ಜೋವಿ ಮತ್ತು ಬಸವರಾಜ್
--------------------------
ಶಿಲುಬೆ ಇಂದು ಕ್ರೈಸ್ತ ಧರ್ಮದ ಪೂಜ್ಯ ಮತ್ತು ಪ್ರಧಾನ ಲಾಂಛನವಾಗಿ ಮಾತ್ರ ಇರದೆ, ಕ್ರೈಸ್ತ ಬದುಕಿನ ಪ್ರಜ್ಞೆಯಾಗಿ ಸಾವಿರಾರು ಕ್ರೈಸ್ತರಿಗೆ ಪ್ರೇರಣೆಯಾಗಿದೆ ನಿಂತಿದೆ. ಇದು ಕ್ರಿಸ್ತನ ಮರಣಯಾತನೆಯನ್ನು ನೆನಪಿಸುತ್ತಲೆ ಮನುಜಕುಲಕ್ಕೆ ಆತ ಒಪ್ಪಿಸಿದ ತ್ಯಾಗ ಬಲಿದಾನಗಳ ಮೂರ್ತ ಚಿನ್ಹೆಯಾಗಿದೆ. ಶಿಲುಬೆ ಮಾನವರಾದ ನಮಗೆ ದೊರೆತ ರಕ್ಷಣೆಯನ್ನು ತಿಳಿಸುವುದು ಮಾತ್ರವಲ್ಲ ಕ್ರಿಸ್ತನಂತೆ ನಮ್ಮನ್ನೂ ತ್ಯಾಗದ ಬದುಕಿಗೆ ಆಹ್ವಾನಿಸುತ್ತದೆ. ಇಂತಹ ಪವಿತ್ರ ಶಿಲುಬೆಯ ವಿಜಯೋತ್ಸವದ ಆಚರಣೆ ಸುಮಾರು ೪ ನೇ ಶತಮಾನದಲ್ಲಿ ಮೊಮ್ಮೊದಲು ಪ್ರಾರಂಭವಾಯಿತ್ತು. ಅಂದಿನಿಂದ ಇಂದಿನವರೆಗೂ ಶಿಲುಬೆ ಎಂಬುವುದು ಕ್ರೈಸ್ತರ ಬದುಕಿನ ಸಾರವಾಗಿ ಪ್ರಚಲಿತದಲ್ಲಿದೆ.
ಸಮರ ಲಾಂಛನವಾಗಿ ಶಿಲುಬೆ!
ಇಂದು ಮನುಷ್ಯನ ಪ್ರತಿ ವರ್ತನೆಗಳು ರಾಜಕೀಯವೆಂಬ ಕೆಂಡವನ್ನು ಹಾದು ಅದರ ಮೂಸೆಯನ್ನು ದಾಟಿ ಬರಲೇ ಬೇಕು. ದಾಖಲಾಗದ ನೋವೊಂದು ಇರುವುದಾದರೆ ಅದೊಂದು ನೋವೇ ಅಲ್ಲ ಎಂಬರಷ್ಟರ ಮಟ್ಟಿಗೆ ಇಂದು ರಾಜಕೀಯವು ಸಮಾಜದ ಎಲ್ಲಾ ರಂಗಗಳಲ್ಲಿಯೂ ಮನೆಮಾಡಿದೆ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ದೈನಂದಿನ ಬಾಳುವೆಯನ್ನು ಮುಕ್ತವಾಗಿ ಅನುಭವಿಸಲು ಬಿಡದೆ ಅವನನ್ನು ಸಮೂಲವಾಗಿ ರಾಜಕೀಯಕ್ಕೆ ಎಳೆಯಬಲ್ಲ ಸಂಗತಿಗಳು ಇಂದು ಎಂದಿಗಿಂತಲ್ಲೂ ಹೆಚ್ಚಾಗುತ್ತಿವೆ. ದಿನೇ ದಿನೇ ಏರುತ್ತಿರುವ ಚುನಾವಣೆಗಳ ರಂಗು ಇದಕ್ಕೊಂದು ಪಕ್ಕಾ ಉದಾಹರಣೆ. ನಾಯಕನೊಬ್ಬನೊಡನೆ ಗುರುತಿಸಿಕೊಳ್ಳಲು ಹಾಗು ಆ ಮೂಲಕ ತನ್ನದೆ ಸಾಂಸ್ಕೃತಿಕ ರಾಜಕಾರಣವನ್ನು ಸೃಷ್ಟಿಸಿಕೊಳ್ಳಲು ಇಂದಿನ ಜಾತಿ ಆಧಾರಿತ ರಾಜಕೀಯ ವ್ಯವಸ್ಥೆ ಪ್ರತಿ ಪ್ರಜೆಗೂ ಕಲಿಸಿಕೊಡುತ್ತಿದೆ – ಇದು ಅಗತ್ಯವೂ ಕೂಡ. ಕಾಲನೂಕಾಲದಿಂದ ತುಳಿತಕ್ಕೆ ಒಳಗಾಗಿ ಸಮಾಜದಿಂದ ಹೊರನೂಕಲ್ಪಟ್ಟ ಕೆಲವು ನಿಷೇಧಿತ ವರ್ಗಗಳು ಜಾತಿ ಹಾಗು ಅಂತಸ್ತಿನ ವಿಭಾಗೀಕರಣದಲ್ಲಿ ನರಳಿದ್ದು ಅಷ್ಟೊಂದು ವ್ಯಾಪಕವಾಗಿ ಎಲ್ಲೂ ದಖಾಲಾಗಿಲ್ಲ. ‘ಊರು ಕಟ್ಟಲು ದುಡಿದವ ಊರ ಹೊರಗೆ ಬದುಕಬೇಕು, ನೀರನ್ನು ನೆಲದ ಎದೆಯಿಂದ ಕದ್ದು ತಂದವ ಕಣ್ಣೀರಲ್ಲಿ ಕೈತೊಳೆಯಬೇಕು, ಗುಡಿಗುಂಡಾರ ಕಟ್ಟಿದವ ದೇವರಿಗೆ ಅಸ್ಪೃಶ್ಯ.’ ಇಂತಹ ಅನಿಷ್ಟ ಆಚರಣೆಯಲ್ಲಿ ನರಳುತ್ತಿದ್ದ ಜನ ಮುಂದೆ ಕ್ರೈಸ್ತ ಧರ್ಮ ಭಾರತದ ಕೆಳ ಸಮುದಾಯಗಳ ಕೇರಿಗಳಿಗೆ ಕಾಲಿಡುತ್ತಿದಂತೆಯೇ ತಮಗೂ ಸಂಭ್ರಮಿಸಲು ಒಂದು ಆಧ್ಯಾತ್ಮಿಕ ಮಾಧ್ಯಮವನ್ನು ಪರೋಕ್ಷವಾಗಿ ಅವರು ಪಡೆದರು. ಇದು ಅವರಿಗೆ ಈವರೆಗೂ ಸಿಗದ ದೇವರು ಸಿಕ್ಕನೆಂಬ ಸಂಭ್ರಮಕ್ಕಿಂತ ಇತರ ಮೇಲ್‍ವರ್ಗಗಳಂತೆ ತಮಗೂ ಒಂದು ದೇವಾಲಯವಿದೆ ಎಂಬ ಸ್ವಾಭಿಮಾನವನ್ನು ಕ್ರೈಸ್ತಧರ್ಮ ಈ ಕೆಳವರ್ಗಗಳಲ್ಲಿ ತಂದಿತ್ತು. ಇದೆಲಕ್ಕೂ ಮೇಲಾಗಿ ಶಿಲುಬೆ ಅವರಿಗೆ ಹೊಸತೊಂದು ಲಾಂಛನವಾಯಿತ್ತು. ಆಳುವ ಧಣಿಗಳಿಗೆ ಅವರ ಜನಿವಾರ, ಲಿಂಗ, ಪಟ್ಟೆ ನಾಮಗಳು ಅವರ ತೇಜದ ಸಂಕೇತವಾದಂತೆ ತಮಗೂ ಒಂದು