ಸಹೋ. ಜಾರ್ಜ್ ಫೆರ್ನಾಂಡಿಸ್(ಜಾಜಿ),
ಎಂ ದಾಸಾಪುರ
ಈ ಜಗತ್ತಿನಲ್ಲಿ ಮಾನವ ಪ್ರತಿದಿನವೂ ಹೊಸಬಗೆಯ ಆವಿಷ್ಕಾರಗಳನ್ನು ಕಂಡುಹಿಡಿಯುತ್ತಾ ಕ್ಷಣಕ್ಷಣಕ್ಕೂ ಇನ್ನೂ ಏನಾದರೂ ಕಂಡುಹಿಡಿಯೋಣ ಎಂಬ ನಿಟ್ಟಿನಲ್ಲಿ ತನ್ನ ಕಾರ್ಯವೈಖರಿಯನ್ನು ಮುಂದುವರಿಸುತ್ತಿದ್ದಾನೆ. ಈ ಜಗವೇ ಒಂದು ಸೋಜಿಗ. ಈ ಸೋಜಿಗವನ್ನು ಸಂಭ್ರಮಿಸುತ್ತಾ, ಈ ಸೋಜಿಗದ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಹರಸಾಹಸಪಡುತ್ತಿದ್ದಾನೆ. ಒಂದೆಡೆ ಧರ್ಮ, ಇನ್ನೊಂದೆಡೆ ವಿಜ್ಞಾನ. ಇವೆರಡರ ನಡುವೆ ಸಮನ್ವಯ ಸಾಧಿಸಲು ಮಾನವನಿಗೆ ಇನ್ನೂ ಕೂಡ ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ ಮಾನವ ತಾನೇನು ಯಾವುದಕ್ಕೂ ಕಡಿಮೆಯಿಲ್ಲ ಎಂದು ತಿಳಿದು ಇಡೀ ವಿಶ್ವದ ಚಲನೆಯನ್ನು ತನ್ನ ಕಿರುಬೆರಳಿನಲ್ಲಿ ಇಂದು ಇಟ್ಟುಕೊಂಡಿದ್ದಾನೆ. ಹೀಗಿರುವಲ್ಲಿ ಇಷ್ಟೆಲ್ಲಾ ಮುಂದುವರಿದಿರುವ ಮಾನವ ಈ ಒಂದು ವಿಷಯದಲ್ಲಿ ಮಾತ್ರ ಏನನ್ನೂ ಮಾಡಲಾಗುತ್ತಿಲ್ಲ.
ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿದರೂ ಸಹ ಅದರ ಆಳ ಮತ್ತು ಅಗಲವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಅದು ಯಾವುದೆಂದು ಕಣ್ಣರಳಿಸಿ ನೋಡಿದಾಗ ನಮಗೆ ಗೊತ್ತಾಗುವುದು ಅದುವೇ “ಮರಣ, ಸಾವು”. ಈ ಸಾವು ಮನುಷ್ಯನಿಗೆ ಯಾವಾಗ, ಹೇಗೆ, ಎಲ್ಲಿ, ಎಷ್ಟು ಗಂಟೆಗೆ ಮತ್ತು ಯಾವ ವಯಸ್ಸಿನವರಿಗೆ ಬರುತ್ತದೆ ಎಂಬುದನ್ನು ಯೋಚಿಸಲು ಕೂಡ ನಮ್ಮಿಂದ ಕಲ್ಪಿಸಿಕೊಳ್ಳಲು ಆಗದು. ಏಕೆಂದರೆ ಅದು ದೈವಲಿಖಿತ. ಈ ಸಾವಿನಿಂದ ಮನುಷ್ಯನನ್ನು ಪಾರುಮಾಡಲು ಹಲವಾರು ಜನರು ತಮ್ಮದೇ ಅನೂಹ್ಯ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಸಾವು ಮನುಜನ ತರ್ಕಕ್ಕೆ ನಿಲುಕದ್ದು ಎಂಬುದನ್ನು ಅವರು ಅರಿತುಕೊಳ್ಳಬೇಕಾಗಿದೆ. ವಿಪರ್ಯಾಸವೆಂದರೆ ಈ ಸಾವಿನ ಮುಂದೆ ವಿಜ್ಞಾನವು ಕೂಡ ಶರಣಾಗಿದೆ. ಈ ಸಾವು ಮನುಜನಿಗೆ ಕಟ್ಟಿಟ್ಟ ಬುತ್ತಿ. ಇದರಿಂದ ತಪ್ಪಿಸಿಕೊಳ್ಳಲು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಮನುಜರಾದ ನಾವು ಅರಿಯಬೇಕಾಗಿದೆ.
