- ಅಜು, ಮರಿಯಾಪುರ
ಮರಿಯಾಪುರದಲ್ಲಿ ಈ ಸಾಲಿನಲ್ಲಿ ನಡೆದ `ಕ್ರಿಸ್ತನ ಮಹಿಮೆ’ ಬಯಲು ರಂಗನಾಟಕ ನೋಡಲು ನಿರೀಕ್ಷೆಗೂ ಮೀರಿ ಅಧಿಕ ಸಂಖ್ಯೆಯ ವಿಶ್ವಾಸಿಗಳು ನೆರೆದಿದ್ದರು. ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಮಚಾದೊ ಅವರು, ನಾಟಕ ಆರಂಭವಾಗುವ ಮುನ್ನ ಮಿರುಗುವ ಬಣ್ಣಗಳ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಗಿಡಮರಗಳಿದ್ದ ವೇದಿಕೆಯನ್ನು ಕಂಡು ಅಚ್ಚರಿಯಿಂದ ಮೂಕ ವಿಸ್ಮಿತರಾಗಿದ್ದರು. ಇಲ್ಲಿನ ಚರ್ಚಿನ ಪಕ್ಕದ ದಿಬ್ಬದ ಮೇಲೆ ವಿಶಾಲವಾಗಿ ಹರಡಿದ್ದ ಈ ಬಯಲುನಾಟಕ ನೋಡಲು ಮುಂದಿನ ಬಯಲಲ್ಲಿ ಅಪಾರ ಜನ ನೆರೆದಿದ್ದರು.
ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಾ ಸಿಡಿಯುತ್ತಿದ್ದ ಪಟಾಕಿಗಳು, ಧ್ವನಿವರ್ಧಕದಿಂದ ಹೊರಡುತ್ತಿದ್ದ ಸಂಭಾಷಣೆ ಮತ್ತು ಹಾಡುಗಳಿಗೆ ತಾಳೆಯಾಗುವಂತೆ ಅಭಿನಯಿಸುತ್ತಿದ್ದ ಊರವರೇ ಆದ ಪಾತ್ರಧಾರಿಗಳು, ಸಂದರ್ಭಗಳಿಗೆ ತಕ್ಕಂತೆ ಬರುತ್ತಿದ್ದ ಹಾಡುಗಳಿಗೆ ಏಕಾಏಕಿ ವೇದಿಕೆಯಲ್ಲಿ ಪ್ರತ್ಯಕ್ಷರಾಗುತ್ತಿದ್ದ ಊರಿನ ಮಕ್ಕಳು ಕುಣಿದು ವಿಶ್ವಾಸಿಗಳನ್ನು ರಂಜಿಸುತ್ತಿದ್ದರು. ಇವು ಈ ಬಾರಿ ಮರಿಯಾಪುರದಲ್ಲಿ ನಡೆದ `ಕ್ರಿಸ್ತ ಮಹಿಮೆ’ ನಾಟಕದ ಕೆಲವು ರಮಣೀಯ ನೋಟಗಳು.
ನಮ್ಮ ರಕ್ಷಕರಾದ ದೇವಸುತ ಪ್ರಭು ಯೇಸು ಕ್ರಿಸ್ತರ ಜೀವನ, ಅವರ ಬೋಧನೆಗಳು, ಅವರು ಪಟ್ಟ ಪಾಡುಗಳು, ಶಿಲುಬೆ ಮರಣ ಮತ್ತು ಪುನರುತ್ಥಾನವನ್ನು ವಿಶ್ವಾಸಿಸುವುದೇ ಕ್ರೈಸ್ತ ಧರ್ಮದ ತಿರುಳು. ಪವಿತ್ರ ಗ್ರಂಥ ಬೈಬಲ್‍ನ ಸಾರದ ಜೊತೆಗೆ ಯೇಸುಕ್ರಿಸ್ತರ ಜೀವನಗಾಥೆಯ ಶುಭಸಂದೇಶ ಮತ್ತು ಅದರಲ್ಲಿನ ಸಾಮತಿಗಳನ್ನು ಪ್ರಸ್ತುತ ಜೀವನಕ್ಕೆ ಹೋಲಿಸಿ ದೃಶ್ಯಗಳನ್ನು ಸಂಯೋಜಿಸಿರುವ ಈ ದೃಶ್ಯಕಾವ್ಯದ ನಾಟಕ ವಿಶ್ವಾಸಿಗಳನ್ನು ಕೊನೆಯವರೆಗೂ ಸೆರೆಹಿಡಿದು ಕುಳಿತುಕೊಳ್ಳುವಂತೆ ಮಾಡಿತ್ತು.