ಬಿಮ್ಮಿನ ಸಂಕೇತವಾಗಿ ಶಿಲುಬೆಯನ್ನು ಭಾರತೀಯ ಬಡವರ್ಗಗಳು ಸ್ವೀಕರಿಸಿದವು. ಇದು ಆಧ್ಯಾತ್ಮಿಕ ಪರಕಾಷ್ಟೆಗಿಂತ ತಮ್ಮ ತಿರಸ್ಕೃತ ಸಮಾಜದೊಳಗೆ ತಮ್ಮನೇ ಗುರುತಿಸಿಕೊಳ್ಳಲು ಒಂದು ಸೌಮ್ಯ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಹಲವಾರು ಊರುಗಳು ಸೇರಿದಂತೆ ಕರ್ನಾಟಕದ ವಿವಿದೆಡೆಗಳಲ್ಲಿ ಎಲ್ಲಿ ಮೇಲ್‍ವರ್ಗದವರ ಮಠಮಂದಿರಗಳು ಊರ ಬೆಟ್ಟದ ಮೇಲೆ ರಾರಜಿಸುತ್ತಾ ವಿರಜಮಾನವಾಗಿದ್ದವೋ ಅದೇ ಬೆಟ್ಟದ ಅದಕ್ಕೂ ಮೇಲ್ ತುದಿಯ ಪೊಟ್ಟರೆ ಗಲ್ಲುಗಳ ಮೇಲೆ ಶಿಲುಬೆಯನ್ನು ನೆಟ್ಟು ಜನ ಸಂಭ್ರಮಿಸುತ್ತಿದ್ದಾರೆ. ಮೇಲ್‍ಪದರದಲ್ಲಿ ಇದಕ್ಕೆ ಕಾರಣ ಭಕ್ತಿಯೇ ಆದರೂ ಆಂತರ್ಯದಲ್ಲಿ ಸಮಾನತೆಗಾಗಿ ತುಡಿಯುತ್ತಿರುವ ಆಶಯ, ತುಳಿದವರ ವಿರುದ್ಧವಾದ ಪ್ರತಿಕಾರವಾಗಿ ಈ ಶಿಲುಬೆ ಶೋಷಿತರನ್ನು ಒಟ್ಟಂದಲ್ಲಿ ಒಗ್ಗೂಡಿಸುವ ಬಿಡುಗಡೆಯ ಹಾಗು ಸಮಾನತೆಯ ಚಿಹ್ನೆಯಾಗಿದೆ. ವಿಷಕಾರುವ ಜನರ ಎದುರಿಸಲು ಸಮರ ಲಾಂಛನವಾಗಿದೆ. ಬೆನ್ನು ಬಾಗಿ ದುಡಿಯುವ ಜನರ ನೈತಿಕ ರೂಪವಾಗಿದೆ. ಆದ್ದರಿಂದ ದಲಿತ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಕವಿತೆಯೊಂದರಲ್ಲಿ ಹೀಗೆ ಬರೆಯುತ್ತಾರೆ;
ನಮ್ಮ ಎಲುಬಿನ ಹಂದರದೊಳಗೊಂದು
ಇಗರ್ಜಿ ಇದೆ
ಅಲ್ಲಿದೆ ಹೆಗಲ ಮೂಳೆಗಾಳಿಂದಾದ ಶಿಲುಬೆ
ಅಲ್ಲಿದ್ದಾನೆ ನಿತ್ಯವೂ ಭಾರ ಹೊತ್ತು ನರಳುವ ಕ್ರಿಸ್ತ....
ಕರ್ನಾಟಕದಲ್ಲಿ ಕಂಡುಬರುವ ಪವಿತ್ರ ಶಿಲುಬೆಯ ವಿಜಯೊತ್ಸವದ ಆಚರಣೆಗಳು!
