Saturday, 21 December 2019

ಅನ್ಯ ಗ್ರಹದವರು...

ಡೇವಿಡ್ ಕುಮಾರ್. ಎ 


ಈರುಳ್ಳಿ ಬೆಲೆ ನೆನೆದು
ಕಣ್ಣೀರು ಸುರಿಸುವಿರೇನು ?
ಕುಲಗಳಲಿ ಶ್ರೇಷ್ಠರೆನಿಸಿ,
ಈರುಳ್ಳಿ ತಿನ್ನದವರು ನಾವು !

ಹೊಟ್ಟೆಗಿಟ್ಟಲ್ಲದ ಮಕ್ಕಳು
ರೊಟ್ಟಿಗೆ ಪಲ್ಯವಿಲ್ಲದೆ,
ಉಪ್ಪು ನೆಕ್ಕಿದರೇನು ?
ಮಕ್ಕಳಿಲ್ಲ ನಮಗೆ

ವೈರಾಗಿ 'ಯೋಗಿ' ಗಳು ನಾವು !
ಶಾಲೆಗಳ ಸೂರು ಬಿದ್ದು
ಪಾಯಿಖಾನೆ ಗಬ್ಬೆದ್ದು,
ಮಕ್ಕಳು ಸೊರಗಿದರೇನು ?
ಶಾಲೆಯ ಮೆಟ್ಟಿಲೇರದವರು ನಾವು !

ಮಸೀದಿಗಳುಧ್ವಂಸಗೊಂಡು
ಚರ್ಚುಗಳು ಭಗ್ನಗೊಂಡು
ಭಾವೈಕ್ಯತೆಗೆ ಬೆಂಕಿ ಬಿದ್ದರೇನು ?
ನ್ಯಾಯವನೇ ಸುಟ್ಟವರು ನಾವು !

ಅಬಲೆಯರ ಅಪಹರಿಸಿ
ಸುಖಿಸಿ, ಸಂಹರಿಸಿ,
ಹೆಣ್ತನವ ಹಿಸುಕಿದರೇನು ?
ರಾಮನಿಗಷ್ಟೇ ಗುಡಿ ಕಟ್ಟುವವರು ನಾವು ! 
----------------------------

ಸುಖ ದು:ಖ


ಖಲೀಲ್ ಗಿಬ್ರಾನ್ನರ ಸುಖ ದು:ಖ ಬಗೆಗಿನ ಚಿಂತನೆಗಳನ್ನು ಪ್ರಭುಶಂಕರವರು ಅರ್ಥಪೂರ್ಣವಾಗಿ ಭಾವಾನುವಾದಿಸಿದ್ದಾರೆ. ಖಲೀಲ್ ಗಿಬ್ರಾನ್ರವರ ಸಾಲುಗಳನ್ನು ಓದುತ್ತಾ ಮೌನಕ್ಕೆ ಜಾರಿಕೊಳ್ಳೋಣ… 

ಒಂದು ಧ್ವನಿ ತನಗೆ ರೆಕ್ಕೆಗಳನ್ನು ನೀಡದ ತುಟಿ ನಾಲಿಗೆಗಳನ್ನು ತನ್ನೊಂದಿಗೆ ಒಯ್ಯಲಾರದು. ಏಕಾಂಗಿಯಾಗಿ ಅದು ಅಕಾಶವನ್ನು ಅರಸಬೇಕು. ಹಾಗೆಯೇ ಹದ್ದು, ತನ್ನ ಗೂಡನ್ನು ಒಯ್ಯದೆ ಏಕಾಂಗಿಯಾಗಿ ಸೂರ್ಯನನ್ನು ದಾಟಿ ಹಾರಬೇಕು. ನಿನ್ನ ಸುಖ,ಮುಖವಾಡ ಸರಿದ ನಿನ್ನ ದುಃಖವೇ. ಯಾವ ಬಾವಿಯಿಂದ ನಗೆ ಬುಗ್ಗೆಯುಕ್ಕುತ್ತಿದೆಯೋ ಅದೇ ಅನೇಕ ಸಲ ನಿನ್ನ ಕಂಬನಿಗಳಿಂದ ತುಂಬಿತ್ತು. ಬೇರೆ ಹೇಗಾಗಲು ತಾನೆ ಸಾಧ್ಯ? ನಿನ್ನ ಚೇತನದ ಆಳವನ್ನು ದುಃಖಕೊರೆಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲುದು. ನಿನ್ನ ಮಧುವನ್ನು ತಳೆದಿರುವ ಬಟ್ಟಲೇ ಅಲ್ಲವೆ ಕುಂಬಾರನ ಒಲೆಯಲ್ಲಿ ಬೆಂದದ್ದು? ನಿನ್ನ ಆತ್ಮವನ್ನು ಸಾಂತ್ವನಗೊಳುಸುತ್ತಿರುವ ಕೊಳಲನ್ನೇ ಅಲ್ಲವೆ ಚಾಕು ಕೊರೆದು ಕೊರೆದದ್ದು? ನೀವು ಸಂತೋಷಭರಿತರಾಗಿರುವಾಗ ನಿಮ್ಮ ಹೃದಯದಾಳವನ್ನು ನೋಡಿ; ಆಗ ನಿಮಗೆ ತಿಳಿಯುತ್ತದೆ, ಯಾವುದು ನಿಮಗೆ ದುಃಖವನ್ನು ನೀಡಿತ್ತೋ ಅದೇ ಆನಂದವನ್ನು ನೀಡುತ್ತಿದೆ. ನೀವು ದುಃಖಿತರಾಗಿರುವಾಗ, ಮತ್ತೆ ನೀವು ಹೃದಯವನ್ನು ಹುಡುಕಿ ನೋಡಿ ಇಂದು ನಿಮ್ಮ ದುಃಖದ ಕಾರಣವಾಗಿರುವುದು ಒಮ್ಮೆ ನಿಮ್ಮ ಆನಂದದ ಕಾರಣವೂ ಆಗಿತ್ತು. ನಿಮ್ಮಲ್ಲಿ ಕೆಲವರು ಹೇಳುತ್ತೀರಿ ದುಃಖಕ್ಕಿಂತ ಸುಖ ಹೆಚ್ಚು ಮತ್ತೆ ಕೆಲವರು ಹೇಳುತ್ತೀರಿ ಇಲ್ಲ ದುಃಖವೇ ಹೆಚ್ಚಿನದು’. ಆದರೆ ನಾನು ಹೇಳುತ್ತೇನೆ ಅವೆರಡನ್ನೂ ಬೇರ್ಪಡಿಸಲಾಗದು. ಅವು ಒಟ್ಟಾಗಿಯೇ ಬರುತ್ತವೆ. ನೆನಪಿಡಿ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಿರುವಾಗ ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ…. 

· ಅನು 

ತ್ರಿವೇಣಿಯವರ ಬರವಣಿಗೆಗಳಲ್ಲಿ ಮಹಿಳಾ ಸಬಲೀಕರಣ


ಸಹೋ ಡೇವಿಡ್, ಬೆಂಗಳೂರು 

ಮನುಷ್ಯನ ಆಂತರಿಕ ಸ್ತರದಲ್ಲಿ ನಡೆಯುವ ಮನೋವಿಶ್ಲೇಷಣೆಯ ಕ್ರಿಯೆಗಳನ್ನು ವ್ಯೆಜ್ಞಾನಿಕವಾಗಿ ಚರ್ಚಿಸಿ ಅದಕ್ಕೊಂದು ಕಥಾರೂಪನೀಡಿ, ವಿಭಿನ್ನರೀತಿಯ ಕಾದಂಬರಿಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ವಿಶಿಷ್ಟವಾದುದನ್ನು ಸಾಧಿಸಿ ತೋರಿಸಿದ ವ್ಯಕ್ತಿತ್ರಿವೇಣಿ. 

ಸಂಪ್ರದಾಯ ಜಡವಾದ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬದುಕು ಎಂಥ ಸಂಕೀರ್ಣ ಸ್ಥಿತಿಗಳನ್ನು ದಾಟಬೇಕು ಎಂಬ ಸತ್ಯವನ್ನುಅವರು ತಮ್ಮ ಪಾತ್ರಗಳ ಮೂಲಕ ದಾಖಲಿಸಿದರು. ಮನಸ್ಸಿನ ಮುಚ್ಚಿದ ಬಾಗಿಲುಗಳನ್ನ ತೆರೆಯುತ್ತಾ ತಮ್ಮ ಕಾದಂಬರಿಗಳ ಮೂಲಕ ಪ್ರಜ್ಞಾಲೋಕದ ಮೇಲೆ ಬೆಳಕನ್ನು ಚೆಲ್ಲಿದರು. 

ತ್ರಿವೇಣಿಯವರ ಹುಟ್ಟು ಹೆಸರು ಭಾಗೀರಥಿ. ಶಾಲೆಯಲ್ಲಿ ಅವರನ್ನು ಕರೆದದ್ದು ಅನಸೂಯ ಎಂದು. ಇವರು ಹುಟ್ಟಿದ್ದು ಮೈಸೂರಿನಲ್ಲಿ(1928 ಸೆಪ್ಟಂಬರ್ 1) ಇವರ ತಂದೆ ಬಿ.ಎಂ. ಕೃಷ್ಣಸ್ವಾಮಿಯವರು ಮಂಡ್ಯದಲ್ಲಿ ಪ್ರಸಿದ್ಧ ವಕೀಲರು, ತಾಯಿ ತಂಗಮ್ಮ, ಇವರು ಸಾಹಿತ್ಯಿಕ ಕೌಟುಂಬಿಕ ವರ್ಗಕ್ಕೆ ಸೇರಿದವರು. ಶ್ರೇಷ್ಠ ಕತೆಗಾರ ಮತ್ತು ನಟರಾಗಿದ್ದಂತಹ ಕೆ.ಸಿ ಅಶ್ವಥ್‌ ರವರು ತ್ರಿವೇಣಿಯವರ ಭಾವ. ಅದುದರಿಂದ ಇವರ ಕುಟುಂಬವು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದೆ ಎಂದರೆ ತಪ್ಪಾಗಲಾರದು. 

ಇವರು 1947ರಲ್ಲಿ ಮ್ಯೆಸೂರಿನ ಮಹಾರಾಜ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ ಪದವಿಯನ್ನು ಪಡೆದರು. ಮದುವೆಯ ನಂತರ ಅನಸೂಯ ಶಂಕರ್ ಸಣ್ಣ ಕಥೆಗಳ ಮೂಲಕ ಕನ್ನಡ ಸಾಹಿತ್ಯರಂಗವನ್ನು ಪ್ರವೇಶಿಸಿ ಕಾದಂಬರಿಕಾರ್ತಿಯಾಗಿ ತ್ರಿವೇಣಿ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು. ಒಟ್ಟಾರೆ ಅವರು ಬರೆದಂತಹ ಕಾದಂಬರಿಗಳು 21 ಆದರೆ ಅವರು ಬರೆದಂತಹ ಕಥೆಗಳು 49. 

ಎರಡು ಮನಸ್ಸು, ಸಮಸ್ಯೆಯ ಮಗು, ಹೆಂಡತಿಯ ಹೆಸರು ಇವು ತ್ರಿವೇಣಿಯವರ ಕಥಾಸಂಕಲನಗಳಾಗಿವೆ. ಇವುಗಳಲ್ಲಿ ಒಟ್ಟು 49 ಕಥೆಗಳಿವೆ. ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚಿತ್ರಿಸುವ ಈ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಇವರು ಅನೇಕ ಕಾದಂಬರಿಗಳಲ್ಲಿ ನಾನು ಓದಿದಂತಹ 5 ಕಾದಂಬರಿಗಳಾದ ಸೋತು ಗೆದ್ದವಳು, ಅಪಸ್ವರ, ಅಪಜಯ ಮತ್ತು ಬೆಕ್ಕಿನ ಕಣ್ಣು ಎಲ್ಲರ ಮನ ಮುಟ್ಟುವಂತಿವೆ. 

1960ರಲ್ಲಿ ಇವರ ಅವಳ ಮನೆ ಕಾದಂಬರಿ ರಾಜ್ಯ ಪ್ರಶಸ್ತಿಯನ್ನು ಪಡೆದರೆ 1962ರಲ್ಲಿ ಸಮಸ್ಯೆಯ ಮಗುವಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ. ಇವರ ಅನೇಕ ಕವನಗಳು ಚಲನಚಿತ್ರಗಳಾಗಿ ಬಹಳ ಹೆಸರುವಾಸಿಯಾಗಿದೆ. ಬೆಕ್ಕಿನ ಕಣ್ಣು, ಹೊವು ಹಣ್ಣು, ಶರಪಂಜರ, ಇದಕ್ಕೆ ಸಾಕ್ಷಿಯಾಗಿದೆ. ಅಷ್ಟೆ ಅಲ್ಲದೆ ಶರಪಂಜರ ಚಲನಚಿತ್ರವನ್ನು ’ದಿ ಮ್ಯಾಡ್ ವುಮನ್’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. 

ಇನ್ನೂ ಅತಿಮುಖ್ಯವಾಗಿ ಇವರು ಯಾವ ಸಂದರ್ಭದಲ್ಲಿ ಈ ಕಾದಂಬರಿಗಳನ್ನು ಬರೆದರು ಎಂಬುವುದನ್ನು ನಾವು ನೋಡಿದಾಗ, ತ್ರಿವೇಣಿಯರು ಭಾರತೀಯ ಸಮಾಜದ ಸ್ಥಿತ್ಯಂತರದ ಕಾಲದಲ್ಲಿ ಅಥವಾ ಪರಿವರ್ತನ ಸಂಧಿಕಾಲದಲ್ಲಿ ರೂಪುಗೊಂಡ ಲೇಖಕಿ. 

ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸುಧಾರಣಾವಾದಿ ಚಳುವಳಿಗಳ ಫಲವಾಗಿ ಸ್ತ್ರೀಯರ ಕುರಿತಾಗಿ ಹೊಸ ಜಾಗೃತಿಯೊಂದು ಮೂಡಿದ್ದು ಇತಿಹಾಸವಾಗಿದೆ. ಸ್ತ್ರೀಯರ ಶಿಕ್ಷಣ, ವಿಧವೆಯರ ವಿವಾಹ ಮುಂತಾದವುಗಳ ಅಗತ್ಯವನ್ನು ಅನೇಕ ಚಿಂತಕರು ಪ್ರಬಲವಾಗಿ ಪ್ರತಿಪಾದಿಸಿದರು. ಅಂತೆಯೇ ಸ್ತ್ರೀಯರಿಗೆ ಸಂಬಂಧಿಸಿದ ಸಮಸ್ಯೆ, ಶೋಷಣೆಗಳ, ಅನಾವರಣ ನಡೆಸಿದರು ಮತ್ತುಇದರ ಕುರಿತು ಅನೇಕ ಲೇಖಕರು ಅರಿವನ್ನು ಮೂಡಿಸಿದರು. 

ಇಂಥ ಸಾಮಾಜಿಕ ಹೊರ ಚಲನೆಗಳಾಚೆ ಹೆಣ್ಣಿನ ಒಳ ಚಲನೆಯನ್ನು ಸೂಕ್ತವಾಗಿ ಗ್ರಹಿಸುವ ಹೊಸ ನೋಟವೊಂದರ ಅಗತ್ಯವಿತ್ತು. ಇಂಥ ಕಾಲದ ಅಗತ್ಯಕ್ಕೆ ಉತ್ತರವಾಗಿ ರೂಪುಗೊಂಡವರು ತ್ರಿವೇಣಿಯವರು. ಹೆಣ್ಣಿನ ಅಂತರಂಗದ ಆಳಕ್ಕೆ ಪ್ರಯಾಣ ಬೆಳೆಸಿದ ತ್ರಿವೇಣಿ ಹೆಣ್ತನದ ಸಿಕ್ಕುಗಳನ್ನು ಬಿಡಿಸಲು ಮಾಡಿದ ಪ್ರಯತ್ನಕ್ಕಾಗಿ ಅವರಿಗೆ ಜನರ ಅಪಾರ ಅಭಿನಂದನೆಗಳು ದೊರಕಿತು. 

ತ್ರಿವೇಣಿಯವರು ತಮ್ಮ ಎಲ್ಲಾ ಕಾದಂಬರಿಗಳನ್ನು ಮಹಿಳೆಯರ ಸಬಲೀಕರಣಕ್ಕೆ ಮೀಸಲಾಗಿರಿಸಿದ್ದಾರೆ. ಒಬ್ಬ ಮನೋತಜ್ಞರಾಗಿ ಮಹಿಳೆಯ ಮನಸ್ಸನ್ನು ಅರ್ಥಮಾಡಿಕೊಂಡು ಅವರ ಸಮಸೈಗಳನ್ನು ತಮ್ಮ ಕಾದಂಬರಿಗಳಲ್ಲಿ ಬಹಳ ಸರಳವಾಗಿ ತಿಳಿಸುತ್ತಾರೆ. ಪುರುಷರ ದಬ್ಬಾಳಿಕೆಗೆ ಮಣಿದು ಅವರ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ಗಂಡನ ಕೈಗೊಂಬೆಗಳಾಗಿದ್ದತಂಹ ಎಷ್ಟೋ ಮಹಿಳೆಯರ ಜೀವನಕ್ಕೆ ತ್ರಿವೇಣಿಯವರ ಕಾದಂಬರಿಗಳು ಕನ್ನಡಿ ಹಿಡಿದಂತಿವೆ. 

ತ್ರಿವೇಣಿಯವರ ಮೊದಲ ಪ್ರಕಟವಾದಂತಹ ಕಾದಂಬರಿ ಹೂವು-ಹಣ್ಣು ವಿಧವೆಯಾಗಿ ಬಡತನಕ್ಕೆ ಸಿಕ್ಕಿದ ಅನಾಥೆಯೊಬ್ಬಳು, ತನ್ನ ವಂಶದ ಕುಡಿಯನ್ನು ಸಾಕಲು ನಡೆಸುವ ಹೋರಾಟದ ಬದುಕು, ಆ ಹಾದಿಯಲ್ಲಿ ಆಕೆ ಅನುಭವಿಸುವ ಶೋಷಣೆ ಮತ್ತು ವಿಧವೆಯನ್ನು ಸಮಾಜ ನೋಡುವ ದೃಷ್ಟಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ. 

ಶರಪಂಜರ ಕಾದಂಬರಿಯಲ್ಲಿ ಕಥಾನಾಯಕಿ ಕಾವೇರಿ ಮತ್ತು ಸತೀಶ್‌ ಒಬ್ಬರನ್ನೊಬ್ಬರು ಪ್ರೀತಿಸಿ ತಮ್ಮತಂದೆ-ತಾಯಿರನ್ನು ಒಪ್ಪಿಸಿ ಅವರ ಆಶೀರ್ವಾದದಿಂದ ಮದುವೆಯಾಗಿ ಪರಿಪೂರ್ಣ ದಂಪತಿಗಳಾಗಿ ಜೀವಿಸುತ್ತಿದ್ದಾರೆ. ಆದರೆ ಮೂರನೇ ಹೆರಿಗೆಯ ಸಮಯದಲ್ಲಿ ಕಾವೇರಿಯು ನರದೌರ್ಬಲ್ಯಕ್ಕೆ ತುತ್ತಾಗುತ್ತಾಳೆ. ಆ ಸಮಯದಲ್ಲಿ ಆಕೆ ತಾನು ಮದುವೆ ಪೂರ್ವಸಂಬಂಧ ಹೊಂದಿದ್ದೆ ಎಂಬ ಹುಚ್ಚು ಕಲ್ಪನೆಯನ್ನುತನ್ನಗಂಡನ ಬಳಿ ಹೇಳುತ್ತಾಳೆ. ಗಂಡ ಇದೇ ನಿಜವೆಂದು ಭಾವಿಸಿ ತನ್ನತಪ್ಪುಕಲ್ಪನೆಯನ್ನು ಬೆಳೆಸಿಕೊಳ್ಳುತ್ತಾನೆ. ನಂತರ ಆಕೆ ಮಾನಸಿಕವಾಗಿ ಸರಿಹೋದರೂ ಸಹ ಗಂಡ ಆಕೆಯನ್ನು ಪ್ರೀತಿಸುವುದಿಲ್ಲ. ಸಮಾಜವು ಸಹ ಆಕೆಗೆ ಹುಚ್ಚಿಯ ಪಟ್ಟ ಕಟ್ಟುತ್ತದೆ. ಕೊನೆಗೆ ಕಾವೇರಿ ತನ್ನ ಗಂಡ ಅವನ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾನೆ ಎಂಬುವುದನ್ನು ತಿಳಿದು ಆಕೆ ಮರಳಿ ಹುಚ್ಚಿಯಾಗುತ್ತಾಳೆ. ಇದು ತ್ರಿವೇಣಿಯವರ ಅದ್ಭುತ ಕಾದಂಬರಿ. ಇದು ದ.ರಾ. ಬೇಂದ್ರೆಯವರ ಸಾಹಿತ್ಯ ಮತ್ತು ಪುಟ್ಟಣ್ಣ ಕಣಗಾಲ್‌ ರವರ ನಿರ್ದೆಶನದಿಂದ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿರುವುದು ಬಹಳ ಹೆಮ್ಮೆಯ ವಿಷಯ. 

ತ್ರಿವೇಣಿಯವರ ಮತ್ತೊಂದು ಕಾದಂಬರಿ ಸೋತು ಗೆದ್ದವಳು ಕಾದಂಬರಿಯಲ್ಲಿ ನಾಯಕಿಯ ಗಂಡನು ಉದ್ಯೋಗದ ಮೇರೆಗೆ ವಿದೇಶದಲ್ಲಿದ್ದಾಗ, ಹೆಂಡತಿಯು ತನ್ನಗಂಡನನ್ನು ನೆನೆಸುತ್ತಾ ವಿರಹ ಬೇಗೆಯನ್ನು ಅನುಭವಿಸುತ್ತಿರುತ್ತಾಳೆ. ಆ ಸಮಯದಲ್ಲಿ ಆಕೆ ಹಿಟ್ಟು ಹಳಸಿತ್ತು, ನಾಯಿ ಹಸಿದಿತ್ತು ಎಂಬಂತೆ ಆಕೆ ಮತ್ತೊಬ್ಬ ಗಂಡಿನ ಕಾಮಕ್ಕೆ ಬಲಿಯಾಗುತ್ತಾಳೆ, ಆದರೆ ಅವಳು ಇದಕ್ಕಾಗಿ ಪರಿತಪಿಸುತ್ತಾಳೆ. ತನ್ನ ಗಂಡ ವಿದೇಶದಿಂದ ಮರಳಿ ಬಂದ ಬಳಿಕ ತನ್ನತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ವಿದೇಶದಲ್ಲಿದ್ದಾಗ ಗಂಡನು ಸಹ ಇದೇ ತಪ್ಪನ್ನು ಮಾಡಿರುತ್ತಾನೆ. ಹೀಗಿರುವಾಗ ಗಂಡಿಗೆ ಒಂದು ನಿಯಮ, ಹೆಣ್ಣಿಗೆ ಒಂದು ನಿಯಮ ಎನ್ನುವುದು ಸರಿಯಲ್ಲ ಎನ್ನುವ ತಿಳಿವಳಿಕೆಯಿಂದ, ನಾಯಕನು ನಾಯಕಿಯ ತಪ್ಪನ್ನು ಕ್ಷಮಿಸಿ ಬಿಡುತ್ತಾನೆ! ಈ ಕಾದಂಬರಿಯಲ್ಲಿ ತ್ರಿವೇಣಿಯವರು ಹೆಣ್ಣಿನ ಕಾಮದ ಬಯಕೆಯನ್ನು ನಿಸ್ಸಂಕೋಚವಾಗಿ ಎತ್ತಿ ಹಿಡಿಯುತ್ತಾರೆ ವಿನಃ ವಿವಾಹಬಾಹಿರ ಕಾಮವನ್ನು ಅವರು ಎಂದೂ ಪುರಸ್ಕರಿಸಲಿಲ್ಲ. 

ತ್ರಿವೇಣಿಯವರು ತಮ್ಮಜೀವನವನ್ನು ಆಧರಿಸಿ ಅತಿಥಿ ಬರಲೇಯಿಲ್ಲ ಎಂಬ ಸಣ್ಣಕಥೆಯನ್ನು ಬರೆದಿದ್ದಾರೆ. ಜೀವನದಲ್ಲಿ ಹೆಣ್ಣಿಗೆ ಇರಬೇಕಾದ ಸುಖ, ಸಂಪತ್ತು, ಭೋಗ ಭಾಗ್ಯಗಳು ತ್ರಿವೇಣಿಯವರಿಗೆ ಹೇರಳವಾಗಿದ್ದರೂ. ತಾಯಿಯಾಗಲಿಲ್ಲ, ತಾವು ಸೇರಿದ ಮನೆಗೆ ಬೆಳಕಾಗಿ ಒಂದು ಮಗುವನ್ನುಕೊಡಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ದ್ಯೆಹಿಕವಾಗಿ ದುರ್ಬಲವಾಗಿದ್ದ ಕಾರಣ ಅವರು ಮೂರು ಸಲ ಗರ್ಭಿಣಿಯಾದಾಗಲೂ ನಿರೀಕ್ಷಿಸಿದ ಅತಿಥಿ ಬರದೆಯಿದ್ದ ಕಾರಣ ಅವರು ಬಹಳ ನಿರಾಶೆ, ದುಖ:, ಹೆರಿಗೆ ನೋವು, ಮೂಕ ಸಂಕಟವನ್ನುಅತಿಥಿ ಬರಲೇಯಿಲ್ಲ ಎಂಬ ಸಣ್ಣಕಥೆಯಲ್ಲಿ ಮನ ಕರಗುವ ರೂಪದಲ್ಲಿ ವರ್ಣಿಸಿದ್ದಾರೆ. 

ಇಂದು ಸಮಾಜದಲ್ಲಿ ಅನೇಕ ಮಹಿಳಾ ಅಭಿವೃದ್ಧಿ ಸಂಘಗಳು ಹುಟ್ಟಿದ್ದರೂ ಸಹ ಮಹಿಳೆಯರ ಮೇಲಿನ ಪುರುಷರ ದೌರ್ಜನ್ಯ ಇಂದಿಗೂ ಕೊನೆಗೊಂಡಿಲ್ಲ. ಮಹಿಳೆಯರು ಇಂದಿಗೂ ಅನೇಕ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುವುದಕ್ಕೆ ಇಂದಿನ ವಿವಾಹ ವಿಚ್ಛೇದನಗಳೇ ಸಾಕ್ಷಿಯಾಗಿವೆ. ತ್ರಿವೇಣಿಯವರ ಕಾದಂಬರಿಗಳಲ್ಲಿ ಮೂಡಿಬರುವ ಅಂಶ ಮನುಷ್ಯನಿಗೆ ಒಳ್ಳೆ ಮನೆ-ಬಟ್ಟೆ ಊಟವಿದ್ದರೆ ಸಾಲದು ಜೊತೆಗೆ ಪ್ರೀತಿಯು ಸಹ ಬಹಳ ಅಗತ್ಯವೆಂದು ಆಗ ಮಾತ್ರ ಮಹಿಳೆಯರು ಒಳ್ಳೆಯ ಕೌಟುಂಬಿಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಜನತೆಗೆ ತಿಳಿಸಿಕೂಡುತ್ತದೆ. ಒಟ್ಟಾರೆ ತ್ರಿವೇಣಿಯವರ ಕಾದಂಬರಿಗಳು ಸಾಮಾಜಿಕ ಮೌಲ್ಯಗಳ ಕುರಿತು ಅರಿವನ್ನು ಮೂಡಿಸುವುದರ ಜೊತೆಗೆ ಮಹಿಳೆಯರನ್ನು ಕೇವಲ ವಸ್ತುಗಳೆಂದು ಭಾವಿಸದೆ, ಮಾನವೀಯ ದೃಷ್ಟಿಯಿಂದ ಕಾಣಬೇಕೆಂಬ ಕರೆಯನ್ನು ನೀಡುತ್ತದೆ. 

********** 

ಸಂತ ಯೊವಾನ್ನರ ಶುಭಸಂದೇಶ –14


· ಸಹೋ. ವಿನಯ್ ಕುಮಾರ್

ಈ ವಿಭಿನ್ನತೆಯನ್ನು ಎರಡು ರೀತಿಯಾಗಿ ನಾವು ನೋಡಬಹುದು. 

1. ಕೆಲವು ವಿಷಯಗಳು ಸಂತ ಯೊವಾನ್ನರ ಶುಭಸಂದೇಶದಲ್ಲಿ ಇಲ್ಲದೆ ಇರುವುದು ಹಾಗೂ ಇತರೆ ಶುಭಸಂದೇಶಗಳಲ್ಲಿ ಇರುವಂತಹ ವಿಭಿನ್ನತೆಗಳು. 

2. ಕೆಲವು ವಿಷಯಗಳು ಹಾಗೂ ಸಾಹಿತ್ಯದ ಪ್ರಕಾರಗಳು ಕೇವಲ ಯೊವಾನ್ನರ ಶುಭಸಂದೇಶದಲ್ಲಿ ಮಾತ್ರ ಕಾಣಬಹುದಾಗಿದ್ದಂತಹ ವಿಭಿನ್ನತೆಗಳು. 

ಇಂದಿನ ಸಂಚಿಕೆಯಲ್ಲಿ ಬರೀ ಯೊವಾನ್ನರ ಶುಭಸಂದೇಶದಲ್ಲಿ ಸಿಗುವಂತಹ ಸಾಹಿತ್ಯದ ಪ್ರಕಾರ ಹಾಗು ವಿಭಿನ್ನತೆಗಳನ್ನು ನೋಡೋಣ. ಇದರಲ್ಲಿ ಏಳು ವಿಭಿನ್ನತೆಗಳನ್ನು ನಾವು ಕಾಣಬಹುದಾಗಿದೆ: 

1. ಯೊವಾನ್ನರ ಶುಭಸಂದೇಶದಲ್ಲಿ ಏಳು ಪವಾಡಗಳು ಅಥವಾ ಏಳು ಸಂಕೇತಗಳ ಕುರಿತು ಬರೆಯಲಾಗಿದೆ. ನಾವು ಗಮನಿಸಬೇಕಾದ ವಿಷಯ ಶುಭಸಂದೇಶದಲ್ಲಿ ಪವಾಡಗಳ ಬದಲಾಗಿ ಸಂಕೇತಗಳು, ಚಿಹ್ನೆಗಳು ಅಥವಾ ಸೂಚನೆಗಳು ಎಂದು ಬಳಸಲಾಗುತ್ತದೆ. ನಾವು ಕಾಣುವ 7 ಚಿಹ್ನೆಗಳಲ್ಲಿ 5 ಚಿಹ್ನೆಗಳು ಅಥವಾ ಪವಾಡಗಳು ಯೊವಾನ್ನರ ಶುಭಸಂದೇಶದಲ್ಲಿ ಮಾತ್ರ ಕಾಣಬಹುದಾಗಿದೆ. ಬೇರೆ ಮೂರು ಶುಭ ಸಂದೇಶಗಳಲ್ಲಿ ಇವುಗಳ ಬಗ್ಗೆ ಯಾವುದೇ ಆದಂತಹ ಉಲ್ಲೇಖಗಳಿಲ್ಲ. ಅವುಗಳು ಯಾವುದೆಂದರೆ: 

ಅ) ನೀರನ್ನ ದ್ರಾಕ್ಷಾರಸವನ್ನಾಗಿ ಮಾಡಿದ ಸಂಕೇತ. (ಅಧ್ಯಾಯ 2) 

ಆ) ಅಧಿಕಾರಿಯ ಮಗನ ಸ್ವಸ್ಥತೆಯ ಸಂಕೇತ. (ಅಧ್ಯಾಯ4) 

ಇ) ಬೇತ್ಸಥಾಕೊಳದ ಬಳಿ ನಡೆದಂತಹ ಸ್ವಸ್ಥತೆಯ ಸಂಕೇತ. 

