- ಎಫ್ ಎಂ ಎನ್
----------------------
ಆಫ್ರಿಕಾಖಂಡದ ಕೇಂದ್ರ ಭಾಗದ ಪ್ರದೇಶದಲ್ಲಿರುವ ಕೊಂಗೊ ಪ್ರಜಾಪ್ರಭುತ್ವದ ದೇಶದಲ್ಲಿನ ಕುಬಾ ಜನ ಸಮುದಾಯ ವಿಶ್ವಾಸಿಸುವ ಸೃಷ್ಟಿಯ ಕತೆ. ವಿಶ್ವದ ಆಳವಾದ ಹಾಗೂ ಅಪಾರ ಪ್ರಮಾಣದಲ್ಲಿ ನೀರನ್ನು ಹೊತ್ತು ಸಾಗುವ ಎರಡನೇ ದೊಡ್ಡ ನದಿ ಎಂದು ಖ್ಯಾತವಾದ ಕೊಂಗೊ ನದಿಯಿಂದ ಆ ದೇಶಕ್ಕೆ ಆ ಹೆಸರು ಬಂದಿದೆ.
---------------------------
ಕೋಟ್ಯಂತರ ವರ್ಷಗಳ ಹಿಂದಿನ ಕತೆ ಇದು. ಆಗ ಹಗಲು ರಾತ್ರಿ ಏನೂ ಇರಲಿಲ್ಲ. ಭೂಮಿಯ ಮೇಲೆ ಎಲ್ಲೆಲ್ಲೂ ಕತ್ತಲು ಕವಿದಿತ್ತು. ಭೂಮಿಯನ್ನು ಆದಿ ಜಲಸಾಗರ ವ್ಯಾಪಿಸಿಕೊಂಡಿತ್ತು. ಆಗ ಆದಿಯಲ್ಲಿ `ಬುಂಬಾ’ ಎನ್ನುವ ದೇವರು ಮಾತ್ರ ಇದ್ದರು. ಆ `ಬುಂಬಾ’ ದೇವರು ಒಂಟಿಯಾಗಿಯೇ ಇದ್ದರು. ಆ `ಬುಂಬಾ ದೇವರು’ ಭಾರಿಗಾತ್ರದ ದೈತ್ಯದೇಹಿಯಾಗಿದ್ದರು. ಬಿಳಿ ಬಣ್ಣದಿಂದ ಶೋಭಿಸುತ್ತಿದ್ದ ಅವರು ಸುಂದರವಾಗಿ ಕಾಣುತ್ತಿದ್ದರು, ಜೊತೆಗೆ ಅವರು, ಆ ಕತ್ತಲು ಸಾಮ್ರಾಜ್ಯದ ಒಡೆಯರೂ ಆಗಿದ್ದರು.
ಒಂದು ಬಾರಿ ಆ ಆದಿ ತಂದೆ, `ಬುಂಬಾ’ ದೇವರಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತು. ಕುಂತಲ್ಲೆ ಕೂಡಲಾರರು, ನಿಂತಲ್ಲೇ ನಿಲ್ಲಲಾರರು. ವಿಪರೀತ ತೊಳಲಾಟ. ಹೊಟ್ಟೆ ತೊಳಸಿ ವಾಂತಿ ಬಂದಂತಾಯಿತು. ಕೊನೆಗೆ `ಬುಂಬಾ’ ದೇವರು ವಾಂತಿ ಮಾಡಿಕೊಂಡೇ ಬಿಟ್ಟರು.