ಸಾವೆಂದೊಡನೆ ನಮ್ಮ ಮನದಲ್ಲಿ ಹಲವಾರು ಭಾವನೆಗಳು ಮೂಡುತ್ತವೆ. ಈ ಸಾವು ನಮ್ಮನ್ನು ಕಣ್ಣೀರಿನಲ್ಲಿ ಮುಳುಗಿಸುತ್ತದೆ. ಈ ಭೂಲೋಕದ ನಂಟಿನಿಂದ ಬೇರ್ಪಡಿಸುತ್ತದೆ. ಹೀಗೆ ಈ ಸಾವು ತರುವ ನೋವು ಅಪಾರ. ಆದರೆ ಕ್ರೈಸ್ತರಾದ ನಾವು ಈ ಸಾವನ್ನು ಯಾವ ರೀತಿ ಕಾಣುತ್ತೇವೆ? ಸಾವು ಅಥವಾ ಮರಣ ಎಂದೊಡನೆ ನಾವು ದೇವರನ್ನು ದೂಷಿಸುವುದು ಸರ್ವೇಸಾಮಾನ್ಯವಲ್ಲವೇ? ಮನುಷ್ಯನನ್ನು ಸೃಷ್ಟಿಸಿದ ದೇವರು ಅವನಲ್ಲಿ ತಮ್ಮ ಶ್ವಾಸವನ್ನು ಊದಿ ಅವನಿಗೆ ಭೂಮಿಯ ಮೇಲೆ ಸರ್ವಾಧಿಕಾರವನ್ನು ನೀಡಿ, ಚೆನ್ನಾಗಿರು ಎಂದು ಹರಸಿದರು. ಆದರೆ ಮಾನವ ದೇವರ ಆಜ್ಞೆ ಮೀರಿ ಪಾಪವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ. ಅದರ ಫಲವಾಗಿ ಸಾವು ಅವನ ಬೆನ್ನು ಹತ್ತಿತು. ಹೀಗೆ ಸಾವನ್ನು ತಾನೇ ಬರಮಾಡಿಕೊಂಡು ನಿತ್ಯಜೀವವನ್ನು ಕಳೆದುಕೊಂಡ. ಇದು ವಿಚಿತ್ರವಾದರೂ ಸತ್ಯವಾದುದು. ಆದರೆ ದೇವರಿಗೆ ಮಾನವನ ಮೇಲೆ ಪ್ರೀತಿ ಇದ್ದುದರಿಂದ ನಮ್ಮ ಪಾಪಗಳನ್ನು ತೊಳೆದು ನಮ್ಮನ್ನು ನಿತ್ಯಜೀವದೆಡೆಗೆ ಕೊಂಡೊಯ್ಯಲು ತಮ್ಮ ಏಕಮಾತ್ರ ಪುತ್ರರನ್ನೇ ಈ ಭುವಿಗೆ ಮನುಷ್ಯರೂಪದಲ್ಲಿ ಕಳುಹಿಸಿಕೊಟ್ಟರು. ಹೀಗೆ ದೈವತ್ವ ಮತ್ತು ಮನುಷ್ಯರೂಪ ಎರಡನ್ನೂ ಹೊತ್ತು ಯೇಸು ಈ ಭುವಿಗೆ ಬಂದು ನಮ್ಮ ಮಧ್ಯೆ ವಾಸಿಸಿದರು. ಮನುಷ್ಯರೊಡನೆ ಮನುಷ್ಯರಾಗಿ ನಮ್ಮಂತೆಯೇ ಬಾಳಿದರು. ಆದರೆ ಅವರು ಪಾಪವನ್ನು ಮಾತ್ರ ಮಾಡಲಿಲ್ಲ. ಬದಲಿಗೆ ನಿತ್ಯಜೀವದ ಮಾರ್ಗವನ್ನು ನಮಗೆ
