ಸ್ವಾತಂತ್ರ್ಯೋತ್ತರ ಎಂದರೆ ಸ್ವಾತಂತ್ರ್ಯ ನಂತರದಲ್ಲಿ ಕನ್ನಡ ಸಾಹಿತ್ಯದ ಕೃಷಿಗಾರಿಕೆಯಲ್ಲಿ ಕ್ರೈಸ್ತ ಸಾಹಿತಿಗಳ ಪಾತ್ರ ಎಂದರ್ಥ. ಸ್ವಾತಂತ್ರ್ಯಪೂರ್ವದಲ್ಲಿ ಮಿಶನರಿಗಳು ಕನ್ನಡ ಸಾರಸ್ವತ ಲೋಕವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿ ಕಣ್ಮರೆಯಾದ ಕಣ್ಮಣಿಗಳು. ಅಂಧಕಾರದಲ್ಲಿದ್ದ ಕನ್ನಡ ಸಾಹಿತ್ಯದ ಕೃತಿಗಳನ್ನು ಬೆಳಕಿಗೆ ತಂದು ಕನ್ನಡ ಚೆನ್ನುಡಿಯ ಹಿರಿಮೆಯನ್ನು ಸಿರಿಗನ್ನಡದ ಅಕ್ಷರದ ಬೊಕ್ಕಸವನ್ನು ಅವುಗಳ ಬೃಹತ್-ಮಹತ್ತನ್ನು ಕನ್ನಡಿಗರಿಗೆ ತೋರಿಸಿಕೊಟ್ಟು ಹೊಸ ವಿಚಾರಗಳತ್ತ ಕನ್ನಡಿಗರ ಕಣ್ಣು ತೆರೆಸಿದರು. ಹಾಗೆಯೇ ಅವರು ಪ್ರಾರಂಭಿಸಿದ ಈ ಸಾಧಕ ಬದುಕು ಪ್ರತಿಯೊಬ್ಬ ದೇಶಿಯ ಕ್ರೈಸ್ತ ಸಾಹಿತಿಗೆ ಉದಾಹರಣೆಯಾಗಿದ್ದು ಅವರನ್ನು ಕೈ ಬೀಸಿ ಕರೆದಂತೆ ಭಾಸವಾಗಿದೆ. ಸ್ವದೇಶದಿಂದ ವಿದೇಶಕ್ಕೆ ಅಂದರೆ ನಮ್ಮ ನಾಡಿಗೆ ಬಂದು ಇಲ್ಲಿನ ಆಚಾರ, ವಿಚಾರ, ಭಾಷೆ, ಸಂಸ್ಕೃತಿಗೆ ಎದೆಯೊಡ್ಡಿ ನಿಂತು ಕನ್ನಡ ಸೇವೆಯನ್ನು ಮಾಡಿ ಸಂತೃಪ್ತಿಯಿಂದ ಹಿಂತಿರುಗಿದವರು ಮಿಶನರಿಗಳು. ಸ್ವಾತಂತ್ರ್ಯದ ನಂತರವೂ ಮಿಶನರಿಗಳಂತೆ ಉತ್ಸುಕತೆ ಮತ್ತು ಹುರುಪಿನಿಂದ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕ್ರೈಸ್ತ ಸಾಹಿತಿಗಳೂ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಆದರೆ ಇವರ ಕೊಡುಗೆ ಕೇವಲ ಎಲೆ ಮರೆಯ ಕಾಯಿಯಂತಿದ್ದು ಇವರ ಸಾಹಿತ್ಯಿಕ ಶ್ರಮವನ್ನು ಇದುವರೆಗೂ ಯಾರೂ ಗುರುತಿಸದೆ ಇರುವುದು ಶೋಚನೀಯ.
ಕ್ರೈಸ್ತ ಸಾಹಿತಿಗಳು ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ಶೈಲಿಯಲ್ಲಿ ನಿಧಾನವಾಗಿ ಸಾಹಿತ್ಯಕೃಷಿ ಮಾಡುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಕ್ರೈಸ್ತ ಬಾಂಧವರ
ಆಶೋತ್ತರಗಳಲ್ಲಿ ಬದಲಾವಣೆ ಕಂಡುಬಂದಿತು. ಇದರಲ್ಲಿ ಹೆಚ್ಚಿನವರು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳನ್ನು ನೆಚ್ಚಿಕೊಂಡರು. ಈ ಸೇವಾಕ್ಷೇತ್ರಗಳು ಕ್ರಿಶ್ಚಿಯನ್ನರಿಗೆ ಹೇಳಿಸಿದ್ದು ಎನ್ನುವಷ್ಟರ ಮಟ್ಟಿಗೆ ಆಯಾ ಇಲಾಖೆಯಲ್ಲಿ ದುಡಿದು ಜೀವನದ ಸಾರ್ಥಕತೆ ಕಂಡುಕೊಂಡರು, ಆದರೆ ಕನ್ನಡ ಸಾರಸ್ವತ ಲೋಕದ ವಿದ್ವತ್‌ವಲಯದಲ್ಲಿ ತಮ್ಮನ್ನೇ ಗುರುತಿಸಿಕೊಂಡ ಕ್ರೈಸ್ತರು ಕೇವಲ ಬೆರಳೆಣಿಸುವಷ್ಟು ಮಾತ್ರ.

ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಕ್ರೈಸ್ತ ಸಾಹಿತಿಗಳ ಸಾಹಿತ್ಯಿಕ ಕೊಡುಗೆಯನ್ನು ಆಸ್ವಾದಿಸುವ ಸಂದರ್ಭದಲ್ಲಿ ಅವರ ಜೀವನದ ಬಗೆಗೆ ಲಭ್ಯವಿರುವ ಆಕರ ಸಾಮಾಗ್ರಿಗಳನ್ನು ವಿವೇಚಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕ್ರೈಸ್ತ ಸಾಹಿತಿಗಳಾದ ಡಾ. ಉತ್ತಂಗಿ ಚೆನ್ನಪ್ಪ, ಫಾ. ಐ. ಅಂತಪ್ಪ, ಡಾ. ನಾ. ಡಿಸೋಜ, ಸಾಹಿತ್ಯ ಸಾಧಕ ಎ. ಎಂ. ಜೋಸೆಫ್, ಮತ್ತು ಡಾ. ಬಿ. ಎಸ್. ತಲ್ವಾಡಿ ಇವರ ಜೀವನ ಸಾಧನೆಯ ವಿವರಗಳನ್ನು ಮತ್ತು ಇತರೆ ಕ್ರೈಸ್ತ ಸಾಹಿತಿಗಳ ಬದುಕು ಮತ್ತು ಬರಹದ ವಿಷಯವನ್ನು ಮೊದಲಿಗೆ ಕನ್ನಡ ಕ್ರೈಸ್ತ ಸಾಹಿತಿ ಉತ್ತಂಗಿ ಚೆನ್ನಪ್ಪ ರವರ ಬದುಕು ಮತ್ತು ಬರಹದ ಬಗ್ಗೆ ತಿಳಿಯೋಣ.
1. ಕನ್ನಡ ಕ್ರೈಸ್ತ ಸಾಹಿತಿ ಉತ್ತಂಗಿ ಚೆನ್ನಪ್ಪ:
ಅ) ಬಾಲ್ಯ: ಸರ್ವಜ್ಞನನ್ನು ಬೆಳಕಿಗೆ ತಂದು ಕನ್ನಡಿಗರ ಪ್ರಶಂಸೆಗೆ ಯೋಗ್ಯರಾದ ಉತ್ತಂಗಿ ಚೆನ್ನಪ್ಪನವರು ದೇಶಿಯ ಕ್ರೈಸ್ತರಾಗಿ, 1932ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕ್ರೈಸ್ತ ಜನಾಂಗಕ್ಕೆ ಗೌರವವನ್ನು ತಂದುಕೊಟ್ಟ ಮಹಾನ್ ಸಾಹಿತಿಯಾಗಿದ್ದಾರೆ. ಶ್ರೀಯುತರು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಈ ಎರಡು ಅವಧಿಗಳಲ್ಲೂ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿರುವರು.
ಹೆಸರು 'ಚೆನ್ನ'ನಾಗಿಯೇನು ಕೃತಿಯು ಚೆನ್ನವಿರದಿರೆ?
ಹೆಸರಾಯಿತು ನಿಮ್ಮ ಹೆಸರು ಅಂತು ನೀವು ಬರೆದಿರಿ
'ಅಂಗ ಉತ್ತು ಲಿಂಗ ಬಿತ್ತು' ಎಂಬ ಜನ್ಮ ಸಾರ್ಥವು
ಸರ್ವಜ್ಞನ ವಚನಗಳಿಗೆ ಇದುವೆ ಮೂಲ ಅರ್ಥವು
ನುಡಿಯ ಧ್ಯಾನದಲ್ಲಿ ನೀವು ನಡೆಯನಡೆಸಿ ಇಂದಿಗೆ
'ಉತ್ತುಂಗ'ರಾದಿರೆಂದೆ 'ಪೂಜ್ಯ'ರೆಲ ಮಂದಿಗೆ.
ಹೀಗೆ ಕರ್ನಾಟಕದ ಶ್ರೇಷ್ಠ ಕವಿ ಗಾರುಡಿಗ ದ. ರಾ. ಬೇಂದ್ರೆಯವರು ಉತ್ತಂಗಿಯವರಿಗೆ 60 ವರ್ಷಗಳಾದಾಗ ಪೂಜ್ಯಭಾವದಿಂದ ಅಭಿನಂದಿಸಿದ ಕವನ ಕಾಣಿಕೆ ಇದು. ಅಂಗವನ್ನು ಉತ್ತು, ಲಿಂಗ ಗುಣಗಳನ್ನು ಮೈಗೂಡಿಸಿಕೊಂಡು, ಉತ್ತುಂಗ ವ್ಯಕ್ತಿಯಾಗಿ, ಕನ್ನಡದ ತಿರುಕರಾಗಿ, ಕವಿಯಾಗಿ, ಸಂಶೋಧಕರಾಗಿ, ಸಾಹಿತಿಯಾಗಿ, ಅನುಭವಿಯಾಗಿ, ಮಾದರಿಯಾಗಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕ್ರೈಸ್ತಮತ ಬೋಧಕರಾಗಿ ಸರ್ವಜ್ಞನಿಗೆ ಮರು ಹುಟ್ಟುಕೊಟ್ಟ ಕೀರ್ತಿಗೆ ಭಾಜನರಾಗಿ, ಕ್ರೈಸ್ತರ ಹಿರಿಮೆ-ಗರಿಮೆಯನ್ನು ಹೆಚ್ಚಿಸಿದ ಉತ್ತಂಗಿ ಚೆನ್ನಪ್ಪರವರು ಕ್ರಿ.