ಈ) ಹುಟ್ಟು ಕುರುಡನಿಗೆ ದೃಷ್ಟಿದಾನ (ಅಧ್ಯಾಯ- 9) 

ಉ) ಸತ್ತ ಲಾಜರನಿಗೆ ಜೀವದಾನ (ಅಧ್ಯಾಯ-11) 

2. 'ನಾನೇ' ಎಂಬ ಯೇಸುವಿನ ಹೇಳಿಕೆಗಳು. ಇದನ್ನು ನಾವು ಎರಡು ರೀತಿಯಲ್ಲಿ ವಿಂಗಡಿಸಬಹುದಾಗಿದೆ. ಮೊದಲನೆಯದು ಈ 'ನಾನೇ' ಹೇಳಿಕೆಯ ಜೊತೆಗೆ ಯಾವುದಾದರೂ ಒಂದುಗುಣ ವಿಶೇಷಣದ ಸಹಾಯವನ್ನು ಪಡೆದು ಹೇಳುವಂತದ್ದು. ಇದರಲ್ಲಿ ಯೇಸುಸ್ವಾಮಿಯ ಗುಣವಿಶೇಷಣಗಳ ಬಗ್ಗೆ ಮಾಹಿತಿ ಸಿಗುತ್ತದೆ. ಎರಡನೆಯದು ಯಾವುದೇ ಗುಣವಿಶೇಷಣಗಳು ಇಲ್ಲದೆ ಬರೀ 'ನಾನೇ' ಎಂಬ ಹೇಳಿಕೆಗಳನ್ನು ನೋಡಬಹುದಾಗಿದೆ. ಮೊದಲನೆಯದಾಗಿ ಗುಣವಿಶೇಷಣಗಳು ಸಹಾಯವನ್ನು ಪಡೆದು ಯೇಸುಸ್ವಾಮಿಯ ವ್ಯಕ್ತಿತ್ವದ ಬಗ್ಗೆ ತಿಳಿಸುವಂತಹ ಹೇಳಿಕೆಗಳು. ಇದರಲ್ಲಿ ಪ್ರಮುಖವಾದವು 7. ಉದಾಹರಣೆಗಳು 

ಅ) ನಾನೇ ಜೀವದಾಯಕ ರೊಟ್ಟಿ ( ಅಧ್ಯಾಯ 6:35) ಆ)ನಾನೇ ಜಗತ್ಜ್ಯೋತಿ (ಅಧ್ಯಾಯ 8:12) ಇ)ನಾನೇ ಕುರಿ ಬಾಗಿಲು ( ಅಧ್ಯಾಯ 10:7) ಈ)ನಾನೇ ಉತ್ತಮ ಕುರಿಗಾಹಿ ( ಅಧ್ಯಾಯ 10 :11) 

ಉ)ನಾನೇ ಪುನರುತ್ಥಾನ ಹಾಗೂ ಜೀವ .( ಅಧ್ಯಾಯ 11: 25) ಊ)ನಾನೇ ಮಾರ್ಗ, ಸತ್ಯ ಹಾಗೂ ಜೀವ.( ಅಧ್ಯಾಯ14:6) ಋ) ನಾನೇ ನಿಜವಾದ ದ್ರಾಕ್ಷಾ ಬಳ್ಳಿ ( ಅಧ್ಯಾಯ 15:1) 

ಎರಡನೆಯದಾಗಿ ಯಾವ ಗುಣವಿಶೇಷಣಗಳ ಸಹಾಯವಿಲ್ಲದೆ ಸಂಪೂರ್ಣವಾಗಿ ಬರೀ ನಾನೇ ಎಂಬ ಹೇಳಿಕೆಗಳನ್ನು ಹೇಳಿರುವುದು ಇದರ ಸಂಖ್ಯೆ 6. ಉದಾಹರಣೆ: 

ಅ) ನಾನೇ 8:24 ಆ) ನಾನೇ 8:28 ಇ) ನಾನೇ 8:58 ಈ)ನಾನೇ 18:5 ಉ) ನಾನೇ 18:6 ಊ) ನಾನೇ 18:8. 

ಇದಕ್ಕೆ ದೈವ ಶಾಸ್ತ್ರೀಯ ಅಳವಡಿಕೆಗಳಿವೆ. ನಾನೇ ಎಂಬ ಉಲ್ಲೇಖಗಳ ಬಗ್ಗೆ ಇರುವ ಹಿನ್ನೆಲೆ ಮಹತ್ತರವಾದದ್ದು. ಪ್ರವಾದಿ ಯೆಶಾಯನ ಗ್ರಂಥದಲ್ಲಿ ದೇವರು ಹೀಗೆ ಎನ್ನುವುದನ್ನ ಕಾಣುತ್ತೇವೆ "ನಾನೇ, ನಾನೇ, ದೇವರಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ" (ಯೆಶಾಯ 43:10) ಹಾಗೂ ವಿಮೋಚನಕಾಂಡದಲ್ಲಿ ಮೋಶೆಗೆ ದೇವರು ತಮ್ಮನ್ನೇ ಪ್ರಕಟಿಸುವಾಗ ಈ ರೀತಿ ಹೇಳುತ್ತಾರೆ "ಇರುವಾಗಿರುವ ಇರುವಾತನು ನಾನೇ" (ವಿಮೋ 3:14). ಈ ಉಲ್ಲೇಖಗಳನ್ನೆಲ್ಲ ಗಮನಿಸಿ ಯೊವಾನ್ನರ ಶುಭಸಂದೇಶದ ನಾನೇ ಹೇಳಿಕೆಗಳನ್ನು ನೋಡಿದಾಗ ನಮಗೆ ತಿಳಿಯುವ ವಿಷಯ ಯೇಸುಸ್ವಾಮಿ ದೇವರು ಎಂದು ಅವರು ತಮ್ಮನ್ನೇ ಪ್ರಕಟಪಡಿಸುತ್ತಿದ್ದಾರೆ ಎಂಬುದು. ನಾನೇ ಎಂಬ ಪದವು ದೇವರನ್ನು ಸೂಚಿಸುತ್ತದೆ ಅಥವಾ ದೈವೀ ಪದವಿಯನ್ನು ಅಥವಾ ದೇವರ ನಾಮವನ್ನು ಸೂಚಿಸುತ್ತದೆ. 

3. ಸಂಭಾಷಣೆಗಳು: ಈ ಶುಭಸಂದೇಶದಲ್ಲಿ ಅನೇಕ ಸಂಭಾಷಣೆಗಳನ್ನು ನಾವು ಕಾಣುತ್ತೇವೆ, ಇದೊಂದು ವಿಶೇಷತೆಯೂ ಕೂಡ ಹೌದು. ಈ ರೀತಿ ಅನೇಕ ಸಂಭಾಷೆಗಳನ್ನು ಬೈಬಲ್ ವಿದ್ವಾಂಸರು ದೈವಶಾಸ್ತ್ರೀಯ ಚಿಂತನೆಗಳ ಅನುಗುಣವಾಗಿ ವಿಶ್ಲೇಷಿಸುತ್ತಾರೆ. ಕೆಲವು ಸಂಭಾಷಣೆಗಳು ಕೇವಲ ಈ ಶುಭಸಂದೇಶದಲ್ಲಿ ಮಾತ್ರ ನಾವು ಕಾಣಬಹುದಾಗಿದೆ .ಅವುಗಳೆಂದರೆ : 

ಅ) ನಿಕೋದೇಮನೊಡನೆ ಸಂಭಾಷಣೆ (ಅಧ್ಯಾಯ-3) 

ಆ) ಸಮಾರಿಯದ ಸ್ತ್ರೀಯೊಡನೆ ನಡೆದ ಸಂಭಾಷಣೆ. (ಅಧ್ಯಾಯ-4) 

ಇ) ಯೆಹೂದಿ ಅಧಿಕಾರಿಯ ಜೊತೆ ನಡೆದ ಸಂಭಾಷಣೆ. 

4) ಶಿಷ್ಯರ ಪಾದಸ್ನಾನ ಹಾಗೂ ಪ್ರೀತಿಯ ಹೊಸ ಕಟ್ಟಳೆಯನ್ನು ನೀಡುವುದರ ಬಗ್ಗೆ ಈ ಶುಭಸಂದೇಶ ಮಾತ್ರ ನಮಗೆ ತಿಳಿಸುತ್ತದೆ. (ಅಧ್ಯಾಯ 13). ಇದೊಂದು ಶ್ರೇಷ್ಠ ಕೊಡುಗೆಯಾಗಿದೆ. 

5) ಪವಿತ್ರಾತ್ಮರಬಗ್ಗೆ ಹಾಗೂ ಪವಿತ್ರಾತ್ಮರ ಸಹಾಯ ಹಾಗೂ ಬರುವಿಕೆಯ ಬಗ್ಗೆ ಈ ಶುಭಸಂದೇಶದಲ್ಲಿ ಮಾತ್ರ ಯೇಸುಸ್ವಾಮಿ ಹೇಳುವುದನ್ನು ನಾವು ಕಾಣುತ್ತೇವೆ (ಅಧ್ಯಾಯ 16). 

6) ಯೇಸುಸ್ವಾಮಿ ದ್ರಾಕ್ಷಾ ಬಳ್ಳಿ ನಾವು ಅದರ ಕವಲು ಬಳ್ಳಿಗಳು. ಈಚಿತ್ರಣವನ್ನು ನಾವು ಬರೀ ಈ ಶುಭಸಂದೇಶದಲ್ಲಿ ಮಾತ್ರ ನೋಡಬಹುದಾಗಿದೆ (ಅಧ್ಯಾಯ 15). 

7) ಯೇಸುಸ್ವಾಮಿಯ ಯಾಜಕೀಯ ಪ್ರಾರ್ಥನೆಯನ್ನು ನಾವು ಬರೀ ಈ ಶುಭಸಂದೇಶದಲ್ಲಿ ಮಾತ್ರ ಕಾಣಬಹುದಾಗಿದೆ (ಅಧ್ಯಾಯ - 17). 


********** 


ಕಥಾದನಿ


ಕೊಟ್ಟಿಗೆಯಲ್ಲಿ ಕೆಸರು, ಸಗ್ಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನು ನನಗೆ ಕಾಣಿಸಲೇ ಇಲ್ಲ ! 

ಗೋಶಾಲೆಯಲ್ಲಿ ಹುಟ್ಟಿದ ಬಾಲ ಯೇಸುವನ್ನು ಕಾಣಲು ಹಸು, ಕುರಿ, ಎತ್ತು, ಮೇಕೆ, ಕೋಳಿ ಹೀಗೆ ಹಲವಾರು ಪ್ರಾಣಿಪಕ್ಷಿಗಳು ಹೋದವು. ಜತೆಗೆ ಹಂದಿಯು ಸಹ ಇತರರನ್ನು ಸೇರಿ ಗೋದಲಿ ಕಡೆ ಹೋಗಿತ್ತು. ಅಲ್ಲಿ ಕಂಡ ಅತ್ಯಾಕರ್ಷಕ ದೃಶ್ಯವನ್ನು ಕಂಡು ಮನಸೂರೆಗೊಂಡು ತಮ್ಮ ವಾಸಸ್ಥಳಕ್ಕೆ ಹಿಂದುರುಗಿದ ಪ್ರಾಣಿಪಕ್ಷಿಗಳು ತಮ್ಮ ಕಣ್ಣುಗಳನ್ನು ತುಂಬಿಕೊಂಡಿದ್ದ ಮನೋಹರ ದೃಶ್ಯವನ್ನು ವರ್ಣಿಸಿ ಹೇಳಲಾರಂಭಿಸಿದವು. ಎಲ್ಲಾ ಪ್ರಾಣಿಪಕ್ಷಿಗಳ ವರ್ಣನೆಯನ್ನು ಆಲಿಸಿದ ಹಂದಿ ಹೇಳಿತಂತೆ: "ಗೋಶಾಲೆಯಲ್ಲಿ ಕೆಸರು, ಸಗಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನೂ ನನಗೆ ಕಾಣಿಸಲೇ ಇಲ್ಲ" ಎಂದು. 


ಹೌದು ಬನ್ನಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ 

ಕ್ರಿಸ್ತ ಯೇಸುವಿನ ಜನನದ ರೂಪಕವನ್ನು ಅಭಿನಯಿಸುತ್ತಿದ್ದ ಸಂದರ್ಭ. ಮರಿಯಳಿಗೆ ಪ್ರಸವಕಾಲ ಸಮೀಪಿಸಿದ್ದರಿಂದ ಹೆರಿಗೆಗೆ ಒಂದು ಮನೆಯ ಅವಶ್ಯವಾಗಿತ್ತು. ಪರಸ್ಥಳ ಬೆತ್ಲೆಹೇಮಿನಲ್ಲಿ ಮನೆಗಾಗಿ ಕಾಡಿ ಬೇಡಿ ಹುಡುಕಾಡಿದರೂ ಸಿಗದೆ ಇದ್ದಾಗ ಕೊನೆಗೆ ಒಂದು ಕೊಟ್ಟಿಗೆಯಲ್ಲಿ ಯೇಸು ಹುಟ್ಟುವ ದೃಶ್ಯವನ್ನು ಅಭಿನಯಿಸಿ ತೋರಿಸಬೇಕಾಗಿತ್ತು. 

ಮನೆಯನ್ನು ಕೇಳಿಕೊಂಡು ಬರುವ ಜೋಸೆಫ್ ಮತ್ತು ಮರಿಯಳಿಗೆ ಛತ್ರದ ಯಜಮಾನನ ಪಾತ್ರವಹಿಸಿದ ಒಬ್ಬ ಪುಟ್ಟ ಬಾಲಕ "ಮನೆ ಖಾಲಿ ಇಲ್ಲ" ಎಂದು ಬೈದು ಅವರನ್ನು ವಾಪಸ್ಸು ಕಳಿಸುವಂತೆ ಅಭಿನಯಿಸಬೇಕಾಗಿತ್ತು. ಆದರೆ ಜೋಸೆಫ ಮತ್ತು ಮರಿಯಳ ಕಷ್ಟವನ್ನು ಕಂಡು "ಹೌದು ಬನ್ನಿ ಛತ್ರದಲ್ಲಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ" ಎಂದು ಹೇಳಿ ಮುಂದುವರಿಯಬೇಕಾಗಿದ್ದ ನಾಟಕವನ್ನು ಕೊನೆಗೊಳಿಸಿಯೇ ಬಿಟ್ಟ. 


ಅವನಿಗೆ ನನ್ನ ಅವಶ್ಯಕತೆ ತುಂಬಾ ಇದೆ 

ಒಬ್ಬ ಝೆನ್ ಗುರುಗಳು ತನ್ನ ಶಿಷ್ಯಂದಿರ ಮಧ್ಯೆ ಏನೋ ಗದ್ದಲವಾಗುತ್ತಿರುವುದನ್ನು ಗಮನಿಸಿ ಏನಾಯಿತೆಂದು ಕೇಳಿದರು. ಅವರು ಒಬ್ಬ ಶಿಷ್ಯನನ್ನು ಗುರುವಿನ ಮುಂದೆ ತಳ್ಳಿ “ಇವನು ಮತ್ತೆ ಕಳ್ಳತನ ಮಾಡಿದ್ದಾನೆ” ಎಂದರು. ಗುರುಗಳು “ಅವನನ್ನು ಕ್ಷಮಿಸಿಬಿಡಿ”ಎಂದರು. ಅದಕ್ಕೆ ಶಿಷ್ಯರು “ಸಾಧ್ಯವೇ ಇಲ್ಲ. ನಿಮಗೋಸ್ಕರ ನಾವು ಇವನನ್ನು ಈಗಾಗಲೇ ಸಾಕಷ್ಟು ಬಾರಿ ಕ್ಷಮಿಸಿದ್ದೇವೆ. ನೀವೀಗ ಅವನನ್ನು ಹೊರಗೆ ಕಳುಹಿಸದಿದ್ದರೆ, ನಾವೆಲ್ಲರೂ ಇಲ್ಲಿಂದ ಹೊರಟುಹೋಗುತ್ತೇವೆ ”ಎಂದು ಹೆದರಿಸಿದರು.“ನೀವೆಲ್ಲ ಹೊರಟು ಹೋದರೂ ಸಹ, ನನಗೆ ಅವನನ್ನು ಹೊರ ಕಳಿಸುವ ಇಂಗಿತವಿಲ್ಲ. ನಿಮಗೆ ನನ್ನ ಅವಶ್ಯಕತೆ ಇಲ್ಲದಿರಬಹುದು ಆದರೆ ಅವನಿಗೆ ನನ್ನ ಅವಶ್ಯಕತೆ ತುಂಬಾ ಇದೆ” ಎಂದು ಗುರುಗಳು ಹೇಳಿದರು. ಆಗ ಅಪರಾಧವನ್ನೆಸಗಿದ ಶಿಷ್ಯ ಗುರುಗಳ ಪಾದಕ್ಕೆ ಬಿದ್ದು ಕಣ್ಣೀರಿಟ್ಟ. 


******************* 

ಮಕ್ಕಳ ಸುಳ್ಳಿನ ಪ್ರಪಂಚ (ಭಾಗ - 4)




¨ ಯೊಗೇಶ್ ಮಾಸ್ಟರ್

ಹಸಿಸುಳ್ಳು ಮತ್ತು ಬಿಳಿಸುಳ್ಳು 

ಸುಳ್ಳಿನ ಬಾಲಪಾಠ 

ಮಕ್ಕಳು ಸುಳ್ಳು ಹೇಳಿದಾಗ ಅಥವಾ ಹೇಳುವಾಗ, ಗಾಬರಿಯಾಗುವ ಅಥವಾ ಆಘಾತಗೊಳ್ಳುವ ಅಗತ್ಯವೇನಿಲ್ಲ. ಕೆಲವೊಮ್ಮೆ ಮನೆಯ ಹಿರಿಯರು ಕೂಡಾ ಸುಳ್ಳಿನ ಪಾಠ ಮಾಡುವುದು ಸೇರಿದಂತೆ, ತಾವು ತಾವೇ ಮಕ್ಕಳು ಸೇರಿ ಸುಳ್ಳನ್ನು ಅಭ್ಯಾಸ ಮಾಡುವುದರಿಂದ ಬಹಳ ಅಚ್ಚುಕಟ್ಟಾಗಿ, ಸರಳವಾಗಿ ಮತ್ತು ಸಂತೋಷವಾಗಿ ಮಕ್ಕಳು ಸುಳ್ಳನ್ನು ಕಲಿಯುತ್ತಾರೆ. ಮಗುವು ಎಳೆಯ ವಯಸ್ಸಿನಲ್ಲಿ ಆಟವಾಡುವಾಗ, ಅದರಲ್ಲೂ ಮನೆಯಾಟ ಆಡುವಾಗ ನೀರಿಲ್ಲದಿದ್ದರೂ ಸ್ನಾನ ಮಾಡುತ್ತದೆ, ಸಾಮಾನುಗಳಿಲ್ಲದಿದ್ದರೂ ಅಡುಗೆ ಮಾಡುತ್ತದೆ, ತಿನ್ನುವುದಕ್ಕೆ ಇಲ್ಲದಿದ್ದರೂ ತಿನ್ನಲು ಕೊಡುತ್ತದೆ, ಕುಡಿಯಲು ಏನಿರದಿದ್ದರೂ ಕಾಫಿ ಮಾಡಿಕೊಂಡು ಬಂದು ಕೊಟ್ಟು ಬಿಸಿ ಇದೆ ನಿಧಾನವಾಗಿ ಕುಡಿಯಿರಿ ಎನ್ನುತ್ತದೆ. ತಾನು ತಿನ್ನಲು ಕೊಟ್ಟಿದ್ದು ಚೆನ್ನಾಗಿದೆಯೇ ಎಂದು ಕೇಳುತ್ತದೆ. ಇವೆಲ್ಲಾ ಏನು? ಇಲ್ಲದಿರುವುದನ್ನು ಇದೆ ಎನ್ನುವುದು ಆಟವಾಗಿರುತ್ತದೆ. ಆದರೆ ಇಲ್ಲದಿರುವುದನ್ನು ಇದೆ ಎಂದು ಭಾವಿಸುವಷ್ಟು ತಲ್ಲೀನತೆ ಹೊಂದಿದ್ದರೆ ಅದು ಮುಂದೆ ಸಮಸ್ಯೆಗಳನ್ನು ಸೃಷ್ಟಿಸಬಹುದು. 

ಈ ವಿಚಾರವಾಗಿ ಬಹಳ ಸ್ಪಷ್ಟತೆಯನ್ನು ಹೊಂದಬೇಕು. ಇಲ್ಲದಿರುವುದನ್ನು ಇದೆ ಎಂದು ಹೇಳುವುದು ಆಟವೆಂದುಕೊಳ್ಳೋಣ. ಆದರೆ ಇಲ್ಲದಿರುವುದನ್ನು ಇದೆ ಎಂದು ಭಾವಿಸುವುದು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವುದು ಎಂದರೆ ಅದು ಮನೋರೋಗಕ್ಕೆ ಸೂಚನೆ. 

ನಾವು ಸುಮ್ಮಸುಮ್ಮನೆ ಆಟಕ್ಕೆ ಅಂತ ಅಥವಾ ತಮಾಷೆಗೆ ಅಂತ ಎಷ್ಟೊಂದು ಬಗೆಯಲ್ಲಿ ಚೇಷ್ಟೆಗಳನ್ನು ಮಾಡಿರುತ್ತೇವೆ. ಆದರೆ ಅವುಗಳನ್ನೇ ಗಂಭೀರ ಸ್ವರೂಪದಲ್ಲಿ ಸುಳ್ಳು ಎಂದು ಹೇಳುತ್ತೇವೆ ಎಂಬುದನ್ನು ನಾವೇ ಗಮನಿಸಿರುವುದಿಲ್ಲ. ಅದೇ ರೀತಿ ಮಕ್ಕಳಿಗೆ ಸುಳ್ಳು ಹೇಳುವ ಗಂಭೀರ ಮಾದರಿಗಳು ಸಿಗುವುದೇ ದೊಡ್ಡವರಿಂದ. ಕೆಲವು ತಂದೆ ತಾಯಿಯರು ನಾವೆಂದಿಗೂ ಮಕ್ಕಳ ಎದುರಿಗೆ ಸುಳ್ಳೇ ಹೇಳಿಲ್ಲ, ನಾವು ಸುಳ್ಳು ಹೇಳುವುದರ ಮಾದರಿ ಕೊಟ್ಟಿಲ್ಲ ಎಂದು ಭಾವಿಸಲಾಗದು. ಮಗುವಿನ ಪರಿಸರದಲ್ಲಿ ಅದು ಕಾಣುವ ವ್ಯಕ್ತಿಗಳು ತಂದೆ ತಾಯಿ ಮಾತ್ರ ಅಲ್ಲವಲ್ಲ! ಜೊತೆಗೆ ಇನ್ನೂ ಕೆಲವೊಮ್ಮೆ, ನೇರವಾಗಿ ಅರ್ಥೈಸಿಕೊಳ್ಳಲಾಗದ ಮಗುವು ತನ್ನ ತಂದೆ ತಾಯಿಯ ವರ್ತನೆಯನ್ನು ಬೇರೆ ಏನೋ ಗ್ರಹಿಸಿದ್ದಿರಬಹುದು. ಅದನ್ನು ಸುಳ್ಳಿನ ಮಾದರಿಯಾಗಿ ಸ್ವೀಕರಿಸಿದ್ದಿರಬಹುದು. 

ಅದೇನೇ ಇರಲಿ, ಒಂದು ನಾವು ತಿಳಿಯಬೇಕಾಗಿರುವುದು ಎಂದರೆ, ಮಕ್ಕಳಿಗೆ ಇಲ್ಲದಿರುವುದನ್ನು ಇದೆ ಎನ್ನುವ, ಇರುವುದನ್ನು ಇಲ್ಲ ಎನ್ನುವ ಸುಳ್ಳಿನ ಬಾಲಪಾಠ ಆಗಿರುತ್ತದೆ ಎಂಬುದು. 



ಸುಮ್ಮಸುಮ್ಮನೆ 



ಮಕ್ಕಳಿಗೆ ಸುಳ್ಳಿನ ಬಾಲಪಾಠ ಬಹಳ ಹಿಂದೆಯೇ ಆಗಿರುವುದರಿಂದ ಮುಂದೆ ಅದೇ ಮಕ್ಕಳು ಸುಳ್ಳುಗಳನ್ನು ಹೇಳುವಾಗ ನಾವು ಅದನ್ನು ಅನಿರೀಕ್ಷಿತ ಎಂದು ಆಘಾತಗೊಳ್ಳುವ ಅಗತ್ಯವಿಲ್ಲ ಎಂಬುದನ್ನು ತಿಳಿಯಬೇಕು. ಜೊತೆಗೆ ಸುಳ್ಳು ಮತ್ತು ಸುಮ್ಮಸುಮ್ಮನೆ ಎಂಬುದರ ನಡುವಿನ ವ್ಯತ್ಯಾಸವನ್ನು ನಾವೂ ತಿಳಿಯಬೇಕು. ಹಾಗೆಯೇ ಮಕ್ಕಳು ಸುಳ್ಳು ಹೇಳುವುದನ್ನು ಕಂಡು ಹಿಡಿದಾಗ ಅವರ ವಯಸ್ಸಿಗೆ ಅನುಗುಣವಾಗಿ ತಿಳಿ ಹೇಳಬೇಕು ಮತ್ತು ಖಂಡಿಸಬೇಕು. ಎಲ್ಲಾ ಎಮ್ಮೆಗಳಿಗೂ ಒಂದೇ ಬರೆ ಎಳೆಯಬಾರದು. 

ಮಕ್ಕಳ ಸುಳ್ಳುಗಳ ವಿಷಯದಲ್ಲಿ ದೊಡ್ಡವರು ಹಲವು ರೀತಿಗಳಲ್ಲಿ ಸ್ಪಂದಿಸಬೇಕು. ಮೊದಲನೆಯದಾಗಿ ದೊಡ್ಡವರು ಯಾವುದು ಸುಳ್ಳು ಮತ್ತು ಯಾವುದು ನಿಜ ಎಂಬುದನ್ನು ಸ್ಪಷ್ಟಪಡಿಸುವ ಸಾಮರ್ಥ್ಯ ಹೊಂದಿರಬೇಕು. ಈ ಸಾಮರ್ಥ್ಯ ಬರಿಯ ವಾಚಿಕವಾಗಿ ಮಾತ್ರವಲ್ಲದೇ ತಮ್ಮ ವರ್ತನೆಗಳಲ್ಲಿಯೂ ಕೂಡಾ ತೋರುವಂತವರಾಗಿರಬೇಕು. 

ಸುಳ್ಳು ಎನ್ನುವುದು ಬರಿಯ ಹೇಳುವಿಕೆಯಲ್ಲಿ ಮಾತ್ರವಲ್ಲ ಇರುವುದು. ನಡೆದುಕೊಳ್ಳುವುದರಲ್ಲಿ, ವರ್ತಿಸುವುದರಲ್ಲಿ, ಭಾವನೆಗಳಲ್ಲಿ, ಶ್ರದ್ಧೆಗಳಲ್ಲಿ, ವಿಶ್ವಾಸಗಳಲ್ಲಿ, ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳದಿರುವುದರಲ್ಲಿ; ಹೀಗೆ ಅನೇಕ ವಿಷಯಗಳಲ್ಲೂ ಕೂಡಾ ಸುಳ್ಳು ಎಂಬುದರ ಗುಣಗಳುಂಟು. ಹಾಗಾಗಿ ನಿಜದ ಪರಿಚಯ ಅಥವಾ ಸಾಚಾತನದ ಅನುಭವ ಬರಿಯ ಬಾಯಲ್ಲಿ ಹೇಳುವಂತಹ ವಿಷಯಗಳಲ್ಲಿ ಮಾತ್ರ ಎಂಬಂತೆ ಬಿಂಬಿಸಲಾಗದು. 

ಹಲವು ಬಾರಿ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೂ ಕೂಡಾ ಸುಳ್ಳುಗಳು ಪ್ರವೇಶಿಸಿಬಿಡುತ್ತವೆ. ಯಾವುದೇ ವಿಷಯವು ಸತ್ಯವೆಂದು ಮನವರಿಕೆಯಾಗುವವರೆಗೂ ಕಾಯದೇ ತಟ್ಟನೆ ಹರಡುವುದರಲ್ಲಿಯೂ ಕೂಡಾ ಸುಳ್ಳುಗಳ ಪ್ರಸರಣವಾಗುವುದರಿಂದ ಹಿರಿಯರಾದವರೂ ಮಕ್ಕಳ ಮುಂದೆ ಯಾವುದೇ ಕೇಳಿದ ವಿಷಯಗಳನ್ನು ಇತರರಿಗೆ ತಿಳಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. 

ಹಸೀಸುಳ್ಳು, ಬಿಳೀಸುಳ್ಳು, ಸಿಹಿಸುಳ್ಳು; ಹೀಗೆ ಹಲವು ಸುಳ್ಳುಗಳಿವೆ. ಯಾವುದೇ ಸನ್ನಿವೇಶವನ್ನು ಇಬ್ಬರು ನೋಡಿದಾಗ ಅವರಲ್ಲಿ ಒಬ್ಬ ಅದನ್ನು ಬೇರೆಯಾಗಿಯೇ ಹೇಳಿದರೆ ಮತ್ತೊಬ್ಬನು ಅದನ್ನು ಹಸೀಸುಳ್ಳು ಎಂದು ಕರೆಯುತ್ತಾನೆ. ಏಕೆಂದರೆ ಅವನು ಸಾಕ್ಷೀಕರಿಸಿದ್ದನ್ನು ನೇರವಾಗಿಯೇ ನಿರಾಕರಿಸಿ ಮತ್ತೊಂದನ್ನು ಹೇಳುವುದು ಸುಳ್ಳಾಗುವುದು. 

ಮಕ್ಕಳು ಭಯಕ್ಕೆ, ಅಥವಾ ಆಸೆಗೆ ಮುಗ್ಧವಾಗಿ ಹೇಳುವ ಸುಳ್ಳುಗಳನ್ನು ಅಥವಾ ಸರಿಯಾಗಿ ಗ್ರಹಿಸದೇ ಹೇಳುವ ಸುಳ್ಳುಗಳನ್ನು ಇಂಗ್ಲೀಷಲ್ಲಿ ವ್ಹೈಟ್ ಲೈಸ್ ಅಥವಾ ಬಿಳಿಸುಳ್ಳು ಎನ್ನುತ್ತಾರೆ. ಇನ್ನು ಒಬ್ಬರ ಮನಸ್ಸಿಗೆ ನೋವಾಗಬಾರದು ಎಂದೋ ಅಥವಾ ಖುಷಿ ಪಡಿಸಲು ಎಂದೋ ಹೇಳುವಂತಹ ಸುಳ್ಳುಗಳನ್ನು ಸಿಹಿಸುಳ್ಳುಗಳೆಂದು ಕರೆಯುತ್ತಾರೆ. ಮಕ್ಕಳು ಈ ಎಲ್ಲಾ ಸುಳ್ಳುಗಳನ್ನು ಹೇಳುತ್ತಾರೆ. 


ಸುಳ್ಳಿಗೆ ಮದ್ದೇನು? 

ಮಕ್ಕಳ ಮನಃಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ಮಕ್ಕಳು ಸುಳ್ಳುಗಳನ್ನು ಹೇಳಿದಾಗ ವಯೋಮಾನಕ್ಕೆ ತಕ್ಕಂತೆ ಅವರಿಗೆ ಸ್ಪಂದಿಸಬೇಕು. 