ಪವಿತ್ರ ಶಿಲುಬೆಯ ಆರಾಧನೆ, ಮೆರವಣಿಗೆಗಳು ಶಿಲುಬೆಹಾದಿ ಹೀಗೆ ಶಿಲುಬೆಗೆ ಸಂಬಂಧಪಟ್ಟ ಅನೇಕ ವಿಧಿ ಆಚರಣೆಗಳು ಯತೇಚ್ಛವಾಗಿ ಕರ್ನಾಟಕದ ಕ್ರೈಸ್ತ ಜನರಲ್ಲಿ ಕಂಡು ಬರುತ್ತವೆ. ಕಥೋಲಿಕ ಕ್ರೈಸ್ತ ಧರ್ಮಕೇಂದ್ರಗಳಲ್ಲಿ ತಪಸ್ಸು ಕಾಲ ಮತ್ತು ಶುಭಶುಕ್ರವಾರಗಳಲ್ಲಿ ಶಿಲುಬೆ ಹಾದಿಯ ವಿಧಿಯು ಚಾಚು ತಪ್ಪದೆ ನಡೆಯುತ್ತದೆ. ಕೆಲವೊಂದು ವಿಚಾರಣೆಗಳಲ್ಲಿ ಶುಭಶುಕ್ರವಾರದಂದು ವಿಶೇಷವಾಗಿ ಊರಿನ ಪಕ್ಕದಲ್ಲಿರುವ ಬೆಟ್ಟಕ್ಕೆ ಹೋಗಿ ಶಿಲುಬೆಹಾದಿಯ ವಿಧಿಯನ್ನು ನಡೆಸುವ ಪರಿಪಾಠವನ್ನು ಸಹ ಬೆಳೆದುಬಂದಿದೆ. ಉತ್ತರಹಳ್ಳಿಯ ಅಣ್ಣಮ್ಮ ಬೆಟ್ಟದಲ್ಲಿ ನಡೆಯುವ ಅಣ್ಣಮ್ಮ ಜಾತ್ರೆಯು ಸಹ ಶಿಲುಬೆಯ ಕೇಂದ್ರಿಕೃತ ಆಚರಣೆಯೇ. ಶಿಲುಬೆಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು, ಸಾಂಬ್ರಾಣಿ ಹಾಗು ಮೇಣದ ಬತ್ತಿಗಳನ್ನು ಉರಿಸುತ್ತಾ ಹರಕೆಗಳನ್ನು ಒಪ್ಪಿಸಿ ಶಿಲುಬೆ ಹಾದಿ ಮಾಡಿ ಬಲಿಪೂಜೆಯಲ್ಲಿ ಭಕ್ತಿಭಾವದಿಂದ ಭಾಗವಹಿಸುವುದನ್ನು ಕಾಣಬಹುದಾಗಿದೆ. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಜಯಪುರದಿಂದ ೩ ಕಿ.ಮೀ. ದೂರದ ಕರ್ಕಿಕೊಡೆ(ಶಿಲುಬೆ ಬೆಟ್ಟ) ಯಲ್ಲಿ ಶುಭಶುಕ್ರವಾರದಂದು ಚಿಕ್ಕ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ ಶಿಲುಬೆಯನ್ನು ಹಿಡಿದು ಮೆರವಣಿಗೆಯಲ್ಲಿ ೩ ಕಿ.ಮೀ. ದೂರದ ಬೆಟ್ಟಕ್ಕೆ ಹೋಗಿ ಶಿಲುಬೆಯನ್ನು ಬೆಟ್ಟ ಬಂಡೆಗಳ ಮಧ್ಯೆ ಪ್ರತಿಸ್ಥಾಪಿಸಿ ಮಧ್ಯಹ್ನದವರೆಗೆ ಪ್ರಾರ್ಥನೆ ಮಾಡುತ್ತಾ ಯೇಸುವಿನ ಯಾತನೆಯ ವೃತ್ತಾಂತದ ಶಿಲುಬೆಹಾದಿಯನ್ನು ಮಾಡಿ ಶ್ರದ್ಧೆಯಿಂದ ಶುಭಶುಕ್ರವಾರದ ವಿಧಿ ಆಚರಣೆಯೆಲ್ಲಿ ಪಾಲುಗೊಳ್ಳುವುದನ್ನು