ಅವರು ಆಗ, ಸೂರ್ಯ ಚಂದ್ರ ಮತ್ತು ನಕ್ಷತ್ರ ಕಾಯಗಳನ್ನು ಕಾರಿಕೊಂಡು ಬಿಟ್ಟಿದ್ದರು. ಅವುಗಳಲ್ಲಿ ಅಧಿಕ ಶಕ್ತಿಯಿಂದ ಪ್ರಜ್ವಲಿಸುತ್ತಿದ್ದ ಸೂರ್ಯನ ನಿಗಿ ನಿಗಿ ಬೆಂಕಿಯ ಶಾಖ ಮತ್ತು ಎಲ್ಲವನ್ನು ಬೆಳಗಿಸುತ್ತಿದ್ದ ಪ್ರಜ್ವಲವಾದ ಬೆಳಕಿನಿಂದ ಆದಿ ಜಲಸಾಗರದಿಂದ ನೀರು ಆವಿಯಾಗತೊಡಗಿತ್ತು. ಸೂರ್ಯನ ಪ್ರಖರವಾದ ಕಿರಣಗಳಿಂದ ಹುಟ್ಟಿದ ಶಾಖದ ದೆಸೆಯಿಂದ ಆದಿ ಜಲಸಾಗರದ ಬಹುತೇಕ ನೀರು ಆವಿಯಾಗಿ ಆಗಸದ ಪಾಲಾಯಿತು. ಅಪಾರ ಪ್ರಮಾಣದಲ್ಲಿ ಆಗಸದಲ್ಲಿ ಶೇಖರಣೆಗೊಂಡ ಆವಿ, ಬಗೆ ಬಗೆಯ ಮೋಡಗಳ ರೂಪ ತಳೆಯಿತು. ಇಷ್ಟಾದ ಮೇಲೆ ಗಿರಿ ಪರ್ವತಗಳು, ಪರ್ವತ ಪಂಕ್ತಿಗಳು ನೀರ ಮೇಲೆದ್ದು ನಿಲ್ಲತೊಡಗಿದವು. ಕೊಳ್ಳ ಕೊರಕಲುಗಳು ಉಂಟಾದವು. ಅದೇ ಬಗೆಯಲ್ಲಿ ಸಾವಿರಾರು ಮೈಲುಗಟ್ಟಲೇ ಬಯಲು ಭೂಮಿ ಕಾಣತೊಡಗಿತು. ಮತ್ತೆ ಏಕೋ ಆದಿ ದೇವರು, ವಿಶ್ವದ ಆದಿ ತಂದೆ `ಬುಂಬಾ’ ದೇವರ ಹೊಟ್ಟೆ ಮತ್ತೆ ತೊಳಸತೊಡಗಿತ್ತು. ಅವರು ಪುನಃ ಹೊಟ್ಟೆನೋವಿನಿಂದ ಬಳಲತೊಡಗಿದ್ದರು. `ಬುಂಬಾ’ ದೇವರಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರು ಕುಂತಲ್ಲೇ ಕೂಡಲಾರದವರಾದರು, ನಿಂತಲ್ಲೇ ನಿಲ್ಲಲಾರದವರಾದರು. ವಿಪರೀತ ತೊಳಲಾಟ. ಹೊಟ್ಟೆ ತೊಳಸಿ ವಾಂತಿ ಬಂದಂತಾಯಿತು. ಕೊನೆಗೆ `ಬುಂಬಾ’ ದೇವರು, ಆದಿ ತಂದೆ ವಾಂತಿ ಮಾಡಿಕೊಂಡೇ ಬಿಟ್ಟರು.
ಎರಡನೆಯ ಬಾರಿ, ಆದಿ ತಂದೆ `ಬುಂಬಾ’ ದೇವರು ಒಟ್ಟು ಒಂಬತ್ತು ಪ್ರಾಣಿಗಳನ್ನು ಕಾರಿಕೊಂಡಿದ್ದರು. ಮೊದಲ ಪ್ರಾಣಿಯ ಹೆಸರು `ಕೊಯ್ ಬುಂಬಾ’. ಅದು ಒಂದು ಚಿರತೆಯಾಗಿತ್ತು. ಎರಡನೆಯ ಪ್ರಾಣಿಯ ಹೆಸರು `ಪೊಂಗಾ ಬುಂಬಾ’ ಅದು ಒಂದು ಹದ್ದು. ಮೂರನೆಯ ಪ್ರಾಣಿಯ ಹೆಸರು `ಗಂಡ ಬುಂಬಾ’. ಅದು ಒಂದು ಮೊಸಳೆಯಾಗಿತ್ತು. ನಾಲ್ಕನೆಯ ಪ್ರಾಣಿಯ ಹೆಸರು `ಯೊ ಬುಂಬಾ’. ಅದು ಒಂದು ಮೀನಾಗಿತ್ತು. ಐದನೆಯ ಪ್ರಾಣಿಯ ಹೆಸರು `ಕೊನೊ ಬುಂಬಾ’. ಅದು ಒಂದು ಆಮೆಯಾಗಿತ್ತು. ಆರನೆಯ ಪ್ರಾಣಿಯ ಹೆಸರು `ತ್ಸೆತ್ಸೆ ಬುಂಬಾ’. ಅದು ಕಪ್ಪುಚಿರತೆಯಾಗಿತ್ತು. ಏಳನೆಯ ಪ್ರಾಣಿಯ ಹೆಸರು `ನ್ಯಾನಿ ಬುಂಬಾ’. ಅದು ಬಿಳಿಯ ಕ್ರೌಂಚ ಪಕ್ಷಿಯಾಗಿತ್ತು. ಎಂಟನೆಯ ಪ್ರಾಣಿಯ ಹೆಸರು `ಬುಡಿ’. ಈ ಬುಡಿ ಜೀರುಂಡೆಯಾಗಿತ್ತು. ಇದಾದ ಮೇಲೆ ಮೇಕೆ ಎಂಬ ಇನ್ನೊಂದು ಪ್ರಾಣಿಯೂ ಇತ್ತು.