ಸಾಮಾನ್ಯವಾಗಿ ಸಣ್ಣ ಮಕ್ಕಳು ಸುಳ್ಳು ಹೇಳುವುದೇ ಆತ್ಮರಕ್ಷಣೆಗೆ. ದೂರುಗಳಿಂದ, ಆರೋಪಗಳಿಂದ ತಪ್ಪಿಸಿಕೊಳ್ಳಲು ತಟ್ಟನೆ ಮಕ್ಕಳು ಹೇಳುವುದೇ 'ನಾನಲ್ಲ' ಎಂದು. ಗೋಡೆ ಅಥವಾ ಡೆಸ್ಕಿನ ಮೇಲೆ ಬರೆದವರು ಯಾರು ಎಂದರೆ ಅಥವಾ ಹೂದಾನಿಯನ್ನೋ, ಮತ್ತೊಂದನ್ನೋ ಮುರಿದಿರುವುದು ಯಾರು ಎಂದರೆ ಎಲ್ಲಾ ಮಕ್ಕಳೂ ಸಾಮಾನ್ಯವಾಗಿ ನಾನಲ್ಲ ಎನ್ನುತ್ತಾರೆ. 

ಪ್ರಾಮಾಣಿಕವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಹೊಣೆ ದೊಡ್ಡವರದು. ಮಿಗಿಲಾಗಿ ನಾನು ಎಂದು ಒಪ್ಪಿಕೊಂಡ ಮಕ್ಕಳಿಗೆ ಶಿಕ್ಷೆ ಕೊಡದೇ, ಬೈಯದೇ, ನಯವಾಗಿ ಹೇಳಿದರೆ ಆ ಮಗುವಿಗೆ ಸುಳ್ಳು ಹೇಳದಿರಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಮಕ್ಕಳ ಎದುರೂ ಕೂಡಾ ದೊಡ್ಡವರು ತಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು. ತಾವೇ ಮಾದರಿಯಾಗಬೇಕು. ಯಾವುದೇ ಮಗುವು ತನ್ನ ತಪ್ಪನ್ನು ಒಪ್ಪಿಕೊಂಡಾಗ ಬೈಯುವುದೋ, ಹೊಡೆಯುವುದೋ ಖಂಡಿತ ಮಾಡಬಾರದು. ಅದು ಇತರ ಮಕ್ಕಳಿಗೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಗುಣವನ್ನು ಪ್ರೋತ್ಸಾಹಿಸಿದಂತಾಗುತ್ತದೆ. 

ಮಕ್ಕಳಿಗೆ ಸುಳ್ಳು ಹೇಳುವುದರಿಂದ ಆಗುವ ಅನಾಹುತಗಳನ್ನು ಬಿಂಬಿಸುವ, ನಿಜ ಹೇಳುವುದರಿಂದ ಆಗುವ ಆನಂದವನ್ನು ಪ್ರದರ್ಶಿಸುವ, ಪರಸ್ಪರ ಸಂಬಂಧಗಳಲ್ಲಿ ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿರುವುದು ಎಷ್ಟು ಮುಖ್ಯ ಎಂದು ತೋರುವಂತಹ ಕತೆಗಳನ್ನು ಹೇಳಬೇಕು. ಇವೆಲ್ಲವೂ ಕೂಡಾ ಮಗುವಿನ ಸುಳ್ಳುಪುರುಕುತನವನ್ನು ಕಡಿಮೆ ಮಾಡಲು ಅಥವಾ ಸುಳ್ಳುಗಳನ್ನು ರೂಢಿಸಿಕೊಳ್ಳದಿರಲು ಸಹಾಯಕವಾಗಿರುತ್ತದೆ. 


******************* 

ಜಗದ ಸೃಷ್ಟಿಯ ಪೌರಾಣಿಕ ಕತೆಗಳು - 4


· ಎಫ್. ಎಂ. ನಂದಗಾವ್

ಒಬತಾಲನ ಜೀವ ಸೃಷ್ಟಿ* 

ಆದಿಯಲ್ಲಿ ವಿಶ್ವದಲ್ಲಿ ಮೇಲೆ ಅನಂತವಾಗಿ ಹರಡಿದ ನೀಲಿ ಬಣ್ಣದ ಆಗಸವಿತ್ತು, ಕೆಳಗೆ ಮಬ್ಬು ಮಬ್ಬಾದ ಮಂಜಿನ ಜಲರಾಶಿ ಇತ್ತು. ಆಗ ಇದ್ದ ಜೀವಿಗಳೆಂದರೆ, ಅವರು ದೇವರುಗಳು ಮತ್ತು ದೇವತೆಗಳು. ಆಗ ಜಗತ್ತಿನಲ್ಲಿ ಸಸ್ಯರಾಶಿ ಇರಲಿಲ್ಲ. ಪ್ರಾಣಿಪಕ್ಷಿಗಳೂ ಇರಲಿಲ್ಲ. ಜೊತೆಗೆ ಮಾನವರಂತೂ ಇರಲೇಇಲ್ಲ. ನೀಲಿ ಬಣ್ಣದ ಅನಂತವಾಗಿ ಹರಡಿದ ಆಗಸವನ್ನು ಅಪಾರ ಶಕ್ತಿಯದೇವತೆ `ಓಲೊರನ್' ದೇವರು ಆಳುತ್ತಿದ್ದನು. ಕೆಳಗಿನ ಮಂಜಿನ ಜಲರಾಶಿ ಹಾಗೂ ಬರಡು ಬಂಜರು ಭೂಮಿಯ ಮೇಲೆ `ಓಲೊಕುನ್' ದೇವತೆಯ ಆಧಿಪತ್ಯವಿತ್ತು. 

ಒಂದು ದಿನ ಯುವದೇವತೆ `ಒಬತಾಲ', ದೇವರುಗಳ ನೆಲೆಯಾದ ಸ್ವರ್ಗದ ನೀಲಾಕಾಶದಿಂದ ಕೆಳಗೆ ಇಣುಕಿ ನೋಡಿದ. ಮಂಜು ಮುಸುಕಿದ, ಕೆಸರಿನ ಜೌಗು ಭೂಮಿ ಖಾಲಿ ಖಾಲಿ ಇರುವುದನ್ನು ಕಂಡು ಬೇಸರವಾಯಿತು. ನಂತರ, ಜಾಣ ಹಾಗೂ ಸರ್ವಶಕ್ತ ದೇವರಾದ ಓಲೊರನ್‌ ಅನ್ನು ಭೇಟಿಯಾಗಿ ತನ್ನ ಅನಿಸಿಕೆಯನ್ನು ಹೇಳಿಕೊಂಡ. 

`ಕೆಳಗೆ ಗಟ್ಟಿಯಾದ ಭೂಮಿಯನ್ನು ಸೃಷ್ಟಿಸುವ ಅಭಿಲಾಷೆ ನಿಮಗಿಲ್ಲವೆ?' ಎಂದು ಓಲೊರನ್‌ ದೇವರನ್ನು ವಿಚಾರಿಸಿದ ಒಬತಾಲ, ತನ್ನ ಸಲಹೆಯನ್ನು ಅವನ ಮುಂದಿಟ್ಟ. `ಅದು ಬಗೆಬಗೆಯ ಬಣ್ಣಬಣ್ಣದಿಂದ ಕಂಗೊಳಿಸುತ್ತಿದ್ದರೆ ನೋಡಲು ನಯನ ಮನೋಹರವಾಗಿರುತ್ತದೆ. ಅಲ್ಲಿ ಪರ್ವತ ಶ್ರೇಣಿಗಳು, ಹಸುರಿನಿಂದ ಕೂಡಿದ ಗುಡ್ಡಗಾಡು ಪ್ರದೇಶವಿದ್ದು, ಹೊಳೆಹಳ್ಳಗಳು ಹರಿಯುತ್ತಿದ್ದರೆ, ಜಲಪಾತಗಳು ಸೃಷ್ಟಿಯಾದರೆ, ಅದನ್ನು ಕಾಣುವುದೇ ಸಂತಸವನ್ನು ಉಂಟು ಮಾಡುತ್ತದೆ'. 

`ಅದಲ್ಲದೇ, ನಿಸರ್ಗದತ್ತ ಹಣ್ಣುಹಂಪಲುಗಳನ್ನು ತಿನ್ನುತ್ತಾ ಅಲ್ಲಿನ ಕಾಡು ಮೇಡುಗಳಲ್ಲಿ ಪ್ರಾಣಿಪಕ್ಷಿಗಳು ವಾಸಿಸುತ್ತಿದ್ದರೆ ಎಷ್ಟು ಚಂದ. ನಂತರ ನಾವು ನಮ್ಮನ್ನೇ ಹೋಲುವ ಮಾನವರನ್ನು ಸೃಷ್ಟಿಸಬಹುದು. ಅವರು ಅಪಾರ ಸಂಖ್ಯೆಯ ಸಮುದಾಯಗಳಲ್ಲಿ ಅಲ್ಲಿರಬಹುದು.' 

`ಹೌದು ನಿನ್ನದು ಒಂದು ಉತ್ತಮ ಚಿಂತನೆಯೆ?' ಎಂದು ಯುವ ದೇವರು ಒಬತಾಲನ ಮಾತಿಗೆ ಸಮ್ಮತಿ ಸೂಚಿಸಿದ ಓಲೊರನ್‌ ದೇವರು, `ಆದರೆ ಅಂಥ ಜಗತ್ತನ್ನು ಸೃಷ್ಟಿಸುವ ಬಗೆ ಯಾರಿಗೆ ಗೊತ್ತಿದೆ?' ಎಂದು ಪ್ರಶ್ನಿಸಿದ. 

`ನನಗೆ ಅನುಮತಿಕೊಟ್ಟರೆ, ನಾನು ಈ ನಿಟ್ಟಿನಲ್ಲಿ ಪ್ರಯತ್ನಿಸಿ ನೋಡುವೆ' ಎಂದ ಒಬತಾಲ, ಓಲೊರನ್‌ ದೇವರ ಅನುಮತಿ ಪಡೆದು, ಈ ಸವಾಲನ್ನು ಸಮರ್ಥವಾಗಿ ಎದುರಿಸುವ ಛಲದೊಂದಿಗೆ ಹೊರಟೇ ಬಿಟ್ಟ. 

ಮೊದಲಿಗೆ ಒಬತಾಲ, ದೇವರು ಓಲೊರನ್‌ ಅವರ ಹಿರಿಯ ಪುತ್ರ `ಓರುನಮಿಲ' ಅವರನ್ನು ಭೇಟಿಯಾದ. ಓರುನಮಿಲ, ಮುಂದೆ ಭವಿಷ್ಯದಲ್ಲಿ ಏನು ನಡೆಯಬಲ್ಲದು ಎಂಬುದನ್ನು ಕಾಣುವ ವಿಶೇಷ ಶಕ್ತಿಯನ್ನು ಕೊಡುಗೆಯಾಗಿ ಪಡೆದಿದ್ದ. 

`ಸರ್ವಶಕ್ತ ದೇವರಾದ ನಿನ್ನ ತಂದೆ ಓಲೊರನ್, ನಮ್ಮ ನೆಲೆಯಾದ ಸ್ವರ್ಗದ ನೀಲಾಕಾಶದ ಕೆಳಗಿರುವ ಮಂಜು ಮುಸುಕಿದ ಭೂಮಿಯಲ್ಲಿ ಗಟ್ಟಿಯಾದ ನೆಲವನ್ನು ಸೃಷ್ಟಿಸಿ, ಅಲ್ಲಿ ಜೀವಜಗತ್ತನ್ನು ನೆಲೆಸುವಂತೆ ಮಾಡಲು ನನಗೆ ಅನಮತಿಕೊಟ್ಟಿದ್ದಾನೆ' ಎಂದು ಓರುನಮಿಲ ದೇವರಿಗೆ ವಿವರಣೆಕೊಟ್ಡ ಒಬತಾಲ, `ನಾನು, ನನ್ನ ಈ ಕನಸನ್ನು ಹೇಗೆ ಸಾಧಿಸಬಲ್ಲೆ ಎಂದು ಹೇಳಬಲ್ಲೆಯಾ?' ಎಂದು ವಿಚಾರಿಸಿದ. 

ಗಹನವಾದ ವಿಚಾರದಲ್ಲಿ ಮುಳುಗಿ ದೂರ ಕ್ಷಿತಿಜದತ್ತ ಕಣ್ಣು ನೆಟ್ಟ, ಓರುನಮಿಲ ತಾನು ಭವಿಷ್ಯದಲ್ಲಿ ಕಂಡ ವಿಷಯಗಳನ್ನು ಅರುಹಿದ. 

`ನೀನು ಅಗಣಿತ ಉದ್ದದ ಬಂಗಾರದ ಸರಪಳಿಯನ್ನು ಹೊಂದಿಸಬೇಕಾಗುತ್ತದೆ. ಏಕೆಂದರೆ, ಅನಂತವಾಗಿ ಹರಡಿರುವ ಈ ನೀಲಾಕಾಶ ಸ್ವರ್ಗದಿಂದ ಅಷ್ಟು ದೂರದಲ್ಲಿರುವ ಮಂಜಿನಿಂದ ಆವೃತವಾಗಿರುವ ಭೂಮಿಯನ್ನು ಸರಳವಾಗಿ ತಲುಪುವುದು ಸಾಧ್ಯವಾಗದು. ನೀನು ಶಂಖದಲ್ಲಿ ಮರಳನ್ನು ತುಂಬಬೇಕಾಗುತ್ತದೆ. ಅದನ್ನು ನಿನ್ನ ಚೀಲದಲ್ಲಿ ಇಟ್ಟುಕೊಳ್ಳಬೇಕು. ಜೊತೆಗೆ ಬಿಳಿಯ ಹೆಂಟೆ, ಕಪ್ಪು ಬೆಕ್ಕು ಮತ್ತು ತಾಳೆಮರದ ಕಾಯಿಯೊಂದನ್ನು ಚೀಲದಲ್ಲಿ ಇರಿಸಿಕೊಳ್ಳಬೇಕು' ಎಂದು ಸಲಹೆ ನೀಡಿದ. 

ಇಷ್ಟಾದ ಮೇಲೆ ಒಬತಾಲ, ಸ್ವರ್ಗದಲ್ಲಿರುವ ಪ್ರತಿಯೊಬ್ಬ ದೇವರು ಮತ್ತು ದೇವತೆಗಳನ್ನು ಕಂಡು ತನ್ನ ಯೋಜನೆಯನ್ನು ಅವರ ಗಮನಕ್ಕೆ ತಂದ. ಪ್ರತಿಯೊಬ್ಬರಿಗೂ ತಾನು ಸೃಷ್ಟಿಸ ಬಯಸುವ ಜಗತ್ತಿನ ವಿವರಣೆ ನೀಡಿ, ಅದಕ್ಕೆ ಸಹಾಯ ಮಾಡಲು ಬಂಗಾರದ ಸರಪಳಿ ಹೊಂದುವುದು ಅಗತ್ಯವಾಗಿದೆ ಎಂದು ಮನಗಾಣಿಸಿ, ಅವರಿಂದ ಅವರಲ್ಲಿದ್ದ ಬಂಗಾರದ ಭಿಕ್ಷೆ ಬೇಡತೊಡಗಿದ. ಅವನ ಸುದೈವ, ಸ್ವರ್ಗದಲ್ಲಿ ಸಕಲ ದೇವರು ಮತ್ತು ದೇವತೆಗಳು ತಮ್ಮಲ್ಲಿದ್ದ ಬಂಗಾರದ ಸಕಲ ಆಭರಣಗಳನ್ನು ಒಬತಾಲನ ಕೈಗೆ ಒಪ್ಪಿಸಿದರು. 

ಒಬತಾಲನ ಸಂಗ್ರಹದಲ್ಲಿ ಅಪಾರ ಪ್ರಮಾಣದ ದೇವದೇವತೆಗಳಲ್ಲಿನ ಬಂಗಾರದ ಕಂಠದ ಹಾರಗಳು, ಕೈ ಕಡಗ ಕಾಲ್ಕಡಗಗಳು, ನಡುಪಟ್ಟಿಗಳು, ಕಿವಿಯೋಲೆಗಳು, ಬೆರಳ ಉಂಗುರುಗಳ ರಾಶಿಯೇ ಬಿದ್ದಿತ್ತು. ಹಲವಾರು ಚೀಲಗಳಲ್ಲಿ ತನಗೆ ದೇವದೇವತೆಗಳು ಒಪ್ಪಿಸಿದ ಬಂಗಾರದ ಆಭರಣಗಳ ಮೂಟೆಗಳನ್ನು ತನ್ನರಥದಲ್ಲಿ ಇರಿಸಿಕೊಂಡು ಸ್ವರ್ಗಲೋಕದಲ್ಲಿದ್ದ ದೇವಾನುದೇವತೆಗಳ ಚಿನಿವಾರನ ಮನೆಯತ್ತ ಹೊರಟ. 

ಒಬತಾಲನನ್ನು ಆದರದಿಂದ ಬರಮಾಡಿಕೊಂಡ ದೇವಾನುದೇವತೆಗಳ ಚಿನಿವಾರ, ಅಷ್ಟೆಲ್ಲಾ ಬಂಗಾರದ ಆಭರಣಗಳ ಮೂಟೆಗಳನ್ನು ಕಂಡು ಬೆರಗಾದ. ಒಬತಾಲನ ಬಯಕೆಯನ್ನು ತಿಳಿದುಕೊಂಡ ಮೇಲೆ ಆ ಬಂಗಾರದಿಂದ ಅಗಣಿತ ಉದ್ದದ ಸರಪಳಿಯನ್ನು ಮಾಡಲು ಒಪ್ಪಿಕೊಂಡ. 

`ದೇವರು ಒಬತಾಲ, ಇಷ್ಟೊಂದು ಅಪಾರ ಪ್ರಮಾಣದ ಬಂಗಾರವಿದ್ದರೂ, ನೀನು ಬಯಸುವಷ್ಟು ಉದ್ದದ ಬಂಗಾರದ ಸರಪಳಿ ಮಾಡುವುದು ಕಷ್ಟಸಾಧ್ಯದ ಕೆಲಸ. ನನ್ನ ಶಕ್ತಿಮೀರಿ ಪ್ರಯತ್ನಿಸಿ ಇದರಿಂದ ಅನಂತ ಉದ್ದದ ಬಂಗಾರದ ಸರಪಳಿ ಮಾಡಿಕೊಡುವೆ' ಎಂದು ಸ್ವರ್ಗದ ದೇವಾನುದೇವತೆಗಳ ಚಿನಿವಾರ ಬಂಗಾರದ ಸರಪಳಿ ಮಾಡುವ ಕೆಲಸವನ್ನು ತಕ್ಷಣವೇ ಕೈಗೆತ್ತಿಕೊಂಡ. 

ಬಂಗಾರದ ಆಭರಣಗಳನ್ನು ದೊಡ್ಡಕಡಾಯಿಯಲ್ಲಿ ಸುರಿದು, ಭಾರಿಗಾತ್ರದ ಒಲೆಯ ಮೇಲಿಟ್ಟು ಕರಗಿಸಿ, ನಂತರ ಅದನ್ನು ಒಂದು ಹದಕ್ಕೆ ತಂದು ತಾಮ್ರದೊಂದಿಗೆ ಬೆರೆಸಿ ಬಂಗಾರದ ಸರಪಳಿ ಮಾಡಲು ತನ್ನ ಸಲಕರಣೆಗಳನ್ನು ಜೋಡಿಸಿಕೊಂಡ. ಭಾರಿ ಪ್ರಮಾಣದಲ್ಲಿದ್ದ ಬಂಗಾರದ ಆಭರಣಗಳನ್ನು ಕರಗಿಸಲು ದೊಡ್ಡ ಕುಲುಮೆಯೇ ಬೇಕಾಯಿತು. 

ಇತ್ತ ಸ್ವರ್ಗದ ಚಿನಿವಾರ, ಒಬತಾಲ ಬಂಗಾರದ ಸರಪಳಿಯನ್ನು ಸಿದ್ಧಪಡಿಸಲು ತೊಡಗಿದ್ದರೆ, ಅತ್ತ, ಒಬತಾಲ ದೇವರ ಹಿರಿಯ ಪುತ್ರ ಓರುನಮಿಲ ಪ್ರಸ್ತಾಪಿಸಿದ್ದ ಉಳಿದ ವಸ್ತುಗಳನ್ನು ಹೊಂದಿಸುವುದರಲ್ಲಿ ತೊಡಗಿದ್ದ. ಓರುನಮಿಲ ಹೇಳಿದ ಎಲ್ಲ ಸಾಮಾನುಗಳನ್ನು ತಂದಿಟ್ಟುಕೊಂಡ. ಅಷ್ಟರಲ್ಲಿ, ಸ್ವರ್ಗದ ಚಿನಿವಾರ ಅನಂತ ಉದ್ದದ ಬಂಗಾರದ ಸರಪಳಿಯನ್ನು ಸಿದ್ಧಪಡಿಸಿದ್ದ. 

ಎಲ್ಲವೂ ಸಜ್ಜಾದಾಗ, ದೇವರ ಹಿರಿಯ ಮಗ ಓರುನಮಿಲ, ಒಬತಾಲನಿಗೆ ತನ್ನ ಸಹಾಯ ಹಸ್ತವನ್ನುಚಾಚಿದ. ಚಿನಿವಾರ ಸಿದ್ಧಪಡಿಸಿದ್ದ ಬಂಗಾರದ ಸರಪಳಿಯ ಒಂದು ತುದಿಯನ್ನು ನೀಲಾಕಾಶದ ಸ್ವರ್ಗದ ಒಂದು ತುದಿಗೆ ಗಟ್ಟಿಯಾಗಿ ಬಿಗಿಯುವಲ್ಲಿ ಸಹಾಯ ಮಾಡಿದ. ನಂತರ ಉಳಿದ ಬಂಗಾರದ ಸರಪಳಿಯನ್ನು ಕೆಳಗೆ ಇಳಿಬಿಡಲಾಯಿತು. ಓರುನಮಿಲ ತನ್ನ ಕಿರಿಯ ಸಹೋದರ ಒಬತಾಲನನ್ನು ಅಪ್ಪಿಕೊಂಡು ವಿದಾಯ ಹೇಳಿದ. ಒಬತಾಲ, ಬಂಗಾರದ ಸರಪಳಿಯನ್ನು ಹಿಡಿದುಕೊಂಡು ನಿಧಾನವಾಗಿ ಕೆಳಗೆ ಇಳಿಯಲು ಆರಂಭಿಸಿದ. 

ಇಳಿದ, ಇಳಿದ ಒಬತಾಲ ಕೆಳಗೆ ಇಳಿಯುತ್ತಲೇ ಇದ್ದ. ಬಂಗಾರದ ಸರಪಳಿಯು ಕೊನೆಗೆ ಭೂಮಿಗೆ ತಲುಪಿದಾಗ, ಆತನ ಕಾಲುಗಳು ಮಂಜಿನ ಗಾಳಿಯಲ್ಲಿ ನೆನೆದು ನೀರಿನಿಂದ ಹಸಿಯಾದವು. ಆಗ ಅವನಿಗೆ ನೀಲಾಕಾಶದಿಂದ ಕ್ಷೀಣದನಿಯೊಂದು ಕೇಳಿಸಿತು. ಅತ್ತಲಿಂದ ಓರುನಮಿಲ ಮಾತನಾಡತೊಡಗಿದ್ದ. 

`ಒಬತಾಲ, ನಿನ್ನ ಹೆಗಲ ಚೀಲದಲ್ಲಿರುವ ಬಸವನ ಹುಳದ ಶಂಖವನ್ನು ಹೊರಗೆತೆಗೆ. ಅದರಲ್ಲಿ ತುಂಬಿಕೊಂಡಿರುವ ಮರಳನ್ನು ಕೆಳಗೆ ತೂರು' ಎಂದು ಕೂಗಿ ಹೇಳಿದ. ಅದರಂತೆ ತನ್ನ ಚೀಲದಲ್ಲಿ ತಾನು ತಂದಿದ್ದ ಶಂಖವನ್ನು ತೆಗೆದು ಅದರಲ್ಲಿ ತುಂಬಿದ್ದ ಮರಳನ್ನು ಕೆಳಗೆ ಮಂಜಿನ ನೀರಿನ ಮೇಲೆ ಚೆಲ್ಲಿದ. 

ಆಗ ಮತ್ತೊಮ್ಮೆ ಓರುನಮಿಲನ ಮಾತುಗಳು ಕೇಳಿಸಿದವು. `ಈಗ, ನಿನ್ನ ಚೀಲದಲ್ಲಿರುವ ಬಿಳಿಯ ಬಣ್ಣದ ಕೋಳಿಯನ್ನು ಹೊರಗೆ ತೆಗೆದು ನೀನು ಮರಳನ್ನು ತೂರಿದ ಜಾಗದಲ್ಲಿ ಬಿಡು' ಎಂದು ಸೂಚಿಸಿದ. ಓರುನಮಿಲನ ಸೂಚನೆಯಂತೆಯೇ, ಒಬತಾಲ, ತನ್ನ ಚೀಲದಲ್ಲಿದ್ದ ಬಿಳಿಯ ಕೋಳಿಯನ್ನು ಹೊರಗೆ ತೆಗೆದು, ತಾನು ಚೆಲ್ಲಿದ ಮರಳ ಮೇಲೆ ಬಿಟ್ಟ. ಒಬತಾಲನ ಕೈ ಬಿಟ್ಟು ಕೆಳಗೆ ಹಾರಿದ ಬಿಳಿ ಕೋಳಿ, ಪಟ ಪಟ ರೆಕ್ಕೆ ಬಡಿಯುತ್ತ ಕೆಳಗೆ ಇಳಿದು ಮರಳನ್ನು ತನ್ನ ಕಾಲುಗಳಿಂದ ಆಚೆ ಈಚೆ ಕೆಬರತೊಡಗಿತು. ಅತ್ತ ಇತ್ತ ಸುತ್ತಮುತ್ತ ಹಾರಿದ ಮರಳಿನಿಂದ ಎಲ್ಲ ಕಡೆಗೂ ನೋಡಿದತ್ತ ಒಣ ನೆಲ ಕಾಣತೊಡಗಿತು. 

ಈಗ ಒಬತಾಲ, ಆ ಒಣ ನೆಲೆದ ಮೇಲೆ ಧೈರ್ಯವಾಗಿ ಕಾಲಿಡಬಹುದಾಗಿತ್ತು. ಆದರೆ, ಸ್ವರ್ಗದ ಚಿನಿವಾರ ಅಂದುಕೊಂಡಂತೆ, ಆತನು ತಯಾರಿಸಿದ್ದ ಬಂಗಾರದ ಸರಪಳಿ ಒಬತಾಲ ಒಣ ನೆಲವನ್ನು ತಾಗುವಷ್ಟು ಉದ್ದವಾಗಿರಲಿಲ್ಲ. ಆ ಬಂಗಾರದ ಸರಪಳಿಯ ಕೊನೆಯ ತುದಿಯನ್ನು ಹಿಡಿದುಕೊಂಡಿದ್ದ ಒಬತಾಲ ನೇತಾಡುತ್ತಿದ್ದ. ಗಟ್ಟಿ ಮನಸ್ಸು ಮಾಡಿದ ಒಬತಾಲ, ನಿಧಾನವಾಗಿ ಜೋತಾಡುತ್ತ, ಆಳವಾದ ಉಸಿರು ತೆಗೆದುಕೊಂಡು ಬಂಗಾರದ ಸರಪಳಿಯ ತುದಿಯನ್ನು ಬಿಟ್ಟು ಕೆಳಗೆ ಜಿಗಿದ. ಆತ ಸುರಕ್ಷಿತವಾಗಿ ಹಗುರವಾದ ನೆಲವನ್ನು ಮುಟ್ಟಿದ್ದ. ತನ್ನಇದುವರೆಗಿನ ಸೃಷ್ಟಿಯ ಬಗೆಗೆ ಹೆಮ್ಮೆ ತಾಳಿದ ಒಬತಾಲ, ತಾನು ಮೊದಲ ಬಾರಿ ಕಾಲೂರಿದ ಆ ಸ್ಥಳವನ್ನು `ಇಲ್‌ಇಫ್' ಎಂದು ಗುರುತಿಸಿದ. 

ತನ್ನ ಚೀಲದಲ್ಲಿದ್ದ ತಾಳೆ ಮರದ ಹಣ್ಣಿನಿಂದ ಬೀಜವನ್ನು ತೆಗೆದುಕೊಂಡು ಬಹು ಎಚ್ಚರಿಕೆಯಿಂದ ನೆಲದಲ್ಲಿ ಗುಂಡಿತೋಡಿ, ಅದರಲ್ಲಿ ಅದನ್ನು ಇಟ್ಟು ಮಣ್ಣು ಮುಚ್ಚಿದ. ಅದು ತಕ್ಷಣವೇ ಮೊಳೆತು, ಸಸಿಯಾಗಿ ಕ್ಷಣದಲ್ಲೇ ಎತ್ತರದ ತಾಳೆಮರವಾಗಿ ನಿಂತುಬಿಟ್ಟಿತು. ಅದರ ಟೊಂಗೆಗಳಲ್ಲಿದ್ದ ತಾಳೆ ಮರದ ಹಣ್ಣುಗಳು ಕೆಳಗೆ ಬಿದ್ದವು. ಆ ಹಣ್ಣಿನೊಳಗಿದ್ದ ಬೀಜಗಳು ನೆಲ ಸೇರಿ, ಮೊಳಕೆಯೊಡೆದವು. ನಂತರ ದೊಡ್ಡದೊಡ್ಡ ಮರಗಳಾದವು. ತಾಳೆ ಮರಗಳ ತೋಟಗಳು ಬೆಳೆದವು. ಆ ತಾಳೆ ಮರಗಳ ತೋಪುಗಳು, ಕಾಡಿನರೂಪ ಪಡೆಯಲು ಬಹಳ ಸಮಯವೇನೂ ಬೇಕಾಗಲಿಲ್ಲ. 

ಆಗ, ಆ ತಾಳೆ ಮರದ ಕಾಂಡಗಳು ಮತ್ತು ಗರಿಗಳನ್ನು ಬಳಸಿಕೊಂಡ ಒಬತಾಲ, ತನಗಾಗಿ ಒಂದು ಮನೆಯನ್ನು ಕಟ್ಟಿಕೊಂಡ. ನಂತರ ತನ್ನ ಚೀಲದಲ್ಲಿದ್ದ ಕಪ್ಪು ಬೆಕ್ಕನ್ನು ಹೊರಗೆ ಬಿಟ್ಟುಕೊಂಡ. ಅಂದಿನಿಂದ ಆ ಬೆಕ್ಕು ಅವನ ಒಡನಾಡಿಯಾಯಿತು. ಒಬತಾಲನೊಂದಿಗೆ ಆ ಕಪ್ಪು ಬೆಕ್ಕು ಆ ಹೊಸಮನೆಯಲ್ಲಿ ವಾಸಿಸತೊಡಗಿತು. 

ಸ್ವರ್ಗದ ಅರಸ ಓಲೊರನ್, ಆಗಸದಿಂದ ಕೆಳಗೆ ಇಣುಕಿ ನೋಡಿದ. ತನ್ನ ಕಿರಿಯ ಮಗನ ಸಾಹಸವನ್ನುಕಂಡು ಸಂತೋಷಗೊಂಡ. ಆದರೆ, ತನ್ನಕಿರಿಯ ಮಗ ಒಬತಾಲ ದೇವರು, ಮಂದವಾದ ಬೆಳಕಿನಲ್ಲಿ ಇರುವುದನ್ನು ನೋಡಿ ಬೇಸರವಾಯಿತು. ಅದೇಕೋ ಸರ್ವಶಕ್ತ ದೇವರು ಓಲೊರನ್ ಗೆ ಹಿಡಿಸಲಿಲ್ಲ. 