ಕಾಣಬಹುದಾಗಿದೆ. ಈ ರೀತಿಯ ಆಚರಣೆಯನ್ನು ರಾಮನಗರ ಜಿಲ್ಲೆಯ ಹಾರೋಬೆಲೆ ಎಂಬ ಕ್ರೈಸ್ತ ಗ್ರಾಮದಲ್ಲೂ ಕಾಣಬಹುದಾಗಿದೆ. ವಿಶೇಷವೆಂದರೆ, ಈ ಊರಿನಲ್ಲಿ ಇಂತಹ ಆಚರಣೆಗಳು ಶುಭಶುಕ್ರವಾರದಲ್ಲಿ ಮಾತ್ರ ಕೈಗೊಳ್ಳದೆ ಪ್ರತಿ ಶುಕ್ರವಾರದಂದು ಭಕ್ತಾದಿಗಳು ಧರ್ಮಬೇದವನ್ನು ಮರೆತು ಊರಿನ ಪಕ್ಕದಲೇ ಇರುವ ಕಪಾಲ ಬೆಟ್ಟದಲ್ಲಿ ಸ್ಥಾಪಿತ ಶಿಲುಬೆಯ ಮುಂದೆ ಪ್ರಾರ್ಥನೆ, ಹರಕೆಗಳನ್ನು ಸಲ್ಲಿಸಿ ಶಿಲುಬೆ ಹಾದಿ ಮತ್ತು ಬೇಡುದಲೆಗಳನ್ನು ಕೈಗೊಳ್ಳುವುದನ್ನು ಕಾಣಬಹುದಾಗಿದೆ. ಇತಿಚೀನ ದಿನಗಳಲ್ಲಿ ಜಾತಿ ಧರ್ಮಬೇದಗಳಿಲ್ಲದೆ ಭಕ್ತಾದಿಗಳು ಇಂತಹ ಆಚಣೆಗಳಲ್ಲಿ ಪಾಲುಗೊಳ್ಳುವುದು ಒಂದು ವಿಶೇಷವಾಗಿದೆ. ಆದರೆ ಶಿಲುಬೆ ಕೇಂದ್ರಿತ ಈ ಎಲ್ಲಾ ಆಚರಣೆಗಳು ಪವಿತ್ರವಾರದ ಆಚರಣೆಯ ಭಾಗವಾಗಿವೆಯೇ ಹೊರತು, ಅವು ಸೆಪ್ಟಂಬರ್ ತಿಂಗಳಲ್ಲಿ ಆಚರಿಸುವ ಶಿಲುಬೆಯ ವಿಜಯೊತ್ಸವದ ಆಚರಣೆಗಳಾಗಿಲ್ಲ ಎಂಬುವುದು ಅವು ನಡೆಯುತ್ತಿರುವ ಕಾಲವೇ ನಮಗೆ ತಿಳಿ ಹೇಳುತ್ತವೆ.
ಪವಿತ್ರ ಶಿಲುಬೆಯ ವಿಜಯೊತ್ಸವದ ನಾಟಕ
ಪವಿತ್ರ ಶಿಲುಬೆಯ ವಿಜಯೋತ್ಸದ ಐತಿಹಾಸಿಕ ಹಿನ್ನಲೆಯನ್ನು ತದನಂತರ ರೋಮ್ ಸಾಮ್ರಜ್ಯದಲ್ಲಿ ನಡೆಯುವ ಕೂತುಹಲಕಾರವಾದ ಬೆಳವಣಿಗೆಯನ್ನು ಸಾಧರಪಡಿಸುವ ಬೃಹತ್ ನಾಟಕವೂ ನಮ್ಮಲಿದೆ. ಹಾರೋಬೆಲೆ ಎಂಬ ಕ್ರೈಸ್ತ ಹಳ್ಳಿಯಲ್ಲಿ ಪವಿತ್ರವಾರದ ವಿಧಿಯಾಚರಣೆಯ ಅಂಗವಾಗಿ ಪ್ರತಿವರ್ಷ ಪ್ರದರ್ಶನಗೊಳ್ಳುವ ದೊಡ್ಡಾಟಗಳಲ್ಲಿ ಹೆಲೆನಮ್ಮ ಎಂಬ ನಾಟಕವು ಒಂದು. ಈ ನಾಟಕವು ಶಿಲುಬೆಯ ವಿಜಯೋತ್ಸವದ ಆಚರಣೆಯ ಮೂಲವನ್ನು ಮತ್ತು ಶಿಲುಬೆಯನ್ನು ರಕ್ಷಣೆಯ ಸಾಧನವೆಂದು ನಂಬಿದ ರೋಮ್ ರಾಜ್ಯದ ಅರಸನ ಬದುಕಿನಲ್ಲಿ ನಡೆಯುವ ಪವಾಡಗಳನ್ನು ಮನೋಹರವಾಗಿ ಕಟ್ಟಿಕೊಡುತ್ತದೆ.
