರೀಗ್ರಂಥ ಬೈಬಲಿನ ಹಳೆಯ ಒಡಂಬಡಿಕೆಯ ದಾವಿದ ಅರಸ, ಹಳೆಯ ಒಡಂಬಡಿಕೆ ಅಷ್ಟೇ ಅಲ್ಲ ಹೊಸ ಒಡಂಬಡಿಕೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುವನು. ಯೆಹೂದಿಗಳ ಶತಶತಮಾನದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನಮಾನ ಹೊಂದಿರುವ ಆತ, ಸರ್ವೇಶ್ವರ ದೇವರು ಆಯ್ದುಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬ ಎನ್ನವುದನ್ನು ಮರೆಯಲಾಗದು. ಅಷ್ಟೇ ಅಲ್ಲ ಶತಶತಮಾನಗಳಿಂದ ಯೆಹೂದಿ ಪೂಜಾವಿಧಿಗಳಲ್ಲೂ ದಾವಿದ ಅರಸನನ್ನು ಸದಾ ಸ್ಮರಿಸಿಕೊಳ್ಳಲಾಗುತ್ತದೆ.
ಪ್ರಮುಖವಾಗಿ ದಾವಿದ ಅರಸನನ್ನು ಹಿಬ್ರೂ ಭಾಷೆಯಲ್ಲಿ ಮಾಗೆನ್(ಮೋಗೆನ್) ಡೆವಿಡ್ಎಂದು ಕರೆಯಲಾಗುವ ದಾವಿದನ ಗುರಾಣಿ- ದಾವಿದ ನಕ್ಷತ್ರ ಎಂಬ ಸಂಕೇತದಲ್ಲಿಯೇ ಯೆಹೂದಿ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ಅದೇ ಸಂಕೇತವನ್ನು ಸೊಲೊಮನನ (ಸಮುವೇಲನ) ಕಾಲದಿಂದಲೂ ಬಳಸಲಾಗುತ್ತಿದೆ. ಈ ದಾವಿದ ನಕ್ಷತ್ರವನ್ನು ಪ್ರಸಕ್ತ ಆಧುನಿಕ ಕಾಲದ ಇಸ್ರಯೇಲ್ ನಾಡಿನ ಧ್ವಜದಲ್ಲೂ ನಾವು ಕಾಣಬಹುದಾಗಿದೆ.
ಶ್ರೀ ಗ್ರಂಥ ಪವಿತ್ರ ಬೈಬಲಿನ ಹಳೆಯ ಒಡಂಬಡಿಕೆಯ ಪಠ್ಯದಲ್ಲಿ ಒದಗಿಸಿದ ಮಾಹಿತಿ ಪುರಾತನ ಇಸ್ರಯೇಲರು ದಾವಿದನ ವಂಶಾವಳಿಯಲ್ಲಿಯೇ ಅರಸು ಪ್ರವಾದಿಯೊಬ್ಬ ಬರಲಿರುವನೆಂಬ ನಿರೀಕ್ಷೆ ಇರುವುದನ್ನು ಪ್ರವಾದಿ ನಾತಾನನ ದರ್ಶನದ ಮಾತು ಸ್ಪಷ್ಟವಾಗಿ ಬಿಡಿಸಿಟ್ಡಿದೆ.
ಈ ಕುರಿತ ಮಾಹಿತಿ ಹಳೆಯ ಒಡಂಬಡಿಕೆಯ ಸಮುವೇಲನು -ದ್ವಿತೀಯ ಭಾಗದಲ್ಲಿ ಏಳನೇ ಅಧ್ಯಾಯದ 12ರಿಂದ 16ರ ವರೆಗಿನ ಚರಣಗಳಲ್ಲಿ ತಿಳಿಸಿರುವುದನ್ನು ಕಾಣಬಹುದು.