`ಇಲ್ಲಿ ಸ್ವರ್ಗವನ್ನು ನೋಡಿದರೆ ಅದು ಸಮೃದ್ಧವಾದ ಬೆಳಕಿನಲ್ಲಿ ಫಳ ಫಳ ಹೊಳೆಯುತ್ತಿತ್ತು. ಆದರೆ, ಅಲ್ಲಿ ತನ್ನ ಕಿರಿಯ ಮಗ ಮಂದ ಬೆಳಕಿನಲ್ಲಿ ಒದ್ದಾಡುತ್ತಿದ್ದಾನೆ' ಎಂದು ಓಲೊರನ್ ಕಳವಳ ಪಟ್ಟ. ಕೊನೆಗೆ, ಆತ ಬೆಳಕಿನ ಚೆಂಡೊಂದನ್ನು ಸಿದ್ಧಪಡಿಸಿ ಅದನ್ನು ಆಗಸದಲ್ಲಿ ತೂಗು ಬಿಟ್ಟ. ಅದು ಭೂಮಿಗೆ ಬೆಳಕನ್ನು ಕೊಡುವ ಸೂರ್ಯನಾಯಿತು. ಅದರ ಬೆಳಕು ಒಬತಾಲ ಪ್ರತಿದಿನವೂ ಬೆಚ್ಚನೆಯ ಬೆಳಕಿನಲ್ಲಿದ್ದು ಬದುಕು ಸಾಗಿಸುವಂತಾಯಿತು. 

ತನ್ನ ಸುತ್ತಮುತ್ತಲ ಪರಿಸರ ಸುಂದರವಾಗಿ ಕಂಡರೂ ಒಬತಾಲನ ಸೃಷ್ಟಿ ಇನ್ನೂ ಪೂರ್ತಿಯಾಗಿ ಮುಗಿದಿರಲಿಲ್ಲ. ಆತ ಮಣ್ಣನ್ನು ಮುದ್ದೆ ಮಾಡಿ, ಆ ಮುದ್ದೆ ಮಣ್ಣಿನಿಂದ ತನ್ನನ್ನೆ ಹೋಲುವ ಪ್ರತಿಕೃತಿಗಳನ್ನು ರಚಿಸತೊಡಗಿದ. ಒಬತಾಲ ತನ್ನ ಪ್ರತಿಕೃತಿಯ ಗೊಂಬೆಗಳನ್ನು ಸಿದ್ಧಪಡಿಸುತ್ತಿದ್ದಂತೆ ಬೆಳಕಿನ ಚೆಂಡು ಸೂರ್ಯ ಅವನ್ನು ಸುಡುತ್ತಾ ಗಟ್ಟಿಯಾಗುವಂತೆ ಮಾಡುತ್ತಿತ್ತು. ಜೊತೆಗೆ ತನ್ನನ್ನು ಹೋಲುವ ಪ್ರತಿಕೃತಿಯ ಗೊಂಬೆಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡ ಒಬತಾಲ ದಣಿಯುತ್ತಿದ್ದ, ಜೊತೆಗೆ ಸೂರ್ಯ ಬಿಸಿಲಿನ ಕಾವು ಅವನನ್ನು ಹೈರಾಣಾಗಿಸುತ್ತಿತ್ತು. ಧಗೆಯಿಂದ ಬಸವಳಿದ ಅವನಿಗೆ ಕೆಟ್ಟ ನೀರಡಿಕೆ ಕಾಡುತ್ತಿತ್ತು. 

ಆ ಯುವದೇವರು, ಸರ್ವಶಕ್ತ ದೇವರ ಕಿರಿಯ ಮಗ ಒಬತಾಲ, ತನ್ನದಣಿವು ಮತ್ತು ನೀರಡಿಕೆಯನ್ನು ನೀಗಿಸಿಕೊಳ್ಳಲು ತಾಳೆಮರದ ನೀರಾ ಮತ್ತು ಹಣ್ಣಿನ ರಸವನ್ನು ಕುಡಿಯತೊಡಗಿದ. ಬಿಸಿಲೇರಿದಂತೆ ಹುಳಿ ಮದ್ಯವಾಗುವ ತಾಳೆ ಮರದ ರಸದಗುಣ ಅವನ ಗಮನಕ್ಕೆ ಬರಲಿಲ್ಲ. ತನ್ನ ನೀರಡಿಕೆ ಮತ್ತು ದಣಿವನ್ನು ನಿವಾರಿಸಿಕೊಳ್ಳಲು ಮೇಲಿಂದ ಮೇಲೆ ತಾಳೆಮರದ ರಸವನ್ನು ಕುಡಿಯುತ್ತಲೇ ಹೋದ. 

ಬಿಸಿಲಿನಲ್ಲಿ ಹುಳಿಯೇರಿ ಮದ್ಯವಾಗುವ ತಾಳೆಮರದ ಹಣ್ಣಿನರಸ ಅವನ ದಣಿವನ್ನು ನಿವಾರಿಸಿ, ನೀರಡಿಕೆಯನ್ನು ಹಿಂಗಿಸಿದರೂ, ಅದು ಅವನ ತಲೆಗೆ ಮತ್ತು ಏರುವಂತೆ ಮಾಡಿತು. ಕುಡಿತದಿಂದ ಓಲಾಡತೊಡಗಿದ ಒಬತಾಲ, ಈ ಮೊದಲು ಮಾಡಿದಂಥತನ್ನ ಪ್ರತಿಕೃತಿಗಳ ಮಾದರಿಯಲ್ಲಿ ಹೊಸ ಗೊಂಬೆಗಳನ್ನು ಸಿದ್ಧಪಡಿಸುವಲ್ಲಿ ಸೋಲತೊಡಗಿದ. 

ಮೊದಲಿಗೆ ಸಿದ್ಧಪಡಿಸಿದ ಪ್ರತಿಕೃತಿ ಗೊಂಬೆಗಳಲ್ಲಿ ಮತ್ತು ಅವನು ತಾಳೆಮರದ ಹಣ್ಣಿರಸಕುಡಿದ ನಂತರ ಸಿದ್ಧಪಡಿಸಿದ ಪ್ರತಿಕೃತಿ ಗೊಂಬೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಾಣತೊಡಗಿದವು. ಮೊದಲು ರಚಿಸಿದ ಪತ್ರಿಕೃತಿಗಳಿಗಿಂತ ಹೊಸ ಪ್ರತಿಕೃತಿಗಳು ಅಲ್ಪಸ್ವಲ್ಪಅಂದಗೆಡ ತೊಡಗಿದವು. ಆದರೆ, ಮೈ ಮೇಲೆ ಪ್ರಜ್ಞೆ ಕಳೆದುಕೊಂಡು ಕುಡಿತದ ಮತ್ತಿನಲ್ಲಿ ಓಲಾಡತೊಡಗಿದ್ದ ಒಬತಾಲನಿಗೆ ಪ್ರತಿಕೃತಿಗಳಲ್ಲಿನ ಈ ವ್ಯತ್ಯಾಸ ಗಮನಕ್ಕೆ ಬರಲೇ ಇಲ್ಲ. 

ಗೊಂಬೆಗಳನ್ನು ಸಿದ್ಧಪಡಿಸುತ್ತಲೇ ಹೋದ ಒಬತಾಲ, ತನ್ನ ಕೈ ಸೋತಾಗ ಸುತ್ತೆಲ್ಲ ಕಣ್ಣಾಡಿಸಿದ. ಅಪಾರ ಸಂಖ್ಯೆಯಲ್ಲಿ ಗೊಂಬೆಗಳು ಆತನ ಎದುರು ನಿಂತುಕೊಂಡಿದ್ದವು. ಅವುಗಳನ್ನು ನೋಡಿ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಗ ಒಬತಾಲ, ತನ್ನ ತಂದೆ ಸರ್ವಶಕ್ತ ದೇವರು ಓಲೊರನ್‌ನ್ನು ಕೂಗಿ ಕರೆದು, `ದಯಮಾಡಿ ಸಹಾಯ ಮಾಡು. ಈ ನನ್ನ ಗೊಂಬೆಗಳಲ್ಲಿ ಉಸಿರನ್ನು ತುಂಬು. ಅವರು ನನ್ನ ಜನರಾಗಲಿ' ಎಂದು ಕೋರಿಕೊಂಡ. 

ಕಿರಿಯ ಮಗ ಒಬತಾಲನ ಅಪೇಕ್ಷೆಯನ್ನು ಈಡೇರಿಸಿದ ದೇವರು ಓಲೊರನ್, ಅಲ್ಲಿನ ಎಲ್ಲಾ ಗೊಂಬೆಗಳಿಗೆ ಉಸಿರು ಕೊಟ್ಟು ಅವು ಜೀವ ತಳೆಯುವಂತೆ ಮಾಡಿದ. ದಣಿವಾರಿದ ಮೇಲೆ ಒಬತಾಲ ನಿಧಾನವಾಗಿ ಮತ್ತಿನಿಂದ ಹೊರಬಂದ. ತೆರೆದ ಕಣ್ಣಿನಿಂದ ಸುತ್ತಲೆಲ್ಲಾ ನೋಡಿದಾಗ ಅವನು ರಚಿಸಿದ ಗೊಂಬೆಗಳೆಲ್ಲ ಪರಿಪೂರ್ಣವಾಗಿ ಕಾಣಿಸಲಿಲ್ಲ. 

ಅವನ ಸೃಷ್ಟಿಯ ಎಲ್ಲಾ ಜನರು ಅವನು ಎಣಿಸಿದ್ದಂತೆ ಪರಿಪೂರ್ಣವಾಗಿರಲಿಲ್ಲ. ಮೊದಲಿನ ಸೃಷ್ಟಿಗಿಂತ ನಂತರದ ಸೃಷ್ಟಿಯಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿದ್ದವು. ಅವನು ದುಃಖಿತನಾದ. ಆದರೂ, ಏನು ಮಾಡುವುದು ಅವೆಲ್ಲಾ ಜನತೆ ಅವನ ಸೃಷ್ಟಿಯೇ ಆಗಿದ್ದರು. ಇನ್ನು ಮುಂದೆ, ತಾನೆ ಅವರ ವಿಶೇಷ ರಕ್ಷಕನಾಗಿ ಇರುವೆನೆಂದು ಆತ ತನ್ನ ಎಲ್ಲ ಜನತೆಗೆ ಮಾತುಕೊಟ್ಟ. 

ಆತ ತನ್ನ ಜನರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ. ಅವರು ಹೊಲಗದ್ದೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಹೇಳಿಕೊಟ್ಟ. ಆ ಜನರು ತಮ್ಮನ್ನು ತಾವು `ಯೊರೂಬಾ' ಎಂದು ಹೆಸರಿಸಿಕೊಂಡರು. ಅವರಿದ್ದ ತಾಣ `ಇಲ್‌ಇಫ್' ಒಂದು ಸಮೃದ್ಧ ಊರಾಯಿತು. ಕೊನೆಗೆ ಅದು ಒಂದು ಸಮೃದ್ಧವಾದ ದೊಡ್ಡ ಪಟ್ಟಣವಾಗಿ ಅಭಿವೃದ್ಧಿಗೊಂಡಿತು. 

ತನ್ನ ಜನ ತಮ್ಮಷ್ಟಕ್ಕೆ ತಾವು ಯಾರ ಸಹಾಯವೂ ಇಲ್ಲದೇ ಜೀವನ ಸಾಗಿಸುವ ಸಾಮರ್ಥ್ಯವನ್ನು ಪಡೆದದ್ದು ಅವನಿಗೆ ಮನಗಾಣುವಂತಾದಾಗ ಅವನಿಗೆ ತೃಪ್ತಿ ಮೂಡಿತು. ಇನ್ನು ಇಲ್ಲಿನ ನನ್ನ ಜನಕ್ಕೆ ಅಷ್ಟಾಗಿ ನನ್ನ ಅವಶ್ಯಕತೆಕಾಣದು ಎನ್ನಿಸಿತು. ಸ್ವರ್ಗದ ನೀಲಾಕಾಶದಿಂದ ಇಳಿ ಬಿದ್ದ ಬಂಗಾರದ ಸರಪಳಿಯನ್ನು ಹಿಡಿದುಕೊಂಡು ಸರ ಸರ ಸ್ವರ್ಗಕ್ಕೆ ಏರಿಹೋದ. ತದನಂತರ ಒಬತಾಲ ತನ್ನ ಸಹೋದರ, ಸಹೋದರಿ ದೇವರುಗಳೊಂದಿಗೆ ಸ್ವರ್ಗದಲ್ಲಿ ಇರತೊಡಗಿದ. ಕೆಲವೊಮ್ಮೆ ತನ್ನ ಸೃಷ್ಟಿಯಾದ ಭೂಮಿಗೆ ಇಳಿದು ಬಂದು ತನ್ನ ಜನರೊಂದಿಗೆ ವಾಸಿಸುತ್ತಿದ್ದ. 

---- 

*ಪಶ್ಚಿಮ ಆಫ್ರಿಕಾದ ಬುಡಕಟ್ಟಿನಜನರ ಪುರಾಣಕಥೆ 

ಮುಂದುವರಿಯುವುದು 

ಗೀತಾಂಜಲಿಯ ತುಣುಕು


ಬಿಟ್ಟುಬಿಡು, ಹಾಡು ಪಾಡು ಭಜನೆಯನು ಮಣಮಣಮಣ ಮಂತ್ರವನು! 

ಬಾಗಿಲು ಬಡಿದ ಗುಡಿಯ ಕತ್ತಲ ಮೊಡಕಿನಲಿ ಕುಳಿತು ನೀ ಪೂಜಿಸುವೆ ಯಾರನ್ನು? ಕಣ್ದೆರೆದು ನೋಡು ನಿನ್ನೆದುರು ದೇವರಿಲ್ಲ. 



ಅವನಿದ್ದಾನೆ ಗಟ್ಟಿನೆಲವ ಬಗೆವನ ಬಳಿ, ರಸ್ತೆ ಮಾಡಲು ಬಂಡೆಯೊಡೆಯುವನ ಬಳಿ. ಬಿಸಿಲಲ್ಲಿ ಮಳೆಯಲ್ಲಿ ವಸನವದು ಮಣ್ಣಾಗಿ ದೇವನಿಹನು ಅವರ ಬಳಿ. 

ಬಿಸುಟು ನಿನ್ನ ಪವಿತ್ರ ಮೇಲ್ವಸ್ತ್ರವ ಈಗಿಂದೀಗ ಕೆಳಗಿಳಿದು ಬಾರಾ ಮಣ್ಣಿಗೆ. 


ಧ್ಯಾನವನ್ನು ಬಿಟ್ಟು ಬಾ, ಹೂವು ಗಂಧ ತೊರೆದು ಬಾ! ಬಟ್ಟೆ ಹರಿದುಹೋದರೇನು, ಕೊಳೆಯು ಮೆತ್ತಿಕೊಂಡರೇನು? ಭೆಟ್ಟಿಯಾಗು ಅವನನು ಸರೀಕನಾಗು ದುಡಿತದಿ, ಹಣೆಯು ಬೆವರ ಸುರಿಯಲಿ. 


(ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯಿಂದ ’Leave this chanting and singing and telling of beads” ಪದ್ಯದ ಭಾವಾನುವಾದ. ಸಿ ಮರಿಜೋಸೆಫ್ ನವರಿಂದ) 



ಪರಮಸಂಸ್ಕಾರ

ಸಿ ಮರಿಜೋಸೆಫ್

ಕ್ರೈಸ್ತಧರ್ಮವನ್ನು ಅನುಸರಿಸುತ್ತಿರುವ ನಾವು ಬಲಿಪೂಜೆಯಲ್ಲಿ ಪಾಲುಗೊಳ್ಳುವುದು, ದೇವಾಲಯದ ಕಾರ್ಯಗಳಲ್ಲಿ ನೆರವಾಗುವುದು, ಕ್ರಿಸ್ತಬೋಧನೆಯನ್ನು ಪಾಲಿಸುತ್ತಾ ಇತರರಿಗೆ ಮಾದರಿಯಾಗುವುದು ಮುಂತಾದ ಕರ್ತವ್ಯಗಳಿಗೆ ಅಧೀನರಾಗಿದ್ದೇವೆ. ಈ ಎಲ್ಲ ನಡವಳಿಕೆಗಳ ಜೊತೆಗೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಜನನದಿಂದ ಮರಣದವರೆಗೆ ಹಲವು ಪವಿತ್ರ ಸಂಸ್ಕಾರಗಳಿಗೆ ಒಳಗಾಗುತ್ತಾ ನಾವು ನಮ್ಮ ಕ್ರಿಸ್ತೀಯ ಜೀವನವನ್ನು ಗಟ್ಟಿಗೊಳಿಸುತ್ತೇವೆ. 

ಕನ್ನಡದ ವೈಚಾರಿಕ ನೆಲೆಯಲ್ಲಿ ಸಂಸ್ಕಾರ ಎಂಬ ಪದವು ಅಂತ್ಯಸಂಸ್ಕಾರ ಎಂಬ ಕೊನೆಯ ಕ್ರಿಯೆಯನ್ನು ಸೂಚಿಸುತ್ತದೆ. ಆದ್ದರಿಂದ ಕ್ರೈಸ್ತರಲ್ಲದವರು ಸಂಸ್ಕಾರ ಎಂಬುದನ್ನು ಅಮಂಗಳ ಪದವಾಗಿ ಭಾವಿಸುವುದುಂಟು. ಆದರೆ ಸಂಸ್ಕಾರವೆಂಬುದು ಬದುಕನ್ನು ರೂಪಿಸುವ ಅತ್ಯುತ್ತಮ ಸಲಕರಣೆ, ನಮ್ಮ ಜೀವನವು ಹಲವಾರು ಸಲ ಪವಿತ್ರ ಸಂಸ್ಕಾರಗಳಿಗೆ ತೆರೆದುಕೊಳ್ಳುವುದರಿಂದ ನಮಗದು ಅಮಂಗಳವಲ್ಲ. ಅವೆಲ್ಲವೂ ದೇವರೇ ಸ್ವತಃ ಕೈಯಾರೆ ಸುರಿಸುವ ಪವಿತ್ರತಮ ವರದಾನಗಳು. 

ದೀಕ್ಷಾಸ್ನಾನ, ದೃಢೀಕರಣ, ಪರಮಪ್ರಸಾದ, ಪ್ರಾಯಶ್ಚಿತ್ತ, ರೋಗಿಗೆ ಲೇಪನ, ಮದುವೆ ಮತ್ತು ಯಾಜಕದೀಕ್ಷೆ ಎಂಬ ಏಳು ಸಂಸ್ಕಾರಗಳು ಸ್ವತಃ ಯೇಸುಸ್ವಾಮಿಯೇ ಸ್ಥಾಪಿಸಿ ಅವನ್ನು ಅನುಗಾಲವೂ ಅನುಸರಿಸಲು ನಮಗೆ ಕರೆ ನೀಡಿದ್ದಾರೆ. ಈ ಏಳೂ ಸಂಸ್ಕಾರಗಳು ದೇವರ ವರದಾನವಾಗಿದ್ದು ರಕ್ಷಣೆಯ ಹಾದಿಯಲ್ಲಿ ಸದಾ ನಮ್ಮ ಬೆನ್ನಿಗಿದ್ದು ಭರವಸೆಯ ಹಾದಿಯಲ್ಲಿ ಮುನ್ನಡೆಸುತ್ತವೆ. ಆದ್ದರಿಂದ ಸಪ್ತಸಂಸ್ಕಾರಗಳನ್ನು ದೇವರ ಅನುಪಮ ಕೊಡುಗೆಯೆಂದೇ ಭಾವಿಸುವುದು ಸೂಕ್ತ. ಇನ್ನೂ ಖಚಿತವಾಗಿ ಹೇಳಬೇಕೆಂದರೆ ಸಂಸ್ಕಾರಗಳ ಮೂಲಕ ನಾವು ಪವಿತ್ರವಾಗುತ್ತೇವೆ. ದೇವರ ಸೃಷ್ಟಿಗಳಾಗಿ ನಾವು ಹುಟ್ಟಿನಿಂದಲೇ ಪವಿತ್ರರು ಎಂಬುದು ನಿಜ. ಆದರೆ ಈ ಸಂಸ್ಕಾರಗಳು ಪಾವಿತ್ರ‍್ಯದ ನವೀಕರಣವಾಗಿದ್ದು ನಮ್ಮನ್ನು ಸದಾ ತಮ್ಮ ಪ್ರೀತಿ ಮತ್ತು ಕರುಣಾರ್ದ್ರ ನೋಟದಿಂದ ಕಾಣುವ ದೇವರು ಸಂಸ್ಕಾರಗಳನ್ನು ಅನುಗ್ರಹಿಸುವ ನೆವದಲ್ಲಿ ನಮ್ಮ ಮೈದಡವಿ ನಮ್ಮಲ್ಲಿ ಪ್ರವೇಶಿಸಿ ನಮ್ಮನ್ನು ಅವರ ಪವಿತ್ರಹಾದಿಗೆ ಕರವಿಡಿದು ಮುನ್ನಡೆಸುತ್ತಾರೆ ಎಂಬುದೇ ಅತ್ಯಂತ ಸೂಕ್ತ. ಹಾಗಾಗಿ ಸಂಸ್ಕಾರಗಳು ಪರಮಪೂಜ್ಯ ಹಾಗೂ ಪರಮಪವಿತ್ರ. 

ಈ ವರದಾನಗಳು ದೈವಸಾಕ್ಷಾತ್ಕಾರದ ಪ್ರತಿರೂಪವಾಗಿದ್ದು ನಮ್ಮ ಕಣ್ಣಿಗೆ ಕಾಣುವುದರಿಂದ ನಾವು ಅವನ್ನು ಸಂತೋಷ ಉಲ್ಲಾಸಗಳಿಂದ ಸಂಭ್ರಮಿಸುತ್ತೇವೆ. ಪರಾತ್ಪರ ದೇವರನ್ನು ಪರಮಭಕ್ತಿಯಿಂದ ಆರಾಧಿಸುತ್ತೇವೆ. ಇಸ್ರೇಲ್ ನಾಡಿನಾದ್ಯಂತ ಯೇಸುಕ್ರಿಸ್ತ ಎಂಬ ಹೆಸರಿನಲ್ಲಿ ನರರೂಪದಲ್ಲಿ ನಡೆದಾಡಿದ ದೇವರು ತಮ್ಮ ಹನ್ನೆರಡು ಪರಮಾಪ್ತ ಶಿಷ್ಯ (ಪ್ರೇಷಿತ = ಕಳುಹಿಸಲ್ಪಟ್ಟವರು) ರೊಂದಿಗೆ ಪ್ರತಿನಿತ್ಯ ಪ್ರತಿಕ್ಷಣ ಆಪ್ತನಾಗಿ ಒಡನಾಡಿ ಅವರಿಗೆ ಗುರುರೂಪದಲ್ಲಿ ಬೋಧನೆಗಳನ್ನು ನೀಡಿ, ಸಾಮತಿ, ಚಿಕಿತ್ಸೆ, ಶುಶ್ರೂಷೆ, ಸ್ಪರ್ಶ, ಲೇಪನಗಳ ಮೂಲಕ ಆ ದಿವ್ಯ ಸಂಸ್ಕಾರಗಳನ್ನು ಅನುಷ್ಠಾನಗೊಳಿಸಿದ್ದನ್ನು ಶುಭಸಂದೇಶಗಳಲ್ಲಿ ಹಾಗೂ ಪ್ರೇಷಿತರ ಪತ್ರಗಳಲ್ಲಿ ಕಾಣುತ್ತೇವೆ. 

ನಮಗೆಲ್ಲರಿಗೂ ಅತ್ಯಂತ ಪವಿತ್ರವೆನಿಸಿದ ಧರ್ಮಗ್ರಂಥ ಪವಿತ್ರ ಬೈಬಲಿನಲ್ಲಿ ಈ ಸಂಸ್ಕಾರಗಳ ಉಲ್ಲೇಖ ಎಲ್ಲಿದೆಯೆಂಬುದನ್ನು ಒಮ್ಮೆ ಗಮನಿಸಿದರೆ ಅವುಗಳ ಬಗ್ಗೆ ಗೌರವ ಇಮ್ಮಡಿಯಾಗುವುದು ಕಂಡಿತ. ಯೇಸುಸ್ವಾಮಿ ಸ್ಥಾಪಿಸಿದ ಏಳು ಪವಿತ್ರ ಸಂಸ್ಕಾರಗಳು ಈ ರೀತಿ ಇವೆ: 

1. ದೀಕ್ಷಾಸ್ನಾನ 

2. ದೃಢೀಕರಣ 

3. ಪ್ರಾಯಶ್ಚಿತ್ತ 

4. ಪರಮಪ್ರಸಾದ 

5. ಮರಣಾವಸ್ಥೆಯ ಲೇಪನ 

6. ಮದುವೆ ಮತ್ತು 

7. ಗುರುದೀಕ್ಷೆ 



ಕ್ರಿಸ್ತೀಯ ಜೀವನ ನಡೆಸಲು ಮೊದಲ ನಾಲ್ಕು ಸಂಸ್ಕಾರಗಳನ್ನು ಹೊಂದುವುದು ಕಡ್ಡಾಯ. ಉಳಿದ ಮೂರು ಸಂಸ್ಕಾರಗಳು ಐಚ್ಛಿಕ. ಈಗ ಈ ಪವಿತ್ರ ಸಂಸ್ಕಾರಗಳನ್ನು ಒಂದೊಂದಾಗಿ ಅವಲೋಕಿಸೋಣ. ನಾನಿಲ್ಲಿ ಮೇಲಿನ ಪಟ್ಟಿಯ ಅನುಕ್ರಮದ ಪ್ರಕಾರ ಹೋಗದೆ ವ್ಯಕ್ತಿಯೊಬ್ಬನು ತನ್ನ ವಯೋಮಾನದ ಪ್ರಕಾರ ಸ್ವೀಕರಿಸುವ ಸಂಸ್ಕಾರಗಳ ಕ್ರಮದಲ್ಲಿ ವಿವರಿಸಿದ್ದೇನೆ. ಕೊನೆಯಲ್ಲಿ ಮದುವೆ ಅಥವಾ ಗುರುದೀಕ್ಷೆ ಎಂಬುದಾಗಿ ಇದೆ. ಕಥೋಲಿಕ ಕ್ರೈಸ್ತರಲ್ಲಿ ಗುರುಗಳು ಹಾಗೂ ಕನ್ಯಾಸ್ತ್ರೀಯರು ಮದುವೆಯಾಗುವಂತಿಲ್ಲ. ಅದೇ ರೀತಿ ಮದುವೆಯಾದವರು ಗುರು ಅಥವಾ ಸಂನ್ಯಾಸಿನಿ ಆಗಲೂ ಸಾಧ್ಯವಿಲ್ಲ. 

1. ದೀಕ್ಷಾಸ್ನಾನ 

ದೀಕ್ಷಾಸ್ನಾನ ಎಂಬುದು ಸಂಸ್ಕಾರಗಳ ಬಾಗಿಲು. ಇದಿಲ್ಲದೆ ಇನ್ನಿತರ ಸಂಸ್ಕಾರಗಳನ್ನು ಪಡೆಯುವುದು ಸಾಧ್ಯವಿಲ್ಲ. ಜ್ಞಾನಸ್ನಾನ, ಸ್ನಾನದೀಕ್ಷೆ, ಜ್ಞಾನದೀಕ್ಷೆ, ಧರ್ಮದೀಕ್ಷೆ ಎಂದೆಲ್ಲ ಕರೆಸಿಕೊಂಡಿರುವ ಈ ಸಂಸ್ಕಾರವು ನಮಗೆ ಧರ್ಮಸಭೆಯ ಸದಸ್ಯತ್ವವನ್ನು ಕರುಣಿಸುವುದರ ಜೊತೆಗೆ ಯೇಸುಕ್ರಿಸ್ತನೊಂದಿಗೆ ಅವಿನಾಭಾವ ಸಂಬಂಧವನ್ನು ಜೋಡಿಸುತ್ತದೆ. ಯೇಸುಸ್ವಾಮಿಯೂ ಸ್ವತಃ ದೀಕ್ಷಾಸ್ನಾನ ಮಾಡಿಸಿಕೊಂಡರೆಂದು ಪವಿತ್ರ ಬೈಬಲಿನಲ್ಲಿ ಉಲ್ಲೇಖವಿದೆ. ಆದರೆ ಯೇಸು ತಮ್ಮ ಪಾಪಗಳ ಪರಿಹಾರಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ. ಆದರೆ ಅವರು ದೇವಕುವರ ಎಂಬುದು ಎಲ್ಲ ಜನರಿಗೆ ಪ್ರಕಟವಾಗಬೇಕಿದ್ದ ಕಾರಣ ಅವರು ದೀಕ್ಷಾಸ್ನಾನಕ್ಕೆ ಒಳಗಾದರು. (ನೋಡಿ. ಮಾರ್ಕ 1:9). 

ಮಗು ಇನ್ನೂ ಶೈಶವಾವಸ್ಥೆಯಲ್ಲಿರುವಾಗ ತಂದೆ ತಾಯಿಯರು ದೇವಾಲಯಕ್ಕೆ ಮಗುವನ್ನೆತ್ತಿಕೊಂಡು ಬಂದು ಗುರುಗಳ ಮುಂದೆ ಮಗುವಿನ ಪರವಾಗಿ ವಾಗ್ದಾನ ಸ್ವೀಕರಿಸುವುದರ ಮೂಲಕ ಆ ಮಗುವನ್ನು ಧರ್ಮಸಭೆಯ ಸದಸ್ಯನನ್ನಾಗಿಸುವುದು ಸಾಮಾನ್ಯವಾಗಿ ನಡೆದುಬಂದಿರುವ ಪದ್ಧತಿ. ಗುರುಗಳು ದೇವಾಲಯದಲ್ಲಿ ವಿಶೇಷವಾಗಿ ಸ್ಥಾಪಿಸಲಾಗಿರುವ ಜ್ಞಾನಸ್ನಾನ ತೊಟ್ಟಿಯಲ್ಲಿ ಮಗುವಿನ ತಲೆಯ ಮೇಲೆ ನೀರು ಸುರಿದು ಅದರ ಪಾಪನಿವಾರಣೆಗಾಗಿ ದೇವರಲ್ಲಿ ಬೇಡುತ್ತಾರೆ. “ಕ್ರಿಸ್ತಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನಾವೆಲ್ಲರೂ ಕ್ರಿಸ್ತಂಬರರಾಗಿದ್ದೇವೆ” ಎಂದು ಗಲಾತ್ಯರಿಗೆ ಬರೆದ ಪತ್ರ (3:27) ದಲ್ಲಿ ಹೇಳಿರುವ ಪ್ರಕಾರ ಶುಭ್ರವಾದ ಬಿಳಿವಸ್ತ್ರವನ್ನು ಮಗುವಿನ ಮೇಲೆ ಹೊದಿಸುವ ಮೂಲಕ ಆ ಮಗುವನ್ನು ಯೇಸುಕ್ರಿಸ್ತನ ಜೊತೆಗಾರನನ್ನಾಗಿ ಮಾಡುತ್ತಾರೆ. ಮೇಣದ ಬತ್ತಿ ಹಚ್ಚಿ ಆ ಬೆಳಕನ್ನು ಕ್ರಿಸ್ತನಿಗೆ ಹೋಲಿಸುತ್ತಾ ಲೋಕಕ್ಕೆ ಬೆಳಕಾಗಿ ಬಾಳು ಎಂದು ಆ ಮಗುವನ್ನು ಹರಸುತ್ತಾರೆ. ಈ ಸಂದರ್ಭದಲ್ಲಿ ಮಗುವಿನ ತಾಯ್ತಂದೆಯರೂ ಪೋಷಕ ತಾಯ್ತಂದೆಯರೂ ಮಗುವಿನ ಪರವಾಗಿ ದೀಕ್ಷಾಸ್ನಾನದ ವಾಗ್ದಾನ ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಬಂಧುಮಿತ್ರರನ್ನೆಲ್ಲ ಆಹ್ವಾನಿಸಿ ಸಂಭ್ರಮಿಸುವುದು ಎಲ್ಲೆಡೆ ಪ್ರಚಲಿತವಾಗಿದೆ. ಮಗು ಬೆಳೆದು ಬುದ್ದಿ ಬಂದ ಮೇಲೆ ಕಾಲ ಕಾಲಕ್ಕೆ ಪಾಸ್ಕಹಬ್ಬ ಮತ್ತು ಇತರ ಸಂದರ್ಭಗಳಲ್ಲಿ ನಾವೆಲ್ಲರೂ ಪದೇ ಪದೇ ದೀಕ್ಷಾಸ್ನಾನದ ವಾಗ್ದಾನಗಳನ್ನು ನವೀಕರಿಸುವಾಗ ತಾನೂ ಕೂಡ ದೀಕ್ಷಾಸ್ನಾನದ ಮಹತ್ವವನ್ನು ಅರಿಯುತ್ತದೆಂಬುದು ವಿದಿತ. ದೀಕ್ಷಾಸ್ನಾನದ ಮೂಲಕ ನಾವು, 


1. ಜನ್ಮಪಾಪ ನಿವಾರಣೆ ಹೊಂದುತ್ತೇವೆ. 