ಪವಿತ್ರ ಶಿಲುಬೆ - ಕೈಸ್ತ ಧರ್ಮದ ಪ್ರಜ್ಞೆ
ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಶಿಲುಬೆಯು ನೇಣುಗಂಬದಂತೆ ಒಂದು ಅವಮಾನಕರ ಸಂಕೇತವಾಗಿತ್ತು. ಕೆಳದರ್ಜೆಯ ದಂಗೆಕೋರರನ್ನು ಕೊಲ್ಲಲು ಒಂದು ಮರದ ಕಂಬಕ್ಕೆ ಅಡ್ಡ ಪಟ್ಟಿ ಕಟ್ಟಲ್ಪಟ್ಟಿರುವ ಶಿಲುಬೆಯನ್ನು ಉಪಯೋಗಿಸುತ್ತಿದ್ದರು. ಇಂತಹ ಒಂದು ಅವಮಾನಕರ ಮರದ ಶಿಲುಬೆಯ ಮೇಲೆ ಯೇಸು ಮೃತ ಪಟ್ಟು ವಿಜಯಿಯಾದ ಕಾರಣಕ್ಕಾಗಿ ಇಂದು ಶಿಲುಬೆಯು ಅನ್ಯಾಯದ ವಿರುದ್ಧ ಪ್ರತಿರೋದದ ಹಾಗು ಬಿಡುಗಡೆಯ ಪಾವನ ಸಂಕೇತವಾಗಿ ಈ ಎರಡು ಸಾವಿರ ವರ್ಷಗಳಿಂದೀಚೆಗೆ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾಗಿ ಪರಿಭಾವಿಸುವ ಕ್ರೈಸ್ತಧರ್ಮದ ಚಿಹ್ನೆಯಾಗಿದೆ. ಕ್ರೈಸ್ತ ಮನೆಗಳಲ್ಲಿ ಧಾರ್ಮಿಕ ಪೂಜ್ಯ ಸ್ಥಳಗಳಲ್ಲಿ , ಶಾಲಾ ಕಾಲೇಜುಗಳಲ್ಲಿ ಶಿಲುಬೆ ಗುರುತುಗಳನ್ನು, ವಿನ್ಯಾಸಗಳನ್ನು ಯತೇಚ್ಛವಾಗಿ ಕಾಣಬಹುದಾಗಿದೆ. ಆದ್ದರಿಂದ ಶಿಲುಬೆಯ ಗುರುತು ಕ್ರೈಸ್ತ ಧರ್ಮದ ಮೂಲಭೂತ ಸಂಕೇತವಾಗಿದ್ದು, ಕಲೆಯಲ್ಲಿ, ಕೆತ್ತನೆಗಳಲ್ಲಿ, ಚಿತ್ರಕಲೆಗಳಲ್ಲಿ ಕಲಾವಿದರ ಕೈಚಳಕದಿಂದ ನಾನ ರೀತಿಯ ವಿನ್ಯಾಸಗಳಿಂದ ಕಂಗಳಿಸುತ್ತಿರುವುದನ್ನು ನಾವು ಕಾಣುತ್ತೇವೆ. ಕ್ರೈಸ್ತರ ಯಾವುದೇ ಪೂಜೆ ಆರಾಧನೆಗಳು ಪ್ರಾರಂಭವಾಗುವುದೇ ಈ ಶಿಲುಬೆಯ ಗುರುತಿನಿಂದ. ಕ್ರೈಸ್ತರ ಪ್ರತಿಯೊಂದು ಕಾರ್ಯವು ಆರಂಭವಾಗುವುದು ಇದೇ ಶಿಲುಬೆಯ ಗುರುತಿನಿಂದಲೇ. ಶಿಲುಬೆ ಕ್ರೈಸ್ತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಒಂದು ಪವಿತ್ರತೆಯ ಗುರುತೆಂದೇ ಹೇಳಬಹುದು. ಧನಾತ್ಮಕವಾದ ಇಂತಹ ಅಂಶಗಳ ಜತೆಗೆ ಶಿಲುಬೆಯ ಗುರುತನ್ನು ಅಲಂಕಾರದ ವಸ್ತುವಾಗಿ ಉಪಯೋಗಿಸುತ್ತಿರುವುದು ಆತಂಕಕಾರಿ ವಿಷಯವು ಹೌದು.
ಒಂದೆಡೆ ಶಿಲುಬೆಯು ದೇವರ ಅಪರಿಮಿತ ಪ್ರೀತಿಯ ಚಿಹ್ನೆ; ಮನುಜನ ರಕ್ಷಣೆಗಾಗಿ ತನ್ನ ಸ್ವಂತ ಮಗನನ್ನೇ ಧಾರೆಯೆರೆದು ರಕ್ಷಣೆಯನ್ನು ತಂದು ಕೊಟ್ಟ ಪ್ರೀತಿಯ ಮಾಧ್ಯಮ ವಾದರೆ, ಇನ್ನೊಂದು ಕಡೆ, ಮನುಜರ ರಕ್ಷಣೆಗೊಸ್ಕರ ಮನುಷ್ಯನ ರೂಪ ತಾಳಿ ಶಿಲುಬೆಯ ಮರದ ಮೇಲೆ ಕ್ರೂರತನದ ಸಾವನ್ನಪ್ಪಿದ ಕ್ರಿಸ್ತರ ತ್ಯಾಗದ ನಿದರ್ಶನವೇ ಈ ಕ್ರೂಜೆ. ಹೀಗೆ ಕ್ರಿಸ್ತರ ಪಾಡು ಮರಣ ಹಾಗು ಪುನರುತ್ಥಾನದ ಅವಿಸ್ಮರಣೀಯ ಘಟನೆಗಳ ಮೂಲ ಸಾರಂಶವಾದ ಇದು ಕ್ರಿಸ್ತರು ಪಾಪ ಮತ್ತು ಮರಣಗಳ ಮೇಲೆ ಸಾಧಿಸಿದ ವಿಜಯದ ದ್ಯೋತಕ . ಜತೆಗೆ ಅನ್ಯಾಯದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಕ್ರಿಸ್ತನ ಪ್ರಜ್ಞೆಯು ಹೌದು.