ಶ. 1881ರ ಅಕ್ಟೋಬರ್ 28ರಂದು ಧಾರವಾಡದಲ್ಲಿ ಜನಿಸಿದರು. ತಂದೆ ದಾನಿಯೇಲಪ್ಪ, ತಾಯಿ ಸುಭದ್ರವ್ವ ಈ ದಂಪತಿಗಳಿಗೆ ಬಹಳ ಕಾಲ ಮಕ್ಕಳಾಗದಿರಲು ಸುಭದ್ರವ್ವ ಆತನನ್ನು ಯೇಸುಕ್ರಿಸ್ತನ ಸೇವೆಗೆ ಅರ್ಪಿಸುವೆಂದು ದೇವರಲ್ಲಿ ಹರಕೆ ಹೊತ್ತಿದ್ದರಂತೆ. ದೈವೇಚ್ಛೆಯಂತೆ ಅವರಿಗೊಂದು ಗಂಡು ಮಗುವಾಯಿತು. ಮಗುವಿನ ತಾತ ಚೆನ್ನಪ್ಪಗೌಡರ ಸವಿನೆನಪಿಗಾಗಿ ಆತನಿಗೆ 'ಚೆನ್ನಪ್ಪ' ಎಂದೆ ನಾಮಕರಣವಾಯಿತು. ಚೆನ್ನಪ್ಪರವರಿಗೆ ಉತ್ತಂಗಿ ಎಂಬ ಅಡ್ಡ ಹೆಸರು ಬಂದದ್ದು 'ಉತ್ತಂಗಿ' ಎಂಬ ಗ್ರಾಮದಿಂದಾಗಿ, ಈ ಗ್ರಾಮವು ಇಂದಿನ ಬಳ್ಳಾರಿ ಜಿಲ್ಲೆಯ ಹೂವಿಹನಗಡಲಿ ತಾಲೂಕಿನಲ್ಲಿದೆ. ಚೆನ್ನಪ್ಪನವರ ಹಿರಿಯರು ಈ ಗ್ರಾಮದಿಂದ ಧಾರವಾಡಕ್ಕೆ ಬಂದುದರಿಂದ ಧಾರವಾಡದಲ್ಲಿ ಇವರು 'ಉತ್ತಂಗಿ'ಯವರಾದರು. ಉತ್ತಂಗಿಯಲ್ಲಿ ಇವರು ಗೌಡಕೀಯ ಮನೆತನಕ್ಕೆ ಒಳಪಟ್ಟವರಾಗಿದ್ದು ಮೂಲತಃ ಲಿಂಗಾಯುತ ಸಮಾಜಕ್ಕೆ ಸೇರಿದವರು. ಇವರ ಮನೆತನಕ್ಕೆ ಅಲ್ಲಿ 'ಪಾರುಪತ್ಯಗಾರ' ಎಂಬ ಅಡ್ಡ ಹೆಸರಿತ್ತು. ಈ ಮನೆತನದವರು ಹಿಂದೆ ಪಾರತ್ಯಗಾರರಾಗಿದ್ದರೆಂಬುದು ಇವರಿಂದ ತಿಳಿದು ಬರುತ್ತದೆ. ಪಾರತ್ಯಗಾರ ಶಬ್ಧಕ್ಕೆ ಬೇರೆ ಬೇರೆ ಅರ್ಥಗಳಿವೆ. ಆದರೆ ಡಾ. ಎಸ್. ಆರ್. ಗುಂಜಾಳರವರು ಕಿಟಲರ ಶಬ್ಧಕೋಶದಿಂದ ಸಂಗ್ರಹಿಸಿದ ಅರ್ಥ ಹೀಗಿದೆ. ಯಾವುದೊಂದು ಜಿಲ್ಲೆಯ ಮುಖ್ಯ ಅಧಿಕಾರಿಯ ಸಹಾಯಕ ಅಧಿಕಾರಿಯಾಗಿಯೂ ಮತ್ತು ಸಹಾಯಕ ನ್ಯಾಯಧೀಶನಾಗಿಯೂ ಕೆಲಸ ಮಾಡುವವನು ಎಂದು ಹೇಳಿದ ಅರ್ಥವು ಇಲ್ಲಿ ಸಮಂಜಸವೆಂದು ತಿಳಿಯಬಹುದು.
ಉತ್ತಂಗಿಯವರ ಮನೆತನದ ಅತ್ಯಂತ ಪ್ರಾಚೀನ ಇತಿಹಾಸ ತಿಳಿಯದಾಗಿದೆ. ಆದರೆ ಎರಡು ಮಾರಿನ ಇತಿಹಾಸ ಮಾತ್ರ ಸ್ವಲ್ಪ ಸ್ಪಷ್ಟವಾಗಿ ತಿಳಿಯುವಂತಿದೆ. ಪಾರುಪತ್ಯಗಾರ ಚೆನ್ನಪ್ಪಗೌಡ ಎಂಬುದು ಶ್ರೀ ಉತ್ತಂಗಿ ಚೆನ್ನಪ್ಪನವರ ಅಜ್ಜನ ಹೆಸರು ಈ ಲಿಂಗಾಯುತ ಮನೆತನದ ಚೆನ್ನಪ್ಪಗೌಡರು ಪ್ರಪ್ರಥಮವಾಗಿ ಕ್ರೈಸ್ತ ಧರ್ಮಕ್ಕೆ ಸೇರಲ್ಪಟ್ಟರು. ತದನಂತರ ಅವರ ಮನೆತನ ಕ್ರೈಸ್ತ ಮತದ ತತ್ವಗಳಿಗೆ ಬದ್ಧವಾಗಿತ್ತು.
ಚೊಚ್ಚಲು ಮಗುವಾದುದು ಉತ್ತಂಗಿ ಚೆನ್ನಪ್ಪನ ತಾಯಿಗೆ ಅತೀ ಸಂತಸ ತಂದಿತ್ತು. ಆ ಮಗುವನ್ನು ಬಹು ಜೋಪಾನದಿಂದ ನೋಡಿಕೊಳ್ಳುತ್ತಾ ಪ್ರೀತಿಯಿಂದ ಬೆಳೆಸಿದಳು. ಮಗ ಭಕ್ತಿವಂತನಾಗಿ ಯೇಸು ಕ್ರಿಸ್ತರ ನಿಷ್ಠಾವಂತ ಅನುಯಾಯಿಯಾಗಬೇಕು ಎಂಬುದು ಆ ತಾಯಿಯ ಮಹತ್ತರವಾದ ಬಯಕೆಯಾಗಿತ್ತು. ಅಂದು ಮಿಶನರಿಗಳಿಂದ ರಚಿತವಾಗಿದ್ದ 'ಭಕ್ತಿವಂತ ಪರಂಜ್ಯೋತಿ' ಎಂಬ ಧಾರ್ಮಿಕ ಗ್ರಂಥದಲ್ಲಿರುವ ಕಥೆಯನ್ನು ಬಹು ಉತ್ಸುಕತೆಯಿಂದ ಹೇಳಿ ಮಗನ ಮನಸ್ಸನ್ನು ಭಕ್ತಿಯೆಡೆಗೆ ಹರಿಸುತ್ತಿದ್ದಳು. ಆದರೆ ಉತ್ತಂಗಿ ಚೆನ್ನಪ್ಪನವರ ತಂದೆ ಮಾತ್ರ ತನ್ನ ಮಗ ಓದಿ ಜಾಣನಾಗಬೇಕು, ಕ್ರೈಸ್ತ ಸಮಾಜದ ಮುಂದಾಳತ್ವ ವಹಿಸಬೇಕು, ಒಬ್ಬ ವೈಚಾರಿಕ ವ್ಯಕ್ತಿಯಾಗಬೇಕೆನಿಸಿ ಮಗನಿಗೆ ಸಿಕಂದರ ಬಾದಶಹನಂಥ ಐತಿಹಾಸಿಕ ಧುರೀಣರ ಜೀವನ ಚರಿತ್ರೆಗಳನ್ನು ಹೇಳುತ್ತಿದ್ದರು.