`ನಿನ್ನಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು, ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪು ಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುತ್ತೇನೆ. ಆದರೆ, ನನ್ನ ಕೃಪೆ, ನಿನ್ನಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದ ಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು' ನಾತಾನನು ತನಗಾದ ದರ್ಶನದ ಮಾತುಗಳನ್ನೆಲ್ಲ ದಾವಿದನಿಗೆ ಹೇಳಿದನು.'
ಒಂದಲ್ಲ ಒಂದು ದಿನ ಸರ್ವೇಶ್ವರ ಪಿತದೇವರು, ದಾವಿದಅರಸನ ಮಾದರಿಯಲ್ಲಿಯೇ ಒಬ್ಬಅಭಿಷಕ್ತ ಅರಸ (ಮೆಸ್ಸಾಯ/ಉದ್ಧಾರಕ) ನನ್ನು ಕಳಿಸಿಕೊಡುವನು, ಅವನು ದೇವರೇ ಆರಿಸಿಕೊಂಡ ದೇವಜನರನ್ನು ಅಂದರೆ ತಮ್ಮನ್ನು ಶೋಷಣೆಗಳಿಂದ ಬಿಡುಗಡೆ ಮಾಡುವನು, ಸಕಲ ಕೇಡುಗಳಿಂದ ಪಾರುಮಾಡುವನು, ಅವರಿಗೆ ಅತಿಶಯ ಕೀರ್ತಿ ಗೌರವ ಹಾಗೂ ಖ್ಯಾತಿಯನ್ನು ತಂದುಕೊಡುವ ಎಂಬ ಆಶಯ ಯೆಹೂದಿ ಜನಗಳು ಹೊಂದಿದ್ದರು.
ಈ ಅರಸನನ್ನು ಜೆಸ್ಸಿಯನ ಸಂತಾನದ ಕುಡಿ ಎಂದು ಪ್ರವಾದಿ ಯೆಶಾಯನು ಪ್ರವಾದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬೇತ್ಲೆಹೇಮಿನವನಾದ ಜೆಸ್ಸೆಯ ಇಸ್ರೇಲರ ಪ್ರಮುಖ ಅರಸನಾಗಿದ್ದ ದಾವಿದನ ತಂದೆ.
ಪ್ರವಾದಿ ಯೆಶಾಯನಗ್ರಂಥದ 11ನೇ ಅಧ್ಯಾಯದ 1 ರಿಂದ 12ರವರೆಗಿನ ಚರಣಗಳು ಈ ಪ್ರವಾದನೆಯನ್ನು ಸಾರುತ್ತವೆ. `ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು ಅದರ ಬೇರಿನಿಂದ ಫಲಿಸುವುದೊಂದು ತಳಿರು, ನೆಲೆಸುವುದಾತನ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ, ಸರ್ವೇಶ್ವರನ ಅರಿವನು ಭಯವನು ಹುಟ್ಟಿಸುವ ಆತ್ಮ. ಅಹುದು ನೆಲೆಸುವುದಾತನ ಮೇಲೆ ಸರ್ವೇಶ್ವರನ ಆತ್ಮ.
ಸರ್ವೇಶ್ವರನ ಭಯಭಕ್ತಿ ಅವರಿಗೆ ಪರಿಮಳದಂತೆ, ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ. ನಾಡದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ. ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ, ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸಧ್ಧರ್ಮವೇ ಆತನ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.
ಬಾಳುವವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆ ಚಿರತೆಗಳ ಜೊತೆಗೆ. ಮೊಲೆಯುಣ್ಣುವವು ಕರು ಕೇಸರಿಗಳು, ಒಟ್ಡಿಗೆ ನಡೆಸುವುದವುಗಳನು ಚಿಕ್ಕ ಮಗು ಮೇಯಿಸುವುದಕೆ. ಮೇಯುವವು ಕರಡಿ, ಆಕಳುಗಳು ಒಟ್ಟಿಗೆ, ಮಲಗುವುವು ಅವುಗಳ ಮರಿಗಳ ಜೊತೆಗೆ, ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ. ಆಡುವುದು ಮಗುವು ನಾಗರ ಹುತ್ತದ ಮೇಲೆ, ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ.