2. ದೇವರ ಮಕ್ಕಳಾಗುತ್ತೇವೆ. ಹಾಗೂ 

3. ಧರ್ಮಸಭೆಯ ಮಕ್ಕಳಾಗುತ್ತೇವೆ. 


ಕೂಸಿನ ದೀಕ್ಷಾಸ್ನಾನದ ಹೊರತಾಗಿ ವಯಸ್ಕ ದೀಕ್ಷಾಸ್ನಾನ ಎಂಬ ಮತ್ತೊಂದು ವಿಧಾನವೂ ಇದೆ. ಹೊಸದಾಗಿ ಕ್ರೈಸ್ತಧರ್ಮಕ್ಕೆ ಬರುವವರು ಧರ್ಮತತ್ವಗಳನ್ನು ಅಭ್ಯಾಸ ಮಾಡಿ ಗುರುಸಮ್ಮುಖದಲ್ಲಿ ಧರ್ಮಸಭೆಯನ್ನು ಪ್ರವೇಶಿಸುವುದೇ ವಯಸ್ಕ ದೀಕ್ಷಾಸ್ನಾನ. ಪ್ರೇಷಿತರ ಕಾರ್ಯಕಲಾಪಗಳು 16:33 ರಲ್ಲಿ ಹೇಳಿರುವ “ಆ ನಡುರಾತ್ರಿಯಲ್ಲೇ ಸೆರೆಮನೆಯ ಅಧಿಕಾರಿ ... ಅವನ ಕುಟುಂಬದವರು ದೀಕ್ಷಾಸ್ನಾನ ಪಡೆದರು” ಎಂಬುದನ್ನು ಗಮನಿಸಿ. ಮದುವೆಯ ಸಂದರ್ಭಗಳಲ್ಲಿ ಅನ್ಯಧರ್ಮದವರು ನಮ್ಮ ಹುಡುಗ ಹುಡುಗಿಯನ್ನು ಮದುವೆಯಾಗಲು ಬಯಸಿದರೆ ಅವರಿಗೆ ದೀಕ್ಷಾಸ್ನಾನ ನೀಡಿ ಧರ್ಮಸಭೆಯ ಸದಸ್ಯರನ್ನಾಗಿ ಮಾಡಿ ಆನಂತರ ಮದುವೆ ಸಂಸ್ಕಾರ ನೀಡುವುದು ನಡೆದುಕೊಂಡು ಬಂದಿರುವ ಪದ್ಧತಿ. 

ಉದ್ಯೋಗನಿಮಿತ್ತ ನಾನು ಹರ್ಯಾನ ರಾಜ್ಯದಲ್ಲಿ ನೆಲೆಸಿದ್ದಾಗ ಒಂದು ಸಂದರ್ಭದಲ್ಲಿ ಪಂಜಾಬಿ ಕುಲೀನ ಸ್ತ್ರೀಯೊಬ್ಬರು ತಮ್ಮ ಮನೆಯ ಊಳಿಗದಲ್ಲಿದ್ದ ಹೆಂಗಸು ಸೇರಿದಂತೆ ಆಕೆಯ ಒಂಬತ್ತು ಮನೆಮಂದಿಯನ್ನು ದೇವಾಲಯಕ್ಕೆ ಕರೆತಂದು ದೀಕ್ಷಾಸ್ನಾನ ಕೊಡಿಸುವ ಮೂಲಕ ಅವರನ್ನು ಧರ್ಮಸಭೆಯ ಸದಸ್ಯರನ್ನಾಗಿಸಿ, “ನೀವು ಹೋಗಿ ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ ಮತ್ತು ಪವಿತ್ರಾತ್ಮರ ನಾನದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ” ಎಂದು ಮತ್ತಾಯ 28:19 ರಲ್ಲಿ ಯೇಸುಸ್ವಾಮಿಯೇ ಹೇಳಿದ ಪ್ರಕಾರ ಇತರರಿಗೆ ಮಾದರಿಯಾದರು. 

ಕ್ರೈಸ್ತ ಧಾರ್ಮಿಕ ಗ್ರಂಥಗಳನ್ನು ಓದುವ ಮೂಲಕ ಅಥವಾ ಕ್ರೈಸ್ತ ಸಂಸ್ಥೆಗಳು ನಡೆಸುವ ಸಮಾಜೋದ್ಧಾರದ ಕೆಲಸಗಳನ್ನು ನೋಡುವ ಮೂಲಕ ಅಥವಾ ಕ್ರೈಸ್ತ ಜನಸಾಮಾನ್ಯರ ಜೀವನಶೈಲಿಯನ್ನು ಕಾಣುವ ಮೂಲಕ ಹಲವರು ಕ್ರೈಸ್ತ ಧರ್ಮಕ್ಕೆ ಸೇರಿದ ಉದಾಹರಣೆಗಳಿವೆ. ಇಲ್ಲೆಲ್ಲ ವಯಸ್ಕ ದೀಕ್ಷಾಸ್ನಾನ ನೀಡಲಾಗುತ್ತದೆ. ದೀಕ್ಷಾಸ್ನಾನದ ಮೂಲಕ ನಾವು ಆದಿ ತಂದೆತಾಯಿಯರಿಂದ ನಮಗೆ ಪಾರಂಪರಿಕವಾಗಿ ಬಂದ ಮಾನುಷಿಕ ತಪ್ಪುಗಳಿಂದ ವಿಮುಕ್ತರಾಗಿ ದೇವರ ಮಕ್ಕಳಾಗುತ್ತೇವೆ, ಮಾತ್ರವಲ್ಲ ಕ್ರಿಸ್ತೀಯ ವಿಶ್ವಾಸದಲ್ಲಿ ಬಲಗೊಳ್ಳುತ್ತೇವೆ. 

ಹಾಗೆ ನೋಡಿದರೆ ದೀಕ್ಷಾಸ್ನಾನವನ್ನು ಗುರುಗಳೇ ನೀಡಬೇಕೆಂದೇನಿಲ್ಲ. ಮನಪೂರ್ವಕ ಕ್ರೈಸ್ತಧರ್ಮ ಸ್ವೀಕರಿಸುವ ಯಾರಿಗಾದರೂ ಯಾವುದೇ ಸಂದರ್ಭದಲ್ಲಿ ನಾವೂ ನೀವೂ ದೀಕ್ಷಾಸ್ನಾನ ನೀಡಬಹುದು. ಉದಾಹರಣೆಗೆ ಮಗುವೊಂದು ಸಾಯುವ ಸ್ಥಿತಿಯಲ್ಲಿದೆ ಎನಿಸಿದಾಗ, ಗುರುಗಳ ಆಗಮನ ದುಸ್ಸಾಧ್ಯವೆನಿಸಿದಾಗ ನಾವೇ ಅದರ ಹಣೆಯ ಮೇಲೆ ನೀರು ಚಿಮುಕಿಸಿ ’ಪಿತನ, ಸುತನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ನಿನಗೆ ದೀಕ್ಷಾಸ್ನಾನ ನೀಡುತ್ತಿದ್ದೇನೆ’ ಎಂದು ಘೋಷಿಸುವ ಮೂಲಕ ಆ ಮಗುವನ್ನು ಕ್ರಿಸ್ತನ ಮಗುವನ್ನಾಗಿ ಮಾಡಬಹುದು. ಸಾವಿನಾವಸ್ಥೆಯಲ್ಲಿರುವ ರೋಗಿಗಳು, ಯೋಧರು, ದುರಂತಕ್ಕೀಡಾದವರು ಸಾಯುವ ಮುನ್ನ ಕ್ರೈಸ್ತರಾಗಲು ಬಯಸಿದರೆ ಗುರುಗಳ ಅನುಪಸ್ಥಿತಿಯಲ್ಲಿ ಕ್ರೈಸ್ತ ಜನಸಾಮಾನ್ಯರು ಪಿತಸುತಪವಿತ್ರಾತ್ಮರ ಹೆಸರಿನಲ್ಲಿ ದೀಕ್ಷಾಸ್ನಾನ ಕೊಡಲು ಅಭ್ಯಂತರವೇನಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಅವರ ಹೆಸರು ಗುಡಿಯ ದೀಕ್ಷಾಸ್ನಾನದ ರಿಜಿಸ್ಟ್ರಿಯಲ್ಲಿ ದಾಖಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. 

ಹಿಂದೆಲ್ಲ ತಂದೆತಾಯಿಗಳು ಅನೈತಿಕ ಜೀವನ ನಡೆಸುತ್ತಿದ್ದಾರೆ, ಪಾಪ ಮಾರ್ಗದಲ್ಲಿ ಬಾಳುತ್ತಿದ್ದಾರೆ, ತಂದೆತಾಯಿಯರ ಧರ್ಮ ಬೇರೆಬೇರೆ ಇದೆ ಇತ್ಯಾದಿಗಳ ಕಾರಣದಿಂದ ಅವರ ಮಕ್ಕಳಿಗೆ ದೀಕ್ಷಾಸ್ನಾನ ನೀಡುತ್ತಿರಲಿಲ್ಲ. ಏಕೆಂದರೆ ಅವರು ತಮ್ಮ ಮಕ್ಕಳನ್ನು ನಿಜ ಕ್ರೈಸ್ತವಿಶ್ವಾಸದಲ್ಲಿ ಸಲಹುವುದಿಲ್ಲ ಎಂಬ ನಂಬುಗೆಯಿತ್ತು. ಈಗ ಬದಲಾದ ಕಾಲ ಸಂದರ್ಭದಲ್ಲಿ ತಂದೆ ತಾಯಿ ಮಾಡುವ ತಪ್ಪಿಗೆ ಮಕ್ಕಳು ಬಲಿಪಶುಗಳಾಗಬಾರದು ಎಂಬ ಆಶಯದಿಂದ ಅಂಥವರ ಮಕ್ಕಳಿಗೂ ದೀಕ್ಷಾಸ್ನಾನ ನೀಡಲಾಗುತ್ತಿದೆ. 


(ಮುಂದುವರಿಯುವುದು) 

ಕೆಟೂರ


· ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ


ತನ್ನ ಪ್ರೀತಿಯ ಸಂಗಾತಿ ಸಾರಾಳ ಸಾವಿನ ನಂತರ ಅಬ್ರಹಾಮ ಕೆಟೂರಳನ್ನು ಮದುವೆ ಮಾಡಿಕೊಳ್ಳುತ್ತಾನೆ. ಹಾಗರಳನ್ನೂ ಮಡದಿ ಎಂದು ಪರಿಗಣಿಸಿದರೆ ಕೆಟೂರಳನ್ನು ಅಬ್ರಹಮನ ಮೂರನೆಯ ಹೆಂಡತಿ ಎಂದು ಹೇಳಬಹುದು. ಸಾರಾಳ ನಿಧನದ ಮೂರು ವರ್ಷಗಳ ನಂತರ ಇಸಾಕನು ಮದುವೆಯಾದನು. ಅವನ ಮದುವೆಯಾದ ಬಳಿಕ ಅಬ್ರಹಾಮನು ಏಕಾಂಗಿಯಾಗಿ ಉಳಿದುಬಿಟ್ಟ. ಆ ವಯಸ್ಸಿನಲ್ಲಿ ಅವನ ಲಾಲನೆ-ಪಾಲನೆ ಮಾಡಲು ಸಂಗಾತಿಯೊಬ್ಬಳ ಅವಶ್ಯಕತೆ ಇತ್ತೆಂದು ಕೆಟೂರಳನ್ನು ಮದುವೆಯಾದನು. ಅವಳನ್ನು ಮದುವೆಯಾದಾಗ ಅಬ್ರಹಾಮನಿಗೆ 140 ವರ್ಷಗಳಾಗಿದ್ದವು(ಅವನು ಬದುಕಿದ್ದು 175 ವರ್ಷಗಳು). ಕೆಟೂರಳು ಯೌವನದ ವಯಸ್ಸಿನವಳಾಗಿದ್ದರಿಂದ ಅಬ್ರಹಾಮನಿಗೆ ಮಡದಿಯಾಗಿ ಇರುವುದಕ್ಕಿಂತ ಹೆಚ್ಚಾಗಿ ಅವನ ದಾಸಿಯಂತೆ ಹಾಗೂ ಕುಟುಂಬದ ಹಿರಿಯ ಮಗಳಂತೆ ಜೀವನ ಸಾಗಿಸುತ್ತಿದ್ದಳು. 

ಕೆಟೂರಳು, ಪೂರ್ವ ಹಾಗೂ ದಕ್ಷಿಣ ಪ್ಯಾಲೆಸ್ಟೈನ್ ನಗರಗಳ ಆರು ಅರೇಬಿಯನ್ ಕುಲಗಳ ಪಿತೃಗಳಾದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬ ಮಕ್ಕಳನ್ನು ಹಡೆದಳು. ಪೂರ್ವಜ ಇಸ್ರಾಯೇಲರು ಅರಬ್ಬರನ್ನು ತಮ್ಮ ದೂರದ ಸಂಬಂಧಿಗಳೆಂದು ಪರಿಗಣಿಸಿದ್ದರು. ಹೀಗಾಗಿ ಕೆಟೂರಳ ಸಂತತಿಯ ಮೂಲಕ ಅಬ್ರಹಾಮನು "ಅನೇಕ ರಾಷ್ಟ್ರಗಳ ಪಿತಾಮಹ" ಆದನು. ಈ ಪಿತಾಮಹ ತನ್ನ ಮುದಿ ಪ್ರಾಯವನ್ನು ಕಾಳಜಿ, ಪ್ರೀತಿ ಕೊಟ್ಟ ತನ್ನ ಮಡದಿ ಕೆಟೂರ ಹಾಗೂ ಮಕ್ಕಳೊಂದಿಗೆ ಕಳೆದನು. 

ಕೆಟೂರ ಹಾಗೂ ಅಬ್ರಹಾಮನ ಕುರಿತಾಗಿ ಬರೆಯಲ್ಪಟ್ಟಿರುವ ಕ್ಯೂಪರ್ ಎಂಬ ಲೇಖನದ ಪ್ರಕಾರ ಅವರಿಬ್ಬರ ಸಂಬಂಧ ರೋಮಾಂಚನಮಯ ಎಂದು ಹೇಳಲಾಗುವುದಿಲ್ಲ. ಬದಲಾಗಿ ಇದೊಂದು ಉನ್ನತ ನೈತಿಕತೆ ಹೊಂದಿರುವ ಉತ್ಸಾಹವಿಲ್ಲದ ಬಲವಾದ ಪ್ರೀತಿ ಎನ್ನಬಹುದು. 

ತನ್ನದೇ ಆದ ಗುಡಾರದಲ್ಲಿ ಸ್ವತಂತ್ರ ಸ್ಥಾನಕ್ಕೆ ಬಂದ ಯುವ ಹೆಂಡತಿಯಂತೆ ಕೆಟೂರಳು ಕಂಡುಬರುವುದಿಲ್ಲ. ಆದರೆ ವಯಸ್ಸಾದವರಿಗೆ ಶುಶ್ರೂಷೆ ಮಾಡುವ ಹೆಂಡತಿಯಂತೆ ಕಂಡುಬರುತ್ತಾಳೆ. ಇಂತಹ ಮನೋಭಾವವು ಭಕ್ತಿಯನ್ನು ಸೂಚಿಸುತ್ತದೆಯಾದರೂ ಆ ಭಕ್ತಿ ಹೆಂಡತಿಯ ಪ್ರೀತಿಯನ್ನು ಮಗಳ ಪ್ರೀತಿಯೊಂದಿಗೆ ಸಂಯೋಜಿಸುತ್ತದೆ. 

ಇಸಾಕನಿಗೆ ತನ್ನ ಮಲತಾಯಿ ಹಾಗರಳ ಕುರಿತು ಗೌರವ ಇತ್ತು. ಅವಳನ್ನು ಅಬ್ರಹಾಮನ ಬಳಿಗೆ ಕರೆತಂದು ಅವರಿಬ್ಬರಿಗೂ ಮದುವೆ ಮಾಡಿಸುವ ಆಸೆ ಅವನದಾಗಿತ್ತು ಆದರೆ ಅದಾಗದೆ ಇಸಾಕನ ಮದುವೆಯಾಗುವವರೆಗೂ ಅಬ್ರಹಾಮನು ಕಾದು ಕೆಟೂರಳನ್ನು ಮದುವೆಯಾದನು. ಅಬ್ರಹಾಮನಿಗೆ ಇನ್ನೂ ಮಕ್ಕಳು ಮಾಡುವ ಆಸೆ ಇತ್ತು ಕಾರಣ ಜೂದರ ಪವಿತ್ರ ಗ್ರಂಥದ ಪ್ರಕಾರ ಅನೇಕ ಮಕ್ಕಳನ್ನು ಹುಟ್ಟಿಸುವುದೆಂದರೆ, ಆ ಮಕ್ಕಳಲ್ಲಿ ಯಾರಿಂದ ವಂಶ ಉದ್ದಾರವಾಗುವುದೆಂದು ತಿಳಿಯದು. ಆದಾಮ ಮತ್ತು ಹವ್ವಳಿಗೆ ದೇವರು, ಫಲವತ್ತಾಗಿ ಸಂತತಿ ಹೆಚ್ಚಿಸಿರಿ ಎಂದು ಆಶೀರ್ವದಿಸಿದರು. ನೋವನ ಸಂತತಿಗೂ ಅದನ್ನೇ ನುಡಿದರು. ಸಂತತಿ ಬೆಳೆಯುವುದು ಸರ್ವೇಶ್ವರ ಸ್ವಾಮಿಯ ಇಚ್ಛೆ. 

ಅಬ್ರಹಾಮನು ಇಸಾಕನ ಮೂಲಕ ಈಗಾಗಲೇ ಒಂದು ರಾಷ್ಟ್ರಕ್ಕೆ ಬುನಾದಿ ಹಾಕಿದ್ದ ಕಾರಣ ಇತರರಿಗೆ ಜೀವವನ್ನು ಉಡುಗೊರೆಯಾಗಿ ನೀಡುವ ಉದ್ದೇಶದಿಂದ ಕೆಟೂರಳನ್ನು ಮದುವೆಯಾದನು. ಅವಳು ಕುಟುಂಬದ ಹಿರಿಯ ಮಗಳಂತೆ ಅವರೆಲ್ಲರ ಸೇವೆ ಗೈದಳು. ಈ ಕುರಿತಾಗಿ ಮುದಿ ವಯಸ್ಕನನ್ನು ಮದುವೆಯಾಗುವ ಮಹಿಳೆಯರಿಗೆ ಹೀಗೆಂದು ವ್ಯಕ್ತಪಡಿಸುತ್ತಾಳೆ; ನೀವು ತೋರುವ ಪ್ರೀತಿಯಲ್ಲಿ ಪ್ರಾಮಾಣಿಕ ಭಯ-ಭಕ್ತಿ ಹಾಗೂ ಉನ್ನತ ಗುಣಮಟ್ಟದ ಪಾವಿತ್ರ್ಯ ಇರಬೇಕು. ಸೇವೆಯಲ್ಲಿ ಪಾವಿತ್ರ್ಯ ಹುರಿದುಂಬಿಸುವ ನಿಷ್ಠೆ ಇರಬೇಕು. 



************** 

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - 8


¨  ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ)

ಸ್ವಾತಂತ್ರ್ಯೋತ್ತರ ಎಂದರೆ ಸ್ವಾತಂತ್ರ್ಯ ನಂತರದಲ್ಲಿ ಕನ್ನಡ ಸಾಹಿತ್ಯದ ಕೃಷಿಗಾರಿಕೆಯಲ್ಲಿ ಕ್ರೈಸ್ತ ಸಾಹಿತಿಗಳ ಪಾತ್ರ ಎಂದರ್ಥ. ಸ್ವಾತಂತ್ರ್ಯಪೂರ್ವದಲ್ಲಿ ಮಿಶನರಿಗಳು ಕನ್ನಡ ಸಾರಸ್ವತ ಲೋಕವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿ ಕಣ್ಮರೆಯಾದ ಕಣ್ಮಣಿಗಳು. ಅಂಧಕಾರದಲ್ಲಿದ್ದ ಕನ್ನಡ ಸಾಹಿತ್ಯದ ಕೃತಿಗಳನ್ನು ಬೆಳಕಿಗೆ ತಂದು ಕನ್ನಡ ಚೆನ್ನುಡಿಯ ಹಿರಿಮೆಯನ್ನು ಸಿರಿಗನ್ನಡದ ಅಕ್ಷರದ ಬೊಕ್ಕಸವನ್ನು ಅವುಗಳ ಬೃಹತ್-ಮಹತ್ತನ್ನು ಕನ್ನಡಿಗರಿಗೆ ತೋರಿಸಿಕೊಟ್ಟು ಹೊಸ ವಿಚಾರಗಳತ್ತ ಕನ್ನಡಿಗರ ಕಣ್ಣು ತೆರೆಸಿದರು. ಹಾಗೆಯೇ ಅವರು ಪ್ರಾರಂಭಿಸಿದ ಈ ಸಾಧಕ ಬದುಕು ಪ್ರತಿಯೊಬ್ಬ ದೇಶಿಯ ಕ್ರೈಸ್ತ ಸಾಹಿತಿಗೆ ಉದಾಹರಣೆಯಾಗಿದ್ದು ಅವರನ್ನು ಕೈ ಬೀಸಿ ಕರೆದಂತೆ ಭಾಸವಾಗಿದೆ. ಸ್ವದೇಶದಿಂದ ವಿದೇಶಕ್ಕೆ ಅಂದರೆ ನಮ್ಮ ನಾಡಿಗೆ ಬಂದು ಇಲ್ಲಿನ ಆಚಾರ, ವಿಚಾರ, ಭಾಷೆ, ಸಂಸ್ಕೃತಿಗೆ ಎದೆಯೊಡ್ಡಿ ನಿಂತು ಕನ್ನಡ ಸೇವೆಯನ್ನು ಮಾಡಿ ಸಂತೃಪ್ತಿಯಿಂದ ಹಿಂತಿರುಗಿದವರು ಮಿಶನರಿಗಳು. ಸ್ವಾತಂತ್ರ್ಯದ ನಂತರವೂ ಮಿಶನರಿಗಳಂತೆ ಉತ್ಸುಕತೆ ಮತ್ತು ಹುರುಪಿನಿಂದ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕ್ರೈಸ್ತ ಸಾಹಿತಿಗಳೂ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಆದರೆ ಇವರ ಕೊಡುಗೆ ಕೇವಲ ಎಲೆ ಮರೆಯ ಕಾಯಿಯಂತಿದ್ದು ಇವರ ಸಾಹಿತ್ಯಿಕ ಶ್ರಮವನ್ನು ಇದುವರೆಗೂ ಯಾರೂ ಗುರುತಿಸದೆ ಇರುವುದು ಶೋಚನೀಯ. 

ಕ್ರೈಸ್ತ ಸಾಹಿತಿಗಳು ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ಶೈಲಿಯಲ್ಲಿ ನಿಧಾನವಾಗಿ ಸಾಹಿತ್ಯಕೃಷಿ ಮಾಡುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಕ್ರೈಸ್ತ ಬಾಂಧವರ
ಆಶೋತ್ತರಗಳಲ್ಲಿ ಬದಲಾವಣೆ ಕಂಡುಬಂದಿತು. ಇದರಲ್ಲಿ ಹೆಚ್ಚಿನವರು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳನ್ನು ನೆಚ್ಚಿಕೊಂಡರು. ಈ ಸೇವಾಕ್ಷೇತ್ರಗಳು ಕ್ರಿಶ್ಚಿಯನ್ನರಿಗೆ ಹೇಳಿಸಿದ್ದು ಎನ್ನುವಷ್ಟರ ಮಟ್ಟಿಗೆ ಆಯಾ ಇಲಾಖೆಯಲ್ಲಿ ದುಡಿದು ಜೀವನದ ಸಾರ್ಥಕತೆ ಕಂಡುಕೊಂಡರು, ಆದರೆ ಕನ್ನಡ ಸಾರಸ್ವತ ಲೋಕದ ವಿದ್ವತ್‌ವಲಯದಲ್ಲಿ ತಮ್ಮನ್ನೇ ಗುರುತಿಸಿಕೊಂಡ ಕ್ರೈಸ್ತರು ಕೇವಲ ಬೆರಳೆಣಿಸುವಷ್ಟು ಮಾತ್ರ. 

ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಕ್ರೈಸ್ತ ಸಾಹಿತಿಗಳ ಸಾಹಿತ್ಯಿಕ ಕೊಡುಗೆಯನ್ನು ಆಸ್ವಾದಿಸುವ ಸಂದರ್ಭದಲ್ಲಿ ಅವರ ಜೀವನದ ಬಗೆಗೆ ಲಭ್ಯವಿರುವ ಆಕರ ಸಾಮಾಗ್ರಿಗಳನ್ನು ವಿವೇಚಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕ್ರೈಸ್ತ ಸಾಹಿತಿಗಳಾದ ಡಾ. ಉತ್ತಂಗಿ ಚೆನ್ನಪ್ಪ, ಫಾ. ಐ. ಅಂತಪ್ಪ, ಡಾ. ನಾ. ಡಿಸೋಜ, ಸಾಹಿತ್ಯ ಸಾಧಕ ಎ. ಎಂ. ಜೋಸೆಫ್, ಮತ್ತು ಡಾ. ಬಿ. ಎಸ್. ತಲ್ವಾಡಿ ಇವರ ಜೀವನ ಸಾಧನೆಯ ವಿವರಗಳನ್ನು ಮತ್ತು ಇತರೆ ಕ್ರೈಸ್ತ ಸಾಹಿತಿಗಳ ಬದುಕು ಮತ್ತು ಬರಹದ ವಿಷಯವನ್ನು ಮೊದಲಿಗೆ ಕನ್ನಡ ಕ್ರೈಸ್ತ ಸಾಹಿತಿ ಉತ್ತಂಗಿ ಚೆನ್ನಪ್ಪ ರವರ ಬದುಕು ಮತ್ತು ಬರಹದ ಬಗ್ಗೆ ತಿಳಿಯೋಣ. 

1. ಕನ್ನಡ ಕ್ರೈಸ್ತ ಸಾಹಿತಿ ಉತ್ತಂಗಿ ಚೆನ್ನಪ್ಪ: 

ಅ) ಬಾಲ್ಯ: ಸರ್ವಜ್ಞನನ್ನು ಬೆಳಕಿಗೆ ತಂದು ಕನ್ನಡಿಗರ ಪ್ರಶಂಸೆಗೆ ಯೋಗ್ಯರಾದ ಉತ್ತಂಗಿ ಚೆನ್ನಪ್ಪನವರು ದೇಶಿಯ ಕ್ರೈಸ್ತರಾಗಿ, 1932ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕ್ರೈಸ್ತ ಜನಾಂಗಕ್ಕೆ ಗೌರವವನ್ನು ತಂದುಕೊಟ್ಟ ಮಹಾನ್ ಸಾಹಿತಿಯಾಗಿದ್ದಾರೆ. ಶ್ರೀಯುತರು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಈ ಎರಡು ಅವಧಿಗಳಲ್ಲೂ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿರುವರು. 



ಹೆಸರು 'ಚೆನ್ನ'ನಾಗಿಯೇನು ಕೃತಿಯು ಚೆನ್ನವಿರದಿರೆ? 

ಹೆಸರಾಯಿತು ನಿಮ್ಮ ಹೆಸರು ಅಂತು ನೀವು ಬರೆದಿರಿ 

'ಅಂಗ ಉತ್ತು ಲಿಂಗ ಬಿತ್ತು' ಎಂಬ ಜನ್ಮ ಸಾರ್ಥವು 

ಸರ್ವಜ್ಞನ ವಚನಗಳಿಗೆ ಇದುವೆ ಮೂಲ ಅರ್ಥವು 

ನುಡಿಯ ಧ್ಯಾನದಲ್ಲಿ ನೀವು ನಡೆಯನಡೆಸಿ ಇಂದಿಗೆ 

'ಉತ್ತುಂಗ'ರಾದಿರೆಂದೆ 'ಪೂಜ್ಯ'ರೆಲ ಮಂದಿಗೆ. 