ಬೋಧಿಸಿದರು. ಭುವಿಯಲ್ಲಿನ ಪಾಪವನ್ನು ಅಳಿಸಿ ಸ್ವರ್ಗವನ್ನೇ ಧರೆಗೆ ತಂದರು. ದೈವಸ್ವರೂಪಿ ತಾನಾಗಿದ್ದರೂ ಅದನ್ನೆಲ್ಲಾ ಬದಿಗೊತ್ತಿ, ಕೇವಲ ಹುಲುಮಾನವನ ಹಾಗೆ ನಮ್ಮ ಮಧ್ಯೆ ಬದುಕಿದರು. ಹೀಗೆ ಮನುಷ್ಯರ ಮಧ್ಯೆ ಜೀವಿಸಿದ ದೇವಮಾನವನನ್ನೇ ದೋಷಿ ಎಂದು ಜರೆದು, ನಿರಾಪರಾಧಿಗೆ ಮರಣದಂಡನೆ ವಿಧಿಸಿ ಎಂದು ಬೊಬ್ಬೆ ಇಟ್ಟು ಅವರನ್ನೇ ಕಲ್ವಾರಿಯ ಬೆಟ್ಟದ ಮೇಲೆ ಶಿಲುಬೆಗೇರಿಸಿದ ಪಾಪಿಗಳು ನಾವು. ಹೀಗಾಗಿ ಮನುಜಕುಲವನ್ನು ಪಾಪದಿಂದ ರಕ್ಷಿಸಲು ಬಂದ ದೇವಕುಮಾರನಿಗೂ ಕೂಡ ಸಾವೆಂಬುದು ತಪ್ಪಲಿಲ್ಲ. ಹಾಗಾದರೇ ದೇವಪುತ್ರರಿಗೂ ಸಾವೇ? ಎಂಬ ಅಂಶವು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜವೇ ಸರಿ. ಆದರೆ ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಾದ ಒಂದು ಸಂಗತಿ ಎಂದರೆ ದೈವಸ್ವರೂಪ ಮತ್ತು ಮಾನವ ಸ್ವರೂಪವೆಂಬ ಎರಡೂ ಸ್ವರೂಪಗಳನ್ನು ಹೊಂದಿದ್ದ ಪ್ರಭುಯೇಸು ಮಾನವ ಸ್ವರೂಪದಲ್ಲಿ ಎಲ್ಲಾ ಮಾನವರು ಮರಣಹೊಂದುವಂತೆ ಅವರೂ ಸಹ ಮರಣ ಹೊಂದಿದರು. ಇದರ ಮೂಲಕ ಪ್ರತಿಯೊಬ್ಬ ಮಾನವನು ಸಹ ಸಾವಿನಿಂದ ತಪ್ಪಿಸಿಕೊಳ್ಳಲಾರ ಎಂಬ ಸತ್ಯವನ್ನು ಮಾನವ ಸ್ವರೂಪಿ ಯೇಸು ನಮಗೆ ತೋರಿಸಿಕೊಟ್ಟರು. ಆದರೆ ದೇವಸ್ವರೂಪಿ ಯೇಸು ಸದಾ ಜೀವಿಸುವ ದೇವರಾಗಿದ್ದಾರೆ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕು. ಹೀಗೆ ಮರಣಹೊಂದಿದ ಯೇಸುವನ್ನು ತಂದೆ ದೇವರು ಪುನರುತ್ಥಾನಗೊಳಿಸಿ ಮಾನವ ಜನಾಂಗಕ್ಕೆ ನಿತ್ಯ ಜೀವದ ಭರವಸೆಯನ್ನಿತ್ತರು. ಮಾನವ ಸ್ವರೂಪಿ ಯೇಸು ಸ್ವರ್ಗಕ್ಕೂ ಭೂವಿಗೂ ಹಾದಿಯನ್ನು ಸುಗಮಗೊಳಿಸಿದರು. ಇದರ ಮೂಲಕ ಸಾವು ನಿತ್ಯ ಜೀವವನ್ನು ಪಡೆಯಲು ರಹದಾರಿ ಎಂಬುದನ್ನು ನಿರೂಪಿಸುತ್ತಾ, ಸಾವಿಗೆ ಸೋಲುಣಿಸಿದವರು ನಮ್ಮ ಕ್ರಿಸ್ತರು.