ಹಾನಿಯನು ಕೇಡನು ಮಾಡಲಾರರು ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಧ್ಯಾನಧರೆಯ ಮೇಲೆ.
ಆ ದಿನದಂದು ಜೆಸ್ಸೆಯನ ಸಂತಾನದಕುಡಿ ಸರ್ವ ಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನು ರಾಷ್ಟ್ರಗಳು ಆಶ್ರಯಿಸುವುವು, ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು. ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ (ಐಥಿಯೋಪಿಯ), ವಿಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ- ಈ ಸ್ಥಳಗಳಿಂದ ಸರ್ವೇಶ್ವರತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈ ನೀಡುವರು. ಇಸ್ರಯೇಲರಲಿ ಸೆರೆಹೋದವರನು ಜುದೇಯದಿಂದ ಚದುರಿ ಹೋದವರನು ಕರೆತರಲು ಧರೆಯ ಚತುರ್ದಿಕ್ಕುಗಳಿಂದವರನು ರಾಷ್ಟ್ರಗಳಿಗೆ ಗುರುತಾಗಿ ಏರಿಸುವನಾತ ಧ್ವಜವನು.'
ಸಂಖ್ಯಾಕಾಂಡದ ಪ್ರವಾದಿ ಬಿಳಾಮನು, ನಕ್ಷತ್ರಪ್ರಾಯನು ಯಕೋಬ ವಂಶದಲ್ಲಿ ಉದಯಿಸುವನು ಎಂದು ಭವಿಷ್ಯ ನುಡಿದಿದ್ದಾನೆ. ಆ ನಕ್ಷತ್ರಪ್ರಾಯನು ದೇವಸುತ ಪ್ರಭುಯೇಸುಸ್ವಾಮಿಯಲ್ಲದೇ ಬೇರಾರೂಅಲ್ಲ.
ಸಂಖ್ಯಾಕಾಂಡದ 24ನೇ ಅಧ್ಯಾಯ 17ನೇ ಚರಣದಲ್ಲಿ ಪ್ರವಾದಿ ಬಿಳಾಮನು ನುಡಿದ ಭವಿಷ್ಯವಾಣಿ ಇಂತಿದೆ: `ಒಬ್ಬಾತನನ್ನು ನೋಡುತ್ತಿದ್ದೇನೆ, ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸದ್ದಾನೆ ಯಕೋಬ ವಂಶದಲ್ಲಿ, ರಾಜದಂಡ ಹಿಡಿದವನ ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿ ಹಾಕಿದ್ದಾನೆ ಮೋವಾಬ್ಯರ ತಲೆಯನ್ನು, ಕೆಡವಿಬಿಟ್ಟಿದ್ದಾನೆ ವೀರರೆಲ್ಲನ್ನು.'
ಸಂಖ್ಯಾಕಾಂಡ ಪ್ರವಾದಿ ಬಿಳಾಮನು ನುಡಿದರಾಜದಂಡ ಹಿಡಿಯುವವನ ಭವಿಷ್ಯವಾಣಿ ಹಾಗೂ ದೇವಪ್ರಜೆಗಳ ರಕ್ಷಣೆಗೆ ಉದ್ಧಾರಕನೊಬ್ಬ ಬರಲಿರುವನೆಂಬ ಭರವಸೆ ಯಶಸ್ವಿಯಾಗಿ ಈಡೇರಿದುದನ್ನು ನಾವು ಶುಭಸಂದೇಶಕರ್ತ ಮತ್ತಾಯನ ಸುವಾರ್ತೆಯಲ್ಲಿ ಗಮನಿಸದೇ ಇರಲಾಗದು.
ಪ್ರಭು ಯೇಸುಸ್ವಾಮಿಯ ಹುಟ್ಟಿನ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿರುವ ನಕ್ಷತ್ರವು, ಆತನು ಯೆಹೂದ್ಯರ ಪ್ರಮುಖ ಅರಸ ದಾವಿದನೊಂದಿಗೆ ಹೊಂದಿರುವ ಸಂಬಂಧವನ್ನು ಮತ್ತಷ್ಟು ಸ್ಥಿರಗೊಳಿಸುತ್ತದೆ.
ಯೆಹೂದ್ಯರ ಬ್ಯಾಬಿಲೋನಿನಲ್ಲಿನ ದಾಸ್ಯದ ದೇಶಾಂತರ ವಾಸವು, ಯೆಹೂದ್ಯರ ಶ್ರೀಮಂತ ಪುರಾತನ ಇತಿಹಾಸದಲ್ಲಿನ ಒಂದು ಕತ್ತಲೆಯ ಕಾಲವಾಗಿತ್ತು.
ಹಳೆಯ ಒಡಂಬಡಿಕೆಯ ಪ್ರವಾದಿ ಯೆರೆಮೀಯನ ಗ್ರಂಥದಲ್ಲಿ ಬರುವ 2ನೇ ಅಧ್ಯಾಯ 31 ಮತ್ತು 32ನೇ ಚರಣಗಳು, ಬ್ಯಾಬಿಲೋನಿನ ದಾಸ್ಯದ ದಿನಗಳಲ್ಲಿ ದೇವರು ಸರ್ವೇಶ್ವರನೊಂದಿಗೆ ಯೆಹೂದಿಗಳ ಸಂಬಂಧ ಏರುಪೇರಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ದೇವರು `ಇಸ್ರಯೇಲ್ಜನರೇ, ದುಷ್ಟ ಸಂತತಿಯವರೇ ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿರಿ; ನಾನು ನಿಮಗೆ ಬೆಂಗಾಡಾಗಿಯೂ ಗಾಢಾಂಧಕಾರವಾಗಿಯೂ ಪರಿಣಮಿಸಿದ್ದೆನೊ? ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ; ನಿನ್ನ ಬಳಿಗೆ ಇನ್ನು ಬಾರೆವು ಎಂದು ನನ್ನ ಜನರಾದ ನೀವು ಹೇಳುವುದು ಹೇಗೆ? .. .. .. ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ' ಎಂದಂತೆ ಪ್ರವಾದನೆ ಮಾಡಿದ ಪ್ರವಾದಿ ಯರೆಮೀಯನ ಪ್ರವಾದನೆ ದೇವರು ಮತ್ತು ದೇವಜನರ ನಡುವಿನ ಸಂಬಂಧ ಏರುಪೇರಾಗಿತ್ತು ಎನ್ನುವುದನ್ನು ಅರಹುತ್ತದೆ. ಅದೇ ಮಾತುಗಳು ದೇವರು ತನ್ನ ದೇವಜನ ಯೆಹೂದಿಗಳ ತಪ್ಪುಗಳನ್ನು ಮನ್ನಿಸುವುದನ್ನು ಮತ್ತು ಆತ ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ಸಹ ಒತ್ತಿ ಹೇಳುತ್ತವೆ.
ನಿರೀಕ್ಷೆಗೆ ತಕ್ಕಂತೆ ಒಳ್ಳೆಯ ಆದರ್ಶಪ್ರಾಯವಾದ ರೀತಿಯಲ್ಲಿ ನಡೆಯದ ಯೆಹೂದಿ ಅರಸರು, ಕ್ರಿಸ್ತಶಕ ಪೂರ್ವ 587ರಲ್ಲಿ ಜೆರುಸಲೇಮಿನ ದೇವಸ್ಥಾನದ ಧ್ವಂಸದೊಂದಿಗೆ ಕೊನೆಗೊಳ್ಳುವ ದಾವಿದ ಅರಸನ ವಂಶಾವಳಿಯ ಅರಸೊತ್ತಿಗೆಗೆ ಕುತ್ತು ಬಂದುದು, ಯೆಹೂದಿಗಳ ಇತಿಹಾಸದಲ್ಲಿನ ದುರಂತದ ಸಂಗತಿಗಳು. ಈ ಸಂಗತಿಗಳು ಪಾಪಿಗಳನ್ನು ರಕ್ಷಿಸಿ ಉದ್ಧರಿಸುವ ಉದ್ಧಾರಕನ ಬರುವಿಕೆಯನ್ನು ಮತ್ತಷ್ಟು ಭರವಸೆಯೊಂದಿಗೆ ನಿರೀಕ್ಷಿಸುವಂತೆ ಮಾಡಿದ್ದವು. ಯೇಸುಸ್ವಾಮಿಯ ಹುಟ್ಟುವ ಸಮಯದಲ್ಲಂತೂ ಆ ನಿರೀಕ್ಷೆಯು ಮತ್ತಷ್ಟು ಗರಿಗೆದರಿ ಕೊಂಡಿತ್ತು.