ಹೀಗೆ ಕರ್ನಾಟಕದ ಶ್ರೇಷ್ಠ ಕವಿ ಗಾರುಡಿಗ ದ. ರಾ. ಬೇಂದ್ರೆಯವರು ಉತ್ತಂಗಿಯವರಿಗೆ 60 ವರ್ಷಗಳಾದಾಗ ಪೂಜ್ಯಭಾವದಿಂದ ಅಭಿನಂದಿಸಿದ ಕವನ ಕಾಣಿಕೆ ಇದು. ಅಂಗವನ್ನು ಉತ್ತು, ಲಿಂಗ ಗುಣಗಳನ್ನು ಮೈಗೂಡಿಸಿಕೊಂಡು, ಉತ್ತುಂಗ ವ್ಯಕ್ತಿಯಾಗಿ, ಕನ್ನಡದ ತಿರುಕರಾಗಿ, ಕವಿಯಾಗಿ, ಸಂಶೋಧಕರಾಗಿ, ಸಾಹಿತಿಯಾಗಿ, ಅನುಭವಿಯಾಗಿ, ಮಾದರಿಯಾಗಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕ್ರೈಸ್ತಮತ ಬೋಧಕರಾಗಿ ಸರ್ವಜ್ಞನಿಗೆ ಮರು ಹುಟ್ಟುಕೊಟ್ಟ ಕೀರ್ತಿಗೆ ಭಾಜನರಾಗಿ, ಕ್ರೈಸ್ತರ ಹಿರಿಮೆ-ಗರಿಮೆಯನ್ನು ಹೆಚ್ಚಿಸಿದ ಉತ್ತಂಗಿ ಚೆನ್ನಪ್ಪರವರು ಕ್ರಿ.ಶ. 1881ರ ಅಕ್ಟೋಬರ್ 28ರಂದು ಧಾರವಾಡದಲ್ಲಿ ಜನಿಸಿದರು. ತಂದೆ ದಾನಿಯೇಲಪ್ಪ, ತಾಯಿ ಸುಭದ್ರವ್ವ ಈ ದಂಪತಿಗಳಿಗೆ ಬಹಳ ಕಾಲ ಮಕ್ಕಳಾಗದಿರಲು ಸುಭದ್ರವ್ವ ಆತನನ್ನು ಯೇಸುಕ್ರಿಸ್ತನ ಸೇವೆಗೆ ಅರ್ಪಿಸುವೆಂದು ದೇವರಲ್ಲಿ ಹರಕೆ ಹೊತ್ತಿದ್ದರಂತೆ. ದೈವೇಚ್ಛೆಯಂತೆ ಅವರಿಗೊಂದು ಗಂಡು ಮಗುವಾಯಿತು. ಮಗುವಿನ ತಾತ ಚೆನ್ನಪ್ಪಗೌಡರ ಸವಿನೆನಪಿಗಾಗಿ ಆತನಿಗೆ 'ಚೆನ್ನಪ್ಪ' ಎಂದೆ ನಾಮಕರಣವಾಯಿತು. ಚೆನ್ನಪ್ಪರವರಿಗೆ ಉತ್ತಂಗಿ ಎಂಬ ಅಡ್ಡ ಹೆಸರು ಬಂದದ್ದು 'ಉತ್ತಂಗಿ' ಎಂಬ ಗ್ರಾಮದಿಂದಾಗಿ, ಈ ಗ್ರಾಮವು ಇಂದಿನ ಬಳ್ಳಾರಿ ಜಿಲ್ಲೆಯ ಹೂವಿಹನಗಡಲಿ ತಾಲೂಕಿನಲ್ಲಿದೆ. ಚೆನ್ನಪ್ಪನವರ ಹಿರಿಯರು ಈ ಗ್ರಾಮದಿಂದ ಧಾರವಾಡಕ್ಕೆ ಬಂದುದರಿಂದ ಧಾರವಾಡದಲ್ಲಿ ಇವರು 'ಉತ್ತಂಗಿ'ಯವರಾದರು. ಉತ್ತಂಗಿಯಲ್ಲಿ ಇವರು ಗೌಡಕೀಯ ಮನೆತನಕ್ಕೆ ಒಳಪಟ್ಟವರಾಗಿದ್ದು ಮೂಲತಃ ಲಿಂಗಾಯುತ ಸಮಾಜಕ್ಕೆ ಸೇರಿದವರು. ಇವರ ಮನೆತನಕ್ಕೆ ಅಲ್ಲಿ 'ಪಾರುಪತ್ಯಗಾರ' ಎಂಬ ಅಡ್ಡ ಹೆಸರಿತ್ತು. ಈ ಮನೆತನದವರು ಹಿಂದೆ ಪಾರತ್ಯಗಾರರಾಗಿದ್ದರೆಂಬುದು ಇವರಿಂದ ತಿಳಿದು ಬರುತ್ತದೆ. ಪಾರತ್ಯಗಾರ ಶಬ್ಧಕ್ಕೆ ಬೇರೆ ಬೇರೆ ಅರ್ಥಗಳಿವೆ. ಆದರೆ ಡಾ. ಎಸ್. ಆರ್. ಗುಂಜಾಳರವರು ಕಿಟಲರ ಶಬ್ಧಕೋಶದಿಂದ ಸಂಗ್ರಹಿಸಿದ ಅರ್ಥ ಹೀಗಿದೆ. ಯಾವುದೊಂದು ಜಿಲ್ಲೆಯ ಮುಖ್ಯ ಅಧಿಕಾರಿಯ ಸಹಾಯಕ ಅಧಿಕಾರಿಯಾಗಿಯೂ ಮತ್ತು ಸಹಾಯಕ ನ್ಯಾಯಧೀಶನಾಗಿಯೂ ಕೆಲಸ ಮಾಡುವವನು ಎಂದು ಹೇಳಿದ ಅರ್ಥವು ಇಲ್ಲಿ ಸಮಂಜಸವೆಂದು ತಿಳಿಯಬಹುದು. 

ಉತ್ತಂಗಿಯವರ ಮನೆತನದ ಅತ್ಯಂತ ಪ್ರಾಚೀನ ಇತಿಹಾಸ ತಿಳಿಯದಾಗಿದೆ. ಆದರೆ ಎರಡು ಮಾರಿನ ಇತಿಹಾಸ ಮಾತ್ರ ಸ್ವಲ್ಪ ಸ್ಪಷ್ಟವಾಗಿ ತಿಳಿಯುವಂತಿದೆ. ಪಾರುಪತ್ಯಗಾರ ಚೆನ್ನಪ್ಪಗೌಡ ಎಂಬುದು ಶ್ರೀ ಉತ್ತಂಗಿ ಚೆನ್ನಪ್ಪನವರ ಅಜ್ಜನ ಹೆಸರು ಈ ಲಿಂಗಾಯುತ ಮನೆತನದ ಚೆನ್ನಪ್ಪಗೌಡರು ಪ್ರಪ್ರಥಮವಾಗಿ ಕ್ರೈಸ್ತ ಧರ್ಮಕ್ಕೆ ಸೇರಲ್ಪಟ್ಟರು. ತದನಂತರ ಅವರ ಮನೆತನ ಕ್ರೈಸ್ತ ಮತದ ತತ್ವಗಳಿಗೆ ಬದ್ಧವಾಗಿತ್ತು. 

ಚೊಚ್ಚಲು ಮಗುವಾದುದು ಉತ್ತಂಗಿ ಚೆನ್ನಪ್ಪನ ತಾಯಿಗೆ ಅತೀ ಸಂತಸ ತಂದಿತ್ತು. ಆ ಮಗುವನ್ನು ಬಹು ಜೋಪಾನದಿಂದ ನೋಡಿಕೊಳ್ಳುತ್ತಾ ಪ್ರೀತಿಯಿಂದ ಬೆಳೆಸಿದಳು. ಮಗ ಭಕ್ತಿವಂತನಾಗಿ ಯೇಸು ಕ್ರಿಸ್ತರ ನಿಷ್ಠಾವಂತ ಅನುಯಾಯಿಯಾಗಬೇಕು ಎಂಬುದು ಆ ತಾಯಿಯ ಮಹತ್ತರವಾದ ಬಯಕೆಯಾಗಿತ್ತು. ಅಂದು ಮಿಶನರಿಗಳಿಂದ ರಚಿತವಾಗಿದ್ದ 'ಭಕ್ತಿವಂತ ಪರಂಜ್ಯೋತಿ' ಎಂಬ ಧಾರ್ಮಿಕ ಗ್ರಂಥದಲ್ಲಿರುವ ಕಥೆಯನ್ನು ಬಹು ಉತ್ಸುಕತೆಯಿಂದ ಹೇಳಿ ಮಗನ ಮನಸ್ಸನ್ನು ಭಕ್ತಿಯೆಡೆಗೆ ಹರಿಸುತ್ತಿದ್ದಳು. ಆದರೆ ಉತ್ತಂಗಿ ಚೆನ್ನಪ್ಪನವರ ತಂದೆ ಮಾತ್ರ ತನ್ನ ಮಗ ಓದಿ ಜಾಣನಾಗಬೇಕು, ಕ್ರೈಸ್ತ ಸಮಾಜದ ಮುಂದಾಳತ್ವ ವಹಿಸಬೇಕು, ಒಬ್ಬ ವೈಚಾರಿಕ ವ್ಯಕ್ತಿಯಾಗಬೇಕೆನಿಸಿ ಮಗನಿಗೆ ಸಿಕಂದರ ಬಾದಶಹನಂಥ ಐತಿಹಾಸಿಕ ಧುರೀಣರ ಜೀವನ ಚರಿತ್ರೆಗಳನ್ನು ಹೇಳುತ್ತಿದ್ದರು. 

ಹೀಗೆ ಬಾಲ್ಯದಲ್ಲಿಯೇ ಶ್ರೀ ಉತ್ತಂಗಿ ಚೆನ್ನಪ್ಪರವರು ತಮ್ಮ ತಂದೆ-ತಾಯಿಗಳಿಂದ ತಾವು ಶಿಕ್ಷಣ ಪಡೆದ ವಿಷಯವನ್ನು ತಮ್ಮ ಜೀವನ ಚರಿತ್ರೆಯಲ್ಲಿ ಸ್ವತಃ ತಾವೇ ಹೀಗೆ ಹೇಳಿರುವುದನ್ನು ನಾವು ಗಮನಿಸಿಬಹುದು. ತಂದೆ-ತಾಯಿಗಳ ಶಿಕ್ಷಣದ ಮೇಲಾಟದಲ್ಲಿ ನಾನು ಮೆಚ್ಚಿಸಬಹುದಾಗಿತ್ತಲ್ಲದೆ, ತಂದೆಯನ್ನು ಮೆಚ್ಚಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ನನಗೆ ಜ್ಞಾಪಕ ಶಕ್ತಿ ಕಡಿಮೆ ಆದುದರಿಂದ ನಾನು ಬುದ್ಧಿಯಲ್ಲಿ ಮಂದ, ಕಲಿಯುವುದರಲ್ಲಿ ಹಿಂದೆ ಮತ್ತು ಕ್ಲಾಸಿನಲ್ಲಿ ಕಡೆಯವನಾಗಿದ್ದೆ. ಹೀಗಾಗಿ ನನಗೆ ತಂದೆಯವರಿಂದ ಜಾಣತನಕ್ಕಾಗಿ ಮೆಚ್ಚುಗೆ ಸಿಕ್ಕಿದ್ದಕ್ಕಿಂತ ದಡ್ಡತನಕ್ಕಾಗಿ ಪೆಟ್ಟು ಸಿಕ್ಕಿದ್ದೆ ಹೆಚ್ಚು. ಇಲ್ಲಿ ಉತ್ತಂಗಿ ಚೆನ್ನಪ್ಪನವರ ಬಾಲ್ಯ ಜೀವನದ ವ್ಯಕ್ತಿತ್ವವನ್ನು ಕಾಣಬಹುದು. 

ಅವರಿಗೆ ಬಾಲ್ಯದಲ್ಲಿ ಜ್ಞಾಪಕಶಕ್ತಿ ಕಡಿಮೆಯಿತ್ತೇನೋ ನಿಜ, ಅದರೆ ವಿಚಾರಶಕ್ತಿ ಮಾತ್ರ ಅದ್ಭುತವಾಗಿತ್ತೆಂಬುದು ಶ್ಲಾಘನೀಯ. ತನ್ನ ತಾಯಿಯ ನಿರಂತರ ಪ್ರಾರ್ಥನೆಯ ಫಲವಾಗಿ ತುಸು ತಡವಾದರೂ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಅವರ ಬುದ್ಧಿ ಅರಳಿ ಕತ್ತಲೆಯಲ್ಲಿ ಬೆಳಕು ಪ್ರಕಾಶಿಸಿದಂತಾಯಿತು. ಮಗನು 5ನೇ ತರಗತಿಯನ್ನು ಪಾಸಾದಾಗ ಆತನಿಗೆ ಕೇವಲ 10 ವರ್ಷ ಪ್ರಾಯ. ಆಗ ದಾನಿಯೇಲನು ಮಗನಿಗೆ ಇಂಗ್ಲೀಷ್ ವಿದ್ಯೆಯನ್ನು ಕಲಿಸಬೇಕೆಂದು ಬಯಸಿದರು. ಆದರೆ ನೂತನವಾಗಿ ಕ್ರೈಸ್ತರಾದ ಹಿಂದೂ ಮಕ್ಕಳಿಗೆ ಇಂಗ್ಲೀಷ್ ವಿದ್ಯೆಯನ್ನು ಕಲಿಸುವುದು ನಿಷ್ಪ್ರಯೋಜಕವೆಂದು ಆಗಿನ ಕಾಲದ ಮಿಶನರಿಗಳು ಭಾವಿಸಿದ್ದರು. ಮಿಶನ್ ಹೈಸ್ಕೂಲ್ ಧಾರವಾಡದಲ್ಲಿ ಸ್ಥಾಪಿತವಾಗಿ ಆಗಲೇ 35 ವಷಗಳಾಗಿದ್ದರೂ ಅದರಲ್ಲಿ ಪ್ರವೇಶ ಕ್ರೈಸ್ತೇತರ ಮಕ್ಕಳಿಗೆ ಮೀಸಲಾಗಿತ್ತು. ಯಾಕೆಂದರೆ ಮತಾಂತರಗೊಂಡ ಹಿಂದೂ ಕ್ರೈಸ್ತರಿಗೆ ಇಂಗ್ಲೀಷ್ ವಿದ್ಯೆಯನ್ನು ಕಲಿಸಿದರೆ ಸರಕಾರದ ಸೇವೆಯಲ್ಲಿ ಸೇರಿ ಮಿಶನ್ ಸೇವೆಗೆ ಎರವಾಗುವರೆಂಬುದು ಆಗಿನ ಮಿಶನರಿಗಳ ವಾದವಾಗಿತ್ತು. ತದನಂತರ 'ಸ್ಟೂಡೆಂಟ್ಸ್ ಹೊಮ್' ಎಂಬ ವಿದ್ಯಾರ್ಥಿನಿಲಯ 1897ರಲ್ಲಿ ಧಾರವಾಡದಲ್ಲಿ ಪ್ರಾರಂಭವಾಯಿತು. ಈ ನಿಲಯದಲ್ಲ್ಲಿ ಸುಮಾರು 12 ವಿದ್ಯಾರ್ಥಿಗಳಿದ್ದು ಅವರಲ್ಲಿ ಉತ್ತಂಗಿಚೆನ್ನಪ್ಪ ಒಬ್ಬರಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಅಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ರೆವರೆಂಡ್ ರಿಷ್ ಅವರು ಧಾರವಾಡದ ಸ್ಟುಡೆಂಟ್ ಹೋಮಿನಲ್ಲಿದ್ದ ವಿದ್ಯಾರ್ಥಿಗಳನ್ನು ಒಂದೆಡೆ ಕಲೆಹಾಕಿ ಅವರಿಗೆ ಇಂಗ್ಲೀಷ್ ಹಾಗೂ ಸಂಸ್ಕೃತವನ್ನು ಹೇಳಿಕೊಡುತ್ತಿದ್ದರು. 



ಹೀಗೆ ಮಿಶನರಿ ರೆವರೆಂಡ್ ರಿಷ್ ಅವರು ಉತ್ತಂಗಿ ಚೆನ್ನಪ್ಪರವರ ಬಾಲ್ಯ ಜೀವನಕ್ಕೆ ಒಬ್ಬ ಮಾದರಿ ಪ್ರೇರಕ ಶಕ್ತಿಯಾಗಿದ್ದರು ಎಂಬುದನ್ನು ನಾವು ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆಯಿಂದ ತಿಳಿಯಬಹುದಾಗಿದೆ. ಆ ವಯಸ್ಸಿಗಾಗಲೇ ಬುದ್ಧಿ, ಆತ್ಮಾಭಿಮಾನ, ಮತ್ತು ಹೋರಾಟದ ಸ್ವಭಾವ ಬಾಲಕ ಉತ್ತಂಗಿಯವರಲ್ಲಿ ಎದ್ದು ಕಾಣುತ್ತಿದ್ದವು. ಬಾಲ್ಯದಲ್ಲಿ ಉತ್ತಂಗಿ ಚೆನ್ನಪ್ಪ ಬುದ್ಧಿವಂತ ವಿದ್ಯಾರ್ಥಿಯಾಗೇನೂ ಇರಲಿಲ್ಲ. ರೇಖಾಗಣಿತ, ಅಂಕಗಣಿತಗಳೆಂದರೆ ಅವರಿಗೆ ಎಣ್ಣೆ-ಸೀಗೆಕಾಯಿ ಇದ್ದಂತೆ. ರೆ. ಹರ್ಮನ್‌ರಿಷ್ ಪ್ರಯತ್ನದಿಂದ ಅವರಲ್ಲಿ ಸುಪ್ತವಾಗಿದ್ದ ಅದ್ಭುತ ಶಕ್ತಿಯ ಅರಿವು ಉಂಟಾಯಿತು. ವಿಮರ್ಶಾತ್ಮಕ ಬುದ್ಧಿಯು ಮೊಳೆತು ಚಿಗುರೊಡೆದು ಬೇರುಬಿಟ್ಟಿತು. ಆದರೆ ಚೆನ್ನಪ್ಪರವರು ಮೆಟ್ರಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಮತ್ತೆ ಪರೀಕ್ಷೆ ಬರೆದು ಪಾಸು ಮಾಡಲು ಅವರು ಪ್ರಯತ್ನಿಸಲಿಲ್ಲ ಅದರ ಬಗ್ಗೆ ಅವರು ಕೊಡುವ ಸಮರ್ಥನೆ ಏನೆಂದರೆ ನನಗೆ ವಿದ್ಯೆ ಹೇಳಿಕೊಡುವ ಗುರುಗಳು ಈ ಜಗತ್ತಿನಲ್ಲಿ ಹುಟ್ಟಿಲ್ಲವೆಂದೂ, ಹುಟ್ಟಿದ್ದರೂ ಅವರ ಲಭ್ಯ ನನಗಿಲ್ಲವೆಂದೂ ನಿಶ್ಚಯಿಸಿಕೊಂಡೆ. ಅಂದಿನಿಂದ ಗುರುವಿಗೂ, ತಿರುಪೆಯ ಓದಿಗೂ, ವಿದ್ಯಾನಿಲಯಕ್ಕೂ ವಿಮುಖವನಾದವನು ತಿರುಗಿ ಆ ಕಡೆಗೆ ಕಣ್ಣೆತ್ತಿ ಸಹ ನೋಡಲಿಲ್ಲ. ಉತ್ತಂಗಿಯವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲವೇನೋ ನಿಜ. ಆದರೆ ಹೊಟ್ಟೆಯ ಪಾಡಿಗೆ ಯಾವುದಾದರೂ ನೌಕರಿಯನ್ನು ಅವಲಂಭಿಸಬೇಕಾಗಿತ್ತು. ಆದರೆ ಉತ್ತಮ ನೌಕರರಿಗೆ ಯೋಗ್ಯವಾದ ಶಿಕ್ಷಣ ಬೇಕು. ಮೆಟ್ರಿಕ್ (ಹೈಸ್ಕೂಲ್) ಶಿಕ್ಷಣವನ್ನು ಪೂರ್ತಿಗೊಳಿಸದ ಉತ್ತಂಗಿಯವರಿಗೆ ದೊಡ್ಡ ಹುದ್ಧೆ ದೊರೆಯುವುದಾದರೂ ಹೇಗೆ? ತಂದೆ ಪುನ: ಪರೀಕ್ಷೆ ಕಟ್ಟುವಂತೆ ಒತ್ತಾಯಿಸಿದರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ, ಇನ್ನೊಂದೆಡೆ ತಾಯಿ ಕಣ್ಣೀರಿಡುತ್ತಾ ತನ್ನ ಹರಕೆಯನ್ನು ನೆರವೇರಿಸಿ ಕೊಡುವಂತೆ ಮಗನಿಗೆ ಬುದ್ಧಿವಾದ ಹೇಳಿದರು. ನೀನು ನನ್ನ ಹರಕೆಯನ್ನು ದುರ್ಲಕ್ಷಿಸಿ, ಲೌಕಿಕ ಮಾರ್ಗವನ್ನು ಹಿಡಿದುದು ದೇವರ ಮನಸ್ಸಿಗೆ ಬರಲಿಲ್ಲ. ಹಲವು ಹವಣಿಕೆ ಹಾಕಿ ವೃಥಾ ಕಾಲ ಕಳೆಯುವುದಕ್ಕಿಂತ ನೆಟ್ಟಗೆ ಮಂಗಳೂರಿನಲ್ಲಿರುವ ಬಾಸೆಲ್ ಮಿಶನ್ನಿನ ದೈವಜ್ಞಾನ ಶಾಲೆಗೆ ಸೇರಬೇಕು ಎಂಬ ತಾಯಿಯ ಒತ್ತಾಯಕ್ಕೆ ಮಣಿದು ಚೆನ್ನಪ್ಪರವರು ಗುರುಮಠವನ್ನು ಸೇರಿದರು, ಪ್ರಬುದ್ಧ ವಯಸ್ಕರೂ ಕ್ರಾಂತಿಕಾರರ ಮನೋಭಾವದವರೂ ಆಗಿದ್ದ ಅವರಿಗೆ ಅಲ್ಲಿಯ ವಾತಾವರಣ ಹಿಡಿಸಲಿಲ್ಲ. ತರ್ಕಶಾಸ್ತ್ರ ಮತ್ತು ನಾಸ್ತಿಕವಾದಿ ಹರ್ಬಟ್‌ಸ್ಪೆನ್ಸರನ ಪುಸ್ತಕಗಳನ್ನು ಕದ್ದು ಓದುತ್ತಿದ್ದರು ಜೊತೆಗೆ ಕ್ರೈಸ್ತ ಧರ್ಮ ಸಂದೇಹವಾದಿಗಳಾದ ಪೇನ್, ಇಂಗರ್ಸಲ್, ವಾಲ್ಟೆರ್ ಮುಂತಾದವರ ಗ್ರಂಥಗಳನ್ನು ಓದಿ ಬಹಳಷ್ಟು ಬೌದ್ಧಿಕವಾಗಿ ಬೆಳೆದರು, ಅವರಲ್ಲಿ ಜ್ಞಾನ, ಹರಿತಬುದ್ಧಿ, ತರ್ಕಬದ್ಧ ವಿಚಾರ ಸರಣಿ, ಸತ್ಯಾನ್ವೇಷಣೆಯ ಆಕಾಂಕ್ಷೆ ಮತ್ತು ವಿಶಾಲ ಮನೋಭಾವ ಮುಂತಾದ ಸದ್ಗುಣಗಳು ಅವರಲ್ಲಿ ಎದ್ದು ಕಾಣುತ್ತಿದ್ದವು. 



ದಿನಾಂಕ 01.01.1908ರಂದು ಉತ್ತಂಗಿ ಚೆನ್ನಪ್ಪರವರು ತನ್ನ ತಾಯಿಯ ಹರಕೆಯನ್ನು ಪೂರೈಸಲೆಂದು ಬಾಸೆಲ್ ಮಿಷನ್ ಸಂಸ್ಥೆಯಲ್ಲಿ ಕ್ರಿಸ್ತನ ಸೇವೆಗೆ ಸೇರಿದರು. ಸುಮಾರು 33 ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ 1942 ಜನವರಿ 01ರಂದು ಅವರು ತಮ್ಮ ಮಿಶನ್ ಸೇವೆಯಿಂದ ನಿವೃತ್ತರಾದರು. ಈ ಸುದೀರ್ಘ ವರ್ಷಗಳಲ್ಲಿ ಸಂಸ್ಥೆಯು ವಹಿಸಿದ್ದ ಎಲ್ಲಾ ಜವಬ್ದಾರಿಯುತ ಹುದ್ಧೆಗಳನ್ನು ಪ್ರೀತಿಯಿಂದ ಸ್ವೀಕರಿಸಿ ವಿವಿಧ ಸ್ಥಳಗಳಲ್ಲಿ ಅವಿರತ ಸೇವೆ ಸಲ್ಲಿಸಿರುವರು. ಉತ್ತಂಗಿಯವರು ಕಾರ್ಯ ನಿರ್ವಹಿಸಿದ ಸ್ಥಳ ಹುದ್ಧೆ ಮತ್ತು ಅವಧಿಗಳನ್ನು ಈ ಕೆಳಗಿನಂತೆ ಗಮನಿಸಬಹುದು. 



1. ಹುಬ್ಬಳ್ಳಿ ಧರ್ಮೋಪದೇಶಕ (Evangelist) 1908-1910 

2. ಧಾರವಾಡ ವಿದ್ಯಾರ್ಥಿನಿಲಯದ ಮುಖ್ಯಸ್ಥ (House father) 1911-1912 

3. ಬೆಟಗೇರಿ (ಗದಗ) ಅನಾಥ ಗಂಡು ಮಕ್ಕಳ ಶಾಲೆಯ ಮುಖ್ಯಸ್ಥ (House father of orphanage School) 1913-1916 

4. ಮುಂಡರಗಿ (ಗದಗ ತಾಲ್ಲೂಕು) ಧರ್ಮೋಪದೇಶಕ (Evangelist 1917-1919 

5. ಧಾರವಾಡ ಬೈಬಲ್ ಶಿಕ್ಷಕ ಮತ್ತು ಧರ್ಮೋಪದೇಶಕ (Bible Teacher at Basel Mission) 1920-1926 

6. ಹಾವೇರಿ ಧರ್ಮೋಪದೇಶಕ (Evangelist) 1926-1937 

7. ಹುಬ್ಬಳ್ಳಿ ಧರ್ಮೋಪದೇಶಕ (Evangelist) 1933-1941 



ಚೆನ್ನಪ್ಪರವರು ಬಾಸೆಲ್ ಮಿಶನ್ ಸಂಸ್ಥೆಯಲ್ಲಿ ವಿದ್ಯಾರ್ಥಿನಿಲಯದ ಮುಖ್ಯಸ್ಥರು ಮತ್ತು ಬೈಬಲ್ ಶಿಕ್ಷಕರಾಗಿದ್ದು, ಕ್ರಿಸ್ತ ಜೀವಿಕೆ ಹಾಗೂ ಕ್ರೈಸ್ತ ಧರ್ಮ ತತ್ವಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದೇ ಅವರ ಪ್ರಮುಖ ಕೆಲಸವಾಗಿತ್ತು. ಅವರ ಬೋಧನೆಯನ್ನು ಸವಿದ ವಿದ್ಯಾರ್ಥಿಗಳು ತಮ್ಮ ಬಾವಿ ಜೀವನದಲ್ಲೂ ಚೆನ್ನಪ್ಪರವರನ್ನು ನೆನೆದು ಅವರಂತೆ ಸರಳ ಬದುಕನ್ನು ರೂಪಿಸಿಕೊಳ್ಳಲು ಹಾತೊರೆಯುತ್ತಿದ್ದುದನ್ನು ಅವರ ಜೀವನ ಚರಿತ್ರೆಯಿಂದ ತಿಳಿಯಬಹುದಾಗಿದೆ. ಅವರು ಸೇವೆ ಸಲ್ಲಿಸಿದ ಊರುಗಳಲ್ಲಿ ಕ್ರೈಸ್ತರಷ್ಟೇ ಅಲ್ಲ ಲಿಂಗಾಯಿತರು, ಮಹಮದೀಯರು, ಬ್ರಾಹ್ಮಣರು ಮತ್ತು ಹಿಂದುಳಿದವರು, ಉತ್ತಂಗಿಯವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ಮಿಶನರಿಗಳ ಗುಪ್ತ ವರದಿಯೊಂದರಿಂದ ಖಚಿತವಾಗುತ್ತದೆ. ಉತ್ತಂಗಿಯವರು ಹುಬ್ಬಳ್ಳಿಯಲಿ ಕ್ರೈಸ್ತ ಸೇವಾ ವೃತ್ತಿಯಿಂದ ನಿವೃತ್ತರಾದುದು ದಿನಾಂಕ 01.01.1942ರಂದು. ಅವರು ತಮ್ಮ ಮಿಷನ್ನಿನ ಸೇವಾವಧಿಯಲ್ಲಿರುವಷ್ಟು ಕಾಲ ಪ್ರಮಾಣಿಕತೆಯಿಂದ ಮನ:ಪೂರ್ವಕವಾಗಿ ದುಡಿದ ಧೀಮಂತರು ಎಂದು ಮಿಶನರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರೆಂದೂ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕಾರ್ಯವನ್ನು ಎಸಗಲಿಲ್ಲ. ಯೋಗ್ಯತೆಯಲ್ಲಿ, ಬುದ್ಧಿವಂತಿಕೆಯಲ್ಲಿ, ಶೀಲ ಸಂಪತ್ತಿನಲ್ಲಿ, ಕಾರ್ಯಕ್ಷಮತೆಯಲ್ಲಿ ಮತ್ತು ಕ್ರೈಸ್ತ ಭಕ್ತಿಯಲ್ಲಿ ಯಾವ ವಿದೇಶಿ ಮಿಶನರಿಗಳಿಗಿಂತಲೂ ಅವರು ಕಡಿಮೆಯಾಗಿರಲಿಲ್ಲವೆಂದು ಇಲ್ಲಿಯವರೆಗಿನ ನಮ್ಮ ವಿವೇಚನೆಯಿಂದ ಅರಿತುಕೊಳ್ಳಬಹುದು. ಕೆಲವೊಂದು ವಿಷಯಗಳಲ್ಲಿ ಮಿಶನರಿಗಳಿಗಿಂತ ಮಿಗಿಲಾದವರಾಗಿದ್ದರೆಂದು ಅವರ ಬಗ್ಗೆ ಮಾಹಿತಿಗಳಿರುವ ಹೊತ್ತಿಗೆಗಳಿಂದ ತಿಳಿದುಕೊಳ್ಳುತ್ತೇವೆ. 

ಆ) ಕುಟುಂಬ: ಉತ್ತಂಗಿಯವರು ತಮ್ಮ ಪೂಜ್ಯರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದರು, ತನ್ನ ಮಗ ಸರ್ಕಾರಿ ಉನ್ನತ ಅಧಿಕಾರಿಯಾಗಿ ಸರ್ವರಿಂದಲೂ ಗೌರವಾನ್ವಿತನಾಗಬೇಕೆಂದು ಅವರ ತಂದೆಯ ಹೆಬ್ಬಯಕೆ. ಆದರೆ ಆತನ ತಾಯಿಯು ತನ್ನ ಮಗ ದೈವ ಭಕ್ತನಾಗಿದುದು ದೇವರ ಸೇವೆಗೆ ತನ್ನ ಜೀವನವನ್ನು ಮುಡುಪಾಗಿರಿಸಬೇಕೆಂದು ಇಚ್ಛಿಸಿದಳು, ಲೌಕಿಕ ಜೀವನದಲ್ಲಿ ಪ್ರಗತಿಯನ್ನು ಪಡೆಯಬೇಕೆಂದು ತಂದೆ ಬೋಧಿಸಿದರೆ, ಪಾರಮಾರ್ಥಿಕ ಜೀವನದಲ್ಲಿ ಬೆಳವಣಿಗೆ ಹೊಂದಬೇಕೆಂದು ತಾಯಿ ಮಗನಿಗೆ ತಿಳಿ ಹೇಳುತ್ತಿದ್ದರು. ಉತ್ತಂಗಿಯವರು ತನ್ನ ತಾಯಿಯಲ್ಲಿ ಅಚಲ ವಿಶ್ವಾಸವಿಟ್ಟ ಕಾರಣ ಆಕೆಯ ಬಲವಾದ ಆಸೆಯನ್ನು ಪೂರೈಸಿದರು. ಹೀಗೆ ತಾಯಿಯ ಮಾತಲ್ಲೇ ಸಂಪೂರ್ಣತೆಯನ್ನು ಕಂಡ ಉತ್ತಂಗಿಯವರು ತಮ್ಮ ಮದುವೆಯ ವಿಚಾರದಲ್ಲಿ ತಾಯಿಯ ನಿರ್ಣಯಕ್ಕೆ ಸಮ್ಮತಿಸಿದರು ತನ್ನ ತಾಯಿಯು ಆಯ್ಕೆ ಮಾಡಿದ ಕನ್ಯೆ ಸುಬ್ಬಕ್ತವ್ವಳನ್ನು ಮದುವೆಯಾದರು. 