ಹೀಗೆ ಬಾಲ್ಯದಲ್ಲಿಯೇ ಶ್ರೀ ಉತ್ತಂಗಿ ಚೆನ್ನಪ್ಪರವರು ತಮ್ಮ ತಂದೆ-ತಾಯಿಗಳಿಂದ ತಾವು ಶಿಕ್ಷಣ ಪಡೆದ ವಿಷಯವನ್ನು ತಮ್ಮ ಜೀವನ ಚರಿತ್ರೆಯಲ್ಲಿ ಸ್ವತಃ ತಾವೇ ಹೀಗೆ ಹೇಳಿರುವುದನ್ನು ನಾವು ಗಮನಿಸಿಬಹುದು. ತಂದೆ-ತಾಯಿಗಳ ಶಿಕ್ಷಣದ ಮೇಲಾಟದಲ್ಲಿ ನಾನು ಮೆಚ್ಚಿಸಬಹುದಾಗಿತ್ತಲ್ಲದೆ, ತಂದೆಯನ್ನು ಮೆಚ್ಚಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ನನಗೆ ಜ್ಞಾಪಕ ಶಕ್ತಿ ಕಡಿಮೆ ಆದುದರಿಂದ ನಾನು ಬುದ್ಧಿಯಲ್ಲಿ ಮಂದ, ಕಲಿಯುವುದರಲ್ಲಿ ಹಿಂದೆ ಮತ್ತು ಕ್ಲಾಸಿನಲ್ಲಿ ಕಡೆಯವನಾಗಿದ್ದೆ. ಹೀಗಾಗಿ ನನಗೆ ತಂದೆಯವರಿಂದ ಜಾಣತನಕ್ಕಾಗಿ ಮೆಚ್ಚುಗೆ ಸಿಕ್ಕಿದ್ದಕ್ಕಿಂತ ದಡ್ಡತನಕ್ಕಾಗಿ ಪೆಟ್ಟು ಸಿಕ್ಕಿದ್ದೆ ಹೆಚ್ಚು. ಇಲ್ಲಿ ಉತ್ತಂಗಿ ಚೆನ್ನಪ್ಪನವರ ಬಾಲ್ಯ ಜೀವನದ ವ್ಯಕ್ತಿತ್ವವನ್ನು ಕಾಣಬಹುದು.
ಅವರಿಗೆ ಬಾಲ್ಯದಲ್ಲಿ ಜ್ಞಾಪಕಶಕ್ತಿ ಕಡಿಮೆಯಿತ್ತೇನೋ ನಿಜ, ಅದರೆ ವಿಚಾರಶಕ್ತಿ ಮಾತ್ರ ಅದ್ಭುತವಾಗಿತ್ತೆಂಬುದು ಶ್ಲಾಘನೀಯ. ತನ್ನ ತಾಯಿಯ ನಿರಂತರ ಪ್ರಾರ್ಥನೆಯ ಫಲವಾಗಿ ತುಸು ತಡವಾದರೂ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಅವರ ಬುದ್ಧಿ ಅರಳಿ ಕತ್ತಲೆಯಲ್ಲಿ ಬೆಳಕು ಪ್ರಕಾಶಿಸಿದಂತಾಯಿತು. ಮಗನು 5ನೇ ತರಗತಿಯನ್ನು ಪಾಸಾದಾಗ ಆತನಿಗೆ ಕೇವಲ 10 ವರ್ಷ ಪ್ರಾಯ. ಆಗ ದಾನಿಯೇಲನು ಮಗನಿಗೆ ಇಂಗ್ಲೀಷ್ ವಿದ್ಯೆಯನ್ನು ಕಲಿಸಬೇಕೆಂದು ಬಯಸಿದರು. ಆದರೆ ನೂತನವಾಗಿ ಕ್ರೈಸ್ತರಾದ ಹಿಂದೂ ಮಕ್ಕಳಿಗೆ ಇಂಗ್ಲೀಷ್ ವಿದ್ಯೆಯನ್ನು ಕಲಿಸುವುದು ನಿಷ್ಪ್ರಯೋಜಕವೆಂದು ಆಗಿನ ಕಾಲದ ಮಿಶನರಿಗಳು ಭಾವಿಸಿದ್ದರು. ಮಿಶನ್ ಹೈಸ್ಕೂಲ್ ಧಾರವಾಡದಲ್ಲಿ ಸ್ಥಾಪಿತವಾಗಿ ಆಗಲೇ 35 ವಷಗಳಾಗಿದ್ದರೂ ಅದರಲ್ಲಿ ಪ್ರವೇಶ ಕ್ರೈಸ್ತೇತರ ಮಕ್ಕಳಿಗೆ ಮೀಸಲಾಗಿತ್ತು. ಯಾಕೆಂದರೆ ಮತಾಂತರಗೊಂಡ ಹಿಂದೂ ಕ್ರೈಸ್ತರಿಗೆ ಇಂಗ್ಲೀಷ್ ವಿದ್ಯೆಯನ್ನು ಕಲಿಸಿದರೆ ಸರಕಾರದ ಸೇವೆಯಲ್ಲಿ ಸೇರಿ ಮಿಶನ್ ಸೇವೆಗೆ ಎರವಾಗುವರೆಂಬುದು ಆಗಿನ ಮಿಶನರಿಗಳ ವಾದವಾಗಿತ್ತು. ತದನಂತರ 'ಸ್ಟೂಡೆಂಟ್ಸ್ ಹೊಮ್' ಎಂಬ ವಿದ್ಯಾರ್ಥಿನಿಲಯ 1897ರಲ್ಲಿ ಧಾರವಾಡದಲ್ಲಿ ಪ್ರಾರಂಭವಾಯಿತು. ಈ ನಿಲಯದಲ್ಲ್ಲಿ ಸುಮಾರು 12 ವಿದ್ಯಾರ್ಥಿಗಳಿದ್ದು ಅವರಲ್ಲಿ ಉತ್ತಂಗಿಚೆನ್ನಪ್ಪ ಒಬ್ಬರಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಅಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ರೆವರೆಂಡ್ ರಿಷ್ ಅವರು ಧಾರವಾಡದ ಸ್ಟುಡೆಂಟ್ ಹೋಮಿನಲ್ಲಿದ್ದ ವಿದ್ಯಾರ್ಥಿಗಳನ್ನು ಒಂದೆಡೆ ಕಲೆಹಾಕಿ ಅವರಿಗೆ ಇಂಗ್ಲೀಷ್ ಹಾಗೂ ಸಂಸ್ಕೃತವನ್ನು ಹೇಳಿಕೊಡುತ್ತಿದ್ದರು.