ಭೂಮಿಯ ಮೇಲೆ ಜನ್ಮ ತಳೆಯುವ ಪ್ರತಿಯೊಬ್ಬ ಜೀವಿಯೂ ಕೂಡ ಸಾವಿನಿಂದ ತಪ್ಪಿಸಿಕೊಳ್ಳಲಾಗದು. ಏಕೆಂದರೆ ಪಾಪದ ಫಲವೇ ಮರಣ. ಹಾಗಾಗಿ ಮಣ್ಣಿನಿಂದ ಬಂದ ದೇಹ ಮಣ್ಣಿಗೆ ಸೇರುವುದು ಔಚಿತ್ಯವಲ್ಲವೇ? ನಮ್ಮ ದೇಹಕ್ಕೆ ಉಸಿರು ನೀಡಿದ್ದು ದೇವರು. ಹೀಗಿರುವಲ್ಲಿ ಆ ಉಸಿರನ್ನು ಅವರು ಯಾವಾಗ ಬೇಕಾದರೂ ಹಿಂಪಡೆಯಲು ಅವರಿಗೆ ಹಕ್ಕಿದೆ ಅಂದಮೇಲೆ, ಅವರನ್ನು ನಾವು ಪುನಃ ಸೇರಬೇಕಾದರೆ ನಾವೆಲ್ಲರೂ ಸಾವಿಗೆ ಶರಣಾಗಲೇಬೇಕು ಅಲ್ಲವೇ? ಸಾವು ನಮ್ಮನ್ನು ಮುಂದಿನ ಜೀವನಕ್ಕೆ ಕೊಂಡೊಯ್ಯುತ್ತದೆ. ಈ ಸಾವಿಗೆ ಯಾವುದೇ ಭೇದವಿಲ್ಲ. ದೇವರಿಂದ ಬಂದ ನಾವು ಅವರೊಂದಿಗೆ ಒಂದಾಗಲು ಸಾವನ್ನು ಆಲಂಗಿಸಿ, ಕ್ರಿಸ್ತಯೇಸುವಿನಂತೆ ಪುನರುತ್ಥಾನರಾಗಬೇಕಿದೆ. ಈ ಭೌತಿಕ ದೇಹ ಸಾವಿನ ಮೂಲಕ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಆದರೆ ಸಾವಿನ ನಂತರ ನಮ್ಮ ಆಧ್ಯಾತ್ಮಿಕ ದೇಹ ಪುನರುತ್ಥಾನಗೊಳ್ಳುತ್ತದೆ. ಇದೇ ಅಲ್ಲವೇ ನಮ್ಮ ಕ್ರೈಸ್ತ ವಿಶ್ವಾಸ? ಆದ್ದರಿಂದ ಪ್ರಭುಯೇಸು ಮರಣವನ್ನು ಗೆದ್ದು ನಿತ್ಯ ಜೀವನದ ಪಥವನ್ನು ನಮಗೆ ತೋರಿಸಿದ್ದಾರೆ. ಆದ್ದರಿಂದಲೇ ಅವರು ವಿಜಯೀ ಕ್ರಿಸ್ತ. ಸಾವನ್ನು ಗೆದ್ದ ಪಾಸ್ಕ ಕುರಿಮರಿ. ಅವರು ತೋರಿದ ಹಾದಿಯಲ್ಲೇ ಸಾಗುತ್ತಾ ಸಾವಿಗೆ ಅಂಜದೆ, ಸಾವಿನ ನಂತರದ ಅಮರತ್ವದ ಜೀವನವನ್ನು ಪಡೆಯಲು ಈ ಭುವಿಯಲ್ಲಿರುವಾಗಲೇ ಹಾತೊರೆಯೋಣ. ಕಿಸ್ತಾÀ್ತಂಬರರಾಗಿ ಬರಲಿರುವ ಪಾಸ್ಕಮಹೋತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸುತ್ತಾ, ನಿತ್ಯ ಜೀವದ ಕನಸನ್ನು ಸಾಕಾರಗೊಳಿಸೋಣ. ಸಾವು ಕೇವಲ ನಮ್ಮ ಇಹಲೋಕದ ಜೀವನದ ಅಂತ್ಯ ಎಂದರಿತು ಬಾಳೋಣ. ಈ ಸಾವು ನಿತ್ಯ ಜೀವಕ್ಕೆ ರಹದಾರಿ ಎಂದುಕೊಂಡು, ಸಾವೇ ಅಂತಿಮವಲ್ಲ ಎಂಬ ಸತ್ಯಸ್ಯ ಸತ್ಯವನ್ನು ಮನಗಂಡು ಪುನರುತ್ಥಾನಿ ಕ್ರಿಸ್ತರ ನೈಜ ಸಾಕ್ಷಿಗಳಾಗಲು ಈ ಪಾಸ್ಕಮಹೋತ್ಸವ ನಮಗೆಲ್ಲಾ ಪ್ರೇರಣೆಯಾಗಲಿ ಎಂಬುದಾಗಿ ಹಾರೈಸುತ್ತಾ ಸರ್ವರಿಗೂ ಪಾಸ್ಕಮಹೋತ್ಸವದ ಶುಭಾಶಯಗಳನ್ನು ಕೋರುತ್ತಿರುವೆ.
**********
No comments:
Post a Comment