ಉತ್ತಂಗಿಯವರು ಮದುವೆಯಾದದ್ದು ಕ್ರಿ.ಶ. 1908ರಲ್ಲಿ ಆಗ ಅವರಿಗೆ 27 ವರ್ಷ ವಯಸ್ಸು, ಮಡದಿ ಸುಬ್ಬಕ್ತವ್ವಳಿಗೆ ಆಗ 19 ವರ್ಷ ವಯಸ್ಸು, ಈ ಸುಬ್ಬಕ್ತವ್ವ ದಂಪತಿಗಳಿಗೆ ಚಂಪಾಬಾಯಿ, ಎಸ್ತರಬಾಯಿ, ಶಾಂತಾ ಬಾಯಿ, ಸುಭಧ್ರಬಾಯಿ, ಮೇರಿಬಾಯಿ, ಮತ್ತು ಸೇರಾಬಾಯಿ ಎಂಬ ಆರು ಜನ ಹೆಣ್ಣು ಮಕ್ಕಳು ಹಾಗೂ ಆಲ್‌ಫ್ರೆಡ್, ಹೆನ್ರಿ, ಜೇಮ್ಸ್, ಮತ್ತು ಡ್ಯಾನಿಯೇಲ ಎಂಬ ನಾಲ್ಕು ಜನ ಗಂಡು ಮಕ್ಕಳು, ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಅಕಾಲಿಕ ಮರಣವನ್ನಪ್ಪಿದ್ದರು. ಉತ್ತಂಗಿಯವರದು ಆದರ್ಶ ದಾಂಪತ್ಯ. ಸತಿಪತಿಗಳಿಬ್ಬರು ಅನ್ಯೋನ್ಯತೆಯಿಂದ ಬಾಳಿದವರು. ಅವರ ಮಧ್ಯೆ ನೆಲೆಗೊಂಡಿದ್ದು ಅಚಲ ಪ್ರೇಮ. ಬಾಳಿನುದ್ದಕ್ಕೂ ಬಡತನದಲ್ಲಿ ಬಂದ ಉತ್ತಂಗಿಯವರಿಗೆ ಸುಭಕ್ತವ್ವನ ತಾಳ್ಮೆ, ಸಹನೆ, ಪ್ರೀತಿ ವಿಶ್ವಾಸಗಳು ಅಕ್ಷಯ ನಿಧಿಯಾಗಿದ್ದು, ಮನಸಿನ ನೆಮ್ಮದಿಗೆ ಕಾರಣವಾಗಿದ್ದವೆನ್ನಬಹುದು, ಪತಿಯ ಮೇಲಿನ ಭಕ್ತಿ, ಶ್ರದ್ಧೆ, ಗೌರವ ಸುಭಕ್ತವ್ವನಲ್ಲಿ ಎಳ್ಳುಮೊನೆಯಷ್ಟೂ ಕೊರತೆಯಾಗಿರಲಿಲ್ಲ. ಅಸಹಾಯಕ ಸ್ಥಿತಿಯಲ್ಲಿ 25 ವರ್ಷಗಳವರೆಗೆ ಮಲಗಿದ ಹೆಂಡತಿಯ ಮೇಲಿನ ಪ್ರೀತಿ ಉತ್ತಂಗಿಯವರಲ್ಲಿ ಚಿಲುಮೆಯಾಗಿ ಸದಾ ಚಿಮ್ಮುತ್ತಲೇ ಇತ್ತು. ಜೀವನದ ಸುಖ-ದು:ಖಗಳಲ್ಲಿ ಸಮಭಾಗಿಯಾಗಿದ್ದ ತಮ್ಮ ನೆಚ್ಚಿನ ಹೆಂಡತಿಯ ಮೇಲೆ ಅಪಾರ ಪ್ರೀತಿ ಮತ್ತು ಗೌರವ. ಆ ನಿತ್ಯ ಸ್ಪೂರ್ತಿಯ ಚಿಲುಮೆ ಆಕೆಯ ನಿಧನದಿಂದಾಗಿ ದಿನಾಂಕ 08.02.1955ರಲ್ಲಿ ಬತ್ತಿ ಹೋಯಿತು. 


ಮುಂದಿನ ಸಂಚಿಕೆಯಲ್ಲಿ ಅವರ ಕೊಡುಗೆಯ ಬಗ್ಗೆ ತಿಳಿಯೋಣ. 

ಜನ್ಮ



ಕೋಟಿ ವೀರ್ಯಾಣುಗಳ 

ಓಟ ಪೈಪೋಟಿಯಲಿ, 

ಒಂದೇ ಒಂದರ ಗೆಲುವು 

ಅಂಡಾಣುವಿನ ಒಲವು 


ಹೊಕ್ಕುಳ ಬಳ್ಳಿಯಲಿ 

ಅರಳಿ ನಿಂತ ಹೀಚು, 

ಗರ್ಭ ಗುಡಿಯೊಳಗೆ 

ಪಾವನ ಪಿಂಡ ರೂಪ ! 



ನರ ನಾಡಿ ಮೂಳೆಯಲಿ 

ಅಸ್ಥಿಮಜ್ಜೆಯ ಅಂಟು, 

ನವ-ಮಾಸದ ಪವಾಡದಲಿ 

ನವಿರಾದ ಮಾಂಸದುಂಡೆ ! 


ಮೂಳೆ ಪಂಜರದೊಳಗೆ 

ಹೃದಯ ಢಮರುಗವು, 

ಢವಗುಟ್ಟುವ ಲಯ 

ಯಾರಿದಕೆ ಅಭಯ ? 


ಅವ್ವನ ಒಡಲ ಕಡಲು 

ಗರ್ಭ-ಚಿಪ್ಪು, ಜೀವ ಮುತ್ತು, 

ಜಗವೆಂಬ ಭರವಸೆಯು, 

ಜನ್ಮ ಜನ್ಮದ ಜಾಡು 


- ಡೇವಿಡ್ ಕುಮಾರ್ 

ಕ್ರಿಸ್ಮಸ್‌ ತಾರೆ ಬೆತ್ಲೆಹೇಮ ನಕ್ಷತ್ರ


·  ಫ್ರಾನ್ಸಿಸ್ ಎಂ ನಂದಗಾಂವ


ನಾವೀಗ ಕಿಸ್ಮಸ್‌ಆಚರಣೆಯ ಹೊಸ್ತಿಲಲ್ಲಿದ್ದೇವೆ. ಮನುಷ್ಯರನ್ನು ಪಾಪ ಮುಕ್ತರನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ರಕ್ಷಕ ಪ್ರಭು ಯೇಸುಸ್ವಾಮಿಯು ಭೂಮಿಗಿಳಿದ ಸಂದರ್ಭದ ಮತ್ತು ಸನ್ನಿವೇಶದ ಸ್ಮರಣೆಯು ಆಚರಣೆಯು ವಿವಿಧ ಬಗೆಯಲ್ಲಿ ಅನುರಣಿಸಲಿದೆ. ಪ್ರತಿಯೊಂದು ಕ್ರಿಸ್ಮಸ್‌ ಆಚರಣೆಯು ದೇವರು ತನ್ನ ಮಕ್ಕಳ ಮೇಲಿನ ಪ್ರೀತಿಯನ್ನು ಅನಾವರಣಗೊಳಸಲು, ತನ್ನ ಮಗನು ಭೂಮಿಯಲ್ಲಿ ಅವತಾರ ತಾಳುವ ವಿಸ್ಮಯವನ್ನು, ಅದ್ಭುತವನ್ನು, ಮಹಿಮೆಯನ್ನು ಸಾರುವ ಸಂಧರ್ಭವಾಗಿದೆ. 

ಮನೆಮನೆಗಳಲ್ಲಿ, ಚರ್ಚುಗಳಲ್ಲಿ ಅಸುಗೂಸು ಯೇಸುಸ್ವಾಮಿ ಪವಡಿಸಿದ್ದ ಗೋದಲಿಗಳ ನಿರ್ಮಾಣ, ಅವುಗಳನ್ನು ಬಗೆಬಗೆಯಲ್ಲಿ ಅಲಂಕರಿಸುವುದು, ಸಾಂತಾಕ್ಲಾಸ್ ಬಟ್ಟೆ ತೊಡುವ ಹಿರಿಯರು ಮಕ್ಕಳಿಗೆ ತಿನಿಸು, ಕಾಣಿಕೆಗಳನ್ನು ಕೊಡುವುದು, ಕ್ರಿಸ್ಮಸ್‌ ಗಾಯನ, ಕ್ರಿಸ್ಮಸ್ ಮರದ ಅಲಂಕಾರ ಮೊದಲಾದವು ಕ್ರಿಸ್ಮಸ್ ಆಚರಣೆಯ ಅವಿಭಾಜ್ಯ ಅಂಗಗಳಾಗಿವೆ. 

ಈ ಎಲ್ಲಾ ಆಚರಣೆಗಳಲ್ಲಿ ಪ್ರಮುಖವಾಗಿ ಕಣ್ಣು ಸೆಳೆಯುವ ನಕ್ಷತ್ರವನ್ನು ಕಟ್ಟುವ ಪ್ರಕ್ರಿಯೆಯ ಮೂಲ ಪ್ರೇರಣೆಯನ್ನು ನಾವು ಶಿಶು ಯೇಸುವನ್ನು ಕಾಣಲು ಬರುವ ಮೂರು ರಾಯರ ಭೇಟಿಯಲ್ಲಿ ಗುರುತಿಸಬಹುದಾಗಿದೆ. ಈ ಮೂವರು ಪೂರ್ವದ ನಾಡಿನ ರಾಯರು ಜೆರುಸಲೇಮಿಗೆ ಬಂದು ಇಸ್ರಯೇಲರ ಅರಸ ಯೇಸುಸ್ವಾಮಿ ಎಲ್ಲಿ? ಎಂದು ಕೇಳುತ್ತಾರೆ (ಮತ್ತಾಯ 2,1-2). ಈ ಮೂವರು ರಾಯರನ್ನು ಪಂಡಿತರು, ಜ್ಯೋತಿಷಿಗಳು ಒಮ್ಮೊಮ್ಮೆ ಅರಸರು ಎಂದೂ ಗುರುತಿಸಲಾಗುತ್ತದೆ. 

‘ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ; ಜುದೇಯ ನಾಡಿನ ಬೆತ್ಲೆಹೇಮ್ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. ``ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ, ಅವರೆಲ್ಲಿ?'' ಎಂದು ವಿಚಾರಿಸಿದರು; ``ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ'' ಎಂದರು.' ಇದು, ಮತ್ತಾಯನ ಶುಭಸಂದೇಶದಲ್ಲಿನ ಪಠ್ಯ. 

ಪವಿತ್ರ ಭೂಮಿ ಬೆತ್ಲೆಹೇಮಿನಲ್ಲಿರುವ ಪುರಾತನವಾದ ಕ್ರಿಸ್ತನ ಜನನವನ್ನು ಸಾರುವ `ಕ್ರಿಸ್ತನ ಜನನೋತ್ಸವ ಸ್ಮರಣೆಯ ಚರ್ಚ್' ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಮುಖವಾದ ಪವಿತ್ರವಾದ ಚರ್ಚು. ಅದು, ವಿಶ್ವಾಸಿಕರಿಗೆ ಬೆಚ್ಚನೆಯ ಅನುಭವ ನೀಡುವ ತಾಣವಾಗಿದೆ. ಯೇಸುಸ್ವಾಮಿ ಜನ್ಮ ತಾಳಿದ ಜಾಗದ ಮೇಲೆಯ ಈ ಚರ್ಚ್‌ಅನ್ನು ಕಟ್ಟಲಾಗಿದೆ. ಜನನೋತ್ಸವದ ಚರ್ಚಿನ ಪೂಜಾಂಕಣ – ಪೀಠದ ಅಡಿಯಲ್ಲಿ ಆ ಯೇಸುಸ್ವಾಮಿ ಜನ್ಮತಾಳಿದ ಸ್ಥಳವೆಂದು ಗುರುತಿಸಲಾಗುವ ಗುಹೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. 

ಯೆಹೂದಿಗಳಿದ್ದ ಪ್ರದೇಶದ ಮೇಲೆ ರೋಮನ್‌ಚಕ್ರವರ್ತಿಯು ಪ್ರಭುತ್ವ ಹೊಂದಿದ್ದ. ಅವನ ಆಣತಿಯ ಮೇರೆಗೆ ಆರಂಭವಾಗಿದ್ದ ಖಾನೆಸುಮಾರಿ ಅಂದರೆ ಜನಗಣತಿ ನಡೆಯುವ ಸಂದರ್ಭದಲ್ಲಿ ಜೆರುಸಲೇಮಿನಿಂದ ತಮ್ಮ ಪೂರ್ವಜರ ಊರು ಬೆತ್ಲೆಹೇಮಿಗೆ ತಂದೆ ಜೋಸೆಫ್ ಮತ್ತು ತುಂಬ ಗರ್ಭಿಣಿತಾಯಿ ಮರಿಯಳು ಕತ್ತೆಯ ಮೇಲೆ ಕುಳಿತು ಬಂದಿದ್ದರು. ಅವರಿಗೆ ತಂಗಲು ಎಲ್ಲೂ ಸ್ಥಳಾವಕಾಶ ಸಿಗದೇ ಕೊನೆಗೆ ಮನೆಯೊಂದರ ದನದ ಕೊಟ್ಟಿಗೆಯಲ್ಲಿ ಉಳಿದುಕೊಳ್ಳಬೇಕಾಯಿತು. ಅಲ್ಲಿ ಯೇಸುಸ್ವಾಮಿ ದೀನರಲ್ಲಿ ದೀನನಾಗಿ ಹುಟ್ಟಿದ ಎಂಬುದು ಜನಪರದ ನಂಬುಗೆ. ಅಂತೆಯೇ ಕೊಟ್ಟಿಗೆ, ಅದರಲ್ಲಿ ಗೋದಲಿಯಲ್ಲಿ ಅಸುಗೂಸು ಪ್ರಭು ಯೇಸುಸ್ವಾಮಿಯನ್ನು ಕೂರಿಸುವ ಸಂಪ್ರದಾಯ ಪ್ರಚಲಿತದಲ್ಲಿದೆ. 

ಆದಿ ಕಾಲದಿಂದಲೂ ಗುಹೆಗಳು ಯೆಹೂದಿಗಳ ಸಮಾಧಿ ತಾಣಗಳು. ಅದೇ ಪದ್ಧತಿ ಕ್ರೈಸ್ತರಲ್ಲೂ ಮುಂದುವರೆದಿತ್ತು. ಮೊದಮೊದಲು ರೋಮನ್ ಪ್ರಭುತ್ವವದ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಆದಿ ಕ್ರೈಸ್ತರಿಗೆ ಗುಹೆಗಳು ಪ್ರಮುಖ ಅಡುಗು ತಾಣಗಳು ಹಾಗೂ ಪ್ರಾರ್ಥನೆಗೆ ಒಟ್ಟು ಸೇರುವ ಸ್ಥಳಗಳಾಗಿದ್ದವು. ಈ ಐತಿಹಾಸಿಕ ಹಿನ್ನೆಲೆಯಲ್ಲಿ ಹಿಂದೆ ಪ್ರತಿಯೊಂದು ಚರ್ಚಿನಲ್ಲೂ ನೆಲಮಾಳಿಗೆಯಂಥ ಆಕಾರಗಳು ಇರುತ್ತಿದ್ದವು. ಮಾತೆ ಮರಿಯಳು ದರ್ಶನಕೊಟ್ಟಿದ್ದೂ ಗುಹೆಯಲ್ಲಿಯೆ. 

ಬೆತ್ಲೆಹೇಮ್‌ನ ಕ್ರಿಸ್ತ ಜನನೋತ್ಸವದ ಸ್ಮರಣೆಯ ಚರ್ಚಿನ ಗುಹೆಯೊಂದರಲ್ಲಿ ಕ್ರಿಸ್ತ ಜನಿಸಿದ ತಾಣವೆಂದು ಗುರುತಿಸಿದ ಜಾಗದಲ್ಲಿ ಜನನದ ಪ್ರತೀಕವಾಗಿ ಉಬ್ಬು ಶಿಲ್ಪದ ಬೆಳ್ಳಿಯ ನಕ್ಷತ್ರವೊಂದನ್ನು ಭೂಮಿಯ ಮೇಲೆ ಮಲಗಿಸಲಾಗಿದೆ. ಆ ಚರ್ಚಿಗೆ ಭೇಟಿಕೊಡುವ ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಕನಿಗೆ ಅದನ್ನು ಮುಟ್ಟಿ ಪ್ರಾರ್ಥನೆ ಸಲ್ಲಿಸಿ ಧನ್ಯತೆಯನ್ನು ಅನುಭವಿಸುವುದು ಅವರ ಜೀವನದ ಒಂದು ಅವಿಸ್ಮರಣೀಯವಾದ ಕ್ಷಣ. 

ಪೂರ್ವದ ಮೂವರು ರಾಯರು ಕಂಡ ನಕ್ಷತ್ರವನ್ನು ಗ್ರೀಕ್ ಭಾಷೆಯಲ್ಲಿ (ಅಸ್ತೆರ್) ಎಂದು ಕರೆದಿದ್ದಾರೆ. ಈ ಗ್ರೀಕ್ ಪದ ಎಸ್ತೆರ್‌ಎಂದರೆ, ಸೂರ್ಯ, ಚಂದ್ರರನ್ನು ಹೊರತುಪಡಿಸಿದ ಆಕಾಶದಲ್ಲಿ ಮಿನುಗುವ ಒಂದು ಆಕಾಶ ಕಾಯ. ಈ ಆಕಾಶ ಕಾಯ ನಕ್ಷತ್ರವಾಗಿರಬಹುದು, ಗ್ರಹವಾಗಿರಬಹುದು ಅಥವಾ ಧೂಮಕೇತುವೂ ಆಗಿರಬಹುದು. 

ಆ ಆಕಾಶ ಕಾಯ ಕ್ಷೀಣವಾಗಿ ಮಿನುಗಿರಬಹುದು. ಏಕೆಂದರೆ, ಅದು ಇಸ್ರಯೇಲ್‌ಅರಸ ಹೆರೋದ (ಮತ್ತಾಯ 2:7)ನ ಗಮನಕ್ಕೂ ಬಂದಿಲ್ಲ. ಆತ, ಆ ನಕ್ಷತ್ರ ನಿಮಗೆ ಕಂಡದ್ದು ಎಂದು? ಆತನನ್ನು ಕಾಣಲು ಬಂದ ಆ ಮೂವರು ರಾಯರನ್ನೇ ವಿಚಾರಿಸುತ್ತಾನೆ, 

`ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು' ಎಂದು ಮತ್ತಾಯನು ತನ್ನ ಸುವಾರ್ತೆಯಲ್ಲಿ ದಾಖಲಿಸಿದ್ದಾನೆ. 

ವಿಪರ್ಯಾಸವೆಂದರೆ, ಈ ಮೂವರು ರಾಯರು - ಪಂಡಿತರು. ಅವರಿಗೆ ಖಗೋಳ ಜ್ಞಾನ ಸಾಕಷ್ಟಿತ್ತು. ಅವರು, ನಕ್ಷತ್ರದ ಇರುವನ್ನಷ್ಟೇ ಗಮನಿಸಿಲ್ಲ. ಅದನ್ನು ಯೆಹೂದಿ ಅರಸನ ಬರುವಿಕೆಗೆ ಸಮೀಕರಿಸುವ, ವಿಶ್ಲೇಷಿಸುವ ಖಗೋಳ ಹಾಗೂ ಪುರಾತನ ಯೆಹೂದಿಗಳ ಇತಿಹಾಸದ ಅಪಾರಜ್ಞಾನವನ್ನು ಅವರು ಹೊಂದಿದ್ದರು. 

ಹೆರೋದನ ವಿಚಾರಣೆಯ ನಂತರ, ಯೆಹೂದಿಗಳ ಅರಸ ಬೆತ್ಲಹೇಮಿನಲ್ಲಿ ಹುಟ್ಟುವುದನ್ನು ಖಾತರಿಪಡಿಸಲು ಮುಖ್ಯಯಾಜಕರು ಮತು ಧರ್ಮಶಾಸ್ತ್ರಿಗಳು, `ಜುದೇಯನಾಡಿನ ಬೆತ್ಲೆಹೇಮೇ, ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನೂ ಅಲ್ಲ. ಕಾರಣ ನನ್ನ ಪ್ರಜೆ ಇಸ್ರಯೇಲರನ್ನು ಪರಿಪಾಲಿಸುವನು ನಿನ್ನಿಂದಲೇ ಉದಯಿಸಲಿರುವನು' ಎಂದು ಪ್ರವಾದಿ ಬರೆದಿದ್ದನ್ನು ತಿಳಿಸುತ್ತಾರೆ. 

ಈ ಮೂವರು ರಾಯರು, ನಾವು ಇಂದು ಕಾಣುವ ಕಾಲವನ್ನು ಗುಣಿಸಿ ಭಾಗಿಸಿ ನಮ್ಮ ಭವಿಷ್ಯವನ್ನು ಹೇಳುವ ಜೋತಿಷಿಗಳಂತೆ ಇರಲಿಲ್ಲ. ತಮ್ಮ ಅಪಾರ ಜ್ಞಾನವನ್ನು ಬಳಸಿ ದೇವಪುತ್ರನ ಜನನೋತ್ಸವ ಆಗಲೇ ಆಗಿ ಬಿಟ್ಟಿದೆ ಎಂದು ಅವರು ಲೆಕ್ಕ ಹಾಕಿಬಿಟ್ಟಿದ್ದರು. 

ಆಕಾಶ ಕಾಯಗಳ ಇರುವಿಕೆ, ಅವುಗಳ ಚಲನೆ, ನಕ್ಷತ್ರ ರಾಶಿಗಳು ಒಂದು ರೀತಿಯಲ್ಲಿ ಮಾನವನ ಭವಿಷ್ಯವನ್ನು ನಿರ್ಧರಿಸುತ್ತವೆ. ಮಾನವರ ಹುಟ್ಟಿದ ಗಳಿಗೆಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅವನ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಆತನ ಜೀವನದಲ್ಲಿನ ಒಳಿತು ಕೆಡಕುಗಳಿಗೆ ಆಕಾಶ ಕಾಯಗಳ ಚಲನೆಯ ಕಾರಣ, ಅದು ಅವರವರ ಗ್ರಹಗತಿ ಎಂದೂ ಹಲವಾರು ಧರ್ಮಗಳ ವಿಶ್ವಾಸಿಗಳು, ಧರ್ಮವನ್ನು ಪಾಲಿಸುವವರು ನಂಬುತ್ತಾರೆ. 

ಈ ಬಗೆಯ ಆಕಾಶ ಕಾಯಗಳ ಚಲನೆಯನ್ನುಆಯಾ ವ್ಯಕ್ತಿಯ ಜೀವನದ ಭವಿಷ್ಯದ ಘಟನಾವಳಿಗಳಿಗೆ ತಳಕುಹಾಕುವ ವಿದ್ಯಮಾನ- ಅಂಥ ತಿಳಿವಳಿಕೆ ಪುರಾತನ ಕಾಲದಿಂದಲೂ ವಿವಿಧ ಸಮುದಾಯಗಳಲ್ಲಿ ಇರುವುದನ್ನು ನಾವು ಕಾಣಬಹುದು. ಕ್ರಿಸ್ತ ಪೂರ್ವದ ಬೆಬಿಲೋನಿಯ ಸಾಮ್ರಾಜ್ಯದಲ್ಲೂಅಂಥ ತಿಳಿವಳಿಕೆ ಪ್ರಚಲಿತದಲ್ಲಿತ್ತು. 

ಆದರೆ, ಶ್ರೀಗ್ರಂಥ `ಬೈಬಲ್'ನಲ್ಲಿ ಮಾತ್ರ ಅಂಥದಕ್ಕೆ ಅವಕಾಶ ಕೊಟ್ಟಂತೆ ಇಲ್ಲ. ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು ಮೊದಲಾದವು ದೇವರ ಸೃಷ್ಟಿ. ಇತರ ಎಲ್ಲಾ ಸೃಷ್ಟಿಗಳಂತೆ ಇವೂ ಅಷ್ಟೇ. ಅವನ ಆಧೀನದಲ್ಲಿರುವ ಈ ಆಕಾಶಕಾಯಗಳನ್ನು ಆದರಿಸುವುದನ್ನು ಶ್ರೀಗ್ರಂಥ ಬೈಬಲ್ ನಿಷೇಧಿಸಿದೆ. 

ಇತ್ತೀಚೆಗಿನ ದಿನಗಳಲ್ಲಿ ವಿಜ್ಞಾನವನ್ನು ಐತಿಹಾಸಿಕ ಘಟನೆಗಳೊಂದಿಗೆ ತಳಕು ಹಾಕುವ ವಿಜ್ಞಾನಿಗಳು ಮತ್ತು ಖಗೋಳ ಶಾಸ್ತ್ರಜ್ಞರು, ಬೆತ್ಲೆಹೇಮ್ ನಕ್ಷತ್ರದ ಅರಿವಿನ ಕುರಿತು ವಿಶೇಷ ಆಸಕ್ತಿಯಿಂದ ಅಧ್ಯಯನ ನಡೆಸಲು ಮುಂದಾಗಿದ್ದಾರೆ. 

ಮೂವರು ರಾಯರು, ಆಕಾಶದಲ್ಲೊಂದು ಜರುಗಿದ ಅಪರೂಪದ ವಿದ್ಯಮಾನವನ್ನು ದಾಖಲಿಸಿದ್ದಾರೆ. ಜೊತೆಗೆ ಅವರು ಅದನ್ನು ಜುದೇಯ ಪ್ರಾಂತ್ಯದ ಅರಸನ ಜನನದ ಸೂಚಕ ಎಂದು ತರ್ಕಿಸಿರುವುದು ಆಸಕ್ತಿದಾಯಕ ಅಧ್ಯಯನದ ವಿಷಯವಾಗಿದೆ. 

ಕ್ರಿಸ್ತ ಪೂರ್ವ ಐದನೇ ವರ್ಷದಲ್ಲಿ ಸುಮಾರು ಎಪ್ಪತ್ತು ದಿನಗಳ ಕಾಲ ಉದ್ದ ಬಾಲದ ಧೂಮಕೇತುವೊಂದು ಕಾಣಿಸಿದ್ದನ್ನು ಚೀನಾದ ಪಂಡಿತರು ದಾಖಲಿಸಿದ್ದನ್ನು ಪ್ರಸ್ತಾಪಿಸುವ ಹಂಪ್ರಿ ಸಿ.ಜೆ ಎನ್ನುವ ಖಗೋಳ ತಜ್ಞರು, `ಅದುವೆ ಬಹುಶಃ ಮೂರು ರಾಯರು ಕಂಡಿದ್ದ, ಅವರನ್ನು ಬೆತ್ಲಹೇಮಿಗೆ ಕರೆದೊಯ್ದ ನಕ್ಷತ್ರವಾಗಿರಬಹುದು' ಎಂದು ಹೇಳುತ್ತಾರೆ. ದ ಸ್ಟಾರ್‌ಆಫ್ ಬೆತ್ಲಹೇಮ್, ಎ ಕಾಮೆಟ್‌ಇನ್ 5 ಬಿ ಸಿ ಆಂಡ್ ದ ಡೇಟ್‌ಆಫ್‌ಕ್ರೈಸ್ಟ್‌ಸ ಬರ್ಥ (ಟೆಂಡೇಲ್ ಬುಲೆಟಿನ್ 43 [1992] ಪುಟ 31-36) ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಆ ಧೂಮಕೇತುವು ಸುಮಾರು 70 ದಿನಗಳ ಕಾಲ ಕಾಣಿಸಿಕೊಂಡಿತ್ತು ಎಂದು ಆ ಕಾಲದ ಅಂದರೆ ಕ್ರಿಸ್ತಪೂರ್ವ 5ನೇ ವರ್ಷದ ಸುಮಾರಿನಲ್ಲಿದ್ದ ಚೀನಾದ ಖಗೋಲ ಪಂಡಿತರು ದಾಖಲಿಸಿದ್ದಾರೆ. 

ಮೂವರು ರಾಯರು ಕಂಡ ನಕ್ಷತ್ರದ ಬಗೆಗೆ ಇಂತಹ ಹತ್ತಾರು ವಿವರಣೆಗಳನ್ನು ನಾವು ಗಮನಿಸಬಹುದು. ಆದರೆ, ಯಾವದೂ ಇದಮಿತ್ಥಂ ಎಂದು ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. 

ಮತ್ತಾಯನ ಶುಭಸಂದೇಶದಲ್ಲಿ ನಕ್ಷತ್ರಕ್ಕೆ ಅಷ್ಟೇನೂ ಮಹತ್ವದ ಸ್ಥಾನವಿಲ್ಲ. ಅದರಲ್ಲಿ ಅಸುಗೂಸು ಪ್ರಭು ಯೇಸುಸ್ವಾಮಿಯ ಪ್ರಸ್ತಾಪವೇ ಬಹಳ ಮುಖ್ಯ. ಎಂಥ ನಕ್ಷತ್ರ ಕಂಡಿತು? ಹೇಗೆ ಕಂಡಿತು? ಎನ್ನುವುದಲ್ಲ, ಅದು ಏಕೆ ಕಂಡಿತು? ಎನ್ನುವುದು ಮುಖ್ಯ. ಮೂರು ರಾಯರು ಕಂಡ ನಕ್ಷತ್ರವು ಶ್ರೀಗ್ರಂಥ ಬೈಬಲ್ ನಲ್ಲಿ ಹಲವಾರು ಮೂಲೋದ್ದೇಶಗಳನ್ನು ಹೊಂದಿರುವುದನ್ನು ಗುರುತಿಸಬಹುದು. ಹೀಗೆ ಗುರುತಿಸುವುದರಿಂದ ಗೊಂದಲಗಳು ನಿವಾರಣೆ ಆಗಬಹುದೇನೋ? 

ಆರಂಭದಿಂದಲೂ ಶುಭಸಂದೇಶಗಳ ಉದ್ದೇಶ ಸ್ಪಟಿಕದಷ್ಟು ಸ್ಪಷ್ಟವಾಗಿದೆ. ಜಗದೋದ್ಧಾರಕ ಯೇಸುಸ್ವಾಮಿಯ ಇತಿಹಾಸವೇ ಶುಭಸಂದೇಶ/ಸುವಾರ್ತೆ. ಈ ಪ್ರಭು ಯೇಸುಸ್ವಾಮಿ, ದಾವಿದರಾಜನ ಮಗ ಜೊತೆಗೆ ಅಬ್ರಹಾಮನ ಮಗನೂ ಹೌದು. ಮತ್ತಾಯನ ಸುವಾರ್ತೆಯ ಒಂದನೇ ಅಧ್ಯಾಯದ ಮೊದಲ ಚರಣ 'ಅಬ್ರಹಾಮನ ಮನೆತನಕ್ಕೆ ಸೇರಿದ ದಾವಿದ ಕುಲದ ಯೇಸುಕ್ರಿಸ್ತರ ವಂಶಾವಳಿ'ಯನ್ನು ಉಲ್ಲೇಖಿಸಿದೆ. ಜಗದೋದ್ಧಾರಕ (ಮಸೀಹ) ಯೇಸುಸ್ವಾಮಿಯ ಹುಟ್ಟಿನೊಂದಿಗೆ ಸಮೀಕರಣಗೊಳ್ಳುವ ಈ ವಂಶಾವಳಿಯ ಚಿತ್ರಣವು ಯೆಹೂದಿಗಳ ಚರಿತ್ರೆಯನ್ನು ಹಿಡಿಯಲ್ಲಿ ಹಿಡಿದಿಟ್ಟಿದೆ. 

ಮತ್ತಾಯನ ಸುವಾರ್ತೆಯ 1ನೇ ಅಧ್ಯಾಯದ 2ರಿಂದ 17ರವರೆಗಿನ ಚರಣಗಳು- ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು .. .. .. ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫರು ಹುಟ್ಟಿದರು. ಈ ಮರಿಯಳಿಂದಲೇ `ಕ್ರಿಸ್ತ' ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು. ಹೀಗೆ ಒಟ್ಟು ಅಬ್ರಹಾಮನಿಂದ ದಾವಿದನವರೆಗೆ ಹದಿನಾಲ್ಕು, ದಾವಿದನಿಂದ ಬಾಬಿಲೋನಿನ ದಾಸ್ಯ ದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯ ದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು- ಎಂಬುದನ್ನು ವಿಶದಪಡಿಸುತ್ತವೆ. 

ಯೆಹೂದಿಗಳ ಚರಿತ್ರೆಯಲ್ಲಿ ಯೇಸುಸ್ವಾಮಿ ಹುಟ್ಟುವ ಮೊದಲು ಪ್ರಸ್ತಾಪವಾಗುವ ಸಂಗತಿಗಳಲ್ಲಿ ಅಬ್ರಹಾಂ, ದಾವಿದ ಮತ್ತು ಬ್ಯಾಬಿಲೋನಿಯದಲ್ಲಿಇಸ್ರಯೇಲರು ದಾಸ್ಯಕ್ಕೆ ಒಳಗಾಗಿದ್ದ ಸಂಗತಿಗಳು ಮಹತ್ವದ ಹೆಜ್ಜೆಯ ಗುರುತುಗಳು. ಈ ಮೂರು ಸಂಗತಿಗಳು ನಕ್ಷತ್ರಗಳೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿವೆ. 