ಹೀಗೆ ಮಿಶನರಿ ರೆವರೆಂಡ್ ರಿಷ್ ಅವರು ಉತ್ತಂಗಿ ಚೆನ್ನಪ್ಪರವರ ಬಾಲ್ಯ ಜೀವನಕ್ಕೆ ಒಬ್ಬ ಮಾದರಿ ಪ್ರೇರಕ ಶಕ್ತಿಯಾಗಿದ್ದರು ಎಂಬುದನ್ನು ನಾವು ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆಯಿಂದ ತಿಳಿಯಬಹುದಾಗಿದೆ. ಆ ವಯಸ್ಸಿಗಾಗಲೇ ಬುದ್ಧಿ, ಆತ್ಮಾಭಿಮಾನ, ಮತ್ತು ಹೋರಾಟದ ಸ್ವಭಾವ ಬಾಲಕ ಉತ್ತಂಗಿಯವರಲ್ಲಿ ಎದ್ದು ಕಾಣುತ್ತಿದ್ದವು. ಬಾಲ್ಯದಲ್ಲಿ ಉತ್ತಂಗಿ ಚೆನ್ನಪ್ಪ ಬುದ್ಧಿವಂತ ವಿದ್ಯಾರ್ಥಿಯಾಗೇನೂ ಇರಲಿಲ್ಲ. ರೇಖಾಗಣಿತ, ಅಂಕಗಣಿತಗಳೆಂದರೆ ಅವರಿಗೆ ಎಣ್ಣೆ-ಸೀಗೆಕಾಯಿ ಇದ್ದಂತೆ. ರೆ. ಹರ್ಮನ್‌ರಿಷ್ ಪ್ರಯತ್ನದಿಂದ ಅವರಲ್ಲಿ ಸುಪ್ತವಾಗಿದ್ದ ಅದ್ಭುತ ಶಕ್ತಿಯ ಅರಿವು ಉಂಟಾಯಿತು. ವಿಮರ್ಶಾತ್ಮಕ ಬುದ್ಧಿಯು ಮೊಳೆತು ಚಿಗುರೊಡೆದು ಬೇರುಬಿಟ್ಟಿತು. ಆದರೆ ಚೆನ್ನಪ್ಪರವರು ಮೆಟ್ರಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಮತ್ತೆ ಪರೀಕ್ಷೆ ಬರೆದು ಪಾಸು ಮಾಡಲು ಅವರು ಪ್ರಯತ್ನಿಸಲಿಲ್ಲ ಅದರ ಬಗ್ಗೆ ಅವರು ಕೊಡುವ ಸಮರ್ಥನೆ ಏನೆಂದರೆ ನನಗೆ ವಿದ್ಯೆ ಹೇಳಿಕೊಡುವ ಗುರುಗಳು ಈ ಜಗತ್ತಿನಲ್ಲಿ ಹುಟ್ಟಿಲ್ಲವೆಂದೂ, ಹುಟ್ಟಿದ್ದರೂ ಅವರ ಲಭ್ಯ ನನಗಿಲ್ಲವೆಂದೂ ನಿಶ್ಚಯಿಸಿಕೊಂಡೆ. ಅಂದಿನಿಂದ ಗುರುವಿಗೂ, ತಿರುಪೆಯ ಓದಿಗೂ, ವಿದ್ಯಾನಿಲಯಕ್ಕೂ ವಿಮುಖವನಾದವನು ತಿರುಗಿ ಆ ಕಡೆಗೆ ಕಣ್ಣೆತ್ತಿ ಸಹ ನೋಡಲಿಲ್ಲ. ಉತ್ತಂಗಿಯವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲವೇನೋ ನಿಜ. ಆದರೆ ಹೊಟ್ಟೆಯ ಪಾಡಿಗೆ ಯಾವುದಾದರೂ ನೌಕರಿಯನ್ನು ಅವಲಂಭಿಸಬೇಕಾಗಿತ್ತು. ಆದರೆ ಉತ್ತಮ ನೌಕರರಿಗೆ ಯೋಗ್ಯವಾದ ಶಿಕ್ಷಣ ಬೇಕು. ಮೆಟ್ರಿಕ್ (ಹೈಸ್ಕೂಲ್) ಶಿಕ್ಷಣವನ್ನು ಪೂರ್ತಿಗೊಳಿಸದ ಉತ್ತಂಗಿಯವರಿಗೆ ದೊಡ್ಡ ಹುದ್ಧೆ ದೊರೆಯುವುದಾದರೂ ಹೇಗೆ? ತಂದೆ ಪುನ: ಪರೀಕ್ಷೆ ಕಟ್ಟುವಂತೆ ಒತ್ತಾಯಿಸಿದರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ, ಇನ್ನೊಂದೆಡೆ ತಾಯಿ ಕಣ್ಣೀರಿಡುತ್ತಾ ತನ್ನ ಹರಕೆಯನ್ನು ನೆರವೇರಿಸಿ ಕೊಡುವಂತೆ ಮಗನಿಗೆ ಬುದ್ಧಿವಾದ ಹೇಳಿದರು. ನೀನು ನನ್ನ ಹರಕೆಯನ್ನು ದುರ್ಲಕ್ಷಿಸಿ, ಲೌಕಿಕ ಮಾರ್ಗವನ್ನು ಹಿಡಿದುದು ದೇವರ ಮನಸ್ಸಿಗೆ ಬರಲಿಲ್ಲ. ಹಲವು ಹವಣಿಕೆ ಹಾಕಿ ವೃಥಾ ಕಾಲ ಕಳೆಯುವುದಕ್ಕಿಂತ ನೆಟ್ಟಗೆ ಮಂಗಳೂರಿನಲ್ಲಿರುವ ಬಾಸೆಲ್ ಮಿಶನ್ನಿನ ದೈವಜ್ಞಾನ ಶಾಲೆಗೆ ಸೇರಬೇಕು ಎಂಬ ತಾಯಿಯ ಒತ್ತಾಯಕ್ಕೆ ಮಣಿದು ಚೆನ್ನಪ್ಪರವರು ಗುರುಮಠವನ್ನು ಸೇರಿದರು, ಪ್ರಬುದ್ಧ ವಯಸ್ಕರೂ ಕ್ರಾಂತಿಕಾರರ ಮನೋಭಾವದವರೂ ಆಗಿದ್ದ ಅವರಿಗೆ ಅಲ್ಲಿಯ ವಾತಾವರಣ ಹಿಡಿಸಲಿಲ್ಲ. ತರ್ಕಶಾಸ್ತ್ರ ಮತ್ತು ನಾಸ್ತಿಕವಾದಿ ಹರ್ಬಟ್‌ಸ್ಪೆನ್ಸರನ ಪುಸ್ತಕಗಳನ್ನು ಕದ್ದು ಓದುತ್ತಿದ್ದರು ಜೊತೆಗೆ ಕ್ರೈಸ್ತ ಧರ್ಮ ಸಂದೇಹವಾದಿಗಳಾದ ಪೇನ್, ಇಂಗರ್ಸಲ್, ವಾಲ್ಟೆರ್ ಮುಂತಾದವರ ಗ್ರಂಥಗಳನ್ನು ಓದಿ ಬಹಳಷ್ಟು ಬೌದ್ಧಿಕವಾಗಿ ಬೆಳೆದರು, ಅವರಲ್ಲಿ ಜ್ಞಾನ, ಹರಿತಬುದ್ಧಿ, ತರ್ಕಬದ್ಧ ವಿಚಾರ ಸರಣಿ, ಸತ್ಯಾನ್ವೇಷಣೆಯ ಆಕಾಂಕ್ಷೆ ಮತ್ತು ವಿಶಾಲ ಮನೋಭಾವ ಮುಂತಾದ ಸದ್ಗುಣಗಳು ಅವರಲ್ಲಿ ಎದ್ದು ಕಾಣುತ್ತಿದ್ದವು.
ದಿನಾಂಕ 01.01.1908ರಂದು ಉತ್ತಂಗಿ ಚೆನ್ನಪ್ಪರವರು ತನ್ನ ತಾಯಿಯ ಹರಕೆಯನ್ನು ಪೂರೈಸಲೆಂದು ಬಾಸೆಲ್ ಮಿಷನ್ ಸಂಸ್ಥೆಯಲ್ಲಿ ಕ್ರಿಸ್ತನ ಸೇವೆಗೆ ಸೇರಿದರು. ಸುಮಾರು 33 ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ 1942 ಜನವರಿ 01ರಂದು ಅವರು ತಮ್ಮ ಮಿಶನ್ ಸೇವೆಯಿಂದ ನಿವೃತ್ತರಾದರು. ಈ ಸುದೀರ್ಘ ವರ್ಷಗಳಲ್ಲಿ ಸಂಸ್ಥೆಯು ವಹಿಸಿದ್ದ ಎಲ್ಲಾ ಜವಬ್ದಾರಿಯುತ ಹುದ್ಧೆಗಳನ್ನು ಪ್ರೀತಿಯಿಂದ ಸ್ವೀಕರಿಸಿ ವಿವಿಧ ಸ್ಥಳಗಳಲ್ಲಿ ಅವಿರತ ಸೇವೆ ಸಲ್ಲಿಸಿರುವರು. ಉತ್ತಂಗಿಯವರು ಕಾರ್ಯ ನಿರ್ವಹಿಸಿದ ಸ್ಥಳ ಹುದ್ಧೆ ಮತ್ತು ಅವಧಿಗಳನ್ನು ಈ ಕೆಳಗಿನಂತೆ ಗಮನಿಸಬಹುದು.