ಆದಿ ತಂದೆತಾಯಿ ಆದಾಮ ಮತ್ತು ಏವೆಯರ ಬರುವಿಕೆಯೊಂದಿಗೆ ಆರಂಭವಾದ ಈ ಬಯಲುನಾಟಕ, ಪಿತಾಮಹ ಅಬ್ರಹಾಂ, ಪ್ರವಾದಿ ಯೆಶಾಯ ಹೀಗೆ ಯೇಸುಸ್ವಾಮಿಯು ಬರುವವರೆಗೆ ಮುಂದುವರಿಯುತ್ತದೆ. ಈಟಿ ಕತ್ತಿಗಳನ್ನು ಹಿಡಿದು ಗುಂಪು ಗುಂಪುಗಳಾಗಿ ಸಾಗುತ್ತಿದ್ದ ಸೈನಿಕರ ನೋಟ, ನಾಟಕ ನೋಡುತ್ತಿದ್ದ ವಿಶ್ವಾಸಿಕರನ್ನು ಯೇಸುಸ್ವಾಮಿಯ ಕಾಲಕ್ಕೆ ಕೊಂಡೊಯ್ದಿತ್ತು. ಹೆರೋದ, ಜುದಾಸ, ಫರಿಸಾಯರುಗಳ ಅಭಿನಯ, ಯೇಸುಸ್ವಾಮಿ ಪಾತ್ರಧಾರಿಯ ತಲ್ಲೀನತೆಯು ಮೋಡಿಯಂಟು ಮಾಡುತ್ತಿತ್ತು. ಪ್ರಭುವಿನ ಕಡೆಯ ಭೋಜನದ ಸಂದರ್ಭದ `ನನ್ನ ಸ್ವಾರ್ಥ ಮನಸ್ಸಿನ’ ಹಾಡು ಮನ ಮಿಡಿಯುವಂತೆ ಮಾಡಿತು. ಕೊನೆಯಲ್ಲಿ ಅನಾವರಣಗೊಂಡ ಪ್ರಭು ಯೇಸುಸ್ವಾಮಿಯ ಪುನರುತ್ಥಾನ, ಸ್ವರ್ಗಾರೋಹಣ ಸಂದರ್ಭಗಳ ಹಾಡು ನೃತ್ಯಗಳು ವಿಶ್ವಾಸಿಗಳ ಗಮನ ಸೆಳೆದವು. ಬೆಳಗಿನ ಜಾವ ಈ ಅಗಾಧವಾದ ಬಯಲುನಾಟಕ ಮುಗಿಯುತ್ತಿದ್ದಂತೆಯೇ, ನಾಟಕ ಚಿತ್ರಿಸಿದ ದೈವೀಲೋಕದಿಂದ ಲೌಕಿಕ ಜಗತ್ತಿಗೆ ಮರಳಿದ ವಿಶ್ವಾಸಿಗಳು, ಚರ್ಚಿನಲ್ಲಿ ಬೆಳಗಿನ ಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸಿ ಧನ್ಯತೆಯನ್ನು ಅನುಭವಿಸಿದರು.
ಈ ಮರಿಯಾಪುರದ ನಿಸರ್ಗದ ಬಯಲಿನ ದೃಶ್ಯಕಾವ್ಯದ ರೂವಾರಿ, ಧರ್ಮಕೇಂದ್ರದ ಗುರು ವಂದನೀಯ ಆ ತೋಮಾಸ್ ಅವರು, ವಿಶ್ವಾಸಿಕರಿಂದ ಆದರದ ಮೆಚ್ಚುಗೆಗಳನ್ನು ಪಡೆದರು. ಈ ಅಪರೂಪದ ದೈವೀ ಅನುಭವಕ್ಕಾಗಿ ಮತ್ತೆ ಇನ್ನೊಂದು ವರ್ಷ ಕಾಯಲೇಬೇಕು.
**********
No comments:
Post a Comment