ಜಗದೋದ್ಧಾರಕ ಪ್ರಭು ಯೇಸುಸ್ವಾಮಿಯ ಹುಟ್ಟಿನ ಸಂದರ್ಭದಲ್ಲಿ ನಕ್ಷತ್ರವು ಕಾಣಿಸಿಕೊಳ್ಳುವುದು, ದಾಸ್ಯದ ಸಂಕೋಲೆಯ ಗಾಢಾಂಧಕಾರದಲ್ಲಿದ್ದ ಯೆಹೂದಿಗಳಿಗೆ ಪ್ರಭುಯೇಸುಸ್ವಾಮಿ ಬೆಳಕು ನೀಡುವುದನ್ನು ಪ್ರತಿನಿಧಿಸುವಂತಿದೆ.
ಮತ್ತಾಯನ ಶುಭಸಂದೇಶದಲ್ಲಿ, ಯೇಸುಸ್ವಾಮಿ ಮೊದಲ ಬಾರಿಗೆ ಪ್ರಬೋಧನೆ ಆರಂಭಿಸಿದ ಸಂದರ್ಭದಲ್ಲಿ ಕತ್ತಲೆಯಿಂದ ಬೆಳಕಿನತ್ತ ಸಾಗುವ ವಿಷಯ ಪ್ರಸ್ತಾಪವಾಗಿದೆ.
ಮತ್ತಾಯನ ಶುಭಸಂದೇಶದ 4ನೇ ಅಧ್ಯಾಯದ ಹದಿನಾರನೇಚರಣದ ಪಠ್ಯ ಹೀಗಿದೆ: `ಕಾರ್ಗತ್ತಲಲಿ ವಾಸಿಸುವವರಿಗೆ ದಿವ್ಯಜ್ಯೋತಿಯೊಂದು ಕಾಣಿಸಿತು. ಮರಣ ಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು' ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು.' ಅದರ ಮುಂದಿನ ಚರಣ ಇಂತಿದೆ: ಅಂದಿನಿಂದ ಯೇಸು, `ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿರಿ. ದೇವರಿಗೆ ಅಭಿಮುಖರಾಗಿರಿ. ಸ್ವರ್ಗ ಸಾಮ್ರಾಜ್ಯ ಸಮೀಪಿಸಿತು' ಎಂಬ ಸಂದೇಶವನ್ನು ಬೋಧಿಸತೊಡಗಿದರು.'
ಬ್ಯಾಬಿಲೋನಿನನಲ್ಲಿ ಪರದೇಶಿಗಳಾಗಿ ಪರದೇಶ ವಾಸ ಅನುಭವಿಸುತ್ತಿದ್ದ ಯೆಹೂದಿಗಳ ಬವಣೆಗೆ ಸ್ಪಂದಿಸುವ ದೇವರು, ತನ್ನ ಏಕ ಮಾತ್ರ ಪುತ್ರನನ್ನು ಜಗದ ಉದ್ಧಾರಕ್ಕೆ ಕಳುಹಿಸಿಕೊಡುತ್ತಾನೆ ಮತ್ತು ಜದೋದ್ಧಾರಕ ಪ್ರಭು ಯೇಸುಸ್ವಾಮಿ ಹುಟ್ಟಿನ ಸಂದರ್ಭದಲ್ಲಿ ಬೆಳಗಿದ ನಕ್ಷತ್ರವು ದೇವರು ಈ ಭೂಮಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಒಡೆಯ ಎಂಬುದನ್ನು ವಿಶದಪಡಿಸುತ್ತವೆ.