1. ಹುಬ್ಬಳ್ಳಿ ಧರ್ಮೋಪದೇಶಕ (Evangelist) 1908-1910
2. ಧಾರವಾಡ ವಿದ್ಯಾರ್ಥಿನಿಲಯದ ಮುಖ್ಯಸ್ಥ (House father) 1911-1912
3. ಬೆಟಗೇರಿ (ಗದಗ) ಅನಾಥ ಗಂಡು ಮಕ್ಕಳ ಶಾಲೆಯ ಮುಖ್ಯಸ್ಥ (House father of orphanage School) 1913-1916
4. ಮುಂಡರಗಿ (ಗದಗ ತಾಲ್ಲೂಕು) ಧರ್ಮೋಪದೇಶಕ (Evangelist 1917-1919
5. ಧಾರವಾಡ ಬೈಬಲ್ ಶಿಕ್ಷಕ ಮತ್ತು ಧರ್ಮೋಪದೇಶಕ (Bible Teacher at Basel Mission) 1920-1926
6. ಹಾವೇರಿ ಧರ್ಮೋಪದೇಶಕ (Evangelist) 1926-1937
7. ಹುಬ್ಬಳ್ಳಿ ಧರ್ಮೋಪದೇಶಕ (Evangelist) 1933-1941
ಚೆನ್ನಪ್ಪರವರು ಬಾಸೆಲ್ ಮಿಶನ್ ಸಂಸ್ಥೆಯಲ್ಲಿ ವಿದ್ಯಾರ್ಥಿನಿಲಯದ ಮುಖ್ಯಸ್ಥರು ಮತ್ತು ಬೈಬಲ್ ಶಿಕ್ಷಕರಾಗಿದ್ದು, ಕ್ರಿಸ್ತ ಜೀವಿಕೆ ಹಾಗೂ ಕ್ರೈಸ್ತ ಧರ್ಮ ತತ್ವಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದೇ ಅವರ ಪ್ರಮುಖ ಕೆಲಸವಾಗಿತ್ತು. ಅವರ ಬೋಧನೆಯನ್ನು ಸವಿದ ವಿದ್ಯಾರ್ಥಿಗಳು ತಮ್ಮ ಬಾವಿ ಜೀವನದಲ್ಲೂ ಚೆನ್ನಪ್ಪರವರನ್ನು ನೆನೆದು ಅವರಂತೆ ಸರಳ ಬದುಕನ್ನು ರೂಪಿಸಿಕೊಳ್ಳಲು ಹಾತೊರೆಯುತ್ತಿದ್ದುದನ್ನು ಅವರ ಜೀವನ ಚರಿತ್ರೆಯಿಂದ ತಿಳಿಯಬಹುದಾಗಿದೆ. ಅವರು ಸೇವೆ ಸಲ್ಲಿಸಿದ ಊರುಗಳಲ್ಲಿ ಕ್ರೈಸ್ತರಷ್ಟೇ ಅಲ್ಲ ಲಿಂಗಾಯಿತರು, ಮಹಮದೀಯರು, ಬ್ರಾಹ್ಮಣರು ಮತ್ತು ಹಿಂದುಳಿದವರು, ಉತ್ತಂಗಿಯವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ಮಿಶನರಿಗಳ ಗುಪ್ತ ವರದಿಯೊಂದರಿಂದ ಖಚಿತವಾಗುತ್ತದೆ. ಉತ್ತಂಗಿಯವರು ಹುಬ್ಬಳ್ಳಿಯಲಿ ಕ್ರೈಸ್ತ ಸೇವಾ ವೃತ್ತಿಯಿಂದ ನಿವೃತ್ತರಾದುದು ದಿನಾಂಕ 01.01.1942ರಂದು. ಅವರು ತಮ್ಮ ಮಿಷನ್ನಿನ ಸೇವಾವಧಿಯಲ್ಲಿರುವಷ್ಟು ಕಾಲ ಪ್ರಮಾಣಿಕತೆಯಿಂದ ಮನ:ಪೂರ್ವಕವಾಗಿ ದುಡಿದ ಧೀಮಂತರು ಎಂದು ಮಿಶನರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರೆಂದೂ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕಾರ್ಯವನ್ನು ಎಸಗಲಿಲ್ಲ. ಯೋಗ್ಯತೆಯಲ್ಲಿ, ಬುದ್ಧಿವಂತಿಕೆಯಲ್ಲಿ, ಶೀಲ ಸಂಪತ್ತಿನಲ್ಲಿ, ಕಾರ್ಯಕ್ಷಮತೆಯಲ್ಲಿ ಮತ್ತು ಕ್ರೈಸ್ತ ಭಕ್ತಿಯಲ್ಲಿ ಯಾವ ವಿದೇಶಿ ಮಿಶನರಿಗಳಿಗಿಂತಲೂ ಅವರು ಕಡಿಮೆಯಾಗಿರಲಿಲ್ಲವೆಂದು ಇಲ್ಲಿಯವರೆಗಿನ ನಮ್ಮ ವಿವೇಚನೆಯಿಂದ ಅರಿತುಕೊಳ್ಳಬಹುದು. ಕೆಲವೊಂದು ವಿಷಯಗಳಲ್ಲಿ ಮಿಶನರಿಗಳಿಗಿಂತ ಮಿಗಿಲಾದವರಾಗಿದ್ದರೆಂದು ಅವರ ಬಗ್ಗೆ ಮಾಹಿತಿಗಳಿರುವ ಹೊತ್ತಿಗೆಗಳಿಂದ ತಿಳಿದುಕೊಳ್ಳುತ್ತೇವೆ.