ಈ ಮೊದಲ ಪ್ರಾಣಿ ಪ್ರಪಂಚದ ಸೃಷ್ಟಿ ಮುಗಿದ ನಂತರ, ಆದಿ ತಂದೆ ದೇವರು `ಬುಂಬಾ’ ಮೊತ್ತೊಮ್ಮೆ ವಾಂತಿಮಾಡಿಕೊಂಡಾಗ ಮನುಷ್ಯರು ಹೊರಬಂದರು. ಆ ಮನುಷ್ಯರು ಆದಿ ತಂದೆ ದೇವರು `ಬುಂಬಾ’ ದೇವರನ್ನು ಹೋಲುತ್ತಿದ್ದರು. ಅವರಲ್ಲೊಬ್ಬನ ಹೆಸರು `ಲೊಕೊ ಇಮ’. ಅವನು ತನ್ನ ಬಿಳಿ ಬಣ್ಣದಿಂದ ಸಾಕ್ಷಾತ್ `ಬುಂಬಾ’ ದೇವರನ್ನೇ ಹೋಲುತ್ತಿದ್ದ.
ಆದಿ ತಂದೆ `ಬುಂಬಾ’ ದೇವರುಕಾರಿಕೊಂಡ ಪ್ರಾಣಿಗಳೆಲ್ಲಾ ಸೇರಿಕೊಂಡು, ಬಗೆಬಗೆಯ ಪ್ರಾಣಿಗಳನ್ನು ಸೃಷ್ಟಿಸಿ ಜಗತ್ತಿನ ಪ್ರಾಣಿ ಪ್ರಪಂಚದ ಹುಟ್ಟಿಗೆ ಕಾರಣರಾದರು.
ಬಿಳಿಯ ಬಣ್ಣದ ಕ್ರೌಂಚ ಪಕ್ಷಿಯು, ರೆಕ್ಕೆಗಳೊಂದಿಗೆ ಹಾರಾಡುವ ಪಕ್ಷಿಗಳನ್ನು ಸೃಷ್ಟಿಸಿತು. ಮೊಸಳೆಯು, ಸರಿಸೃಪಗಳನ್ನು ಮತ್ತು ಓತಿಕ್ಯಾತ (ಗೋಸುಂಬೆ)ಗಳನ್ನು ಸೃಷ್ಟಿಸಿತು. `ಬುಡಿ’ ಮೇಕೆ ಕೊಂಬುಗಳುಳ್ಳ ಪ್ರಾಣಿಗಳನ್ನು ಸೃಷ್ಟಿಸಿತು. ಮತ್ತು ಜೀರುಂಡೆಗಳು ಹುಳು ಹುಪ್ಪಡಿಗಳನ್ನು ಹಾಗೂ `ಯೊ ಬುಂಬಾ’ ಬಗೆಬಗೆಯ ಮೀನುಗಳನ್ನು ಸೃಷ್ಟಿಸಿದವು,
ಆದಿ ತಂದೆ ದೇವರು `ಬುಂಬಾ’ ದೇವರ ಮೂವರು ಗಂಡುಮಕ್ಕಳು ಸೃಷ್ಟಿಕಾರ್ಯ ಮುಗಿಸುವುದಾಗಿ ಹೇಳಿಕೊಂಡರು. ಮೊದಲನೇ ಮಗ `ನ್ಯೋನಿ ಗ್ನಾನ’. ಈ `ನ್ಯೋನಿ ಗ್ನಾನ’ ಬಿಳಿ ಇರುವೆ- ಗೆದ್ದಲು ಹುಳುಗಳನ್ನು ಸೃಷ್ಟಿಸಿದ. ಆದರೆ, ಅವನು ತಕ್ಷಣವೇ ತೀರಿಕೊಂಡುಬಿಟ್ಟ. ಅವನನ್ನು ಮಣ್ಣು ಮಾಡಲು ಕಪ್ಪು ಮಣ್ಣನ್ನು ಹುಡುಕುತ್ತಾ ಆ ಗೆದ್ದಲು ಹುಳುಗಳು ಭೂಮಿಯ ಆಳಕ್ಕೆ ಹೋಗ ತೊಡಗಿದವು. ಹೀಗೆ ಮಾಡುತ್ತಾ ಮೆಕ್ಕಲು ಮಣ್ಣನ್ನು ಭೂಮಿಯ ಮೇಲೆ ತಂದು ಹಾಕತೊಡಗಿದವು. ಅದು ಇಂದಿಗೂ ಮುಂದುವರಿದಿದೆ.