ಆದಿಕಾಂಡದ 15ನೇ ಆಧ್ಯಾಯ, ಐದನೆಯ ಚರಣದಲ್ಲಿ ಸರ್ವೇಶ್ವರರು ಅಬ್ರಹಾಮನನ್ನು ಹೊರಗೆ ಕರೆತಂದು `ಆಕಾಶದಕಡೆ ನೋಡು, ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು' ಎಂದಿದ್ದಾರೆ. 

ಈ ಮಾತುಗಳೊಂದಿಗೆ ಅಬ್ರಹಾಮನನ್ನು ಆರ್ಶೀವದಿಸುವ ಸ್ವಾಮಿ ಸರ್ವೇಶ್ಚರರು, ಅಬ್ರಹಾಮನನ್ನು ಆದಿಯಲ್ಲಿ ನಿಲ್ಲಿಸಿ, ತನ್ನಏಕಮಾತ್ರ ಪುತ್ರ ಯೇಸುಸ್ವಾಮಿಯನ್ನು ವಂಶಾವಳಿಯ ಕೊನೆಯ ಕೊಂಡಿಯಾಗಿ ತೋರಗೊಡುತ್ತಾರೆ. 

ಇದಕ್ಕೂ ಮೊದಲು, ಆದಿಕಾಂಡದ 12ನೇ ಅಧ್ಯಾಯ ಎರಡು ಮತ್ತು ಮೂರನೆಯ ಚರಣಗಳಲ್ಲಿನ ಸ್ವಾಮಿ ಸರ್ವೇಶ್ವರರ ಮಾತುಗಳು, ಅಬ್ರಹಾಮನ ವಂಶಾವಳಿಯ ಕೊಂಡಿಯ ಮೂಲ ಆಶಯವನ್ನು ಸ್ಪಷ್ಟಪಡಿಸುವುದನ್ನು ಗಮನಿಸದೇಇರಲಾಗದು. 

ಆ ಪಠ್ಯದ ಪೂರ್ಣ ಪಾಠ ಇಲ್ಲಿದೆ. 'ಸರ್ವೇಶ್ವರ ಅಬ್ರಾಮನಿಗೆ ಹೀಗೆಂದರು- ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನು ಬಿಟ್ಟು ನಾನು ತೋರಿಸುವ ನಾಡಿಗೆ ಹೊರಡುಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ. ನಿನ್ನನ್ನು ಹರಸುವವರನು ನಾ ಹರಸುವೆ. ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.' 

ಸ್ವಾಮಿ ಸರ್ವೇಶ್ವರರ ಆಶಯದಂತೆ, ಅವರು ಅಬ್ರಹಾಮರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ವಾಗ್ದಾನವು ಅವನ ವಂಶದ ಕುಡಿಯಾಗಿ ಬರುವ ಯೇಸುಸ್ವಾಮಿಯ ಜನನದೊಂದಿಗೆ ಈಡೇರಿದಂತಾಗಿದೆ. 

ಸುದೀರ್ಘವಾದ ಐತಿಹಾಸಿಕ ಹಿನ್ನೆಲೆ ಇರುವ ಇಸ್ರಯೇಲ್‌ಜನಕ್ಕೆ ಯಾವುದೇ ಬಗೆಯಲ್ಲಿ ಸಂಬಂಧಪಡದ ದೂರದ ಪೂರ್ವದ ನಾಡಿನ ಮೂವರು ಪಂಡಿತರು, ನಕ್ಷತ್ರವನ್ನು ಕಂಡು ಅದನ್ನು ಹಿಂಬಾಲಿಸಿ ಅಸುಗೂಸು ಯೆಹೂದ್ಯರ ಅರಸ ಪ್ರಭು ಯೇಸುಸ್ವಾಮಿಯ ದರ್ಶನಕ್ಕೆ ಹಾತೊರೆದು ಬರುವುದು, ಇಸ್ರೇಲ್‌ಜನರ ವಂಶಾವಳಿಯ ಕಥಾನಕಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟಿದೆ. 

ಶತ ಶತಮಾನಗಳ ಹಿಂದೆಯೇ ಸ್ವಾಮಿ ಸರ್ವೇಶ್ವರರು ನೀಡಿದ ವಾಗ್ದಾನದಂತೆ, ಅಬ್ರಹಾಮನು ಮುಂದೆ ತನ್ನ ಸಂತತಿಯು ಸಾಂಕೇತಿಕವಾಗಿ ಆಗಸದಲ್ಲಿನ ಅಗಣಿತತಾರಾ ಗಣಗಳಂತೆ ರೂಪ ತಳೆಯುವುದನ್ನು ಮುಂಗಾಣಿದ್ದ. ಆದಿಕಂಡ 15ನೇ ಅಧ್ಯಾಯದ 5ನೇ ಚರಣವನ್ನುಇಲ್ಲಿ ಸ್ಮರಿಸಿಕೊಳ್ಳಬಹುದು. 

ಈಗ, ಪ್ರಭು ಯೇಸುಸ್ವಾಮಿಯು ಹುಟ್ಟಿದ ಸಂದರ್ಭದಲ್ಲಿ, ಮೂಡಣ ದಿಕ್ಕಿನ ದೇಶಗಳ ಪಂಡಿತರು ಅಬ್ರಹಾಮನ ಸಂತತಿಯ ಕುಡಿಯಾದ ಅಸುಗೂಸು ಯೇಸುಸ್ವಾಮಿಯನ್ನು ಕಾಣಲು, ನಕ್ಷತ್ರವನ್ನು ಹಿಂಬಾಲಿಸಿಕೊಂಡು ಬರುತ್ತಾರೆ. ಮೂಡಣ ದಿಕ್ಕಿನ ಪಂಡಿತರು ಆಗಸದಲ್ಲಿ ಕಂಡ ನಕ್ಷತ್ರವನ್ನು ಅಬ್ರಹಾಮನ ಸಂತತಿಯ ಕುಡಿಯೊಂದಿಗೆ ಸಮೀಕರಿಸಿಕೊಂಡು ಇಸ್ರೇಲ ನಾಡಿಗೆ ಪ್ರಯಾಣ ಬೆಳಸುತ್ತಾರೆ. 

ಇಸ್ರೇಲ್ ನಾಡಿನ ನಜರೇತಿನ ನಿವಾಸಿಗಳಾಗಲಿ, ಯೆಹೂದಿಗಳ ಅರಸ ಹೆರೋದನಾಗಲಿ ಇದ್ರಯೇಲ್‌ಜನಾಂಗದ ನಿಜವಾದ ಅರಸ ಮತ್ತು ಪ್ರವಾದಿ ಯೇಸುಸ್ವಾಮಿಯನ್ನು ಕಂಡು ಆರಾಧಿಸಲು ಮುಂದಾಗಲೇ ಇಲ್ಲ. ಆದರೆ, ದೂರದ ಮೂಡಣ ನಾಡಿನ ಪಂಡಿತರು ಅಂದರೆ ಜ್ಯೋತಿಷಿಗಳು ಇಸ್ರಯೇಲರ ಅರಸನನ್ನು ಮೊದಲು ಕಂಡು, ಕಾಣಿಕೆಗಳನ್ನು ಸಮರ್ಪಿಸಿ ಆರಾಧಿಸುತ್ತಾರೆ. 

ಇದನ್ನು ಮತ್ತಾಯನ ಸುವಾರ್ತೆಯ 2ನೇ ಅಧ್ಯಾಯ ಹನ್ನೊಂದನೆಯ ಚರಣದಲ್ಲಿ ಗಮನಿಸಬಹುದು. `ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನುತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮತಮ್ಮ ಬೊಕ್ಕಸಗಳನ್ನು ಬಿಚ್ಚಿಚಿನ್ನ, ಪರಿಮಣದ್ರವ್ಯ ಮತ್ತು ರಕ್ತಬೋಳ- ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು.' 

ಇದರೊಂದಿಗೆ ಪರಸ್ಪರ ಪೂರಕವಾದ ಸಂಬಂಧಗಳನ್ನು ಹೊಂದಿದ ನಕ್ಷತ್ರ, ಪಂಡಿತರ ಮತ್ತು ಶುಭಸಂದೇಶಗಳ ಆದಿಯಲ್ಲಿ ಬರುವ ಅಬ್ರಹಾಮನ ಪ್ರಸ್ತಾಪ ಸರ್ವೇಶ್ವರ ದೇವರು, ಆದಿಕಾಂಡದಲ್ಲಿ ಅಬ್ರಹಾಮನಿಗೆ ನೀಡಿದ ವಾಗ್ದಾನ ನೆರವೇರಿದಂತಾಗುತ್ತದೆ. 

ಇನ್ನು ದಾವಿದ ಅರಸನ ಕತೆಗೆ ಬರೋಣ. ಇಸ್ರಯೇಲ್‌ಇತಿಹಾಸದಲ್ಲಿ ದಾವಿದ ಅರಸನದು ದೊಡ್ಡ ಹೆಸರು. ಶ್ರೀಗ್ರಂಥ ಬೈಬಲಿನ ಹಳೆಯ ಒಡಂಬಡಿಕೆಯ ದಾವಿದ ಅರಸ, ಹಳೆಯ ಒಡಂಬಡಿಕೆ ಅಷ್ಟೇ ಅಲ್ಲ ಹೊಸ ಒಡಂಬಡಿಕೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುವನು. ಯೆಹೂದಿಗಳ ಶತಶತಮಾನದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನಮಾನ ಹೊಂದಿರುವ ಆತ, ಸರ್ವೇಶ್ವರ ದೇವರು ಆಯ್ದುಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬ ಎನ್ನವುದನ್ನು ಮರೆಯಲಾಗದು. ಅಷ್ಟೇ ಅಲ್ಲ ಶತಶತಮಾನಗಳಿಂದ ಯೆಹೂದಿ ಪೂಜಾವಿಧಿಗಳಲ್ಲೂ ದಾವಿದ ಅರಸನನ್ನು ಸದಾ ಸ್ಮರಿಸಿಕೊಳ್ಳಲಾಗುತ್ತದೆ. 

ಪ್ರಮುಖವಾಗಿ ದಾವಿದ ಅರಸನನ್ನು ಹಿಬ್ರೂ ಭಾಷೆಯಲ್ಲಿ ಮಾಗೆನ್(ಮೋಗೆನ್) ಡೆವಿಡ್‌ಎಂದು ಕರೆಯಲಾಗುವ ದಾವಿದನ ಗುರಾಣಿ- ದಾವಿದ ನಕ್ಷತ್ರ ಎಂಬ ಸಂಕೇತದಲ್ಲಿಯೇ ಯೆಹೂದಿ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ಅದೇ ಸಂಕೇತವನ್ನು ಸೊಲೊಮನನ (ಸಮುವೇಲನ) ಕಾಲದಿಂದಲೂ ಬಳಸಲಾಗುತ್ತಿದೆ. ಈ ದಾವಿದ ನಕ್ಷತ್ರವನ್ನು ಪ್ರಸಕ್ತ ಆಧುನಿಕ ಕಾಲದ ಇಸ್ರಯೇಲ್ ನಾಡಿನ ಧ್ವಜದಲ್ಲೂ ನಾವು ಕಾಣಬಹುದಾಗಿದೆ. 

ಶ್ರೀ ಗ್ರಂಥ ಪವಿತ್ರ ಬೈಬಲಿನ ಹಳೆಯ ಒಡಂಬಡಿಕೆಯ ಪಠ್ಯದಲ್ಲಿ ಒದಗಿಸಿದ ಮಾಹಿತಿ ಪುರಾತನ ಇಸ್ರಯೇಲರು ದಾವಿದನ ವಂಶಾವಳಿಯಲ್ಲಿಯೇ ಅರಸು ಪ್ರವಾದಿಯೊಬ್ಬ ಬರಲಿರುವನೆಂಬ ನಿರೀಕ್ಷೆ ಇರುವುದನ್ನು ಪ್ರವಾದಿ ನಾತಾನನ ದರ್ಶನದ ಮಾತು ಸ್ಪಷ್ಟವಾಗಿ ಬಿಡಿಸಿಟ್ಡಿದೆ. 

ಈ ಕುರಿತ ಮಾಹಿತಿ ಹಳೆಯ ಒಡಂಬಡಿಕೆಯ ಸಮುವೇಲನು -ದ್ವಿತೀಯ ಭಾಗದಲ್ಲಿ ಏಳನೇ ಅಧ್ಯಾಯದ 12ರಿಂದ 16ರ ವರೆಗಿನ ಚರಣಗಳಲ್ಲಿ ತಿಳಿಸಿರುವುದನ್ನು ಕಾಣಬಹುದು. 

`ನಿನ್ನಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು, ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪು ಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುತ್ತೇನೆ. ಆದರೆ, ನನ್ನ ಕೃಪೆ, ನಿನ್ನಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದ ಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು' ನಾತಾನನು ತನಗಾದ ದರ್ಶನದ ಮಾತುಗಳನ್ನೆಲ್ಲ ದಾವಿದನಿಗೆ ಹೇಳಿದನು.' 

ಒಂದಲ್ಲ ಒಂದು ದಿನ ಸರ್ವೇಶ್ವರ ಪಿತದೇವರು, ದಾವಿದಅರಸನ ಮಾದರಿಯಲ್ಲಿಯೇ ಒಬ್ಬಅಭಿಷಕ್ತ ಅರಸ (ಮೆಸ್ಸಾಯ/ಉದ್ಧಾರಕ) ನನ್ನು ಕಳಿಸಿಕೊಡುವನು, ಅವನು ದೇವರೇ ಆರಿಸಿಕೊಂಡ ದೇವಜನರನ್ನು ಅಂದರೆ ತಮ್ಮನ್ನು ಶೋಷಣೆಗಳಿಂದ ಬಿಡುಗಡೆ ಮಾಡುವನು, ಸಕಲ ಕೇಡುಗಳಿಂದ ಪಾರುಮಾಡುವನು, ಅವರಿಗೆ ಅತಿಶಯ ಕೀರ್ತಿ ಗೌರವ ಹಾಗೂ ಖ್ಯಾತಿಯನ್ನು ತಂದುಕೊಡುವ ಎಂಬ ಆಶಯ ಯೆಹೂದಿ ಜನಗಳು ಹೊಂದಿದ್ದರು. 

ಈ ಅರಸನನ್ನು ಜೆಸ್ಸಿಯನ ಸಂತಾನದ ಕುಡಿ ಎಂದು ಪ್ರವಾದಿ ಯೆಶಾಯನು ಪ್ರವಾದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬೇತ್ಲೆಹೇಮಿನವನಾದ ಜೆಸ್ಸೆಯ ಇಸ್ರೇಲರ ಪ್ರಮುಖ ಅರಸನಾಗಿದ್ದ ದಾವಿದನ ತಂದೆ. 

ಪ್ರವಾದಿ ಯೆಶಾಯನಗ್ರಂಥದ 11ನೇ ಅಧ್ಯಾಯದ 1 ರಿಂದ 12ರವರೆಗಿನ ಚರಣಗಳು ಈ ಪ್ರವಾದನೆಯನ್ನು ಸಾರುತ್ತವೆ. `ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು ಅದರ ಬೇರಿನಿಂದ ಫಲಿಸುವುದೊಂದು ತಳಿರು, ನೆಲೆಸುವುದಾತನ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ, ಸರ್ವೇಶ್ವರನ ಅರಿವನು ಭಯವನು ಹುಟ್ಟಿಸುವ ಆತ್ಮ. ಅಹುದು ನೆಲೆಸುವುದಾತನ ಮೇಲೆ ಸರ್ವೇಶ್ವರನ ಆತ್ಮ. 

ಸರ್ವೇಶ್ವರನ ಭಯಭಕ್ತಿ ಅವರಿಗೆ ಪರಿಮಳದಂತೆ, ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ. ನಾಡದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ. ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ, ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸಧ್ಧರ್ಮವೇ ಆತನ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ. 

ಬಾಳುವವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆ ಚಿರತೆಗಳ ಜೊತೆಗೆ. ಮೊಲೆಯುಣ್ಣುವವು ಕರು ಕೇಸರಿಗಳು, ಒಟ್ಡಿಗೆ ನಡೆಸುವುದವುಗಳನು ಚಿಕ್ಕ ಮಗು ಮೇಯಿಸುವುದಕೆ. ಮೇಯುವವು ಕರಡಿ, ಆಕಳುಗಳು ಒಟ್ಟಿಗೆ, ಮಲಗುವುವು ಅವುಗಳ ಮರಿಗಳ ಜೊತೆಗೆ, ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ. ಆಡುವುದು ಮಗುವು ನಾಗರ ಹುತ್ತದ ಮೇಲೆ, ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ. 

ಹಾನಿಯನು ಕೇಡನು ಮಾಡಲಾರರು ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಧ್ಯಾನಧರೆಯ ಮೇಲೆ. 

ಆ ದಿನದಂದು ಜೆಸ್ಸೆಯನ ಸಂತಾನದಕುಡಿ ಸರ್ವ ಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನು ರಾಷ್ಟ್ರಗಳು ಆಶ್ರಯಿಸುವುವು, ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು. ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ (ಐಥಿಯೋಪಿಯ), ವಿಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ- ಈ ಸ್ಥಳಗಳಿಂದ ಸರ್ವೇಶ್ವರತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈ ನೀಡುವರು. ಇಸ್ರಯೇಲರಲಿ ಸೆರೆಹೋದವರನು ಜುದೇಯದಿಂದ ಚದುರಿ ಹೋದವರನು ಕರೆತರಲು ಧರೆಯ ಚತುರ್ದಿಕ್ಕುಗಳಿಂದವರನು ರಾಷ್ಟ್ರಗಳಿಗೆ ಗುರುತಾಗಿ ಏರಿಸುವನಾತ ಧ್ವಜವನು.' 

ಸಂಖ್ಯಾಕಾಂಡದ ಪ್ರವಾದಿ ಬಿಳಾಮನು, ನಕ್ಷತ್ರಪ್ರಾಯನು ಯಕೋಬ ವಂಶದಲ್ಲಿ ಉದಯಿಸುವನು ಎಂದು ಭವಿಷ್ಯ ನುಡಿದಿದ್ದಾನೆ. ಆ ನಕ್ಷತ್ರಪ್ರಾಯನು ದೇವಸುತ ಪ್ರಭುಯೇಸುಸ್ವಾಮಿಯಲ್ಲದೇ ಬೇರಾರೂಅಲ್ಲ. 

ಸಂಖ್ಯಾಕಾಂಡದ 24ನೇ ಅಧ್ಯಾಯ 17ನೇ ಚರಣದಲ್ಲಿ ಪ್ರವಾದಿ ಬಿಳಾಮನು ನುಡಿದ ಭವಿಷ್ಯವಾಣಿ ಇಂತಿದೆ: `ಒಬ್ಬಾತನನ್ನು ನೋಡುತ್ತಿದ್ದೇನೆ, ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸದ್ದಾನೆ ಯಕೋಬ ವಂಶದಲ್ಲಿ, ರಾಜದಂಡ ಹಿಡಿದವನ ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿ ಹಾಕಿದ್ದಾನೆ ಮೋವಾಬ್ಯರ ತಲೆಯನ್ನು, ಕೆಡವಿಬಿಟ್ಟಿದ್ದಾನೆ ವೀರರೆಲ್ಲನ್ನು.' 

ಸಂಖ್ಯಾಕಾಂಡ ಪ್ರವಾದಿ ಬಿಳಾಮನು ನುಡಿದರಾಜದಂಡ ಹಿಡಿಯುವವನ ಭವಿಷ್ಯವಾಣಿ ಹಾಗೂ ದೇವಪ್ರಜೆಗಳ ರಕ್ಷಣೆಗೆ ಉದ್ಧಾರಕನೊಬ್ಬ ಬರಲಿರುವನೆಂಬ ಭರವಸೆ ಯಶಸ್ವಿಯಾಗಿ ಈಡೇರಿದುದನ್ನು ನಾವು ಶುಭಸಂದೇಶಕರ್ತ ಮತ್ತಾಯನ ಸುವಾರ್ತೆಯಲ್ಲಿ ಗಮನಿಸದೇ ಇರಲಾಗದು. 

ಪ್ರಭು ಯೇಸುಸ್ವಾಮಿಯ ಹುಟ್ಟಿನ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿರುವ ನಕ್ಷತ್ರವು, ಆತನು ಯೆಹೂದ್ಯರ ಪ್ರಮುಖ ಅರಸ ದಾವಿದನೊಂದಿಗೆ ಹೊಂದಿರುವ ಸಂಬಂಧವನ್ನು ಮತ್ತಷ್ಟು ಸ್ಥಿರಗೊಳಿಸುತ್ತದೆ. 

ಯೆಹೂದ್ಯರ ಬ್ಯಾಬಿಲೋನಿನಲ್ಲಿನ ದಾಸ್ಯದ ದೇಶಾಂತರ ವಾಸವು, ಯೆಹೂದ್ಯರ ಶ್ರೀಮಂತ ಪುರಾತನ ಇತಿಹಾಸದಲ್ಲಿನ ಒಂದು ಕತ್ತಲೆಯ ಕಾಲವಾಗಿತ್ತು. 

ಹಳೆಯ ಒಡಂಬಡಿಕೆಯ ಪ್ರವಾದಿ ಯೆರೆಮೀಯನ ಗ್ರಂಥದಲ್ಲಿ ಬರುವ 2ನೇ ಅಧ್ಯಾಯ 31 ಮತ್ತು 32ನೇ ಚರಣಗಳು, ಬ್ಯಾಬಿಲೋನಿನ ದಾಸ್ಯದ ದಿನಗಳಲ್ಲಿ ದೇವರು ಸರ್ವೇಶ್ವರನೊಂದಿಗೆ ಯೆಹೂದಿಗಳ ಸಂಬಂಧ ಏರುಪೇರಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. 

ದೇವರು `ಇಸ್ರಯೇಲ್‌ಜನರೇ, ದುಷ್ಟ ಸಂತತಿಯವರೇ ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿರಿ; ನಾನು ನಿಮಗೆ ಬೆಂಗಾಡಾಗಿಯೂ ಗಾಢಾಂಧಕಾರವಾಗಿಯೂ ಪರಿಣಮಿಸಿದ್ದೆನೊ? ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ; ನಿನ್ನ ಬಳಿಗೆ ಇನ್ನು ಬಾರೆವು ಎಂದು ನನ್ನ ಜನರಾದ ನೀವು ಹೇಳುವುದು ಹೇಗೆ? .. .. .. ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ' ಎಂದಂತೆ ಪ್ರವಾದನೆ ಮಾಡಿದ ಪ್ರವಾದಿ ಯರೆಮೀಯನ ಪ್ರವಾದನೆ ದೇವರು ಮತ್ತು ದೇವಜನರ ನಡುವಿನ ಸಂಬಂಧ ಏರುಪೇರಾಗಿತ್ತು ಎನ್ನುವುದನ್ನು ಅರಹುತ್ತದೆ. ಅದೇ ಮಾತುಗಳು ದೇವರು ತನ್ನ ದೇವಜನ ಯೆಹೂದಿಗಳ ತಪ್ಪುಗಳನ್ನು ಮನ್ನಿಸುವುದನ್ನು ಮತ್ತು ಆತ ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ಸಹ ಒತ್ತಿ ಹೇಳುತ್ತವೆ. 

ನಿರೀಕ್ಷೆಗೆ ತಕ್ಕಂತೆ ಒಳ್ಳೆಯ ಆದರ್ಶಪ್ರಾಯವಾದ ರೀತಿಯಲ್ಲಿ ನಡೆಯದ ಯೆಹೂದಿ ಅರಸರು, ಕ್ರಿಸ್ತಶಕ ಪೂರ್ವ 587ರಲ್ಲಿ ಜೆರುಸಲೇಮಿನ ದೇವಸ್ಥಾನದ ಧ್ವಂಸದೊಂದಿಗೆ ಕೊನೆಗೊಳ್ಳುವ ದಾವಿದ ಅರಸನ ವಂಶಾವಳಿಯ ಅರಸೊತ್ತಿಗೆಗೆ ಕುತ್ತು ಬಂದುದು, ಯೆಹೂದಿಗಳ ಇತಿಹಾಸದಲ್ಲಿನ ದುರಂತದ ಸಂಗತಿಗಳು. ಈ ಸಂಗತಿಗಳು ಪಾಪಿಗಳನ್ನು ರಕ್ಷಿಸಿ ಉದ್ಧರಿಸುವ ಉದ್ಧಾರಕನ ಬರುವಿಕೆಯನ್ನು ಮತ್ತಷ್ಟು ಭರವಸೆಯೊಂದಿಗೆ ನಿರೀಕ್ಷಿಸುವಂತೆ ಮಾಡಿದ್ದವು. ಯೇಸುಸ್ವಾಮಿಯ ಹುಟ್ಟುವ ಸಮಯದಲ್ಲಂತೂ ಆ ನಿರೀಕ್ಷೆಯು ಮತ್ತಷ್ಟು ಗರಿಗೆದರಿ ಕೊಂಡಿತ್ತು. 

ಜಗದೋದ್ಧಾರಕ ಪ್ರಭು ಯೇಸುಸ್ವಾಮಿಯ ಹುಟ್ಟಿನ ಸಂದರ್ಭದಲ್ಲಿ ನಕ್ಷತ್ರವು ಕಾಣಿಸಿಕೊಳ್ಳುವುದು, ದಾಸ್ಯದ ಸಂಕೋಲೆಯ ಗಾಢಾಂಧಕಾರದಲ್ಲಿದ್ದ ಯೆಹೂದಿಗಳಿಗೆ ಪ್ರಭುಯೇಸುಸ್ವಾಮಿ ಬೆಳಕು ನೀಡುವುದನ್ನು ಪ್ರತಿನಿಧಿಸುವಂತಿದೆ. 

ಮತ್ತಾಯನ ಶುಭಸಂದೇಶದಲ್ಲಿ, ಯೇಸುಸ್ವಾಮಿ ಮೊದಲ ಬಾರಿಗೆ ಪ್ರಬೋಧನೆ ಆರಂಭಿಸಿದ ಸಂದರ್ಭದಲ್ಲಿ ಕತ್ತಲೆಯಿಂದ ಬೆಳಕಿನತ್ತ ಸಾಗುವ ವಿಷಯ ಪ್ರಸ್ತಾಪವಾಗಿದೆ. 

ಮತ್ತಾಯನ ಶುಭಸಂದೇಶದ 4ನೇ ಅಧ್ಯಾಯದ ಹದಿನಾರನೇಚರಣದ ಪಠ್ಯ ಹೀಗಿದೆ: `ಕಾರ್ಗತ್ತಲಲಿ ವಾಸಿಸುವವರಿಗೆ ದಿವ್ಯಜ್ಯೋತಿಯೊಂದು ಕಾಣಿಸಿತು. ಮರಣ ಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು' ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು.' ಅದರ ಮುಂದಿನ ಚರಣ ಇಂತಿದೆ: ಅಂದಿನಿಂದ ಯೇಸು, `ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿರಿ. ದೇವರಿಗೆ ಅಭಿಮುಖರಾಗಿರಿ. ಸ್ವರ್ಗ ಸಾಮ್ರಾಜ್ಯ ಸಮೀಪಿಸಿತು' ಎಂಬ ಸಂದೇಶವನ್ನು ಬೋಧಿಸತೊಡಗಿದರು.' 

ಬ್ಯಾಬಿಲೋನಿನನಲ್ಲಿ ಪರದೇಶಿಗಳಾಗಿ ಪರದೇಶ ವಾಸ ಅನುಭವಿಸುತ್ತಿದ್ದ ಯೆಹೂದಿಗಳ ಬವಣೆಗೆ ಸ್ಪಂದಿಸುವ ದೇವರು, ತನ್ನ ಏಕ ಮಾತ್ರ ಪುತ್ರನನ್ನು ಜಗದ ಉದ್ಧಾರಕ್ಕೆ ಕಳುಹಿಸಿಕೊಡುತ್ತಾನೆ ಮತ್ತು ಜದೋದ್ಧಾರಕ ಪ್ರಭು ಯೇಸುಸ್ವಾಮಿ ಹುಟ್ಟಿನ ಸಂದರ್ಭದಲ್ಲಿ ಬೆಳಗಿದ ನಕ್ಷತ್ರವು ದೇವರು ಈ ಭೂಮಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಒಡೆಯ ಎಂಬುದನ್ನು ವಿಶದಪಡಿಸುತ್ತವೆ. 

ದೇವರ ಏಕಮಾತ್ರ ಪುತ್ರ ಪ್ರಭು ಯೇಸುಸ್ವಾಮಿಯು ಮಾನವರ ಪಾಪ ಪರಿಹಾರಕ್ಕಾಗಿ ಬಲಿಯಾಗಲು ಭೂಮಿಯಲ್ಲಿ ಅವತರಿಸುವುದು, ದೇವರ ಮಾನವರ ಮೇಲಿನ ಪ್ರೀತಿ, ಪ್ರೇಮ ಕರುಣೆಯನ್ನು ಗಟ್ಟಿಯಾಗಿ ಸುಸ್ಪಷ್ಟಗೊಳಿಸುತ್ತದೆ. 

ಪೂರ್ವದ ನಾಡಿನ ರಾಯರು ಕಂಡ ನಕ್ಷತ್ರವನ್ನು ಅಬ್ರಹಾಮ, ದಾವಿದ ಮತ್ತು ಯೆಹೂದಿಗಳ ಬ್ಯಾಬಿಲೋನಿನ ಪರದೇಶವಾಸದ ಹಿನ್ನೆಲೆಯಲ್ಲಿ ನೋಡಿದರೆ, ಅದು ಯೇಸುಸ್ವಾಮಿಯ ವಂಶಾವಳಿಯ ಸರಪಳಿಯನ್ನು ಒಂದಕ್ಕೊಂದು ಹೆಣೆದುಕೊಡುತ್ತದೆ. 

ಯೇಸುಸ್ವಾಮಿಯು ಅಬ್ರಹಾಮ, ಅರಸ ದಾವಿದರ ವಂಶಸ್ಥ ಮತ್ತು ಕತ್ತಲೆಯನ್ನು ಕೊನೆಗಾಣಿಸುವ, ಜಗದ ಪಾಪವನ್ನು ಪರಿಹರಿಸುವ ಬೆಳಕು ಎಂಬುದನ್ನು ಬೆತ್ಲೆಹೇಮ್ ನಕ್ಷತ್ರವು ಸ್ಪಷ್ಟಪಡಿಸುತ್ತದೆ. 

ಮತ್ತಾಯನ ಶುಭಸಂದೇಶದಲ್ಲಿನ ನಕ್ಷತ್ರ ಒಂದು ಸೂಚಕ. ಅಲ್ಲಿ ಅಸುಗೂಸು ಪ್ರಭು ಯೇಸುಸ್ವಾಮಿಯ ಪ್ರಸ್ತಾಪವೇ ಬಹಳ ಮುಖ್ಯ. ಎಂಥ ನಕ್ಷತ್ರಕಂಡಿತು? ಹೇಗೆ ಕಂಡಿತು? ಯಾವಾಗ ಕಂಡಿತು? ಎಷ್ಟು ಹೊತ್ತುಕಂಡಿತು? ಯರಿಗಷ್ಟೇಕಂಡಿತು? ಇವೆಲ್ಲಾ ಪ್ರಶ್ನೆಗಳು ಅಪ್ರಸ್ತುತ. ಆ ನಕ್ಷತ್ರ ಏಕೆ ಕಂಡಿತು? ಎನ್ನುವುದು ಇಲ್ಲಿ ಮುಖ್ಯ. ಜಗದ ಪಾಪ ತೊಳೆಯುವ, ಜಗದ ಉದ್ಧಾರಕನ ಬರುವಿಕೆಯನ್ನು ಸಾರುವ ಉದ್ದೇಶವೇ ಅದರ ಮೂಲ ಆಶಯ. 



***************** 



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...