ಆ) ಕುಟುಂಬ: ಉತ್ತಂಗಿಯವರು ತಮ್ಮ ಪೂಜ್ಯರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದರು, ತನ್ನ ಮಗ ಸರ್ಕಾರಿ ಉನ್ನತ ಅಧಿಕಾರಿಯಾಗಿ ಸರ್ವರಿಂದಲೂ ಗೌರವಾನ್ವಿತನಾಗಬೇಕೆಂದು ಅವರ ತಂದೆಯ ಹೆಬ್ಬಯಕೆ. ಆದರೆ ಆತನ ತಾಯಿಯು ತನ್ನ ಮಗ ದೈವ ಭಕ್ತನಾಗಿದುದು ದೇವರ ಸೇವೆಗೆ ತನ್ನ ಜೀವನವನ್ನು ಮುಡುಪಾಗಿರಿಸಬೇಕೆಂದು ಇಚ್ಛಿಸಿದಳು, ಲೌಕಿಕ ಜೀವನದಲ್ಲಿ ಪ್ರಗತಿಯನ್ನು ಪಡೆಯಬೇಕೆಂದು ತಂದೆ ಬೋಧಿಸಿದರೆ, ಪಾರಮಾರ್ಥಿಕ ಜೀವನದಲ್ಲಿ ಬೆಳವಣಿಗೆ ಹೊಂದಬೇಕೆಂದು ತಾಯಿ ಮಗನಿಗೆ ತಿಳಿ ಹೇಳುತ್ತಿದ್ದರು. ಉತ್ತಂಗಿಯವರು ತನ್ನ ತಾಯಿಯಲ್ಲಿ ಅಚಲ ವಿಶ್ವಾಸವಿಟ್ಟ ಕಾರಣ ಆಕೆಯ ಬಲವಾದ ಆಸೆಯನ್ನು ಪೂರೈಸಿದರು. ಹೀಗೆ ತಾಯಿಯ ಮಾತಲ್ಲೇ ಸಂಪೂರ್ಣತೆಯನ್ನು ಕಂಡ ಉತ್ತಂಗಿಯವರು ತಮ್ಮ ಮದುವೆಯ ವಿಚಾರದಲ್ಲಿ ತಾಯಿಯ ನಿರ್ಣಯಕ್ಕೆ ಸಮ್ಮತಿಸಿದರು ತನ್ನ ತಾಯಿಯು ಆಯ್ಕೆ ಮಾಡಿದ ಕನ್ಯೆ ಸುಬ್ಬಕ್ತವ್ವಳನ್ನು ಮದುವೆಯಾದರು.
ಉತ್ತಂಗಿಯವರು ಮದುವೆಯಾದದ್ದು ಕ್ರಿ.ಶ. 1908ರಲ್ಲಿ ಆಗ ಅವರಿಗೆ 27 ವರ್ಷ ವಯಸ್ಸು, ಮಡದಿ ಸುಬ್ಬಕ್ತವ್ವಳಿಗೆ ಆಗ 19 ವರ್ಷ ವಯಸ್ಸು, ಈ ಸುಬ್ಬಕ್ತವ್ವ ದಂಪತಿಗಳಿಗೆ ಚಂಪಾಬಾಯಿ, ಎಸ್ತರಬಾಯಿ, ಶಾಂತಾ ಬಾಯಿ, ಸುಭಧ್ರಬಾಯಿ, ಮೇರಿಬಾಯಿ, ಮತ್ತು ಸೇರಾಬಾಯಿ ಎಂಬ ಆರು ಜನ ಹೆಣ್ಣು ಮಕ್ಕಳು ಹಾಗೂ ಆಲ್‌ಫ್ರೆಡ್, ಹೆನ್ರಿ, ಜೇಮ್ಸ್, ಮತ್ತು ಡ್ಯಾನಿಯೇಲ ಎಂಬ ನಾಲ್ಕು ಜನ ಗಂಡು ಮಕ್ಕಳು, ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಅಕಾಲಿಕ ಮರಣವನ್ನಪ್ಪಿದ್ದರು. ಉತ್ತಂಗಿಯವರದು ಆದರ್ಶ ದಾಂಪತ್ಯ. ಸತಿಪತಿಗಳಿಬ್ಬರು ಅನ್ಯೋನ್ಯತೆಯಿಂದ ಬಾಳಿದವರು. ಅವರ ಮಧ್ಯೆ ನೆಲೆಗೊಂಡಿದ್ದು ಅಚಲ ಪ್ರೇಮ. ಬಾಳಿನುದ್ದಕ್ಕೂ ಬಡತನದಲ್ಲಿ ಬಂದ ಉತ್ತಂಗಿಯವರಿಗೆ ಸುಭಕ್ತವ್ವನ ತಾಳ್ಮೆ, ಸಹನೆ, ಪ್ರೀತಿ ವಿಶ್ವಾಸಗಳು ಅಕ್ಷಯ ನಿಧಿಯಾಗಿದ್ದು, ಮನಸಿನ ನೆಮ್ಮದಿಗೆ ಕಾರಣವಾಗಿದ್ದವೆನ್ನಬಹುದು, ಪತಿಯ ಮೇಲಿನ ಭಕ್ತಿ, ಶ್ರದ್ಧೆ, ಗೌರವ ಸುಭಕ್ತವ್ವನಲ್ಲಿ ಎಳ್ಳುಮೊನೆಯಷ್ಟೂ ಕೊರತೆಯಾಗಿರಲಿಲ್ಲ. ಅಸಹಾಯಕ ಸ್ಥಿತಿಯಲ್ಲಿ 25 ವರ್ಷಗಳವರೆಗೆ ಮಲಗಿದ ಹೆಂಡತಿಯ ಮೇಲಿನ ಪ್ರೀತಿ ಉತ್ತಂಗಿಯವರಲ್ಲಿ ಚಿಲುಮೆಯಾಗಿ ಸದಾ ಚಿಮ್ಮುತ್ತಲೇ ಇತ್ತು. ಜೀವನದ ಸುಖ-ದು:ಖಗಳಲ್ಲಿ ಸಮಭಾಗಿಯಾಗಿದ್ದ ತಮ್ಮ ನೆಚ್ಚಿನ ಹೆಂಡತಿಯ ಮೇಲೆ ಅಪಾರ ಪ್ರೀತಿ ಮತ್ತು ಗೌರವ. ಆ ನಿತ್ಯ ಸ್ಪೂರ್ತಿಯ ಚಿಲುಮೆ ಆಕೆಯ ನಿಧನದಿಂದಾಗಿ ದಿನಾಂಕ 08.02.1955ರಲ್ಲಿ ಬತ್ತಿ ಹೋಯಿತು.
ಮುಂದಿನ ಸಂಚಿಕೆಯಲ್ಲಿ ಅವರ ಕೊಡುಗೆಯ ಬಗ್ಗೆ ತಿಳಿಯೋಣ.
jayakumarcsj@gmail.com
ReplyDeleteಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