ಎರಡನೆಯ ಮಗ `ಚೊಂಗಂಡ’ ಮೊದಲ ಸಸ್ಯವನ್ನು ಸೃಷ್ಟಿಸಿದ. ಆ ಆದಿ ಸಸ್ಯದಿಂದ ಗಿಡಮರಗಳು, ಹುಲ್ಲು, ಹೂವುಗಳು ರೂಪತಾಳಿದವು. ಮೂರನೆಯ ಮಗ `ಚೇಡಿ ಬುಂಬಾ’ ಪಕ್ಷಿ ಪ್ರಪಂಚದ ಕೊನೆಯ ಸೃಷ್ಟಿ ಬಾವಲಿಗಳನ್ನು ಸೃಷ್ಟಿಸಿದ.
ಆರನೆಯ ಪ್ರಾಣಿ `ತ್ಸೆತ್ಸೆ ಬುಂಬಾ’ ಕಪ್ಪುಚಿರತೆ ಭೂಮಿಯ ಮೇಲೆ ಕೀಟಲೆ ಮಾಡತೊಡಗಿತ್ತು, `ಬುಂಬಾ’ ದೇವರಿಗೆ ಸಿಟ್ಟು ಬಂದಿತು. ಆದಿ ತಂದೆ `ಬುಂಬಾ’ ದೇವರು `ತ್ಸೆತ್ಸೆ ಬುಂಬಾ’ನನ್ನು ಆಕಾಶಕ್ಕೆ ಓಡಿಸಿಬಿಟ್ಟ. ಆಗ, ಆ ಕಪ್ಪುಚಿರತೆ `ತ್ಸೆತ್ಸೆ ಬುಂಬಾ’ ಸಿಡಿಲ ರೂಪ ಪಡೆದುಕೊಂಡಿತು. ಆದರೆ, ಇದರಿಂದ ಭೂಮಿಯ ಮೇಲೆ ಇರುವವರಿಗೆ ತುಂಬಾ ತೊಂದರೆಯಾಯಿತು. ಅವರಿಗೆ ಬೆಂಕಿಯ ಅನುಪಸ್ಥಿತಿ ಕಾಡತೊಡಗಿತು. ಆಗ ಅವರ ನೆರವಿಗೆ ಬಂದ `ಬುಂಬಾ’ ದೇವರು, ಗಿಡಮರಗಳು ಒಂದಕ್ಕೊಂದು ಹೊಸೆದಾಗ ಚಕಮಕಿಯಿಂದ ಉಂಟಾಗುವ ಬೆಂಕಿಯ ಬಗೆಯನ್ನು ಹೇಳಿಕೊಟ್ಟರು.
ಒಂದು ಬಾರಿ ತನ್ನ ಸೃಷ್ಟಿಕಾರ್ಯ ಪರಿಪೂರ್ಣವಾಗಿ ಮುಗಿಯಿತು ಎಂದು ಅನ್ನಿಸಿದ ಮೇಲೆ, ಆದಿ ತಂದೆ `ಬುಂಬಾ’ ದೇವರಿಗೆ ತೃಪ್ತಿಯಾಯಿತು. ತನ್ನ ಸಕಲ ಸೃಷ್ಟಿಯನ್ನು ಮಾನವ ಕುಲಕೋಟಿಗೆ ಒಪ್ಪಿಸಿಕೊಟ್ಟರು.
ಇನ್ನು ನನ್ನ ಕೆಲಸ ಮುಗಿಯಿತು ಎಂದುಕೊಂಡು ಆದಿ ತಂದೆ, `ಬುಂಬಾ’ ದೇವರು ಸ್ವರ್ಗಕ್ಕೆ ಹಿಂದಿರುಗಿದರು. ಅದಕ್ಕೂ ಮೊದಲು ಪರಿಪೂರ್ಣವಾಗಿ ತನ್ನನ್ನೇ ಹೋಲುತ್ತಿದ್ದ `ಲೊಕೊ ಇಮ’ನನ್ನು `ಭೂಮಿಯ ಮೇಲಿನ ದೇವರು’ ಎಂದು ಪ್ರತಿಷ್ಠಾಪಿಸಿದರು.
**********
No comments:
Post a Comment