ಶಿಲುಬೆಯು ಕ್ರೈಸ್ತೀಯ ಜೀವನದ ಜೀವ ಕಣ ಮತ್ತು ಪ್ರಜ್ಞೆ. ಈ ಕಾರಣಕ್ಕಾಗಿಯೇ ಯೇಸು ಹೇಳುತ್ತಾರೆ “ ನನ್ನ ಶಿಷ್ಯರಾಗಬೇಕದರೆ, ನಿಮ್ಮ ಶಿಲುಬೆಗಳನ್ನು ಹೊತ್ತು ನನ್ನ ಹಿಂಬಾಲಿಸಿ”. ಕ್ರಿಸ್ತನನ್ನು ಹಿಂಬಾಲಿಸುವುದೆಂದರೆ ಒಲ್ಲದ ಕಷ್ಡಗಳ ಮೇಲೆ ಹೊದ್ದು ನಡೆಯುವುದು; ಅದು ದು:ಖಗಳ ದಾರಿಯಲ್ಲಿನ ಒಂದು ಕಠಿಣ ನಡೆ. ಶಿಲುಬೆಯನ್ನು ಬಿಟ್ಟು ನಾವು ಯೇಸುವನ್ನು ಹಿಂಬಾಲಿಸಲು ಖಂಡಿತವಾಗಿ ಆಗವುದಿಲ್ಲ. ಶಿಲುಬೆಯೆನ್ನುವುದು ಕ್ರೈಸ್ತರಿಗೆ ಅನಿವಾರ್ಯ. ಇಲ್ಲಿ ಶಿಲುಬೆಯನ್ನು ಹೊತ್ತು ನಡೆಯುವುದೆಂದರೆ ಸಾಂಕೇತಿಕ ಶಿಲುಬೆಗಗಳನ್ನು ಬಾಹ್ಯವಾಗಿ ಧರಿಸಿಕೊಳ್ಳುವೊಂದೇ ಅಲ್ಲ. ನಮ್ಮ ದೈನಂದಿನ ಕಷ್ಟ ಕಾರ್ಪಣ್ಯಗಳ ನಡುವೆಯೂ ಗೊಣಗದೆ ನಮ್ಮ ಪಾಲಿನ ಜೀವನ ಜಂಜಡಗಳನ್ನು ನಿಭಾಯಿಸುವುದು. ಶಿಲುಬೆಯ ಮಾರ್ಗವನ್ನು ನಮ್ಮ ಬದುಕಿನ ಮಾರ್ಗವಾಗಿಸಿಕೊಳ್ಳುವುದು. ಅಂದರೆ ಕ್ರಿಸ್ತನಂಥದ್ದೇ ಬದುಕನ್ನು ರೂಢಿಸಿಕೊಳ್ಳುವುದೆಂದು ಅರ್ಥ. ಸ್ವಾರ್ಥತ್ಯಾಗಮಾಡುವುದು,ಪ್ರೀತಿಸುವುದು,ಒಳ್ಳೆತನದ ಸ್ಥಾಪನೆಗೆ ಧೈರ್ಯದಿಂದ ಮುನ್ನುಗುವುದು, ನೆರೆಯವರ ಹಿತವನ್ನು ಬಯಸುವುದು, ಅನ್ಯಾಯವನ್ನು ಖಂಡಿಸುವುದು ಇವು ಕ್ರಿಸ್ತನು ಕಲಿಸಿಕೊಡುವ ಪವಿತ್ರ ಶಿಲುಬೆಯ ಮೌಲ್ಯಗಳು. ಇಂದು ಈ ಮೌಲ್ಯಗಳನ್ನು ಪಾಲಿಸುವುದು ನಮ್ಮ ಪಾಲಿನ ಬಹುದೊಡ್ಡ ಶಿಲುಬೆಯ ಹಾದಿ.