ದೇವರ ಏಕಮಾತ್ರ ಪುತ್ರ ಪ್ರಭು ಯೇಸುಸ್ವಾಮಿಯು ಮಾನವರ ಪಾಪ ಪರಿಹಾರಕ್ಕಾಗಿ ಬಲಿಯಾಗಲು ಭೂಮಿಯಲ್ಲಿ ಅವತರಿಸುವುದು, ದೇವರ ಮಾನವರ ಮೇಲಿನ ಪ್ರೀತಿ, ಪ್ರೇಮ ಕರುಣೆಯನ್ನು ಗಟ್ಟಿಯಾಗಿ ಸುಸ್ಪಷ್ಟಗೊಳಿಸುತ್ತದೆ.
ಪೂರ್ವದ ನಾಡಿನ ರಾಯರು ಕಂಡ ನಕ್ಷತ್ರವನ್ನು ಅಬ್ರಹಾಮ, ದಾವಿದ ಮತ್ತು ಯೆಹೂದಿಗಳ ಬ್ಯಾಬಿಲೋನಿನ ಪರದೇಶವಾಸದ ಹಿನ್ನೆಲೆಯಲ್ಲಿ ನೋಡಿದರೆ, ಅದು ಯೇಸುಸ್ವಾಮಿಯ ವಂಶಾವಳಿಯ ಸರಪಳಿಯನ್ನು ಒಂದಕ್ಕೊಂದು ಹೆಣೆದುಕೊಡುತ್ತದೆ.
ಯೇಸುಸ್ವಾಮಿಯು ಅಬ್ರಹಾಮ, ಅರಸ ದಾವಿದರ ವಂಶಸ್ಥ ಮತ್ತು ಕತ್ತಲೆಯನ್ನು ಕೊನೆಗಾಣಿಸುವ, ಜಗದ ಪಾಪವನ್ನು ಪರಿಹರಿಸುವ ಬೆಳಕು ಎಂಬುದನ್ನು ಬೆತ್ಲೆಹೇಮ್ ನಕ್ಷತ್ರವು ಸ್ಪಷ್ಟಪಡಿಸುತ್ತದೆ.
ಮತ್ತಾಯನ ಶುಭಸಂದೇಶದಲ್ಲಿನ ನಕ್ಷತ್ರ ಒಂದು ಸೂಚಕ. ಅಲ್ಲಿ ಅಸುಗೂಸು ಪ್ರಭು ಯೇಸುಸ್ವಾಮಿಯ ಪ್ರಸ್ತಾಪವೇ ಬಹಳ ಮುಖ್ಯ. ಎಂಥ ನಕ್ಷತ್ರಕಂಡಿತು? ಹೇಗೆ ಕಂಡಿತು? ಯಾವಾಗ ಕಂಡಿತು? ಎಷ್ಟು ಹೊತ್ತುಕಂಡಿತು? ಯರಿಗಷ್ಟೇಕಂಡಿತು? ಇವೆಲ್ಲಾ ಪ್ರಶ್ನೆಗಳು ಅಪ್ರಸ್ತುತ. ಆ ನಕ್ಷತ್ರ ಏಕೆ ಕಂಡಿತು? ಎನ್ನುವುದು ಇಲ್ಲಿ ಮುಖ್ಯ. ಜಗದ ಪಾಪ ತೊಳೆಯುವ, ಜಗದ ಉದ್ಧಾರಕನ ಬರುವಿಕೆಯನ್ನು ಸಾರುವ ಉದ್ದೇಶವೇ ಅದರ ಮೂಲ ಆಶಯ.
*****************