ಕಾಲ ಮತ್ತು ದೇಶಗಳು ಬದಲಾದಂತೆ ಶಿಲುಬೆಯ ಆಕಾರವೂ ಬದಲಾಗಿದ್ದರಿಂದ ಶಿಲುಬೆಯ ನಾನ ಆಕಾರಗಳು ನಮಗೆ ಲಭ್ಯವಿವೆ. ಕೆಲವೊಂದು ಕಡೆ, ಗ್ರೀಕ್ ಅಕ್ಷರ T ಅಕಾರದ ಶಿಲುಬೆಗಳಿದ್ದರೆ, ಮತ್ತೊಂದು ಕಡೆ, ಇಂಗ್ಲೀಷ್ ಅಕ್ಷರ X ಆಕಾರದ ಶಿಲುಬೆಗಳು ಸಹ ಕಾಣಸಿಗುತ್ತವೆ. ಶಿಲುಬೆಗಳ ಆಡ್ಡ ಮತ್ತು ಲಂಬ ಪಟ್ಟಿಗಳಲ್ಲೂ ವ್ಯತ್ಯಾಸಗಳನ್ನು ಕಾಣಬಹುದು. ಕೆಲವೊಂದು ಕಡೆ ಶಿಲುಬೆಯ ಅಡ್ಡ ಪಟ್ಟಿ ಲಂಬ ಪಟ್ಟಿಗಿಂತ ಚಿಕ್ಕದಾಗಿದ್ದರೆ, ಗ್ರೀಕ್ ಶಿಲುಬೆಯಲ್ಲಿ ಅಡ್ಡ ಪಟ್ಟಿ ಮತ್ತು ಲಂಬ ಪಟ್ಟಿಗಳೆರಡೂ ಸಮಾನವಾಗಿರುವುದನ್ನು ಗಮನಿಸಬಹುದು. ಹೌದು, ಕಾಲ ಮತ್ತು ದೇಶಗಳ ಕೈಗಳಿಗೆ ಸಿಲುಕಿ ಶಿಲುಬೆಯ ಆಕಾರಗಳಲ್ಲಿ ಬದಲಾವಣೆಗಳು ಕಂಡು ಬಂದರು, ಶಿಲುಬೆಯ ಹಿಂದಿರುವ ಕ್ರಿಸ್ತ ನ ಪ್ರೀತಿ, ತ್ಯಾಗ, ನ್ಯಾಯ ತತ್ವಗಳು ಬದಲಾಗವುದಕ್ಕೆ ಸಾಧ್ಯವೇ ಇಲ್ಲ. ಅವು ಕಾಲತೀತವಾದವುಗಳು. ಆ ತತ್ವಗಳು ನಮ್ಮ ಬದುಕುಗಳ ಹೊಕ್ಕಿದಾಗ ನಾವು ಕೂಡ ಕ್ರಿಸ್ತನ ಸಜೀವ ಶಿಲುಬೆಗಳಾಗಲು ಸಾಧ್ಯ...
ಕುರುಡನ ಕೈಯಲ್ಲಿ ಕನ್ನಡಿಯಿದ್ದೇನು ಫಲ
ದೃಷ್ಟಿ ಇಲ್ಲದ ಮೇಲೆ?
ಅಂಜು ಬುರುಕನಲಿ ಚಂದ್ರಾಯುಧವಿದ್ದೇನು ಫಲ
ಧೈರ್ಯವಿಲ್ಲದ ಮೇಲೆ?
ಕೂಡಲ ಸಂಗಮ ದೇವಾ
ನಮ್ಮ ಶರಣರ ಕೊರಳಲಿ ಲಿಂಗವಿದ್ದೇನು ಫಲ
ಸಂಗನ ಕಾಣದ ಮೇಲೆ ?
ಎಂಬ ಬಸವಣ್ಣನ ವಚನದಂತೆ ಕೊರಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಖಾಲಿ ಶಿಲುಬೆಗಳಿದ್ದರೇನು ಕ್ರಿಸ್ತನಿಲ್ಲದ ಮೇಲೆ!
-------------------------